ಹಸಿರು ಬೆಳೆಸಿ ಭೂಮಿ ಉಳಿಸಿ
Team Udayavani, Jul 7, 2017, 12:37 PM IST
ಯಾದಗಿರಿ: ಪರಿಸರ ಹಾನಿಯಿಂದ ಭೂಮಿ ಹಾಗೂ ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದ್ದು, ಆದ್ದರಿಂದ ಹಸಿರು ಬೆಳೆಸಿ ಭೂಮಿ ಉಳಿಸಬೇಕಾಗಿದೆ ಎಂದು ವಲಯ ಆರಣ್ಯ ಅಧಿಕಾರಿ ವೀರಣ್ಣ ಹೇಳಿದರು.
ನಗರದ ರಾಚೋಟಿ ವೀರಣ್ಣ ವಿದ್ಯಾಸಂಸ್ಥೆಯ ಪದವಿ ಪೂರ್ವ ವಿಜ್ಞಾನ, ವಾಣಿಜ್ಯ ಮತ್ತು ಪದವಿ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ವನ ಮಹೋತ್ಸವ ದಿನವನ್ನು ಸಸಿ ನೆಡುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು. ಪರಿಸರ ಹಾಗೂ ವನ್ಯ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ಜನರಲ್ಲಿ ಪರಿಸರ
ಜಾಗೃತಿ ಮೂಡಿಸುವ ಮೂಲಕ ಹಸಿರು ಬೆಳೆಸಿ ಭೂಮಿಯನ್ನು ಉಳಿಸಬೇಕು ಎಂದು ಸಲಹೆ ನೀಡಿದರು.
ಪ್ರಾಂಶುಪಾಲ ಸುರೇಶ ಹವಾಲ್ದಾರ ಮಾತನಾಡಿ, ಪರಿಸರ ಸಂರಕ್ಷಣೆ ಮೂಲಕ ಭೂಮಿ ರಕ್ಷಿಸುವ ಮೂಲಕ ಮಾನವ ಸಂಕುಲ ಕಾಪಾಡುವುದು ನಮ್ಮೆಲ್ಲರ ಜವಾಬ್ದಾರಿ ಆಗಿದೆ. ಆದ್ದರಿಂದ ಪ್ರತಿಯೊಬ್ಬರು ಗಿಡ-ಮರ ಬೆಳೆಸಬೇಕು ಎಂದರು. ಸಂಸ್ಥೆಯ ಅಧ್ಯಕ್ಷೆ ಕಮಲಾ ಎನ್. ದೇವರಕಲ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿಗಳಾದ ಪ್ರವೀಣ, ಬಿ.ಅಶ್ವಿನಿ ಮತ್ತು ಶಿವಬಸವ ಅವರು ವನಮಹೋತ್ಸವ ಕುರಿತು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಸಂಸ್ಥೆಯ ಉಪಾಧ್ಯಕ್ಷ ಚಂದ್ರಶೇಖರ ನೀಲಂಗಿ ಹಾಗೂ ಶಿಕ್ಷಕರು ಸೇರಿದಂತೆ ಸಾರ್ವಜನಿಕರು ಮಕ್ಕಳು ಇದ್ದರು.