ಕೋವಿಡ್ ನಿನ್ನೆ, ಇಂದು, ನಾಳೆ
ಇಂದಿನಿಂದ ಮುಂದಿನ ವರ್ಷ ಹೇಗಿರುತ್ತದೆ? ಎಂಬ ಅರಿತುಕೊಳ್ಳಲು ನನಗೆ ಸಾಕಷ್ಟು ಸಮಯ ಸಿಕ್ಕಿತ್ತು.
Team Udayavani, May 7, 2022, 11:25 AM IST
ಕೆಲವು ವಾರಗಳ ಹಿಂದೆ ನಾನು ಅಮೆರಿಕಕ್ಕೆ ಸುದೀರ್ಘ ಪ್ರಯಾಣ ಬೆಳೆಸಿದಾಗ ಹಿಂದಿನ ಕೊರೊನಾ ಸಾಂಕ್ರಾಮಿಕ ರೋಗದ ಬಗ್ಗೆ ನೆನಪಿಸಿಕೊಳ್ಳಲು ನನಗೆ ಸಾಕಷ್ಟು ಕಾಲಾವಕಾಶ ಸಿಕ್ಕಿತ್ತು. ಕಳೆದ ವರ್ಷದ ಪರಿಸ್ಥಿತಿಗಳು ಹೇಗಿದ್ದವು? ಈಗ ಹೇಗಿದೆ? ಇಂದಿನಿಂದ ಮುಂದಿನ ವರ್ಷ ಹೇಗಿರುತ್ತದೆ? ಎಂಬ ಅರಿತುಕೊಳ್ಳಲು ನನಗೆ ಸಾಕಷ್ಟು ಸಮಯ ಸಿಕ್ಕಿತ್ತು.
ಕಳೆದ ವರ್ಷದ ಈ ಅವಧಿಯಲ್ಲಿ ನಾವು ಕೊರೊನಾದ ಅತ್ಯಂತ ಅಪಾಯಕಾರಿ ಡೆಲ್ಟಾ ರೂಪಾಂತರಿಯ ಆರ್ಭಟದ ಮಧ್ಯದಲ್ಲಿ ಇದ್ದೆವು. ಆಗ ಸಾವುಗಳು, ನಾಶ, ವಿನಾಶ, ಮತ್ತು ನೋವುಗಳೇ ಎಲ್ಲೆಡೆ ತುಂಬಿದ್ದವು. ಅಕ್ಷರಶಃ ಹೇಳಬೇಕು ಎಂದರೆ, ನಾವು ಮಾರಣಾಂತಿಕ ವೈರಸ್‌ನ ಬಂಧಿಗಳಾಗಿ ಬಿಟ್ಟಿದ್ದೆವು.
ಒಂದು ರೀತಿಯಲ್ಲಿ ಎಲ್ಲೆಲ್ಲೂ ಕೋಲಾಹಲ ಉಂಟಾಗಿತ್ತು. ಆಸ್ಪತ್ರೆಗಳು, ಚಿತಾಗಾರಗಳು ಮತ್ತು ಶ್ಮಶಾನಗಳು ರೋಗಿಗಳು ಮತ್ತು ಸತ್ತವರಿಂದ ತುಂಬಿ ತುಳುಕುತ್ತಿದ್ದವು. ವಿದೇಶಕ್ಕೆ ಪ್ರಯಾಣಿಸುವುದು ದೂರದ ಕನಸಾಗಿತ್ತು. ಕೋವಿಡ್‌ನ ಬದಲಾಗುತ್ತಿರುವ ನಿಯಮಗಳಿಗೆ ಅನುಗುಣವಾಗಿ ಕುಟುಂಬದ ವಿವಾಹ ಯೋಜನೆಗಳು ಮತ್ತು ಸ್ಥಳವನ್ನು ಸಹ ಅನೇಕ ಬಾರಿ ಬದಲಾಯಿಸಬೇಕಾಯಿತು. ಕೆಲವೊಮ್ಮೆ ವಿವಾಹಗಳು ನಡೆದರೂ ಮನೆಯವರೇ ಅದರಲ್ಲಿ ಪಾಲ್ಗೊಳ್ಳಲು ಆಗಲಿಲ್ಲ.
ಆದಾಗ್ಯೂ ಅನೇಕ ಬೆಳ್ಳಿಯ ರೇಖೆಗಳೂ ಇದ್ದವು; ವ್ಯಾಕ್ಸಿನೇಶನ್ ಸರಿಯಾದ ದಿಕ್ಕಿನಲ್ಲಿ ಪ್ರಾರಂಭವಾಯಿತು. ಇದರಿಂದಾಗಿಯೇ ಇಂದು ನಾವು ವಿಶ್ವದಲ್ಲೇ ಲಸಿಕೆ ನೀಡುವ ವಿಚಾರದಲ್ಲಿ ಅತ್ಯುತ್ತಮ ಟ್ರ್ಯಾಕ್ ರೆಕಾರ್ಡ್‌ಗಳನ್ನು ಹೊಂದಿದ್ದೇವೆ ಎಂಬುದು ನಮಗೆ ಹೆಮ್ಮೆಯ ವಿಚಾರವಾಗಿದೆ. ಕೊರೊನಾ ಕಾರಣದಿಂದಾಗಿಯೇ ಸದೃಢ ಆರೋಗ್ಯ ಮೂಲಸೌಕರ್ಯ ನಿರ್ಮಾಣವಾಗಿದೆ. ಹಾಗೆಯೇ ಕಳೆದ ವರ್ಷದ ಬಜೆಟ್‌ನಲ್ಲಿ ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನವನ್ನು ನೀಡಲಾಗಿದ್ದು, ಈ ವ್ಯವಸ್ಥೆಯನ್ನು ಇನ್ನಷ್ಟು ಮೇಲ್ದರ್ಜೆಗೇರಿಸಲಾಗಿದೆ. ಈ ಎಲ್ಲ ಕ್ರಮಗಳು ಮೂರನೇ ಅಲೆಯನ್ನು ಎದುರಿಸಲು ನಮಗೆ ಗಣನೀಯವಾಗಿ ಸಹಾಯ ಮಾಡಿದವು. ಇದರ ಜತೆಗೆ ಅದೃಷ್ಟವಶಾತ್ ಕೊರೊನಾದ ಮೂರನೇ ಅಲೆಯಲ್ಲಿ ಅತ್ಯಂತ ಸೌಮ್ಯ ರೂಪವಾದ ಒಮಿಕ್ರಾನ್ ರೂಪಾಂತರಿಯನ್ನು ನೋಡಿದೆವು. ಒಮಿಕ್ರಾನ್ ಸೌಮ್ಯವಾಗಿದ್ದ ಕಾರಣದಿಂದಾಗಿ ಸೋಂಕು ಹರಡುವಿಕೆಯಲ್ಲಿ ಹೆಚ್ಚಳವಾದರೂ ಅತ್ಯಂತ ಕಡಿಮೆ ಅನಾರೋಗ್ಯ ಮತ್ತು ಕಡಿಮೆ ಮರಣ ಪ್ರಮಾಣಗಳು ಕಂಡು ಬಂದವು. ಇದರಿಂದಾಗಿ ನಾವು ಜನರಲ್ಲಿ ಹರ್ಡ್ ಇಮ್ಯೂನಿಟಿಯನ್ನು ನೋಡಲು ಕಾರಣವಾಯಿತು. ಇದರಿಂದ ನಮಗೆ ಸಾಕಷ್ಟು ಉಪಯೋಗವೂ ಆಯಿತು. ಅದೃಷ್ಟವಶಾತ್ ಒಮಿಕ್ರಾನ್ ಅಲ್ಪಕಾಲಿಕವಾಗಿತ್ತು.
ದೇಶಾದ್ಯಂತ ಸೋಂಕುಗಳ ಸಂಖ್ಯೆ ತೀವ್ರವಾಗಿ ಕುಸಿಯಿತು. ಈ ಕಾರಣದಿಂದಾಗಿ ಅನೇಕ ಕಠಿನ ಕೊರೊನಾ ಕ್ರಮಗಳನ್ನು ತೆಗೆದುಹಾಕಲಾಯಿತು. ಅಂತಿಮವಾಗಿ ನಮ್ಮಲ್ಲಿ ಹೆಚ್ಚಿನವರು ವಿಶೇಷವಾಗಿ ಆರೋಗ್ಯ ವಲಯದವರು ನೆಮ್ಮದಿಯ ನಿಟ್ಟುಸಿರು ಬಿಟ್ಟರು. ನಾಗರಿಕರು ಅಂತಿಮವಾಗಿ ಸುಲಭವಾಗಿ ಉಸಿರಾಡಲು ಸಾಧ್ಯವಾಯಿತು. ಇದರಿಂದಾಗಿ ಆತಿಥ್ಯ ಮತ್ತು ಪ್ರವಾಸೋದ್ಯಮದಲ್ಲಿ ತೀವ್ರ ಸುಧಾರಣೆಗೆ ಕಾರಣವಾಯಿತು. ಜತೆ ಜತೆಗೇ ಆರ್ಥಿಕ ಸುಧಾರಣೆಯೂ ಆಯಿತು. ದೇಶ ಮತ್ತು ವಿದೇಶಗಳಾದ್ಯಂತ ಪ್ರಯಾಣವು ಸಾಮಾನ್ಯ ಸ್ಥಿತಿಗೆ ಹತ್ತಿರವಾಗಿದೆ. ಈ ಬಾರಿ ನಾನು ಅಮೆರಿಕಕ್ಕೆ ಯಾವುದೇ ಒತ್ತಡಗಳಿಲ್ಲದೆ ಪ್ರಯಾಣಿಸಿದ್ದೇನೆ. ಕೊರೊನಾದಿಂದಾಗಿ ಅತ್ಯಂತ ವಿಳಂಬಿತವಾಗಿ ನಾನು ಅಮೆರಿಕಕ್ಕೆ ಪ್ರಯಾಣಿಸಿದ್ದೇನೆ. ಇಲ್ಲಿನ ಜನ ಬಹುತೇಕ ಸಾಮಾನ್ಯ ಸ್ಥಿತಿಗೆ ಮರಳಿದ್ದಾರೆ. ಸಿಡಿಸಿಯ ಶಿಫಾರಸಿನ ಕೊರತಾಗಿಯೂ ಜನ ಮಾÓR… ಇಲ್ಲದೇ ಓಡಾಟ ನಡೆಸುತ್ತಿದ್ದಾರೆ.
ಈಗ ನಾನು ಅಮೆರಿಕದ ಪ್ರವಾಸವನ್ನು ಮುಗಿಸಿಕೊಂಡು ವಾಪಸ್ ಬಂದಿದ್ದೇನೆ. ಈಗ ಮುಂದಿನ ವರ್ಷದ ಇದೇ ಸಮಯ ಹೇಗಿರಬಹುದು ಎಂಬುದನ್ನು ಅಂದಾಜು ಮಾಡುತ್ತಾ ಕುಳಿತಿದ್ದೇನೆ.
ಕೊರೊನಾ ವಿಚಾರದಲ್ಲಿ ಹಲವಾರು ತಜ್ಞರ ನಿರೀಕ್ಷೆಗಳು, ಮುನ್ನೆಚ್ಚರಿಕೆಗಳು ತೀರಾ ಅನ್ನುವಷ್ಟರ ಮಟ್ಟಿಗೆ ತಪ್ಪಾಗಿವೆ. ಅಷ್ಟೇ ಅಲ್ಲ, ಈ ವಿಚಾರದಲ್ಲಿ ನಾನೂ ಕೂಡ ತಪ್ಪಾಗಿ ಮುನ್ನೆಚ್ಚರಿಕೆ ನೀಡಿದ್ದೆ. ಅಂದರೆ 2021ರ ಹೊಸ ವರ್ಷದ ವೇಳೆಗೆ ನಾನೊಂದು ಮಾತು ಹೇಳಿದ್ದೆ. 2020ರಲ್ಲಿ ಕೊರೊನಾ ಕಾಡಿದಷ್ಟು ಈ ವರ್ಷ ಕಾಡುವುದಿಲ್ಲ ಎಂದಿದ್ದೆ. ಆದರೂ ಈಗಲೂ ನಾನು ಮುಂದಿನ ವರ್ಷ ಏನಾಗಬಹುದು ಎಂಬುದನ್ನು ಹೇಳುವ ಅಪಾಯ ತೆಗೆದುಕೊಳ್ಳುತ್ತೇನೆ.
ನಾಳಿನ ದಿನದಲ್ಲಿ ಕೊರೊನಾ ಹೇಗೆ ವರ್ತಿಸಬಹುದು ಎಂದು ಹೇಳುವುದಕ್ಕಿಂತ ಮುಂಚೆ ಇಲ್ಲಿ ಖಚಿತವಾಗಿ ಒಂದು ವಿಷಯ ಹೇಳುತ್ತೇನೆ. ಕೊರೊನಾ ಎಲ್ಲಿಗೂ ಹೋಗಲ್ಲ. ಇದು ಇಲ್ಲೇ ಇರುತ್ತದೆ. ಅಲ್ಲದೆ ಮುಂದಿನ ತಿಂಗಳುಗಳಲ್ಲಿ ಅಥವಾ ವರ್ಷಗಳಲ್ಲಿ ಅದು ಹೇಗೆ ವರ್ತಿಸುತ್ತದೆ ಎಂಬುದು ಸಂಪೂರ್ಣವಾಗಿ ನಮ್ಮ ನಡವಳಿಕೆ ಮೇಲೆ ಅವಲಂಬಿತವಾಗಿದೆ. ಅಂದರೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮತ್ತು ಕೊರೊನಾ ವಿರುದ್ಧ ಲಸಿಕೆಯೊಂದೇ ರಾಮಬಾಣ ಎಂಬುದನ್ನು ಮುಕ್ತವಾಗಿ ಒಪ್ಪಿಕೊಳ್ಳಬೇಕು. ಇದು ಕೊರೊನಾವನ್ನು ಸಂಪೂರ್ಣವಾಗಿ ತಡೆಗಟ್ಟದಿದ್ದರೂ ರೋಗದ ಗಂಭೀರತೆಯನ್ನಾದರೂ ತಡೆಯುತ್ತದೆ. ಈ ಎಚ್ಚರಿಕೆಗಳ ಜತೆಗೆ ಒಂದು ಸಂಗತಿ ಹೇಳುತ್ತೇನೆ, ಒಂದು ವೇಳೆ, ಮುಂದಿನ ವಾರಗಳು ಅಥವಾ ತಿಂಗಳುಗಳಲ್ಲಿ ಕೊರೊನಾ ನಾಲ್ಕನೇ ಅಲೆ ಬಂದರೂ ನಾವು ಒಂದಷ್ಟು ಸುರಕ್ಷಿತವಾಗಿದ್ದೇವೆ. ಏಕೆಂದರೆ, ಈಗಾಗಲೇ ನಮ್ಮ ದೇಶದ ಎಲ್ಲ ಜನಸಂಖ್ಯೆ, ಒಂದು ರೋಗ ನಿರೋಧಕ ಶಕ್ತಿ ಬೆಳೆಸಿಕೊಂಡಿದೆ ಅಥವಾ ಎಲ್ಲರಿಗೂ ಕೊರೊನಾ ಬಂದು ಹೋಗಿದೆ. ಜತೆಗೆ ಸರಕಾರವೂ ಇನ್ನೂ ಕೊರೊನಾ ವಿಚಾರದಲ್ಲಿ ಸಾಕಷ್ಟು ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಗಂಭೀರವಾಗಿ ನಿಗಾ ಇರಿಸಿದೆ. ಜತೆಗೆ ಮಕ್ಕಳಿಗೆ ಲಸಿಕೆ ಮತ್ತು 18 ವರ್ಷ ಮೇಲ್ಪಟ್ಟವರಿಗೆ ಮುನ್ನೆಚ್ಚರಿಕೆ ಡೋಸ್ ನೀಡುತ್ತಲೇ ಇದ್ದು, ಈ ಮೂಲಕವೂ ಕೊರೊನಾ ನಿಯಂತ್ರಣ ಮಾಡುತ್ತಿದೆ.
ಒಟ್ಟಾರೆಯಾಗಿ ಕೊರೊನಾ ಇಲ್ಲೇ ಇದ್ದರೂ ಸಹ ಮುಂದಿನ ದಿನಗಳಲ್ಲಿ ಕೊರೊನಾ ಹೆಚ್ಚು ಅಪಾಯಕಾರಿಯಾಗಲು ನಾವು ಬಿಡುವುದಿಲ್ಲ. ಅಂದರೆ 2020 ಮತ್ತು 2021ರಲ್ಲಿ ಕಾಡಿದಂತೆ ಆಗುವುದಕ್ಕೆ ಬಿಡುವುದಿಲ್ಲ. ಕೊರೊನಾ ವಿರುದ್ಧ ನಾವಿಗಾಗಲೇ, ಸಾಕಷ್ಟು ಆಯುಧಗಳನ್ನು ಸಿದ್ಧ ಮಾಡಿಟ್ಟುಕೊಂಡಿದ್ದೇವೆ.
ನನ್ನ ನಿರೀಕ್ಷೆಯ ಪ್ರಕಾರ, ಕೊರೊನಾ ಸಾಂಕ್ರಾಮಿಕ ರೋಗವು ಮುಂದಿನ ದಿನಗಳಲ್ಲಿಯೂ ಸೌಮ್ಯ ಸ್ವಭಾವದಲ್ಲಿಯೇ ಇರುತ್ತದೆ. ಹೀಗಾಗಿ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಪಾಲನೆ ಮಾಡುವುದು ಮತ್ತು ಲಸಿಕೆ ಹಾಕಿಸಿಕೊಳ್ಳಬೇಕು. ಹಾಗೆಯೇ ಮುಂದಿನ ದಿನಗಳಲ್ಲಿ ಕೊರೊನಾ ಜತೆಯಲ್ಲೇ ಬಾಳುವುದನ್ನು ಕಲಿತುಕೊಳ್ಳಬೇಕು, ಯಾವುದೇ ಕಾರಣಕ್ಕೂ ಕೊರೊನಾ ನಮಗಿಂತ ಉತ್ತಮವಾಗದಿರುವಂತೆ ನೋಡಿಕೊಳ್ಳಬೇಕು. ಈ ಮೂಲಕ ಎಲ್ಲರ ಸುರಕ್ಷತೆಗಾಗಿ ಈ ನಿರೀಕ್ಷೆ ನಿಜವಾಗಲಿ ಎಂದು ಹಾರೈಸುವ.
– ಡಾ| ಸುದರ್ಶನ ಬಲ್ಲಾಳ್
ಮಣಿಪಾಲ್ ಆಸ್ಪತ್ರೆಗಳ ಸಮೂಹದ ಅಧ್ಯಕ್ಷರು
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.