ಮಕ್ಕಳಲ್ಲಿ ಅರಳುವ ಭಾವನೆಗಳು
Team Udayavani, Mar 26, 2017, 3:45 AM IST
ನಮ್ಮೆಲ್ಲರಿಗೂ ಭಾವನೆಗಳು ಸಹಜವೆ? ಹೌದು. ಖುಶಿ, ದುಃಖ, ಕೋಪ, ಮತ್ಸರ, ಆತಂಕ ಇತ್ಯಾದಿ ಭಾವನೆಗಳು ಜೀವನದ ಸಹಜ ಗತಿಯ ಓಟದಲ್ಲಿ ಮೈಲೇಜು ಹೆಚ್ಚಿ ಸುವಂತಹವು. ಹಾಗಾದರೆ ಮಕ್ಕಳಿಗೂ ಭಾವನೆಗಳು ಇರಲೇಬೇಕು! ಆದರೆ, ನಾವೆಲ್ಲ ಮಕ್ಕಳ ಭಾವನೆಗಳನ್ನು ಎಷ್ಟು ಅರ್ಥಮಾಡಿಕೊಂಡಿದ್ದೇವೆ? ಬಹುಶಃ ದೊಡ್ಡವರು ಈ ಪ್ರಶ್ನೆಯನ್ನು ಯಾವತ್ತೂ ಕೇಳಿಕೊಂಡಿರುವುದಿಲ್ಲ. ಮುದ್ದಾದ ಮಗುವನ್ನು ಕಾಣಲು ತವಕಿಸುವ ಹೆತ್ತವರು ಮಗು ಕೂಡಾ ತಮ್ಮದೆ ಭಾವನೆಗಳ ಗುತ್ಛವೆಂದು ಊಹಿಸಿರುವುದಿಲ್ಲ. ಸತ್ಯವೇನೆಂದರೆ ಭಾವನೆಗಳು ಮಕ್ಕಳ ಬೆಳವಣಿಗೆಯ ಹಂತವನ್ನು ತಿಳಿಸಿಕೊಡುತ್ತವೆ. ಮಕ್ಕಳಲ್ಲಿನ ಭಾವನೆಗಳು ಸಹಜವಾಗಿರುತ್ತವೆ ಮತ್ತು ಇವು ಮಕ್ಕಳ ವ್ಯಕ್ತಿತ್ವ ಬೆಳವಣಿಗೆಯ ಬಗ್ಗೆ ಸಾಕಷ್ಟು ಮಾಹಿತಿಯನ್ನು ಒದಗಿಸುತ್ತವೆ. ಚಿಕ್ಕಮಕ್ಕಳು ಸಹಜವಾಗಿ ಕ್ಲಿಷ್ಟ ಭಾವನೆಗಳನ್ನು ಅರ್ಥೈಸಲು ಮತ್ತು ತೋರಿಸಲು ಪಕ್ವವಾಗಿರುವುದಿಲ್ಲ. ಆರಂಭದಲ್ಲಿನ ಭಾವನೆಗಳ ಪ್ರಕಟನೆ ಸ್ಫೋಟಕವಾಗಿ ಕಂಡರೂ, ನಾಜೂಕಾದ ಪ್ರಕಟನೆಯನ್ನು ಮಕ್ಕಳು ನಿಧಾನವಾಗಿ ಕಲಿಯಲು ಸಾಧ್ಯವಿದೆ. ಮಗುವು ತನ್ನ ವಾತಾವರಣದಲ್ಲಿ, ತಂದೆ ತಾಯಿ ಹೇಗೆ ಭಾವನೆಗಳನ್ನು ವ್ಯಕ್ತ ಪಡಿಸುತ್ತಾರೆ, ಎಂಬುದನ್ನು ಗಮನಿಸುತ್ತಾ ತಾನು ತನ್ನ ಭಾವನೆಗಳನ್ನು ಸಂದರ್ಭಕ್ಕೆ ತಕ್ಕಂತೆ ವ್ಯಕ್ತಪಡಿಸುವ ಪ್ರಯತ್ನವನ್ನು ಮಾಡುತ್ತದೆ. ಮಗುವಿನ ಭಾವನೆಗಳು ಅಂದರೆ ಅದು ಚಿಗುರೊಡೆಯುತ್ತಿರುವ ಗಿಡದ ಹಾಗೆ, ಅದು ಕ್ರಮೇಣ ಸಾಕಷ್ಟು ಮಾರ್ಪಾಟನ್ನು ತೋರಿಸುತ್ತದೆ. ಅದೇ ಹರೆಯದ ಮಕ್ಕಳು ಕ್ಲಿಷ್ಟ ಭಾವನೆಗಳನ್ನು ಅರ್ಥೈಸಿದರೂ ಅವರೇ ಸ್ವತ: ನಿಭಾಯಿಸಲು ಕಷ್ಟ ಪಡುತ್ತಾರೆ. ಹರೆಯದ ಅಂತಿಮ ಹಂತಗಳಲ್ಲಿ ಭಾವನೆಗಳನ್ನು ಅಭಿವ್ಯಕ್ತಿಸುವಲ್ಲಿ, ನಿಭಾಯಿಸುವಲ್ಲಿ ಸಾಕಷ್ಟು ಪ್ರಬುದ್ಧರೂ ಆಗುತ್ತಾರೆ.
ಭಾವನೆಗಳು ಅತಿ ಎನಿಸಿದರೆ, ಅದು ಆ ಮಗುವಿಗೆ ಸಮಸ್ಯೆಯ ಕುರುಹೂ ಆಗಿರಬಹುದು. ಮಕ್ಕಳು ಮಂಕಾಗಿರುವುದು, ಲವಲವಿಕೆ ಇಲ್ಲದಿರುವುದು, ಅತಿ ಕೋಪ, ತಾಪ, ಭಯ ಭಾವನೆಗಳ ವೈಪರೀತ್ಯ, ಸೂಚ್ಯವಲ್ಲದ ಭಾವನೆಗಳನ್ನು ಪ್ರದರ್ಶಿಸುವುದು ಮಕ್ಕಳಲ್ಲಿ ಆಗುತ್ತಿರುವ ದ್ವಂದ್ವ ಮತ್ತು ಸಮಸ್ಯೆಗಳ ಹೆಗ್ಗುರುತು.
ಉತ್ತಮ ಭಾವನಾತ್ಮಕ
ಬೆಳವಣಿಗೆಗೆ ಏನು
ಮಾಡಬಹುದು?
ಮಾತು ಮನುಷ್ಯನ ಮನಸ್ಸಿನ ಕನ್ನಡಿ ಇದ್ದಂತೆ. ಉತ್ತಮವಾಗಿ ಶಬ್ದಗಳ ಬೆಳವಣಿಗೆಯನ್ನು ಪ್ರೇರೇಪಿಸಿದರೆ ಭಾವನೆಗಳನ್ನು ಸರಿಯಾಗಿ ವ್ಯಕ್ತಪಡಿಸಲು ಮಕ್ಕಳು ಕಲಿಯುತ್ತಾರೆ. ಮಕ್ಕಳಲ್ಲಿನ ಸೃಜನಶೀಲ ಚಟುವಟಿಕೆಗಳು ಭಾವನೆಗಳ ಬೆಳವಣಿಗೆಗೆ ಸಹಕರಿಸುತ್ತವೆ. ಮಕ್ಕಳಿಗೆ ಭಾವನೆಗಳ ಬಗ್ಗೆ ಮಾಹಿತಿ ಒದಗಿಸಬೇಕು. ಮಕ್ಕಳು ಸಾಮಾನ್ಯವಾಗಿ ಹಿರಿಯರನ್ನು ಅನುಕರಿಸುತ್ತಾರೆ. ಆದುದರಿಂದ, ಮನೆಯಲ್ಲಿನ ಹಿರಿಯರು, ಪೋಷಕರು, ನೆರೆಹೊರೆಯವರು ಮತ್ತು ಶಾಲೆಯಲ್ಲಿನ ಉಪಾಧ್ಯಾಯರುಗಳು ತುಂಬಾ ಜವಾಬ್ದಾರಿಯ ಸ್ಥಾನವನ್ನು ಪಡೆದಿರುತ್ತಾರೆ. ನಾವು ನಮ್ಮ ಭಾವನೆಗಳನ್ನು ಸರಿಯಾಗಿ ನಿಭಾಯಿಸದಿದ್ದಲ್ಲಿ, ಮಕ್ಕಳಿಗೆ ಹೇಳಿಕೊಡುವುದು ಕಷ್ಟ ಸಾಧ್ಯ. ವಿವಿಧ ಭಾವನೆಗಳು ಯಾವುವು, ಯಾಕೆ, ಹೇಗೆ ಮತ್ತು ಅವುಗಳ ಸಹಜತೆಯ ಬಗ್ಗೆ ಮಕ್ಕಳಿಗೆ ತಿಳಿವಳಿಕೆಯನ್ನು ಕೊಡಬೇಕು. ಮನಸ್ಸು ಸ್ವಸ್ಥ ಭಾವನೆಗಳ ಆಗರವಾದಾಗ, ಸ್ವಸ್ಥ ದೇಶ ಆಗುವುದು ಸಾಧ್ಯ. ಬನ್ನಿ ನಾವು-ನೀವೆಲ್ಲರೂ ಭಾವನೆಗಳನ್ನು ನಿಭಾಯಿಸೋಣ ಮತ್ತು ಮಕ್ಕಳಿಗೂ ಭಾವನೆಗಳನ್ನು ನಿಭಾಯಿಸಲು ಹೇಳಿ ಕೊಡೋಣ.
ಮಾತು ಬಲ್ಲವನಿಗೆ ಜಗಳವಿಲ್ಲ
ಮಕ್ಕಳ ದೈಹಿಕ ಬೆಳವಣಿಗೆಗೆ ಹೇಗೆ ನಾವು ಗಮನವಹಿಸುತ್ತೇವೋ, ಅದೇ ರೀತಿ ಭಾವನೆಗಳ ಬೆಳವಣಿಗೆಗೆ ಗಮನಕೊಡುವುದು ಮುಖ್ಯ. ಇದರ ಪ್ರಯೋಜನಗಳು ಹಲವು.
1. ಭಾವನೆಗಳನ್ನು ನಿಭಾಯಿಸುವ ಮಕ್ಕಳು ಸಾಮಾಜಿಕ ಹೊಂದಾಣಿಕೆಯನ್ನು ಚೆನ್ನಾಗಿ ಪಡೆಯುತ್ತಾರೆ.
2. ಅತಿಯಾದ ಭಾವನೆಗಳು ತೊಡಕಾಗುವುದನ್ನು ಗ್ರಹಿಸುತ್ತಾರೆ.
3. ಗುಂಪಿನಲ್ಲಿ ಕಲಿಕೆ ಸುಲಭವಾಗುತ್ತದೆ ಮತ್ತು ನಿರ್ಭಯತೆಯಿಂದ ಸಹಜವಾಗಿ ಅಭಿವ್ಯಕ್ತಿಮಾಡಲು ಕಲಿಯುತ್ತಾರೆ.
4. ಭಾವನೆಗಳು ಮಕ್ಕಳ ಮಾನಸಿಕ ಬೆಳವಣಿಗೆಗೆ ಸಹಕರಿಸುತ್ತವೆ. ಮೇಲಾಗಿ ಸರ್ವತೋಮುಖ ಬೆಳವಣಿಗೆಗೆ ಇಂಬು ಕೊಡುತ್ತವೆ.
– ಡಾ| ಸೀಮಂತಿನಿ ಟಿ.ಎಸ್.,
ಅಸೋಸಿಯೆಟ್ ಪ್ರೊಫೆಸರ್,
ಕ್ಲಿನಿಕಲ್ ಸೈಕಾಲಜಿ ವಿಭಾಗ,
ಕಸ್ತೂರ್ಬಾ ಮೆಡಿಕಲ್ ಕಾಲೇಜು, ಅತ್ತಾವರ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.