ವಯೋವೃದ್ಧರ ಆರೋಗ್ಯ ಮತ್ತು ಸೌಖ್ಯಕ್ಕಾಗಿ ಸತ್ವಯುತ ಆಹಾರದಲ್ಲಿ ಇರಲೇಬೇಕಾದ 5 ಪೌಷ್ಠಿಕಾಂಶಗಳು
Team Udayavani, Jan 30, 2024, 10:33 AM IST
ಆರೋಗ್ಯಯುತವಾಗಿ, ಆರೋಗ್ಯಪೂರ್ಣವಾಗಿ ವಯೋವೃದ್ಧರಾಗುವುದು ಒಂದು ವರ. ಈ ವರ ಸಾಕಾರವಾಗುವುದಕ್ಕಾಗಿ ಯೌವನದಲ್ಲಿಯೇ ಉತ್ತಮ ಆಹಾರಾಭ್ಯಾಸವನ್ನು ನಾವು ರೂಢಿಸಿಕೊಳ್ಳಬೇಕು. ಇದಕ್ಕಾಗಿ ನಮ್ಮ ದೈನಿಕ ಆಹಾರದಲ್ಲಿ ನಾವು ಸೇರಿಸಿಕೊಳ್ಳಲೇ ಬೇಕಾದ ಐದು ಅಂಶಗಳ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ.
- ಶಕ್ತಿ
ಬೇಳೆಕಾಳುಗಳು ಮತ್ತು ಕೊಬ್ಬುಗಳಿಂದ ನಮಗೆ ಶಕ್ತಿ ಸಿಗುತ್ತದೆ. ಸಂಸ್ಕರಿತ ಆಹಾರಗಳ ಬದಲಾಗಿ ಇಡೀ ಕಾಳಿನ ಆಹಾರಗಳನ್ನು ಆಯ್ಕೆ ಮಾಡಿಕೊಳ್ಳಿ. ಸಂಸ್ಕರಿತ ಆಹಾರಗಳಲ್ಲಿ ನಾರಿನಂಶದ ಕೊರತೆ ಇರುವುದರಿಂದ ಅವು ಮಲಬದ್ಧತೆಗೆ ಕಾರಣವಾಗುತ್ತವೆ. ಕೊಠಡಿ ಉಷ್ಣತೆಯಲ್ಲಿ ಘನೀಕೃತಗೊಳ್ಳುವ ಸ್ಯಾಚುರೇಟೆಡ್ ಕೊಬ್ಬುಗಳಿಗೆ ಬದಲಾಗಿ ಕೊಠಡಿ ಉಷ್ಣತೆಯಲ್ಲಿ ದ್ರವರೂಪದಲ್ಲಿಯೇ ಇರುವ ಆರೋಗ್ಯಪೂರ್ಣ ಕೊಬ್ಬುಗಳನ್ನು ಆರಿಸಿಕೊಳ್ಳಿ. ಇಡೀ ಗೋಧಿಯ ಬ್ರೆಡ್, ಬಿಸ್ಕತ್ತುಗಳು, ಪಾಸ್ತಾ, ಫೋರ್ಟಿಫೈಡ್ ಸೀರಿಯಲ್‌ಗಳು, ಗೋಧಿ ಫ್ಲೇಕ್ಸ್, ಸಿರಿಧಾನ್ಯಗಳು, ಒಣಹಣ್ಣುಗಳು, ಎಣ್ಣೆಕಾಳುಗಳು, ಪಿಯುಎಫ್ಎ ಮತ್ತು ಎಂಯುಎಫ್ಎಗಳಿರುವ ಆಹಾರಗಳನ್ನು ಸೇವಿಸಿ.
- ಪ್ರೊಟೀನ್ ಸಮೃದ್ಧ ಆಹಾರ
ತೆಳು ಮಾಂಸ, ಕೋಳಿ ಆಹಾರ, ಬಿಳಿ ಮೀನು, ಬೇಯಿಸಿದ ಬೀನ್ಸ್, ಮೊಟ್ಟೆಯ ಬಿಳಿಭಾಗ, ಪೀನಟ್ ಬಟರ್, ಬೀಜಗಳು ಮತ್ತು ಎಣ್ಣೆಕಾಳುಗಳನ್ನು ಸೇವಿಸಿ. ವಯಸ್ಸು ಮಾಗುವುದರಿಂದಾಗಿ ದೇಹದಿಂದ ಪ್ರೊಟೀನ್ ನಷ್ಟವಾಗುತ್ತದೆ; ಇದನ್ನು ಸರಿದೂಗಿಸುವುದಕ್ಕಾಗಿ ಪ್ರೊಟೀನ್ ಅಂಶ ನಮ್ಮ ದೇಹಕ್ಕೆ ಸೇರುವುದು ಅಗತ್ಯ. ಜತೆಗೆ ಪ್ರೊಟೀನ್ ಹೊಂದಿರುವ ಕಿಣ್ವಗಳು ಮತ್ತು ಹಾರ್ಮೋನ್‌ಗಳ ರೂಪೀಕರಣಕ್ಕೆ ಕೂಡ ಪ್ರೋಟಿನ್ ಅಗತ್ಯವಾಗಿ ಬೇಕು.
3 ಕ್ಯಾಲ್ಸಿಯಂ ಎಲುಬಿನ ಆರೋಗ್ಯವನ್ನು ಕಾಪಾಡಿಕೊಳ್ಳುವ ಮೂಲಕ ಆಸ್ಟಿಯೊಪೊರೊಸಿಸ್ ಹಾಗೂ ಮೂಳೆ ಮುರಿತಗಳು ಉಂಟಾಗದಂತೆ ತಡೆಯಲು ಕ್ಯಾಲ್ಸಿಯಂ ನಮ್ಮ ಆಹಾರದಲ್ಲಿ ಇರುವುದು ಅಗತ್ಯ. ಕೆನೆರಹಿತ ಹಾಲು, ಯೋಗರ್ಟ್, ಚೀಸ್, ಸೊಯಾಮಿಲ್ಕ್, ಟೊಫು, ಬಾದಾಮಿ, ಬ್ರಾಕೊಲಿ, ಹಸಿರು ಸೊಪ್ಪು ತರಕಾರಿಗಳು ಮತ್ತು ಸಣ್ಣ ಮೀನುಗಳನ್ನು ಕ್ಯಾಲ್ಸಿಯಂ ಮೂಲವಾಗಿ ಸೇವಿಸಬೇಕು. ವಿಟಮಿನ್ ಡಿಯು ಕ್ಯಾಲ್ಸಿಯಂ ಅಂಶ ನಮ್ಮ ದೇಹಕ್ಕೆ ಹೀರಿಕೆಯಾಗಲು ಬೇಕು. ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ನಮ್ಮ ದೇಹದಲ್ಲಿ ವಿಟಮಿನ್ ಡಿ ಉತ್ಪಾದನೆಯಾಗುತ್ತದೆ. ವಿಟಮಿನ್ ಡಿ ಮಟ್ಟವು ಸಹಜಕ್ಕಿಂತ ಕಡಿಮೆಯಿದ್ದರೆ ಸಪ್ಲಿಮೆಂಟ್‌ಗಳನ್ನು ಶಿಫಾರಸು ಮಾಡಬೇಕಾಗುತ್ತದೆ.
4 ನಾರಿನಂಶ ನಾರಿನಂಶವು ಮುಖ್ಯವಾಗಿ ತರಕಾರಿಗಳು, ಹಸುರು ಸೊಪ್ಪು ತರಕಾರಿಗಳು, ಹಣ್ಣುಗಳು ಮತ್ತು ಸಂಕೀರ್ಣ ಕಾಬೊìಹೈಡ್ರೇಟ್‌ಗಳಿಂದ ನಮ್ಮ ದೇಹಕ್ಕೆ ಒದಗುತ್ತದೆ. ಹಸಿ ಮತ್ತು ಬೇಯಿಸಿದ ತರಕಾರಿಗಳು, ತರಕಾರಿ ಸೂ¾ತೀಗಳು, ತರಕಾರಿ ಸೂಪ್, ತಾಜಾ ಹಣ್ಣುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿಕೊಳ್ಳಿ. ವೈವಿಧ್ಯಮಯವಾದ ಬಣ್ಣಗಳ ತರಕಾರಿ ಮತ್ತು ಹಣ್ಣುಗಳನ್ನು ಸೇರಿಸಿಕೊಳ್ಳಿ. ವೃದ್ಧಾಪ್ಯದಲ್ಲಿ ಮಲಬದ್ಧತೆಯು ಒಂದು ಸಾಮಾನ್ಯ ಸಮಸ್ಯೆಯಾಗಿರುತ್ತದೆ. ಜಗಿಯುವಿಕೆ ಮತ್ತು ನುಂಗುವುದಕ್ಕೆ ಸಮಸ್ಯೆ, ಕಾಯಿಲೆಗಳು, ಚಲನೆಯ ಕೊರತೆ, ಅಸಮರ್ಪಕ ಪ್ರಮಾಣದ ಕ್ಯಾಲೊರಿ ಸೇವನೆ, ನಾರಿನಂಶದ ಕೊರತೆಯಿಂದಾಗಿ ಮಲಬದ್ಧತೆ ಉಂಟಾಗುತ್ತದೆ. ಇದನ್ನು ನಿವಾರಿಸಲು ನಾರಿನಂಶ ಮರುಪೂರಣ ಅಗತ್ಯ.
5 ನೀರಿನಂಶ
ದಿನಕ್ಕೆ ಕನಿಷ್ಠ ಪಕ್ಷ 10ರಿಂದ 12 ಗ್ಲಾಸ್ ನೀರು-ನೀರಿನಂಶ ಸೇವಿಸಬೇಕು. ಹಿರಿಯರು ಮಲಬದ್ಧತೆ, ನಿರ್ಜಲೀಕರಣ, ಆಗಾಗ ಮೂತ್ರಾಂಗ ಸೋಂಕುಗಳಿಗೆ ತುತ್ತಾಗುವ ಅಪಾಯವನ್ನು ಹೊಂದಿರುತ್ತಾರೆ. ವಯಸ್ಸು ಹೆಚ್ಚಿದಂತೆ ಬಾಯಾರಿಕೆಯ ಸಂವೇದನೆ ಕಡಿಮೆಯಾಗುತ್ತದೆ. ಇದರಿಂದಾಗಿ ನೀರು ಕುಡಿಯುವುದು ಕಡಿಮೆಯಾಗಿ ಆಗಾಗ ಮೂತ್ರಾಂಗ ಸೋಂಕುಗಳಿಗೆ, ಮಲಬದ್ಧತೆಗೆ ತುತ್ತಾಗುತ್ತಾರೆ. ಇದನ್ನು ತಡೆಯುವುದಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ನೀರು-ನೀರಿನಂಶಗಳನ್ನು ವಿವಿಧ ರೂಪಗಳಲ್ಲಿ ಸೇವಿಸಬೇಕು.
-ಅರುಣಾ ಮಲ್ಯ,
ಹಿರಿಯ ಪಥ್ಯಾಹಾರತಜ್ಞೆ,
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.