ಅಧಿಕಾರಿ ನಿರ್ಲಕ್ಷ್ಯದಿಂದ ಹಣ ಖರ್ಚಿಗೆ ಗ್ರಹಣ
Team Udayavani, Jan 24, 2019, 11:51 AM IST
ಯಾದಗಿರಿ: ಜಿಲ್ಲೆಯಲ್ಲಿ ಕಾಮಗಾರಿಗಳ ಭೌತಿಕ ಪ್ರಗತಿ ಸಾಧಿಸಿರುವುದಕ್ಕೆ ಅನುಗುಣವಾಗಿ ಸಂಬಂಧಪಟ್ಟ ಇಲಾಖೆಯವರು ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಗೆ ಬಿಲ್ ಕಳುಹಿಸುತ್ತಿಲ್ಲ. ಇದರಿಂದ ಗುತ್ತಿಗೆದಾರರು ಕೂಡ ಕಾಮಗಾರಿ ವಿಳಂಬ ಮಾಡುತ್ತಿದ್ದು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಂಡಳಿಯಿಂದ ಪ್ರತಿ ತಿಂಗಳು ಒಟ್ಟಾರೆ ಖರ್ಚಾಗಬೇಕಿದ್ದ 100 ಕೋಟಿ ರೂ.ಗೂ ಅಧಿಕ ಹಣ ಖರ್ಚಾಗುತ್ತಿಲ್ಲ ಎಂದು ಪ್ರಾದೇಶಿಕ ಆಯುಕ್ತರು ಹಾಗೂ ಎಚ್ಕೆಆರ್‌ಡಿಬಿ ಮಂಡಳಿ ಕಾರ್ಯದರ್ಶಿ ಸುಬೋಧ್ ಯಾದವ್ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲೆಯ ಮೈಕ್ರೋ-ಮ್ಯಾಕ್ರೋ ಕಾಮಗಾರಿಗಳ ಕುರಿತು ನಡೆದ ಇಲಾಖಾವಾರು ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಹಂತ ಹಂತವಾಗಿ ಬಿಲ್ ಪಾವತಿಸಿ: ಜಿಲ್ಲೆಯಲ್ಲಿ ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಮೈಕ್ರೋ-ಮ್ಯಾಕ್ರೋ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ಭೌತಿಕ ಪ್ರಗತಿಗೆ ಅನುಗುಣವಾಗಿ ಆರ್ಥಿಕ ಪ್ರಗತಿಯಾಗಬೇಕು. ಆದ್ದರಿಂದ ಗುತ್ತಿಗೆದಾರರು ಕೆಲಸ ನಿರ್ವಹಿಸಿದಂತೆ ವಿಳಂಬ ಮಾಡದೆ ಹಂತ ಹಂತವಾಗಿ ಬಿಲ್ ಪಾವತಿಸಬೇಕು ಎಂದು ಸೂಚಿಸಿದರು.
ಶಾಲಾ-ಕಾಲೇಜುಗಳಿಗೆ ಹೆಚ್ಚುವರಿ ಕೋಣೆ ನಿರ್ಮಿಸಲು ಸ್ಥಳಾವಕಾಶ ತೊಂದರೆ ಉಂಟಾದರೆ ಸ್ಥಳ ಲಭ್ಯವಿಲ್ಲ ಎಂದು ಮುಖ್ಯಗುರುಗಳಿಂದ ಪತ್ರ ಬರೆಸಿಕೊಂಡು ಸುಮ್ಮನೆ ಕೂಡಬಾರದು. ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿ ಅಥವಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರೊಂದಿಗೆ ಚರ್ಚಿಸಬೇಕು. ಆದಾಗ್ಯೂ ಪರಿಹಾರ ಸಿಗದಿದ್ದಲ್ಲಿ ಜಿಪಂ ಸಿಇಒ ಅಥವಾ ಜಿಲ್ಲಾಧಿಕಾರಿ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಿಕೊಳ್ಳÛಲು ಸಲಹೆ ನೀಡಿದರು.
ಕೆಲ ಇಲಾಖೆಗಳಿಗೆ ವಹಿಸಿದ 10 ಲಕ್ಷ ರೂ. ಒಳಗಿನ ಕಾಮಗಾರಿಗಳು ಕೂಡ ಬಾಕಿ ಉಳಿದಿವೆ. ಒಂದು ಅಂಗನವಾಡಿ ಕಟ್ಟಡ ನಿರ್ಮಿಸಲು 5-6 ವರ್ಷ ತೆಗೆದುಕೊಂಡರೆ ಪ್ರಗತಿ ನಿರೀಕ್ಷೆ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದ ಅವರು, ಕಾಮಗಾರಿಗಳ ಭೌತಿಕ ಪ್ರಗತಿ ಬಗ್ಗೆ ಪರಿಶೀಲಿಸುವಂತೆ ಎಚ್ಕೆಆರ್‌ಡಿಬಿ ಶಾಖೆಯ ಪ್ರಾಜೆಕ್ಟ್ ಅಧಿಕಾರಿ ವಿಶ್ವನಾಥ ಚಲಗೇರಿ ಅವರಿಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖೆಯ 2018-19ನೇ ಸಾಲಿನ 236 ಕಾಮಗಾರಿಗಳಲ್ಲಿ 141 ಕಾಮಗಾರಿಗಳಿಗೆ ಆಡಳಿತಾತ್ಮಕ ಮಂಜೂರಾತಿ ನೀಡಲಾಗಿದೆ. ಇದರಲ್ಲಿ 76 ಕಾಮಗಾರಿಗಳ ಟೆಂಡರ್‌ಗಳಿಗೆ ಅನುಮತಿ ನೀಡಿದರೂ 42 ಕಾಮಗಾರಿಗಳು ಮಾತ್ರ ಆರಂಭವಾಗಿವೆ. ಉಳಿದ 34 ಕಾಮಗಾರಿಗಳು ಏಕೆ ಆರಂಭಿಸಿಲ್ಲ? ಎಂದು ಇಲಾಖೆ ಕಾರ್ಯನಿರ್ವಾಹಕ ಇಂಜಿನಿಯರ್ ಚನ್ನಬಸಪ್ಪ ಮೆಕಾಲೆ ಅವರನ್ನು ಪ್ರಶ್ನಿಸಿದರು. ಗುತ್ತಿಗೆದಾರರೊಂದಿಗೆ ಒಪ್ಪಂದವಾಗದ ಕಾರಣ ವಿಳಂಬವಾಗಿದೆ. ತಕ್ಷಣ ಒಪ್ಪಂದ ಮಾಡಿಕೊಂಡು ಕಾಮಗಾರಿ ಆಂಭಿಸಲಾಗುವುದು ಎಂದು ಇಇ ಚನ್ನಬಸಪ್ಪ ಉತ್ತರಿಸಿದರು.
ಅಂದಾಜು ಪ್ರತಿ ತಯಾರಿಸಿ: ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 2018-19ನೇ ಸಾಲಿನ 105 ಕಾಮಗಾರಿಗಳಲ್ಲಿ 58 ಟೆಂಡರ್ ಕರೆಯಲಾಗಿದೆ. ಜ.25ರಂದು ಟೆಂಡರ್ ತೆರೆಯಲಾಗುವುದು ಎಂದು ವಿಭಾಗದ ತಾಂತ್ರಿಕ ಸಹಾಯಕರಾದ ಮುಕ್ತಾರ್ ಅವರು ಮಾಹಿತಿ ನೀಡಿದರು. ಆಗ ಮಂಡಳಿ ಕಾರ್ಯದರ್ಶಿಗಳು ಮಾತನಾಡಿ, ಉಳಿದ 47 ಕಾಮಗಾರಿಗಳಿಗೆ ಅಂದಾಜು ಪತ್ರಿಕೆ ತಯಾರಿಸದ ಕಾರಣ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರನ್ನು ತರಾಟೆಗೆ ತೆಗೆದುಕೊಂಡರು. ಕಾಮಗಾರಿ ಸ್ಥಳಕ್ಕೆ ಖುದ್ದಾಗಿ ಭೇಟಿ ನೀಡಿ, ಅಂದಾಜು ಪತ್ರಿಕೆ ತಯಾರಿಸುವಂತೆ ನಿರ್ದೇಶಿಸಿದರು.
ಮಾರ್ಚ್ ಅಂತ್ಯದೊಳಗೆ ಬಾಕಿ ಕಾಮಗಾರಿ ಪೂರ್ಣ: ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ತೆಗೆದುಕೊಂಡ 31 ಕಾಮಗಾರಿಗಳಲ್ಲಿ 20 ಪೂರ್ಣಗೊಂಡಿವೆ. ಉಳಿದ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಮಾರ್ಚ್ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು ಎಂದು ಅಧಿಕಾರಿಗಳು ವರದಿ ಒಪ್ಪಿಸಿದರು.
ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್, ಅಪರ ಜಿಲ್ಲಾಧಿಕಾರಿ ಪ್ರಕಾಶ್ ಜಿ.ರಜಪೂತ, ಎಚ್ಕೆಆರ್‌ಡಿಬಿ ಜಂಟಿ ನಿರ್ದೇಶಕ ಬಸವರಾಜ, ಸಹಾಯಕ ಆಯುಕ್ತ ಡಾ.ಬಿ.ಎಸ್. ಮಂಜುನಾಥ ಸ್ವಾಮಿ, ಜಿಪಂ ಮುಖ್ಯ ಯೋಜನಾಧಿಕಾರಿ ಗುರುನಾಥ ಹಾಗೂ ಜಿಲ್ಲಾಮಟ್ಟದ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.