ವಾಯು ಮಾಲಿನ್ಯ : ನಿರ್ಲಕ್ಷಿಸಿದರೆ ಅಪಾಯ ಕಟ್ಟಿಟ್ಟ ಬುತ್ತಿ
Team Udayavani, Mar 3, 2022, 9:00 AM IST
2005ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಗಾಳಿಯ ಗುಣಮಟ್ಟದ ಮಾರ್ಗಸೂಚಿಗಳನ್ನು ಕಠಿನಗೊಳಿಸಿದ್ದರೂ ವಾಯು ಮಾಲಿನ್ಯದಿಂದಾಗಿ ಪ್ರತೀ ವರ್ಷ ವಿಶ್ವದಲ್ಲಿ ಏಳು ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ. ಇಷ್ಟೊಂದು ಬೃಹತ್ ಸಂಖ್ಯೆಯಲ್ಲಿ ಜನರು ಸಾವನ್ನಪ್ಪುತ್ತಿದ್ದರೂ ವಾಯು ಮಾಲಿನ್ಯಕ್ಕೆ ಕಡಿವಾಣ ಹಾಕುವಲ್ಲಿ ಭಾರತ ಸಹಿತ ವಿಶ್ವದ ಹಲವಾರು ದೇಶಗಳು ವಿಫಲವಾಗಿವೆ.
ಕಳೆದ ಕೆಲವು ವರ್ಷಗಳಿಂದೀಚೆಗೆ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಮಳೆಗಾಲ ಅಂತ್ಯಗೊಂಡು ಚಳಿಗಾಲ ಆರಂಭಗೊಳ್ಳುತ್ತಿದ್ದಂತೆಯೇ ವಾಯು ಮಾಲಿನ್ಯ ಅತಿರೇಕಕ್ಕೆ ತಲುಪುತ್ತಿದೆ. ಈ ಕುರಿತಂತೆ ಕೇಂದ್ರ ಮತ್ತು ರಾಜ್ಯ ಸರಕಾರಗಳು ಕೆಲವೊಂದು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೊಳಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಲೇ ಬಂದಿವೆ. ನವೆಂಬರ್ ಆರಂಭದಿಂದಲೇ ದಿಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮಂಜು ಮತ್ತು ದಟ್ಟ ಹೊಗೆಯಿಂದಾಗಿ ಗೋಚರತೆ ಪ್ರಮಾಣ ತೀರಾ ಕನಿಷ್ಠ ಮಟ್ಟಕ್ಕೆ ಕುಸಿಯಲಾರಂಭಿಸುತ್ತದೆ. ವಾಯು ಮಾಲಿನ್ಯದ ಪರಿಣಾಮ ಜನರು ಉಸಿರಾಟ ನಡೆಸಲೂ ಪ್ರಯಾಸ ಪಡಬೇಕಾದ ಪರಿಸ್ಥಿತಿ ಸೃಷ್ಟಿಯಾಗುವುದು ಇಲ್ಲಿನ ವಾರ್ಷಿಕ ಸಮಸ್ಯೆಯಾಗಿ ಮಾರ್ಪಟ್ಟಿದೆ. ದಿಲ್ಲಿ ಮಾತ್ರವಲ್ಲ ಮುಂಬಯಿ, ಕೋಲ್ಕತಾ ನಗರಗಳಲ್ಲೂ ಗಾಳಿಯ ಗುಣಮಟ್ಟ ತೀರಾ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ.
ಸ್ವಿಟ್ಸರ್ಲೆಂಡ್ ಮೂಲದ IQAir ಹವಾಮಾನ ತಜ್ಞರ ತಂಡ ಮುಂಬಯಿ ಮತ್ತು ಕೋಲ್ಕತಾವನ್ನು ವಿಶ್ವದ ಮೊದಲ 10 ಕಲುಷಿತ ನಗರಗಳ ಪಟ್ಟಿಗೆ ಸೇರಿಸಿದೆ. IQAir ಪ್ರಕಾರ ಹೊಸದಿಲ್ಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) 460 ಆಗಿದ್ದು ಅಗ್ರಸ್ಥಾನದಲ್ಲಿದೆ. ಇನ್ನು ಕೋಲ್ಕತಾ ಆರನೇ ಸ್ಥಾನದಲ್ಲಿ ಮತ್ತು ಮುಂಬಯಿ ನಾಲ್ಕನೇ ಸ್ಥಾನದಲ್ಲಿದೆ. ಕಲುಷಿತ ಗಾಳಿಯ ಈ ಪಟ್ಟಿಯಲ್ಲಿ ಪಾಕಿಸ್ಥಾನದ ಲಾಹೋರ್ ಮತ್ತು ಚೀನದ ಚೆಂಗ್ಡು ಕೂಡ ಸೇರಿವೆ.
ಹೊಸದಿಲ್ಲಿ: ಗಾಳಿಯ ಗುಣಮಟ್ಟ ಅತ್ಯಂತ ಕಳಪೆ :
ಜಾಗತಿಕ ತಾಪಮಾನ ಏರಿಕೆಗೆ ವಾಯು ಮಾಲಿನ್ಯವೂ ಕಾರಣವಾಗಿದೆ. ಗಾಳಿಯಲ್ಲಿ ಅತ್ಯಂತ ಅಪಾಯಕಾರಿ ಮಾಲಿನ್ಯಕಾರಕ ಸೂಕ್ಷ್ಮ ಕಣಗಳಾದ ಪಿಎಂ 2.5ರ ಪ್ರಮುಖ ಅಂಶವೆಂದರೆ ಕಪ್ಪು ಇಂಗಾಲ. ಇದು ಇಂಗಾಲ ಡೈ ಆಕ್ಸೈಡ್‌ಗಿಂತ ಸೂರ್ಯನಿಂದ ಒಂದು ಮಿಲಿಯನ್ ಪಟ್ಟು ಹೆಚ್ಚು ಶಕ್ತಿಯನ್ನು ಹೀರಿಕೊಳ್ಳುತ್ತದೆ. ಹೀಗಾಗಿ ಕಪ್ಪು ಇಂಗಾಲದಂತಹ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವುದು ಜಾಗತಿಕ ತಾಪಮಾನ ಏರಿಕೆಯನ್ನು ನಿಯಂತ್ರಿಸಲು, ಗಾಳಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎನ್ನುತ್ತಾರೆ ತಜ್ಞರು.
ವಿಶ್ವದ ಅತ್ಯಂತ ಕಲುಷಿತ 30 ನಗರಗಳಲ್ಲಿ 22 ಭಾರತದಲ್ಲಿದೆ. ವಿಷಕಾರಿ ಗಾಳಿಯ ಕಾರಣದಿಂದ ಇಲ್ಲಿ ವರ್ಷಕ್ಕೆ ಒಂದು ದಶಲಕ್ಷಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದಾರೆ. ನಗರಗಳಲ್ಲಿ ಸುಳಿದಾಡುವ ಗಾಳಿಯು ಪಿಎಂ 2.5 ಎಂದು ಕರೆಯಲ್ಪಡುವ ಅತ್ಯಂತ ಅಪಾಯಕಾರಿ ಉನ್ನತ ಮಟ್ಟದ ಸೂಕ್ಷ್ಮ ಕಣಗಳನ್ನು ಹೊಂದಿರುತ್ತದೆ. ಈ ಮಾಲಿನ್ಯಕಾರಕಗಳು ಶ್ವಾಸಕೋಶ ಮತ್ತು ಹೃದ್ರೋಗ ಸಮಸ್ಯೆ ಯನ್ನುಂಟು ಮಾಡುತ್ತದೆ. ಗ್ರೀನ್‌ಪೀಸ್ ಆಗ್ನೇಯ ಏಷ್ಯಾದ ವಿಶ್ಲೇಷಣೆ ಪ್ರಕಾರ ಪಿಎಂ 2.5 ವಾಯು ಮಾಲಿನ್ಯವು 2020ರಲ್ಲಿ ಹೊಸದಿಲ್ಲಿಯಲ್ಲಿ ಸುಮಾರು 54 ಸಾವಿರ ಮಂದಿಯ ಅಕಾಲಿಕ ಸಾವಿಗೆ ಕಾರಣವಾಯಿತು.
ಗಾಳಿಯ ಗುಣಮಟ್ಟ, ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆಯಿಂದ ಭೂ ವಿಜ್ಞಾನ ಸಚಿವಾಲಯವು ಹೊಸದಿಲ್ಲಿಗೆ 390 ಸೂಚ್ಯಂಕ ನೀಡಿದ್ದು ಇದು ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟ ಅತ್ಯಂತ ಕಳಪೆ ಮಟ್ಟದಲ್ಲಿರುವುದನ್ನು ಎತ್ತಿ ತೋರಿಸಿದೆ. ಹೊಸದಿಲ್ಲಿಯ ಮಾಲಿನ್ಯ ನಿಯಂತ್ರಣ ಸಮಿತಿಯ ವಿಶ್ಲೇಷಣೆ ಪ್ರಕಾರ ದಿಲ್ಲಿಯ ಜನತೆ ಪ್ರತೀ ವರ್ಷ ದೀಪಾವಳಿಯ ಅನಂತರ ಕೆಟ್ಟ ಗಾಳಿಯನ್ನು ಉಸಿರಾಡುತ್ತಾರೆ.
ಇನ್ನು ಫರೀದಾಬಾದ್‌ನಲ್ಲಿ AQI 460, ಗಾಜಿಯಾಬಾದ್‌ನಲ್ಲಿ 486, ಗ್ರೇಟರ್ ನೋಯ್ಡಾದಲ್ಲಿ 478, ಗುರ್ಗಾಂವ್‌ನಲ್ಲಿ 448, ನೋಯ್ಡಾದಲ್ಲಿ 488 ದಾಖಲಾಗಿದ್ದು ಗಾಳಿಯ ಗುಣಮಟ್ಟ ಕಳಪೆಯಾಗಿರುವುದನ್ನು ಸಾಬೀತುಪಡಿಸಿದೆ. ಇದರಲ್ಲಿ 0- 50ರ ನಡುವಿನ AQI ಅನ್ನು ಉತ್ತಮ, 51- 100ರ ನಡುವೆ ತೃಪ್ತಿಕರ, 101- 200ರ ನಡುವೆ ಮಧ್ಯಮ, 201- 300ರ ನಡುವೆ ಕಳಪೆ, 301- 400ರ ನಡುವೆ ಅತ್ಯಂತ ಕಳಪೆ ಮತ್ತು 401-500 ತೀವ್ರ ಅಥವಾ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ.
ಕಾರಣವೇನು? :
ದೀಪಾವಳಿ ಅನಂತರ ಹೆಚ್ಚಾಗಿರುವ ವಾಯು ಮಾಲಿನ್ಯಕ್ಕೆ ಪಟಾಕಿಗಳನ್ನು ಸಿಡಿಸಿರುವುದು, ಉತ್ತರ ಭಾರತದ ಕೃಷಿ ಭೂಮಿಗಳಲ್ಲಿ ಒಣ ತ್ಯಾಜ್ಯಗಳನ್ನು ಸುಡುವುದು, ವಾಹನ ಮಾಲಿನ್ಯ ಮತ್ತಿತರ ಅಂಶಗಳು ಪ್ರಮುಖ ಕಾರಣಗಳಾಗಿವೆ. ಸದ್ಯ ಲಕ್ನೋದಿಂದ ಕಾನ್ಪುರದವರೆಗೆ ಇಡೀ ನಗರಗಳು ಹೊಗೆಯ ಪದರಗಳಿಂದ ಆವೃತ್ತವಾಗಿವೆ. ಇದು ಗೋಚರತೆಯನ್ನು ಕಡಿಮೆ ಮಾಡಿ, ಜನರ ಸುರಕ್ಷಿತ ಉಸಿರಾಟಕ್ಕೆ ಸಮಸ್ಯೆ ಉಂಟು ಮಾಡುತ್ತಿದೆ.
ವಾಯು ಮಾಲಿನ್ಯಕ್ಕೆ ತುತ್ತಾಗಿರುವ ಉ. ಪ್ರದೇಶ :
ಉತ್ತರ ಪ್ರದೇಶದ ಸೋನ್‌ಭದ್ರಾ ಜಿಲ್ಲೆಯ ಅನ್‌ಪಾರಾ ಮತ್ತು ಶಕ್ತಿ ನಗರಗಳ ನಡುವಿನ ರಸ್ತೆಯಲ್ಲಿ ಅಕ್ಟೋಬರ್ ತಿಂಗಳಲ್ಲಿ ಹೂವನ್ನರಳಿಸಿ ತನ್ನ ಸೌಂದರ್ಯವನ್ನು ಚೆಲ್ಲಿ ಎಲ್ಲರ ಚಿತ್ತ ಆಕರ್ಷಿಸಬೇಕಿರುವ ಕ್ಯಾಸಿಯಾ ಮರಗಳು ಮಾತ್ರ ಮೌನವಾಗಿರುತ್ತವೆ. ಇಲ್ಲಿ ಸುಮಾರು 20 ಕಿ.ಮೀ. ವಿಸ್ತಾರದವರೆಗೆ ವ್ಯಾಪಿಸಿರುವ ಈ ಮರಗಳ ಹಳದಿ ಹೂವುಗಳು ಮತ್ತು ಹಸುರು ಬಣ್ಣದ ಎಲೆಗಳು ಮಂಜಿನ ಬೂದು ಬಣ್ಣದಿಂದ ಆವೃತ್ತವಾಗಿವೆ. ಎಲೆಗಳನ್ನು ಸ್ಪರ್ಶಿಸಿದರೆ ಕೈಗಳಿಗೆ ಕಪ್ಪು ಕಲ್ಲಿದ್ದಲಿನ ಬೂದಿ ಅಂಟಿಕೊಳ್ಳುತ್ತದೆ. ಆಳವಾದ ಉಸಿರು ತೆಗೆದುಕೊಂಡರೆ ಹೂಗಳ ಪರಿಮಳದ ಬದಲಿಗೆ ಶ್ವಾಸಕೋಶಗಳಲ್ಲಿ ಸಲ್ಫೂರಿಕ್ ಹೊಗೆ ತುಂಬಿಕೊಳ್ಳುತ್ತದೆ.
ಭಾರತದಲ್ಲಿ ವಿಷಕಾರಿ ವಾಯುಮಾಲಿನ್ಯದ ವಿಚಾರವಾಗಿ ದೇಶದ ರಾಜಧಾನಿ ಹೊಸದಿಲ್ಲಿಯಲ್ಲಿ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಹೊಗೆಯಷ್ಟೇ ಚರ್ಚೆಯಾಗುತ್ತದೆ. ಪಂಜಾಬ್, ಹರಿಯಾಣ ಸಹಿತ ದೇಶದ ಇತರ ಭಾಗಗಳಲ್ಲೂ ವಾಯು ಮಾಲಿನ್ಯ ಸಮಸ್ಯೆ ತೀವ್ರವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂಬರುವ ದಿನಗಳಲ್ಲಿ ಸಂಕಷ್ಟ ತಪ್ಪಿದ್ದಲ್ಲ.
ಮಾನವನ ಆಯುಸ್ಸಿಗೇ ಕುತ್ತು:
ವಾಯು ಮಾಲಿನ್ಯದಿಂದಾಗಿ ಪ್ರತೀ ವರ್ಷ ಲಕ್ಷಾಂತರ ಅಕಾಲಿಕ ಸಾವುಗಳು ಸಂಭವಿಸುತ್ತಿದ್ದು ಬಹುಮುಖ್ಯವಾಗಿ ಪಾರ್ಶ್ವವಾಯು, ಹೃದ್ರೋಗ, ದೀರ್ಘಕಾಲದ ಶ್ವಾಸಕೋಶದ ಕಾಯಿಲೆ, ಕ್ಯಾನ್ಸರ್, ತೀವ್ರ ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ. ಇದರಿಂದ ಪ್ರತೀ ವರ್ಷ ಪ್ರಪಂಚದಾದ್ಯಂತ ಸುಮಾರು 7 ಮಿಲಿಯನ್ ಜನರು ಸಾವನ್ನಪ್ಪುತ್ತಿದ್ದಾರೆ.
ವಾಯು ಮಾಲಿನ್ಯವು ಶತಕೋಟಿ ಜನರ ಆಯುಸ್ಸನ್ನು ಆರು ವರ್ಷ ಕಡಿತಗೊಳಿಸುತ್ತದೆ. ಧೂಮಪಾನ, ಅಪಘಾತ ಅಥವಾ ಎಚ್‌ಐವಿ/ಏಡ್ಸ್‌ನಿಂದ ಸಾವನ್ನಪ್ಪುವವರ ಸಂಖ್ಯೆಗಿಂತಲೂ ಹೆಚ್ಚು ಜನರು ವಾಯು ಮಾಲಿನ್ಯದಿಂದ ಮೃತಪಡುತ್ತಿದ್ದಾರೆ ಎಂದು ಇತ್ತೀಚಿನ ಸಂಶೋಧನೆಗಳು ಹೇಳಿವೆ.
ಪ್ರಪಂಚದ ಬಹುತೇಕ ಭಾಗಗಳಲ್ಲಿ ಕಲ್ಲಿದ್ದಲನ್ನು ಸುಡುವುದು ವಾಯು ಮಾಲಿನ್ಯಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಇದರ ಪರಿಣಾಮ ಭಾರತದಂತಹ ದೇಶಗಳಲ್ಲಿ ಹೆಚ್ಚಾಗಿದೆ. ಇಲ್ಲಿ ನಾಗರಿಕರು ಸರಾಸರಿ ಆರು ವರ್ಷಗಳ ಮೊದಲೇ ಸಾವನ್ನಪ್ಪುತ್ತಾರೆ.
ಭಾರತದಲ್ಲಿ ವಾಯು ಮಾಲಿನ್ಯದಿಂದಾಗಿ ಜನರ ಆಯುಸ್ಸು 5.9 ವರ್ಷ ಕಡಿಮೆಯಾಗಿದೆ. ದೇಶದ ಉತ್ತರ ಭಾಗದಲ್ಲಿ 480 ಮಿಲಿಯನ್ ಜನರು ಮಲಿನಯುಕ್ತ ಗಾಳಿಯನ್ನೇ ಉಸಿರಾಡುತ್ತಾರೆ. ಇದು ಪ್ರಪಂಚದ ಇತರೆಲ್ಲ ದೇಶಗಳಿಗೆ ಹೋಲಿಸಿದರೆ ಅತ್ಯಧಿಕವಾಗಿದೆ. ಕಳೆದ ಏಳು ವರ್ಷಗಳಲ್ಲಿ ಚೀನದಲ್ಲಿ ವಾಯುಮಾಲಿನ್ಯ ಕೊಂಚ ಕಡಿಮೆಯಾಗಿದೆ. ಇಲ್ಲಿ ಕಲುಷಿತ ಗಾಳಿಯಿಂದಾಗಿ ಜನರ ಜೀವಿತಾವಧಿಯು 2.6 ವರ್ಷ ಕಡಿತಗೊಂಡಿದೆ. ಬಾಂಗ್ಲಾದೇಶ ಮತ್ತು ನೇಪಾಲದಲ್ಲಿ 5.4 ವರ್ಷ, ಪಾಕಿಸ್ಥಾನದಲ್ಲಿ 3.9 ವರ್ಷಗಳು ಕಡಿತಗೊಂಡಿವೆ.
ಗಾಳಿಯ ಗುಣಮಟ್ಟ ಅಳೆಯುವುದು ಹೇಗೆ? :
ಗಾಳಿಯ ಗುಣಮಟ್ಟವನ್ನು ಅಳೆಯಲು ಹಲವಾರು ಅಂಶಗಳನ್ನು ಪರಿಗಣಿಸಲಾಗುತ್ತದೆ. ಇವನ್ನು ಒಂದುಗೂಡಿಸುವ ಸಂಖ್ಯೆಯನ್ನು AQI ಅಥವಾ ಏರ್ ಕ್ವಾಲಿಟಿ ಇಂಡೆಕ್ಸ್ ರೇಟಿಂಗ್ ಎನ್ನುತ್ತಾರೆ.
AQI ಮಟ್ಟ 0 ರಿಂದ 500 ಅಂಕಗಳವರೆಗೆ ಇರುತ್ತದೆ. ಇದು ಗಾಳಿಯಲ್ಲಾಗುವ ಮಾಲಿನ್ಯ ಪ್ರಮಾಣದಲ್ಲಿನ ಬದಲಾವಣೆಗಳನ್ನು ತೋರಿಸುತ್ತದೆ. AQI ಸಂಖ್ಯೆಯು ಐದು ಪ್ರಮುಖ ವಾಯು ಮಾಲಿನ್ಯಕಾರಕಗಳಾದ ನೆಲಮಟ್ಟದ ಓಝೋನ್, ಕಾರ್ಬನ್ ಮೊನಾಕ್ಸೈಡ್, ಸಲ್ಫರ್ ಡೈ ಆಕ್ಸೆ„ಡ್, ನೈಟ್ರೋಜನ್ ಡೈ ಆಕ್ಸೈಡ್ ಮತ್ತು ವಾಯುಗಾಮಿ ಕಣಗಳು ಅಥವಾ PM2.5 ಮತ್ತು PM10 ಮಟ್ಟವನ್ನು ಟ್ರ್ಯಾಕ್ ಮಾಡುತ್ತದೆ.
AQI ರೇಟಿಂಗ್‌ಗಳನ್ನು AQICN.ORG ಅಥವಾ SAFARR ಇಂಡಿಯಾ (ಸಿಸ್ಟಮ್ ಆಫ್ ಏರ್ ಕ್ವಾಲಿಟಿ ಮತ್ತು ಹವಾಮಾನ ಮುನ್ಸೂಚನೆ ಮತ್ತು ಸಂಶೋಧನೆ) ಮೂಲಕ ಅಳೆಯಬಹುದು AQI ರೇಟಿಂಗ್ ಕಡಿಮೆ ಇದ್ದರೆ ಗಾಳಿಯ ಗುಣಮಟ್ಟ ಸ್ವತ್ಛವಾಗಿರುತ್ತದೆ ಎಂದರ್ಥ.
ಗಾಳಿಯ ಗುಣಮಟ್ಟ: ಅಪಾಯದಲ್ಲಿರುವ ನಗರಗಳು (ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ 2021ರ ನ. 15) :
ನಗರ/ ಸೂಚ್ಯಂಕ
ಅಂಕಲೇಶ್ವರ್ 301
ಬಾಗ³ತ್ 340
ಬಹದ್ದೂರ್‌ಗಢ 322
ಬಲ್ಲಬ್‌ಗಢ 339
ಭಿವಾಡಿ 337
ಬುಲಂದ್
ಶಹರ್ 320
ಚರ್ಕಿದಾದ್ರಿ 323
ಹೊಸದಿಲ್ಲಿ 353
ಧುರೆಹೇರಾ 317
ಫರೀದಾಬಾದ್ 319
ಫತೇಬಾದ್ 306
ಗಾಜಿಯಾಬಾದ್ 335
ಗೋರಕ್‌ಪುರ್ 302
ಗ್ರೇಟರ್
ನೋಯ್ಡಾ 317
ಗುರುಗ್ರಾಮ್ 332
ಹಿಸಾರ್ 308
ಜಿಂಡ್ 350
ಜೋಧ್‌ಪುರ್ 320
ಕೋಟ,
ರಾಜಸ್ಥಾನ 353
ಮನೇಸರ್ 342
ಮೀರತ್ 310
ಮುಜಾಫರ್
ನಗರ್ 351
ನೋಯ್ಡಾ 338
ಉದಯ್‌ಪುರ್ 348
ಪ್ರಮುಖ ನಗರಗಳಲ್ಲಿ ಗಾಳಿಯ ಗುಣಮಟ್ಟ (ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ ವರದಿ 2021ರ ನ. 15) :
ನಗರ / ಸೂಚ್ಯಂಕ / ಗುಣಮಟ್ಟ
ಆಗ್ರಾ 282 ಕಳಪೆ
ಅಹ್ಮದಾಬಾದ್ 205 ಕಳಪೆ
ಬೆಂಗಳೂರು 51 ತೃಪ್ತಿದಾಯಕ
ಚೆನ್ನೈ 52 ತೃಪ್ತಿದಾಯಕ
ಹೊಸದಿಲ್ಲಿ 353 ತೀರಾ ಕಳಪೆ
ಹೈದರಾಬಾದ್ 59 ತೃಪ್ತಿದಾಯಕ
ಕೋಲ್ಕತಾ 65 ತೃಪ್ತಿದಾಯಕ
ಮಂಗಳೂರು 56 ತೃಪ್ತಿದಾಯಕ
ಮುಂಬಯಿ 181 ಮಧ್ಯಮ
ಮಾನವನ ಜೀವಿತಾವಧಿ ಕಡಿಮೆಯಾಗಲು ಕಾರಣಗಳು :
ಕಾರಣ/ಕಡಿಮೆಯಾಗುವ ಜೀವಿತಾವಧಿ
ಕಾರ್ಬನ್ ಡೈ ಆಕ್ಸೈಡ್ 1.8 ವರ್ಷ
ಧೂಮಪಾನ 1.6 ವರ್ಷ
ಆಲ್ಕೋಹಾಲ್,
ಡ್ರಗ್ಸ್ ಸೇವನೆ 11 ತಿಂಗಳು
ಕಲುಷಿತ ನೀರು 7 ತಿಂಗಳು
ವಾಹನ ಅಪಘಾತ 4.5 ತಿಂಗಳು
ಎಚ್‌ಐವಿ 4 ತಿಂಗಳು
ಮಲೇರಿಯಾ 4 ತಿಂಗಳು
ಟಿಬಿ 3.5 ತಿಂಗಳು
ಯುದ್ಧ ಮತ್ತು
ಭಯೋತ್ಪಾದನೆ 22 ದಿನಗಳು
IQAIRಕಿಅಜಿr ಪ್ರಕಾರ ಕಲುಷಿತ ಗಾಳಿಯ ಗುಣಮಟ್ಟದ ಸೂಚ್ಯಂಕಗಳು ಮತ್ತು ಮಾಲಿನ್ಯ ಶ್ರೇಯಾಂಕ ಹೊಂದಿರುವ ವಿಶ್ವದ ಪ್ರಮುಖ 10 ನಗರಗಳು :
ನಗರ /ದೇಶ/AQI
ದಿಲ್ಲಿ ಭಾರತ 460
ಲಾಹೋರ್ ಪಾಕಿಸ್ಥಾನ 328
ಚೆಂಗ್ಡು ಚೀನ 176
ಮುಂಬಯಿ ಭಾರತ 169
ಕರಾಚಿ ಪಾಕಿಸ್ಥಾನ 165
ಕೋಲ್ಕತಾ ಭಾರತ 165
ಸೋಫಿಯಾ ಬಲ್ಗೇರಿಯಾ 164
ಢಾಕಾ ಬಾಂಗ್ಲಾದೇಶ 160
ಬೆಲ್ಗ್ರೇಡ್ ಸರ್ಬಿಯಾ 159
ಜಕಾರ್ತಾ ಇಂಡೋನೇಷ್ಯಾ 158
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.