ಕೋವಿಡ್-19 ಪರೀಕ್ಷೆಗಾಗಿ ಲ್ಯಾಬ್ ಸ್ಥಾಪನೆಗೆ ಕ್ರಮ
ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಹಕರಿಸಿ ಒಟ್ಟು 16 ಚೆಕ್‌ಪೋಸ್ಟ್‌ಇಲ್ಲಿವರೆಗೂ ಪತ್ತೆಯಾಗಿಲ್ಲ ಕೋವಿಡ್
Team Udayavani, May 11, 2020, 12:32 PM IST
ಯಾದಗಿರಿ: ಕೋವಿಡ್ ವೈರಸ್ ಹರಡುವುದನ್ನು ಪರಿಣಾಮಕಾರಿಯಾಗಿ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಗೆ ಒಂದೊಂದು ಕೋವಿಡ್-19 ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಕ್ರಮ ಕೈಗೊಂಡಿದೆ. ಈ ಮೂಲಕ ಕೋವಿಡ್-19 ಪರೀಕ್ಷೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸಲು ಸೂಚಿಸಿದ ಪ್ರಯುಕ್ತ, ಮುದ್ನಾಳ ಸಮೀಪದ ನೂತನ ಜಿಲ್ಲಾಸ್ಪತ್ರೆಯಲ್ಲಿ ಟೆಸ್ಟ್ ಲ್ಯಾಬ್ ಸ್ಥಾಪನೆಗೆ ಸಿದ್ಧತೆ ನಡೆದಿದೆ ಎಂದು ಜಿಲ್ಲಾಧಿಕಾರಿ ಎಂ. ಕೂರ್ಮಾರಾವ್ ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿ, ಹಳೆ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ಜಿಲ್ಲಾ ಸಾರ್ವಜನಿಕ ಆರೋಗ್ಯ ಪ್ರಯೋಗಾಲಯದಲ್ಲಿ ಕೋವಿಡ್-19 ಟೆಸ್ಟ್ ಪೂರ್ವಭಾವಿಯಾಗಿ ನಡೆಸುವ ಟ್ರೂನ್ಯಾಟ್ ಲ್ಯಾಬ್ ಸ್ಥಾಪನೆಗೆ ಕೂಡ ಸಿದ್ಧತೆ ನಡೆದಿದೆ. ಈ ಲ್ಯಾಬ್‌ಗಳಿಗೆ ಬೇಕಿರುವ ಅಗತ್ಯ ವೈದ್ಯಕೀಯ ಸಲಕರಣೆಗಳು ಸರ್ಕಾರದಿಂದ ಬರಬೇಕಿದೆ ಎಂದು ಮಾಹಿತಿ ನೀಡಿದರು.
ಕೋವಿಡ್-19 ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆ, ಭೀಮರಾಯನಗುಡಿ ಮತ್ತು ಸುರಪುರದಲ್ಲಿ ವ್ಯಕ್ತಿಗಳ ಮಾದರಿ ಸಂಗ್ರಹಿಸಲಾಗುತ್ತಿದೆ. ಶಂಕಿತ ರೋಗಿಗಳಿಗಾಗಿ ನೂತನ ಜಿಲ್ಲಾಸ್ಪತ್ರೆಯಲ್ಲಿ ಈಗಾಗಲೇ 32 ಆಕ್ಸಿಜನ್ ಬೆಡ್‌ಗಳ ವ್ಯವಸ್ಥೆ ಇದ್ದು, ಇನ್ನೂ 100 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಮೇ 9ರ ವರೆಗೆ ಜಿಲ್ಲೆಯಿಂದ ಕಳುಹಿಸಿದ್ದ ಮಾದರಿಗಳ ಪೈಕಿ ಒಟ್ಟು 1,451 ವರದಿ ನೆಗೆಟಿವ್ ಬಂದಿವೆ. 109 ಮಾದರಿಗಳ ವರದಿ ಬರಬೇಕಿದೆ. ಇಲ್ಲಿಯವರೆಗೆ ಯಾವುದೇ ಖಚಿತ ಕೋವಿಡ್ ಪ್ರಕರಣ ಪತ್ತೆಯಾಗಿರುವುದಿಲ್ಲ. ಜಿಲ್ಲಾಡಳಿತ ಎಲ್ಲ ಮುಂಜಾಗ್ರತಾ ಕ್ರಮ ಕೈಗೊಂಡಿದೆ ಎಂದರು.
ಆರೋಗ್ಯ ಸಮೀಕ್ಷೆಗೆ ಸಹಕರಿಸಿ: ಕೋವಿಡ್-19 ಸಂಬಂಧ ಜಿಲ್ಲೆಯ ಎಲ್ಲ ಕುಟುಂಬಗಳ ಸಾರ್ವತ್ರಿಕ ಸಮೀಕ್ಷೆಯನ್ನು “ಹೆಲ್ತ್ ವಾಚ್ ಆ್ಯಪ್’ ಮೂಲಕ ಮತದಾರರ ಪಟ್ಟಿಯ ಪ್ರಕಾರ ಮೇ 12ರಿಂದ ಮತಗಟ್ಟೆ ಮಟ್ಟದ ಅಧಿಕಾರಿ (ಬಿಎಲ್‌ಒ)ಗಳು ಮತ್ತು ಇವರಿಗೆ ಸಹಾಯಕರಾದ ಹೆಚ್ಚುವರಿ ಶಿಕ್ಷಕರು ಹಾಗೂ ಆಶಾ ಕಾರ್ಯಕರ್ತೆಯರಿಂದ ನಡೆಸಲಾಗುವುದು. ಈ ಆರೋಗ್ಯ ಸಮೀಕ್ಷೆ ಕಾರ್ಯಕ್ಕೆ ಸಾರ್ವಜನಿಕರು ಅಗತ್ಯ ಮಾಹಿತಿ ನೀಡಿ ಸಹಕರಿಸಬೇಕು ಎಂದು ಡಿಸಿ ಮನವಿ ಮಾಡಿದರು.
ಬೇರೆ ಜಿಲ್ಲೆಗಳಿಂದ ಯಾದಗಿರಿ ಜಿಲ್ಲೆಗೆ ಮರಳುತ್ತಿರುವ ಕಾರ್ಮಿಕರಿಗೆ ಸೂಕ್ತ ತಪಾಸಣೆ ನಡೆಸಲಾಗುತ್ತಿದೆ. ಮೇ 9ರ ವರೆಗೆ 363 ಬಸ್‌ಗಳ ಮೂಲಕ ಬಂದವರನ್ನು ಆರೋಗ್ಯ ತಪಾಸಣೆಗೊಳಪಡಿಸಿ, ಮನೆಯಲ್ಲಿ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಇವರಿಗೆ ಸ್ಟ್ಯಾಂಪ್ ಕೂಡ ಹಾಕಲಾಗುತ್ತಿದೆ. ಇನ್ನು ಹೊರ ರಾಜ್ಯಗಳಿಂದ ಯಾದಗಿರಿ ಜಿಲ್ಲೆಗೆ ಮರಳಿ ಬಂದವರನ್ನು ಇನ್ ಸ್ಟಿಟ್ಯೂಶನಲ್ ಕ್ವಾರಂಟೈನ್‌ನಲ್ಲಿ ಇರಿಸಲಾಗುತ್ತಿದೆ. ಸರ್ಕಾರದ ಮಾರ್ಗಸೂಚಿಯನ್ವಯ ಇವರ ಮಾದರಿ ಸಂಗ್ರಹಿಸಿ ಕೋವಿಡ್-19 ಪರೀಕ್ಷೆಗೆ ಕಳುಹಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
51 ಜನರ ಬಂಧನ; 92 ಎಫ್.ಐ.ಆರ್: ಕೋವಿಡ್ -19 ವೈರಾಣು ದೇಶಾದ್ಯಂತ ವ್ಯಾಪಕವಾಗಿ ಹರಡುತ್ತಿರುವುದರಿಂದ ಜಿಲ್ಲಾಡಳಿತದಿಂದ ಯಾದಗಿರಿ ಜಿಲ್ಲೆಯ ಗಡಿ ಭಾಗದಲ್ಲಿ ಒಟ್ಟು 16 ಚೆಕ್‌ಪೋಸ್ಟ್ ತೆರೆಯಲಾಗಿದೆ. ಎಲ್ಲ ಚೆಕ್‌ಪೋಸ್ಟ್ ಗಳು ಕಾರ್ಯನಿರ್ವಹಿಸುತ್ತಿದ್ದು, ಲಾಕ್‌ಡೌನ್ ನಿಯಮ ಉಲ್ಲಂಘಿಸಿದವರ ವಿರುದ್ಧ ಕ್ರಮ ಜರುಗಿಸಲಾಗುತ್ತಿದೆ. ಮೇ 9ರ ವರೆಗೆ ಒಟ್ಟು 1283
ವಾಹನ ಜಪ್ತಿ ಮಾಡಲಾಗಿದೆ. 51 ಜನರನ್ನು ಬಂಧಿಸಲಾಗಿದ್ದು, ಒಟ್ಟು 92 ಎಫ್.ಐ.ಆರ್ ದಾಖಲಾಗಿವೆ ಮತ್ತು 18,61,100 ರೂ. ದಂಡ ವಿಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಶೇ.91.78 ಆಹಾರಧಾನ್ಯ ವಿತರಣೆ: ಜಿಲ್ಲಾದ್ಯಂತ ಬಿ.ಪಿ.ಎಲ್ ಮತ್ತು ಎ.ಎ.ವೈ ಕಾರ್ಡ್ ಹೊಂದಿರುವ ಪಡಿತರ ಫಲಾನುಭವಿಗಳಿಗೆ 2
ತಿಂಗಳ ಆಹಾರಧಾನ್ಯವನ್ನು ಜಿಲ್ಲೆಯಲ್ಲಿ ಶೇ.91.78 ವಿತರಿಸಲಾಗಿರುತ್ತದೆ. ಜಿಲ್ಲೆಯ ನಾಗರಿಕರಿಗೆ ಅಗತ್ಯವಿರುವ ಸರಕು ಖರೀದಿಸಲು ಮಧ್ಯಾಹ್ನ 3 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ ಹಾಗೂ ಇನ್ನುಳಿದ ಅಂಗಡಿ ತೆರೆಯಲು ಬೆಳಗ್ಗೆ 9ರಿಂದ ಮಧ್ಯಾಹ್ನ 3 ಗಂಟೆವರೆಗೆ ಅವಕಾಶ ನೀಡಲಾಗಿರುತ್ತದೆ. ಈ ಸಮಯದಲ್ಲಿ ಸಾರ್ವಜನಿಕರು ಮಾಸ್ಕ್ ಧರಿಸುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯ ಎಂದು ತಿಳಿಸಿದರು.
ಆರೋಗ್ಯ ಸೇತು ಆ್ಯಪ್ ಬಳಸಿ: ಸಾರ್ವಜನಿಕರಿಗೆ ಕೋವಿಡ್-19 ವೈರಸ್ ಬಗ್ಗೆ ಸೂಕ್ತ ಮಾಹಿತಿ ಒದಗಿಸಲು ಮತ್ತು ಕೋವಿಡ್ ವೈರಸ್ ಟ್ರ್ಯಾಕ್ ಮಾಡಲು ಸರ್ಕಾರ ಆರೋಗ್ಯ ಸೇತು ಮೊಬೈಲ್ ಆ್ಯಪ್ ಬಿಡುಗಡೆ ಮಾಡಿದೆ. ಸದರಿ ಆರೋಗ್ಯ ಸೇತು ಆ್ಯಪ್ ಅನ್ನು ಡೌನ್‌ಲೋಡ್ ಮಾಡಿಕೊಂಡು ಸದುಪಯೋಗ ಪಡೆದುಕೊಳ್ಳುವಂತೆ ಕೋರಿದರು. ಈ ಸಂದರ್ಭದಲ್ಲಿ ಜಿಪಂ ಸಿಇಒ ಶಿಲ್ಪಾ ಶರ್ಮಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಭಗವಾನ್ ಸೋನವಣೆ, ಅಪರ ಜಿಲ್ಲಾ ಧಿಕಾರಿ ಪ್ರಕಾಶ ರಜಪೂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಂ.ಎಸ್. ಪಾಟೀಲ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.