ಅಧಿಕ ರಕ್ತದೊತ್ತಡ ನಿರ್ಲಕ್ಷ್ಯ ಬೇಡ; ಇರಲಿ ಎಚ್ಚರ
Team Udayavani, May 18, 2022, 6:15 AM IST
ವಿಶ್ವ ಅಧಿಕ ರಕ್ತದೊತ್ತಡ ದಿನದ ಹಿನ್ನೆಲೆಯಲ್ಲಿ ಉದಯವಾಣಿಯ ಮಣಿಪಾಲ ಪ್ರಧಾನ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಿದ್ದ ಫೋನ್ ಇನ್ ಕಾರ್ಯಕ್ರಮದಲ್ಲಿ ಮಣಿಪಾಲ ಕೆಎಂಸಿ ಮತ್ತು ಕಸ್ತೂರ್ಬಾ ಆಸ್ಪತ್ರೆಯ ಮೆಡಿಸಿನ್ ವಿಭಾಗದ ಯುನಿಟ್ ಹೆಡ್ ಮತ್ತು ಪ್ರಾಧ್ಯಾಪಕ ಡಾ| ವಾಸುದೇವ ಆಚಾರ್ಯ ಮತ್ತು ಪರ್ಕಳ ಪರೀಕದ ಎಸ್‌ಡಿಎಂ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಮುಖ್ಯವೈದ್ಯಾಧಿಕಾರಿ ಡಾ| ಶಿವರಾಜ ವಿ. ಪಾಟೀಲ್ ಅವರು ಭಾಗವಹಿಸಿ, ರಕ್ತದೊತ್ತಡ ನಿಯಂತ್ರಣ ಮತ್ತು ಆಹಾರ ಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.
ನಿರಂತರ ತಪಾಸಣೆ ಅಗತ್ಯ
ವಾಸ್ತವದಲ್ಲಿ ಹೈ ಬಿ.ಪಿ., ಲೋ ಬಿ.ಪಿ. ಎಂಬುದಿಲ್ಲ. ಬಿ.ಪಿ.ಯು ಸರಾಸರಿ ಪ್ರಮಾಣಕ್ಕಿಂತ ಕಡಿಮೆಯಾದಾಗ ವಿಪರೀತ ವಾಂತಿ, ಬೇಧಿ, ಹೃದಯ ನೋವು ಮೊದಲಾದ ಲಕ್ಷಣ ಕಾಣಿಸಿಕೊಳ್ಳುತ್ತದೆ. ಇದಕ್ಕೆ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಬೇಕಾಗುತ್ತದೆ. ಬಿ.ಪಿ. ಸರಾಸರಿಗಿಂತ ಹೆಚ್ಚಿದರೆ ವೈದ್ಯರು ಸೂಚಿಸುವ ಔಷಧವನ್ನು ಪಡೆಯಬೇಕಾಗುತ್ತದೆ. ಬಿ.ಪಿ.ಗೆ ತೆಗೆದುಕೊಳ್ಳುವ ಗುಳಿಗೆ(ಮಾತ್ರೆ)ಯ ಸಾಮರ್ಥ್ಯ ಒಂದು ದಿನಕ್ಕೆ ಸೀಮಿತವಾಗಿರುವುದರಿಂದ ದಿನ ಬಿಟ್ಟು ದಿನ ಅಥವಾ ಮೂರು ದಿನಕ್ಕೊಮ್ಮೆ ಮಾತ್ರೆ ತೆಗೆದುಕೊಳ್ಳುವುದರಿಂದ ಯಾವುದೇ ಪ್ರಯೋಜನ ಇಲ್ಲ. ನಿತ್ಯವೂ ತೆಗೆದುಕೊಳ್ಳಬೇಕಾಗುತ್ತದೆ. 30 ವರ್ಷ ಮೇಲ್ಪಟ್ಟವರು ವರ್ಷಕ್ಕೆ ಒಮ್ಮೆ ಅಥವಾ ವರ್ಷಕ್ಕೆ ಎರಡು ಬಾರಿಯಾದರೂ ಬಿ.ಪಿ. ತಪಾಸಣೆ ಮಾಡಿಸಿಕೊಳ್ಳಬೇಕು ಎಂದು ಡಾ| ವಾಸುದೇವ ಆಚಾರ್ಯ ಅವರು ಸಲಹೆ ನೀಡಿದರು.
ಬಿ.ಪಿ., ಶುಗರ್, ಕೊಲೆಸ್ಟ್ರಾಲ್…
ಶುಗರ್, ಬಿ.ಪಿ. ಮತ್ತು ಕೊಲೆಸ್ಟ್ರಾಲ್‌ಗೆ ನೇರ ಸಂಬಂಧ ಇಲ್ಲ. ಆದರೆ ಎಲ್ಲವೂ ನಿಯಂತ್ರಣದಲ್ಲಿ ಇರಬೇಕಾಗುತ್ತದೆ. ಬಿ.ಪಿ., ಶುಗರ್ ನಿಯಂತ್ರಣ ತಪ್ಪಿದಾಗ ಹೃದಯ, ಕಿಡ್ನಿ ಹಾಗೂ ಮೆದುಳಿಗೆ ಸಂಬಂಧಿಸಿದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆರೋಗ್ಯದಲ್ಲಿ ಏರುಪೇರಾದಾಗ ಈ ಮೂರರ ನಿಯಮಿತ ತಪಾಸಣೆ ಮಾಡಿಸಿಕೊಳ್ಳುತ್ತಿರಬೇಕಾಗುತ್ತದೆ.
ಆಹಾರ ಪದ್ಧತಿ ಹೇಗಿರಬೇಕು?
ನೀರು ಹೆಚ್ಚಾಗಿ ಕುಡಿಯಬೇಕು. ಹಸುರು ತರಕಾರಿ, ಸೊಪ್ಪು, ಹಣ್ಣು ಸೇವನೆಗೆ ಆದ್ಯತೆ ನೀಡಬೇಕು. ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿದ್ದಷ್ಟು ಒಳ್ಳೆಯದು. ಬಿ.ಪಿ.ಗೂ ಮಾಂಸಾಹಾರಕ್ಕೂ ಯಾವುದೇ ಸಂಬಂಧ ಇಲ್ಲ. ಹೀಗಾಗಿ ಮಾಂಸಾಹಾರ ಸೇವನೆ ಮಾಡುವವರು ಕೊಲೆಸ್ಟ್ರಾಲ್ ಬಗ್ಗೆ ಸ್ವಲ್ಪ ಎಚ್ಚರ ವಹಿಸಬೇಕಾಗುತ್ತದೆ. ನಮಗೆ ಎಷ್ಟು ಬೇಕೋ ಅಷ್ಟನ್ನೇ ತಿನ್ನುವುದನ್ನು ರೂಢಿ ಮಾಡಿಕೊಳ್ಳಬೇಕು. ಮಿತ ಆಹಾರ ಒಳ್ಳೆಯದು. (ಕಿಡ್ನಿ ಅಥವಾ ಇನ್ನಿತರ ಗಂಭೀರ ಸಮಸ್ಯೆ ಇರುವವರು ವೈದ್ಯರ ಸಲಹೆಯಂತೆ ಆಹಾರ ಪದಾರ್ಥ ಸೇವನೆ ಮಾಡಬೇಕಾಗುತ್ತದೆ)
ಸಿಟ್ಟು ಮತ್ತು ಬಿ.ಪಿ.
ಬಿ.ಪಿ. ಇದ್ದವರಿಗೆ ಸಿಟ್ಟು ಜಾಸ್ತಿ ಎಂಬುದು ಸರಿಯಲ್ಲ. ಸಿಟ್ಟು ಜಾಸ್ತಿಯಾದಾಗ ಬಿ.ಪಿ.ಯೂ ಜಾಸ್ತಿಯಾಗುತ್ತದೆ. ಸಿಟ್ಟು ಕಡಿಮೆಯಾದಂತೆ ಬಿ.ಪಿ. ಸಹಜಸ್ಥಿತಿಗೆ ಬರುತ್ತದೆ. ಅಂದರೆ ಬಿ.ಪಿ.ಯು 110ರಿಂದ 120ರೊಳಗೆ ಇದ್ದಾಗ ಒಮ್ಮೆಗೆ ಸಿಟ್ಟು ಮಾಡಿಕೊಂಡರೆ ಅದು 120ರಿಂದ 130ಕ್ಕೆ ಏರಬಹುದು. ಆ ಸಿಟ್ಟು ಕಡಿಮೆಯಾದಂತೆ ಬಿ.ಪಿ.ಯು ಕಡಿಮೆಯಾಗುತ್ತದೆ. ಬಿ.ಪಿ. ಇದ್ದವರಿಗೆ ಸಿಟ್ಟು ಜಾಸ್ತಿ ಇರುತ್ತದೆ ಅಥವಾ ಇರಬೇಕೆಂದೇನೂ ನಿಯಮ ಇಲ್ಲ. ಆದರೆ, ಸಿಟ್ಟು ಜಾಸ್ತಿಯಾದಾಗ ಬಿ.ಪಿ. ಜಾಸ್ತಿಯಾಗುವುದು ಸಹಜ. ಹೀಗಾಗಿ ತಾಳ್ಮೆ ಹೆಚ್ಚೆಚ್ಚು ಮೈಗೂಡಿಸಿಕೊಳ್ಳಬೇಕು.
ಕನಿಷ್ಠ 6 ಗಂಟೆ ನಿದ್ದೆ ಮಾಡಬೇಕು
ಯಾರೇ ಆದರೂ ಕನಿಷ್ಠ ಆರು ಗಂಟೆ ನಿದ್ದೆ ಮಾಡಬೇಕು. ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವವರಿಗೆ ಹಗಲು ನಿದ್ದೆ ಮಾಡುವುದು ಕಷ್ಟವಾಗಬಹುದು. ಆದರೆ ಕನಿಷ್ಠ 5ರಿಂದ 6 ಗಂಟೆ ದೇಹಕ್ಕೆ ವಿಶ್ರಾಂತಿಯನ್ನು ನಿತ್ಯ ನೀಡಲೇ ಬೇಕು. ಹೀಗಾಗಿ ಹಗಲು ನಿದ್ದೆ ಬರುವುದಿಲ್ಲ ಎಂಬ ಕಾರಣಕ್ಕೆ ಮಗಲದೇ ಇರುವುದು ಸರಿಯಲ್ಲ. ಮಲಗುವ ಮೂಲಕ ದೇಹಕ್ಕೆ ವಿಶ್ರಾಂತಿ ನೀಡಬೇಕು. ಕೆಲಸದ ಒತ್ತಡ ಸಹಜವಾಗಿರುತ್ತದೆ. ಇದನ್ನು ನಿಯಂತ್ರಣಕ್ಕೆ ಯೋಗ ಮಾಡುವುದು ಉತ್ತಮ.
ಪ್ರಶ್ನೋತ್ತರ :
ಫ್ರಾನ್ಸಿನ್ ನೊರೊನ್ಹಾ, ಕೋಟ
– ಬಿ.ಪಿ.ಗೆ ಔಷಧ ತೆಗೆದುಕೊಳ್ಳುತ್ತಿದ್ದರೂ ನಿಯಂತ್ರಣದಲ್ಲಿಲ್ಲ. ಏನು ಮಾಡಬಹುದು?
ಬಿ.ಪಿ. ನಿಯಂತ್ರಣದಲ್ಲಿಲ್ಲದಿದ್ದರೆ ದಿನಕ್ಕೆ ಒಂದು ಮಾತ್ರೆ ತೆಗೆದುಕೊಳ್ಳುವವರು ಎರಡು ಮಾತ್ರೆ ತೆಗೆದುಕೊಳ್ಳಬಹುದು. ಆದರೂ ಈ ಬಗ್ಗೆ ನಿಮ್ಮ ವೈದ್ಯರ ಜತೆ ಒಮ್ಮೆ ಚರ್ಚಿಸುವುದು ಉತ್ತಮ.
ಸೂರಜ್, ಕಾಸರಗೋಡು
– ಸಬ್‌ಡ್ನೂರಲ್ ಹೆಮೋಟಮಾ ಮೂಲಕ ವ್ಯಕ್ತಿಯೊಬ್ಬರು ಕೋಮಾವಸ್ಥೆಯಲ್ಲಿದ್ದಾರೆ ಇದು ಹೇಗೆ?
ಬಿ.ಪಿ.ಯಿಂದಲೂ ಇದು ಬರುವ ಸಾಧ್ಯತೆಗಳಿವೆ. ಮೆದುಳಿಗೆ ತುಂಬಾ ಒತ್ತಡ ಬಂದರೆ ಕಷ್ಟ. ಮುಖ್ಯವಾಗಿ ಬಿ.ಪಿ.ಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಈ ಬಗ್ಗೆ ನ್ಯೂರೋ ಸರ್ಜನ್‌ನಲ್ಲೊಮ್ಮೆ ಮಾತನಾಡುವುದು ಒಳಿತು.
ರಚನಾ ಕೊಕ್ಕಡ/ ಹಮೀದ್, ವಿಟ್ಲ
– ನನ್ನ ತಾಯಿಗೆ 83 ವರ್ಷ. ಶರೀರಕ್ಕೆ ರಕ್ತಸಂಚಾರ ಕಡಿಮೆಯಿದೆ.
80 ವರ್ಷ ಮೇಲ್ಪಟ್ಟ ಶೇ.80ರಷ್ಟು ಮಂದಿಗೆ ಬಿ.ಪಿ. ಸಮಸ್ಯೆ ಇರುತ್ತದೆ. 30 ವರ್ಷದವರಿಗೆ 150 ಬಿ.ಪಿ. ಇರಕೂಡದು. ಇದಕ್ಕೆ ಚಿಕಿತ್ಸೆ ಪಡೆಯಬೇಕು.
ರಮ್ಯಾ ಉಡುಪಿ/ ಅಬೂಬಕರ್, ವಿಟ್ಲ
– ಹೈ ಬಿ.ಪಿ. ಮತ್ತು ಲೋ ಬಿ.ಪಿ. ಗುರುತು ಹೇಗೆ? ಇದಕ್ಕಿರುವ ಚಿಕಿತ್ಸೆಗಳೇನು?
ಲೋ ಬಿ.ಪಿ. ಅನ್ನುವಂತದ್ದು ತುರ್ತುಸ್ಥಿತಿಯಾಗಿದೆ. 100-110 ನಾರ್ಮಲ್ ಆಗಿದೆ. 200ಕ್ಕಿಂತ ಅಧಿಕವಿದ್ದರೆ ಸಮಸ್ಯೆ ಉಲ್ಬಣಿಸಲಿದೆ. ವರ್ಷಕ್ಕೆ ಒಂದು ಅಥವಾ ಎರಡು ಬಾರಿ ಬಿ.ಪಿ. ಪರೀಕ್ಷೆ ಮಾಡುತ್ತಿರಬೇಕು
ಕೃಷ್ಣ ಶೆಟ್ಟಿ, ಐಕಳ/ಹರೀಶ್ ಬೈಂದೂರು
– ಬಿ.ಪಿ. ಇದ್ದವರಿಗೆ ಸಿಟ್ಟು ಹೆಚ್ಚಾಗಿ ಬರುತ್ತದೆಯಾ?
ಬಿ.ಪಿ. ಇದ್ದವರಿಗೆ ಸಿಟ್ಟು ಬರಬೇಕೆಂದೆನಿಲ್ಲ. ಸಿಟ್ಟು ಬಂದಾಗ ಬಿ.ಪಿ. ಹೆಚ್ಚಳವಾಗುತ್ತದೆ. ಬಿ.ಪಿ.ಗೆ ಒಂದು ಬಾರಿ ಔಷಧ ತೆಗೆದುಕೊಂಡರೆ ಅದನ್ನು ಮುಂದುವರಿಸಬೇಕಾಗುತ್ತದೆ. ರಕ್ತದೊತ್ತಡ ಅಧಿಕವಾದರೆ ಮೆದುಳಿಗೂ ಸಮಸ್ಯೆಯಾಗಬಹುದು.
ಜಿಮ್ ಸೇರುವ ಮೊದಲು…
ಇತ್ತೀಚಿನ ವರ್ಷಗಳಲ್ಲಿ ದೇಹವನ್ನು ಸದೃಢವಾಗಿಟ್ಟುಕೊಳ್ಳಲು ಜಿಮ್ ಸೇರುವವರ ಸಂಖ್ಯೆ ಹೆಚ್ಚಾಗಿದೆ. ಜಿಮ್‌ನಲ್ಲಿ ಕಸರತ್ತು ಆರಂಭಿಸುವ ಮೊದಲು ಅಲ್ಲಿರುವ ತರಬೇತುದಾರರ ಮಾರ್ಗದರ್ಶನವನ್ನು ಅಗತ್ಯವಾಗಿ ಪಡೆಯಬೇಕು. ಅನೇಕ ಜಿಮ್‌ಗಳಲ್ಲಿ ಹೊಸಬರಿಗೆ ರಕ್ತದೊತ್ತಡದ ಪರೀಕ್ಷೆ ಮಾಡುವ ವ್ಯವಸ್ಥೆ ಇರುತ್ತದೆ. ಜಿಮ್ ಸೇರುವವರು ಕೂಡ ರಕ್ತದೊತ್ತಡ ಮತ್ತು ಹೃದಯಕ್ಕೆ ಸಂಬಂಧಿಸಿದ ಪ್ರಾಥಮಿಕ ತಪಾಸಣೆಗಳನ್ನು ಕಡ್ಡಾಯವಾಗಿ ಮಾಡಿಸಿಕೊಂಡು ಅನಂತರ ಸೇರುವುದೇ ಒಳ್ಳೆಯದು.
ಕ್ಷಮಾದಾನಕ್ಕೆ ಕ್ಷಮಾಧ್ಯಾನ ಬೇಕು
ಪ್ರತೀ ವಿಷಯಕ್ಕೂ ಸಿಟ್ಟು ಮಾಡಿಕೊಳ್ಳುವುದನ್ನು ಬಿಡಬೇಕು. ಕ್ಷಮಾ ಗುಣವನ್ನು ಮೈಗೂಡಿಸಿಕೊಳ್ಳಬೇಕು. ಇದಕ್ಕಾಗಿ ಕ್ಷಮಾಧ್ಯಾನ ಮಾಡಬೇಕು. ಧ್ಯಾನದಿಂದ ಸಿಗುವ ಆನಂದವೇ ಬೇರೆ. ಹೀಗಾಗಿ ಶರೀರದ ವಿಶ್ರಾಂತಿಗೆ ಕೂಲಿಂಗ್, ಹೀಟಿಂಗ್ ವ್ಯವಸ್ಥೆಯ ಸ್ವಯಂ ನಿಯಂತ್ರಣ ಅಗತ್ಯ. ಯೋಗ ಎಂದರೆ ಕೇವಲ ಆಸನ, ಪ್ರಾಣಾಯಾಮವಲ್ಲ. ನೀವು ನಿಮ್ಮ ಜತೆಗೆ ಎಷ್ಟು ಚೆನ್ನಾಗಿ ಇರುತ್ತಿರಿ ಎಂಬುದೇ ಯೋಗ.
ಮನಸ್ಸಿನ ಸ್ಥಿತಿ ಅರಿಯಿರಿ
ನಮ್ಮಲ್ಲಿ ವಿಚಾರದ ಗತಿ ಹೆಚ್ಚಾದಂತೆ ದೇಹದ ತಾಪವೂ ಸಹಜವಾಗಿ ಏರುತ್ತದೆ. ನಿನ್ನೆ ಮತ್ತು ನಾಳೆಯ ಚಿಂತೆಯಲ್ಲಿ ವರ್ತಮಾನ ( ಇಂದಿನ) ಸುಖಗಳಿಗೆಯನ್ನು ಮರೆತುಬಿಡುತ್ತಿದ್ದೇವೆ. ದೇಹದ ಉಷ್ಣಾಂಶ ಏರಿದಂತೆ ಕಡಿಮೆ ಮಾಡಿಕೊಳ್ಳುವ ವಿಧಾನವೂ ತಿಳಿದಿರಬೇಕು. ಇದಕ್ಕೆ ಮನಸ್ಸಿನ ಸ್ಥಿತಿ ಅರಿಯುವುದು ಅತೀ ಆವಶ್ಯಕ. ವಿಶ್ರಾಂತ ದೇಹ, ಸಹಜ ಶ್ವಾಸ, ಜಾಗೃತ ಮನಸ್ಸು ಪಡೆಯಲು ದಿನದಲ್ಲಿ ಕನಿಷ್ಠ ಅರ್ಧ ಅಥವಾ ಒಂದು ಗಂಟೆ ಮೀಸಲಿಡಬೇಕು. ನಾವು ಮಾಡುವ ವ್ಯಾಯಾಮಕ್ಕೂ ಮೊದಲು ಶರೀರವನ್ನು ಅದಕ್ಕೆ ಸಜ್ಜುಗೊಳಿಸಿಕೊಳ್ಳಬೇಕು. ಇಲ್ಲವಾದರೆ ರಕ್ತದೊತ್ತಡ ಇಲ್ಲದವರಿಗೂ ರಕ್ತದೊತ್ತಡ ಬರುವ ಸಾಧ್ಯತೆ ಇರುತ್ತದೆ ಎಂದು ಡಾ| ಶಿವರಾಜ ವಿ.ಪಾಟೀಲ್ ವಿವರಿಸಿದರು.
ಯಾರ ಶರೀರವೂ ಮೊದಲಿನಂತಿಲ್ಲ
30, 40 ವರ್ಷದ ಹಿಂದಿನವರಿಗೂ ನಮಗೂ ಬಹಳ ವ್ಯತ್ಯಾಸವಿದೆ. ಅವರ ಜೀವನ ಶೈಲಿಯೇ ಬೇರೆಯಾಗಿತ್ತು. ನಮ್ಮ ಜೀವನ ಶೈಲಿಯೇ ಬೇರೆಯಿದೆ. ಎಲುಬುಗಳು ಅವರಷ್ಟು ಗಟ್ಟಿಯಿಲ್ಲ. ಹಿಂದಿನವರು ನಿತ್ಯ ವ್ಯಾಯಾಮ ಮಾಡದೆಯೇ ಆರೋಗ್ಯವಾಗಿದ್ದರೂ ಈಗ ವ್ಯಾಯಾಮ ಮಾಡಿಯೂ ಸದೃಢ ಆರೋಗ್ಯ ಸದಾ ಕಾಪಾಡಿಕೊಳ್ಳುವುದು ಕಷ್ಟವಾಗುತ್ತದೆ. ಇದಕ್ಕೆ ಹಲವು ಕಾರಣಗಳಿವೆ. ಹೀಗಾಗಿ ನಾವೇನು ಮಾಡುತ್ತಿದ್ದೇವೆ ಎಂಬುದನ್ನು ಸ್ಪಷ್ಟ ಮಾಡಿಕೊಳ್ಳಬೇಕು. ಆಹಾರ ಪದ್ಧತಿಯ ಬಗ್ಗೆ ನಿಗಾ ಇರಬೇಕು.
ಬ್ರಿಕ್ಸ್ ವಾಕ್ ಬಗ್ಗೆಯೂ ಎಚ್ಚರ ಇರಲಿ
ಬ್ರಿಕ್ಸ್ ವಾಕ್ ಮಾಡುವಾಗ ಎಚ್ಚರವಹಿಸಬೇಕು. ವಾಕ್ ಮಾಡುವ ಸಂದರ್ಭದಲ್ಲಿ ಕೆಲವು ಅಂಶಗಳನ್ನು ಗಮನಿಸಬೇಕಾಗುತ್ತದೆ. ನಾವೆಷ್ಟು ವೇಗವಾಗ ನಡೆಯುತ್ತೇವೆ ಎನ್ನುವುದಕ್ಕಿಂತ ನಡೆಯುವ ಸಂದರ್ಭದಲ್ಲಿ ಕೈಗಳಿಗೆ ಎಷ್ಟು ಚಲನೆ ನೀಡುತ್ತೇವೆ ಮತ್ತು ದೇಹದ ವಿವಿಧ ಅಂಗಳನ್ನು ಅದಕ್ಕೆ ಎಷ್ಟರ ಮಟ್ಟಿಗೆ ಸಜ್ಜುಗೊಳಿಸಿಕೊಂಡಿದ್ದೇವೆ ಎಂಬಿತ್ಯಾದಿ ಎಲ್ಲವೂ ಗಣನೆಗೆ ಬರುತ್ತದೆ. ಕ್ಯಾಲರಿ ಬರ್ನಿಂಗ್ ಮಾತ್ರವಲ್ಲ ದೇಹ, ಶ್ವಾಸ, ಮನೋವೃತ್ತಿಯ ಅರಿವು ಇರಬೇಕು.
ಪ್ರಶ್ನೋತ್ತರ
ಪ್ರಕಾಶ್ ಪಡಿಯಾರ್, ಮರವಂತೆ
– ಜೀವನ ಶೈಲಿಗೂ ಬಿ.ಪಿ.ಗೂ ಸಂಬಂಧವಿದೆಯಾ?
ದೇಶ ವಿಶ್ರಾಂತ ಸ್ಥಿತಿಯಲ್ಲಿ ಎಷ್ಟು ಸಮಯವಿರುತ್ತದೆ ಹಾಗೂ ಉಸಿರಾಟಕ್ಕೆ ಇರುವ ಸಂಬಂಧವನ್ನು ಅನುಸರಿಸಿರುತ್ತದೆ. ವಿಶ್ರಾಂತ ಸ್ಥಿತಿಯಲ್ಲಿರುವಾಗ ಮನೆ, ಸಂಸಾರ, ವ್ಯವಹಾರದ ಬಗ್ಗೆ ಗಮನ ಬಿಟ್ಟು ತಮ್ಮನ್ನು ತಾವು ಅರಿತುಕೊಳ್ಳಬೇಕು. ಕೆಲವೊಂದು ಭಂಗಿಗಳಲ್ಲಿ ಕುಳಿತುಕೊಳ್ಳುವುದರಿಂದ ರಿಲ್ಯಾಕ್ಸ್ ಹೊಂದಲು ಸಾಧ್ಯವಿದೆ. ಸ್ಥಿರಂ-ಸುಖಾಸನಂ ಮಾಡಬೇಕು. ದೈಹಿಕ, ಮಾನಸಿಕ ಆತಂಕಗಳನ್ನೆಲ್ಲ ಬಗೆಹರಿಸಿಕೊಳ್ಳಬೇಕು. ಪ್ರಾಣಾಯಾಮ, ಯೋಗ ಶಾಸ್ತ್ರಗಳ ಬಗ್ಗೆಯೂ ಗಮನಹರಿಸಬೇಕು. ಪ್ರಾಣಾಯಾಮ, ನಾಡಿಶುದ್ದಿ, ದೀರ್ಘ ಉಚ್ಛಾರಣೆ ಮಾಡಬೇಕು. ವಿಶ್ರಾಂತ ದೇಹ, ಸಹಜ ಶ್ವಾಸ, ನಿರಾತಂಕ ಮನಸ್ಸು ಇರಬೇಕು.
ರಾಜಶೇಖರ್, ಇಳಕಲ್
– ಬಿ.ಪಿ. ರೋಗಿಗಳು ನಿತ್ಯವೂ ಔಷಧ ತೆಗೆದುಕೊಳ್ಳಬೇಕೇ?
ಬಿ.ಪಿ. ಔಷಧ ದಿನನಿತ್ಯ ತೆಗೆದುಕೊಳ್ಳಬೇಕು. ಒಂದು ದಿನ ಮಾತ್ರ ಅದು ಕೆಲಸ ಮಾಡುತ್ತದೆ. ಉಪ್ಪು ಸೇವನೆ ಕಡಿಮೆ ಮಾಡಬೇಕು.
ಜಯಪ್ರಕಾಶ್, ಮಂಗಳೂರು/ ಸಂತೋಷ್, ಕಾಪು
– ಅಧಿಕ ರಕ್ತದೊತ್ತಡಕ್ಕೆ ಜೀವನಶೈಲಿ, ಆಹಾರಕ್ರಮ ಕಾರಣವೇ? ಈ ಬಗ್ಗೆ ಆರೋಗ್ಯ ಸಂಸ್ಥೆಗಳು ಜಾಗೃತಿ ಮೂಡಿಸುತ್ತಿವೆಯೇ?
ಆಸ್ಪತ್ರೆಗಳಿಗೆ ಬರುವ ರೋಗಿಗಳಿಗೆ ಆಹಾರ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿಯೂ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಜೀವನಶೈಲಿ ಬಗ್ಗೆ ಪ್ರತಿಯೊಬ್ಬರೂ ಜಾಗರೂಕರಾಗಿರಬೇಕು. ಮುಖ್ಯವಾಗಿ ಮನಸ್ಸನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಉತ್ತಮ.
ಕೀರ್ತನ್, ಬಂಟ್ವಾಳ/ಪ್ರೀತಿ ಉಡುಪಿ
– ಹಗಲು ಹಾಗೂ ರಾತ್ರಿ ವೇಳೆ ಕೆಲಸ ಮಾಡುವವರಿದ್ದಾರೆ. ನಿದ್ದೆ ಇಲ್ಲದಿದ್ದರೆ ರಕ್ತದೊತ್ತಡ ಬರುತ್ತದೆಯೇ? ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡಬೇಕು?
6 ಗಂಟೆಗಳ ಕಾಲ ನಿದ್ದೆ ಕಡ್ಡಾಯ. 8ರಿಂದ 9 ಗಂಟೆ ಮಾಡಿದರೂ ಪರವಾಗಿಲ್ಲ. ನಿದ್ದೆ ಇಲ್ಲದಿದ್ದರೂ ವಿಶ್ರಾಂತಿ ಮಾಡುವುದು ಅಗತ್ಯ. ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡುತ್ತಿರಬೇಕು.
ಸೂರಜ್, ಕಾರ್ಕಳ
– ಜಾಗಿಂಗ್ ವೇಳೆ ಸಂಗೀತ ಆಲಿಸುವುದು ಸರಿಯಾದ ಕ್ರಮವೇ?
ಸಂಗೀತ ಆಲಿಸಿಕೊಂಡು ಜಾಗಿಂಗ್ ಮಾಡುವುದು ತಪ್ಪಲ್ಲ. ಆದರೆ ಕರ್ಕಶ ಶಬ್ದಗಳು ಒಳ್ಳೆಯದಲ್ಲ. ಎಷ್ಟು ವೇಗದಲ್ಲಿ ನಡೆಯಲು ಸಾಧ್ಯವಾಗುತ್ತದೆಯೋ ಅಷ್ಟು ವೇಗದಲ್ಲಿ ನಡೆಯಬೇಕು. ಬ್ರಿಕ್ಸ್ ವಾಕ್ ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ
Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ
Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.