ನೆಲ್ಲಿಕಾಯಿ ವ್ಯಂಜನಗಳು
Team Udayavani, Oct 9, 2020, 3:11 PM IST
“ಸಿ’ ವಿಟಮಿನ್ ಇರುವ ಬೆಟ್ಟದ ನೆಲ್ಲಿಕಾಯಿ ಉಪ್ಪು, ಖಾರದೊಂದಿಗೆ ತಿನ್ನಲು ಬಲು ರುಚಿ. ಶಾಲಾ ಮಕ್ಕಳ ಅಚ್ಚುಮೆಚ್ಚಿನ ತಿಂಡಿ ತಿನಿಸುಗಳಲ್ಲಿ ಇದೂ ಒಂದು. ಅತ್ಯಂತ ಹುಳಿಯಾದರೂ, ಇದನ್ನು ತಿಂದು ನೀರು ಕುಡಿದಾಗ ಸಿಹಿ ಅನುಭವವನ್ನು ಕೊಡುತ್ತದೆ. ಹಿರಿಯರು ಈ ಕಾಯಿಗಳಿಂದ ಅನೇಕ ತಿಂಡಿ ವ್ಯಂಜನಗಳನ್ನು ತಿಳಿಸಿ ಕೊಟ್ಟಿದ್ದಾರೆ. ಉಪ್ಪಿನಕಾಯಿಯ ಸ್ವಾದವನ್ನು ಬಲ್ಲವರೇ ಬಲ್ಲವರು. ನೆಲ್ಲಿ ಹಿಂಡಿ, ಮೊರಬ್ಬಗಳು ಅನೇಕ ಕಾಯಿಲೆಗಳಿಗೆ ರಾಮಬಾಣದಂತೆ ಕೆಲಸ ಮಾಡುತ್ತದೆ.
ದಿಢೀರ್ ಉಪ್ಪಿನಕಾಯಿ
ಬೇಕಾಗುವ ಸಾಮಗ್ರಿ: ದೊಡ್ಡ ನೆಲ್ಲಿಕಾಯಿಗಳು- 10/20, ಉಪ್ಪು- 1 ಹಿಡಿ, ಒಣಮೆಣಸಿನಕಾಯಿ- 150 ಗ್ರಾಮ್, ಸಾಸಿವೆ- 1 ಹಿಡಿ, ಇಂಗು ಸ್ವಲ್ಪ.
ತಯಾರಿಸುವ ವಿಧಾನ: ನೆಲ್ಲಿಕಾಯಿಗಳನ್ನು ತೊಳೆದಿಡಿ. ಒಂದು ಪಾತ್ರೆಗೆ ಸ್ವಲ್ಪ ನೀರು ಮತ್ತು ಉಪ್ಪನ್ನು ಹಾಕಿ ಚೆನ್ನಾಗಿ ಕುದಿಸಿ. ಕುದಿಸಿದ ನೀರಿಗೆ ನೆಲ್ಲಿಕಾಯಿಗಳನ್ನು ಹಾಕಿ. ಸ್ವಲ್ಪ ಮೆತ್ತಗಾದ ನಂತರ ಅವುಗಳನ್ನು ನೀರಿನಿಂದ ತೆಗೆದಿಡಿ. ಉಪ್ಪು ನೀರು ಆರಿದ ನಂತರ ಅದಕ್ಕೆ ಬೇಕಾಗುವಷ್ಟು ಮೆಣಸಿನಕಾಯಿ ಪುಡಿ, ಸಾಸಿವೆಯ ಪುಡಿಯನ್ನು ಸೇರಿಸಿ, ಮತ್ತೆ ನೆಲ್ಲಿಕಾಯಿಗಳನ್ನು ಸೇರಿಸಿ ಕಲಸಿ. ತುಂಬಾ ಹುಳಿ ಬೇಕಾಗಿದ್ದರೆ ಹುಣಸೆಕಾಯನ್ನು ಗುದ್ದಿ, ರಸವನ್ನು ಸೋಸಿ, ಅದಕ್ಕೆ ಸೇರಿಸಬಹುದು. ಕಡೆಗೆ ಎಣ್ಣೆ, ಸಾಸಿವೆ, ಇಂಗಿನಿಂದ ಒಗ್ಗರಣೆ ಕೊಡಿ. ಇದನ್ನು ಆಗ ಮಾಡಿ ಆಗಲೇ ಉಪಯೋಗಿಸಬಹುದು. ಆದರೆ, ಇದನ್ನು ತುಂಬಾ ದಿನ ಇಡಲು ಆಗುವುದಿಲ್ಲ. ಬೇಗ ಖರ್ಚು ಮಾಡಬೇಕು.
ನೆಲ್ಲಿಕಾಯಿ ಚಟ್ನಿ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- 4, ಹಸಿ ಮೆಣಸಿನ ಕಾಯಿ-2, ಉಪ್ಪು ರುಚಿಗೆ, ಇಂಗು ಸ್ವಲ್ಪ, ತೆಂಗಿನ ತುರಿ- ಒಂದು ಬಟ್ಟಲು, ಕೊತ್ತಂಬರಿಸೊಪ್ಪು ಸ್ವಲ್ಪ, ಒಗ್ಗರಣೆಗೆ: ಒಣಮೆಣಸಿನಕಾಯಿ, ಎಣ್ಣೆ, ಉದ್ದಿನಬೇಳೆ, ಕರಿಬೇವು ಸಾಸಿವೆ.
ತಯಾರಿಸುವ ವಿಧಾನ: ಒಂದು ಮಿಕ್ಸಿ ಜಾರಿಗೆ ಬೀಜ ತೆಗೆದ ನೆಲ್ಲಿಕಾಯಿ, ಹಸಿಮೆಣಸಿನಕಾಯಿ, ತೆಂಗಿನತುರಿ, ಉಪ್ಪನ್ನು ಹಾಕಿ ರುಬ್ಬಿ. ಮಿಶ್ರಣವನ್ನು ಒಂದು ಪಾತ್ರೆಗೆ ತೆಗೆದು, ಇಂಗು, ಕರಿಬೇವಿನ ಜೊತೆ ಒಗ್ಗರಣೆ ಕೊಡಿ. ದೋಸೆ, ಇಡ್ಲಿ, ಚಪಾತಿಗೆ ಚೆನ್ನಾಗಿರುತ್ತದೆ.
ನೆಲ್ಲಿಕಾಯಿಯ ಚಿತ್ರಾನ್ನ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ 5-6, ಹಸಿ ಮೆಣಸಿನ ಕಾಯಿ- 2, ಉದುರಾದ ಅನ್ನ- ಒಂದೂವರೆ ಲೋಟದಷ್ಟು, ನೆಲಗಡಲೆಬೀಜ- ಒಂದು ಹಿಡಿ, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸ್ವಲ್ಪ, ಒಗ್ಗರಣೆಗೆ ಒಣ ಮೆಣಸಿನಕಾಯಿ, ಸಾಸಿವೆ, ಉದ್ದಿನ ಬೇಳೆ, ಕಡಲೆಬೇಳೆ, ಎಣ್ಣೆ, ಉಪ್ಪು ರುಚಿಗೆ, ತೆಂಗಿನ ತುರಿ- 1/2 ಬಟ್ಟಲು.
ತಯಾರಿಸುವ ವಿಧಾನ: ನೆಲ್ಲಿಕಾಯಿಯ ಬೀಜಗಳನ್ನು ತೆಗೆದು, ಮಿಕ್ಸಿಗೆ ಹಾಕಿ. ಅದಕ್ಕೆ ಹಸಿಮೆಣಸಿನಕಾಯಿ, ಅರ್ಧ ಚಮಚ ಸಾಸಿವೆ, ಸ್ವಲ್ಪ ಉಪ್ಪು ಹಾಕಿ ರುಬ್ಬಿಕೊಳ್ಳಿ. ತೆಗೆಯುವ ಮುನ್ನ ತೆಂಗಿನತುರಿ ಹಾಕಿ ಒಂದು ಸಲ ತಿರುಗಿಸಿ ತೆಗೆದಿಡಿ. ಒಂದು ಬಾಣಲೆಗೆ ಎಣ್ಣೆ, ಒಗ್ಗರಣೆ ಸಾಮಾಗ್ರಿಗಳು, ನೆಲಗಡಲೆಬೀಜ ಕರಿಬೇವಿನ ಸೊಪ್ಪು ಹಾಕಿ. ಪಟಪಟ ಸಿಡಿದ ನಂತರ ಅದಕ್ಕೆ ಮಿಕ್ಸಿಯಲ್ಲಿದ್ದ ಮಿಶ್ರಣವನ್ನು ಸೇರಿಸಿ, ಕೈಯಾಡಿಸಿ. ನಂತರ ಅದಕ್ಕೆ ತಯಾರಿಸಿಟ್ಟ ಅನ್ನವನ್ನು ಸೇರಿಸಿ ಕಲಸಿ. ಕತ್ತರಿಸಿದ ಕೊತ್ತಂಬರಿಸೊಪ್ಪನ್ನು ಮೇಲೆ ಹಾಕಿ ಅತಿಥಿಗಳಿಗೆ ನೀಡಿ.
ನೆಲ್ಲಿಕಾಯಿಯ ಹಿಂಡಿ
ಬೇಕಾಗುವ ಸಾಮಗ್ರಿ: ದೊಡ್ಡ ಗಾತ್ರದ ನೆಲ್ಲಿಕಾಯಿಗಳು 8-10, ಹಸಿಮೆಣಸಿನಕಾಯಿ- 20, ಇಂಗಿನ ಪುಡಿ- 1 ಟೀ ಚಮಚ, ಮೆಂತ್ಯ- ಒಂದು ಟೇಬಲ್ ಚಮಚ, ಉಪ್ಪು ರುಚಿಗೆ, ಅರಿಸಿನಪುಡಿ- 1/2 ಟೀ ಚಮಚ.
ತಯಾರಿಸುವ ವಿಧಾನ: ನೆಲ್ಲಿಕಾಯಿಗಳು, ಮೆಣಸಿನಕಾಯಿ ಯನ್ನು ತೊಳೆದು, ಚೆನ್ನಾಗಿ ಒರೆಸಿ, ಶುಭ್ರವಾದ ಬಟ್ಟೆಯ ಮೇಲೆ ಹರಡಿ. ಚೆನ್ನಾಗಿ ಪಸೆ ಆರಿದ ನಂತರ ತುರಿದು ಬೀಜ ತೆಗೆಯಿರಿ. ಮೆಂತ್ಯವನ್ನು ಎಣ್ಣೆ ಹಾಕದೆ ಪರಿಮಳ ಬರುವವರೆಗೆ ಹುರಿದು ಪುಡಿ ಮಾಡಿಟ್ಟುಕೊಳ್ಳಿ. ಈಗ ಮಿಕ್ಸಿ ಜಾರಿಗೆ ನೆಲ್ಲಿಕಾಯಿಯ ತುರಿ, ಮೆಂತ್ಯದಪುಡಿ, ಅರಸಿನ, ಉಪ್ಪು, ಇಂಗು, ಹಸಿಮೆಣಸಿನಕಾಯಿ ಎಲ್ಲವನ್ನೂ ಹಾಕಿ, ಚೆನ್ನಾಗಿ ರುಬ್ಬಿ. ನೀರಿನ ಪಸೆ ಆರಿದ ಗಾಜಿನ ಬಾಟಲಿಯಲ್ಲಿ ಹಾಕಿಡಿ. ಬೇಕಾದಾಗ ಒಗ್ಗರಣೆ ಹಾಕಿ ಬಿಸಿ ಅನ್ನದ ಜೊತೆ ಸೇವಿಸಬಹುದು. ಹೊಟ್ಟೆ ಕೆಟ್ಟಾಗ ಸ್ವಲ್ಪ ಹಿಂಡಿಯನ್ನು ಮಜ್ಜಿಗೆಯಲ್ಲಿ ಕಲಸಿ, ಒಗ್ಗರಣೆ ಹಾಕಿ ಅನ್ನದ ಜೊತೆ ತಿಂದರೆ ಹೊಟ್ಟೆ ಸರಿಯಾಗುತ್ತದೆ.
ನೆಲ್ಲಿಕಾಯಿ ಮೊರಬ್ಬ
ಬೇಕಾಗುವ ಸಾಮಗ್ರಿ: ನೆಲ್ಲಿಕಾಯಿ- 15, ಬೆಲ್ಲದ ಪುಡಿ- ನೆಲ್ಲಿಕಾಯಿ ತುರಿ ಎಷ್ಟಿದೆಯೋ ಅಷ್ಟು, ನೀರು ಒಂದು ಬಟ್ಟಲು.
ತಯಾರಿಸುವ ವಿಧಾನ: ನೆಲ್ಲಿಕಾಯಿಗಳನ್ನು ತೊಳೆದು, ತುರಿದು, ಬೀಜ ತೆಗೆದಿಟ್ಟುಕೊಳ್ಳಿ. ಬೆಲ್ಲದ ಪುಡಿಗೆ ಸ್ವಲ್ಪ ನೀರು ಹಾಕಿ ಕುದಿಸಿ, ಕರಗಿದ ನಂತರ ಅದನ್ನು ಸೋಸಿ ಇಟ್ಟುಕೊಳ್ಳಿ. ಒಂದು ಬಾಣಲೆಗೆ ನೆಲ್ಲಿಕಾಯಿ ತುರಿಯನ್ನು ಹಾಕಿ, ಸ್ವಲ್ಪ ಮಗುಚಿ. ಬಾಡಿದ ನಂತರ ಅದಕ್ಕೆ ಸ್ವಲ್ಪ ನೀರು ಹಾಕಿ, ಕೈಯಾಡಿಸುತ್ತಿರಿ. ನೆಲ್ಲಿಕಾಯಿ ತುರಿ ಬೆಂದ ನಂತರ ಅದಕ್ಕೆ ಬೆಲ್ಲದ ನೀರನ್ನು ಸೇರಿಸಿ, ಚೆನ್ನಾಗಿ ಮಗುಚುತ್ತಿರಿ.
ಎಳೆಪಾಕ ಬಂದನಂತರ ಮಿಶ್ರಣವನ್ನು ಕೆಳಗಿಳಿಸಿ, ಶುಭ್ರವಾದ ಡಬ್ಬದಲ್ಲಿ ತೆಗೆದಿಡಿ. ತುಂಬಾ ದಿವಸಗಳವರೆಗೆ ಕೆಡುವುದಿಲ್ಲ.
ಪುಷ್ಪಾ ಎನ್.ಕೆ. ರಾವ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Melioidosis:ನಿರ್ಲಕ್ಷಿತ ಹಾಗೂ ಮಾರಣಾಂತಿಕ ಸಾಂಕ್ರಾಮಿಕ ರೋಗ ಮೆಲಿಯೊಡೋಸಿಸ್
World Osteoporosis Day: ಆಸ್ಟಿಯೊಪೊರೋಸಿಸ್ ಅಥವಾ ಮೂಳೆ ಸವಕಳಿ ಎಂದರೇನು?
Anesthesia: ರೋಗಿ ಸುರಕ್ಷೆಗೆ ಒಂದು ನಮನ – ವಿಶ್ವ ಅರಿವಳಿಕೆ ದಿನ ಅಕ್ಟೋಬರ್ 16
Global Infection Control: ಜಾಗತಿಕ ಸೋಂಕು ನಿಯಂತ್ರಣ ಸಪ್ತಾಹ
Thalassemia: ತಲಸ್ಸೇಮಿಯಾ ರೋಗಿಗಳು ಗುಣಮುಖರಾಗಬಹುದೇ?
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.