ಜಿಮ್‌ಗಳಿಗೆ ಹೃದಯ ಸ್ತಂಭನ: ದೇಹ ದಾರ್ಢ್ಯತೆ ಬಗ್ಗೆ ಇರಲಿ ಎಚ್ಚರ
Team Udayavani, Nov 8, 2021, 1:19 PM IST
ಜಿಮ್ ಮಾಡುತ್ತಿದ್ದ ವೇಳೆಯೇ ನಟ ಪುನೀತ್ ರಾಜಕುಮಾರ್ ಹೃದಯ ಸ್ತಂಭನಕ್ಕೆ ಒಳಗಾದರು ಎಂಬ ಸುದ್ದಿ ಜಿಮ್‌ಗಳ ನಿದ್ದೆಗೆಡಿಸಿದೆ. ಸಾಮರ್ಥ್ಯ ಮೀರಿ ವರ್ಕೌಟ್ ಮಾಡುವುದರಿಂದ ಅಪಾಯ, ಹೃದಯಾಘಾತ ಸಂಭವಿಸುತ್ತದೆ ಎಂಬ ಆತಂಕ ಶುರುವಾಗಿದೆ. ಆದ್ದರಿಂದ ಜಿಮ್‌ಗಳಿಗೆ ಹೋಗುವುದು ಬೇಡ ಎಂದು ಹಲವರು ನಿರ್ಧರಿಸಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ನಗರದಲ್ಲಿರುವ ಜಿಮ್‌ಗಳಲ್ಲಿ ಯಾವ ರೀತಿಯ ವಾತಾವರಣವಿದೆ? ಎಷ್ಟು ಗಂಟೆ ಜಿಮ್ ಮಾಡಬೇಕು ಮತ್ತು ಪ್ರಾಕ್ಟಿಕಲಿ ಯಾವ ರೀತಿಯಲ್ಲಿ ಜಿಮ್ ಮಾಡಿದರೆ ದೇಹಕ್ಕೆ ಅನುಕೂಲ?… ಜಿಮ್ ದೇಹ ದಂಡನೆಗಿಂತ ಯೋಗ ಒಳ್ಳಯದೇ? ಯಾವುದರಲ್ಲೂ “ಅತಿ’ ಎನ್ನುವುದು ಒಳ್ಳೆಯದಲ್ಲ. ಅದರಂತೆ ಹೃದಯಾಘಾತದ “ಹೆದರಿಕೆ ಎಂಬ ಸಿಂಡ್ರೋಮ್ ಕೂಡಾ ಒಳ್ಳೆಯದಲ್ಲ. ಈ ಸಂಬಂಧ ಈ ಬಾರಿಯ ಸುದ್ದಿ ಸುತ್ತಾಟ ಹೀಗಿದೆ…
ಸಾಮಾನ್ಯವಾಗಿ ಜನರು ದೇಹದ ಆಕಾರವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿಕೊಳ್ಳಬೇಕು. ಸಿಕ್ಸ್ ಪ್ಯಾಕ್ ಮಾಡಬೇಕು, ಮಜಲ್ಸ್, ಬೈಸಿಪ್ಸ್ ಎದ್ದು ಕಾಣಬೇಕು ಎಂಬ ಕಾರಣಕ್ಕೆ ತಮ್ಮ ದೇಹದ ಸಾಮರ್ಥ್ಯ ಮೀರಿ ಜಿಮ್ ಮಾಡುತ್ತಾರೆ. ಇದು ಅಪಾಯಕ್ಕೆ ಎಡೆ ಮಾಡಿಕೊಡುತ್ತದೆ. ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಉತ್ತಮ.
ವರ್ಕೌಟ್ ಮಾಡಿದ ನಂತರ ಸ್ಟೀಮ್ ಬೇಡ: ಪ್ರತಿ ದಿನ ವರ್ಕೌಟ್ ಮಾಡುವುದರಿಂದ ದೇಹದಲ್ಲಿರುವ ಕ್ಯಾಲರಿಗಳು ಬರ್ನ್ ಆಗುತ್ತವೆ. ಹೀಗೆ, ಜಿಮ್ ಮಾಡುವಾಗ ದೇಹಲ್ಲಿನ ನೀರಿನಾಂಶ ಕಡಿಮೆಯಾಗುತ್ತದೆ. ಅದೇ ರೀತಿ ಸ್ಟೀಮ್ ತೆಗೆದುಕೊಂಡಾಗಲೂ ದೇಹ ಬೆವರುತ್ತದೆ. ಆದ್ದರಿಂದ ಜಿಮ್ ಮಾಡಿ ಸ್ಟೀಮ್ ತೆಗೆದುಕೊಳ್ಳುವುದು ದೇಹಕ್ಕೆ ಒಳ್ಳೆಯದಲ್ಲ. ಜಿಮ್‌ನಲ್ಲಿಯೂ ದೇಹದ ನೀರಿನಾಂಶ ಕಡಿಮೆಯಾಗುತ್ತದೆ. ಸ್ಟೀಮ್‌ನಲ್ಲಿಯೂ ನೀರಿನಾಂಶ ಕಡಿಮೆಯಾ ದರೆ, ದೇಹದ ಆರೋಗ್ಯದ ಸ್ಥಿತಿ ಏರುಪೇರಾಗುವ ಸಾಧ್ಯತೆಗಳಿರುತ್ತವೆ. ಜಿಮ್ ಮಾಡಿದ ದಿನ ವಿಶ್ರಾಂತಿ ತೆಗೆದುಕೊಂಡು ಮಾರನೆಯ ದಿನ ಸ್ಟೀಮ್ ತೆಗೆದುಕೊಳ್ಳುವುದು ಉತ್ತಮ.
ಟ್ರೆಡ್‌ಮಿಲ್‌ನಲ್ಲಿ ಓಡಿದರೆ ಬೀಪಿ ಏರುತ್ತೆ!: ಸಾಮಾನ್ಯವಾಗಿ ಕಾಲ್ನ ಡಿಗೆಯಿಂದ ದೇಹಕ್ಕೆ ಆರಾಮದಾಯಕವಾಗಿರುತ್ತದೆ. ಆದರೆ, ಟ್ರೆಡ್‌ಮಿಲ್‌ನಲ್ಲಿ ತುಂಬಾ ಓಡುವುದರಿಂದ ರಕ್ತದೊತ್ತಡ (ಬಿಪಿ) ಹೆಚ್ಚಾಗುತ್ತದೆ. ಐ ಬೀಪಿ ಇರುವವರು ನಿಯಂತ್ರಣ ತಪ್ಪುವ ಸಾಧ್ಯತೆಗಳಿರುತ್ತವೆ. ಕೆಲವರು ಅವೈಜ್ಞಾನಿಕವಾಗಿ ದಬದಬನೆ ಓಡುತ್ತಾರೆ. ಇದು ಸರಿಯಾದ ನಿಯಮವಲ್ಲ. ಅದೇ ರೀತಿ ಯಾವುದೇ ವ್ಯಾಯಾಮ ಮಾಡಿದ ನಂತರ ಸ್ವಲ್ಪ ಸಮಯ ದೇಹಕ್ಕೆ ವಿಶ್ರಾಂತಿ ನೀಡಿದರೆ, ಯಾವುದೇ ಪರಿಣಾಮ ಬೀರುವುದಿಲ್ಲ. ನಿರಂತರವಾಗಿ ವರ್ಕೌಟ್ ಮಾಡಿದಾಗ ಮಾತ್ರ ದೇಹದ ಮೇಲೆ ಪರಿಣಾಮ ಬೀರಲು ಶುರುವಾಗುತ್ತದೆ.
ಯಾವ ಸಮಯದಲ್ಲಿ ಜಿಮ್ ಮಾಡಬಾರದು: ಮದ್ಯಪಾನ, ಧೂಮಪಾನ ಮಾಡಿದಾಗ, ತಡರಾತ್ರಿ ಪಾರ್ಟಿಗಳಿಗೆ ಹೋಗಿ ಡ್ರಿಂಕ್ಸ್ ಮಾಡಿದ ಸಂದರ್ಭದಲ್ಲಿ ಜಿಮ್‌ಗೆ ಹೋಗುವುದರಿಂದ ದೇಹ ಸಂಪೂರ್ಣ ಡಿಸ್ಟರ್ಬ್ (ತೊಂದರೆ) ಆಗುತ್ತೆ. ಇಂಥ ಸಮಯದಲ್ಲಿ ದೇಹಕ್ಕೆ ವಿಶ್ರಾಂತಿ ನೀಡಬೇಕಾಗುತ್ತದೆ. ಒಂದು ವೇಳೆ ಇಂತಹ ಸಮಯದಲ್ಲಿಯೂ ಸಿಕ್ಕಾಪಟ್ಟೆ ಜಿಮ್‌ನಲ್ಲಿ ಸಾಮರ್ಥ್ಯ ಮೀರಿ ವರ್ಕೌಟ್ ಮಾಡುವುದರಿಂದ ಮೆದುಳಿನ ನರಗಳ ಮೇಲೆ ಪರಿಣಾಮ ಬೀರಬಹುದು. ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗಬಹುದು, ಇಲ್ಲವೇ ಕಿಡ್ನಿ ಫೇಲ್ಯೂರ್ ಆಗಬಹುದು ಎನ್ನುತಾರೆ ವೃತ್ತಪರತೆ ಹೊಂದಿರುವ ಜಿಮ್ ಕೋಚರ್‌ಗಳು.
ಯೂಟ್ಯೂಬ್ ನೋಡಿ ಜಿಮ್ ಮಾಡಬೇಡಿ: ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಯುವಕ/ಯುವತಿಯರು ಯೂಟ್ಯೂಬ್ ನೋಡಿ ಮನೆಗಳಲ್ಲಿಯೇ ವರ್ಕೌಟ್ ಮಾಡುತ್ತಿದ್ದಾರೆ. ಇದರಿಂದ ದೇಹದ ಬೇರೆ ಬೇರೆ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಏಕೆಂದರೆ, ಪ್ರತಿ ಅಂಗಾಗಗಳಿಗೂ ತನ್ನದೇ ಆದ ಶೈಲಿಯಲ್ಲಿ ಜಿಮ್ ಮಾಡಬೇಕಾಗುತ್ತದೆ. ಆದ್ದರಿಂದ ಯೂಟ್ಯೂಬ್ ನೋಡಿ ಜಿಮ್ ಮಾಡಿದರೆ, ಸರಿಯಾದ ರೀತಿಯಲ್ಲಿ ಮಾರ್ಗದರ್ಶನ ಸಿಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ತುರ್ತು ಆರೋಗ್ಯ ವ್ಯವಸ್ಥೆ ಕಡ್ಡಾಯ: ಕೆಲವು ಪೋಷಕರು ತಮ್ಮ ಮಕ್ಕಳಿಗೆ ಜಿಮ್‌ಗೆ ಹೋಗದಂತೆ ತಡೆಯುತ್ತಿದ್ದಾರೆ. ಜಿಮ್‌ಗೆ ಹೋದರೂ ಹೆಚ್ಚಿನ ಭಾರ ಎತ್ತಬೇಡ ಎಂಬ ಸಲಹೆಗಳನ್ನೂ ನೀಡುತ್ತಿ ದ್ದಾರೆ. ಇನ್ನು ಕೇರಳದಲ್ಲಿ ಪುನೀತ್ ರಾಜ್ ಕುಮಾರ್ ಅವರ ನಿಧನದ ಬೆನ್ನಲ್ಲೇ ಜಿಮ್ ಸೆಂಟರ್‌ಗಳಲ್ಲಿ ತುರ್ತು ಆರೋಗ್ಯ ವ್ಯವಸ್ಥೆಗಳನ್ನು ಕಡ್ಡಾಯವಾಗಿ ಒದಗಿಸಬೇಕು ಎಂದು ಸರ್ಕಾರ ಎಚ್ಚರಿಸಿದೆ.
ಕೋಚ್‌ಗಳಿಗೆ ಬಾಡಿ ನಾಲೆಡ್ಜ್ ಇಲ್ಲ: ಕೆಲವು ಜಿಮ್‌ಗಳಲ್ಲಿ ಒಂದು ವರ್ಷ ಅಥವಾ ಎರಡು ವರ್ಷ ಜಿಮ್ ಮಾಡಿರುವವರು, ತಾವೇ ಕೋಚ್‌ಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಅವರಿಗೆ ದೇಹವನ್ನು ಹುರಿಗೊಳಿಸಲು ಯಾವ ರೀತಿಯಲ್ಲಿ ವ್ಯಾಯಾಮ ಮಾಡಿಸಬೇಕು. ದೇಹಕ್ಕೆ ಯಾವ ವ್ಯಾಯಾಮವನ್ನು ಎಷ್ಟು ಸಮಯ ಮಾಡಿಸಬೇಕು ಎಂಬ ಸಂಪೂರ್ಣ ಜ್ಞಾನವಿರುವುದಿಲ್ಲ. ಇದರಿಂದಲೂ ಕೆಲವರಿಗೆ ತೊಂದರೆಗಳಾಗಿರುವ ಉದಾಹರಣೆಗಳಿವೆ. ಥಿಯರಿ ತಿಳಿದುಕೊಳ್ಳುವುದಕ್ಕೂ ಅದನ್ನು ಪ್ರಾಯೋಗಿಕವಾಗಿ ಪ್ರಯೋಗ ಮಾಡುವುದಕ್ಕೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಆದ್ದರಿಂದ ಮೊದಲು ಪ್ರಾಕ್ಟಿಕಲಿ ತಿಳಿದುಕೊಂಡ ನಂತರ ಹೆಚ್ಚಿನ ಮಾಹಿತಿಗಾಗಿ ಥಿಯರಿಗಳನ್ನು ಓದಿ ತಿಳಿದುಕೊಳ್ಳುವುದು.
6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ: ಜಿಮ್‌ನಲ್ಲಿ ಕನಿಷ್ಠ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸುವುದು ಉತ್ತಮ. ಇದರಿಂದ ಜಿಮ್‌ನಲ್ಲಿ ಇರುವವರ ದೇಹದ ಸಾಮರ್ಥ್ಯ ಹೇಗಿದೆ? ಎಷ್ಟರ ಮಟ್ಟಿಗೆ ಆರೋಗ್ಯವಂತರಾಗಿದ್ದಾರೆ ಎಂಬುದು ತಿಳಿಯಲಿದೆ. ಆದರೆ, ಪ್ರತಿ ದಿನ ವ್ಯಾಯಾಮ ಮಾಡುವವರು ತಮಗೆ ಏನೂ ಸಮಸ್ಯೆಗಳಿಲ್ಲವೆಂದು ನಿರ್ಲಕ್ಷ್ಯ ತೋರುತ್ತಾರೆ. ಹೀಗೆ ನಿರ್ಲಕ್ಷ್ಯ ಮಾಡುವುದರಿಂದ ತಮಗೆ ತಿಳಿಯದಂತೆಯೇ ಸಮಸ್ಯೆಗಳು ಎದುರಾಗಬಹುದು.
ಯೋಗಕ್ಕೂ ಜಿಮ್‌ಗೂ ವ್ಯತ್ಯಾಸವೇನು?: ಸಾಮಾನ್ಯವಾಗಿ ಯೋಗದಲ್ಲಿ ಯಾವುದೇ ಒಂದು ಆಸನ ಮಾಡಿದ ನಂತರ ತುಸು ಸಮಯ ದೇಹಕ್ಕೆ ವಿಶ್ರಾಂತಿ ನೀಡಲಾಗುತ್ತದೆ. ಯೋಗದ ಕೊನೆಯಲ್ಲಿ ಶವಾಸನ ಮಾಡಿಸಿದಾಗ, ವಿವಿಧ ಆಸನಗಳಲ್ಲಿ ದಣಿದಿರುವ ದೇಹ ವಿಶ್ರಾಂತಗೊಂಡು ಉಲ್ಲಾಸಭರಿತವಾಗುತ್ತದೆ. ಇದು ದೇಹ ಮತ್ತು ಮನಸ್ಸು ಆರೋಗ್ಯವಾಗಿರುವಂತೆ ನೋಡಿಕೊಳ್ಳಲಿದ್ದು, ಯಾವುದೇ ಪರಿಣಾಮ ಬೀರುವುದಿಲ್ಲ. ಆದರೆ, ಜಿಮ್‌ನಲ್ಲಿ ನಿರಂತರವಾಗಿ ಮಾಂಸಖಂಡಗಳಿಗೆ ವರ್ಕೌಟ್ ಮಾಡಿದಾಗ ದೇಹವು ಸಹಕರಿಸದಿದ್ದರೆ, ಸಮಸ್ಯೆಗಳಾಗಬಹುದು ಎನ್ನುತ್ತಾರೆ ಯೋಗಶ್ರೀ ಸಂಸ್ಥಾಪಕಿ ವನಿತಾ. ಶುಗರ್ ಇದ್ದವರಿಗೆ
ಅಧಿಕ ವ್ಯಾಯಾಮ ಅಪಾಯ: ಜಿಮ್‌ನಲ್ಲಿ ವ್ಯಾಯಾಮದ ನಂತರ ಅಥವಾ ಕ್ರೀಡಾ ಸಮಯದಲ್ಲಿ ಹೃದಯ ಸಂಬಂಧಿಸಿದ ಸಮಸ್ಯೆಗಳು ವಿಶೇಷವಾಗಿ ಯುವ ಮತ್ತು ಮಧ್ಯ ವಯಸ್ಸಿನವರಲ್ಲಿ ಹೆಚ್ಚು ಕಂಡುಬರುತ್ತದೆ. ಸರಿಯಾದ ಮುನ್ನಚ್ಚೆರಿಕೆಗಳನ್ನು ಗಮನಿಸಿದರೆ ಹೃದಯ ಸಮಸ್ಯೆಗಳನ್ನು ಹೆಚ್ಚು ತಡೆಗಟ್ಟಬಹುದಾಗಿದೆ ಎಂದು ಫೋರ್ಟಿಸ್ ಆಸ್ಪತ್ರೆಯ ಹೃದಯ ತಜ್ಞ ಡಾ.ವಿವೇಕ ಜವಳಿ ಮಾಹಿತಿ ನೀಡುತ್ತಾರೆ. ಮುಂಜಾನೆ ಸಮಮಾಪನ ವ್ಯಾಯಾಮಗಳಾದ ಚುರುಕು ನಡಿಗೆ, ಜಾಗಿಂಗ್, ಸೈಕ್ಲಿಂಗ್, ಈಜು ಮತ್ತು ಬ್ಯಾಡ್ಮಿಂಟನ್ ಸೇರಿದಂತೆ ಇನ್ನಿತರ ಚಟುವಟಿಕೆಗಳನ್ನು ಬೆಳಗ್ಗೆ 10 ಗಂಟೆ ಮೊದಲು ಮಾಡಬೇಕು ಎಂದು ಸಲಹೆ ನೀಡುತ್ತಾರೆ. ಆದರೆ ಸಂಜೆ ವೇಳೆ ಮಾಡುವುದು ಅಪಾಯಕಾರಿ. ಜತೆಗೆ ಅಧಿಕ ರಕ್ತದ ಒತ್ತಡ ಮತ್ತು ಸಕ್ಕರೆ ಕಾಯಿಲೆ ಇರುವವರು ಅಧಿಕವಾಗಿ ವ್ಯಾಯಾಮ ಮಾಡುವುದು ಸಹ ಅಷ್ಟೇ ಅಪಾಯಕಾರಿ ಎಂದು ಮಾಹಿತಿ ನೀಡುತ್ತಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಹೃದಯ ತಪಾಸಣೆ: ನಗರದ ಜಯದೇವ ಆಸ್ಪತ್ರೆ, ಹಲವು ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಹೃದಯ ತಪಾಸಣೆಗೆ ಒಳಗಾಗಿದ್ದಾರೆ. ಈಗಾಗಲೇ ಹೃದಯ ತಪಾಸಣೆಗೆ ಒಳಗಾದವರಲ್ಲಿ ಶೇ.20ಕ್ಕೂ ಹೆಚ್ಚಿನ ಮಂದಿ ಯುವ ಸಮೂಹ ಆಗಿರುವುದು ವಿಶೇಷ. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಅಕಾಲಿಕವಾಗಿ ಮರಣವನ್ನಪ್ಪಿದ ಕೆಲವೇ ದಿನಗಳಲ್ಲಿ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ಸುಮಾರು 3 ಸಾವಿರಕ್ಕೂ ಹೆಚ್ಚು ಜನರು ಹೃದಯ ತಪಾಸಣೆಗೆ ಆಗಮಿಸಿದ್ದರು.
ಪುನೀತ್‌ರಾಜ್‌ಕುಮಾರ್ ಅವರ ಸಾವಿನ ಮೊದಲು ಹೃದಯ ತಪಾಸಣೆ ಚಿಕಿತ್ಸೆಗಾಗಿ ಬರುವ ಯುವಕರ ಸಂಖ್ಯೆ ಶೇ.5ಕ್ಕಿಂತ ಕಡಿಮೆ ಇತ್ತು. ಆದರೆ ಇದೀಗ ಅವರ ಸಾವು ಬಹಳಷ್ಟು ಜನರಲ್ಲಿ ಎಚ್ಚರಿಕೆ ಮೂಡಿಸಿದೆ.ಭಯಗೊಂಡು ಆಸ್ಪತ್ರೆಯ ಮುಂದೆ ಸಾಲುಗಟ್ಟಿ ನಿಲ್ಲುವಂತೆ ಮಾಡಿದೆ. ಇತ್ತೀಚೆಗೆ ಅಂದರೆ ಕಳೆದ ಐದಾರು ದಿನಗಳಲ್ಲಿ ಶೇ.25ರಷ್ಟು ಮಂದಿ ಹೃದಯ ತಪಾಸಣೆ ಒಳಗಾಗಿದ್ದಾರೆ ಎಂದು ಜಯದೇವ ಆಸ್ಪತ್ರೆಯ ವೈದ್ಯರು ಮಾಹಿತಿ ನೀಡುತ್ತಾರೆ.
ಜನರು ಹೃದಯ ಸಮಸ್ಯೆಯ ಬಗ್ಗೆ ಹೆಚ್ಚಿನ ಕಾಳಜಿ ತೋರಬೇಕು ಯಾವುದೇ ಘಟನೆಯಿಂದ ಎಚ್ಚೆತ್ತುಕೊಳ್ಳುವ ಬದಲು 35 ವರ್ಷ ದಾಟಿದ ಪುರುಷರು, 45 ವರ್ಷ ದಾಟಿದ ಮಹಿಳೆಯರು ಪ್ರತಿ ವರ್ಷ ಹೃದಯ ಚಿಕಿತ್ಸೆ ಮಾಡಿಸಿಕೊಳ್ಳಬೇಕು. ಆರೋಗ್ಯಕರವಾದಂತಹ ಅಭ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ಆದಷ್ಟು ಒತ್ತಡ ಕಡಿಮೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು ಎಂಬುವುದು ವೈದ್ಯರ ಮಾತಾಗಿದೆ.
ಎದೆ ಉರಿ ನಿರ್ಲಕ್ಷ್ಯ ಬೇಡ ಎದೆ ಉರಿಯ ಬಗ್ಗೆ ನಿರ್ಲಕ್ಷ್ಯ: ತೋರಬಾರದು. ಎದೆ ಉರಿಯನ್ನು ಗ್ಯಾಸ್ ಟ್ರಬಲ್, ಆಸಿಡಿಟಿ ಎಂದು ಕೊಂಡು ನಿರ್ಲಕ್ಷ್ಯ ತೋರುತ್ತಾರೆ. ನಡೆಯುವಾಗ, ಓಡಾಡುವಾಗ, ಸುಸ್ತಾದಾಗ ಎದೆ ಉರಿ ಬಂದರೆ ಅದು ಕೂಡ ಹೃದಯ ಸಂಬಂಧಿಸಿದ ರೋಗದ ಲಕ್ಷಣವಾಗಿದೆ ಎಂದು ವೈದ್ಯರು ಹೇಳುತ್ತಾರೆ. ಕರ್ನಾಟಕದಲ್ಲಿ ಹೃದಯ ಸಂಬಂಧಿಸಿದ ಕಾಯಿಲೆಯಿಂದ ಶೇ.8ರಷ್ಟು ಜನರು ಬಳಲುತ್ತಿದ್ದಾರೆ. ಹಾಗೆಯೇ ಗ್ರಾಮೀಣ ಪ್ರದೇಶದಲ್ಲಿ ಶೇ.5ರಿಂದ 6ರಷ್ಟು ಜನರು ಹೃದಯ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಮಾಹಿತಿ ನೀಡುತ್ತಾರೆ.
ಪೌಡರ್, ಡ್ರಗ್ಸ್ ಅಪಾಯ: ಇನ್ನು ದೇಹವನ್ನು ಹುರಿಗೊಳಿಸಲು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ವ್ಯಾಯಾಮ ಮಾಡುವುದು ಉತ್ತಮ. ಆದರೆ, ಹೆಚ್ಚಿನ ಮಂದಿ ಬೇಗ ದೇಹವನ್ನು ಆಕರ್ಷಕವಾಗಿ ಕಾಣುವಂತೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದ ಪೌಡರ್ ತೆಗೆದುಕೊಳ್ಳುವುದು, ಡ್ರಗ್ಸ್ (ಔಷಧಿ) ತೆಗೆದುಕೊಂಡು ಆಕರ್ಷಕವಾಗಿಟ್ಟುಕೊಳ್ಳುತ್ತಾರೆ. ಹೀಗೆ ಮಾಡುವುದು ಅಪಾಯ ಕಟ್ಟಿಟ್ಟ ಬುತ್ತಿ ಎನ್ನುತ್ತಾರೆ.
ಜಿಮ್ ಮಾಡುವವರಿಗೆ ಕನಿಷ್ಠ 6 ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಬೇಕು ಅಥವಾ ಕೌನ್ಸೆಲಿಂಗ್ ಮಾಡಿ ಆರೋಗ್ಯ ಸಾಮರ್ಥ್ಯ ತಿಳಿದುಕೊಳ್ಳುವುದು ಉತ್ತಮ. ಇದರ ಜೊತೆಗೆ ಯಾವುದೇ ವ್ಯಕ್ತಿಗಳು ತಮ್ಮ ಸಾಮರ್ಥ್ಯ ಮೀರಿ ವರ್ಕೌಟ್ ಮಾಡುವುದು ಸರಿಯಲ್ಲ. ● ಶ್ರೀಕಾಂತ್, ಆಪಲ್ ಫಿಟ್‌ನೆಸ್, ಆರ್.ಆರ್.ನಗರ
ಪ್ರೊಬೆಷನಲಿ ಬಾಡಿ ಬಿಲ್ಡ್ ಮಾಡುವವರು ಡಯಟ್ ಮಾಡುತ್ತಾರೆ. ಆದರೆ, ಕೆಲವರು ಏಕಾಏಕಿ ಸಿಕ್ಕಾಪಟ್ಟೆ ಹೇಗೆಂದರೆ ಹಾಗೆ ಜಿಮ್ ಮಾಡುವುದರಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತವೆ. ಯಾವುದೇ ವಕೌìಟ್ ಮಾಡಿದರೂ ತಮ್ಮ ನಿಯಂತ್ರಣ ಕಳೆದುಕೊಳ್ಳ ಬಾರದು. ಮಿತಿಮೀರಿ ವರ್ಕೌಟ್ ಮಾಡುವುದರಿಂದಲೂ ಅಪಾಯ ಸಂಭವಿಸುವ ಸಾಧ್ಯತೆಗಳಿರುತ್ತವೆ. ● ಜನಾರ್ಧನ್ ಜಾನಿ, ಬಾಡಿ ಕಾನ್ಸಪ್ಟ್ ಉಳ್ಳಾಲ ರಸೆ
ನಮ್ಮ ಹೃದಯಕ್ಕೆ ಆರೋಗ್ಯ ವ್ಯಾಯಾಮ ಮುಖ್ಯ. ಉತ್ತಮ ಆರೋ ಗ್ಯ ಹೊಂದಲು ಪ್ರತಿಯೊಬ್ಬರೂ ವ್ಯಾಯಾಮ ಮಾಡಲೇಬೇಕು. ಜಿಮ್‌ನಲ್ಲಿ ಕಸರತ್ತು ನಡೆಸುವುದು ತಪ್ಪಲ್ಲ, ಆದರೆ ಅದು ನಮ್ಮ ಶರೀರಕ್ಕೆ ಎಷ್ಟೇ ಬೇಕು ಅಷ್ಟು ಮಾಡಬೇಕು. ಜಿಮ್‌ನಲ್ಲಿ ಯಾವತ್ತೂ ಸ್ಪರ್ಧೆ ಇರಬಾರದು. ● ಡಾ. ಸಿ.ಎನ್. ಮಂಜುನಾಥ್, ನಿರ್ದೇಶಕ, ಜಯದೇವ ಹೃದ್ರೋಗ ಆಸ್ಪತ್ರೆ
ಎದೆನೋವು ಅನ್ನನಾಳದಿಂದ ಬರಬಹುದು, ಎದೆಗೂಡಿನಿಂದ ಬರಬಹುದು ಇಲ್ಲವೆ ಶ್ವಾಸಕೋಶದಿಂದಲೂ ಬರಬಹುದು.ಆದರೆ ಯಾವುದೇ ಕಾರಣಕ್ಕೂ ಭಯಪಡುವ ಅಗತ್ಯವಿಲ್ಲ.ಜನರು ಆಗಾಗ್ಗೆ ಹೃದಯ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದಾಗಿ ಹೃದಯಸಂಬಂಧಿಸಿದ ಸಮಸ್ಯೆಗಳಿಂದ ದೂರು ಇರಬಹುದಾಗಿದೆ. ● ಡಾ.ಜಯರಾಂ ರೈ, ವೈದ್ಯರು ಮಾಯೊ ಹಾರ್ಟ್ ಕ್ಲಿನಿಕ್ ರಾಜಾಜಿನಗರ
-ಎನ್.ಎಲ್. ಶಿವಮಾದು/ ದೇವೇಶ ಸೂರಗುಪ್ಪ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.