ಮಧುಮೇಹದ ವಿರುದ್ಧ ಹೋರಾಡಲು ಸರಿಯಾದ ಆಹಾರ ಸೇವಿಸಿ
Team Udayavani, Jan 8, 2017, 3:45 AM IST
ಮಧುಮೇಹ ನಿರ್ವಹಣೆಯಲ್ಲಿ ಆಹಾರದ ಪಾತ್ರ
ಡಯಾಬೆಟೆಸ್ ಮೆಲ್ಲಿಟಸ್ ಅಥವಾ ಮಧುಮೇಹ ಎಂಬುದು ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ಅಸ್ವಸ್ಥತೆಯಾಗಿದ್ದು ಶರೀರದಲ್ಲಿ ಇನ್ಸುಲಿನ್ ಉತ್ಪಾದನೆ ಕಡಿಮೆಯಾದಾಗ ಅಥವಾ ಇನ್ಸುಲಿನ್ ಚಟುವಟಿಕೆಗೆ ತಡೆ ಉಂಟಾಗಿ ದೇಹದ ಜೀವಕೋಶಗಳು ಶರೀರದ ಒಂದು ಬಹುಮುಖ್ಯ ಶಕ್ತಿ ಮೂಲವಾದ ಗುÉಕೋಸ್ ಅನ್ನು ಉಪಯೋಗಿಸಿಕೊಳ್ಳಲು ಅಸಮರ್ಥವಾಗುವಾಗ ಈ ಅಸ್ವಸ್ಥತೆ ಬಾಧಿಸುತ್ತದೆ. ಗುÉಕೋಸ್ ಶರೀರದ ಜೀವಕೋಶಗಳನ್ನು ಪ್ರವೇಶಿಸಿ ಚಯಾಪಚಯ ಕ್ರಿಯೆಯ ಮೂಲಕ ಶಕ್ತಿಯನ್ನು ಉತ್ಪಾದಿಸಬೇಕಾದರೆ ಇನ್ಸುಲಿನ್ ಆವಶ್ಯಕ. ಕಣ್ಣು, ನರಗಳು, ಮೂತ್ರಪಿಂಡ ಮತ್ತು ರಕ್ತನಾಳಗಳಲ್ಲಿನ ತೊಂದರೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಶರೀರದಲ್ಲಿ ಉತ್ತಮ ಗುÉಕೋಸ್ ಮಟ್ಟವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಬಹಳ ಆವಶ್ಯಕ. ಆಹಾರ ಕ್ರಮದ ಬದಲಾವಣೆಗಳು, ವ್ಯಾಯಾಮ ಮತ್ತು ಜೀವನಶೈಲಿಯ ಸುಧಾರಣೆಗಳನ್ನು ಮಧುಮೇಹದ ಯಾವುದೇ ಹಂತದಲ್ಲಿ ಮತ್ತು ಅವಧಿಯಲ್ಲಿ ಕಡೆಗಣಿಸುವಂತಿಲ್ಲ. ಇದನ್ನು ಒಟ್ಟಾಗಿ ವೈದ್ಯಕೀಯ ಪೋಷಣಾ ಚಿಕಿತ್ಸೆ ಎಂಬುದಾಗಿ ತಿಳಿಯಲಾಗುತ್ತದೆ. ಮಧುಮೇಹಕ್ಕೆ ಚಿಕಿತ್ಸೆ ಪಡೆಯುತ್ತಿರುವ ಎಲ್ಲಾ ರೋಗಿಗಳಿಗೆ ಮತ್ತು ಮಧುಮೇಹದ ಆರೈಕೆಯಲ್ಲಿ ಇದರ ಪಾತ್ರವು ಬಹಳ ಮಹತ್ವದ್ದಾಗಿರುತ್ತದೆ.
ಭಾರತೀಯ ಸನ್ನಿವೇಶದಲ್ಲಿ ಮಧುಮೇಹ:
ಭಾರತದಲ್ಲಿ ಮಧುಮೇಹದ ಪ್ರಕರಣಗಳು ಅಪಾಯ ಸೂಚಕ ರೀತಿಯಲ್ಲಿ ಹೆಚ್ಚುತ್ತಾ ಸಾಗಿವೆ. ಈ ದೇಶದಲ್ಲಿನ ಹೆಚ್ಚುತ್ತಿರುವ ಜನಸಂಖ್ಯೆ, ಸಾಮಾಜಿಕ-ಆರ್ಥಿಕ ಬದಲಾವಣೆಗಳು, ವೃತ್ತಿಪರ ಮತ್ತು ಪೋಷಣೆಗೆ ಸಂಬಂಧಿಸಿದ ಅಂಶಗಳೆಲ್ಲ ಇದಕ್ಕೆ ಕಾರಣ. ಒತ್ತಡದ ಜೀವನಶೈಲಿ ಮತ್ತು ಸುಲಭ ಲಭ್ಯ ಆಹಾರಗಳ ಕಾರಣದಿಂದಾಗಿ, ಊಟದ ವ್ಯವಸ್ಥೆ ಏರುಪೇರಾಗುತ್ತಿರುವುದು ಮತ್ತು ಆಗಾಗ ಕುರುಕಲು ತಿಂಡಿಗಳನ್ನು ಮೆಲ್ಲುವುದು, ಫಾಸ್ಟ್ -ಫುಡ್‌ಗಳು, ದಿಢೀರ್ ಬಳಸಬಹುದಾದ ಸೂಪ್‌ಗ್ಳು, ಪೊಟ್ಟಣದ ಉಪ್ಪು ಮಿಶ್ರಿತ ಉತ್ಪನ್ನಗಳು, ರೆಡಿಮೇಡ್ ಬಿಸ್ಕತ್ತುಗಳು ಮತ್ತು ಮನೆಯ ಆಹಾರಕ್ಕಿಂತಲೂ ಹೊರಗೆ ಸಿಗುವ ರೆಡಿಮೇಡ್ ಆಹಾರಗಳನ್ನು ಹೆಚ್ಚು ಸೇವಿಸುವುದು ಈ ಎಲ್ಲಾ ಕಾರಣಗಳಿಂದಾಗಿ ಮಧುಮೇಹಿಗಳ ಸಂಖ್ಯೆ ಹೆಚ್ಚುತ್ತಿದೆ. ಎಲ್ಲಾ ಆದಾಯ ವರ್ಗದ ಜನರ ಆಹಾರ ಅಭ್ಯಾಸಗಳು ಇಡಿಯ ಧಾನ್ಯಗಳ ಗುಂಪಿನಿಂದ ಬೇರೊಂದು ಆಹಾರ ಗುಂಪಿನತ್ತ ಸರಿದಿವೆ. ನಗರ ಪ್ರದೇಶ ಮತ್ತು ಶ್ರೀಮಂತ ವರ್ಗದ ಜನರಲ್ಲಿ ಇದು ಹೆಚ್ಚು ದಟ್ಟವಾಗಿ ಗೋಚರಿಸುತ್ತಿದೆ.
ಮಧುಮೇಹ ಮತ್ತು ಆಹಾರ ಕ್ರಮ
ಮಧುಮೇಹವನ್ನು ನಿಯಂತ್ರಿಸಲು ಮತ್ತು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳುವುದು ಅಂದರೆ ಆಹಾರ ಸೇವಿಸದೆ ಇರುವುದು ಆಥವಾ ಕಡಿಮೆ ಆಹಾರವನ್ನು ಸೇವಿಸಿ ಬಳಲುವುದು ಎಂದಲ್ಲ. ಇದರ ಅರ್ಥ ಹೆಚ್ಚು ಆರೋಗ್ಯಶಾಲಿಯಾದ ಆಹಾರವನ್ನು ಸೂಕ್ತ ಪ್ರಮಾಣದಲ್ಲಿ ಮತ್ತು ಸರಿಯಾದ ಸಮಯದಲ್ಲಿ ಸೇವಿಸುವುದು ಎಂದು. ಮಧುಮೇಹದ ಆಹಾರ ಕ್ರಮ ಅಂದರೆ ಆರೋಗ್ಯಶಾಲಿ ಆಹಾರ ಸೇವನಾ ಯೋಜನೆ, ಅಂದರೆ ಸ್ವಾಭಾವಿಕವಾಗಿ ಪೋಷಕಾಂಶಗಳಿಂದ ಭರಿತವಾದ ಮತ್ತು ಕಡಿಮೆ ಕೊಬ್ಬು ಇರುವ ಮತ್ತು ಸೂಕ್ತ ಪ್ರಮಾಣದ ಕ್ಯಾಲೊರಿಯನ್ನು ಒಳಗೊಂಡಿರುವ ಆಹಾರವನ್ನು ಸೇವಿಸುವುದು. ಈ ಆಹಾರ ಕ್ರಮದಲ್ಲಿನ ಬಹುಮುಖ್ಯ ಅಂಶಗಳು ಅಂದರೆ ತರಕಾರಿಗಳು, ಕೆಲವು ಹಣ್ಣುಗಳು ಮತ್ತು ಇಡಿಯ ಧಾನ್ಯಗಳು. ಮಧುಮೇಹದ ಆಹಾರ ಕ್ರಮ ಅಂದರೆ, ಖಂಡಿತವಾಗಿಯೂ ಪ್ರತಿಯೊಬ್ಬರಿಗೂ ಯೋಗ್ಯವೆನಿಸುವ ಮತ್ತು ಆರೋಗ್ಯಕರ ಆಹಾರ ಯೋಜನೆ.
ರಕ್ತದ ಸಕ್ಕರೆ ಮಟ್ಟವನ್ನು ಸೂಕ್ತ
ಪ್ರಮಾಣದಲ್ಲಿ ಕಾಪಾಡಿಕೊಳ್ಳಲು
ಪಾಲಿಸಬೇಕಾದ ಕೆಲವು ಆಹಾರ
ಕ್ರಮಗಳು:
ಆಹಾರವೇ ನಿಮ್ಮ ಔಷಧಿಯಾಗಿರಲಿ ಅನ್ನುವುದು ಇಂಗ್ಲೀಷ್‌ನ ಒಂದು ಜನಪ್ರಿಯ ನಾಣ್ಣುಡಿ.ಯಾವುದೇ ಕಾಯಿಲೆಯ ನಿರ್ವಹಣೆಯಲ್ಲಿ ಆಹಾರದ ಪಾತ್ರ ಏನು ಎಂಬುದನ್ನು ಇದು ಒತ್ತಿ ಹೇಳುತ್ತದೆ. ಆಹಾರ ಕ್ರಮವು ಕೇವಲ ಮಧುಮೇಹದ ನಿರ್ವಹಣೆಯಲ್ಲಿ ಮಾತ್ರ ಅಲ್ಲ, ಇತರ ಕಾಯಿಲೆಗಳಾದ ಅತಿ ರಕ್ತದೊತ್ತಡ, ಹೈಪರ್ ಕೊಲೆಸ್ಟ್ರೋಲೆಮಿಯಾ ಮತ್ತು ಬೊಜ್ಜಿನ ನಿರ್ವಹಣೆಯಲ್ಲಿಯೂ ಸಹ ವಿಶೇಷ ಪಾತ್ರವನ್ನು ವಹಿಸುತ್ತದೆ.
ಮಧುಮೇಹ ಆಹಾರ ಕ್ರಮಗಳು
ಮಧುಮೇಹದ ಆಹಾರ ಕ್ರಮವು ಮೂರು ಮುಖ್ಯ ಊಟಗಳನ್ನು ಒಳಗೊಂಡಿರುತ್ತದೆ, ಅದರಲ್ಲಿ ಒಂದು ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಊಟ ಮತ್ತು ರಾತ್ರಿಯ ಊಟ, ಮುಂಜಾನೆ ನಂತರ ಮತ್ತು ಸಾಯಂಕಾಲದ ಎರಡು ಉಪಾಹಾರಗಳು, ರಾತ್ರಿ ಮಲಗುವ ಸಮಯದಲ್ಲಿ ಸೇವಿಸುವ ಹಣ್ಣು ಅಥವಾ ಒಂದು ಗ್ಲಾಸ್ ಹಾಲು, ಮೊಸರು ಅಥವಾ ಮಜ್ಜಿ ಗೆಗಳು ಸೇರಿರುತ್ತವೆ. ಪ್ರತಿ ಎರಡೂವರೆಯಿಂದ ಮೂರು ಗಂಟೆಯ ನಡುವೆ ಆಗಾಗ ಮತ್ತು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಆಹಾರವನ್ನು ಸೇವಿಸುವುದು ಈ ಕ್ರಮದ ಮುಖ್ಯ ಅಂಶ. ಏರಿಳಿತಗಳು ಮತ್ತು ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದು ಮತ್ತು ಕುಸಿಯುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕ್ರಮವನ್ನು ಅನುಸರಿಸುವುದು ಹೆಚ್ಚು ಸೂಕ್ತ.
ಪ್ಲೇಟ್ ಮಾಡೆಲ್ ಅಥವಾ ತಟ್ಟೆ ಮಾದರಿಯ ಮೂಲಕ ಮಧುಮೇಹದ ಆಹಾರ ಕ್ರಮವನ್ನು ಸರಳವಾಗಿ ಅರ್ಥ ಮಾಡಿಕೊಳ್ಳಬಹುದು. ಇದರಲ್ಲಿ 9 ಇಂಚಿನ ತಟ್ಟೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿರುತ್ತದೆ. ಸುಮಾರು ಅರ್ಧ ತಟ್ಟೆಯಲ್ಲಿ ಪಿಷ್ಟ ರಹಿತ ತರಕಾರಿಗಳಾದ ಸೌತೆಕಾಯಿ, ಟೊಮ್ಯಾಟೋ, ಬೀನ್ಸ್, ಈರುಳ್ಳಿ ಮತ್ತು ಅಣಬೆಗಳು ಇರಬೇಕು ಯಾಕೆಂದರೆ ರಕ್ತದ ಸಕ್ಕರೆ ಮಟ್ಟಗಳ ಮೇಲೆ ಇವುಗಳ ಪಾತ್ರ ಏನೂ ಇರುವುದಿಲ್ಲ. ತಟ್ಟೆಯ ಉಳಿದ ಅರ್ಧ ಭಾಗವು ಪಿಷ್ಟದ ಆಹಾರಗಳಾದ ಅನ್ನ, ಚಪಾತಿ ಇರಬೇಕು ಮತ್ತು ಉಳಿದ ಅರ್ಧ ಭಾಗವು ಮೀನು, ಬೇಳೆಗಳು ಮತ್ತು ಸಾಂಬಾರಿನಂತಹ ಪ್ರೋಟೀನ್ ಭರಿತ ಆಹಾರಗಳಿಂದ ತುಂಬಿರಬೇಕು.
ಮಧುಮೇಹ ಇರುವ ರೋಗಿಗಳು ಅಧಿಕ ನಾರಿನಂಶ ಇರುವ ಆಹಾರ ವಸ್ತುಗಳನ್ನು ಹೆಚ್ಚು ಸೇವಿಸಬೇಕು. ಇಂತಹ ಆಹಾರಗಳು ಅಂದರೆ, ಗೋಧಿ, ರಾಗಿ, ಓಟ್ಸ್, ಇಡೀಯ ಧಾನ್ಯಗಳು ಮತ್ತು ಬೇಳೆಗಳು, ಬೀನ್ಸ್‌ನಂತಹ ತರಕಾರಿಗಳು, ಹಸುರು ಸೊಪ್ಪು$ ತರಕಾರಿಗಳು ಮತ್ತು ಕ್ಯಾಬೇಜ್. ಈ ಆಹಾರಗಳು ಕಡಿಮೆ ಕ್ಯಾಲೊರಿ ಮತ್ತು ಸಕ್ಕರೆ ಅಂಶವನ್ನು ಹೊಂದಿರುತ್ತವೆ ಮತ್ತು ಇವು ರಕ್ತದ ಸಕ್ಕರೆ ಮಟ್ಟವನ್ನು ನಿಧಾನವಾಗಿ ಮತ್ತು ಒಂದೇ ಕ್ರಮದಲ್ಲಿ ಹೆಚ್ಚಿಸುತ್ತವೆ. ಆಹಾರ ಸೇವಿಸಿದ ಬಳಿಕ ರಕ್ತದ ಗುÉಕೋಸ್ ಮಟ್ಟವು ಹಠಾತ್ತಾಗಿ ಏರಿಕೆಯಾಗುವುದನ್ನು ನಿರ್ವಹಿಸುವುದರಲ್ಲಿ ಇದು ವಿಶೇಷ ಪ್ರಯೋಜನಕಾರಿ.
ಸೇವಿಸಬಹುದಾದ ಹಾಲು ಮತ್ತು ಹಾಲಿನ ಉತ್ಪನ್ನಗಳು ಅಂದರೆ ಕೆನೆರಹಿತ ಹಾಲು, ಮೊಸರು ಮತ್ತು ಮಜ್ಜಿಗೆ. ಅಧಿಕ ಪ್ರಮಾಣದಲ್ಲಿ ಕೊಬ್ಬಿನ ಅಂಶ ಇರುವ ಹಾಲಿನ ಉತ್ಪನ್ನಗಳಾದ ಬೆಣ್ಣೆ, ತುಪ್ಪ, ಚೀಸ್ ಮತ್ತು ಪನೀರ್‌ಗಳನ್ನು ಸೇವಿಸಬಾರದು.
ಸಸ್ಯಜನ್ಯ ಎಣ್ಣೆಗಳಾದ ಸೂರ್ಯಕಾಂತಿ, ಜೋಳ, ನೆಲಗಡಲೆ ಮತ್ತು ಎಳ್ಳಿನ ಎಣ್ಣೆಗಳನ್ನು ಅಡುಗೆಗೆ ಬಳಸಬಹುದು. ತೆಂಗಿನೆಣ್ಣೆ, ತುಪ್ಪ, ಡಾಲ್ಡಾ, ವನಸ್ಪತಿ ಮತ್ತು ಬೆಣ್ಣೆಗಳನ್ನು ಬಳಸಬಾರದು. ಕೊಬ್ಬಿನ ಆಮ್ಲದ ಪ್ರಮಾಣದಲ್ಲಿ ಒಂದು ಅಡುಗೆ ಎಣ್ಣೆಯಿಂದ ಇನ್ನೊಂದಕ್ಕೆ ವ್ಯತ್ಯಾಸ ಆಗುವುದರಿಂದ ಅಡುಗೆಗೆ ಬೇರೆ ಬೇರೆ ರೀತಿಯ ಎಣ್ಣೆಯನ್ನು ನಿಯಮಿತವಾಗಿ ಬದಲಿಸುತ್ತಾ ಬಳಸಬಹುದು.
ಮೀನು ಆರೋಗ್ಯಕರ ಮತ್ತು ಪೋಷಣಾಭರಿತ ಆಹಾರ ಆಗಿದ್ದು, ಇದು ವಿಟಾಮಿನ್ ಮತ್ತು ಖನಿಜಾಂಶಗಳಿಂದ ಸಮೃದ್ಧವಾಗಿದೆ. ಆದರೆ ಕಡಿಮೆ ಎಣ್ಣೆ ಬಳಸಿ ತಯಾರಿಸಿದ ಮೀನಿನ ಆಹಾರಗಳನ್ನು ಸೇವಿಸುವುದು ಉತ್ತಮ. ಕರಿದ ಮೀನನ್ನು ಸೇವಿಸಬಾರದು. ಮೊಟ್ಟೆಯೂ ಸಹ ವಿಶೇಷ ಪೋಷಣಾಭರಿತ ಆಹಾರವಾಗಿದ್ದು, ಇದನ್ನೂ ಸಹ ಸೇವಿಸಬಹುದು. ಮೊಟ್ಟೆಯ ಬಿಳಿಯ ಭಾಗವು ಪ್ರೋಟೀನ್‌ನಿಂದ ಮತ್ತು ಹಳದಿಯ ಭಾಗವು ಕೊಬ್ಬು ಮತ್ತು ಕೊಲೆಸ್ಟ್ರಾಲ್‌ನಿಂದ ಸಮೃದ್ಧವಾಗಿದೆ. ಹಾಗಾಗಿ ಮಧುಮೇಹ ರೋಗಿಗಳು ಮೊಟ್ಟೆಯ ಹಳದಿ ಭಾಗವನ್ನು ಹೆಚ್ಚು ಸೇವಿಸದೆ ಬಿಳಿಯ ಭಾಗವನ್ನು ಮಾತ್ರವೆ ಹೆಚ್ಚು ಸೇವಿಸಬಹುದು.
ಮಧುಮೇಹ ರೋಗಿಗಳು ದಿನಕ್ಕೆ ಕನಿಷ್ಠ ಒಂದು ಹಣ್ಣನ್ನು ಸೇವಿಸಬಹುದು ಎಂದು ಶಿಫಾರಸು ಮಾಡಲಾಗುತ್ತದೆ. ಶಿಫಾರಸು ಮಾಡುವ ಹಣ್ಣುಗಳು ಅಂದರೆ ಸೇಬು, ಕಿತ್ತಲೆ, ಮೂಸಂಬಿ, ಪೇರಳೆ, ಪಪ್ಪಾಯ (ದಿನಕ್ಕೆ 50 ಗ್ರಾಂ ಪಪ್ಪಾಯ ಅಥವಾ ಅಷ್ಟೇ ಪ್ರಮಾಣದ ಮಧ್ಯಮ ಗಾತ್ರದ ಸೇಬು). ರಕ್ತದ ಸಕ್ಕರೆ ಮಟ್ಟವನ್ನು ಹಠಾತ್ತಾಗಿ ಹೆಚ್ಚಿ ಸುವ ಕಾರಣ ಬಾಳೆಹಣ್ಣು, ಮಾವಿನ ಹಣ್ಣು, ಚಿಕ್ಕು, ದ್ರಾಕ್ಷಿ ಹಣ್ಣುಗಳನ್ನು ಸೇವಿಸಬಾರದು. ಒಣ ಹಣ್ಣುಗಳಾದ ಬಾದಾಮಿ ಮತ್ತು ವಾಲ್ನಟ್‌ಗಳನ್ನು ಸೇವಿಸಬಹುದು. ಆದರೆ ಗೋಡಂಬಿ ಯಲ್ಲಿ ಅಧಿಕ ಕೊಬ್ಬಿನ ಅಂಶ ಮತ್ತು ಒಣ ದ್ರಾಕ್ಷಿಯಲ್ಲಿ ಅಧಿಕ ಸಕ್ಕರೆ ಅಂಶ ಇರುವ ಕಾರಣ ಇವನ್ನು ಸೇವಿಸಬಾರದು.
ಮಧುಮೇಹ ರೋಗಿಗಳು ಮಧ್ಯಾಹ್ನ ಮತ್ತು ರಾತ್ರಿಯ ಊಟಕ್ಕೆ ಮೊದಲು ಹಸಿ ತರಕಾರಿಗಳನ್ನು ಸಲಾಡ್ ರೂಪದಲ್ಲಿ ಸೇವಿಸಬಹುದು. ಸಲಾಡ್‌ನಲ್ಲಿ ಕ್ಯಾಲೊರಿ ಬಹಳ ಕಡಿಮೆ ಇರುತ್ತದೆ ಮತ್ತು ನಾರಿನ ಅಂಶ ಹೆಚ್ಚು ಇರುತ್ತದೆ. ಇದು ರಕ್ತದ ಸಕ್ಕರೆ ಅಂಶವನ್ನು ನಿಯಂತ್ರಿಸಲು ಸಹಕಾರಿಯಗಿ ಮಲವಿಸರ್ಜನೆ ಸರಾಗವಾಗಿ ಆಗಲು ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ತಡೆಯುತ್ತದೆ. ಬಟಾಟೆ, ಸಿಹಿ ಗೆಣಸುಗಳನ್ನು ಸೇವಿಸದೆ ಇರುವುದು ಉತ್ತಮ, ಕ್ಯಾರೆಟ್ ಮತ್ತು ಬೀಟ್‌ರೂಟ್‌ಗಳನ್ನು ಇತರ ತರಕಾರಿಗಳ ಜತೆಗೆ ಸೇರಿಸಿ ಸೇವಿಸಬಹುದು. ನುಗ್ಗೆ ಎಲೆ, ಮೆಂತ್ಯೆ ಬೀಜ ಮತ್ತು ಹಾಗಲಕಾಯಿಗಳ ಸೇವನೆ ಉತ್ತಮ. ಈ ತರಕಾರಿಗಳು ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತವೆ.
ಗಂಜಿಯ ತಿಳಿ ನೀರಲ್ಲಿ ಹೆಚ್ಚು ಪಿಷ್ಟ ಮತ್ತು ಕಾಬೊìಹೈಡ್ರೇಟ್ ಇದ್ದು ಅದು ರಕ್ತದ ಸಕ್ಕರೆ ಮಟ್ಟವನ್ನು ಹೆಚ್ಚಿಸುವ ಕಾರಣ ಗಂಜಿ ಸೇವನೆಯನ್ನು ಶಿಫಾರಸು ಮಾಡುವುದಿಲ್ಲ. ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬೆಳ್ತಿಗೆ ಅಕ್ಕಿಯ ಅನ್ನ, ಮೈದಾದ ಉತ್ಪನ್ನಗಳಾದ ಬಿಸ್ಕಿಟ್‌ಗಳು ಮತ್ತು ಬೇಕರಿ ಉತ್ಪನ್ನಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು.
ಮಧುಮೇಹದ ಬಗ್ಗೆ ಇರುವ
ಸಾಮಾನ್ಯ ತಪ್ಪು ಕಲ್ಪನೆಗಳು
ಮತ್ತು ವಾಸ್ತವಗಳು
ಕಲ್ಪನೆ: ಮಧುಮೇಹ ರೋಗಿಗಳು ಗೋಧಿಯನ್ನು ಮಾತ್ರ ಸೇವಿಸಬೇಕು ಅನ್ನವನ್ನು ಸೇವಿಸಬಾರದು.
ವಾಸ್ತವ: ಗೋಧಿ ಮತ್ತು ಅನ್ನ ಇವೆರಡೂ ರಕ್ತದ ಸಕ್ಕರೆ ಮಟ್ಟವನ್ನು ಸಮಾನ ಪ್ರಮಾಣದಲ್ಲಿ ಹೆಚ್ಚಿಸುತ್ತವೆ. ಆದರೆ ಅನ್ನಕ್ಕಿಂತಲೂ ಚಪಾತಿಯನ್ನು ಲೆಕ್ಕ ಹಾಕುವುದು ಮತ್ತು ತಿನ್ನುವ ಪ್ರಮಾಣವನ್ನು ನಿಯಂತ್ರಿಸುವುದು ಸುಲಭ. ಈ ಕಾರಣಕ್ಕಾಗಿ ಅನ್ನಕ್ಕಿಂತಲೂ ಚಪಾತಿಯನ್ನು ಉತ್ತಮ ಎಂದು ಪರಿಗಣಿಸಲಾಗುತ್ತದೆ.
ಮಧುಮೇಹ ಇರುವ ಜನರು ಅನ್ನವನ್ನೇ ಸೇವಿಸಲು ಇಷ್ಟಪಟ್ಟರೆ ಅವರು ತಾವು ಪ್ರತಿ ಸಲ ಊಟ ಮಾಡುವಾಗ ಸೇವಿಸುವ ಅನ್ನದ ಪ್ರಮಾಣವನ್ನು ಒಂದು ಚಿಕ್ಕ ಬೌಲ್‌ಗೆ ಮಿತಗೊಳಿಸಬೇಕು. ಅನ್ನದಲ್ಲೂ ಬಿಳಿ ಅನ್ನಕ್ಕಿಂತ ಕುಚ್ಚಲಕ್ಕಿಯ ಅನ್ನವನ್ನು ಸೇವಿಸುವುದು ಹೆಚ್ಚು ಸೂಕ್ತ, ಯಾಕೆಂದರೆ ಕುಚ್ಚಲಕ್ಕಿಯ ಅನ್ನದಲ್ಲಿ ನಾರಿನಂಶ ಮತ್ತು ಪೋಷಕಾಂಶಗಳ ಪ್ರಮಾಣ ಹೆಚ್ಚು ಇರುತ್ತದೆ. ಬೆಳ್ತಿಗೆ ಅಕ್ಕಿಯ ಅನ್ನದಲ್ಲಿನ ನಾರಿನಂಶ ಮತ್ತು ಪೋಷಕಾಂಶಗಳು ಪಾಲಿಶ್ ಮಾಡುವಾಗ ನಷ್ಟವಾಗಿರುತ್ತವೆ.
ಕಲ್ಪನೆ: ಮಧುಮೇಹ ರೋಗಿಗಳು ಅತಿಯಾಗಿ ತಿಂದು ಮುಂದಿನ ಊಟವನ್ನು ತಪ್ಪಿಸಿಕೊಳ್ಳಬಹುದು.
ವಾಸ್ತವ: ಅತಿಯಾಗಿ ತಿನ್ನುವುದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಗಿ ಹೆಚ್ಚಾಗಬಹುದು ಮತ್ತು ಮುಂದಿನ ಊಟವನ್ನು ತಪ್ಪಿಸಿಕೊಳ್ಳುವುದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಕುಸಿಯುವ ಸಾಧ್ಯತೆ ಇದೆ. ರಕ್ತದ ಸಕ್ಕರೆ ಮಟ್ಟದಲ್ಲಿ ಆಗುವ ಈ ಎರಡೂ ಏರಿಳಿತಗಳು ಅಪಾಯಕಾರಿ ಆಗಬಹುದು. ಹಾಗಾಗಿ ಮಧುಮೇಹ ರೋಗಿಗಳು ಮುಂದಿನ ಊಟವನ್ನು ತಪ್ಪಿಸಿಕೊಳ್ಳುವುದಕ್ಕಾಗಿ ಅತಿಯಾಗಿ ಆಹಾರ ಸೇವಿಸಬಾರದು. ಅದೇ ರೀತಿಯಲ್ಲಿ ಬಹಳ ಸಮಯ ಉಪವಾಸ ಇರುವುದನ್ನೂ ಸಹ ಶಿಫಾರಸು ಮಾಡುವುದಿಲ್ಲ, ಮಧುಮೇಹ ಕಾಯಿಲೆ ಇರುವ ರೋಗಿಗಳು ಅವರ ರಕ್ತದಲ್ಲಿನ ಗುÉಕೋಸ್ ಮಟ್ಟವು ಹಠಾತ್ತಾಗಿ ಕುಸಿಯುವುದನ್ನು (ಹೈಪರ್ ಗ್ಲೆ„ಸೆಮಿಯಾ) ತಡೆಯಲು ಪ್ರತಿ ಎರಡೂವರೆಯಿಂದ ಮೂರು ಗಂಟೆಗೊಮ್ಮೆ ಆಹಾರ ಸೇವಿಸುತ್ತಾ ಇರಬೇಕು.
ಕಲ್ಪನೆ: ಮಧುಮೇಹ ಇರುವ ಜನರು ಸಕ್ಕರೆಯ ಬದಲಿಗೆ ಬೆಲ್ಲ ಮತ್ತು ಜೇನುತುಪ್ಪವನ್ನು ಸೇವಿಸಬಹುದು.
ವಾಸ್ತವ: ಸಕ್ಕರೆ, ಬೆಲ್ಲ ಮತ್ತು ಜೇನುತುಪ್ಪಗಳೆಲ್ಲ ನೇರ ಸಕ್ಕರೆಗಳೇ ಆಗಿದ್ದು, ಇವು ಮಾನವ ಶರೀರದಲ್ಲಿ ಕ್ರಮೇಣ ಗುÉಕೋಸ್ ಆಗಿ ಪರಿವರ್ತನೆಗೊಳ್ಳುತ್ತವೆ. ಹಾಗಾಗಿ ಮಧುಮೇಹ ಇರುವ ಜನರು ಸಕ್ಕರೆ, ಬೆಲ್ಲ ಹಾಗೂ ಜೇನುತುಪ್ಪದಿಂದ ಮಾಡಿದ ಸಿಹಿತಿನಿಸುಗಳನ್ನು ಕಟ್ಟುನಿಟ್ಟಾಗಿ ಸೇವಿಸಲೆಬಾರದು. ಕೃತಕ ಸಿಹಿಕಾರಕಗಳಾದ ಅಸ್ಪಾರ್ಟೆಮ್, ಸುಕ್ರಾಲೋಸ್, ಸ್ಯಾಕರಿನ್ ಇವು ಈಕ್ವಲ್ ಮತ್ತು ಶುಗರ್ ಫ್ರೀ ಎಂಬ ಹೆಸರಿನಲ್ಲಿ ದೊರೆಯುತ್ತಿದ್ದು ಇವನ್ನು ಕಾಫಿ, ಚಹಾದಂತಹ ಪಾನೀಯಗಳಲ್ಲಿ ಬಳಸಬಹುದು.
ಕಲ್ಪನೆ: ಮಧುಮೇಹ ರೋಗಿಗಳು ಹಣ್ಣಿನ ಜ್ಯೂಸ್‌ಗಳು ಮತ್ತು ತಂಪು ಪಾನೀಯಗಳನ್ನು ಸೇವಿಸಬಹುದು
ವಾಸ್ತವ: ಹಣ್ಣಿನ ಜ್ಯೂಸ್ ಮತ್ತು ತಂಪು ಪಾನೀಯಗಳಲ್ಲಿ ಅಧಿಕ ಪ್ರಮಾಣದಲ್ಲಿ ಹೆಚ್ಚುವರಿ ಸಕ್ಕರೆಯನ್ನು ಸೇರಿಸಿರುತ್ತಾರೆ ಹಾಗಾಗಿ ಇಂತಹ ಪಾನೀಯಗಳನ್ನು ಮಧುಮೇಹ ರೋಗಿಗಳು ಸೇವಿಸಬಾರದು. ಈ ಕಾಯಿಲೆ ಇರುವವರು ಹಣ್ಣುಗಳನ್ನು ಜ್ಯೂಸ್ ಮಾಡಿ ಕುಡಿಯುವುದಕ್ಕೆ ಬದಲಾಗಿ ತಾಜಾ ಹಣ್ಣುಗಳನ್ನು ಹಾಗೆಯೇಇಡಿ ಯಾಗಿ ಸೇವಿಸಬಹುದು. ಹಣ್ಣುಗಳನ್ನು ಜ್ಯೂಸ್ ಮಾಡುವಾಗ ಅದರಲ್ಲಿನ ನಾರಿನ ಅಂಶವು ನಷ್ಟವಾಗುತ್ತದೆ.
ಕಲ್ಪನೆ: ತಾವು ತೆಗೆದುಕೊಳ್ಳುತ್ತಿರುವ ಔಷಧಿಯ ಪ್ರಮಾಣವನ್ನು ಹೆಚ್ಚಿ ಸಿಕೊಂಡು ಅಥವಾ ಹೆಚ್ಚುವರಿ ಮಾತ್ರೆಯನ್ನು ತೆಗೆದುಕೊಂಡು ಈ ರೋಗಿಗಳು ಸಿಹಿತಿನಿಸುಗಳನ್ನು ಸೇವಿಸಬಹುದು.
ವಾಸ್ತವ: ಹೆಚ್ಚುವರಿಯಾಗಿ ಸೇವಿಸಿದ ಸಿಹಿತಿನಿಸುಗಳ ಸಿಹಿಯನ್ನು ಸರಿತೂಗಿಸಲು ಹೆಚ್ಚುವರಿ ಮಾತ್ರೆಗಳು ಅಥವಾ ಇನ್ಸುಲಿನ್ ಡೋಸೇಜ್ ಅನ್ನು ಹೆಚ್ಚಿಸಿಕೊಳ್ಳಬಹುದು ಎಂದು ಮಧುಮೇಹ ರೋಗಿಗಳು ಯಾವತ್ತೂ ಯೋಚಿಸಬಾರದು ಇದರಿಂದ ರಕ್ತದ ಸಕ್ಕರೆ ಮಟ್ಟವು ಹಠಾತ್ತಾಗಿ ಕುಸಿದು ತೀವ್ರ ಅಪಾಯವಾಗಬಹುದು. ರಕ್ತದ ಸಕ್ಕರೆ ಮಟ್ಟವು ವಿಪರೀತ ಕುಸಿಯುವುದರಿಂದ ಹಠಾತ್ ಸೆಳವು ಕಾಣಿಸಿಕೊಳ್ಳಬಹುದು ಮತ್ತು ರೋಗಿಯು ಕೋಮಾ ಸ್ಥಿತಿಗೆ ಹೋಗಬಹುದು. ಮಧುಮೇಹ ಚಿಕಿತ್ಸೆಗಾಗಿ ಬಳಸುವ ಕೆಲವು ಔಷಧಿಗಳು 24 ಗಂಟೆಯವರೆಗೆ ಕಾರ್ಯವೆಸಗುತ್ತವೆ ಇದರಿಂದಾಗಿ ಇವು ರಕ್ತದ ಸಕ್ಕರೆ ಮಟ್ಟವನ್ನು ದೀರ್ಘಕಾಲ ಕುಸಿತದ ಸ್ಥಿತಿಯಲ್ಲಿ ಇರಿಸಬಹುದು. ಹಾಗಾಗಿ ಮಧುಮೇಹ ಕಾಯಿಲೆ ಇರುವ ರೋಗಿಗಳು ತಮಗೆ ತಾವೇ ಸ್ವಯಂ-ಚಿಕಿತ್ಸೆ ಮಾಡಿಕೊಳ್ಳಬಾರದು. ಮಧುಮೇಹ ಔಷಧಿಗಳನ್ನು ಅಥವಾ ಇನ್ಸುಲಿನ್‌ನ ಹೆಚ್ಚಿವರಿ ಡೋಸೇಜ್ ಅನ್ನು ಸ್ವಯ-ಹೆಚ್ಚಿಸಿಕೊಂಡು ತೆಗೆದುಕೊಳ್ಳುವುದು ಅಪಾಯಕಾರಿ. ಮಧುಮೇಹ ಕಾಯಿಲೆ ಇರುವವರು ಸ್ವಯಂ-ಚಿಕಿತ್ಸಾ ಕ್ರಮವನ್ನು ಅನುಸರಿಸಲೇಬಾರದು.
– ಶ್ರೀಮತಿ ವಿದ್ಯಾ ರಾಜೇಶ್,
ಡಾ| ಕಾರ್ತಿಕ್ ಎನ್. ರಾವ್,
ಮೆಡಿಸಿನ್ ವಿಭಾಗ,
ಡಾ| ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ
Punjab ಪೊಲೀಸರ ಮೇಲೆ ಗ್ರೆನೇಡ್ ದಾಳಿ ನಡೆಸಿದ್ದ ಮೂವರು ಖಲಿಸ್ತಾನಿ ಉ*ಗ್ರರ Encounter
Tollywood: ‘ಗೇಮ್ ಚೇಂಜರ್ʼಗೆ ರಾಮ್‌ಚರಣ್ ರಾಷ್ಟ್ರ ಪ್ರಶಸ್ತಿ ಪಡೆಯುತ್ತಾರೆ – ಸುಕುಮಾರ್
Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ
Trasi: ನಾಪತ್ತೆಯಾಗಿದ್ದ ಬೋಟ್ ರೈಡರ್ ಶವ 36 ಗಂಟೆಗಳ ಬಳಿಕ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.