ಅರ್ಹರಿಗೆ ಸರ್ಕಾರಿ ಸೌಲಭ್ಯ ಸಿಗಲಿ
Team Udayavani, Sep 18, 2018, 2:00 PM IST
ಯಾದಗಿರಿ: ಅಸಂಘಟಿತ ಕಾರ್ಮಿಕರಿಗಾಗಿ ಸರಕಾರ ಮತ್ತು ಸಂಘ-ಸಂಸ್ಥೆಗಳಿಂದ ಸಾಕಷ್ಟು ಸೌಲಭ್ಯಗಳಿದ್ದು, ಅವುಗಳನ್ನು ತಿಳಿದುಕೊಂಡು ಪ್ರಯೋಜನ ಪಡೆಯಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಅಧ್ಯಕ್ಷ ರಾಚಪ್ಪ ಕೆ. ತಾಳಿಕೋಟಿ ಹೇಳಿದರು.
ನಗರದ ವೀರಶೈವ ಕಲ್ಯಾಣ ಮಂಟಪದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾ ವಕೀಲರ ಸಂಘ,
ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟ ಹಾಗೂ ಡಾನ್ ಬಾಸ್ಕೊ ಸಂಸ್ಥೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟ-2018, ಪೊಲೀಸ್ ದೂರು ಪ್ರಾಧಿಕಾರ ಹಾಗೂ ಸಂತ್ರಸ್ತರ ಪರಿಹಾರ ನಿಧಿ ಕುರಿತು ಕಾನೂನು ಅರಿವು-ನೆರವು ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗೃಹ ಕಾರ್ಮಿಕರು ಸೇರಿದಂತೆ ಅಸಂಘಟಿತ ಕಾರ್ಮಿಕರು ತಾವಾಯಿತು, ತಮ್ಮ ಕೆಲಸವಾಯಿತು ಎಂಬಂತಿರುತ್ತಾರೆ. ಮನೆ ಜವಾಬ್ದಾರಿ ಇರುವುದರಿಂದ ಕಠಿಣ ಶ್ರಮವಹಿಸಿ ದುಡಿಯುತ್ತಿರುತ್ತಾರೆ. ಸಂವಿಧಾನದಲ್ಲಿ ಎಲ್ಲರಿಗೂ ಸಮಾನ ಹಕ್ಕು ಕಲ್ಪಿಸಲಾಗಿದೆ. ಇದರ ಆಶಯದಂತೆ ಅರ್ಹ ಫಲಾನುಭವಿಗಳಿಗೆ ಸೌಲಭ್ಯಗಳು ಸಿಗುವಂತಾಗಬೇಕು ಎಂದು ಅಭಿಪ್ರಾಯಪಟ್ಟರು.
ಮಹಿಳೆಯರಿಗೆ ಆಸ್ತಿ ಹಕ್ಕು, ವೃದ್ಧರ ಸಮಸ್ಯೆ, ಆರ್ಥಿಕವಾಗಿ ಸದೃಢರಲ್ಲದವರು ತಮ್ಮ ಸಮಸ್ಯೆಗಳನ್ನು ಇತ್ಯರ್ಥಪಡಿಸಿಕೊಳ್ಳಲು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸಹಾಯ ಪಡೆಯಬಹುದು ಎಂದು ತಿಳಿಸಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀ ಪ್ರಕಾಶ ಅರ್ಜುನ ಬನಸೊಡೆ ಮಾತನಾಡಿ, ಗೃಹ ನಿರ್ಮಾಣ ಕಾರ್ಯದಲ್ಲಿ ತೊಡಗಿಕೊಂಡಿರುವ ಕಾರ್ಮಿಕರು ಕಾರ್ಮಿಕ ಇಲಾಖೆಯಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು. ಇದರಿಂದ ತಮ್ಮ ಮಕ್ಕಳ ಶಿಕ್ಷಣ, ವಿವಾಹ, ಆರೋಗ್ಯ ಸೇರಿದಂತೆ ಮುಂತಾದವುಗಳಿಗೆ ಧನಸಹಾಯ ದೊರೆಯುತ್ತದೆ ಎಂದು ಮಾಹಿತಿ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮುಖ್ಯ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀ ನಾಮದೇವ ಕೆ. ಸಾಲಮಂಟಪಿ ಮಾತನಾಡಿದರು. ಕಾರ್ಮಿಕ ನಿರೀಕ್ಷಕ ಶಿವಶಂಕರ ಬಿ. ತಳವಾರ ಕಾರ್ಮಿಕರ ಕುರಿತು, ಎಸ್‌ಐಆರ್‌ಡಿಯ ಶಾರದಾ ಅಡಕಿ ಮಹಿಳೆಯರ ಹಕ್ಕುಗಳ ಕುರಿತು ಮಾತನಾಡಿದರು. ವಕೀಲರಾದ ಬಿ.ಜಿ. ಪಾಟೀಲ ಪೊಲೀಸ್ ದೂರು ಪ್ರಾಧಿಕಾರ ಮತ್ತು ಸಂತ್ರಸ್ತರ ಪರಿಹಾರ ನಿಧಿಕುರಿತು ತಿಳಿಸಿದರು.
ಜಿಲ್ಲಾ ಬಾಲ ಕಾರ್ಮಿಕ ಇಲಾಖೆ ಯೋಜನಾ ನಿರ್ದೇಶಕ ರಘುವೀರ್‌ಸಿಂಗ್ ಠಾಕೂರ್, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯರಾದ ಸಿ.ಎಸ್. ಮಾಲಿಪಾಟೀಲ, ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿಗಳಾದ ಶಾಂತಪ್ಪ ಎಸ್. ಖಾನಹಳ್ಳಿ, ಸಂಘದ ಸಹ ಕಾರ್ಯದರ್ಶಿಗಳಾದ ಭೀಮರಡ್ಡಿ ಅಚ್ಚೋಲಾ, ಸಮಾಜ ಸೇವಾ ಕೇಂದ್ರದ ನಿರ್ದೇಶಕ ಫಾದರ್ ಜಿ., ಕಲಬುರಗಿ ಡಾನ್ ಬಾಸ್ಕೊ ಮಕ್ಕಳ ಸಹಾಯವಾಣಿ ನಿರ್ದೇಶಕ ಫಾದರ್ ಸಜಿತ್, ಕರ್ನಾಟಕ ಗೃಹ ಕಾರ್ಮಿಕರ ಒಕ್ಕೂಟದ ಸಹ ಸಂಯೋಜಕಿ ಸಿಸ್ಟರ್ ಅಂತೋನಿ ಮೇರಿ ಉಪಸ್ಥಿತರಿದ್ದರು.
ಸಿಸ್ಟರ್ ರೀನಾ ಡಿಸೋಜಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣಪ್ಪ ಸಿ. ಅಮರಾಪುರ ಸ್ವಾಗತಿಸಿದರು. ಮಕ್ಕಳ ಸಹಾಯವಾಣಿ ಸಂಯೋಜಕ ಶರಬಯ್ಯ ಎಸ್. ಕಲಾಲ್ ನಿರೂಪಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.