Asthma ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ; ಜಾಗತಿಕ ಅಸ್ತಮಾ ದಿನ 2024: ಮೇ 7
Team Udayavani, May 12, 2024, 12:35 PM IST
ಅಸ್ತಮಾವು ಜಾಗತಿಕವಾಗಿ ಕೋಟ್ಯಂತರ ಮಂದಿಯನ್ನು ಬಾಧಿಸುವ ಒಂದು ಸೋಂಕುಕಾರಿಯಲ್ಲದ ಶ್ವಾಸಾಂಗ ರೋಗ. ಇದು ವ್ಯಕ್ತಿಯ ಯಾವುದೇ ವಯಸ್ಸಿನಲ್ಲಿ ತಲೆದೋರಬಹುದಾದರೂ ಬಾಲ್ಯದಲ್ಲಿಯೇ ಆರಂಭವಾಗುವುದು ಹೆಚ್ಚು.
ಭಾರತದಲ್ಲಿ ಅಸ್ತಮಾ ಉಪಸ್ಥಿತಿ: ಭಾರತದಲ್ಲಿ ಅಸ್ತಮಾ ಪ್ರಕರಣಗಳು ಗಮನಾರ್ಹ ಸಂಖ್ಯೆಯಲ್ಲಿವೆ. ದೇಶದಲ್ಲಿ ಸರಿಸುಮಾರು 3.5 ಕೋಟಿ ಮಂದಿ ಅಸ್ತಮಾ ಹೊಂದಿದ್ದಾರೆ ಎಂದು ಅಂದಾಜಿಸಲಾಗಿದೆ.
ನಗರ ಮತ್ತು ಗ್ರಾಮೀಣ ಸ್ಥಿತಿಗತಿ: ಪರಿಸರ ಮಾಲಿನ್ಯ ಮತ್ತು ಜೀವನಶೈಲಿಯ ಅಂಶಗಳಿಂದಾಗಿ ದೇಶದಲ್ಲಿ ನಗರ ಪ್ರದೇಶದಲ್ಲಿಯೇ ಅಸ್ತಮಾ ರೋಗಿಗಳು ಹೆಚ್ಚು ಸಂಖ್ಯೆಯಲ್ಲಿದ್ದಾರೆ.
ಅಸ್ತಮಾ ಅಂದರೇನು?
ಅಸ್ತಮಾ ಒಂದು ದೀರ್ಘಕಾಲೀನ ಶ್ವಾಸಕೋಶ ಕಾಯಿಲೆಯಾಗಿದ್ದು, ಇದರಲ್ಲಿ ಶ್ವಾಸನಾಳಗಳಲ್ಲಿ ಉರಿಯೂತ ಉಂಟಾಗಿ ಅವು ಸಂಕುಚನಗೊಳ್ಳುತ್ತವೆ.
ಅಸ್ತಮಾಕ್ಕೆ ತುತ್ತಾಗಿರುವ ರೋಗಿಗಳು ಉಸಿರಾಡಲು ಕಷ್ಟಪಡುತ್ತಾರೆ, ಕೆಮ್ಮುತ್ತಾರೆ ಮತ್ತು ಉಬ್ಬಸಕ್ಕೀಡಾಗುತ್ತಾರೆ.
ಅಲರ್ಜಿಕಾರಕಗಳು (ಧೂಳು, ಪರಾಗರೇಣು, ಸೂಕ್ಷ್ಮ ಕ್ರಿಮಿಕೀಟಗಳು), ತಂಪುಗಾಳಿ, ಹೊಗೆ ಅಥವಾ ವ್ಯಾಯಾಮದಂತಹ ಪ್ರಚೋದಕಗಳಿಂದ ಅಸ್ತಮಾ ಲಕ್ಷಣಗಳು ತೀವ್ರಗೊಳ್ಳಬಹುದಾಗಿದೆ.
ಬಹುತೇಕ ಅಸ್ತಮಾ ರೋಗಿಗಳು ಅಸ್ತಮಾ ಲಕ್ಷಣಗಳನ್ನು ಹೊಂದಿಲ್ಲದ ಸಮಯದಲ್ಲಿ ತಮಗಿರುವ ಕಾಯಿಲೆಯನ್ನು ನಿರ್ಲಕ್ಷಿಸುತ್ತಾರೆ. ಇಂತಹ ಸಮಯದಲ್ಲಿ ತಮಗೆ ನಿಯಮಿತವಾಗಿ ಉಪಯೋಗಿಸುವುದಕ್ಕಾಗಿ ನೀಡಲಾಗಿರುವ ಇನ್‌ಹೇಲರ್ ಬಳಕೆ ಮಾಡುವುದನ್ನು ನಿಲ್ಲಿಸಿಬಿಡುತ್ತಾರೆ. ಇದರಿಂದಾಗಿ ಅವರಲ್ಲಿ ಅಸ್ತಮಾ ಲಕ್ಷಣಗಳು ಉಲ್ಬಣಿಸುತ್ತವೆ ಮತ್ತು ಲಕ್ಷಣಗಳನ್ನು ನಿಯಂತ್ರಣಕ್ಕೆ ತರುವುದಕ್ಕಾಗಿ ಹೆಚ್ಚು ಔಷಧಗಳನ್ನು ಪ್ರಯೋಗಿಸಬೇಕಾಗುತ್ತದೆ.
ಅಸ್ತಮಾದ ಬಗೆಗೆ ಜನಸಾಮಾನ್ಯರಲ್ಲಿ ಇರುವ ತಪ್ಪು ಕಲ್ಪನೆಗಳು ಈ ಕಾಯಿಲೆಗೆ ತುತ್ತಾದವರು ವೈದ್ಯಕೀಯ ನೆರವು ಪಡೆಯುವುದು ವಿಳಂಬವಾಗುವಂತೆ ಮಾಡುತ್ತವೆ.
ಅಸ್ತಮಾ ಬಗ್ಗೆ ಇರುವ ಸಾಮಾನ್ಯ ತಪ್ಪು ಕಲ್ಪನೆಗಳು
ಸುಳ್ಳು: “ಅಸ್ತಮಾ ಸೋಂಕುರೋಗ’
ನಿಜ: ಅಸ್ತಮಾ ಒಬ್ಬರಿಂದ ಒಬ್ಬರಿಗೆ ಹರಡುವ ಸೋಂಕುರೋಗವಲ್ಲ. ಇದು ಒಂದು ದೀರ್ಘಕಾಲೀನ ಕಾಯಿಲೆ; ಸೋಂಕು ಅಲ್ಲ.
ಸುಳ್ಳು: “ಅಸ್ತಮಾ ರೋಗಿಗಳು ವ್ಯಾಯಾಮ ಮಾಡಬಾರದು’
ನಿಜ: ಅಸ್ತಮಾ ರೋಗಿಗಳಿಗೆ ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಪ್ರಯೋಜನವಾಗುತ್ತದೆ. ಅಸ್ತಮಾ ರೋಗಿಗಳಿಗೆ ಸುರಕ್ಷಿತವಾದ ವ್ಯಾಯಾಮಗಳು ಯಾವುವು ಎಂಬುದನ್ನು ವೈದ್ಯರ ಬಳಿ ಕೇಳಿ ತಿಳಿದುಕೊಳ್ಳಬಹುದಾಗಿದೆ.
ಸುಳ್ಳು: “ಅಸ್ತಮಾ ಔಷಧಗಳು ಚಟ ಹುಟ್ಟಿಸುತ್ತವೆ’
ನಿಜ: ಇನ್‌ಹೇಲರ್‌ಗಳು ಸುರಕ್ಷಿತವಾಗಿದ್ದು, ಚಟವಾಗುವುದಿಲ್ಲ. ಅಸ್ತಮಾ ಲಕ್ಷಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಲು ಇವು ಸಹಾಯ ಮಾಡುತ್ತವೆ.
ಸುಳ್ಳು: “ಅಸ್ತಮಾವನ್ನು ಗುಣಪಡಿಸಬಹುದು’
ಸತ್ಯ: ಅಸ್ತಮಾವನ್ನು ಗುಣಪಡಿಸಲಾಗದು. ಆದರೆ ನಿಯಮಿತವಾದ ಔಷಧೋಪಚಾರದಿಂದ ಅಸ್ತಮಾವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದು.
ಸುಳ್ಳು: “ಅಸ್ತಮಾದಿಂದಾಗಿ ಯಾರೂ ಸಾಯುವುದಿಲ್ಲ’
ನಿಜ: ದುರದೃಷ್ಟವಶಾತ್ ಅಸ್ತಮಾದಿಂದ ಸಾವು ಸಂಭವಿಸಬಹುದಾಗಿದೆ.
ಸುಳ್ಳು: “ಅಸ್ತಮಾ ಒಂದು ಮಾನಸಿಕ ರೋಗ’
ನಿಜ: ಇದು ಸತ್ಯವಲ್ಲ. ಅಸ್ತಮಾವು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ. ನಾವು ಉಸಿರಾಡುವ ಗಾಳಿಯಲ್ಲಿ ಇರುವ ಪ್ರಚೋದಕಗಳಿಗೆ ನಮ್ಮ ದೇಹದ ರೋಗ ನಿರೋಧಕ ಶಕ್ತಿ ಅತೀ ಪ್ರತಿಕ್ರಿಯೆ ಪ್ರದರ್ಶಿಸುವುದರಿಂದ ಈ ಕಾಯಿಲೆಯ ಲಕ್ಷಣಗಳು ಉಂಟಾಗುತ್ತವೆ.
ಸುಳ್ಳು: “ಉಸಿರಾಟಕ್ಕೆ ಕಷ್ಟವಾದಾಗ ಮಾತ್ರ ಅಸ್ತಮಾ ಇರುತ್ತದೆ’
ನಿಜ: ಅಸ್ತಮಾ ರೋಗಿಗಳಲ್ಲಿ ಎದ್ದುಕಾಣುವ ಲಕ್ಷಣಗಳು ಇಲ್ಲದೆಯೂ ಶ್ವಾಸನಾಳಗಳಲ್ಲಿ ಉರಿಯೂತ ಉಂಟಾಗಿರುವ ಸಾಧ್ಯತೆಗಳು ಇರುತ್ತವೆ. ಅಸ್ತಮಾ ಕಾಯಿಲೆಯು ಅದರ ಲಕ್ಷಣಗಳು ಇಲ್ಲದೆಯೂ ಇರಬಹುದಾಗಿದೆ.
ಸುಳ್ಳು: “ಇನ್‌ಹೇಲರ್‌ಗಳಲ್ಲಿ ಆರೋಗ್ಯಕ್ಕೆ ಅಪಾಯಕಾರಿಯಾದ ಸ್ಟೀರಾಯ್ಡ ಗಳಿರುತ್ತವೆ’
ನಿಜ: ಇಲ್ಲ. ಅಸ್ತಮಾ ಇನ್‌ಹೇಲರ್‌ಗಳಲ್ಲಿ ಉರಿಯೂತವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡಬಲ್ಲ ಏಜೆಂಟ್‌ಗಳಾಗಿರುವ ಸ್ಟಿರಾಯ್ಡಗಳಿರುತ್ತವೆ. ಈ ಇನ್ ಹೇಲರ್‌ಗಳಲ್ಲಿ ಸ್ಟೀರಾಯ್ಡಗಳು ಅತ್ಯಲ್ಪ ಪ್ರಮಾಣದಲ್ಲಿ ಇರುತ್ತವೆ. ಆದ್ದರಿಂದ ಇವುಗಳನ್ನು ಉಪಯೋಗಿಸುವುದು ಸುರಕ್ಷಿತವಾಗಿದೆ.
ರೋಗಪತ್ತೆ
ಬಹುತೇಕ ಸಂದರ್ಭಗಳಲ್ಲಿ ಲಕ್ಷಣಗಳು ಮತ್ತು ವೈದ್ಯಕೀಯ ಪರೀಕ್ಷೆಗಳಿಂದ ಅಸ್ತಮಾ ರೋಗ ನಿರ್ಧಾರ ನಡೆಸಲಾಗುತ್ತದೆ.
ಸ್ಪಿರೊಮೆಟ್ರಿ
ಸ್ಪಿರೊಮೆಟ್ರಿ ಎಂಬ ಪರೀಕ್ಷೆಯ ಮೂಲಕ ಶ್ವಾಸಮಾರ್ಗದಲ್ಲಿ ಉಂಟಾಗುತ್ತಿರುವ ಅಡಚಣೆಯ ತೀವ್ರತೆಯನ್ನು ವಿಶ್ಲೇಷಿಸಲಾಗುತ್ತದೆ. ಬಲಯುತವಾಗಿರುವ ಉಚ್ಛ್ವಾಸ ಮತ್ತು ನಿಶ್ವಾಸ ಸಂದರ್ಭದಲ್ಲಿ ಉಸಿರಿನ ಪ್ರವಾಹ ಮತ್ತು ಪ್ರಮಾಣವನ್ನು ಅಳೆಯುವ ಯಂತ್ರ ಸ್ಪಿರೊಮೀಟರ್. ಉಸಿರಿನ ಮೂಲಕ ತೆಗೆದುಕೊಳ್ಳುವ ಬ್ರೊಂಕೊಡೈಲೇಟರ್ ಔಷಧವನ್ನು ನೀಡಿದ ಬಳಿಕ ಶ್ವಾಸಕೋಶದ ಕಾರ್ಯಕ್ಷಮತೆಯಲ್ಲಿ ಆಗಿರುವ ಪ್ರಗತಿಯನ್ನು ಇದರ ಮೂಲಕ ಗಮನಿಸಬಹುದಾಗಿದೆ.
ಪೀಕ್ ರೆಸ್ಪಿರೇಟರಿ ಫ್ಲೋ ರೇಟ್ (ಪಿಇಎಫ್ಆರ್)
ನಿಮ್ಮ ಗರಿಷ್ಠ ಸಾಮರ್ಥ್ಯವನ್ನು ಉಪಯೋಗಿಸಿಕೊಂಡು ನೀವು ಎಷ್ಟು ವೇಗವಾಗಿ ಗಾಳಿಯನ್ನು ಉಸಿರಾಡಬಲ್ಲಿರಿ ಎಂಬುದನ್ನು ಈ ಪರೀಕ್ಷೆ ಅಳೆಯುತ್ತದೆ. ಇಲ್ಲಿ ಉಪಯೋಗಿಸಲಾಗುವ ಉಪಕರಣವನ್ನು ಪೀಕ್ ಫ್ಲೋ ಮೀಟರ್ ಎಂದು ಕರೆಯಲಾಗುತ್ತದೆ. ಅಸ್ತಮಾ ರೋಗಿಗಳು ಮನೆಯಲ್ಲಿಯೇ ಉಸಿರಾಟಕ್ಕೆ ಎಷ್ಟರ ಮಟ್ಟಿಗಿನ ಅಡಚಣೆ ಇದೆ ಎಂಬುದನ್ನು ತಿಳಿಯಲು ಈ ಉಪಕರಣವನ್ನು ಉಪಯೋಗಿಸಬಹುದಾಗಿದೆ.
ಫ್ರಾಕ್ಷನಲ್ ಎಕ್ಸೇಲ್ಡ್ ನೈಟ್ರಿಕ್ ಆಕ್ಸೈಡ್ (FeNO)
ಎಫ್ಇಎನ್‌ಒ FeNO) ನಾವು ಉಸಿರನ್ನು ಹೊರಕ್ಕೆ ಬಿಟ್ಟಾಗ ಅದರಲ್ಲಿ ಸಾರಜನಕದ ಆಕ್ಸೆ„ಡ್ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಅಳೆಯುತ್ತದೆ. ಸಾರಜನಕದ ಆಕ್ಸೆ„ಡ್ ಹೆಚ್ಚು ಪ್ರಮಾಣದಲ್ಲಿದ್ದರೆ ಉರಿಯೂತವು ಹೆಚ್ಚಿದೆ ಎಂದು ಅರ್ಥ.
ರಕ್ತ ಪರೀಕ್ಷೆಗಳು
ಕೆಲವು ಅಸ್ತಮಾ ರೋಗಿಗಳಲ್ಲಿ ರಕ್ತದಲ್ಲಿ ಇಸ್ನೊಫಿಲ್ ಪ್ರಮಾಣ ಹೆಚ್ಚಿರಬಹುದಾಗಿದೆ. ಕೆಲವು ರೋಗಿಗಳಲ್ಲಿ ಇಮ್ಯುನೊಗ್ಲಾಬ್ಯುಲಿನ್ ಇ ಪ್ರಮಾಣವೂ ಹೆಚ್ಚಿರಬಹುದಾಗಿದೆ.
ಅಲರ್ಜಿ ಪರೀಕ್ಷೆ ಅಸ್ತಮಾ ಪ್ರಚೋದನೆಗೊಳ್ಳಲು ಕಾರಣವಾಗಬಹುದಾದ ವಸ್ತುಗಳ (ಧೂಳು, ಪರಾಗರೇಣು, ಕ್ರಿಮಿಕೀಟಗಳು, ಆಹಾರ) ಮಾದರಿಗಳನ್ನು ಚರ್ಮದ ಮೇಲೆ ಇರಿಸಲಾಗುತ್ತದೆ. ಅಲರ್ಜಿ ಪ್ರಚೋದಕವನ್ನು ಇರಿಸಿದ ಸ್ಥಳದಲ್ಲಿ ಉಂಟಾಗಿರಬಹುದಾದ ಊತವನ್ನು ಅಳೆಯಲಾಗುತ್ತದೆ. ಅಸ್ತಮಾ ರೋಗಿಗೆ ಯಾವುದರ ಅಲರ್ಜಿ ಇದೆ ಎಂಬುದನ್ನು ತಿಳಿಯಲು ಈ ಪರೀಕ್ಷೆಯು ಸಹಾಯ ಮಾಡುತ್ತದೆ. ಆಯಾ ಅಲರ್ಜಿ ಪ್ರಚೋದಕದ ಸಂಪರ್ಕವನ್ನು ಕಡಿಮೆ ಮಾಡಿದಾಗ ಅಸ್ತಮಾ ಲಕ್ಷಣಗಳು ನಿಯಂತ್ರಣಕ್ಕೆ ಬರಬಹುದಾಗಿದೆ.
ರೋಗ ಪತ್ತೆ ಮತ್ತು ನಿರ್ವಹಣೆಯ ಪ್ರಾಮುಖ್ಯ
ಶೀಘ್ರ ರೋಗಪತ್ತೆ: ಅಸ್ತಮಾವನ್ನು ಎಷ್ಟು ಸಾಧ್ಯವೋ ಅಷ್ಟು ಶೀಘ್ರವಾಗಿ ಪತ್ತೆ ಹಚ್ಚುವುದು ನಿರ್ಣಾಯಕವಾಗಿದೆ. ಹೆತ್ತವರು, ಶಿಕ್ಷಕರು ಮತ್ತು ಆರೋಗ್ಯ ಸೇವಾ ಸಿಬಂದಿಯಂಥವರು ಮಕ್ಕಳು, ಹದಿಹರಯದವರಲ್ಲಿ ವಿಶೇಷವಾಗಿ ರಾತ್ರಿ ಕಾಲದಲ್ಲಿ ಮತ್ತು ದೈಹಿಕ ಚಟುವಟಿಕೆಗಳಲ್ಲಿ ತೊಡಗಿರುವಂತಹ ಸಂದರ್ಭಗಳಲ್ಲಿ ಕೆಮ್ಮು, ಉಸಿರು ಕಟ್ಟುವಿಕೆಯಂತಹ ಲಕ್ಷಣಗಳಿದ್ದರೆ ಗಮನಿಸಬೇಕು.
ನಿಯಮಿತವಾಗಿ ಆರೋಗ್ಯ ತಪಾಸಣೆ: ಅಸ್ತಮಾದ ಮೇಲೆ ನಿರಂತರ ನಿಗಾ ಇರಿಸಲು ಮತ್ತು ಆವಶ್ಯಕತೆಗೆ ತಕ್ಕಂತೆ ಚಿಕಿತ್ಸೆಯಲ್ಲಿ ಮಾರ್ಪಾಟು ಮಾಡಿಕೊಳ್ಳಲು ನಿಯಮಿತವಾಗಿ ವೈದ್ಯರ ಭೇಟಿ ಅತ್ಯಗತ್ಯವಾಗಿದೆ. ಅಸ್ತಮಾ ಲಕ್ಷಣಗಳನ್ನು ನಿಭಾಯಿಸಲು ಸಾಮಾನ್ಯವಾಗಿ ಇನ್‌ಹೇಲರ್‌ಗಳನ್ನು ಉಪಯೋಗಿಸಲಾಗುತ್ತದೆ.
ಪ್ರಚೋದಕಗಳಿಂದ ದೂರವಿರಿ: ಅಸ್ತಮಾ ಲಕ್ಷಣಗಳನ್ನು ಪ್ರಚೋದಿಸುವ ವಸ್ತುಗಳನ್ನು ತಿಳಿದುಕೊಳ್ಳುವುದು ಮತ್ತು ಅವುಗಳಿಂದ ದೂರವಿರುವುದು ಅತ್ಯಗತ್ಯ. ಮನೆಯನ್ನು ಹೊಗೆ-ಧೂಳುರಹಿತವಾಗಿ ಇರಿಸಿಕೊಳ್ಳಬೇಕು ಮತ್ತು ಅಲರ್ಜಿಕಾರಕಗಳ ಸಂಪರ್ಕದಿಂದ ದೂರವಿರಬೇಕು. ತಂಬಾಕು ಸೇದುವುದರಿಂದ ದೂರವಿರಿ.
ನಿಯಮಿತವಾಗಿ ಔಷಧ ಉಪಯೋಗ: ನಿಮ್ಮ ವೈದ್ಯರು ಶಿಫಾರಸು ಮಾಡಿರುವ ಔಷಧಗಳನ್ನು ಚಾಚೂತಪ್ಪದೆ ನಿಯಮಿತವಾಗಿ ತೆಗೆದುಕೊಳ್ಳಿ. ಲಕ್ಷಣಗಳು ಉಲ್ಬಣಗೊಂಡಾಗ ನಿಯಂತ್ರಣಕ್ಕೆ ತಂದುಕೊಳ್ಳುವುದು ಹೇಗೆ ಎಂಬುದರ ಸಹಿತವಾಗಿ ಅಸ್ತಮಾ ರೋಗಿಗಳು ತಮ್ಮ ಚಿಕಿತ್ಸೆಯ ಯೋಜನೆಯನ್ನು ವೈದ್ಯರ ಬಳಿ ಕೂಲಂಕಷವಾಗಿ ಚರ್ಚಿಸಿಕೊಳ್ಳಬೇಕು. ಇನ್‌ಹೇಲರ್ ಉಪಯೋಗಿಸಲಾರದ ರೋಗಿಗಳಿಗೆ ನೆಬ್ಯುಲೈಸರ್ ಮೂಲಕ ಔಷಧಗಳನ್ನು ನೀಡಬಹುದಾಗಿದೆ.
ವೈದ್ಯಕೀಯ ಆರೈಕೆ ಪಡೆಯಿರಿ: ಅಸ್ತಮಾ ಲಕ್ಷಣಗಳು ನಿಯಂತ್ರಣಕ್ಕೆ ಬಾರದೆ ಇದ್ದ ಸಂದರ್ಭದಲ್ಲಿ ತತ್‌ಕ್ಷಣ ವೈದ್ಯರಲ್ಲಿಗೆ ತೆರಳಿ ಚಿಕಿತ್ಸೆ ಪಡೆಯುವುದು ಉತ್ತಮ. ತೀವ್ರ ತರಹದ ಅಸ್ತಮಾ ಉಂಟಾದಲ್ಲಿ ಆಸ್ಪತ್ರೆಗೆ ದಾಖಲಾಗಬೇಕಾಗುತ್ತದೆ.
2024 ಅಂದರೆ ಈ ವರ್ಷದ ಜಾಗತಿಕ ಅಸ್ತಮಾ ದಿನದ ಧ್ಯೇಯವಾಕ್ಯವು “ಅಸ್ತಮಾ ಕುರಿತಾದ ಶಿಕ್ಷಣದಿಂದ ಸಶಕ್ತೀಕರಣ” ಎಂಬುದಾಗಿದೆ. ಅಸ್ತಮಾ ಕುರಿತು ಜನರಿಗೆ ಶಿಕ್ಷಣ, ಅರಿವು ಒದಗಿಸುವುದು, ಅಸ್ತಮಾ ರೋಗಿಗಳು ತಮ್ಮ ಅನಾರೋಗ್ಯವನ್ನು ಪರಿಣಾಮಕಾರಿಯಾಗಿ ನಿಭಾಯಿಸಿಕೊಳ್ಳುವಂತೆ ಸಶಕ್ತಗೊಳಿಸುವುದು ಮತ್ತು ಯಾವಾಗ ವೈದ್ಯಕೀಯ ಆರೈಕೆ ಪಡೆದುಕೊಳ್ಳಬೇಕು ಎಂಬುದನ್ನು ಅರ್ಥ ಮಾಡಿಕೊಳ್ಳುವುದರ ಪ್ರಾಮುಖ್ಯವನ್ನು ಈ ಧ್ಯೇಯವಾಕ್ಯವು ಒತ್ತಿಹೇಳುತ್ತದೆ. ಪರಿಣಾಮಕಾರಿ ಅಸ್ತಮಾ ನಿರ್ವಹಣೆಯ ಬಗ್ಗೆ ಜನಸಾಮಾನ್ಯರು ಮತ್ತು ಅಸ್ತಮಾ ರೋಗಿಗಳಲ್ಲಿ ಅರಿವನ್ನು ವಿಸ್ತರಿಸಲು ಆರೋಗ್ಯ ಸೇವಾ ವೃತ್ತಿನಿರತರಿಗೆ ಮತ್ತು ಪರಿಸರಸ್ನೇಹಿಯಾಗಿರುವ ಉಸಿರಾಡುವ ಔಷಧ (ಇನ್‌ಹೇಲ್ಡ್ ಮೆಡಿಕೇಶನ್ಸ್)ಗಳು ಎಲ್ಲ ಕಡೆಯೂ ಲಭ್ಯವಾಗುವಂತೆ ನೀತಿ ರೂಪಕರಿಗೆ ಇದು ಕರೆ ನೀಡುತ್ತದೆ.
ಈ ಜಾಗತಿಕ ಅಸ್ತಮಾ ದಿನ ನಾವು ಅಸ್ತಮಾ ಕುರಿತಾದ ಅರಿವನ್ನು ವಿಸ್ತರಿಸೋಣ, ತಪ್ಪು ಕಲ್ಪನೆಗಳನ್ನು ಪರಿಹರಿಸೋಣ ಮತ್ತು ಪ್ರತಿಯೊಬ್ಬರೂ ಸುಲಭವಾಗಿ ಉಸಿರಾಡುವಂತೆ ಪ್ರೋತ್ಸಾಹಿಸೋಣ. ನೆನಪಿಡಿ, ಸರಿಯಾದ ಆರೈಕೆ ಮತ್ತು ತಿಳಿವಳಿಕೆಯಿಂದ ಅಸ್ತಮಾವನ್ನು ಪರಿಣಾಮಕಾರಿಯಾಗಿ ನಿಯಂತ್ರಣದಲ್ಲಿ ಇರಿಸಿಕೊಂಡು ಆರೋಗ್ಯಯುತವಾದ ಜೀವನವನ್ನು ಮುನ್ನಡೆಸಬಹುದಾಗಿದೆ.
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)
ಡಾ| ಮನು ಮೋಹನ್ ಕೆ.,
ಪ್ರೊಫೆಸರ್ ಮತ್ತು ಹೆಡ್,
ರೆಸ್ಪಿರೇಟರಿ ಮೆಡಿಸಿನ್ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Snuff: ನಶ್ಯ ತಂದಿಟ್ಟ ಸಮಸ್ಯೆ
Heart Rate Control: ಹೃದಯ ಬಡಿತದ ನಿಯಂತ್ರಣದಲ್ಲಿ ಆಧುನಿಕ ಹೃದಯ ಲಯ ಸಾಧನಗಳ ಅಗತ್ಯ ಪಾತ್ರ
Cosmetic surgery:ಸೌಂದರ್ಯವರ್ಧಕ ಶಸ್ತ್ರಚಿಕಿತ್ಸೆ ಮತ್ತು ಭಾರತೀಯ ಜನಸಮುದಾಯದ ಮೇಲೆ ಪರಿಣಾಮ
Manipal ಪಾಯ್ಸನ್ ಇನ್‌ಫಾರ್ಮೇಶನ್ ಸೆಂಟರ್; ಸಮುದಾಯಕ್ಕೊಂದು ಉಪಕಾರಿ ಸೇವೆ
Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್; ಹೆತ್ತವರು ತಿಳಿದಿರಬೇಕಾದ ಅಂಶಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.