ಬೌದ್ಧ ಧಮ್ಮ ಕೊಡುಗೆ ಅಪಾರ; 22 ಪ್ರತಿಜ್ಞೆ ಪಾಲಿಸಿ: ರಮಾತಾಯಿ
ಕರ್ನಾಟದಲ್ಲಿ ಈ ಕಾರ್ಯ ಅಷ್ಟಾಗಿ ಆಗಿಲ್ಲ. ಸಂಘಟನೆಗಳ ಮುಖಂಡರು ಈ ಬಗ್ಗೆ ಕಾಳಜಿ ವಹಿಸಬೇಕು
Team Udayavani, Oct 15, 2022, 5:58 PM IST
ಸುರಪುರ: ಜೀವನದಲ್ಲಿ ನಾವು ಯಾವ ರೀತಿ ಇರಬೇಕು, ಹೇಗೆ ವಿಚಾರ ಮಾಡಬೇಕು ಮತ್ತು ಜೀವನ ಸಾಗಿಸಬೇಕು ಎಂಬುದನ್ನು ಬೌದ್ಧ ಧಮ್ಮ ನಮಗೆ ತಿಳಿಸುತ್ತದೆ. ಇದು ವೈಜ್ಞಾನಿಕವಾಗಿದ್ದು, ಜೀವನಕ್ಕೆ ಇದರ ಕೊಡುಗೆ ಅಪಾರವಾಗಿದೆ ಎಂದು ಡಾ|ಬಿ. ಆರ್. ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಅಂಬೇಡ್ಕರ್ ಹೇಳಿದರು.
ಡಾ| ಬಿ.ಆರ್.ಅಂಬೇಡ್ಕರ್‌ರವರ 66ನೇ ಧಮ್ಮ ಚಕ್ರ ಪರಿವರ್ತನಾ ದಿನದ ಅಂಗವಾಗಿ ಶುಕ್ರವಾರ ಇಲ್ಲಿಯ ಗೋಲ್ಡನ್ ಕೇವ್ ಬುದ್ಧ ವಿಹಾರದಲ್ಲಿ ಜಿಬಿಟಿ ಮತ್ತು ಎಲ್ಲ ದಲಿತ ಸಂಘಟನೆಗಳ ವತಿಯಿಂದ ಆಯೋಜಿಸಿದ್ದ ಬೌದ್ಧ ಧಮ್ಮ ದೀಕ್ಷಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾವು ಈ ಜನ್ಮದಲ್ಲಿ ಮಾಡಿದ ಕರ್ಮದ ಫಲ ಇದೇ ಜನ್ಮದಲ್ಲಿ ಸಿಗುತ್ತದೆ ಎಂಬುದನ್ನು ಬೌದ್ಧ ಧಮ್ಮ ತಿಳಿಸುತ್ತದೆ. ಒಳ್ಳೆಯ ಕೆಲಸ ಮಾಡಿದರೆ ಒಳ್ಳೆಯದು ಪ್ರಾಪ್ತಿಯಾಗುತ್ತದೆ.ಬೌದ್ಧ ಧಮ್ಮದಲ್ಲಿ ಪಂಚಶೀಲ ತತ್ವದ ಮಹತ್ವವಿದೆ ಎಂದರು.
1956 ಅ.14ರಂದು ಬಾಬಾ ಸಾಹೇಬರು ಮಹಾರಾಷ್ಟ್ರದಲ್ಲಿ ಬೌದ್ಧ ಧಮ್ಮ ದೀಕ್ಷಾ ಸ್ವೀಕರಿಸಿದಾಗ ಅವರೊಂದಿಗೆ ಐದು ಲಕ್ಷ ಜನ ದೀಕ್ಷೆ ಪಡೆದಿದ್ದರು. ಅಂದಿನಿಂದ
ಈ ಪ್ರಕ್ರಿಯೆ ನಡೆಯುತ್ತಾ ಬಂದಿದೆ. ಪ್ರತಿ ವರ್ಷ ಅನೇಕರು ಬೌದ್ಧ ಧಮ್ಮದ ದೀಕ್ಷೆ ಪಡೆಯುತ್ತಾರೆ. ಕಳೆದ ನಾಲ್ಕೈದು ವರ್ಷಗಳಿಂದ ದೀಕ್ಷೆ ಪಡೆಯುವವರ ಸಂಖ್ಯೆಯಲ್ಲಿ ಭಾರಿ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಬಾಬಾ ಸಾಹೇಬರು ನಿರಂತರವಾಗಿ 20 ವರ್ಷ ಬೌದ್ಧ ಧಮ್ಮದ ಮೇಲೆ ಅಭ್ಯಾಸ ಮಾಡಿ ಇದರ ಒಳ್ಳೆಯ ಪರಿಣಾಮ ನಮ್ಮ ಸಮಾಜದ ಮೇಲೆ ಯಾವ ರೀತಿ ಆಗುತ್ತದೆ ಮತ್ತು ಅಭಿವೃದ್ಧಿ ಹೇಗೆ ಸಾಧ್ಯ ಎಂಬುದನ್ನು ತಿಳಿದುಕೊಂಡು ತಮ್ಮ ಅನುಯಾಯಿಗಳ ಜತೆಗೆ ಬೌದ್ಧ ಧಮ್ಮ ಸ್ವೀಕರಿಸಿದ್ದರು. ಧಮ್ಮ ದೀಕ್ಷೆ ಪಡೆಯುವವರು ಇದರ ಮಹತ್ವ ಅರಿತುಕೊಂಡು ಪಾಲನೆ, ಆಚರಣೆ, ಪ್ರಚಾರ ಮಾಡಬೇಕು ಎಂದು ಅವರು ವಿನಂತಿಸಿದ್ದರು. ಈ ದೀಕ್ಷೆ ಸ್ವೀಕರಿಸಿದ ಅನಂತರ ಅತಿ ಆನಂದವಾಗಿದೆ ಎಂದಿದ್ದರು ಎಂದು ತಿಳಿಸಿದರು.
ಬೌದ್ಧ ಧಮ್ಮದ ಆಚರಣೆ, ಪ್ರಚಾರ ಮಾಡಬೇಕು. 22 ಪ್ರತಿಜ್ಞೆಗಳನ್ನು ಜೀವನದಲ್ಲಿ ಪಾಲಿಸಬೇಕು. ವಿಶ್ವದ ಆರು ಪ್ರತಿಭಾನ್ವಿತರಲ್ಲಿ ಒಬ್ಬರಾಗಿದ್ದ ಅಂಬೇಡ್ಕರ್ ಅವರು 65 ವರ್ಷಗಳವರೆಗೂ ಜಾತಿವಾದದಿಂದಾಗಿ ಬಹಳ ನೋವು ಅನುಭವಿಸಿದರು. ಅವರು ಯಾಕೆ ಬೌದ್ಧ ಧಮ್ಮ ಸ್ವೀಕರಿಸಿದ್ದರು ಎಂಬುದು ಜನರಿಗೆ ಅರ್ಥವಾಗಿದೆ. ದಲಿತರ ಮೇಲೆ ಇಂದಿಗೂ ಅನ್ಯಾಯ, ದೌರ್ಜನ್ಯ ನಿರಂತರವಾಗಿ ನಡೆಯುತ್ತಿದೆ. ಸುರಪುರದಲ್ಲೂ ಅನೇಕರು ಇಂದು ಬೌದ್ಧ ಧಮ್ಮ ದೀಕ್ಷೆ ತೆಗೆದುಕೊಂಡಿರುವುದು ಸಂತಸದ ಸಂಗತಿ ಎಂದರು.
ಸಾಹಿತಿ ಮತ್ತು ಚಿಂತಕ ಬುದ್ಧ ಘೋಷ್ ದೇವೇಂದ್ರ ಹೆಗ್ಗಡೆ ಮಾತನಾಡಿ, ಬಾಬಾ ಸಾಹೇಬರು ಬೌದ್ಧ ಧಮ್ಮದಲ್ಲಿರುವ ಒಳ್ಳೆಯ ವಿಚಾರಗಳೇನು, ಅವು ಯಾವ ರೀತಿ ಜಗತ್ತಿನ ಮಾನವ ಜನಾಂಗದ ಮೇಲೆ ಪರಿಣಾಮ ಬೀರುತ್ತವೆ, ಯಾವ ರೀತಿ ಮಾನವನ ಕಲ್ಯಾಣಕ್ಕೆ ಅನುಕೂಲವಾಗಿವೆ ಎಂಬುದನ್ನು ಅಧ್ಯಯನ ಮಾಡಿದ ಬಳಿಕ ಬೌದ್ಧ ಧಮ್ಮ ದೀಕ್ಷೆ ಸ್ವೀಕರಿಸಿದ್ದರು ಎಂದರು.
ಯುದ್ಧ ಮಾಡಿ ಸಾಧಿಸಲಾಗುವುದನ್ನು ಧಮ್ಮ ಮಾಡಿಕೊಟ್ಟಿದೆ. ಸಾಮ್ರಾಟ್ ಅಶೋಕ ಅಖಂಡ ಭಾರತಕ್ಕೆ ನಕಾಶೆ ಮಾಡಿ ಕೊಟ್ಟರು. ಭಾರತ, ಶ್ರೀಲಂಕಾ, ಅಫ್ಘಾನಿಸ್ತಾನ್ ಮತ್ತು ಪಾಕಿಸ್ತಾನದವರೆಗೆ ಬೌದ್ಧ ಧಮ್ಮ ಮೆರೆಯಿತು. ಬೌದ್ಧ ಎಂಬುದು ಅಂತಾರಾಷ್ಟ್ರೀಯ ಸಮಾಜ ಎಂಬುದನ್ನು ಬಾಬಾ ಸಾಹೇಬ್ ರು ಹೇಳಿದ್ದಾರೆ. ಬೌದ್ಧರನ್ನು ಭಾರತಕ್ಕೆ ಸೀಮಿತವಾಗಿಸಿಲ್ಲ. ಇಡೀ ಅಂತಾರಾಷ್ಟ್ರೀಯ ಜನಾಂಗವನ್ನಾಗಿ ಮಾಡಿದ್ದಾರೆ. ಬೌದ್ಧರ ಮೇಲೆ ದೌರ್ಜನ್ಯವಾದರೆ ಇಡೀ ಜಗತ್ತೇ ಮಾತನಾಡುತ್ತದೆ. ಬಾಬಾ ಸಾಹೇಬರು ದೊಡ್ಡ ಶಕ್ತಿ ಕೊಟ್ಟು ಹೋಗಿದ್ದಾರೆ.ಆ ಶಕ್ತಿ ಅರ್ಥ ಮಾಡಿಕೊಂಡು ಅದರ ಜೊತೆಯಲ್ಲಿ ಹೋಗಬೇಕು.
ಮಾನಸಿಕ ಗುಲಾಮಗಿರಿಯಿಂದ ನಾವು ಹೊರಗೆ ಬರಬೇಕು. ಬೌದ್ಧರಾಗಿ ಮುಂದುವರೆಯಬೇಕು. ಮಹಾರಾಷ್ಟ್ರದಲ್ಲಿ ನಿರಂತವಾಗಿ ಧಮ್ಮ ಚಳುವಳಿ ನಡೆದಿದೆ. ದೀಕ್ಷೆ ಪಡೆದವರ ಸಂಖ್ಯೆ ಇಂದು ಒಂದು ಕೋಟಿ ತಲುಪಿದೆ. ಶೇ.90ರಷ್ಟು ಬೌದ್ಧರಿದ್ದಾರೆ. ಆದರೆ ಕರ್ನಾಟದಲ್ಲಿ ಈ ಕಾರ್ಯ ಅಷ್ಟಾಗಿ ಆಗಿಲ್ಲ. ಸಂಘಟನೆಗಳ ಮುಖಂಡರು ಈ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ದಲಿತ ಸಂಘಟನೆಗಳ ಮುಖಂಡರಾದ ಮಾವಳ್ಳಿ ಶಂಕರ, ಎಣ್ಣೂರ ಶ್ರೀನಿವಾಸ, ಮರೆಪ್ಪ ಹಳ್ಳಿ, ಪರಶುರಾಮ ನೀಲನಾಯಕ ಸೇರಿದಂತೆ ಹಲವು ಮುಖಂಡರು
ಮಾತನಾಡಿದರು. ಈ ವೇಳೆ ಹಲವಾರು ಮಂದಿ ಧಮ್ಮ ದೀಕ್ಷೆ ಸ್ವೀಕರಿಸಿದರು. ನಂತರ 22 ಪ್ರತಿಜ್ಞೆಗಳನ್ನು ಬೋಧಿಸಲಾಯಿತು. ವರಜ್ಯೋತಿ ಬಂತೇಜಿ ಸಾನ್ನಿಧ್ಯ ವಹಿಸಿ ಸಂದೇಶ ನೀಡಿದರು. ವೆಂಕಟೇಶ ಹೊಸ್ಮನಿ ಅಧ್ಯಕ್ಷತೆ ವಹಿಸಿದ್ದರು. ಧಮ್ಮ ಬಿಕ್ಕುಗಳು, ದಲಿತ ನಾಯಕರು, ಅಧಿಕಾರಿಗಳು, ಟ್ರಸ್ಟ್‌ನವರು ವೇದಿಕೆಯಲ್ಲಿದ್ದರು.
ಅಮ್ಮಾ ರಾಮಚಂದ್ರಜಿ, ಸಿದ್ಧಾರ್ಥ ಡಿ. ಧಮ್ಮ ಗೀತೆಗಳನ್ನು ಹಾಡಿದರು. ನಾಗಣ್ಣ ಕಲ್ಲದೇವನಹಳ್ಳಿ ಸ್ವಾಗತಿಸಿದರು. ರಾಹುಲ್ ಹುಲಿಮನಿ ಪರಿಚಯಿಸಿದರು. ರಾಜು ಕುಂಬಾರ ನಿರೂಪಿಸಿದರು. ಭೀಮರಾಯ ಸಿಂದಗೇರಿ, ಮಾಳಪ್ಪ ಕಿರದಳ್ಳಿ ವಂದಿಸಿದರು.
ಬಾಬಾ ಸಾಹೇಬರ ಪುತ್ಥಳಿಗೆ ನಮನ
ಡಾ| ಬಿ.ಆರ್.ಅಂಬೇಡ್ಕರ್ ಮೊಮ್ಮಗಳು ರಮಾತಾಯಿ ಅಂಬೇಡ್ಕರ್ ಅವರಿಗೆ ನಗರದಲ್ಲಿ ಅದ್ಧೂರಿ ಸ್ವಾಗತ ಕೋರಲಾಯಿತು. ಜೈ ಭೀಮ್ ಘೋಷಣೆಗಳು ಮೊಳಗಿದವು. ಹಸನಾಪುರದಿಂದ ಬೈಕ್ ರ್ಯಾಲಿ ಮೂಲಕ ಅವರನ್ನು ಕರೆ ತರಲಾಯಿತು. ಅನಂತರ ಅವರು ಝಂಡದಕೇರಾದ ಅಂಬೇಡ್ಕರ್ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಿದರು. ಬಳಿಕ ಮಹಾತ್ಮ ಗಾಂಧಿ ಮೂರ್ತಿಗೂ, ಬುದ್ಧನ ವೃತ್ತಕ್ಕೂ ಮಾಲಾರ್ಪಣೆ ಮಾಡಿದರು.
450ಕ್ಕೂ ಹೆಚ್ಚು ಮಂದಿ ದೀಕ್ಷೆ ಈ ನಡುವೆ ಈ ಸಮಾರಂಭದಲ್ಲಿ ಸುಮಾರು 450ಕ್ಕೂ ಹೆಚ್ಚು ಮಂದಿ ಬೌದ್ಧ ಧಮ್ಮ ಸ್ವೀಕರಿಸಿದ್ದಾರೆ ಎಂದು ಗೋಲ್ಡನ್ ಕೇವ್ ಬುದ್ಧ ವಿಹಾರ ಟ್ರಸ್ಟ್ ಅಧ್ಯಕ್ಷ ವೆಂಕಟೇಶ ಹೊಸ್ಮನಿ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.