ನೀರಿನ ವ್ಯವಸ್ಥೆಗೆ ಆದ್ಯತೆ ನೀಡಿ
ಸ್ವಚ್ಛತೆ ಬಗ್ಗೆ ಅರಿವು ಮೂಡಿಸಿ ಎಲ್ಲ ಕೆರೆಗಳಿಗೆ ನೀರು ತುಂಬಿಸಿ
Team Udayavani, Mar 5, 2020, 12:40 PM IST
ಯಾದಗಿರಿ: ಜಿಲ್ಲೆಯಲ್ಲಿ ಕುಡಿಯುವ ನೀರಿನ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ಹೇಳಿದರು. ನಗರದ ಜಿಲ್ಲಾಧಿ ಕಾರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುಬಹುದು. ಹೀಗಾಗಿ ಜಿಲ್ಲೆಯ ನಗರ, ಗ್ರಾಮ, ವಾರ್ಡ್ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಲ್ಲಿ ನೀರಿನ ಕೂರತೆಯಾಗದಂತೆ ನೋಡಿಕೊಳ್ಳಬೇಕು. ಅಲ್ಲದೇ ನೆರೆ ರಾಜ್ಯ ತೆಲಂಗಾಣದಲ್ಲಿ ಕೊರೊನಾ ವೈರಸ್ ಪತ್ತೆಯಾಗಿದ್ದು, ಇದರಿಂದಾಗಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಯಾದಗಿರಿ ಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ರಣ ಬಿಸಿಲು ಉಂಟಾಗಬಹುದು. ಹೀಗಾಗಿ ನಾಲ್ಕು ತಾಲೂಕಿನ ಎಲ್ಲಾ ಗ್ರಾಮಗಳಲ್ಲಿ ಬಿಸಿಲಿನಿಂದಾಗುವ ದುಷ್ಪರಿಣಾಮಗಳ ಬಗ್ಗೆ ಹಾಗೂ ಯಾವುದೇ ರೀತಿ ರೋಗ ರುಜನಿಗಳು ಹರಡದಂತೆ ಡಂಗೂರ ಮೂಲಕ ಜನರಿಗೆ ತಿಳಿಸಬೇಕು ಎಂದರು.
ಇನ್ನು ನಗರಸಭೆ ಕಸ ತುಂಬುವ ವಾಹನಗಳ ಮೈಕ್ ಮುಖಾಂತರ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು. ಅಲ್ಲದೇ ಜಿಲ್ಲೆಯ ಅಂಗನವಾಡಿಗಳಲ್ಲಿ, ಪ್ರತಿಯೊಂದು ಬಸ್ ನಿಲ್ದಾಣದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು ಎಂದು ಸೂಚಿಸಿದರು.
ಬೇಸಿಗೆ ಹೆಚ್ಚಿದಂತೆ ಕೆರೆಗಳಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಹೀಗಾಗಿ ಜಾನುವಾರುಗಳಿಗೆ ನೀರು ಕುಡಿಯಲು ತೊಂದರೆಯಾಗಲಿದ್ದು, ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ಜೊತೆಗೆ ಜಾನುವಾರುಗಳ ಆರೋಗ್ಯ ದೃಷ್ಟಿಯಿಂದ ಔಷಧಗಳ ವ್ಯವಸ್ಥೆ ಸರಿಯಾಗಿ ಮಾಡಬೇಕು ಎಂದರು.
ಬೇಸಿಗೆಗೆ ಸಂಬಂಧಪಟ್ಟಂತೆ ವಿವಿಧ ಸಮಸ್ಯೆಗಳ ಬಗ್ಗೆ ನಿಮ್ಮ ಕೆಳ ಹಂತದ ಅಧಿಕಾರಿಗಳ ಜೊತೆಗೆ ಟಾಸ್ಕ್ ಪೋರ್ಸ್ ಸಭೆ ಮಾಡಬೇಕು. ಅಲ್ಲದೇ ಹೊಸ ವಾಟ್ಸ್ ಆಪ್ ಗ್ರೂಪ್ ಕ್ರಿಯೆಟ್ ಮಾಡಿ ಅದರಲ್ಲಿ ದಿನನಿತ್ಯ ನಡೆಯುವ ಕಾರ್ಯಕ್ರಮಗಳ ಬಗ್ಗೆ ವರದಿ ಸಲ್ಲಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಣಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನಾವಣೆ, ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ. ರಜಪೂತ, ಸಹಾಯಕ ಆಯುಕ್ತ ಶಂಕರಗೌಡ ಎಸ್. ಸೋಮನಾಳ, ತಾಲೂಕು ತಹಶೀಲ್ದಾರರು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗಿಯಾಗಿದ್ದರು.