ಸ್ಮಶಾನ ಸ್ಥಳ ಅಭಿವೃದ್ದಿಗೆ ಒತ್ತಾಯಿಸಿ ಮನವಿ
Team Udayavani, Mar 4, 2022, 12:29 PM IST
ಸುರಪುರ: ನಗರಸಭೆ ವ್ಯಾಪ್ತಿಯ ತಿಮ್ಮಾಪುರದ ಮಹಿಬೂಬ್ ಸುಭಾನಿ ದರ್ಗಾ ಹತ್ತಿರದ ಹಿಂದೂ ಸ್ಮಶಾನ ಸ್ಥಳಕ್ಕೆ ಶಾಸಕ ಹಾಗೂ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ರಾಜುಗೌಡ ಗುರುವಾರ ಭೇಟಿ ನೀಡಿ ಸ್ಥಳೀಯರಿಂದ ಅಹವಾಲು ಸ್ವೀಕರಿಸಿದರು.
ಈ ವೇಳೆ ಯಲ್ಲಪ್ಪ ಎಲಿಗಾರ ಮತ್ತು ಇತರರು ಮಾತನಾಡಿ, ರಂಗಂಪೇಟ-ತಿಮ್ಮಾಪುರದ 16 ಸಮುದಾಯಗಳಿಗೆ ಈ ಸ್ಮಶಾನ ಭೂಮಿ ಇದೆ. ಶವ ಸಂಸ್ಕಾರಕ್ಕೆ ತೀವ್ರ ಅಡಚಣೆಯಾಗುತ್ತಿದೆ. ಈ ಬಗ್ಗೆ ಸುಮಾರು ವರ್ಷಗಳಿಂದ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಆದ್ದರಿಂದ ಹೆಚ್ಚುವರಿಯಾಗಿ 2 ಎಕರೆ ಭೂಮಿ ಮಂಜೂರಿ ಮಾಡಿಸಬೇಕೆಂದು ಒತ್ತಾಯಿಸಿದರು.
ಸಕುಳಸಾಳಿ ಸಮಾಜದ ಹಿರಿಯ ಮುಖಂಡ ರಾಮಚಂದ್ರ ಟೋಣಪೆ ಮಾತನಾಡಿ, ಸ್ಮಶಾನ ಭೂಮಿ ಬೆಟ್ಟದ ಮೇಲಿರುವುದರಿಂದ ಶವ ಹೂಳಲು ತೊಂದರೆ ಆಗುತ್ತಿದೆ. ವಯಸ್ಸಾದರು ಮಡ್ಡಿ ಹತ್ತಿ ಬರಲು ಆಗುತ್ತಿಲ್ಲ. ಆದ್ದರಿಂದ ಸ್ಮಶಾನ ಭೂಮಿ ಸಮತಟ್ಟು ಮಾಡಿಸಿ ಸಿಸಿ ರಸ್ತೆ ನಿರ್ಮಿಸಬೇಕು. ಸುತ್ತಲೂ ಕಾಂಪೌಂಡ್, ಚಿತಾಗಾರ, ಮರಗಿಡಗಳ ನಾಟಿ, ಆಸನಗಳ ವ್ಯವಸ್ಥೆ, ಕುಡಿಯುವ ನೀರು ವಿದ್ಯುತ್ ಸೇರಿದಂತೆ ಮೂಲಸೌಕರ್ಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಶಾಸಕ ರಾಜುಗೌಡ ಮಾತನಾಡಿ, ಇಲ್ಲಿನ ಸಮಸ್ಯೆ ಗಮನಕ್ಕೆ ಬಂದಿದೆ. ಖದ್ದಾಗಿ ವೀಕ್ಷಿಸಿದ್ದೇನೆ. ಶೀಘ್ರವೇ ಅಗತ್ಯ ಅನುದಾನ ಒದಗಿಸಿ ಅಭಿವೃದ್ಧಿ ಪಡಿಸುತ್ತೇನೆ ಎಂದು ಭರವಸೆ ನೀಡಿದರು. ಪ್ರಮುಖರಾದ ರಾಜಾ ಹನುಮಪ್ಪ ನಾಯಕ ತಾತಾ, ನಾಗೇಶ ಕಾಟಗಿ, ಚನ್ನಪ್ಪ ಎಲಿಗಾರ, ರಾಜು ಡೊಳ್ಳೆ, ಉಮೇಶ ಡೊಳ್ಳೆ ಇತರರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.