Hearing: ಬದುಕಿನ ಮೇಲೆ ಶ್ರವಣ ದೋಷದ ಪರಿಣಾಮಗಳು
Team Udayavani, Jan 14, 2024, 12:51 PM IST
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಇತ್ತೀಚೆಗಿನ ಜಾಗತಿಕ ಶ್ರವಣ ವರದಿಯಲ್ಲಿ ಜಗತ್ತಿನಲ್ಲಿ 1.5 ಬಿಲಿಯನ್ ಮಂದಿ ವಿವಿಧ ಪ್ರಮಾಣದ ಶ್ರವಣ ದೋಷದಿಂದ ಬಳಲುತ್ತಿರುವುದಾಗಿ ಹೇಳಲಾಗಿದೆ. ಈ ಪೈಕಿ ಭಾರತ ಸಹಿತ ಏಶ್ಯದಲ್ಲಿ ಸರಿಸುಮಾರು 109 ಮಂದಿ ಇದ್ದಾರೆ. ಮನುಷ್ಯನ ಪ್ರಾಮುಖ್ಯ ಗ್ರಹಣ ಶಕ್ತಿಗಳಲ್ಲಿ ಒಂದಾಗಿರುವ ಶ್ರವಣ ಶಕ್ತಿಯನ್ನು ಕಳೆದುಕೊಳ್ಳುವುದು ಸುತ್ತಮುತ್ತಲಿನ ಸದ್ದುಗಳನ್ನು ಗ್ರಹಿಸುವ ಶಕ್ತಿ, ಸಂವಹನ ಸಾಮರ್ಥ್ಯ, ಆಲೋಚನೆಗಳನ್ನು ಅಭಿವ್ಯಕ್ತಿ ಪಡಿಸುವ ಸಾಮರ್ಥ್ಯ, ಕಲಿಯುವ ಮತ್ತು ಶಿಕ್ಷಣ ಪಡೆಯುವ ಸಾಧ್ಯತೆಗಳ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರುತ್ತದೆ.
ಶ್ರವಣಶಕ್ತಿ ನಷ್ಟವು ಯಾವುದೇ ವಯೋಮಾನದವನ್ನು ಬಾಧಿಸಬಹುದಾಗಿದೆ. ಶಿಶುವೊಂದು ಜನ್ಮತಃ ಕಿವುಡಾಗಿದ್ದರೆ ಈ ತೊಂದರೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚುವುದು ಬಹಳ ಮುಖ್ಯವಾಗಿರುತ್ತದೆ. ಮಗುವಿನ ಕಿವುಡುತನವನ್ನು ಶೀಘ್ರವಾಗಿ ಪತ್ತೆ ಮಾಡಿ ಸಮರ್ಪಕವಾದ ಪುನರ್ವಸತಿಯನ್ನು ಒದಗಿಸುವುದರಿಂದ ಭಾಷಿಕ ಬೆಳವಣಿಗೆಯ ಕೊರತೆ ಅಥವಾ ವಿಳಂಬ, ದುರ್ಬಲ ಮನೋಸಾಮಾಜಿಕ ಸ್ವಾಸ್ಥ್ಯ, ಕಳಪೆ ಜೀವನ ಗುಣಮಟ್ಟ, ಶಿಕ್ಷಣದಲ್ಲಿ ತೊಂದರೆ ಮತ್ತು ಆರ್ಥಿಕ ಸ್ವಾವಲಂಬನೆಯ ಕೊರತೆಯಂತಹ ಪ್ರತಿಕೂಲ ಪರಿಣಾಮಗಳನ್ನು ದೂರ ಮಾಡಲು ಸಾಧ್ಯವಿದೆ.
ಜನ್ಮತಃ ಅಲ್ಲದ ಶ್ರವಣ ಸಾಮರ್ಥ್ಯ ನಷ್ಟದ ವಿಚಾರದಲ್ಲಿ ಹೇಳುವುದಾದರೆ, ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸಿದರೆ ಅನೇಕ ತೊಂದರೆಗಳನ್ನು ತಡೆಗಟ್ಟಲು ಸಾಧ್ಯವಿದೆ. ದೀರ್ಘಕಾಲೀನವಾಗಿ ದೊಡ್ಡ ಸದ್ದಿನ ಸಂಗೀತವನ್ನು ಕೇಳುವುದರಿಂದ ಉಂಟಾಗುವ ಹಾನಿಯಿಂದಾಗಿ ಒಳ ಕಿವಿಯ ತೊಂದರೆಗೆ ಒಳಗಾಗುವ ಮೂಲಕ 1 ಬಿಲಿಯಕ್ಕೂ ಅಧಿಕ ಬದುಕಿನ ಮೇಲೆ ಶ್ರವಣ ದೋಷದ ಮಂದಿ ಕಿವುಡುತನಕ್ಕೆ ತುತ್ತಾಗುವ ಅಪಾಯದಲ್ಲಿದ್ದಾರೆ ಎಂಬುದಾಗಿಯೂ ವಿಶ್ವ ಆರೋಗ್ಯ ಸಂಸ್ಥೆಯ ವರದಿ ಹೇಳಿದೆ.
ಶ್ರವಣ ಶಕ್ತಿಯ ರೋಗಶಾಸ್ತ್ರೀಯ ತಿಳಿವಳಿಕೆ, ಈ ಸಂಬಂಧಿ ಆವಿಷ್ಕಾರಗಳು ಹಾಗೂ ಶ್ರವಣ ಶಕ್ತಿ ನಷ್ಟದ ರೋಗ ಪತ್ತೆ ಮತ್ತು ಶ್ರವಣ ಶಕ್ತಿಯ ಪುನರ್‌ಸ್ಥಾಪನೆಯ ವಿಚಾರದಲ್ಲಿ ಕಳೆದ ಕೆಲವು ದಶಕಗಳಲ್ಲಿ ಅಪಾರ ಪ್ರಗತಿಯಾಗಿದೆ. ಈ ತಂತ್ರಜ್ಞಾನಗಳು ಸಂವಹನ ಸಾಮರ್ಥ್ಯ ಪುನರ್‌ಸ್ಥಾಪನೆ ಮಾಡುವ ಮೂಲಕ ಮತ್ತು ಪೂರ್ಣ ಸಾಮರ್ಥ್ಯದೊಂದಿಗೆ ಬದುಕಲು ಅನುವು ಮಾಡಿಕೊಡುವ ಮೂಲಕ ಕಿವುಡರ ಜೀವನದಲ್ಲಿ ಹೊಸ ಆಶಾಕಿರಣವನ್ನು ತಂದಿವೆ.
ಶ್ರವಣ ಶಕ್ತಿ ನಷ್ಟಕ್ಕೆ ಸಾಮಾನ್ಯ ಕಾರಣಗಳೇನು?
ಶ್ರವಣ ಶಕ್ತಿ ನಷ್ಟವು ಶಿಶು ಮಾತನಾಡಲು ಕಲಿಯುವುದಕ್ಕೆ ಮುನ್ನ ಉಂಟಾಗಿರಬಹುದು (ಪ್ರಿಲಿಂಗ್ವಲ್) ಅಥವಾ ಮಾತು ಕಲಿತ ಬಳಿಕ ಉಂಟಾಗಿರಬಹುದು (ಪೋಸ್ಟ್ ಲಿಂಗ್ವಲ್). ಪ್ರಿಲಿಂಗ್ವಲ್ ಶ್ರವಣ ಶಕ್ತಿ ನಷ್ಟ ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳಿಗೆ ಕಾರಣ ವಂಶವಾಹಿ ಅಸಹಜತೆಗಳು ಅಥವಾ ಹೊಸದಾಗಿ ಆರಂಭವಾಗಿರುವುದು (ವಂಶವಾಹಿ ಕಾರಣವಿಲ್ಲದೆ ಉಂಟಾದ ತೊಂದರೆ) ಆಗಿರಬಹುದು. ಸಂಬಂಧಿಗಳೊಳಗೆ ವಿವಾಹವಾಗಿ ಜನಿಸಿದ ಮಕ್ಕಳಲ್ಲಿ ವಂಶವಾಹಿಯಾದ ಶ್ರವಣ ಶಕ್ತಿ ನಷ್ಟ ತಲೆದೋರುವ ಸಾಧ್ಯತೆಗಳು ಹೆಚ್ಚಿರುತ್ತವೆ. ಮಾತು ಕಲಿಯುವುದಕ್ಕೆ ಮುನ್ನ ಉಂಟಾಗುವ ಶ್ರವಣ ಶಕ್ತಿ ನಷ್ಟಕ್ಕೆ ಇತರ ಕಾರಣಗಳಲ್ಲಿ ಜನನ ಸಮಯದಲ್ಲಿ ಕಡಿಮೆ ದೇಹತೂಕ, ಅವಧಿಪೂರ್ವ ಜನನ, ಜನಿಸಿದ ಬಳಿಕ ಜಾಂಡಿಸ್, ತಾಯಿಗೆ ಉಂಟಾದ ಸೋಂಕು, ಮೆನಿಂಜೈಟಿಸ್ ಸೇರಿವೆ. ಇವುಗಳಲ್ಲಿ ಕೆಲವನ್ನು ಲಸಿಕೆ ಮತ್ತು ಸರಿಯಾದ ವೈದ್ಯಕೀಯ ಆರೈಕೆ ಮುಖಾಂತರ ತಡೆಗಟ್ಟುವುದಕ್ಕೆ ಸಾಧ್ಯವಿದೆ. ಕಿವುಡುತನ ಹೊಂದಿರುವ ಈ ಮಕ್ಕಳನ್ನು ಬೇಗನೆ ಗುರುತಿಸಿ ಆದಷ್ಟು ಬೇಗನೆ ಪುನರ್ವಸತಿ ಒದಗಿಸಬೇಕಾಗಿರುತ್ತದೆ. ಯಾಕೆಂದರೆ ಬೆಳೆಯುತ್ತಿರುವ ಮೆದುಳು ನಿರ್ದಿಷ್ಟ ಸಮಯದ ಬಳಿಕ ಭಾಷಿಕ ಬೆಳವಣಿಗೆ ಮತ್ತು ಸಂವಹನ ಸಾಮರ್ಥ್ಯಗಳನ್ನು ಬೆಳೆಸಿಕೊಳ್ಳಲು ವಿಫಲವಾಗುತ್ತದೆ.
ಮಾತು ಕಲಿತ ಬಳಿಕ ಉಂಟಾಗುವ ಶ್ರವಣ ಶಕ್ತಿ ನಷ್ಟಕ್ಕೂ ವಂಶವಾಹಿ ತೊಂದರೆ, ಮೆನಿಂಜೈಟಿಸ್, ವೈರಲ್ ಸೋಂಕು, ವಯಸ್ಸಿಗೆ ಸಂಬಂಧಿಸಿದ ಶ್ರವಣ ಶಕ್ತಿ ನಷ್ಟ, ಓಟೊಕಾಕ್ಸಿಸಿಟಿ (ಜೀವ ಉಳಿಸುವ ಔಷಧವೊಂದರ ಅಡ್ಡ ಪರಿಣಾಮ), ಕಿವಿಯ ಸೋಂಕು, ಧೂಮಪಾನ, ಸದ್ದುಗದ್ದಲದಿಂದ ಉಂಟಾದ ಶ್ರವಣ ಶಕ್ತಿ ನಷ್ಟ, ಅವಘಡ ಮತ್ತು ಓಟೊಸ್ಕ್ಲೆರೋಸಿಸ್ ಕಾರಣವಾಗಬಲ್ಲವು.
ಮಕ್ಕಳಲ್ಲಿ/ ನನ್ನಲ್ಲಿ/ ಹೆತ್ತವರಲ್ಲಿ ಶ್ರವಣ ಶಕ್ತಿ ನಷ್ಟವನ್ನು ಗುರುತಿಸುವುದು ಹೇಗೆ?
ತಂತ್ರಜ್ಞಾನದಲ್ಲಿ ಆಗಿರುವ ನವೀನ ಮುನ್ನಡೆಗಳಿಂದಾಗಿ ನಾವೀಗ ನವಜಾತ ಶಿಶುಗಳು ಮತ್ತು ಪುಟ್ಟ ಮಕ್ಕಳಲ್ಲಿ ಕೂಡ ಇರಬಹುದಾದ ಶ್ರವಣ ಶಕ್ತಿ ನಷ್ಟವನ್ನು ಪತ್ತೆಹಚ್ಚಿ ಅದು ಯಾವ ಪ್ರಮಾಣದಲ್ಲಿದೆ ಎಂಬುದನ್ನು ವಿಶ್ಲೇಷಿಸಬಹುದಾಗಿದೆ. ಶ್ರವಣ ಶಕ್ತಿ ನಷ್ಟ ಇದ್ದರೆ ಆದಷ್ಟು ಬೇಗನೆ ಚಿಕಿತ್ಸೆ ಒದಗಿಸುವುದು ಎಷ್ಟು ಮುಖ್ಯ ಎಂಬುದನ್ನು ನಾವು ಈಗಾಗಲೇ ಅರ್ಥ ಮಾಡಿಕೊಂಡಿರುವುದರಿಂದ ನವಜಾತ ಶಿಶುವಿನ ಶ್ರವಣ ಶಕ್ತಿಯನ್ನು ಪರೀಕ್ಷಿಸಿ ತಿಳಿದುಕೊಳ್ಳುವುದು ಉತ್ತಮ. ಹೀಗಾಗಿಯೇ ನವಜಾತ ಶಿಶುಗಳ ಶ್ರವಣ ಶಕ್ತಿ ಪರೀಕ್ಷೆಯನ್ನು ಬಹುತೇಕ ಎಲ್ಲ ಆಸ್ಪತ್ರೆಗಳಲ್ಲಿ ನಡೆಸಲಾಗುತ್ತದೆ.
ನವಜಾತ ಶಿಶುಗಳ ಶ್ರವಣಶಕ್ತಿ ಪರೀಕ್ಷೆಯನ್ನು ಎರಡು ಹಂತಗಳಲ್ಲಿ ನಡೆಸಲಾಗುತ್ತದೆ. ಮೊದಲನೆಯ ಹಂತದಲ್ಲಿ ನವಜಾತ ಶಿಶುವನ್ನು ಓಟೊಅಕೌಸ್ಟಿಕ್ ಎಮಿಶನ್ ಟೆಸ್ಟಿಂಗ್ (ಒಎಇ) ಎಂಬ ಪರೀಕ್ಷೆಗೆ ಗುರಿಪಡಿಸಲಾಗುತ್ತದೆ. ಇದಾದ ಬಳಿಕ ಬ್ರೈನ್‌ಸ್ಟೆಮ್ ಇವೋಕ್ಡ್ ರೆಸ್ಪಾನ್ಸ್ ಆಡಿಯೊಮೆಟ್ರಿ (ಬಿಇಆರ್‌ಎ) ಎಂಬ ಪರೀಕ್ಷೆ ನಡೆಸಲಾಗುತ್ತದೆ. ಇವೆರಡೂ ಸುರಕ್ಷಿತ ಮತ್ತು ವಿಶ್ವಾಸಾರ್ಹ ಪರೀಕ್ಷೆಗಳಾಗಿವೆ. ಶಿಶು ಶ್ರವಣ ಶಕ್ತಿ ದೋಷ ಹೊಂದಿರುವುದು ಈ ಪರೀಕ್ಷೆಗಳಲ್ಲಿ ಸಾಬೀತಾದರೆ ಅದಕ್ಕೆ ಕಾರಣವೇನು ಮತ್ತು ಸಂಭಾವ್ಯ ಶ್ರವಣ ಶಕ್ತಿ ಪುನರ್‌ಸ್ಥಾಪನೆಯ ವಿಶ್ಲೇಷಣೆಗಳನ್ನು ನಡೆಸಲಾಗುತ್ತದೆ.
ವಯಸ್ಕರಲ್ಲಿ ಶ್ರವಣ ಶಕ್ತಿ ನಷ್ಟವನ್ನು ಪತ್ತೆ ಹಚ್ಚಲು, ಅದರ ಗಂಭೀರತೆಯನ್ನು ವಿಶ್ಲೇಷಿಸಲು ಹಾಗೂ ಕಾರಣಗಳನ್ನು ತಿಳಿಯಲು ಸರಳವಾದ ಟನ್ನಿಂಗ್ ಫೋರ್ಕ್ ಪರೀಕ್ಷೆಯಿಂದ ತೊಡಗಿ ಕಾರ್ಟಿಕಲ್ ಇವೋಕ್ಡ್ ರೆಸ್ಪಾನ್ಸ್ ಟೆಲಿಮೆಟ್ರಿಯ ವರೆಗೆ ಅನೇಕ ಪರೀಕ್ಷೆಗಳಿವೆ. ವ್ಯಕ್ತಿನಿರ್ದಿಷ್ಟ ಚಿಕಿತ್ಸೆಯನ್ನು ಒದಗಿಸುವುದಕ್ಕೆ ಅನುಕೂಲವಾಗುವಂತೆ ತೊಂದರೆಗೆ ಒಳಗಾಗಿರುವ ಕಿವಿಯ ನಿರ್ದಿಷ್ಟ ಭಾಗವನ್ನು ಪತ್ತೆಮಾಡುವುದು ಆಧುನಿಕ ತಂತ್ರಜ್ಞಾನದಿಂದ ಇಂದು ಸಾಧ್ಯವಿದೆ.
ಶ್ರವಣ ಶಕ್ತಿ ನಷ್ಟಕ್ಕೆ ಚಿಕಿತ್ಸೆಯ ಆಯ್ಕೆಗಳೇನು?
ಶ್ರವಣ ಶಕ್ತಿ ನಷ್ಟದ ಕಾರಣವನ್ನು ಆಧರಿಸಿ ಔಷಧ, ಶ್ರವಣ ಯಂತ್ರಗಳು, ಶಸ್ತ್ರಚಿಕಿತ್ಸೆಯ ಮೂಲಕ ಶ್ರವಣಶಕ್ತಿ ಪುನರ್‌ಸ್ಥಾಪನೆ ಅಥವಾ ಶ್ರವಣಶಕ್ತಿ ಯಂತ್ರದ ಶಸ್ತ್ರಚಿಕಿತ್ಸಾತ್ಮಕ ಅಳವಡಿಕೆಯಂತಹ ಚಿಕಿತ್ಸೆಗಳನ್ನು ಒದಗಿಸಬಹುದಾಗಿದೆ.
ಇಂಪ್ಲಾಂಟೇಶನ್ ಓಟಾಲಜಿ ಎಂದೇನು?
ಇದು ಓಟೊರಿನೊಲ್ಯಾರಿಂಜಾಲಜಿ (ಇಎನ್‌ಟಿ) ಯ ಒಂದು ಉಪ ವಿಭಾಗವಾಗಿದ್ದು, ಶ್ರವಣ ಶಕ್ತಿ ನಷ್ಟಕ್ಕೆ ಸಂಬಂಧಿಸಿದ್ದಾಗಿದೆ. ಶ್ರವಣ ಶಕ್ತಿಯನ್ನು ಪುನರ್‌ಸ್ಥಾಪಿಸಲು ಶಸ್ತ್ರಚಿಕಿತ್ಸೆಯ ಮೂಲಕ ಶ್ರವಣ ಉಪಕರಣವನ್ನು ಅಳವಡಿಸುವುದು ಈ ವಿಭಾಗಕ್ಕೆ ಸಂಬಂಧಿಸಿದ್ದಾಗಿದೆ. ಶಸ್ತ್ರಚಿಕಿತ್ಸೆಯ ಮೂಲಕ ಅಳವಡಿಸಬಹುದಾದ ಶ್ರವಣ ಉಪಕರಣಗಳಲ್ಲಿ ಕೊಕ್ಲಿಯರ್ ಇಂಪ್ಲಾಂಟ್, ಬೋನ್ ಆ್ಯಂಕರ್ಡ್ ಹಿಯರಿಂಗ್ ಡಿವೈಸ್, ಮಿಡ್ಲ್ ಇಯರ್ ಇಂಪ್ಲಾಂಟ್ ಗಳು, ಟೋಟಲಿ ಇಂಪ್ಲಾಂಟೇಬಲ್ ಹಿಯರಿಂಗ್ ಉಪಕರಣಗಳು ಮತ್ತು ಆಡಿಟರಿ ಬ್ರೈನ್‌ಸ್ಟೆಮ್ ಇಂಪ್ಲಾಂಟ್‌ಗಳು – ಹೀಗೆ ಹಲವಾರಿವೆ.
ಕೊಕ್ಲಿಯರ್ ಇಂಪ್ಲಾಂಟ್‌ಗಳಿಗೆ ಯಾರು ಅರ್ಹರು?
ಸಾಂಪ್ರದಾಯಿಕ ಶ್ರವಣ ಉಪಕರಣಗಳಿಂದ ಪ್ರಯೋಜನ ಹೊಂದದ ತೀವ್ರ ತರಹದಿಂದ ಅತೀ ತೀವ್ರ ಸ್ವರೂಪದ ಶ್ರವಣ ಶಕ್ತಿ ನಷ್ಟವನ್ನು ಹೊಂದಿರುವ ಮಕ್ಕಳಿಂದ ತೊಡಗಿ ಹಿರಿಯರ ವರೆಗಿನವರು ಕೊಕ್ಲಿಯರ್ ಇಂಪ್ಲಾಂಟ್ ಅಳವಡಿಸಿಕೊಳ್ಳಲು ಅರ್ಹರು. ಕೊಕ್ಲಿಯಾ (ಶ್ರವಣ ಅಂಗ)ವನ್ನು ಬೈಪಾಸ್ ಮಾಡಿ ಶ್ರವಣ ನರವನ್ನು ಪ್ರಚೋದಿಸುವ ಮೂಲಕ ನೈಸರ್ಗಿಕ ಶ್ರವಣ ಸಾಮರ್ಥ್ಯಕ್ಕೆ ಸಾಟಿಯೆನಿಸುವ ಶ್ರವಣ ಶಕ್ತಿಯನ್ನು ಒದಗಿಸುವ ಇಂಪ್ಲಾಂಟೇಬಲ್ ಬಯೋಪ್ರಾಸ್ಥೆಸಿಸ್ ಉಪಕರಣ ಇದಾಗಿದೆ.
ಸೆನ್ಸೊನ್ಯೂರಲ್ ಶ್ರವಣ ಶಕ್ತಿ ನಷ್ಟವನ್ನು ಪುನರ್ ಸ್ಥಾಪಿಸುವಲ್ಲಿ ನಿಸ್ಸಂದೇಹವಾಗಿ ಸಮರ್ಥ ಮತ್ತು ಸುರಕ್ಷಿತ ಉಪಕರಣ ಇದು ಎಂಬುದು ಸಾಬೀತಾಗಿದೆ. ಒಂದು ಕಿವಿಯ ಶ್ರವಣ ಶಕ್ತಿ ನಷ್ಟವನ್ನು ಪುನರ್ ಸ್ಥಾಪಿಸುವಲ್ಲಿ ಕೂಡ ಇದು ಪರಿಣಾಮಕಾರಿಯಾಗಿದ್ದು, ಎರಡೂ ಕಿವಿಗಳಲ್ಲಿ ಅಳವಡಿಸಿದಾಗಲೂ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ, ಕಿವುಡುತನವು ಒಂದು ನಿಶ್ಶಬ್ದ ಅಂಗವೈಕಲ್ಯವಾಗಿದ್ದು, ವ್ಯಕ್ತಿಯ ಜೀವನ ಗುಣಮಟ್ಟವನ್ನು ಬಾಧಿಸುತ್ತದೆ. ಭಾಷೆ ಮತ್ತು ಮಾತಿನ ಸಾಮರ್ಥ್ಯದ ಬೆಳವಣಿಗೆಯಲ್ಲಿ ಶ್ರವಣ ಸಾಮರ್ಥ್ಯವು ಪ್ರಧಾನ ಮೆಟ್ಟಿಲಾಗಿರುವುದರಿಂದ ಅದನ್ನು ಪುನರ್‌ಸ್ಥಾಪಿಸುವುದು ಮುಖ್ಯವಾಗಿದೆ. ಶ್ರವಣ ಶಕ್ತಿ ನಷ್ಟವು ಅನೇಕ ಕಾರಣಗಳಿಂದ ಉಂಟಾಗಬಹುದಾಗಿದೆ.
ರೋಗಶಾಸ್ತ್ರವನ್ನು ಆಧರಿಸಿ ವಿವಿಧ ಚಿಕಿತ್ಸಾ ವಿಧಾನಗಳ ಮೂಲಕ ಶ್ರವಣ ಸಾಮರ್ಥ್ಯವನ್ನು ಪುನರ್‌ಸ್ಥಾಪಿಸಬಹುದಾಗಿದೆ. ಶ್ರವಣ ಸಾಮರ್ಥ್ಯ ನಷ್ಟ ಪ್ರಕರಣಗಳನ್ನು ನಿಭಾಯಿಸುವ ವಿಶೇಷ ವೈದ್ಯಕೀಯ ಕ್ಷೇತ್ರ ಇಂಪ್ಲಾಂಟೇಶನ್ ಓಟಾಲಜಿ ಆಗಿದ್ದು, ಕೊಕ್ಲಿಯರ್ ಇಂಪ್ಲಾಂಟ್, ಬೋನ್ ಆ್ಯಂಕರ್ಡ್ ಇಂಪ್ಲಾಂಟೆಡ್‌ನಂತಹ ಬಯೋಪ್ರಾಸ್ಥೆಸಿಸ್‌ಗಳ ಮೂಲಕ ಶ್ರವಣ ಶಕ್ತಿಯನ್ನು ಪುನರ್ ಸ್ಥಾಪಿಸಬಹುದಾಗಿದೆ. ಶ್ರವಣ ಸಾಮರ್ಥ್ಯ ನಷ್ಟವು ಆರೋಗ್ಯವಂತರಲ್ಲಿಯೂ ಅನಾರೋಗ್ಯಕರ ಅಭ್ಯಾಸಗಳಿಂದ ಉಂಟಾಗಬಹುದು.
ಆರೋಗ್ಯಯುತ ಜೀವನ ಶೈಲಿಯನ್ನು ಅನುಸರಿಸುವುದು ಮತ್ತು ಭಾರೀ ಪ್ರಮಾಣದ ಸದ್ದುಗದ್ದಲಗಳಿಗೆ ಒಡ್ಡಿಕೊಳ್ಳದಿರುವುದರ ಮೂಲಕ ಶ್ರವಣ ಶಕ್ತಿ ನಷ್ಟ ಉಂಟಾಗುವುದನ್ನು ತಡೆಯಬಹುದು.
-ಡಾ| ಶ್ರೀನಿವಾಸ ಕಾಮತ್ ಕೆ.,
ಕನ್ಸಲ್ಟಂಟ್ ಇಎನ್‌ಟಿ ಮತ್ತು ಹೆಡ್ ಹಾಗೂ ನೆಕ್ ಸರ್ಜರಿ ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇಎನ್‌ಟಿ ವಿಭಾಗ, ಕೆಎಂಸಿ , ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಎರಡು ಸೈಬರ್ ವಂಚನೆ ಪ್ರಕರಣ: ಸೆನ್ ಪೊಲೀಸರಿಂದ ಇಬ್ಬರ ಬಂಧನ
High Court: ಕಬ್ಬಿಣದ ಅದಿರಿಗೆ ದರ ನಿಗದಿ: ಕೇಂದ್ರ, ರಾಜ್ಯಕ್ಕೆ ನೋಟಿಸ್
Valmiki Nigama Scam: ಪ್ರಕರಣ ರದ್ದು ಕೋರಿ ಮಾಜಿ ಸಚಿವ ನಾಗೇಂದ್ರ ಹೈಕೋರ್ಟ್‌ಗೆ
Govt. Employees Association: ನನ್ನ ಸೋಲಿಸಲು ರಾಜಕೀಯ ಷಡ್ಯಂತ್ರ: ಸಿ.ಎಸ್.ಷಡಾಕ್ಷರಿ
Christmas: ಕರಾವಳಿಯಲ್ಲಿ ಸಡಗರ, ಸಂಭ್ರಮದ ಕ್ರಿಸ್ಮಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.