ಯುವತಿಯರ ಫ್ಯಾಶನ್ ಲೋಕದಲ್ಲಿನ ಬದಲಾವಣೆ… ಪ್ಯಾಂಟ್ ಸಾರಿ
ಒಂದು ಕಾಲದಲ್ಲಿ ಹಾಫ್ ಸಾರಿಯಾಗಿ ಹೆಂಗಳೆಯರ ಸೌಂದರ್ಯವನ್ನು ಹೆಚ್ಚಿಸುತ್ತಿದ್ದ ಧಿರಿಸಿಗಳು
Team Udayavani, Dec 5, 2020, 5:05 PM IST
ಯುವತಿಯರ ಫ್ಯಾಶನ್ ಲೋಕದಲ್ಲಿನ ಬದಲಾವಣೆಗೆ ಅಂತ್ಯವಿಲ್ಲ. ಭಾರತೀಯ ಪರಂಪರೆಯ ಸಾಂಪ್ರದಾಯಿಕ ಧಿರಿಸೆಂದೇ ಪರಿಗಣಿಸಿರುವ ಸೀರೆಯಲ್ಲಿಯೂ ಅದೆಷ್ಟೋ ವೈವಿಧ್ಯ ಶೈಲಿಯ ಫ್ಯಾಶನ್‌ಗಳು ಬಂದು ಹೋಗಿವೆ.
ಸಿಂಪಲ್ಲಾಗಿ ಒಂದು ಸಾರಿ ಉಟ್ಟರಾಯ್ತು ಎಂಬ ಕಾಲ ಹೋಗಿ ಸಾರಿಯಲ್ಲಿ ಪ್ಲೈನ್, ಡಿಸೈನ್ಡ್, ವರ್ಕ್ ಹಾಕಲ್ಪಟ್ಟ ಸಾರಿಗಳು..ಹೀಗೆ ನಾನಾ ರೀತಿಯ ಸೀರೆಗಳನ್ನು ತೊಟ್ಟು ಖುಷಿಪಟ್ಟದ್ದಾಯಿತು. ಒಂದು ಕಾಲದಲ್ಲಿ ಹಾಫ್ ಸಾರಿಯಾಗಿ ಹೆಂಗಳೆಯರ ಸೌಂದರ್ಯವನ್ನು ಹೆಚ್ಚಿಸುತ್ತಿದ್ದ ಧಿರಿಸಿಗಳು, ಲೆಹಂಗಾ ಎಂಬ ಹೊಸ ಹೆಸರಿನೊಂದಿಗೆ ಹೊಸ ಶೈಲಿಯೊಂದಿಗೆ ಮಾರುಕಟ್ಟೆಗೆ ಬಂದಿತು. ಸೀರೆಯ ಬ್ಲೌಸಿನಲ್ಲಿಯೂ ನಾನಾ ವಿನ್ಯಾಸ, ನಾನಾ ಡಿಸೈನ್‌ಗಳು ಕಾಣಿಸತೊಡಗಿದವು. ಈಗ ಅವೆಲ್ಲವನ್ನು ಮೀರಿ ಇನ್ನೊಂದು ರೀತಿಯ ಸೀರೆ ಬಟ್ಟೆ ಅಂಗಡಿಗಳಲ್ಲಿ ಪರಿಚಯಿಸಲಾಗುತ್ತಿದೆ. ಅದೆಂದರೆ ಪ್ಯಾಂಟ್ ಸಾರಿ!
ಉಡುವುದು ಸುಲಭ
ಅರೇ ಇದೇನಿದು ಪ್ಯಾಂಟ್ ಸಾರಿ ಎಂದು ಹುಬ್ಬೇರಿಸಬೇಡಿ. ಈಗಿನ ಹುಡುಗಿಯರಿಗೆ ಬ್ಯೂಟಿಪಾರ್ಲರ್‌ನಲ್ಲಿ ಹೋಗಿ ಸಾರಿ ಉಡಿಸಿಕೊಳ್ಳುವ ಬಗ್ಗೆ ಗೊತ್ತಷ್ಟೇ ಹೊರತು, ತಾವೇ ಸೀರೆ ಉಟ್ಟುಕೊಳ್ಳುವುದಂತೂ ಆಗದು. ಯುವತಿಯರ ಸಮಸ್ಯೆಯನ್ನು ಅರಿತ ಬಟ್ಟೆ ತಯಾರಕರೂ, ಸೀರೆ ಸುತ್ತಿಕೊಳ್ಳಲು ಪಡಿಪಾಟಲು ಪಡಬಾರದೆಂದು ಈ ಪ್ಯಾಂಟ್ ಸಾರಿಯನ್ನು ವಿನ್ಯಾಸಗೊಳಿಸಿದ್ದಾರೆ. ಯಾರಪ್ಪಾ ಸೀರೆ ಉಡುವುದು, ಹೇಗೆ ಉಟ್ಟರೂ ನೆರಿಗೆ ನಿಲ್ಲದು ಎಂದು ಬಸವಳಿಯಲು ಇನ್ನು ಅವಕಾಶವಿಲ್ಲ. ಲೆಗ್ಗಿನ್ಸ್ ಪ್ಯಾಂಟ್‌ನಂತೆಯೇ ಪ್ಯಾಂಟ್ ಸಾರಿಯನ್ನು ಸುಲಭವಾಗಿಯೇ ಸುತ್ತಿಕೊಳ್ಳಬಹುದು.
ಸೆಲೆಬ್ರಿಟಿ ಲುಕ್
ಈ ಪ್ಯಾಂಟ್ ಸಾರಿ ಮೊದ ಮೊದಲು ಯುವತಿಯರಿಗೆ ಅಷ್ಟೊಂದು ಇಷ್ಟದ ಧಿರಿಸಾಗಿ ಕಣ್ಮನ ಸೆಳೆದಿರಲಿಲ್ಲ. ಆದರೆ ಯಾವಾಗ ರೂಪದರ್ಶಿಗಳು ಈ ಹೊಸ ಮಾದರಿಯ ಸೀರೆಯನ್ನುಟ್ಟು ರ್‍ಯಾಂಪ್ ಮೇಲೆ ಹೆಜ್ಜೆ ಹಾಕಿದರೋ, ಅಂದಿನಿಂದ ಈ ಬಗ್ಗೆ ಕುತೂಹಲ ಹೆಚ್ಚಾಯಿತು. ಸೆಲೆಬ್ರಿಟಿ ಲುಕ್ ನೀಡುವ ಈ ಸೀರೆಯನ್ನೂ ಧರಿಸಿ ನೋಡುವ ಮನಸ್ಸಾಯಿತು. ಅದಕ್ಕಾಗಿಯೇ ಪ್ಯಾಂಟ್ ಸಾರಿಗೆ ನಗರಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ ಎನ್ನಬಹುದು. ಆದರೆ ಇದು ಶುಭ ಸಮಾರಂಭಗಳಿಗೆ ತೆರಳುವಾಗೆಲ್ಲ ಅಷ್ಟೊಂದು ಸಮಂಜಸ ಧಿರಿಸು ಎಂದು ಅನಿಸಿಕೊಂಡಿಲ್ಲ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಬಳಕೆ
ಇನ್ನೂ ಮಾರುಕಟ್ಟೆಗೆ ಪರಿಚಯ ಹಂತದಲ್ಲೇ ಇರುವ ಪ್ಯಾಂಟ್ ಸಾರಿಗಳು, ಫ್ಯಾಶನ್ ಶೋ, ನೃತ್ಯ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿಯೇ ಹೆಚ್ಚು ಬಳಕೆಯಾಗುತ್ತಿದೆ. ಬೇಗ ಉಡಲು ಸಾಧ್ಯವಾಗುವುದರಿಂದ ಸಮಯವೂ ಉಳಿತಾಯ, ಜೊತೆಗೆ ತ್ರಾಸವೂ ಕಡಿಮೆಯಾಗುತ್ತದೆ ಎಂಬ ಕಾರಣಕ್ಕಾಗಿಯೇ ಇಂತಹ ಕಾರ್ಯಕ್ರಮಗಳಲ್ಲಿ ಹೆಚ್ಚು ಇದರ ಉಪಯೋಗ ಎನ್ನಬಹುದು. ಗ್ರಾಮೀಣ ಭಾಗದ ಯುವತಿಯರಿಗೆ ಇನ್ನೂ ಈ ಪ್ಯಾಂಟ್ ಸಾರಿ ಪರಿಚಯವಾಗಿಲ್ಲ.
ಹೇಗಿದೆ ಪ್ಯಾಂಟ್ ಸಾರಿ
ಪ್ಯಾಂಟ್ ಸಾರಿ ಎಂದ ಮಾತ್ರಕ್ಕೆ ಇದು ಅಟ್ಯಾಚ್‌ಡ್ ಅಲ್ಲ. ಪ್ಯಾಂಟ್, ಬ್ಲೌಸ್ ಮತ್ತು ಸೀರೆ ಪ್ರತ್ಯೇಕವಾಗಿಯೇ ಇರುತ್ತದೆ. ಟೀ ಶರ್ಟ್ ಮಾದರಿಯ ಬ್ಲೌಸ್ ಮತ್ತು ಲೆಗ್ಗಿನ್ಸ್ ಮಾದರಿಯ ಪ್ಯಾಂಟನ್ನು ಮಾಮೂಲಿ ಪ್ಯಾಂಟ್ ನಂತೆಯೇ ಧರಿಸಿಕೊಳ್ಳಬೇಕು. ಬಳಿಕ ಸೀರೆಯನ್ನು ಪ್ಯಾಂಟ್‌ನ ಒಂದು ಬದಿಗೆ ಸಿಕ್ಕಿಸಿಕೊಳ್ಳಬೇಕು. ಬಳಿಕ ಸೆರಗು ನೆರಿಗೆ ಹಿಡಿದು ಪಿನ್ ಮಾಡಬೇಕು. ಕಾಲಿನ ಭಾಗದ ನೆರಿಗೆಯು ಒಂದು ಭಾಗಕ್ಕೆ ಮಾತ್ರ ಹಾಕಿಕೊಳ್ಳಬೇಕು. ಬಲಗಾಲಿನ ಪ್ಯಾಂಟ್ ನ್ನು ಕವರ್ ಮಾಡಿಕೊಳ್ಳಬಾರದು. ಇದು ಪ್ಯಾಂಟ್ ಸೀರೆಯ ಸ್ಟೈಲ್ ಆಗಿದ್ದು, ಸರಳವಾಗಿ ಮತ್ತು ಸುಂದರವಾಗಿ ಕಾಣುತ್ತದೆ.
ಧನ್ಯಾ ಬಾಳೆಕಜೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.