ಮೌಡ್ಯ ರಹಿತ ಸಮಾಜ ನಿರ್ಮಾಣವೇ ಶರಣರ ಗುರಿ
Team Udayavani, Mar 27, 2022, 2:56 PM IST
ಶಹಾಪುರ: ಬಸವಣ್ಣನವರು ಬರುವುದಕ್ಕಿಂತ ಪೂರ್ವದಲ್ಲಿ ಬಹುತೇಕ ದಾರ್ಶನಿಕರು ದೇವರ ಕುರಿತು ಮಾತನಾಡಿದ್ದರು. ಆದರೆ ಬಸವಣ್ಣನವರು ಮಾತ್ರ ಮೊಟ್ಟ ಮೊದಲು ಬಾರಿಗೆ ಮನುಷ್ಯರ ಕುರಿತು ಮಾತನಾಡಿದರು ಎಂದು ನಿಜಗುಣಾನಂದ ಸ್ವಾಮೀಜಿ ತಿಳಿಸಿದರು.
ನಗರದಲ್ಲಿ ಬಸವಮಾರ್ಗ ಪ್ರತಿಷ್ಠಾನ ಹಾಗೂ ಜಾಗತಿಕ ಲಿಂಗಾಯತ ಮಹಾಸಭೆ ಆಯೋಜಿಸಿದ್ದ ಬಸವ ಬೆಳಕು 100ರ ಸಭೆಯ ಲಿಂಗಣ್ಣ ಸತ್ಯಂಪೇಟೆ ವೇದಿಕೆಯಲ್ಲಿ ಅನುಭಾವಿಗಳಾಗಿ ಮಾತನಾಡಿದರು.
ಬಸವಣ್ಣನವರು ಸೇರಿದಂತೆ ಎಲ್ಲಾ ಶರಣರ ನಡೆ ನುಡಿ ವೈಚಾರಿಕ ಎತ್ತರ, ಅಂತಃಕರಣ, ಮೌಡ್ಯ ರಹಿತವಾದ ಸಮಾಜ ನಿರ್ಮಾಣ ಗುರಿಯಾಗಿತ್ತು. ಅದು ಬರಿ ಶಬ್ದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಬಸವಣ್ಣನವರು ನಮಗೆ ಕೊಟ್ಟ ದೇವರು ಸರ್ವರ ದೇವರು. ನಮ್ಮ ನಮ್ಮ ಅಂತಃಸಾಕ್ಷಿಯೇ ನಮ್ಮ ದೇವರು ಎಂದು ವಿವರಿಸಿದರು.
ಕಲ್ಲು ಕಟ್ಟಿಗೆ, ಮಣ್ಣು, ಪಂಚಲೋಹಗಳಲ್ಲಿ ದೇವರನ್ನು ಹುಡುಕುವ ಗೋಜಿಗೆ ಹೋಗಲಿಲ್ಲ. ಪ್ರತಿಯೊಬ್ಬ ವ್ಯಕ್ತಿಯೂ ಸಹ ದೇವರಾಗುವುದು ಸುಲಭ. ಸನಾತನ ಪರಂಪರೆ ಸೃಷ್ಟಿ ಮಾಡಿದ ಮೌಡ್ಯ ಕಂದಾಚಾರಗಳನ್ನು ವಿವರಿಸಿದ ಅವರು, ದೇವರ ಪೂಜೆಯಿಂದ ಯಾರ ದಾರಿದ್ರ್ಯವೂ ಹೋಗಿಲ್ಲ. ಕಾಯಕದಿಂದ ಮಾತ್ರ ಮನುಷ್ಯನ ಎಲ್ಲ ರೀತಿಯ ದಾರಿದ್ರ್ಯಗಳು ದೂರ ಸರಿದಿವೆ. ಆದ್ದರಿಂದಲೆ ಬಸವಣ್ಣ ಕಾಯಕವೇ ಕೈಲಾಸವೆಂದು ಬೋಧಿಸಿದರು ಎಂದು ವಚನಗಳ ಮೂಲಕ ತಿಳಿಸಿದರು.
ಪ್ರತಿಷ್ಠಾನದ ಅಧ್ಯಕ್ಷ ವಿಶ್ವರಾಧ್ಯ ಸತ್ಯಂಪೇಟೆ ಮಾತನಾಡಿ, ತಿಂಗಳ ಬಸವ ಬೆಳಕು ನನ್ನೊಬ್ಬನಿಂದ ಹಬ್ಬಿಸಲು ಸಾಧ್ಯವಿಲ್ಲ. ಈ ಕೆಲಸಕ್ಕೆ ನೂರಾರು ಕಾಣದ-ಕಾಣುವ ಕೈಗಳೇ ಕಾರಣ. ಸಮಾಜದಲ್ಲಿನ ಮೌಡ್ಯ ಹೋಗಲಾಡಿಸಲು ಅಪ್ಪ ಲಿಂಗಣ್ಣ ಸತ್ಯಂಪೇಟೆಯವರ ಮಾರ್ಗದಲ್ಲಿ ನಡೆದು ಹೋಗಲು ನನಗೆ ಬಹು ಸಂತಸವೆನಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಮಾತನಾಡಿ, ಪತ್ರಕರ್ತ ಸಾಹಿತಿಯೂ ಆಗಿದ್ದ ಲಿಂಗಣ್ಣ ಸತ್ಯಂಪೇಟೆ ಅವರನ್ನು ನಾನು ರಾಜಕಾರಣಕ್ಕೆ ಬರುವುದಕ್ಕಿಂತ ಮುಂಚೆಯೂ ಆನಂತರವೂ ಗಮನಿಸಿದ್ದೇನೆ. ಅವರು ನ್ಯಾಯ ನಿಷ್ಠುರಿ ಆಗಿದ್ದರು. ಬಸವ ತತ್ವವನ್ನು ಅಪ್ಪಿಕೊಂಡು, ಒಪ್ಪಿಕೊಂಡು ಸತ್ಯಂಪೇಟೆ ಅವರು ಮನೆ ಮನಗಳಿಗೂ ತಲುಪಿಸಬೇಕೆಂದು ಉತ್ಸಾಹದಿಂದ ಹೊರಟಿದ್ದರು. ಬಸವಾದಿ ಶರಣರ ಮಹಾ ಮಹಿಮೆಯನ್ನು ಸತ್ಯಂಪೇಟೆ ಕುಟುಂಬ ಹೊತ್ತುಕೊಂಡು ಮುನ್ನಡೆದದು ನಿಜಕ್ಕೂ ಸಂತೋಷದ ಕೆಲಸ ಎಂದು ಬಣ್ಣಿಸಿದರು.
ಪ್ರತಿಷ್ಠಾನದ ವತಿಯಿಂದ ಶಶಿಕಲಾ ಬಸವರಾಜ ತುಂಬಗಿ ಅವರನ್ನು ಸತ್ಕರಿಸಲಾಯಿತು. ಡಿವೈಎಸ್ಪಿ ಡಾ| ಡಿ.ದೇವರಾಜ, ಬಸವಾನಂದ ಸ್ವಾಮೀಜಿ ಮಮ್ಮಿಗಟ್ಟಿ, ವೀರಭದ್ರ ಸ್ವಾಮೀಜಿ ಜಾಡಲದಿನ್ನಿ, ಗುರಮ್ಮ ವೀರಣ್ಣಗೌಡ ಅನವಾರ ಉಪಸ್ಥಿತರಿದ್ದರು. ಶಿಕ್ಷಕ ಲಕ್ಷ್ಮಣ ಲಾಳಸಂಗಿ ಸ್ವಾಗತಿಸಿದರು. ಶರಣಕುಮಾರ ಜಾಲಹಳ್ಳಿ, ಚಂದ್ರಶೇಖರ ಗೋಗಿ ವಚನ ಪ್ರಾರ್ಥನೆಗೈದರು. ಶಿವಣ್ಣ ಇಜೇರಿ ನಿರೂಪಿಸಿದರು. ಚೇತನಗೌಡ ಮಾಲಿ ಪಾಟೀಲ ವಂದಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.