ರೈತರ ಸಂಕಷ್ಟಕ್ಕೆ ಸ್ಪಂದಿಸುವರೇ ಸಚಿವರು?
ಸತತ ಮಳೆಗೆ ಕಾಯಿಯಲ್ಲೇ ಮೊಳಕೆಯೊಡೆದ ಹೆಸರು
Team Udayavani, Aug 26, 2020, 5:13 PM IST
ಯಾದಗಿರಿ: ಜಿಲ್ಲೆಯಲ್ಲಿ ಒಂದೆಡೆ ಮಳೆ ಅವಾಂತರದಿಂದ ರೈತರ ಬೆಳೆ ಹಾನಿಯೊಂದೆಡೆಯಾದರೆ, ಹಲವು ರಸ್ತೆಗಳು ಕೊಚ್ಚಿ ಹೋಗಿವೆ. ಇದರ ಮಧ್ಯೆಯೇ ಪ್ರವಾಹದಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜಿಲ್ಲೆಗೆ ಪ್ರವಾಹದಿಂದ ಆಗಿರುವ ಹಾನಿ ವೀಕ್ಷಣೆಗೆ ಆಗಮಿಸುತ್ತಿರುವ ಕಂದಾಯ ಸಚಿವ ಆರ್.ಅಶೋಕ ಅವರು ರೈತರ ಸಂಕಷ್ಟವನ್ನು ಸರ್ಕಾರದ ಗಮನಕ್ಕೆ ತಂದು ಸೂಕ್ತ ಪರಿಹಾರ ಒದಗಿಸಲು ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಈಗಾಗಲೇ ಮುಂಗಾರು ಮಳೆ ಉತ್ತಮವಾಗಿ ಸುರಿದಿದೆ. ಜೂನ್‌ನಲ್ಲಿ 143 ಮಿ.ಮೀ. ಮತ್ತು ಜುಲೈನಲ್ಲಿ 229 ಮಿ.ಮೀ. ಮಳೆಯಾಗಿದೆ. ಜನವರಿ 1ರಿಂದ ಆ.20ರ ವರೆಗೆ 538 ಮೀ.ಮೀ. ಮಳೆ ಸುರಿದಿದ್ದು, ವಾಡಿಕೆ ಮಳೆ 378 ಮಿ.ಮೀ.ಗಿಂತ ಶೇ. 42 ಹೆಚ್ಚುವರಿ ಮಳೆ ಸುರಿದು ಸಾಕಷ್ಟು ಅವಾಂತರ ವೃಷ್ಟಿಸಿದೆ. ನಾರಾಯಣಪುರ ಬಸವಸಾಗರ ಜಲಾಶಯದಿಂದ ಕೃಷ್ಣಾ ನದಿಗೆ ಲಕ್ಷಾಂತರ ಕ್ಯೂಸೆಕ್ ನೀರು ಹರಿಸುವುದರಿಂದ ನದಿ ತೀರದ ಗ್ರಾಮಗಳ ರೈತರು ಪ್ರತಿ ವರ್ಷ ಸಂಕಷ್ಟ ಎದುರಿಸುವಂತಾಗಿದೆ. ಪ್ರವಾಹದಿಂದ ಶಹಾಪುರ ತಾಲೂಕಿನ ಕೊಳ್ಳೂರು (ಎಂ)ಸೇತುವೆ ಮುಳುಗಡೆಯಾಗಿ ಸಂಪರ್ಕ ಕಡಿತವಾಗುತ್ತಲೇ ಇದೆ. ಕೆಲ ದಿನಗಳ ಹಿಂದೆಯಷ್ಟೇ ಜಿಲ್ಲಾ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದು ಸೇತುವೆ 17 ಮೀಟರ್‌ಗೆ ಎತ್ತರಿಸಿ ನಿರ್ಮಾಣಕ್ಕೆ 100 ಕೋಟಿ ರೂಪಾಯಿ ವೆಚ್ಚದ ಪ್ರಸ್ತಾವನೆಯನ್ನು ಸಲ್ಲಿಸಲು ಅಧಿಕಾರಿಗಳಿಗೆ ಸೂಚಿಸಿದ್ದು, ಸಚಿವರು ಇದನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ಶೀಘ್ರವೇ ಅನುಮೋದನೆ ನೀಡುವ ಕ್ರಮ ವಹಿಸಬೇಕಿದೆ.
ಮಳೆ ಅವಾಂತರದಿಂದ ವಡಗೇರಾ ಮತ್ತು ಯಾದಗಿರಿ ತಾಲೂಕು ಸೇರಿ ಜಿಲ್ಲೆಯಲ್ಲಿ ರೈತರು ಬೆಳೆದಿರುವ ಹೆಸರು, ಭತ್ತ, ಹತ್ತಿ, ಜೋಳ, ಸೇರಿದಂತೆ ಹಲವು ಬೆಳೆಗಳು ಹಾನಿಯಾಗಿದ್ದು, ಯಾದಗಿರಿ ಮತ್ತು ಗುರುಮಠಕಲ್ ತಾಲೂಕಿನಲ್ಲಿ ಅತಿ ಹೆಚ್ಚು ಹೆಸರು ಬೆಳೆದಿರುವ ರೈತರು ಕಣ್ಣೀರು ಹಾಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೆಸರು ಬೆಳೆ ಕಟಾವಿಗೆ ಬಂದ ಸಂದರ್ಭದಲ್ಲಿ ಹೆಚ್ಚಿನ ಮಳೆಯಾಗಿದ್ದು, ಮೇಲೆ ಕಾಯಿ ಸರಿಯಾಗಿ ಕಂಡರೂ ಒಳಗಡೆ ಕಾಳು ಮೊಳಕೆಯೊಡೆದು ಸಂಪೂರ್ಣ ಹಾಳಾಗಿದೆ. ಉತ್ತಮ ಗುಣಮಟ್ಟದ ಹೆಸರಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್‌ಗೆ 6ರಿಂದ 7 ಸಾವಿರ ಬೆಲೆ ಸಿಗುತ್ತಿತ್ತು. ಈಗ ಬೆಳೆ ನಾಶವಾಗಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬೆಳೆಗೆ ಬೆಲೆಯೇ ಸಿಗದೇ ರೈತರು ಸಂಕಷ್ಟಕ್ಕೀಡಾಗುವಂತಾಗಿದೆ. ಯಾದಗಿರಿ ತಾಲೂಕಿನಲ್ಲಿ ಅತಿ ಹೆಚ್ಚು 16,725 ಹೆಕ್ಟೇರ್ ಪ್ರದೇಶದಲ್ಲಿ ಹೆಸರು ಬಿತ್ತನೆಯಾಗಿದ್ದು, ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಶಿವಪುರ, ಗಾಜರಕೋಟ, ರಾಂಪುರ ಸೇರಿದಂತೆ ಹಲವು ಗ್ರಾಮಗಳಲ್ಲಿ ಬೆಳೆ ಹಾಳಾಗಿದ್ದು ಸರ್ಕಾರ ಸೂಕ್ತ ಪರಿಹಾರ ನೀಡಿ ರೈತರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ರೈತರು ಆಗ್ರಹಿಸಿದ್ದು, ಈ ಬಗ್ಗೆ ಸರ್ಕಾರ ಗಮನಹರಿಸಿ ಬೆಂಬಲ ಬೆಲೆಯಲ್ಲಿ ಹೆಸರು ಖರೀದಿಸಿ ರೈತರ ಕೈ ಹಿಡಿಯಬೇಕಿದೆ.
ಜಮೀನು ಜಲಾವೃತ : ವಡಗೇರಾ ತಾಲೂಕಿನ ಹಲವು ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದ್ದು ಹೊರ ಹರಿವು ಇನ್ನಷ್ಟು ಹೆಚ್ಚಾದರೆ ಎಂ. ಕೂಳ್ಳೂರು, ಟೊಣ್ಣೂರ, ಗೌಡೂರು, ಯಕ್ಷಿಂತಿ ಐಕೂರು, ಅನಕಸೂಗೂರ, ಗೊಂದೆನೂರ, ಚನ್ನೊರು, ತುಮಕೂರು, ಇಟಗಿ, ಕದ್ರಾಪುರ, ಬೆಂಡೆಬೆಂಬಳಿ, ಗೋನಾಲ್, ಶಿವಪುರ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದೆ.
ತಾಲೂಕುವಾರು ಬಿತ್ತನೆ : ಜಿಲ್ಲೆಯ ಬಿತ್ತನೆ ಗುರಿ 3,89,100 ಹೆಕ್ಟೇರ್ ಇದ್ದು, ಇದರಲ್ಲಿ 3,31,380 ಹೆಕ್ಟೇರ್ ಬಿತ್ತನೆಯಾಗಿದೆ. ಶಹಾಪುರ ತಾಲೂಕಿನಲ್ಲಿ 12,405 ಹೆಕ್ಟೇರ್, ಸುರಪುರ ತಾಲೂಕಿನಲ್ಲಿ 1,12,099 ಹೆಕ್ಟೇರ್ ಹಾಗೂ ಯಾದಗಿರಿ ತಾಲೂಕಿನಲ್ಲಿ 95,875 ಹೆಕ್ಟೇರ್ ಬಿತ್ತನೆಯಾಗಿದ್ದು ಶೇಕಡಾವರು ಕ್ರಮವಾಗಿ 91.98, 78.03 ಹಾಗೂ 86.16 ಆಗಿದೆ.
-ಅನೀಲ ಬಸೂದೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.