ರಸ್ತೆ ದುರಸ್ತಿಗೆ ಗ್ರಾಮಸ್ಥರ ಆಗ್ರಹ
Team Udayavani, Feb 5, 2018, 5:02 PM IST
ಯಾದಗಿರಿ: ಶಹಾಪುರ ತಾಲೂಕಿನ ನಾಯ್ಕಲ್ ಗ್ರಾಮದಿಂದ ಚಟ್ನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯ ದುರಸ್ತಿ ಕಾರ್ಯ
ಆಮೆಗತಿಯಲ್ಲಿ ನಡೆಯುತ್ತಿದ್ದು, ಕಂಕರ್ ರಸ್ತೆಯಲ್ಲಿ ಗ್ರಾಮಸ್ಥರು ಸಂಚರಿಸುತ್ತಿದ್ದಾರೆ.
ಈ ರಸ್ತೆ ಮೂಲಕ ಸಂಚರಿಸುವ ಇಬ್ರಾಹಿಂಪುರ, ತಂಗಡಿಗಿ, ಚಟ್ನಳ್ಳಿ, ಮರಮಕಲ್, ಬಲಕಲ್, ನಾಲ್ವಡಿಗಿ, ನಾಲ್ವಡಿಗಿ ತಾಂಡಾ ಹೀಗೆ ಅನೇಕ ಗ್ರಾಮಗಳ ಗ್ರಾಮಸ್ಥರಿಗೆ ಸಂಚಾರಕ್ಕೆ ತೀವ್ರ ತೊಂದರೆ ಆಗಿದೆ. ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತಾಗಿದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಯ್ಕಲ್ – ಚಟ್ನಳ್ಳಿ ರಸ್ತೆ ದುರಸ್ತಿ ನೆಪದಲ್ಲಿ ರಸ್ತೆಯ ಡಾಂಬರ್‌ನ್ನು ಸುಮಾರು 3 ಕಿ.ಮೀ ವರೆಗೆ ಕಿತ್ತು ಹಾಕಿದ್ದರಿಂದ
ರಸ್ತೆಯುದ್ದಕ್ಕೂ ಜಲ್ಲಿಕಲ್ಲುಗಳಿಂದ ಹರಡಿವೆ. ರಸ್ತೆ ದುರಸ್ತಿ ಮಾಡಬೇಕಾದರೆ ಮೊದಲು ರಸ್ತೆಯ ಒಂದು ಭಾಗ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೂಂದು ಭಾಗ ರಸ್ತೆ ದುರಸ್ತಿ ಮಾಡಬೇಕು. ಆದರೆ ಅಧಿಕಾರಿಗಳು ಈ ಕ್ರಮ ಅನುಸರಿಸಿಲ್ಲ ಎಂದು ಗ್ರಾಮಸ್ಥರು ದೂರಿದ್ದಾರೆ.
ಈ ರಸ್ತೆಯ ದುರಸ್ತಿ ಹಿನ್ನೆಲೆಯಲ್ಲಿ ಕಂಕರ್ ನಲ್ಲಿ ಗ್ರಾಮಸ್ಥರು ಹೋಗುವಂತಾಗಿದೆ. ದ್ವಿಚಕ್ರ ವಾಹನ ಸವಾರರಿಗೆ ವಾಹನ ಚಾಲಾಯಿಸುವುದೇ ಒಂದು ಸಾಹಸವಾಗಿದೆ. ಆದ್ದರಿಂದ ಕೂಡಲೇ ರಸ್ತೆ ದುರಸ್ತಿಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪ್ರತಿದಿನ ಈ ರಸ್ತೆ ಮೂಲಕ ನಾನಾ ಗ್ರಾಮಸ್ಥರು ಹೊಲ-ಗದ್ದೆಗಳಿಗೆ ರೈತರು ಸಂಚರಿಸುತ್ತಾರೆ. ಇವರೆಲ್ಲರೂ ರಸ್ತೆಯಿಂದ ಹೈರಾಣ ಆಗಿದ್ದಾರೆ. ಸಂಬಂಧಿಸಿದ ಅಧಿಕಾರಿಗಳು ಈ ರಸ್ತೆಯನ್ನು ಕೂಡಲೇ ಸರಿಪಡಿಸಬೇಕು. ಒಂದು ಭಾಗ ಸಂಚಾರಕ್ಕೆ ಅನುವು ಮಾಡಿಕೊಟ್ಟು, ಮತ್ತೂಂದು ಭಾಗ ಪೂರ್ಣಗೊಳಿಸುವ ಮೂಲಕ ಸಾರ್ವಜನಿಕರ ಸಂಚಾರದ ತೊಂದರೆ ತಪ್ಪಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಇಬ್ರಾಹಿಂಪುರ, ತಂಗಡಿಗಿ, ಚಟ್ನಳ್ಳಿ, ಮರಮಕಲ್, ಬಲಕಲ್, ನಾಲ್ವಡಿಗಿ, ನಾಲ್ವಡಿಗಿ ತಾಂಡಾದ ಜನರು ಎಚ್ಚರಿಸಿದ್ದಾರೆ.
ಸವಾರರ ಸಮಸ್ಯೆ ನಿವಾರಿಸಿ ನಾಯ್ಕಲ್-ಚಟ್ನಳ್ಳಿ ಗ್ರಾಮದ ರಸ್ತೆ ದುರಸ್ತಿ ಕಾರ್ಯ ಹಿನ್ನಲೆಯಲ್ಲಿ ಜೆಸಿಬಿ ಮೂಲಕ ಡಾಂಬರ್ ಕಿತ್ತು ಹಾಕಿದ್ದಾರೆ. ಈಗ ಕಂಕರ್ ಮೇಲೆ ವಾಹನಗಳು ಸಂಚರಿಸುವಂತಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ದುರಸ್ತಿ ಕೈಗೊಂಡು ವಾಹನ ಸವಾರರಿಗೆ ಅನುಕೂಲ ಮಾಡಿಕೊಡಬೇಕು.
∙ ದೇವಿಂದ್ರಪ್ಪ, ಇಬ್ರಾಹಿಂಪುರ ಗ್ರಾಮಸ್ಥ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.