ಕ್ಯಾನ್ಸರ್ ಸತ್ಯ ಮತ್ತು ಮಿಥ್ಯೆ
ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಕ್ಯಾನ್ಸರ್ ಜೀವಕೋಶಗಳು ಉತ್ಪತ್ತಿಯಾಗುವ ಸಾಧ್ಯತೆ
Team Udayavani, Nov 7, 2020, 11:45 AM IST
ಕ್ಯಾನ್ಸರ್ ಎಂಬುದು ದಿನೇ ದಿನೆ ಹೆಚ್ಚು ಸಾಮಾನ್ಯವಾಗುತ್ತಿರುವ ಆಧುನಿಕ ಕಾಯಿಲೆಗಳಲ್ಲೊಂದು. ಇದಕ್ಕೆ ಬದಲಾಗುತ್ತಿರುವ ನಮ್ಮ ಜೀವನಕ್ರಮ ಹಾಗೂ ಆಹಾರ ಪದ್ಧತಿ ಸಹಿತ ಹಲವಾರು ಕಾರಣಗಳಿವೆ. ಕ್ಯಾನ್ಸರ್ ಬಗ್ಗೆ ವೈದ್ಯ ವಿಜ್ಞಾನದ ಅರಿವು ಹೆಚ್ಚುತ್ತಿರುವಂತೆಯೇ, ಸಮಾಜದಲ್ಲಿ ಈ ಕಾಯಿಲೆಯ ಬಗೆಗಿನ ತಪ್ಪು ನಂಬಿಕೆಗಳೂ ವ್ಯಾಪಕ ವಾಗುತ್ತಿರುವುದು ವಿಪರ್ಯಾಸ. ಇಂತಹ ತಪ್ಪು ತಿಳಿವಳಿಕೆಗಳನ್ನು ಹೋಗಲಾಡಿಸುವುದೇ ಈ ಲೇಖನದ ಮೂಲ ಉದ್ದೇಶ.
ಕ್ಯಾನ್ಸರ್‌ನ ಬಗ್ಗೆ ಮನಸ್ಸಿನಲ್ಲಿ ಭೀತಿ ಇಲ್ಲದವರಿಲ್ಲ. ಹಲವರು, ತಮ್ಮ ಹತ್ತಿರದ ಸಂಬಂಧಿಗಳಲ್ಲೇ ಯಾರೋ ಓರ್ವರನ್ನು ಕ್ಯಾನ್ಸರ್ ಬಲಿ ತೆಗೆದುಕೊಂಡಿರುವುದನ್ನು ಕಂಡೂ ಇರುತ್ತಾರೆ. ಇದರಿಂದಾಗಿ ಕ್ಯಾನ್ಸರ್ ಬಗ್ಗೆ ಇರುವ ಅವ್ಯಕ್ತ ಭೀತಿ ಹೆಚ್ಚಾಗಿ ಇನ್ನೂ ಹೆಚ್ಚಿನ ಅಪನಂಬಿಕೆಗಳು ಹುಟ್ಟಿಕೊಳ್ಳುತ್ತವೆ. ಈ ರೀತಿಯ ಅಪನಂಬಿಕೆಗಳ್ಳೋ ತಪ್ಪು ಮಾಹಿತಿಯೋ ಏನೋ ಒಂದು ಸುಶಿಕ್ಷಿತ ವರ್ಗದಲ್ಲಿಯೂ ವ್ಯಾಪಕವಾಗಿರುವುದು ಕುತೂಹಲಕರ. ಹಾಗಾದರೆ ಸತ್ಯ ಯಾವುದು? ತಿಳಿಯೋಣ ಬನ್ನಿ. ಮೊದಲು ಕ್ಯಾನ್ಸರ್ ಬಗ್ಗೆ ಇರಬಹುದಾದ ತಪ್ಪು ನಂಬಿಕೆಯನ್ನು ಬಿಂಬಿಸಿ ಬಳಿಕ ಸತ್ಯವೇನೆಂಬುದನ್ನು ವಿವರಿಸಲಾಗಿದೆ.
ತಪ್ಪು ನಂಬಿಕೆಗಳು
1. ಕ್ಯಾನ್ಸರ್ ವಾಸಿಯಾಗದ ಕಾಯಿಲೆ
ವಾಸಿ ಮಾಡಲು ಕಷ್ಟ ಸಾಧ್ಯ ಅಥವಾ ಅಸಾಧ್ಯ ಎನ್ನಬಹುದಾದ ಕೆಲವು ಪ್ರಭೇದದ ಕ್ಯಾನ್ಸರ್‌ಗಳು ಇರುವುದು ನಿಜವಾದರೂ ಹೆಚ್ಚಿನ ಕ್ಯಾನ್ಸರ್‌ಗಳು ಆರಂಭಿಕ ಹಂತದಲ್ಲಿ ಸೂಕ್ತ ಚಿಕಿತ್ಸೆ ನೀಡಿದ್ದೇ ಆದರೆ ಗುಣವಾಗುತ್ತವೆ. ಕೆಲವು ಜಾತಿಯ ಕ್ಯಾನ್ಸರ್‌ಗಳಂತೂ ಶೇ. 100 ವಾಸಿಯಾಗುತ್ತವೆ. ವಿವರ ಇಲ್ಲಿ ಅಪ್ರಸ್ತುತ.
2. ಕ್ಯಾನ್ಸರ್‌ಗೆ ಶಸ್ತ್ರಚಿಕಿತ್ಸೆಯೇ ಮುಖ್ಯ ಚಿಕಿತ್ಸೆ
ಶಸ್ತ್ರ ಚಿಕಿತ್ಸೆ ಎಂಬುದು ಹಲವಾರು ರೀತಿಯ ಕ್ಯಾನ್ಸರ್‌ಗಳ ಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸುವುದು ನಿಜವಾದರೂ ಹಲವಾರು ಬಾರಿ ಪೂರಕ ಚಿಕಿತ್ಸೆಗಳಾದ ಕಿಮೋಥೆರಪಿ ಹಾಗೂ ವಿಕಿರಣ ಚಿಕಿತ್ಸೆಗಳು ಶಸ್ತ್ರಚಿಕಿತ್ಸೆಯಷ್ಟೇ ಮುಖ್ಯವಾಗುವುದಿದೆ. ಉದಾಹರಣೆಗೆ: ಗಂಟಲಿನ ಕ್ಯಾನ್ಸರ್‌ನಲ್ಲಿ ವಿಕಿರಣ ಚಿಕಿತ್ಸೆ ಹಾಗೂ ಸ್ತನದ ಕ್ಯಾನ್ಸರ್‌ನಲ್ಲಿ ಕೀಮೋಥೆರಪಿಯ ಪಾತ್ರ ಶಸ್ತ್ರ ಚಿಕಿತ್ಸೆಯಷ್ಟೇ ಪ್ರಮುಖವಾದದ್ದು.
3. ಶಸ್ತ್ರ ಚಿಕಿತ್ಸೆ ಇಲ್ಲದೇ ಯಾವುದೇ ಕ್ಯಾನ್ಸರ್ ಗುಣವಾಗುವುದಿಲ್ಲ
ಇದು ತಪ್ಪು ಮಾಹಿತಿ. ಬಾಯಿ, ಗಂಟಲು, ಶ್ವಾಸಕೋಶ ಅನ್ನನಾಳ, ಗರ್ಭಕೋಶದ ಕೊರಳು ಇತ್ಯಾದಿ ಅಂಗಗಳ ಕ್ಯಾನ್ಸರ್‌ಗಳು ಬರಿಯ ವಿಕಿರಣ ಚಿಕಿತ್ಸೆಯಿಂದ ಗುಣವಾಗಬಲ್ಲವು.ಇದಲ್ಲದೆ ಲ್ಯುಕೀಮಿಯಾ (ರಕ್ತದ ಕ್ಯಾನ್ಸರ್) ಹಾಗೂ ಲಿಂಫೋಮಾ (ದುಗ್ಧಗ್ರಂಥಿಯ ಕ್ಯಾನ್ಸರ್)ಬರಿಯ ಕಿಮೋಥೆರಪಿಯಿಂದ ಗುಣವಾಗುವಂಥವು.
4.ಆಯುರ್ವೇದ ಯಾ ಪರ್ಯಾಯ ಚಿಕಿತ್ಸೆಯಿಂದ ಕ್ಯಾನ್ಸರ್ ಅನ್ನು ವಾಸಿಯಾಗಿಸಬಹುದು
ಆಧುನಿಕ ಚಿಕಿತ್ಸಾ ಪದ್ಧತಿಯಿಂದ ಲಕ್ಷಾಂತರ ಮಂದಿ ಜಗತ್ತಿನಾದ್ಯಂತ ವಾಸಿಯಾಗಿದ್ದಾರೆ. ಈ ವಾಸಿಯಾಗುವಿಕೆ ವೈಜ್ಞಾನಿಕವಾಗಿ ಸಿದ್ಧಪಟ್ಟಿದ್ದು ಜಗತ್ತಿನ ಯಾವುದೇ ಮೂಲೆಯಲ್ಲಿನ ಆಸ್ಪತ್ರೆಯಲ್ಲಿಯೂ ಒಂದೇ ರೀತಿಯ ಸತ್ಪರಿಣಾಮವನ್ನು ಪಡೆಯುವುದು ಸಾಧ್ಯ.
ಆದರೆ ಪರ್ಯಾಯ ಚಿಕಿತ್ಸಾ ಪದ್ಧತಿಯಲ್ಲಿ ಆಲ್ಲೊಂದು ಇಲ್ಲೊಂದು ರೋಗಿಯ ಕಾಯಿಲೆ ವಾಸಿಯಾಗಿದೆ ಎಂಬ ಮಾತು ಕೇಳಿ ಬರುತ್ತದಾದರೂ ನಿರ್ದಿಷ್ಟ ಕ್ಯಾನ್ಸರ್‌ಗೆ ನಿರ್ದಿಷ್ಟ ಔಷಧ ಎಂಬುದಾಗಿ ನಿಖರ ಪರಿಣಾಮದ ಯಾವುದೇ ಔಷಧ ಪರ್ಯಾಯ ಪದ್ಧತಿಗಳಿಂದ ಮಾರುಕಟ್ಟೆಗೆ ಬಂದಂತಿಲ್ಲ. ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಪದ್ಧತಿಯನ್ನು ಧಿಕ್ಕರಿಸಿ ಪರ್ಯಾಯ ಚಿಕಿತ್ಸೆಗೆ ಮೊರೆ ಹೋಗುವುದು ಅಪಾಯಕ್ಕೆ ಆಹ್ವಾನವಿತ್ತಂತೆ ಎಂಬುದು ನಿಸ್ಸಂಶಯ.
5. ಕ್ಯಾನ್ಸರ್‌ಗೆ ಇತರರಿಗೆ ಹರಡಬಹುದು
ಇದು ಶುದ್ಧಾಂಗ ಸುಳ್ಳು. ಅದೃಷ್ಟವಶಾತ್ ಈ ತಪ್ಪು ನಂಬಿಕೆ ಇತ್ತೀಚೆಗೆ ಕಡಿಮೆಯಾಗುತ್ತಲಿದೆ. ಕ್ಯಾನ್ಸರ್ ಎಂಬುದು ದೇಹದ ಜೀವಕೋಶಗಳಲ್ಲಿ ಅಸಹಜ ಮಾರ್ಪಾಟಿನಿಂದ ಉಂಟಾಗುವ ವಿಶಿಷ್ಟ ಕಾಯಿಲೆ. ಅದು ಸೋಂಕು ರೋಗವಲ್ಲ. ಆದ್ದರಿಂದ ಕ್ಯಾನ್ಸರ್ ಪೀಡಿತರ ಶುಶ್ರೂಷೆಗೆ ಹಿಂಜರಿಯುವ ಪ್ರಮೇಯವಿಲ್ಲ.
6. ಕ್ಯಾನ್ಸರ್ ವಯಸ್ಕರ ಕಾಯಿಲೆ
ವಯಸ್ಸಾದಂತೆಲ್ಲಾ ದೇಹದ ರೋಗ ನಿರೋಧಕ ಶಕ್ತಿ ಕುಂಠಿತವಾಗುವುದರಿಂದ ಕ್ಯಾನ್ಸರ್ ಜೀವಕೋಶಗಳು ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಾಗುವುದು ನಿಜ. ಆದರೆ ಕೇವಲ ಇದೊಂದೇ ಕಾರಣಕ್ಕೆ ಮಕ್ಕಳಲ್ಲಿ ಯಾ ತರುಣರಲ್ಲಿ ಕ್ಯಾನ್ಸರ್ ಬರಲಾರದು ಎನ್ನುವಂತಿಲ್ಲ. ಉದಾಹರಣೆಗೆ, ಲ್ಯುಕೇಮಿಯಾ (ರಕ್ತದ ಕ್ಯಾನ್ಸರ್) ಮಕ್ಕಳಲ್ಲೇ ಹೆಚ್ಚು. ಲಿಂಫೋಮಾ ಹೆಚ್ಚಾಗಿ ತರುಣರಲ್ಲಿ ಕಾಣಸಿಗುವ ಕಾಯಿಲೆ.
7. ಎಲ್ಲಾ ಕ್ಯಾನ್ಸರ್‌ಗಳೂ ಒಂದೇ ವೇಗದಲ್ಲಿ ಬೆಳೆಯುತ್ತವೆ.ಹಾಗೇನಿಲ್ಲ. ಯಾವುದೇ ಚಿಕಿತ್ಸೆಗೆ ಬಗ್ಗದೇ ಕೆಲವೇ ತಿಂಗಳುಗಳಲ್ಲಿ ರೋಗಿಯನ್ನು ಬಲಿತೆಗೆದುಕೊಳ್ಳುವ ಕ್ಯಾನ್ಸರ್‌ಗಳಿರುವಂತೆಯೇ ಯಾವುದೇ ಚಿಕಿತ್ಸೆ ಇಲ್ಲದೆಯೂ ವರ್ಷಾನುಗಟ್ಟಲೆ ನಿಧಾನವಾಗಿ ಬೆಳೆಯುವ ಕ್ಯಾನ್ಸರ್‌ಗಳೂ ಇವೆ!
8. ಕ್ಯಾನ್ಸರ್ ತನ್ನ ಸುತ್ತಮುತ್ತಲಿನ ಅಂಗಗಳಲ್ಲಿ ‘ಮರಿ’ ಇಡುತ್ತದೆ ಎಂಬುದೊಂದು ಜನಪ್ರಿಯ ನಂಬಿಕೆ. ಇಂತಹ ಕ್ಯಾನ್ಸರ್‌ಗೆ ‘ಹೆಣ್ಣು’ ಕ್ಯಾನ್ಸರ್ ಎಂದೂ ‘ಮರಿ’ ಇಡದಿದ್ದಲ್ಲಿ ‘ಗಂಡು’ ಕ್ಯಾನ್ಸರ್ ಎಂದೂ ನಂಬುವವರಿದ್ದಾರೆ. ಅವರ ಲೆಕ್ಕಾಚಾರದ ಪ್ರಕಾರ ಹೆಣ್ಣು ಕ್ಯಾನ್ಸರ್ ಗಂಡು ಕ್ಯಾನ್ಸರಿಗಿಂತ ಕೆಟ್ಟದ್ದು! ಇದೆಲ್ಲಾ ಬರಿ ಕಪೋಲ ಕಲ್ಪಿತ ಸುಳ್ಳು. ಕ್ಯಾನ್ಸರ್‌ಗಳು ದೇಹದ ಯಾವುದೇ ಭಾಗಕ್ಕೆ ಹರಡುವ ಸಾಮರ್ಥ್ಯ ಹೊಂದಿರುತ್ತವೆ. ಹಾಗಾಗಿಯೇ ಅವು ಪ್ರಾಣಾಂತಿಕ ಕಾಯಿಲೆಗಳು. ಅದರಲ್ಲಿ ಗಂಡು – ಹೆಣ್ಣು ಎಂಬುದಿಲ್ಲ.
9. ಒಬ್ಬರಿಗೆ ಒಂದಕ್ಕಿ,ತ ಹೆಚ್ಚು ಬಾರಿ ಕ್ಯಾನ್ಸರ್ ಬರುವುದಿಲ್ಲ.ಏಕಕಾಲಕ್ಕೆ ಎರಡು ವಿಭಿನ್ನ ಕ್ಯಾನ್ಸರ್‌ಗಳಿರುವುದು ಸಾಧ್ಯ. ಒಂದು ಕ್ಯಾನ್ಸರ್‌ನಿಂದ ಚೇತರಿಸಿಕೊಂಡ ಅನಂತರ ಮಗದೊಂದು ಕ್ಯಾನ್ಸರ್ ಬರುವುದೂ ಇದೆ. ದೇಹದಲ್ಲಿನ ಕ್ಯಾನ್ಸರ್ ನಿರೋಧಕ ಶಕ್ತಿ ಕುಂಠಿತವಾಗಿರುವವರಲ್ಲಿ ಈ ರೀತಿಯ ಸಾಧ್ಯತೆ ಹೆಚ್ಚು.
ಮೇಲೆ ವಿವರಿಸಲಾದ ತಪ್ಪು ಕಲ್ಪನೆಗಳಲ್ಲದೆ ಕ್ಯಾನ್ಸರ್ ಕಾಯಿಲೆಯ ಬಗ್ಗೆ ಜನರ ಮನಸ್ಸಿನಲ್ಲಿರುವ ಇತರ ಸಾಮಾನ್ಯ ಪ್ರಶ್ನೆಗಳನ್ನು (FAQs) ಈ ರೀತಿ ಉತ್ತರಿಸಬಹುದು.
a) ಕ್ಯಾನ್ಸರ್ ಆನುವಂಶಿಕವಾಗಿ ಬಾರಬಹುದೇ?
ಸಾಧ್ಯ. ಉದಾಹರಣೆಗೆ ಸ್ತನದ ಕ್ಯಾನ್ಸರ್ ಕೆಲ ಸಂದರ್ಭಗಳಲ್ಲಿ ಆನುವಂಶಿಕವಾಗಿ ಉಂಟಾಗಬಹುದು.
b) ಕ್ಯಾನ್ಸರ್ ಕಾಯಿಲೆ ಬರದಂತೆ ತಡೆಗಟ್ಟಬಹುದೇ?
ಶೇ. 100 ತಡೆಸಾಧ್ಯವಿಲ್ಲ. ಸಮತೋಲಿತ ಆಹಾರ, ನೈಸರ್ಗಿಕ ಜೀವನ ಪದ್ಧತಿ ಹಾಗೂ ನಿಯಮಿತ ವ್ಯಾಯಾಮ ಇತ್ಯಾದಿಗಳ ಮೂಲಕ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ತುಸು ಮಟ್ಟಿಗೆ ಉಪಯುಕ್ತ. ಉಳಿದಂತೆ ವಂಶವಾಹಿ ಜೀನ್‌ಗಳ ಬಗ್ಗೆ ಸಂಶೋಧನೆ, ಕ್ಯಾನ್ಸರ್ ನಿರೋಧಕ ಲಸಿಕೆ ಇತ್ಯಾದಿಗಳ ಬಗ್ಗೆ ಆಧುನಿಕ ವೈದ್ಯ ವಿಜ್ಞಾನ ಗಮನ ಕೇಂದ್ರೀಕರಿಸಿದ್ದು ಮುಂದೊಂದು ದಿನ ಕ್ಯಾನ್ಸರ್ ತಡೆಗಟ್ಟುವುದು ಸಾಧ್ಯವಾದರೆ ಆಶ್ಚರ್ಯವಿಲ್ಲ.
c) ಕ್ಯಾನ್ಸರ್ ಇರುವಿಕೆ ರಕ್ತ ಪರೀಕ್ಷೆಯ ಮೂಲಕ ಪತ್ತೆ ಹಚ್ಚಲು ಸಾಧ್ಯವೆ?
ಕೆಲವೊಮ್ಮೆ ಸಾಧ್ಯ. ಉದರದಲ್ಲಿನ ಕರುಳಿನ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ಯಕೃತ್ತಿನ ಕ್ಯಾನ್ಸರ್. ಮೇದೋಜೀರಕಾಂಗದ ಕ್ಯಾನ್ಸರ್‌ಗಳ ಇರುವಿಕೆ ಕೆಲವೊಮ್ಮೆ (ಎಲ್ಲಾ ಬಾರಿ ಅಲ್ಲ!) ರಕ್ತ ಪರೀಕ್ಷೆಗಳ ಮೂಲಕ ಪತ್ತೆ ಹಚ್ಚಬಹುದು. ಈ ಕ್ಯಾನ್ಸರ್‌ಗಳು ಉತ್ಪಾದಿಸುವ ಕೆಲವೊಂದು ಜೈವಿಕ ರಾಸಾಯನಿಕಗಳು ರಕ್ತದಲ್ಲಿ ಕಾಣುವುದುಂಟು ಉದಾ: ಅಂಡಾಶಯದ ಕ್ಯಾನ್ಸರ್‌ನಲ್ಲಿ ಇಅ 125 ಎಂಬ ರಾಸಾಯನಿಕ ರಕ್ತದಲ್ಲಿ ಕಂಡು ಬರುತ್ತದೆ.
d) ವೈದ್ಯರು ‘ಟ್ಯೂಮರ್’ ಎಂದಾಕ್ಷಣ ಕ್ಯಾನ್ಸರ್ ಎಂದರ್ಥವೇ?
ಟ್ಯೂಮರ್ ಎಂದರೆ ಗೆಡ್ಡೆ ಎಂದರ್ಥ ಅಷ್ಟೇ. ಟ್ಯೂಮರ್ ಗೆಡ್ಡೆಗಳಲ್ಲಿ ಪ್ರಾಣಾಂತಿಕವಲ್ಲದ ಗೆಡ್ಡೆಗಳಿವೆ. ಬಿನೈನ್ ಟ್ಯೂಮರ್ ಎನ್ನುತ್ತಾರೆ. ಪ್ರಾಣಾಂತಿಕವಾಗುವ ಲಕ್ಷಣಗಳನ್ನು ಹೊಂದಿರುವುವು. ಮ್ಯಾಲಿಗ್ನೆಂಟ್ ಅನ್ನಿಸಿಕೊಳ್ಳುತ್ತವೆ. ಮ್ಯಾಲಿಗ್ನೆಂಟ್ ಟ್ಯೂಮರ್‌ಗೆ ಇನ್ನೊಂದು ಹೆಸರು ಕ್ಯಾನ್ಸರ್.
e) ಸಾರ್ಕೋಮಾ ಎಂದರೇನು?
ಇದು ಸುಶಿಕ್ಷಿತರು ಹೆಚ್ಚಾಗಿ ಕೇಳುವ ಪ್ರಶ್ನೆ. ಇದು ಕೂಡ ಒಂದು ರೀತಿಯ ಕ್ಯಾನ್ಸರ್. ಮಾಂಸ, ಮಜ್ಜೆ, ಎಲುಬು ಇತ್ಯಾದಿ ಅಂಗಾಂಶಗಳಲ್ಲಿ ಉಂಟಾಗುವ ಕ್ಯಾನ್ಸರ್‌ಗೆ ಸಾರ್ಕೋಮಾ ಎನ್ನುತ್ತಾರೆ. ಗ್ರಂಥಿಗಳಲ್ಲಿ ಉಂಟಾಗುವ ಕ್ಯಾನ್ಸರ್ ಕಾರ್ಸಿನೋಮಾ ಎಂದು ವೈದ್ಯಕೀಯವಾಗಿ ಕರೆಯಲಾಗುತ್ತದೆ. ಉದಾ: ಸ್ತನದ ಕ್ಯಾನ್ಸರ್, ಮೇದೋಜೀರಕದ ಕ್ಯಾನ್ಸರ್, ಥೈರಾಯಿಡ್ ಕ್ಯಾನ್ಸರ್ ಇತ್ಯಾದಿ.ಇದಲ್ಲದೆಯೂ ಹಲವಾರು ಪ್ರಶ್ನೆಗಳು ಜನಮಾನಸದಲ್ಲಿ ಇರುವುದು ಸಾಧ್ಯ. ಜನರು ತಮ್ಮಲ್ಲಿನ ಸಂಶಯಗಳನ್ನು ಪರಿಹರಿಸಿಕೊಳ್ಳಬೇಕಿದ್ದಲ್ಲಿ ಇಂಟರ್‌ನೆಟ್ ಜಾಲತಾಣಗಳಿಂದಲೂ ಮಾಹಿತಿ ಪಡೆಯಬಹುದು. ಆದರೆ, ಗೂಗಲ್‌ನಲ್ಲಿ ಅರೆಬೆಂದ ಮಾಹಿತಿಗಳೂ ಲಭ್ಯವಿರುವ ಕಾರಣ ಮಾಹಿತಿ ಪಡೆಯುವ ಜಾಲತಾಣದ ಆಯ್ಕೆ ಎಚ್ಚರದಿಂದ ಮಾಡಬೇಕಾಗುತ್ತದೆ. ಸಮೀಪದ ಆಸ್ಪತ್ರೆಯಲ್ಲಿನ ತಜ್ಞ ವೈದ್ಯರನ್ನು ಸಂಪರ್ಕಿಸುವುದು ಹಳೆಯದಾದರೂ ಸುಲಭ ಮತ್ತು ಸುರಕ್ಷಿತ ವಿಧಾನ!
– ಡಾ| ಶಿವಾನಂದ ಪ್ರಭು,
ಪ್ರೊಫೆಸರ್, ಸರ್ಜರಿ ವಿಭಾಗ,
ಕೆ.ಎಂ.ಸಿ., ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Substitutes: ರಾಜಕೀಯ ಬಿರುಗಾಳಿ ಎಬ್ಬಿಸಿದ ಮಧ್ಯಪ್ರದೇಶ ಶಿಕ್ಷಣ ಸಚಿವರ ಬದಲಿ ಹೇಳಿಕೆ
Ex PM:ಪ್ರಚಾರದಿಂದ ದೂರ- ದೇಶ ಕಂಡ ಸರಳ, ಸಜ್ಜನಿಕೆಯ ಮೊದಲ ಆರ್ಥಿಕ ತಜ್ಞ ಪ್ರಧಾನಿ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.