ಕುತಂತ್ರಿ ಕಾಂಗ್ರೆಸ್‌ಗೆ ಜನ ವಿರೋಧ ಪಕ್ಷದ ಸ್ಥಾನವೂ ನೀಡಿಲ್ಲ
ಸಂಸದ ಖೂಬಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು ನಮ್ಮೆಲ್ಲರಿಗೂ ಸಂತಸ ಮೂಡಿಸಿದೆ.
Team Udayavani, Aug 19, 2021, 6:16 PM IST
ಯಾದಗಿರಿ: ಎರಡು ಬಾರಿಯೂ ವಿರೋಧ ಪಕ್ಷದ ಸ್ಥಾನಕ್ಕೆ ಕೊಡುವುದಕ್ಕೂ ಬಿಟ್ಟಿಲ್ಲ. ಕಾಂಗ್ರೆಸ್ ಬಳಿ ಬಿಜೆಪಿ ವಿರುದ್ಧ ಮಾತನಾಡಲು, ಸಂಸತ್‌ನಲ್ಲಿ ಚರ್ಚೆಗೆ ಯಾವುದೇ ವಿಷಯವಿಲ್ಲ. ಗಲಾಟೆ, ಬಹಿಷ್ಕಾರ ಹಾಗೂ ಅಡ್ಡಿಪಡಿಸುವುದೇ ಕಾಂಗ್ರೆಸ್ ಕೆಲಸವಾಗಿದ್ದು, ಇಂತಹ ಕಾರ್ಯಗಳನ್ನು ನೋಡಿ ಜನರು ಸುಮ್ಮನಿರಲ್ಲ ಎಂದು ನವೀಕರಿಸಬಹುದಾದ ಇಂಧನ, ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಕಾಂಗ್ರೆಸ್ ವಿರುದ್ಧ ವಾಗ್ಧಾಳಿ ನಡೆಸಿದರು.
ಯಾದಗಿರಿಯ ವಿದ್ಯಾಮಂಗಲ ಕಾರ್ಯಾಲಯದಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ಅವರು, ಮೂರು ಕೃಷಿ ಕಾಯ್ದೆಗಳ ತಿದ್ದುಪಡಿಯಿಂದ ರೈತರ ಬಾಳು ಬಂಗಾರವಾಗಲಿದೆ. ಆದರೆ ಅದನ್ನು ವಿರೋಧಿಸಿ 8-9 ತಿಂಗಳಿಂದ ನಿಜವಾದ ರೈತರಲ್ಲದ ದಲ್ಲಾಳಿಗಳು ಪ್ರತಿಭಟನೆ ನಡೆಸುತ್ತಿದ್ದು, ಎಲ್ಲಿಯೂ ಸಮರ್ಥನೆ ಸಿಕ್ಕಿಲ್ಲ ಎಂದರು.
ಸರ್ಕಾರದ ಯೋಜನೆಯ ಲಾಭ ಒಂದು ಮತಕ್ಷೇತ್ರದಲ್ಲಿ ಕನಿಷ್ಟ 60 ಸಾವಿರ ಕುಟುಂಬಗಳಿಗೆ ತಲುಪಿದೆ. ಕಾರ್ಯಕರ್ತರು ಮನೆ ಮನೆಗಳಿಗೆ ತೆರಳಿ ಸರ್ಕಾರದ ಸೌಕರ್ಯಗಳ ತಲುಪಿಸಬೇಕು. ಎಲ್ಲ ವರ್ಗಕ್ಕೂ ಅನ್ವಯವಾಗುವ ಆಯುಷ್ಮಾನ್ ಭಾರತ, ಉಜ್ವಲ ಯೋಜನೆ, ಉಚಿತ ಶೌಚಾಲಯ ಸೇರಿ ಹಲವು ಯೋಜನೆಗಳನ್ನು ನೀಡಿದ್ದು, ಇದರಿಂದ ದೇಶದ ಎಲ್ಲ ವರ್ಗದ ಜನರು ಬಿಜೆಪಿ ಜತೆಗಿದ್ದಾರೆ ಎಂದರು.
ಯುಪಿಎ 1 ಮತ್ತು 2ನೇ ಅವಧಿ ಸರ್ಕಾರದಲ್ಲಿ ಕೇವಲ 40 ಸಾವಿರ ಕೋಟಿ ರೈತರ ಸಾಲ ಮನ್ನಾವಾಗಿದೆ. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ರೈತರನ್ನು ಆರ್ಥಿಕವಾಗಿ ಸಬಲರಾಗಲು ಎಲ್ಲ ರೈತರಿಗಾಗಿ ಯೋಜನೆ ನೀಡಿದ್ದು, 60 ಸಾವಿರ ಕೋಟಿ ರೂಪಾಯಿ ಪ್ರತಿವರ್ಷ ರೈತರಿಗೆ ಸಹಾಯವಾಗುತ್ತಿದೆ ಎಂದರು.
ಸಂಸತ್ ಸಂಪ್ರದಾಯದಂತೆ ನೂತನ ಸಚಿವರನ್ನು ಪರಿಚಯಿಸುವ ಸಂಪ್ರದಾಯವನ್ನು ವಿರೋಧಿಸಿ ಕಾಂಗ್ರೆಸ್ ಇನ್ನಿತರ ವಿಪಕ್ಷಗಳು ಅಡ್ಡಿಪಡಿಸಿದ್ದವು. ಹಾಗಾಗಿ ಜನರಿಂದ ಆಶೀರ್ವಾದ ಪಡೆಯಲು ಕಲಬುರಗಿ, ಯಾದಗಿರಿ ಹಾಗೂ ರಾಯಚೂರಿನಲ್ಲಿ ಯಾತ್ರೆ ನಡೆಸಲಾಗುತ್ತಿದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಾದಗಿರಿ ಶಾಸಕ ವೆಂಕಟರೆಡ್ಡಿಗೌಡ ಮುದ್ನಾಳ ಮಾತನಾಡಿ, ಈ ಭಾಗದಿಂದ ಸಂಸದ ಖೂಬಾ ಅವರಿಗೆ ಮಂತ್ರಿ ಸ್ಥಾನ ಸಿಕ್ಕಿದ್ದು ನಮ್ಮೆಲ್ಲರಿಗೂ ಸಂತಸ ಮೂಡಿಸಿದೆ. ಸರಳ ವ್ಯಕ್ತಿತ್ವತ ನಾಯಕರಾಗಿದ್ದಾರೆ.
ಯಾದಗಿರಿ ಜಿಲ್ಲೆಯ ಸಮರ್ಪಕ ನೀರಾವರಿ ಸೌಕರ್ಯ ದೊರೆತರೆ ರೈತರಿಗೆ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ರೇಕ್ ಪಾಯಿಂಟ್ ನಿರ್ಮಾಣ ಅಗತ್ಯವಾಗಿದೆ ಎಂದು ಬೇಡಿಕೆ ಮುಂದಿಟ್ಟಿದ್ದು, ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದರು. ಇದಕ್ಕು ಮೊದಲು ಜನಾಶೀರ್ವಾದ ಯಾತ್ರೆಯ ಸಂಚಾಲಕ ರಾಜ್ಯ ಬಿಜೆಪಿ ನಾಯಕ ಜಗದೀಶ ಹಿರೇಮನಿ ಮಾತನಾಡಿದರು. ಬಿಜೆಪಿ ಜಿಲ್ಲಾಧ್ಯಕ್ಷ ಡಾ| ಶರಣಭೂಪಾಲರೆಡ್ಡಿ ನಾಯ್ಕಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಶಾಸಕ, ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕುರ, ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ್, ಶಶೀಲ್ ಜಿ.ನಮೋಶಿ, ಶರಣಪ್ಪ ತಳವಾರ, ಅಮಾತೆಪ್ಪ ಕಂದಕೂರ, ಡಾ|ವೀರಬಸವಂತರೆಡ್ಡಿ ಮುದ್ನಾಳ, ಗುರು ಶಿರವಾಳ, ಚಂದ್ರಶೇಖರಗೌಡ ಮಾಗನೂರ, ಲಲಿತಾ ಅನಪೂರ, ದೇವಿಂದ್ರನಾಥ ನಾದ, ಬಸವರಾಜ ಚಂಡರಕಿ, ವಿಲಾಸ್ ಬಿ.ಪಾಟೀಲ್, ಪ್ರಭಾವತಿ ಎಂ.ಕಲಾಲ್, ಅಮೀನರೆಡ್ಡಿ ಯಾಳಗಿ, ಭೀಮರೆಡ್ಡಿ ಮುದ್ನಾಳ ಇನ್ನಿತರರು ಇದ್ದರು.
ಭವ್ಯ ಸ್ವಾಗತ-ಪ್ರತಿಮೆಗೆ ಮಾಲಾರ್ಪಣೆ
ಕಾರ್ಯಕ್ರಮಕ್ಕು ಮೊದಲು ಸಚಿವ ಖೂಬಾರನ್ನು ನಗರಸಭೆ ಅಧ್ಯಕ್ಷರು, ಪಕ್ಷದ ಪ್ರಮುಖರ ನಿಯೋಗ ಸ್ವಾಗತಿಸಿತು. ಬಳಿಕ ಹತ್ತಿಕುಣಿ ಕ್ರಾಸ್ ಮಾರ್ಗವಾಗಿ ವಾಹನದಲ್ಲಿ ಮೆರವಣಿಗೆ ಮೂಲಕ ಗಾಂಧಿ ವೃತ್ತಕ್ಕೆ ತೆರಳಿ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ, ಕನಕ ವೃತ್ತದಲ್ಲಿ ಕನಕದಾಸ, ಅಂಬೇಡ್ಕರ್ ವೃತ್ತದಲ್ಲಿ ಡಾ| ಬಾಬಾ ಸಾಹೇಬ ಅಂಬೇಡ್ಕರ್‌ರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.