Health: ಗೌಟ್: ಹಾಗೆಂದರೇನು? ಕಾರಣ ಏನು? ನಿಯಂತ್ರಣ ಹೇಗೆ?
Team Udayavani, May 12, 2024, 2:36 PM IST
ಗೌಟ್ ಅಥವಾ ಗೌಟಿ ಆರ್ಥ್ರೈಟಿಸ್ ಕಾಯಿಲೆಯು ಸಂಧಿಗಳಲ್ಲಿ ಯೂರಿಕ್ ಆ್ಯಸಿಡ್ ಶೇಖರಗೊಳ್ಳುವುದರಿಂದ ತಲೆದೋರುತ್ತದೆ. ಯೂರಿಕ್ ಆಮ್ಲ ಎಂದರೇನು, ಅದು ಗೌಟ್ ಕಾಯಿಲೆ ಉಂಟಾಗಲು ಹೇಗೆ ಕಾರಣವಾಗುತ್ತದೆ ಎನ್ನುವುದನ್ನು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಮ್ಮ ದೇಹವು ಒಂದು ತ್ಯಾಜ್ಯವಾಗಿ ಯೂರಿಕ್ ಆಮ್ಲವನ್ನು ಸದಾ ಉತ್ಪಾದಿಸುತ್ತಿರುತ್ತದೆ. ಸಾಮಾನ್ಯ ವಾಗಿ ನಮ್ಮ ಮೂತ್ರಪಿಂಡಗಳು ಯೂರಿಕ್ ಆಮ್ಲ ವನ್ನು ಸೋಸಿ ಮೂತ್ರದ ಮೂಲಕ ಹೊರಹಾಕುವ ಮೂಲಕ ದೇಹದಲ್ಲಿ ಇದರ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತವೆ. ಆದರೆ ಕೆಲವೊಮ್ಮೆ ನಮ್ಮ ದೇಹ ಮಿತಿಮೀರಿ ಯೂರಿಕ್ ಆಮ್ಲವನ್ನು ಉತ್ಪಾದಿಸುತ್ತದೆ ಅಥವಾ ಯೂರಿಕ್ ಆಮ್ಲವನ್ನು ಹೊರಹಾಕಲು ನಮ್ಮ ಮೂತ್ರಪಿಂಡಗಳು ವಿಫಲವಾಗುತ್ತವೆ. ಹೀಗಾದಾಗ ರಕ್ತದಲ್ಲಿ ಯೂರಿಕ್ ಆಮ್ಲದ ಪ್ರಮಾಣ ಹೆಚ್ಚುತ್ತದೆ, ಅಂತಿಮವಾಗಿ ಅದು ನಮ್ಮ ದೇಹದ ಸಂಧಿಗಳಲ್ಲಿ ಶೇಖರವಾಗುತ್ತದೆ; ಇದರಿಂದಾಗಿ ಸಂಧಿಗಳಲ್ಲಿ ಊದಿಕೊಂಡು ಕೆಂಪಗಾಗುತ್ತವೆ. ಇದನ್ನು ಗೌಟ್ ಎಂದು ಕರೆಯುತ್ತಾರೆ.
ಲಕ್ಷಣಗಳು
ಗೌಟ್‌ನ ಒಂದು ಪ್ರಧಾನ ಮತ್ತು ಪ್ರಮುಖ ಲಕ್ಷಣ ಎಂದರೆ ಸಂಧಿಭಾಗದಲ್ಲಿ ಹಠಾತ್ ಮತ್ತು ತೀವ್ರವಾದ ನೋವು, ಕೆಂಪಗಾಗುವಿಕೆ ಮತ್ತು ಬಿಸಿಯೇರುವಿಕೆ. ಸಾಮಾನ್ಯವಾಗಿ ಇದು ಹೆಬ್ಬರಳಿನ ಸಂಧಿಭಾಗದಲ್ಲಿ ಕಾಣಿಸಿಕೊಳ್ಳುವುದು ಹೆಚ್ಚು; ಆದರೆ ಮೊಣಕಾಲು, ಮೊಣಗಂಟು, ಹಿಮ್ಮಡಿ, ಮಣಿಕಟ್ಟು ಮತ್ತು ಬೆರಳುಗಳಂತಹ ಸಂಧಿಭಾಗಗಳಲ್ಲಿಯೂ ಕಾಣಿಸಿಕೊಳ್ಳಬಹುದಾಗಿದೆ. ಗೌಟ್ ಉಲ್ಬಣವು ಆಹಾರ (ಕೆಂಪು ಮಾಂಸ, ಸಮುದ್ರ ಆಹಾರ ಇತ್ಯಾದಿ), ಮದ್ಯಪಾನ (ನಿರ್ದಿಷ್ಟವಾಗಿ ಬಿಯರ್ ಮತ್ತು ಇತರ ಮದ್ಯ), ಬೊಜ್ಜು, ನಿರ್ದಿಷ್ಟ ಔಷಧಗಳು ಮತ್ತು ಇತರ ಅನಾ ರೋಗ್ಯಗಳಂತಹ ಪ್ರಚೋದಕಗಳಿಂದ ಪ್ರಚೋ ದನೆಗೊಳ್ಳಬಹುದಾಗಿದೆ. ಗೌಟ್ ಕಾಯಿಲೆ ಯನ್ನು ಸರಿಯಾಗಿ ಚಿಕಿತ್ಸೆಗೆ ಒಳಪಡಿಸದ ಮತ್ತು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇದ್ದರೆ ದೀರ್ಘಕಾಲೀನ ಮತ್ತು ಶಾಶ್ವತವಾದ ಸಂಧಿ ಭಾಗದ ಹಾನಿ ಉಂಟಾಗಬಹುದು ಹಾಗೂ ಮೂತ್ರಪಿಂಡದಲ್ಲಿ ಕಲ್ಲುಗಳು ಮತ್ತು ಹೃದ್ರೋಗಗಳಂತಹ ಇತರ ಅನಾರೋಗ್ಯಗಳಿಗೆ ತುತ್ತಾಗುವ ಅಪಾಯ ಹೆಚ್ಚುತ್ತದೆ.
ರೋಗಪತ್ತೆ
ಗೌಟ್ ರೋಗದ ಆರಂಭಿಕ ತಪಾಸಣೆಗಾಗಿ ಸೀರಂ ಯೂರಿಕ್ ಆ್ಯಸಿಡ್ ಪರೀಕ್ಷೆಯನ್ನು ನಡೆಸಲಾಗುತ್ತದೆ. ಆದರೆ ನೆನಪಿಡಬೇಕಾದ ವಿಷಯವೆಂದರೆ, ಸಾಮಾನ್ಯ ಆರೋಗ್ಯವಂತ ವ್ಯಕ್ತಿಗಳು ಕೂಡ ಯಾವುದೇ ರೋಗಲಕ್ಷಣಗಳು ಇಲ್ಲದೆಯೂ ಅಧಿಕ ಯೂರಿಕ್ ಆಮ್ಲವನ್ನು ಹೊಂದಿರಬಹುದಾಗಿದೆ. ಇದರ ಜತೆಗೆ, ಗೌಟ್ ರೋಗಿಗಳಲ್ಲಿ ಕೆಲವೊಮ್ಮೆ ಯೂರಿಕ್ ಆಮ್ಲ ಸಹಜ ಮಟ್ಟದಲ್ಲಿರಬಹುದಾಗಿದೆ. ಇಂತಹ ಪ್ರಕರಣಗಳಲ್ಲಿ ರೋಗಪತ್ತೆಯನ್ನು ಸಂಧಿಗಳ ಅಲ್ಟ್ರಾಸೌಂಡ್ ಮತ್ತು ಎಕ್ಸ್‌ರೇ ಪರೀಕ್ಷೆಗಳು ಹಾಗೂ ಕೂಲಂಕಷವಾದ ರೋಗ ಹಿನ್ನೆಲೆಯನ್ನು ಕಲೆಹಾಕುವ ಮೂಲಕ ರುಮಟಾಲಜಿ ತಜ್ಞರು ಖಚಿತಪಡಿಸಿಕೊಳ್ಳುತ್ತಾರೆ.
ಚಿಕಿತ್ಸೆ
ಗೌಟ್ ರೋಗವನ್ನು ಸುಲಭವಾಗಿ ಚಿಕಿತ್ಸೆಗೊಳಪಡಿಸಬಹುದು ಎಂಬುದೇ ಶುಭ ಸುದ್ದಿ. ಆರೋಗ್ಯಯುತ ಆಹಾರಾಭ್ಯಾಸವನ್ನು ರೂಢಿಸಿಕೊಳ್ಳುವುದು, ಸಾಕಷ್ಟು ದ್ರವಾಹಾರ ಸೇವನೆ, ಮದ್ಯಪಾನವನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳುವುದು ಮತ್ತು ನಿಯಮಿತವಾಗಿ ವ್ಯಾಯಾಮ ಮಾಡುವುದರ ಮೂಲಕ ಗೌಟ್ ಕಾಯಿಲೆಯನ್ನು ನಿಯಂತ್ರಣದಲ್ಲಿ ಇರಿಸಿಕೊಳ್ಳಬಹುದಾಗಿದೆ. ಜತೆಗೆ ಕೊಲಿcಶಿನ್ ನಂತಹ ಔಷಧಗಳು ಹಾಗೂ ಯುರೇಟ್ ಲೋವರಿಂಗ್ ಥೆರಪಿ (ಫೆಬುಕೊÕಸ್ಟಾಟ್, ಅಲೊಪ್ಯುರಿನಾಲ್) ಗಳ ಮೂಲಕ ಗೌಟ್ ಲಕ್ಷಣಗಳನ್ನು ನಿಯಂತ್ರಿಸಿಕೊಳ್ಳಬಹುದು ಮತ್ತು ಭವಿಷ್ಯದಲ್ಲಿ ಉಲ್ಬಣಗೊಳ್ಳುವುದನ್ನು ತಡೆಯಬಹುದು.
ಆಹಾರಾಭ್ಯಾಸ ಬದಲಾವಣೆ
ಗೌಟ್ ರೋಗಿಗಳಲ್ಲಿ ಅನೇಕರು ಬಹುತೇಕ ತರಕಾರಿ ಮತ್ತು ಹಣ್ಣುಹಂಪಲುಗಳ ಸೇವನೆಯನ್ನು ವರ್ಜಿಸುವಂತಹ ಕಠಿನತಮ ಪಥ್ಯಾಹಾರ ಕ್ರಮವನ್ನು ಪಾಲಿಸುತ್ತಾರೆ. ಆದರೆ ಇದು ಅನಗತ್ಯ. ಯೂರಿಕ್ ಆಮ್ಲ ಉತ್ಪಾದನೆಯಾಗುವುದನ್ನು ನಿಯಂತ್ರಿಸುವಲ್ಲಿ ಪಥ್ಯಾಹಾರವು ಪ್ರಮುಖ ಪಾತ್ರವನ್ನು ವಹಿಸುತ್ತದೆಯಾದರೂ ಎಲ್ಲ ಹಣ್ಣುಹಂಪಲು, ತರಕಾರಿ ಸೇವನೆಯನ್ನು ತ್ಯಜಿಸಬೇಕಾಗಿಲ್ಲ. ವರ್ಜಿಸಲೇಬೇಕಾದವುಗಳು ಎಂದರೆ ಮದ್ಯ, ಕೋಳಿಮಾಂಸ ಮತ್ತು ಕೆಂಪುಮಾಂಸದಂತಹ ಮಾಂಸಾಹಾರಗಳು, ಕ್ಯಾನ್‌ಡ್ ಜ್ಯೂಸ್ ಗಳು ಮತ್ತು ಸಂಸ್ಕರಿತ ಸಕ್ಕರೆಗಳು, ಮಾವಿನ ಹಣ್ಣು, ಕಬ್ಬಿನಂತಹ ಫ್ರುಕ್ಟೋಸ್ ಅಧಿಕವಾಗಿರುವ ಆಹಾರ ವಸ್ತುಗಳು. ಮೂಸಂಬಿ, ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳು ಗೌಟ್ ರೋಗಿಗಳಿಗೆ ಹಿತಕರ.
ಹಾಗಾಗಿ ನಿಮಗೆ ಅಥವಾ ನಿಮ್ಮ ಪರಿ ಚಿತರಿಗೆ ಯಾರಿಗಾದರೂ ನಿರ್ದಿಷ್ಟವಾಗಿ ಕಾಲಿನ ಹೆಬ್ಬೆರಳಿನಂತಹ ಸಂಧಿಗಳಲ್ಲಿ ಪದೇ ಪದೆ ನೋವು, ಊತ, ಕೆಂಪಗಾಗು ವಿಕೆಯಂತಹ ಲಕ್ಷಣಗಳು ಇದ್ದಲ್ಲಿ ವೈದ್ಯ ಕೀಯ ಸಲಹೆ, ಆರೈಕೆ ಪಡೆದುಕೊಳ್ಳುವುದು ಉತ್ತಮ. ಬೇಗನೆ ರೋಗಪತ್ತೆ ಮತ್ತು ಸರಿಯಾದ ನಿರ್ವಹಣೆ, ಚಿಕಿತ್ಸೆಯಿಂದ ಗೌಟ್ ರೋಗವನ್ನು ಪರಿಣಾಮಕಾರಿಯಾಗಿ ನಿಭಾಯಿಸಬಹುದು ಮತ್ತು ಒಟ್ಟಾರೆಯಾಗಿ ಉತ್ತಮ ಗುಣಮಟ್ಟದ ಜೀವನವನ್ನು ನಡೆಸಬಹುದು.
–ಡಾ| ಶಿವರಾಜ್ ಪಡಿಯಾರ್,
ಅಸೋಸಿಯೇಟ್ ಪ್ರೊಫೆಸರ್
-ಡಾ| ಪ್ರತ್ಯೂಷಾ ಮಣಿಕುಪ್ಪಮ್
ಅಸಿಸ್ಟೆಂಟ್ ಪ್ರೊಫೆಸರ್
ರುಮಟಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ, ಅತ್ತಾವರ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರುಮಟಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
CT Ravi; ಚಿಕ್ಕಮಗಳೂರಿಗೆ ಬಂದ ಕೂಡಲೇ ಟೆಂಪಲ್ ರನ್ ಆರಂಭಿಸಿದ ಸಿ.ಟಿ.ರವಿ
Healt: ಶಿಶುವಿನ ಹಾಲು ಹಲ್ಲುಗಳು ನೀವು ತಿಳಿದಿರಬೇಕಾದ 9 ಲಕ್ಷಣಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.