ಒತ್ತುವರಿಗೆ ಆಸ್ಪದ ನೀಡದಿರಿ: ಪಾಟೀಲ್
ಅವ್ಯವಹಾರಕ್ಕೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯ ಹಣಮಂತ ಇಟಗಿ ಆಗ್ರಹಿಸಿದರು
Team Udayavani, Feb 12, 2021, 6:29 PM IST
ಯಾದಗಿರಿ: ನಗರಸಭೆ ವ್ಯಾಪ್ತಿಯ ಆಶ್ರಯ ಸೇರಿ ಇತರೆ ಯೋಜನೆಗಳಲ್ಲಿನ ನಿವೇಶನಗಳ ನಕಲಿ ದಾಖಲೆ ಸೃಷ್ಟಿಸಿ ಅಕ್ರಮ ಒತ್ತುವರಿ ಮಾಡಿಕೊಳ್ಳಲು ಯಾವುದೇ ಕಾರಣಕ್ಕೆ ಆಸ್ಪದ ನೀಡಬಾರದು ಎಂದು ನಗರಸಭೆ ಅಧ್ಯಕ್ಷ ವಿಲಾಸ್ ಪಾಟೀಲ್ ಅಧಿಕಾರಿಗಳಿಗೆ ಸೂಚಿಸಿದರು. ನಗರಸಭೆ ಕಾರ್ಯಾಲಯದಲ್ಲಿ ಜರುಗಿದ ಮೊದಲ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಸದಸ್ಯರ ಪ್ರಶ್ನೆಗೆ ಪ್ರತಿಕ್ರಿಯಿಸಿ, ನಿವೇಶನ ಹಂಚಿಕೆ ಮೂಲ ದಾಖಲೆಗಳು ಯಾರ ಹೆಸರಿನಲ್ಲಿವೆ ಎನ್ನುವುದನ್ನು ಪರಿಶೀಲಿಸಿ ಅರ್ಹರಿಗೆ ಸೌಕರ್ಯ ದೊರೆಯಲು ಕ್ರಮವಹಿಸಲು ಹೇಳಿದರು.
ಮಾಜಿ ಸೈನಿಕರ ಕುಟುಂಬಕ್ಕೆ ನಿವೇಶನ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ನಿವೇಶನ ಒದಗಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.
ವಾರ್ಡ್ ನಂ. 8ರಲ್ಲಿ ನಿರ್ಮಿಸಿರುವ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದ್ದು ಈ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು ಈವರೆಗೆ ಕ್ರಮವಹಿಸಿಲ್ಲ ಎಂದು ಸದಸ್ಯ ಮೊಹ್ಮದ ಚಾವುಷ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಳೆದ 2 ವರ್ಷಗಳ ಹಿಂದೆ ಚರಂಡಿ ಕಾಮಗಾರಿಗೆ ಟೆಂಡರ್ ಆದರೂ ಈವರೆಗೆ ಕಾಮಗಾರಿ ಆರಂಭಿಸಿಲ್ಲ ಎಂದು ಗಮನ ಸೆಳೆದರು.
ಇದಕ್ಕೆ ಸ್ಪಂದಿಸಿದ ಅಧ್ಯಕ್ಷರು, ಎಸ್‌ಆರ್ ಎಸ್ ಕಂಸ್ಟ್ರಕ್ಷನ್‌ಗೆ ನಿರ್ವಹಿಸಿರುವ ಎಲ್ಲ ಕಾಮಗಾರಿಗಳು ಮಾರ್ಚ್ ಅಂತ್ಯದ ವೇಳೆಗೆ ಪೂರ್ಣಗೊಳಿಸುವಂತೆ ಕ್ರಮವಹಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ನಗರಸಭೆಗೆ ಆಗಮಿಸುವ ಜನರನ್ನು ಸತಾಯಿಸದೇ ಸಕಾಲಕ್ಕೆ ಅವರ ಕೆಲಸ ಮಾಡಿ ತೊಂದರೆಯಾಗದಂತೆ ಕ್ರಮವಹಿಸಲು ನಗರಸಭೆ ಸದಸ್ಯ ಸುರೇಶ ಅಂಬಿಗೇರ ಸಭೆಗೆ ಒತ್ತಾಯಿಸಿದರು. ಕಟ್ಟಡ ಪರವಾನಗಿ ಶುಲ್ಕ ಚದರ ಅಡಿಗೆ 1 ರೂ. ಇದ್ದುದ್ದನ್ನು 3 ರೂ.ಗೆ ಏರಿಸುವ ಕುರಿತು ಚರ್ಚೆ ವೇಳೆ ಮಾತನಾಡಿದ ಅವರು, ಜನರು ಹೆಚ್ಚಿಗೆ ಶುಲ್ಕ ಪಾವತಿಗೆ ತಯಾರಿದ್ದಾರೆ. ಆದರೆ ಇಲ್ಲಿ ಜನರಿಗೆ ತೊಂದರೆ ನೀಡುವುದು ಮೊದಲು ತಪ್ಪಬೇಕು ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ವಿಲಾಸ್ ಪಾಟೀಲ್, ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಾರ್ಯನಿರ್ವಹಿಸಲು ಸಿಬ್ಬಂದಿಗೆ ಸೂಚನೆ ನೀಡುವಂತೆ
ಪೌರಾಯುಕ್ತ ಬಕ್ಕಪ್ಪ ಅವರಿಗೆ ಸೂಚನೆ ನೀಡಿದರು. ಸದಸ್ಯ ಅಂಬಯ್ಯ ಶಾಬಾದಿ ಮಾತನಾಡಿ, ಸಾರ್ವಜನಿಕರಿಗೆ ಖಾತಾ ನಕಲು, ವ್ಯಾಪಾರ ಪರವಾನಗಿ ಪತ್ರ ಸೇರಿದಂತೆ ಇತರೆ ಸೇವೆ ಪಡೆಯಲು ಒಂದೇ ಸೂರಿನಡಿ ಸೌಕರ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿದರು. ಸದಸ್ಯ ಮಂಜುನಾಥ ದಾಸನಕೇರಿ ಮಾತನಾಡಿ, ನಗರಸಭೆಯಲ್ಲಿ ದಲ್ಲಾಳಿಗಳ ಹಾವಳಿ ಸಂಪೂರ್ಣ ತಡೆಯಬೇಕು.
ಸಾರ್ವಜನಿಕರ ಕೆಲಸ ಕಾರ್ಯಗಳು ಅಡೆತಡೆಯಿಲ್ಲದಂತೆ ಆಗಬೇಕು ಎಂದು ಒತ್ತಾಯಿಸಿದರು. ನಗರದ ಲಕ್ಷ್ಮೀನಗರ ಬಡಾವಣೆಯ ಸರ್ವೇ ನಂ.384ರಲ್ಲಿ ನಿವೇಶನಗಳ ಅವ್ಯವಹಾರಕ್ಕೆ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಸದಸ್ಯ ಹಣಮಂತ ಇಟಗಿ ಆಗ್ರಹಿಸಿದರು. ನಗರಸಭೆ ಆಸ್ತಿ ಕಬಳಿಕೆಯಾಗದಂತೆ ಸೂಕ್ತ ನಾಮಫಲಕ ಅಳವಡಿಸಲು ಒತ್ತಾಯಿಸಿದರು.
ಇದೇ ವೇಳೆ ನಾಮನಿರ್ದೇಶಿತ ಸದಸ್ಯರಾಗಿ ಆಯ್ಕೆಯಾದ ಆನಂದ ಗಡ್ಡಿಮನಿ, ಸುನಿತಾ ಚವ್ಹಾಣ, ಸಾಬಣ್ಣ ಪರಶುರಾಮ, ಗೋಪಾಲ ದಾಸನಕೇರಿ, ಅಜಯ ಸಿನ್ನೂರ ಅವರನ್ನು ಸನ್ಮಾನಿಸಲಾಯಿತು. ಈ ವೇಳೆ ನಗರಸಭೆ ಉಪಾಧ್ಯಕ್ಷೆ ಪ್ರಭಾವತಿ ಕಲಾಲ್, ಸದಸ್ಯರಾದ ವೆಂಕಟರಡ್ಡಿ, ಗಣೇಶ ದುಪ್ಪಲ್ಲಿ, ಲಲಿತಾ ಅನಪೂರ, ಶಹಿಸ್ತಾ ಸುಲ್ತಾನಾ, ಹಣಮಂತ ನಾಯಕ ಇತರರಿದ್ದರು.
ಪುತ್ಥಳಿ ನಿರ್ಮಾಣಕ್ಕೆ ಕಾನೂನು ಪ್ರಕಾರ ಅನುಮತಿ ಶರಣರು, ಮಹಾ ಪುರುಷರು, ಸ್ವಾತಂತ್ರ್ಯ ಹೋರಾಟಗಾರರ ಪುತ್ಥಳಿ ನಿರ್ಮಾಣಕ್ಕೆ ಸುಪ್ರೀಂಕೋರ್ಟ್ ಆದೇಶ ಮತ್ತು ಸರ್ಕಾರದ ಸುತ್ತೋಲೆಯಂತೆ 9 ನಿಯಮಗಳಿವೆ. ಆಯಾ ಸಂಘ ಸಂಸ್ಥೆಗಳು ಸ್ಥಳ ಹೊಂದಿರುವುದು, ಸೂಕ್ತ ನಿರ್ವಹಣೆ ಹಾಗೂ ಭದ್ರತೆ ಅವರದ್ದೇ ಜವಾಬ್ದಾರಿ ಆಗಿರುವುದರಿಂದ ನಿಯಮಗಳಿಗೆಲ್ಲ ಒಪ್ಪಿಗೆ ಮುಚ್ಚಳಿಕೆಯೊಂದಿಗೆ ಸೂಕ್ತ ದಾಖಲೆ ಸಲ್ಲಿಸಿದವರಿಗೆ ನಿಯಮದಂತೆ ಅವಕಾಶ ನೀಡಲು ಸಭೆಯಲ್ಲಿ ಸರ್ವ ಸದಸ್ಯರು ಒಪ್ಪಿಗೆ ಸೂಚಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
60%; ಕುಮಾರಸ್ವಾಮಿ ಆರೋಪಕ್ಕೆ ಆಧಾರ, ಸತ್ಯಾಸತ್ಯತೆ ಇಲ್ಲ: ಸಚಿವ ಜಾರಕಿಹೊಳಿ
Yadagiri: ಕಾಂಗ್ರೆಸ್ ಪಕ್ಷದಲ್ಲಿ ಎಲ್ಲವೂ ಸರಿ ಇದೆ: ಸಚಿವ ಸತೀಶ್ ಜಾರಕಿಹೊಳಿ
Yadagiri: ಅಮಿತ್ ಷಾ ಹೇಳಿಕೆ ಖಂಡಿಸಿ ಶಹಾಪುರ ನಗರ ಬಂದ್
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Yadagir: ನಗರದಲ್ಲಿ ವ್ಯಕ್ತಿಯೊಬ್ಬನಿಗೆ ಹಲ್ಲೆಗೈದು ಪರಾರಿಯಾದ ದುಷ್ಕರ್ಮಿಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.