ಜಗ ಮೆಚ್ಚಿದ ಜುತ್ತಿ
ಕುಣಿವ ಕಾಲ್ಗಳ ಅಂದಕೆ ಚೆಂದಕೆ...
Team Udayavani, Jun 14, 2019, 4:07 PM IST
ಮದುವೆ ಸೀಸನ್ ಮತ್ತು ಹಬ್ಬ ಹರಿದಿನಗಳಲ್ಲಿ ಉಟ್ಟ ಉಡುಗೆಗೆಷ್ಟು ಪ್ರಾಮುಖ್ಯತೆ ಇರುತ್ತದೋ ಅಷ್ಟೇ ಪ್ರಾಮುಖ್ಯತೆಯನ್ನು ಹೆಣ್ಣುಮಕ್ಕಳು ತಮ್ಮ ಪಾದರಕ್ಷೆಗೂ ನೀಡುತ್ತಾರೆ. ಫೋಟೋಗೆ ಪೋಸ್ ಕೊಡುವಾಗ ತಾವು ತೊಟ್ಟ ಪಾದರಕ್ಷೆಯೂ ಹೈಲೈಟ್ ಆಗುವ ಹಾಗೆ ಖಾತರಿ ಪಡಿಸಿಕೊಳ್ಳುವುದನ್ನು ನೀವು ನೋಡಿರಬಹುದು. ಈಗ ಜುತ್ತಿ ತೊಟ್ಟು ಮಿಂಚುವ ಕಾಲ ಬಂದಿದೆ.
ಫ್ಲ್ಯಾಟ್ ಆದರೂ ಬೊಂಬಾಟ್
ಹೈ ಹೀಲ್ಡ್ ಮೆಟ್ಟುಗಳಿಗಿದ್ದ ಬೇಡಿಕೆ ಇದೀಗ ಕಡಿಮೆ ಆಗಿದೆ. ಏಕೆಂದರೆ ಮದುವೆ ಹಾಲಿನಲ್ಲಿ ಇವುಗಳನ್ನು ಬಹಳ ಕಾಲ ತೊಟ್ಟು ಓಡಾಡುವುದರಿಂದ ಕಾಲು ನೋವು ಬರುತ್ತದೆ. ಹಾಗಾಗಿ ಫ್ಲಾಟ್ ಚಪ್ಪಲಿಗಳಿಗೆ ಬೇಡಿಕೆ ಹೆಚ್ಚು. ಫ್ಲಾಟ್ ಚಪ್ಪಲಿ ಎಂದಾಕ್ಷಣ ಹವಾಯಿ ಚಪ್ಪಲಿಯನ್ನು ಕಣ್ಣ ಮುಂದೆ ತಂದುಕೊಳ್ಳಬೇಡಿ. ಫ್ಲಾಟ್ ಚಪ್ಪಲಿ ಬರೀ ಹವಾಯಿ ಚಪ್ಪಲಿಗೆ ಸೀಮಿತವಾದದ್ದಲ್ಲ. ಫ್ಲಾಟ್ ಪಾದರಕ್ಷೆಗಳ ಪೈಕಿ ಜುತ್ತಿಯೂ ಇದೆ. ಜೂತಿ ಎಂಬುದು ಹಿಂದಿಯ ಜೂತಾ(ಚಪ್ಪಲಿ) ಪದದ ಸ್ತ್ರೀಲಿಂಗ ಎನ್ನಬಹುದು. ಇದೇ ಜೂತಿಯನ್ನು ಪಂಜಾಬಿ ಭಾಷೆಯಲ್ಲಿ ಜುತ್ತಿ ಎನ್ನಲಾಗುತ್ತದೆ.
ಕೈಗಳಲ್ಲಿ ತಯಾರಾಗುತ್ತವೆ
ಜುತ್ತಿ ಚಪ್ಪಲಿಗಳನ್ನು ಕೈಯಲ್ಲೇ ತಯಾರಿಸಲಾಗುತ್ತದೆ. ಅಂದರೆ, ಯಂತ್ರಗಳನ್ನು ಬಳಸದೆ, ಕೈಯಲ್ಲಿ ಹೊಲಿಯಲಾಗುತ್ತದೆ. ಹಾಗಾಗಿ ಎಲ್ಲ ಜುತ್ತಿಗಳು ಒಂದರಂತೆ ಇನ್ನೊಂದು ಇರುವುದಿಲ್ಲ. ಮೊದಲ ಬಾರಿ ಇವುಗಳನ್ನು ತೊಡುವಾಗ, ಎರಡು ಮೆಟ್ಟುಗಳಲ್ಲಿ ಯಾವುದನ್ನು ಬೇಕಾದರೂ ಬಲಗಾಲಿಗೆ ಮತ್ತು ಎಡಗಾಲಿಗೆ ತೊಟ್ಟುಕೊಳ್ಳಬಹುದು. ಒಂದು ಬಾರಿ ತೊಟ್ಟ ನಂತರ ಈ ಚಪ್ಪಲಿಗಳು ಕಾಲಿಗೆ ಹೊಂದಿಕೊಂಡು ಆಯಾ ಕಾಲಿನ ಆಕೃತಿ ಪಡೆದುಕೊಂಡುಬಿಡುತ್ತದೆ. ಹೀಗಾಗಿ ಎರಡನೇ ಬಾರಿ ಚಪ್ಪಲಿ ತೊಡುವಾಗ ಎಡಗಾಲಿನ ಚಪ್ಪಲಿಯನ್ನು ಬಲಗಾಲಿಗೆ ಅಥವಾ ಬಲಗಾಲಿನ ಚಪ್ಪಲಿಯನ್ನು ಎಡಗಾಲಿಗೆ ತೊಡಲು ಆಗುವುದಿಲ್ಲ. ತೊಟ್ಟರೆ, ಚಪ್ಪಲಿಗಳು ಅವುಗಳ ಆಕೃತಿ ಕಳೆದುಕೊಳ್ಳುತ್ತವೆ.
ಕ್ಯಾಶುವಲ್ ದಿರಿಸಿಗೆ ವೆಸ್ಟರ್ನ್ ಜುತ್ತಿ
ಬಹಳ ಗ್ರ್ಯಾಂಡ್ ಆಗಿರುವ ಜುತ್ತಿಗಳನ್ನು ಸಾಂಪ್ರದಾಯಿಕ ಉಡುಗೆ ಜೊತೆಯಷ್ಟೇ ತೊಡಬಹುದು. ಪಾಶ್ಚಾತ್ಯ ಉಡುಗೆ ಜೊತೆ ಇವುಗಳನ್ನು ತೊಟ್ಟರೆ ವಿಚಿತ್ರವಾಗಿ ಕಾಣಿಸಬಹುದು. ಈಗ ಪಾಶ್ಚಾತ್ಯ ದಿರಿಸಿಗೂ ಹೊಂದುವಂಥ ಜುತ್ತಿಯೂ ಮಾರುಕಟ್ಟೆಯಲ್ಲಿ ಲಭ್ಯ ಇವೆ. ಉಳಿದ ಪ್ರಕಾರದ ಪಾದರಕ್ಷೆಗಳಂತೆ ಈ ವೆಸ್ಟರ್ನ್ ಜುತ್ತಿ ಮೇಲೆ ಚಿತ್ರ ಬಿಡಿಸಲಾಗಿರುತ್ತದೆ. ಅಕ್ಷರಗಳನ್ನು ಮೂಡಿಸಲಾಗುತ್ತದೆ. ಬಟನ್ (ಗುಂಡಿ), ಬೋ, ಡೆನಿಮ…, ಜಿಪ್, ಮುಂತಾದವುಗಳನ್ನು ಬಳಸಲಾಗುತ್ತದೆ. ಪೋಲ್ಕಾ ಡಾಟ್ಸ್, ಜಾಮೆಟ್ರಿ ವಿನ್ಯಾಸಗಳು, ಪಟ್ಟಿಗಳು, ವ್ಯಂಗ್ಯ ಚಿತ್ರಗಳು! ಈ ರೀತಿ ತಮ್ಮ ಕ್ರಿಯಾಶೀಲತೆಯನ್ನು ಈ ಜುತ್ತಿಗಳ ಮೇಲೆ ಹೊರಹಾಕಿದ್ದಾರೆ ವಿನ್ಯಾಸಕರು!
ನೀವು ಹೇಳಿದ್ದೇ ಡಿಸೈನ್
ಇವುಗಳಲ್ಲಿ ಕಸ್ಟಮೈಸ್ಡ್ ಆಯ್ಕೆಗಳೂ ಲಭ್ಯ. ಅಂದರೆ ತಮಗೆ ಬೇಕಾದ ಬಣ್ಣ, ಬಟ್ಟೆ (ಫ್ಯಾಬ್ರಿಕ್ ಮಟೀರಿಯಲ…), ವಸ್ತು ಮತ್ತು ವಿನ್ಯಾಸದಂತೆ ತಯಾರಕರು ಜುತ್ತಿಗಳನ್ನು ಅಳತೆಗೆ ತಕ್ಕಂತೆ ಮಾಡಿಕೊಡುತ್ತಾರೆ. ಇಂಥ ಜುತ್ತಿಗಳಿಗೆ ವಿಶ್ವಾದ್ಯಂತ ಸೆಲೆಬ್ರಿಟಿಗಳು ಹೆಚ್ಚು ಬೇಡಿಕೆ ಇಡುತ್ತಾರೆ. ಹಾಗಾಗಿ ಇವುಗಳು ದುಬಾರಿ ಕೂಡ. ಪ್ರತಿಷ್ಟಿತ ಅಂತಾರಾಷ್ಟ್ರೀಯ ಫುಟ್‌ವೇರ್ ಬ್ರಾಂಡ್‌ಗಳು ಕೂಡ ತಮ್ಮದೇ ಶೈಲಿಯಲ್ಲಿ ಜುತ್ತಿಗಳನ್ನು ವಿನ್ಯಾಸ ಮಾಡಿ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿ¨ªಾರೆ.
ಹೆಣ್ಮಕ್ಕಳ ಜುತ್ತಿಯಲ್ಲಿ ಹತ್ತಿಪ್ಪತ್ತು ಬಣ್ಣಗಳು
ಮೋಜ್ರಿ, ಜೂತಿ (ಜುತ್ತಿ), ಎಂದೆಲ್ಲಾ ಕರೆಯಲಾಗುವ ಈ ಪಾದರಕ್ಷೆಯನ್ನು ಪುರುಷರೂ ತೊಡುತ್ತಾರೆ, ಮಹಿಳೆಯರೂ ತೊಡುತ್ತಾರೆ. ಮೋಜ್ರಿಗಳನ್ನು ಹೆಚ್ಚಾಗಿ ಚರ್ಮದಿಂದ ತಯಾರಿಸಲಾಗುತ್ತದೆ. ಅಲ್ಲದೆ ಬಟ್ಟೆ, ರಬ್ಬರ್, ಪ್ಲಾಸ್ಟಿಕ್, ಮುಂತಾದ ವಸ್ತುಗಳಿಂದಲೂ ತಯಾರಿಸಲಾಗುತ್ತದೆ. ಪುರುಷರ ಮೋಜ್ರಿಗಳು ಸರಳವಾಗಿರುತ್ತವೆ. ಆದರೆ ಮಹಿಳೆಯರ ಪಾದರಕ್ಷೆಗಳಲ್ಲಿ ಬಣ್ಣಗಳು ಹೆಚ್ಚು, ಕಸೂತಿ ಹೆಚ್ಚು, ಬಗೆ-ಬಗೆಯ ಆಕೃತಿಗಳೂ ಹೆಚ್ಚು. ಅವುಗಳಲ್ಲಿ ಮಣಿಗಳು, ದಾರಗಳು, ಗೆಜ್ಜೆ, ಮುತ್ತಿನಂಥ ಮಣಿಗಳು, ಬಣ್ಣದ ಕಲ್ಲುಗಳು, ಹೊಳೆಯುವ ವಸ್ತುಗಳು, ಟಿಕ್ಲಿ, ಕನ್ನಡಿ, ಲೇಸ್ ವರ್ಕ್, ಟ್ಯಾಸಲ್‌ಗಳು, ಉಣ್ಣೆ ಅಥವಾ ಹತ್ತಿಯಿಂದ ತಯಾರಿಸಿದ ಚಿಕ್ಕ ಪುಟ್ಟ ಆಕೃತಿಗಳು, ಹೀಗೆ ನಮ ನಮೂನೆಯ ಆಯ್ಕೆಗಳಿವೆ.
-ಅದಿತಿಮಾನಸ ಟಿ. ಎಸ್.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.