ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆ
Team Udayavani, May 29, 2019, 11:40 AM IST
ಪ್ರಸ್ತುತ ನಮ್ಮ ದೇಶದಲ್ಲಿ ಸುಮಾರು ಶೇ.70ಕ್ಕಿಂತ ಹೆಚ್ಚು ಜನರಿಗೆ ಯಾವುದೇ ಆರೋಗ್ಯ ಸುರಕ್ಷಾ ರಕ್ಷಣೆ ಇರುವುದಿಲ್ಲ. ಸಾಮಾನ್ಯ ಜನರಿಗೆ ಗಂಭೀರ ಕಾಯಿಲೆಗಳು ಬಂದಾಗ ಅವರ ಜೀವಮಾನದ ಉಳಿತಾಯವನ್ನೆಲ್ಲ ಚಿಕಿತ್ಸೆಗೆ ಭರಿಸಬೇಕಾಗಬಹುದು ಅಥವಾ ಸಾಲ, ಆಸ್ತಿ ಮಾರಾಟ ಮಾಡಬೇಕಾದ ಪ್ರಸಂಗ ಬರಬಹುದು. ಇದು ಪ್ರತೀ ವರ್ಷ ಸಮೀಕ್ಷೆಗಳ ಪ್ರಕಾರ 5-6 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ತಳ್ಳುತ್ತದೆ. ಇದನ್ನು ಮನಗಂಡ ಕೇಂದ್ರ ಸರಕಾರವು 2018ರಲ್ಲಿ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ – ಆಯುಷ್ಮಾನ್ ಭಾರತ ಯೋಜನೆ ಅನುಷ್ಠಾನಗೊಳಿಸಿದೆ. ಈ ಯೋಜನೆ ಅಡಿಯಲ್ಲಿ ದೇಶಾದ್ಯಂತ 10 ಕೋಟಿಗೂ ಮಿಕ್ಕಿ ಬಡಕುಟುಂಬಗಳಿಗೆ (50 ಕೋಟಿಗಿಂತಲೂ ಹೆಚ್ಚು ಜನರಿಗೆ) ವಾರ್ಷಿಕ 5 ಲಕ್ಷ ರೂ. ವರೆಗೆ ರೋಗಗಳ ಚಿಕಿತ್ಸಾ ವೆಚ್ಚವನ್ನು ಸರಕಾರವೇ ಭರಿಸಲಿದೆ.
ಕರ್ನಾಟಕದಲ್ಲಿ 2018ರ ಜೂನ್ ತಿಂಗಳಿನಿಂದ ರಾಜ್ಯ ಸರಕಾರದ ಆರೋಗ್ಯ ಕರ್ನಾಟಕ ಯೋಜನೆ ಸಹ ಅನುಷ್ಠಾನಗೊಂಡಿದ್ದು, ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಹೋಲಿಕೆ ಇರುವುದರಿಂದ ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಎಂಬ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
-ಈ ಯೋಜನೆಯ ಅಡಿಯಲ್ಲಿ ಸುಮಾರು 1,650 ವಿವಿಧ ತೆರನಾದ ರೋಗಗಳ ಚಿಕಿತ್ಸೆ ಮತ್ತು ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಲಾಗುವುದು.
-ಪ್ರತೀ ಚಿಕಿತ್ಸೆಗೆ ಪ್ರೊಸೀಜರ್ ನೇಮ್ ಮತ್ತು ಪ್ರೊಸೀಜರ್ ಕೋಡ್ ನೀಡಲಾಗಿದೆ.
-ಪ್ರತೀ ಚಿಕಿತ್ಸೆಗೆ/ ಪ್ರೊಸೀಜರ್‌ಗೆ ಪ್ಯಾಕೇಜ್ ದರ ನಿಗದಿಪಡಿಸಲಾಗಿದೆ. ರೋಗಿಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಅನಂತರ ಆ ಚಿಕಿತ್ಸೆಗೆ ನಿಗದಿಪಡಿಸಿದ ಪ್ಯಾಕೇಜ್ ಹಣವನ್ನು ಸರಕಾರ ನೇರವಾಗಿ ಚಿಕಿತ್ಸೆ ನೀಡಿದ ಆಸ್ಪತ್ರೆಗೆ ನೀಡುತ್ತದೆ.
-ರೋಗಿಯು ಚಿಕಿತ್ಸೆ ಪಡೆದ ನೋಂದಾಯಿತ ಆಸ್ಪತ್ರೆಗಳಲ್ಲಿ ಹಣ ನೀಡುವ ಅಗತ್ಯ ಇರುವುದಿಲ್ಲ.
-ಫಲಾನುಭವಿಗಳಿಗೆ ಚಿಕಿತ್ಸೆ ವೆಚ್ಚ, ಔಷಧ ವೆಚ್ಚ, ಪರೀಕ್ಷೆಗಳು ಮತ್ತು ಊಟ, ಪ್ರಯಾಣ ಭತ್ತೆಯನ್ನು ನೀಡಲಾಗುವುದು.
-ಇದು ನಗದುರಹಿತ ಸೇವೆಯಾಗಿರುತ್ತದೆ.
ವಿವಿಧ ತೆರನಾದ ರೋಗಗಳಿಗೆ ಚಿಕಿತ್ಸೆ ವಿವಿಧ ಸ್ತರಗಳ (ಸರಕಾರಿ ಹಾಗೂ ಖಾಸಗಿ) ಆಸ್ಪತ್ರೆಗಳಲ್ಲಿ ನೀಡುವ ಉದ್ದೇಶದಿಂದ ಮತ್ತು ರೆಫರಲ್ ನೀಡಲು ಅನುಕೂಲವಾಗಲೆಂದು ಚಿಕಿತ್ಸೆಗಳನ್ನು 5 ಹಂತಗಳಾಗಿ ವಿಂಗಡಿಸಲಾಗಿದೆ.
1. ಪ್ರಾಥಮಿಕ ಪ್ರಥಮ ಹಂತದ ಚಿಕಿತ್ಸೆಗಳು: 1ಎ -ಸುಮಾರು 36 ಬಗೆಯ ಪ್ರಥಮ ಚಿಕಿತ್ಸೆಗಳನ್ನು ಈ ವಿಂಗಡಣೆಯಡಿಯಲ್ಲಿ ಸರಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರಕಾರಿ ಆಸ್ಪತ್ರೆಗಳಲ್ಲಿ ಪಡೆಯ ಬಹುದು. ಉದಾ: ಪ್ರಥಮ ಚಿಕಿತ್ಸೆ, ಜ್ವರ, ಕೆಮ್ಮು, ವಾಂತಿ, ಭೇದಿ ತೆರನಾದ ಮೊದಲಾದ ಪ್ರಾಥಮಿಕ ಹಂತದ ಆರೋಗ್ಯ ಸೇವೆಗಳು
2. ಸಾಮಾನ್ಯ ದ್ವಿತೀಯ ಹಂತದ ಚಿಕಿತ್ಸೆಗಳು: 2ಎ – ಈ ವಿಂಗಡಣೆಯಡಿಯಲ್ಲಿ ಬರುವ ಸುಮಾರು 291 ಪ್ರಕಾರದ ಚಿಕಿತ್ಸೆಗಳನ್ನು ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು. ಉದಾ: ಸಾಮಾನ್ಯ ಹೆರಿಗೆ ಸೇವೆ, ಡೆಂಗ್ಯೂ, ಮಲೇರಿಯಾ, ಮೂಳೆ ಮುರಿತ, ಹರ್ನಿಯಾ ಶಸ್ತ್ರಚಿಕಿತ್ಸೆ, ಸಾಮಾನ್ಯ ಶಸ್ತ್ರಚಿಕಿತ್ಸೆಗಳು.
3. ಸಂಕೀರ್ಣ ದ್ವಿತೀಯ ಹಂತದ ಚಿಕಿತ್ಸೆಗಳು: 2ಬಿ – ಈ ವಿಂಗಡಣೆ ಅಡಿಯಲ್ಲಿ ಬರುವ ಸುಮಾರು 254 ಚಿಕಿತ್ಸೆಗಳನ್ನು ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಗಳಲ್ಲಿ ಪಡೆದುಕೊಳ್ಳಬಹುದು. ಒಂದು ವೇಳೆ ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಈ ವಿಂಗಡಣೆಯ ಅಡಿಯಲ್ಲಿ ಬರುವ ಯಾವುದೇ ರೋಗಕ್ಕೆ ಚಿಕಿತ್ಸಾ ಸಲಕರಣೆ, ತಜ್ಞ ವೈದ್ಯರು ಇಲ್ಲದಿದ್ದಲ್ಲಿ ಖಾಸಗಿ ನೋಂದಾಯಿತ ಆಸ್ಪತ್ರೆಗಳಿಗೆ ರೆಫರಲ್ ಮಾಡಬಹುದಾಗಿದೆ.
4. ತೃತೀಯ ಹಂತದ ಚಿಕಿತ್ಸೆಗಳು: 3ಎ – ಈ ವಿಂಗಡಣೆಯ ಅಡಿಯಲ್ಲಿ ಸುಮಾರು 900 ಮಾರಣಾಂತಿಕ ಕಾಯಿಲೆಗಳಿಗೆ ಚಿಕಿತ್ಸೆ ನೀಡಲಾಗುವುದು. ಹೃದಯ ರೋಗ, ಕ್ಯಾನ್ಸರ್, ನರ ರೋಗ, ಮೂತ್ರಪಿಂಡ ರೋಗ, ನವಜಾತ ಶಿಶುಗಳ ಗಂಭೀರ ಕಾಯಿಲೆಗಳು, ಈ ರೋಗಗಳಿಗೆ ಸರಕಾರಿ ತೃತೀಯ ಹಂತದ ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಇಲ್ಲದಿದ್ದಲ್ಲಿ ಖಾಸಗಿ ನೋಂದಾಯಿತ ತೃತೀಯ ಹಂತದ ಆಸ್ಪತ್ರೆಗೆ ರೆಫರಲ್ ನೀಡಬಹುದಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಮತ್ತು ಉಡುಪಿ ಜಿಲ್ಲೆಯಲ್ಲಿ 2 ಅಂತಹ ತೃತೀಯ ಹಂತದ ಆಸ್ಪತ್ರೆಗಳನ್ನು ಯೋಜನೆ ಅಡಿಯಲ್ಲಿ ನೋಂದಾಯಿಸಲಾಗಿದೆ.
5. ತುರ್ತು ಚಿಕಿತ್ಸೆಗಳು: 4ಎ – ಸರಕಾರಿ ಆದೇಶದಲ್ಲಿ ಪಟ್ಟಿ ಮಾಡಿರುವ 170 ತುರ್ತು ಚಿಕಿತ್ಸೆಗಳಿಗೆ ಸಂಬಂಧಪಟ್ಟ ಚಿಕಿತ್ಸೆ ಲಭ್ಯವಿರುವ ಸರಕಾರಿ ಆಸ್ಪತ್ರೆ ಅಥವಾ ಖಾಸಗಿ ನೋಂದಾಯಿತ ತೃತೀಯ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬಹುದು.
ಫಲಾನುಭವಿಗಳು – ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ ಸೌಲಭ್ಯ ಪಡೆಯಲು ರೋಗಿಗಳನ್ನು ಎರಡು ವರ್ಗಗಳಾಗಿ ವಿಂಗಡಿಸಲಾಗಿದೆ.
1. ಅರ್ಹತಾ ರೋಗಿ: ಬಿಪಿಎಲ್ ಪಡಿತರ ಚೀಟಿ ಹೊಂದಿದವರು ಅಥವಾ ರಾಷ್ಟ್ರೀಯ ಸ್ವಾಸ್ಥ್ಯ ಭಿಮಾ ಯೋಜನೆಯಲ್ಲಿ ನೋಂದಾಯಿತ ಫಲಾನುಭವಿಗಳಿಗೆ ಅರ್ಹತಾ ಕಾರ್ಡುಗಳನ್ನು ನೀಡಲಾಗುವುದು. ಈ ಕುಟುಂಬದವರಿಗೆ ವಾರ್ಷಿಕ 5 ಲಕ್ಷ ರೂ.ವರೆಗಿನ ಚಿಕಿತ್ಸಾ ಪ್ಯಾಕೇಜ್‌ಗಳು ಉಚಿತವಾಗಿವೆ.
2. ಸಾಮಾನ್ಯ ರೋಗಿ: ಕರ್ನಾಟಕ ರಾಜ್ಯ ನಿವಾಸಿಯಾಗಿದ್ದು, ಬಿಪಿಎಲ್ ಪಡಿತರ ಚೀಟಿ ಇಲ್ಲದವರಿಗೆ ಸಾಮಾನ್ಯ ಕಾರ್ಡುಗಳನ್ನು ನೀಡಲಾಗುವುದು. ಇಂತಹ ಕುಟುಂಬಗಳಿಗೆ ಚಿಕಿತ್ಸೆಯ ಪ್ಯಾಕೇಜ್ ದರದ ಶೇ.30ರಷ್ಟು ಮಾತ್ರ ಚಿಕಿತ್ಸಾ ವೆಚ್ಚವನ್ನು ಯೋಜನೆಯಡಿಯಲ್ಲಿ ಭರಿಸಲಾಗುವುದು. ವಾರ್ಷಿಕ ಮಿತಿ ಅಂತಹ ಕುಟುಂಬಗಳಿಗೆ 1.50 ಲಕ್ಷ ರೂ. ಇರುತ್ತದೆ.
ಎಬಿ ಎಆರ್‌ಕೆ ಕಾರ್ಡು ಪಡೆಯುವ ಬಗೆ
ಅರ್ಹತಾ ಮತ್ತು ಸಾಮಾನ್ಯ ಕಾರ್ಡುಗಳನ್ನು ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆಗಳು, ಜಿಲ್ಲಾ ಆಸ್ಪತ್ರೆಯ ಸೇವಾಸಿಂಧು ಕೇಂದ್ರಗಳಿಂದ ಪಡೆದುಕೊಳ್ಳಬಹುದು. ಕಾರ್ಡು ಪಡೆಯಲು ಇಚ್ಛಿಸುವ ವ್ಯಕ್ತಿಯು ತನ್ನ ಆಧಾರ್ ಕಾರ್ಡು ಹಾಗೂ ಪಡಿತರ ಚೀಟಿಯೊಂದಿಗೆ ಸ್ವತಃ ಕೇಂದ್ರಕ್ಕೆ ಬಂದು ಬೆರಳಚ್ಚು ನೀಡಿ ಪಡೆಯಬಹುದಾಗಿದೆ. ಈ ಯೋಜನೆಯಡಿ ಆರೋಗ್ಯ ಸೇವೆ ಪಡೆಯಲು ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಕಾರ್ಡು ಕಡ್ಡಾಯವಿರುವುದಿಲ್ಲ. ರೋಗಿಯು ತಮ್ಮ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡು ಸಲ್ಲಿಸಿಯೂ ಸೇವೆ ಪಡೆಯಬಹುದು. ಆದಾಗ್ಯೂ ಯೋಜನೆಯ ಸೇವೆಗಳು ಸುಲಲಿತವಾಗಿ ಮತ್ತು ಸರಳೀಕೃತವಾಗಿ ಪಡೆಯಲು ಎಬಿ ಎಆರ್‌ಕೆ ಕಾರ್ಡುಗಳನ್ನು ವಿತರಿಸಲಾಗುತ್ತಿದೆ.
ಮುಖ್ಯಾಂಶಗಳು
ಪ್ರಾಥಮಿಕ ಮತ್ತು ದ್ವಿತೀಯ ಹಂತದ ಸಾಮಾನ್ಯ ಚಿಕಿತ್ಸೆಗಳನ್ನು ಸರಕಾರಿ ಆಸ್ಪತ್ರೆಗಳಲ್ಲಿ ಮಾತ್ರ ನೀಡಲಾಗುವುದು. ದ್ವಿತೀಯ ಕ್ಲಿಷ್ಟಕರ ಚಿಕಿತ್ಸೆಗಳು ಮತ್ತು ತೃತೀಯ ಹಂತದ ಕಾಯಿಲೆಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಲಭ್ಯವಿದ್ದಲ್ಲಿ ಅಲ್ಲಿಯೇ ನೀಡಲಾಗುತ್ತದೆ. ಇಲ್ಲದಿದ್ದಲ್ಲಿ ರೆಫರಲ್ ನೀಡಲಾಗುತ್ತದೆ. ರೆಫರಲ್ ಪಡೆದುಕೊಂಡ ರೋಗಿಯು ತಾನು ಇಚ್ಛಿಸುವ ಯಾವುದೇ ನೋಂದಾಯಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ರಸ್ತೆ ಅಪಘಾತ ಸೇರಿದಂತೆ ಸರಕಾರಿ ಆದೇಶದಲ್ಲಿ ಪಟ್ಟಿ ಮಾಡಿರುವ 170 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ಎಬಿ ಎಆರ್‌ಕೆ ನೋಂದಾಯಿತ ಖಾಸಗಿ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ.
ತುರ್ತು ಚಿಕಿತ್ಸೆಗಳ ಹೊರತಾಗಿ ಅರ್ಹತೆ ರೋಗಿಗಳಾಗಲಿ ಅಥವಾ ಸಾಮಾನ್ಯ ರೋಗಿಗಳಾಗಲಿ ಸರಕಾರಿ ಆಸ್ಪತ್ರೆಯ ರೆಫರಲ್ ಇಲ್ಲದೆ ನೇರವಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದಲ್ಲಿ ಆ ವೆಚ್ಚವನ್ನು ಸದರಿ ರೋಗಿಯೇ ಭರಿಸಬೇಕಾಗುತ್ತದೆ.
ಪ್ಯಾಕೇಜ್ ದರ
ಈ ಯೋಜನೆಯ ಅಡಿಯಲ್ಲಿ ಪ್ರತಿಯೊಂದು ಚಿಕಿತ್ಸೆಗೂ ಸಂಬಂಧಪಟ್ಟ ಪ್ಯಾಕೇಜ್ ಕೋಡ್ ಮತ್ತು ಪ್ಯಾಕೇಜ್ ರೇಟ್ ಅನ್ನು ನಿಗದಿಪಡಿಸಲಾಗಿದೆ. ಉದಾಹರಣೆಗೆ, ಹೃದಯ ಕವಾಟ ದುರಸ್ತಿಗೆ ಪ್ಯಾಕೇಜ್ ಕೋಡ್ 3ಎ.52 ಆಗಿರುತ್ತದೆ ಮತ್ತು ಪ್ಯಾಕೇಜ್ ದರ 80,000 ರೂ. ಆಗಿರುತ್ತದೆ. ನೋಂದಾಯಿತ ಖಾಸಗಿ ಆಸ್ಪತ್ರೆಯಲ್ಲಿ ಪ್ಯಾಕೇಜ್ ದರದ ಒಳಗೆ ಈ ಚಿಕಿತ್ಸೆಯನ್ನು ರೋಗಿಗೆ ಉಚಿತವಾಗಿ ಮಾಡಬೇಕಾಗುತ್ತದೆ. ಅದಲ್ಲದೆ ಸಂಬಂಧಪಟ್ಟ ಔಷಧಗಳು, ಪರೀಕ್ಷೆ, ಊಟ-ಉಪಚಾರಗಳನ್ನು ಆಸ್ಪತ್ರೆಯಲ್ಲಿಯೇ ಉಚಿತವಾಗಿ ನೀಡಲಾಗುವುದು. ರೋಗಿಗೆ ಇದು ನಗದುರಹಿತ ಸೇವೆಯಾಗಿರುತ್ತದೆ.
ಸರಕಾರಿ ಆಸ್ಪತ್ರೆ ಮತ್ತು ಉಚಿತ ಚಿಕಿತ್ಸೆ
ಈ ಯೋಜನೆಯಡಿಯಲ್ಲಿ ಯಾವೆಲ್ಲ ಚಿಕಿತ್ಸೆಗಳು ಜಿಲ್ಲೆಯಲ್ಲಿರುವ ಸರಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿವೆಯೋ ಅವನ್ನೆಲ್ಲವನ್ನು ಸರಕಾರಿ ಆಸ್ಪತ್ರೆಯಲ್ಲಿಯೇ ಪಡೆದುಕೊಳ್ಳಬೇಕು. ಉದಾ: ಸಾಮಾನ್ಯ ಹೆರಿಗೆ ಸೇವೆಗಳನ್ನು ಸರಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆ, ಜಿಲ್ಲಾ ಆಸ್ಪತ್ರೆಯಲ್ಲಿ ಲಭ್ಯವಿರುವುದರಿಂದ ಅಲ್ಲಿಯೇ ಪಡೆದುಕೊಳ್ಳಬೇಕಾಗುತ್ತದೆ. ರೋಗಿಯು ಸರಕಾರಿ ಆಸ್ಪತ್ರೆಯಲ್ಲಿಯೇ ಈ ಯೋಜನೆಯ ಅಡಿಯಲ್ಲಿ ಚಿಕಿತ್ಸೆ ಪಡೆದುಕೊಂಡರೆ ಚಿಕಿತ್ಸೆಗೆ ಯೋಜನೆಯಡಿಯಲ್ಲಿ ನಿಗದಿಪಡಿಸಿದ ಪ್ಯಾಕೇಜ್ ದರ ಆ ಸರಕಾರಿ ಆಸ್ಪತ್ರೆಗೆ ದೊರೆಯಲಿದೆ. ಈ ಹಣವನ್ನು ಆಸ್ಪತ್ರೆಯವರು ಸೇವಾ ಸೌಲಭ್ಯ ಹೆಚ್ಚಿಸಲು ಹಾಗೂ ಚಿಕಿತ್ಸೆ ನೀಡಿದ ವೈದ್ಯಕೀಯ, ಅರೆ ವೈದ್ಯಕೀಯ ಸಿಬಂದಿಗೆ ಪ್ರೋತ್ಸಾಹ ಧನವಾಗಿ ನೀಡಲಾಗುತ್ತದೆ. ಇದರಿಂದ ಸರಕಾರಿ ಆಸ್ಪತ್ರೆಗಳಲ್ಲಿ ಧನಾತ್ಮಕ ಬೆಳವಣಿಗೆ ಆಗಲಿದೆ.
-ಡಾ| ಅಶ್ವಿನ್ ಕುಮಾರ ಗೋಪಾಡಿ,
ಅಡಿಷನಲ್ ಪ್ರೊಫೆಸರ್,
ಕಮ್ಯುನಿಟಿ ಮೆಡಿಸಿನ್,
ಕೆಎಂಸಿ, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Our beautiful blessing..; ಚೊಚ್ಚಲ ಮಗುವಿನ ಖುಷಿ ಹಂಚಿಕೊಂಡ ರಾಹುಲ್ – ಅಥಿಯಾ ಶೆಟ್ಟಿ
ಬೆಳಗಾವಿಯ ಶ್ರೀನಿವಾಸ ಠಾಣೇದಾರ ಅಮೆರಿಕ ಸಂಸತ್‌ಗೆ ಆಯ್ಕೆ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Sirsi: ಗವಿನಗುಡ್ಡ ಸುತ್ತ ಕಬ್ಬು, ಭತ್ತದ ಗದ್ದೆಗಳಿಗೆ ಕಾಡಾನೆ ದಾಳಿ… ಬೆಳೆ ನಾಶ
Waqf Property: ಸಚಿವ ಜಮೀರ್ ಅಶ್ವಮೇಧ ಕುದುರೆ ತಡೆದಿದ್ದೇನೆ: ಶಾಸಕ ಯತ್ನಾಳ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.