ಮಾನವ ಹಕ್ಕು ದೊಡ್ಡವರಿಗೆ ಮಾತ್ರ ಸೀಮಿತವಲ್ಲ
Team Udayavani, Dec 6, 2018, 1:56 PM IST
ಯಾದಗಿರಿ: ಮಕ್ಕಳ ರಕ್ಷಣೆಗಾಗಿ ಎಷ್ಟೇ ಮುನ್ನೆಚ್ಚರಿಕೆ ವಹಿಸಿದರೂ ದುರ್ಘಟನೆಗಳು ಸಂಭವಿಸುತ್ತವೆ. ಆದ್ದರಿಂದ ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ವಿವಿಧ ಇಲಾಖೆ ಅಧಿಕಾರಿ, ಸಂಘ-ಸಂಸ್ಥೆಗಳು, ಮುಖ್ಯಗುರುಗಳು, ಶಿಕ್ಷಕರು, ಜನಪ್ರತಿನಿಧಿಗಳ ಪಾತ್ರ ಪ್ರಮುಖವಾಗಿದೆ ಎಂದು ಪ್ರಧಾನ
ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಚಪ್ಪ ಕೆ. ತಾಳಿಕೋಟಿ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಬುಧವಾರ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಆರೋಗ್ಯ ಇಲಾಖೆ, ಕಾರ್ಮಿಕ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಹಾಗೂ ಯುನಿಸೆಫ್ ಸಹಯೋಗದಲ್ಲಿ ಆಯೋಜಿಸಿದ್ದ ಮಕ್ಕಳ ರಕ್ಷಣಾ ವ್ಯವಸ್ಥೆಗಳ ಬಲವರ್ಧನೆ ಕುರಿತ ಕಾರ್ಯಾಗಾರ ಹಾಗೂ ಸಮಾಲೋಚನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ವೈ. ಮರಿಸ್ವಾಮಿ ಮಾತನಾಡಿ, ಮಕ್ಕಳು ಈ ದೇಶದ ಆಸ್ತಿ. ಮಾನವ ಹಕ್ಕುಗಳು ದೊಡ್ಡವರಿಗೆ ಮಾತ್ರ ಸೀಮಿತವಲ್ಲ. ಮಕ್ಕಳ ಹಕ್ಕುಗಳು ಕೂಡ ಮಾನವ ಹಕ್ಕುಗಳಲ್ಲಿ ಪರಿಗಣನೆ ಮಾಡಬೇಕು. ಅದರಂತೆ ಇಂದಿನ ಮಕ್ಕಳು ನಾಳೆಯ ಪ್ರಜೆಗಳಲ್ಲ. ಇಂದಿನ ಪ್ರಜೆಗಳು. ಅವರನ್ನು ಬೆಳೆಸುವ ರೀತಿಯಲ್ಲಿ ದೇಶದ ಪ್ರಗತಿ, ಅಭಿವೃದ್ಧಿ ಅಡಗಿದೆ ಎಂದು ಹೇಳಿದರು.
ಭಾರತದಲ್ಲಿ ಶೇ. 40ರಷ್ಟು ಮಕ್ಕಳಿದ್ದಾರೆ. ಯುರೋಪ್ ಸೇರಿದಂತೆ ಅನೇಕ ರಾಷ್ಟ್ರಗಳಲ್ಲಿ ಮಕ್ಕಳ ಸಂಖ್ಯೆ ಬಹಳಷ್ಟು ಕಡಿಮೆ. ಹಾಗಾಗಿ ಈ ದೇಶಗಳನ್ನು ವಯಸ್ಸಾಗುತ್ತಿರುವ ರಾಷ್ಟ್ರಗಳೆಂದು ಕರೆಯಲಾಗುತ್ತಿದೆ. ಮಕ್ಕಳ ಅಪೌಷ್ಟಿಕತೆ, ಬಾಲ್ಯವಿವಾಹ, ಬಾಲ ಕಾರ್ಮಿಕ ಪದ್ಧತಿ ಇಲ್ಲದ ದೇಶಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಉನ್ನತ ಸ್ಥಾನದಲ್ಲಿವೆ. ಈ ಸಮಸ್ಯೆಗಳಿರುವ ದೇಶಗಳು ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಪಟ್ಟಿಯಲ್ಲಿವೆ ಎಂದು ತಿಳಿಸಿದರು.
ಮಕ್ಕಳ ಹಕ್ಕುಗಳನ್ನು ರಕ್ಷಣೆ ಮಾಡಲು ರಾಜ್ಯ ಮತ್ತು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ವಲಯ ನ್ಯಾಯಾಂಗ ಮಂಡಳಿ, ಬಾಲ ನ್ಯಾಯ ಮಂಡಳಿ, ಮಕ್ಕಳ ಸಹಾಯವಾಣಿ-1098, ಪೊಲೀಸ್ ಇಲಾಖೆ ಸೇರಿದಂತೆ ಅನೇಕ ವ್ಯವಸ್ಥೆಗಳಿವೆ. ಅಲ್ಲದೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇಷ್ಟೆಲ್ಲ ವ್ಯವಸ್ಥೆ ಇದ್ದರೂ ಮಕ್ಕಳ ಹಕ್ಕುಗಳ ಉಲ್ಲಂಘನೆ ಆಗುತ್ತಿವೆ ಎಂದು ವಿಷಾದಿಸಿದರು.
ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಮಾತನಾಡಿ, ಜಿಲ್ಲಾಡಳಿತದ ವತಿಯಿಂದ ಬಾಲ್ಯ ವಿವಾಹ ಮತ್ತು ಬಾಲ ಕಾರ್ಮಿಕ ಪದ್ಧತಿ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ವಿವಿಧ ಸಮಿತಿಗಳ ಮೂಲಕ ಪ್ರಚಾರ, ಜಾಗೃತಿ ಮೂಡಿಸಲಾಗುತ್ತಿದೆ. ಇಂತಹ ಪ್ರಕರಣಗಳು ಗಮನಕ್ಕೆ ಬಂದಾಗ ದಾಳಿ ನಡೆಸಿ, ಪ್ರಕರಣ ದಾಖಲು ಮಾಡಲಾಗುತ್ತಿದೆ. ಮದುವೆ ಆಮಂತ್ರಣ ಪತ್ರಿಕೆ ತಯಾರಿಸುವಾಗ ಮುದ್ರಣ ಮಾಲೀಕರು ಕಡ್ಡಾಯವಾಗಿ ವಧು-ವರರ ವಯಸ್ಸಿನ ದಾಖಲೆ ಪರಿಶೀಲಿಸಲು ಆದೇಶಿಸಲಾಗಿದೆ ಎಂದು ತಿಳಿಸಿದರು.
ಹತ್ತಿ ಬಿಡಿಸುವ ಸಂದರ್ಭದಲ್ಲಿ ಹೆಚ್ಚಿನ ಮಕ್ಕಳು ಶಾಲೆಗೆ ಬರುವುದಿಲ್ಲ. ವಾರದವರೆಗೆ ಶಾಲೆಗೆ ಬರದ ಮಕ್ಕಳ ಪೋಷಕರ ಜೊತೆ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದೊಂದಿಗೆ ಸಮಾಲೋಚನೆ ನಡೆಸಿ, ಶಾಲೆಗೆ ಕರೆತರಬೇಕು. ಮಕ್ಕಳ ಸಹಾಯವಾಣಿ-1098 ಬಗ್ಗೆ
ಮಕ್ಕಳಿಗೆ ತಿಳಿಸಬೇಕು ಎಂದು ಸೂಚಿಸಿದರು.
ನೀತಿ ಆಯೋಗವು ರಾಜ್ಯದ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳನ್ನು ಮಹತ್ವಾಕಾಂಕ್ಷೆ ಜಿಲ್ಲೆಗಳೆಂದು ಗುರುತಿಸಿದೆ. ಇದರಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಅಪೌಷ್ಟಿಕತೆ ನಿವಾರಣೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಡೆದ ಮಾಹಿತಿಯನ್ನು ತಳಮಟ್ಟದಲ್ಲಿ ಕೆಲಸ ಮಾಡುವ ಶಿಕ್ಷಕರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತರು, ಸಹಾಯಕರು, ಎಎನ್‌ಎಂ ಅವರಿಗೆ ತಲುಪಿಸಬೇಕು ಎಂದು ಹೇಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಪ್ರಕಾಶ ಅರ್ಜುನ ಬನಸೊಡೆ, ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಚಂದ್ರಶೇಖರ ಅಲ್ಲಿಪುರ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಹಣಮಂತರಾಯ ಕರಡ್ಡಿ ಉಪಸ್ಥಿತರಿದ್ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಸಂಜೀವ್ ಕುಮಾರ ರಾಯಚೂರಕರ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ್ ಬಿರಾದಾರ, ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.
ಕಾರ್ಯಕ್ರಮದ ನಂತರ ಯುನಿಸೆಫ್ ಸಂಪನ್ಮೂಲ ವ್ಯಕ್ತಿ ರಾಘವೇಂದ್ರ ಭಟ್ ಅಧಿಕಾರಿಗಳಿಗೆ ತರಬೇತಿ ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀಕಾಂತ ಕುಲಕರ್ಣಿ ಸ್ವಾಗತಿಸಿದರು. ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಶರಣಪ್ಪ ಪಾಟೀಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadagiri: ಮನೆ ಮೇಲೆ ಗಾಂಜಾ ಗಿಡ ಬೆಳೆದ ವ್ಯಕ್ತಿ ಬಂಧನ
Yadagiri: ರೈತರಿಗೆ ಭೂಮಿ ನೀಡಿದ್ದೇ ಕಾಂಗ್ರೆಸ್ ಪಕ್ಷ: ವಿ.ಎಸ್.ಉಗ್ರಪ್ಪ
ಕಳ್ಳರ ಮಾಹಿತಿ ನೀಡಿದ್ದೇ ಮುಳುವಾಯ್ತು… ಜೈಲಿನಿಂದ ಬರುತ್ತಿದ್ದಂತೆ ವ್ಯಕ್ತಿಯ ಹತ್ಯೆ
Hunasagi: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕಾಷ್ಟ ಶಿಲ್ಪಿ ಕಂಚಗಾರ ಇನ್ನಿಲ್ಲ
Yadgiri: ಯಾವುದೇ ರೈತರ ಭೂಮಿ ವಕ್ಫ್ ಗೆ ವರ್ಗಾವಣೆಯಾಗಿಲ್ಲ: ಸಚಿವ ದರ್ಶನಾಪುರ
MUST WATCH
ಹೊಸ ಸೇರ್ಪಡೆ
Punjalkatte: ಬೈಕ್ ಢಿಕ್ಕಿ; ರಸ್ತೆ ಬದಿ ನಿಂತಿದ್ದ ವ್ಯಕ್ತಿ ಸಾವು
Shivamogga: ಆಸ್ಪತ್ರೆಯಲ್ಲಿನ ತೆರೆದ ನೀರಿನ ತೊಟ್ಟಿಗೆ ಬಿದ್ದು ಮಗು ಮೃತ್ಯು!
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.