Walking: ನಡೆಯಿರಿ, ಓಡಲೇ ಬೇಕಾಗಿಲ್ಲ
Team Udayavani, Oct 22, 2023, 10:08 AM IST
ನಾವು ದಿನಂಪ್ರತಿ ಸೇವಿಸುವ ಆಹಾರ ಮುಖ್ಯವಾಗಿ ನಮಗೆ ದೈನಂದಿನ ಚಟುವಟಿಕೆಗೆ ಅಗತ್ಯವಾದ ಶಕ್ತಿ (ಕ್ಯಾಲರಿ) ಗಾಗಿ ಹಾಗೂ ದೇಹದ ಜೀವಕೋಶಗಳ ಬೆಳವಣಿಗೆ, ನಿರ್ವಹಣೆಗೆ ಬಳಕೆಯಾಗುತ್ತದೆ. ಪ್ರತೀ ಮನುಷ್ಯನಿಗೆ ಒಂದು ದಿನಕ್ಕೆ ದೈನಂದಿನ ಸಾಮಾನ್ಯ ಕೆಲಸ ಮಾಡಲು ಸುಮಾರು 2,300ರಿಂದ 2,500 ಕಿ.ಲೋ. ಕ್ಯಾಲರಿಗಳ ಶಕ್ತಿ ಅಗತ್ಯವಿರುತ್ತದೆ (ಒಂದು ಕಿ.ಲೋ. ಕ್ಯಾಲರಿ ಅಂದರೆ ಸುಮಾರು ಒಂದು ಕೆ.ಜಿ. ನೀರಿನ ತಾಪವನ್ನು ಒಂದು ಡಿಗ್ರಿ ಸೆಂಟಿಗ್ರೇಡ್‌ನಷ್ಟು ಹೆಚ್ಚಿಸಲು ಬೇಕಾಗುವ ಶಕ್ತಿ ಅಥವಾ ಶಾಖ ಎಂದು ಹೇಳಬಹುದು). ಈ ಕ್ಯಾಲರಿಗಳ ಅಗತ್ಯವು ಪ್ರತಿಯೊಬ್ಬ ವ್ಯಕ್ತಿಗೂ ಅವನ ದೇಹದ ಗಾತ್ರ ಮತ್ತು ದೈಹಿಕ ಚಟುವಟಿಕೆಯನ್ನು ಅವಲಂಬಿಸಿರುತ್ತದೆ.
ನಾವು ದಿನನಿತ್ಯ ಸೇವಿಸುವ ಆಹಾರದಲ್ಲಿ ಇರುವ ಮುಖ್ಯ ಅಂಶಗಳಾದ ಕಾರ್ಬೋಹೈಡ್ರೇಟ್, ಪ್ರೊಟೀನ್ ಹಾಗೂ ಕೊಬ್ಬು (ಫ್ಯಾಟ್) ಇವುಗಳು ದೇಹದ ಚಟುವಟಿಕೆಗೆ ಬೇಕಾದ ಶಕ್ತಿ/ಕ್ಯಾಲರಿಗಳನ್ನು ನೀಡುತ್ತವೆ. ಸುಮಾರು ಹತ್ತು ಗ್ರಾಮ್ ಕಾಬೋìಹೈಡ್ರೇಟ್ ಇರುವ ಆಹಾರ ಅಂದರೆ ಅನ್ನ, ಚಪಾತಿ, ರೊಟ್ಟಿ, ದೋಸೆ, ಸಜ್ಜಿಗೆ ಇತ್ಯಾದಿಗಳು ಸುಮಾರು 40 ಕಿ. ಕ್ಯಾಲರಿಯಷ್ಟು ಶಕ್ತಿಯನ್ನು ನೀಡುತ್ತವೆ.10 ಗ್ರಾಮ್ ಪ್ರೊಟೀನ್ ಇರುವ ಆಹಾರ ಮುಖ್ಯವಾಗಿ ಮೀನು, ಮೊಟ್ಟೆ, ಮಾಂಸ, ಮೊಳಕೆ ಕಾಳುಗಳು, ಸೋಯಾಬೀನ್ ಇತ್ಯಾದಿಗಳು ಕೂಡ 40 ಕಿ.ಲೋ. ಕ್ಯಾಲರಿ ಶಕ್ತಿಯನ್ನು ನೀಡುತ್ತವೆ. ಅದೇ ತರಹವಾಗಿ 10 ಗ್ರಾಮ್ ಕೊಬ್ಬಿನ (ಫ್ಯಾಟ್) ಅಂಶವಿರುವ ಆಹಾರ ಎಣ್ಣೆ, ತುಪ್ಪ, ಹುರಿದ ವಸ್ತುಗಳು, ಹಾಲಿನ ಉತ್ಪನ್ನಗಳು, ಮಾಂಸ, ಸಿಹಿ ತಿಂಡಿಗಳು ಇತ್ಯಾದಿಗಳು ಅತೀ ಹೆಚ್ಚು 90 ಕಿ.ಲೋ. ಕ್ಯಾಲರಿಯಷ್ಟು ಶಕ್ತಿಯನ್ನು ನೀಡುತ್ತವೆ.
ನಾವು ದಿನವೂ ಸೇವಿಸುವ ಯಾವುದೇ ತರಹದ ಆಹಾರ ನಮ್ಮ ದೈನಂದಿನ ಚಟುವಟಿಕೆಗಳಿಗೆ ಅಗತ್ಯವಿರುವುದಕ್ಕಿಂತ ಹೆಚ್ಚಾಗಿದ್ದರೆ (ಹೆಚ್ಚು ಕ್ಯಾಲರಿ ಹೊಂದಿದ್ದರೆ) ಅದು ದೇಹದಲ್ಲಿ ಕೊಬ್ಟಾಗಿ (ಫ್ಯಾಟ್) ಮಾರ್ಪಟ್ಟು ದೇಹಾದ್ಯಂತ ನಿಗದಿತ ರೂಪದಲ್ಲಿ ಶೇಖರಣೆ ಹೊಂದುತ್ತದೆ. ಆಗ ಆ ವ್ಯಕ್ತಿಯ ತೂಕ ಹೆಚ್ಚಾಗುವುದು. ಅದೇ ರೀತಿಯಲ್ಲಿ ನಾವು ಸೇವಿಸುವ ಆಹಾರ ನಮಗೆ ಅಗತ್ಯವಿರುವುದಕ್ಕಿಂತ ಕಡಿಮೆ (ಕಡಿಮೆ ಕ್ಯಾಲೋರಿ) ನೀಡುವಂತಹದಾಗಿದ್ದರೆ, ಆಗ ದೇಹದಲ್ಲಿ ಅದಾಗಲೇ ಶೇಖರಗೊಂಡಿರುವ ಕೊಬ್ಬನ್ನು ದೈನಂದಿನ ಚಟುವಟಿಕೆಗೆ ಬೇಕಾದ ಶಕ್ತಿ/ಕ್ಯಾಲರಿಗಾಗಿ ಬಳಸಿಕೊಳ್ಳುತ್ತದೆ. ಆಗ ವ್ಯಕ್ತಿಯ ತೂಕ ಕಡಿಮೆಯಾಗುತ್ತದೆ. ಸರಳವಾಗಿ ಹೇಳುವುದಾದರೇ ಅಗತ್ಯಕ್ಕಿಂತ ಹೆಚ್ಚು ಯಾವುದೇ ತರಹದ ಆಹಾರ ಸೇವಿಸುವುದರಿಂದ ಬೊಜ್ಜು/ಸ್ಥೂಲಕಾಯ ಬರುತ್ತದೆ ಹಾಗೂ ದೈನಂದಿನ ಚಟುವಟಿಕೆಗೆ ಅಗತ್ಯಕ್ಕಿಂತ ಕಡಿಮೆ ಆಹಾರ ಸೇವಿಸಿದರೆ ದೇಹದಲ್ಲಿರುವ ಬೊಜ್ಜು ಕರಗುತ್ತದೆ.
ಮನುಷ್ಯನ ಬೊಜ್ಜಿಗೆ/ಸ್ಥೂಲಕಾಯಕ್ಕೆ ಆ ವ್ಯಕ್ತಿ ಸೇವಿಸುವ ಆಹಾರ ಪದ್ಧತಿ ಹಾಗೂ ಜಡ ಜೀವನ ಶೈಲಿ ಮುಖ್ಯ ಕಾರಣವಾಗಿದ್ದರೂ ಕೆಲವು ಕಾಯಿಲೆಗಳಿಂದ, ಕೆಲವು ಕಾಯಿಲೆಗಳಿಗಾಗಿ ಸೇವಿಸುವ ಔಷಧಗಳಿಂದ, ಆನುವಂಶೀಯತೆಯಿಂದ ಕೂಡ ಬೊಜ್ಜು ಉಂಟಾಗುವ ಸಾಧ್ಯತೆ ಇರುತ್ತದೆ. ಸಾಮಾನ್ಯವಾಗಿ ನಾವು ಆಹಾರ ಸೇವಿಸುವಾಗ, ಅಗತ್ಯದಷ್ಟು ಗಾತ್ರದ ಆಹಾರ ಸೇವನೆಯಾಗುವಾಗ ನಮ್ಮ ಕರುಳಿನಲ್ಲಿ ಗ್ರೆಲಿನ್, ಲೆಫ್ಟಿನ್ ಮುಂತಾದ ಕೆಲವು ರಾಸಾಯನಿಕಗಳು ಉತ್ಪತ್ತಿಯಾಗುತ್ತವೆ ಮತ್ತು ಇವು ಮೆದುಳಿಗೆ ಹೊಟ್ಟೆ ತುಂಬಿದ ಸಂಕೇತಗಳನ್ನು ಕಳುಹಿಸುತ್ತವೆ. ಆಗ ವ್ಯಕ್ತಿಗೆ ಹೊಟ್ಟೆ ತುಂಬಿದ ಅನುಭವ ಉಂಟಾಗುತ್ತದೆ. ಇತ್ತೀಚೆಗಿನ ದಿನಗಳಲ್ಲಿ ಬದಲಾಗುತ್ತಿರುವ ಆಹಾರ ಪದ್ಧತಿಯಲ್ಲಿ ಜನರು ಹೆಚ್ಚಾಗಿ ಸಂಸ್ಕರಿಸಿದ ಆಹಾರ/ಪಾನೀಯಗಳನ್ನು ಸೇವಿಸುತ್ತಾರೆ. ಇವುಗಳು ಕಡಿಮೆ ಪ್ರಮಾಣ (ಗಾತ್ರ)ದಲ್ಲಿ ಹೆಚ್ಚಿನ ಕ್ಯಾಲೋರಿಗಳನ್ನು ಹೊಂದಿರುತ್ತವೆ. ಆದರೆ ಇದರಿಂದ ವ್ಯಕ್ತಿಗೆ ಹೊಟ್ಟೆ ತುಂಬಿದ ಅನುಭವ ಆಗುವುದಿಲ್ಲ. ಆದ್ದರಿಂದ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಸೇವಿಸಲಾಗುತ್ತದೆ. ಆದ್ದರಿಂದ ಹೆಚ್ಚುವರಿ ಕ್ಯಾಲೋರಿಗಳು ದೇಹದಲ್ಲಿ ಕೊಬ್ಟಾಗಿ ಸಂಗ್ರಹವಾಗುತ್ತವೆ. ಬೊಜ್ಜು ಅಥವಾ ಸ್ಥೂಲಕಾಯವನ್ನು ಬಾಡಿ ಮಾಸ್ ಇಂಡೆಕ್ಸ್ (ಬಿ.ಎಂ.ಐ.) ಮೂಲಕ ಲೆಕ್ಕ ಹಾಕಲಾಗುತ್ತದೆ- ಈ ಮಾನದ ಪ್ರಕಾರ ಬಿ.ಎಂ.ಐ. 18.5ರಿಂದ 25ರ ನಡುವೆ ಇದ್ದರೆ ಸಾಮಾನ್ಯ ತೂಕ ಎಂದು ಪರಿಗಣಿಸಲಾಗುವುದು. 25ರಿಂದ 30ರ ಒಳಗೆ ಇದ್ದರೆ ಅಧಿಕ ತೂಕ ಮತ್ತು 30ಕ್ಕಿಂತ ಹೆಚ್ಚಿದ್ದರೆ ಸ್ಥೂಲಕಾಯ ಎಂದು ಪರಿಗಣಿಸಲಾಗುವುದು. 40ಕ್ಕಿಂತ ಹೆಚ್ಚಿದ್ದರೆ ರೋಗಗ್ರಸ್ಥ ಸ್ಥೂಲಕಾಯವೆಂದು ಪರಿಗಣಿಸಲಾಗುವುದು.
ಹೃದಯ ಸಂಬಂಧಿ ಕಾಯಿಲೆಗಳಿಗೆ ಮುಖ್ಯವಾಗಿ ರಕ್ತದೊತ್ತಡ ಹಾಗೂ ಹೃದಯಾಘಾತಗಳಿಗೆ ದೇಹದ ಬೊಜ್ಜು, ಸ್ಥೂಲಕಾಯ ಪ್ರಮುಖ ಕಾರಣವಾಗಿರುತ್ತದೆ. ಒಬ್ಬ ವ್ಯಕ್ತಿಯ ತೂಕ ಹತ್ತು ಪೌಂಡ್ (4.5 ಕೆ.ಜಿ.) ನಷ್ಟು ಹೆಚ್ಚಾದರೆ ಆ ಹೆಚ್ಚಾದ ಜೀವಕೋಶಗಳಿಗೆ ರಕ್ತ ಸರಬರಾಜು ಮಾಡಲು ಸುಮಾರು ನಾಲ್ಕು ಸಾವಿರ ಮೈಲುಗಳಷ್ಟು ಉದ್ದದ ರಕ್ತನಾಳಗಳ ಹೆಚ್ಚುವರಿ ಬೆಳವಣಿಗೆಯಾಗುತ್ತದೆ. ಇದು ಹೃದಯದ ಮೇಲೆ ರಕ್ತ ಪಂಪ್ ಮಾಡುವಾಗ ಹೆಚ್ಚಿನ ಒತ್ತಡ ನೀಡುತ್ತದೆ. ಅದೇ ರೀತಿಯಾಗಿ ವ್ಯಕ್ತಿಯ ತೂಕ ಐದು ಕೆ.ಜಿ.ಗಳಷ್ಟು ಹೆಚ್ಚಾದರೆ ಅವರ ರಕ್ತದೊತ್ತಡ ಕೂಡ ಐದು ಮಿ.ಮೀ. ಮರ್ಕ್ನೂರಿಯಷ್ಟು ಹೆಚ್ಚಾಗುವುದು. ಆದ್ದರಿಂದ ವ್ಯಕ್ತಿಯ ದೇಹದ ತೂಕ ಹೆಚ್ಚಾದಂತೆ ಹೃದಯ ಸಂಬಂಧಿ ಅಪಾಯಗಳು ಹೆಚ್ಚಾಗುತ್ತವೆ. ಕೊಬ್ಬಿನಂಶ ದೇಹದಲ್ಲಿ, ರಕ್ತದಲ್ಲಿ ಹೆಚ್ಚಾದಾಗ ಅದು ರಕ್ತನಾಳದ ಒಳಪದರದ ಮೇಲೆ ಸಂಗ್ರಹವಾಗುತ್ತದೆ. ಇದರಿಂದ ಕೂಡ ರಕ್ತನಾಳದ ಒಳ ವ್ಯಾಸ ಕಡಿಮೆಯಾಗಿ ರಕ್ತದೊತ್ತಡ ಹೆಚ್ಚಾಗುತ್ತದೆ.
ಇದರೊಂದಿಗೆ ಆ ವ್ಯಕ್ತಿಯೂ ಧೂಮಪಾನವನ್ನು ಮಾಡುತ್ತಿದ್ದಲ್ಲಿ ಅದರಲ್ಲಿರುವ ನಿಕೋಟಿನ್ ರಕ್ತನಾಳಗಳನ್ನು ಮತ್ತಷ್ಟು ಸಂಕುಚಿತಗೊಳಿಸುವುದರಿಂದ ರಕ್ತದೊತ್ತಡ ಮತ್ತಷ್ಟು ಹೆಚ್ಚಾಗಲು ಕಾರಣವಾಗಬಹುದು. ಹೃದಯಕ್ಕೆ ರಕ್ತ ಸರಬರಾಜು ಮಾಡುವ ಕೊರೊನರಿ ರಕ್ತನಾಳಗಳಲ್ಲಿ ಹೀಗಾದರೆ ಹೃದಯಾಘಾತವಾಗುವ ಅಪಾಯವಿರುತ್ತದೆ.
ಸುಮಾರು ಐದಾರು ದಶಕಗಳ ಹಿಂದೆ ಭಾರತ ದೇಶದಲ್ಲಿ ಅಧಿಕ ರಕ್ತದೊತ್ತಡ ಪ್ರಮಾಣ ಸುಮಾರು ಶೇ. 5ರಿಂದ 10 ರವರೆಗಿತ್ತು. ಆಗ ಹೆಚ್ಚಿನ ಜನರು ಕೃಷಿಯಾಧಾರಿತ ಜೀವನ ನಡೆಸುತ್ತಿದ್ದರು. ಹೊಲ ಗದ್ದೆಗಳಲ್ಲಿ, ತೋಟ, ಪಶು ಆರೈಕೆ, ಮನೆ ಕೆಲಸ, ಬಾವಿ ನೀರು ಸೇದುವುದು, ಬಟ್ಟೆ ಒಗೆಯುವುದು, ನೆಲ ಒರೆಸುವುದು ಇತ್ಯಾದಿ ಕೆಲಸವನ್ನು ಮಾಡುತ್ತಿದ್ದರು. ಈ ಎಲ್ಲ ಕೆಲಸಗಳು ದೇಹದ ಎಲ್ಲ ಅಂಗಾಂಗಗಳಿಗೆ ಚಟುವಟಿಕೆ ನೀಡುವಂತಹವಾಗಿದ್ದವು. ಆದರೆ ಈಗ ಈ ಎಲ್ಲ ಕೆಲಸಗಳು ಯಾಂತ್ರೀಕೃತಗೊಂಡಿವೆ.
ಜನರು ಇಂದು ದೈಹಿಕ ಕೆಲಸಗಳಿಲ್ಲದ ಒತ್ತಡದಿಂದ ಕೂಡಿದ ಕಚೇರಿಗಳಲ್ಲಿ, ಯಾಂತ್ರಿಕ ಕೆಲಸಗಳಲ್ಲಿ ತೊಡಗಿಕೊಂಡಿದ್ದಾರೆ. ಇದರಿಂದ ದೈಹಿಕ ಚಟುವಟಿಕೆ ಕಡಿಮೆಯಾಗಿ, ತಲಾ ಆದಾಯ ಹೆಚ್ಚಾಗಿ ಆಹಾರ ಪದ್ಧತಿ ಬದಲಾವಣೆಗೊಂಡು ಬೊಜ್ಜಿಗೆ ಒಳಗಾಗುತ್ತಿದ್ದಾರೆ. ಇದಲ್ಲದೆ ಇತರ ಹವ್ಯಾಸಗಳಾದ ಮದ್ಯಪಾನ, ತಂಬಾಕು ಸೇವನೆ ಕೂಡ ಹೆಚ್ಚಾಗುತ್ತಿದೆ. ಇಂದು ಭಾರತದಲ್ಲಿ 30ರಿಂದ 35ರಷ್ಟು ವಯಸ್ಕರಲ್ಲಿ ಅಧಿಕ ರಕ್ತದೊತ್ತಡ ಹಾಗೂ 20-25ರಷ್ಟು ವಯಸ್ಕರಲ್ಲಿ ಹೃದಯ ರೋಗ ಕಂಡುಬರುತ್ತಿದೆ.
ತೂಕ ಇಳಿಸಿಕೊಳ್ಳುವುದು ಹೇಗೆ?
ದೇಹದ ತೂಕ ಕಡಿಮೆ ಮಾಡಲು ಎರಡು ಮುಖ್ಯ ವಿಧಾನಗಳಿವೆ. ಮೊದಲನೆಯದಾಗಿ ದೈಹಿಕ ಚಟುವಟಿಕೆಗಳಿಗೆ ಅಗತ್ಯವಿರುವಷ್ಟೇ (ಕಡಿಮೆ ಎಣ್ಣೆ, ತುಪ್ಪ, ಬೆಣ್ಣೆ ಅಂಶಗಳಿರುವ) ಸರಳ ಆಹಾರ ಸೇವಿಸುವುದು ಹಾಗೂ ಇನ್ನೂ ಎರಡು ತುತ್ತು ಆಹಾರ ಸೇವಿಸಬೇಕೆನ್ನಿಸುತ್ತಿರುವಾಗಲೇ ಸೇವನೆ ನಿಲ್ಲಿಸುವುದು. ಎರಡನೆಯದಾಗಿ, ದಿನಂಪ್ರತಿ ದೈಹಿಕ ಚಟುವಟಿಕೆಯಿಂದಿರುವುದು- ದೈನಂದಿನ ನಡಿಗೆ (ವಾಕಿಂಗ್), ಯೋಗ, ಲಘು ವ್ಯಾಯಾಮಗಳು, ಮನೆ ಕೆಲಸಗಳು. ಯೋಗ ದೈಹಿಕ ಚಟುವಟಿಕೆ ನೀಡುವುದಲ್ಲದೆ ಮಾನಸಿಕ ಒತ್ತಡ ನಿರ್ವಹಣೆಗೆ ಸಹಾಯಕಾರಿಯಾಗಿದೆ.
ಪ್ರತೀ ದಿನ 30 ರಿಂದ 45 ನಿಮಿಷಗಳ ಆಹ್ಲಾದಕರ ವಾತಾವಣದಲ್ಲಿ ಆರಾಮದಾಯಕವಾಗಿ ಮಾಡುವ ವಾಕಿಂಗ್‌ನಿಂದ ಹಲವಾರು ಲಾಭಗಳಿವೆ. ಪ್ರತೀ ಹತ್ತು ನಿಮಿಷಗಳ ಆರಾಮದಾಯಕವಾದ ನಡಿಗೆಗೆ 25ರಿಂದ 30 ಕಿ.ಲೋ. ಕ್ಯಾಲರಿಯಷ್ಟು ಶಕ್ತಿ ಬಳಕೆಯಾಗುತ್ತದೆ. ಆಹ್ಲಾದಕರ ವಾತಾವರಣದಲ್ಲಿ ಮನಸ್ಸಿಗೆ ಸಂತೋಷವಾದಾಗ ದೇಹದಲ್ಲಿ ಸ್ರವಿಸುವ ರಾಸಾಯನಿಕಗಳು ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡುತ್ತದೆ. ಅಲ್ಲದೆ ರೋಗ ನಿರೋಧಕ ಶಕ್ತಿಯನ್ನು ಬಲಗೊಳಿಸುತ್ತದೆ. ದಿನಾ ವಾಕಿಂಗ್ ಮಾಡುವುದರಿಂದ ದೇಹದ ಮೂಳೆಗಳ ಮೇಲೆ ತೂಕ ಬಿದ್ದು ಮೂಳೆಗಳಲ್ಲಿ ಹೊಸ ಕೋಶಗಳ ಬೆಳವಣಿಗೆಯಾಗಿ ಆಸ್ಟಿಯೋಪೊರೋಸಿಸ್ ಉಂಟಾಗುವುದನ್ನು ಕೂಡ ತಡೆಯುತ್ತದೆ. ಮೂಳೆಗಳ ಸಂದುಗಳ ಸವಕಳಿ ಕಡಿಮೆಯಾಗಿ ಸಂಧಿನೋವು ಕೂಡ ಕಡಿಮೆಯಾಗುತ್ತದೆ. ಆದರೆ ದೈನಂದಿನ ವಾಕಿಂಗ್ ಹೋಗುವಾಗ ಸುರಕ್ಷಿತ ಹಾದಿಯಲ್ಲಿ/ರಸ್ತೆಯಲ್ಲಿ ಮಾಡುವುದು ಅತೀ ಅಗತ್ಯ. ಮುಂಜಾನೆಯ ನಸುಕಿನಲ್ಲಿ ಅಥವಾ ಸಂಜೆಯ ಮಬ್ಬಿನಲ್ಲಿ ಫುಟ್‌ಪಾತ್ ಇಲ್ಲದ, ವಾಹನ ಸಂದಣಿ ಇರುವ ರಸ್ತೆ ಅಂಚಿನಲ್ಲಿ ವಾಕಿಂಗ್ ಮಾಡಿದರೆ ಅಪಘಾತ, ಸಾವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬ ಅರಿವು ಇರಬೇಕಾಗುತ್ತದೆ.
ವ್ಯಾಯಾಮಕ್ಕಾಗಿ ಪ್ರತಿದಿನ ಓಡುವುದು (ಜಾಗಿಂಗ್) ಪ್ರಕೃತಿಯ ನಿಯಮದಲ್ಲಿ ಮಾನವನ ನೈಸರ್ಗಿಕ ಕ್ರಿಯೆಯಲ್ಲ. ಮನುಷ್ಯನ ದೇಹ, ಸಂಧಿಗಳು ತುರ್ತು ಅಗತ್ಯಕ್ಕೆ, ದೇಹ ರಕ್ಷಣೆಗೆ ಮಾತ್ರ ಸ್ವಲ್ಪ ದೂರ ಓಡಲು ನೈಸರ್ಗಿಕವಾಗಿ ವಿನ್ಯಾಸಗೊಂಡಿವೆ. ದೇಹದ ತೂಕ ಕಡಿಮೆ ಮಾಡಲು ಯಾವುದೇ ರೀತಿಯ ಭಾರೀ ವ್ಯಾಯಾಮ, ದೇಹ ದಂಡನೆ ಮಾಡುವ ಮೊದಲು ತಜ್ಞ ವೈದ್ಯರ ಸಲಹೆ ಪಡೆದುಕೊಳ್ಳುವುದು ಅತೀ ಅಗತ್ಯವಾಗಿದೆ.
ಡಾ| ಸಂಜಯ್ ಕಿಣಿ,
ಅಸೋಸಿಯೇಟ್ ಪ್ರೊಫೆಸರ್
ಡಾ| ಅಶ್ವಿನಿ ಕುಮಾರ್ ಗೋಪಾಡಿ,
ಪ್ರೊಫೆಸರ್ ಮತ್ತು ಮುಖ್ಯಸ್ಥರು,
ಕಮ್ಯೂನಿಟಿ ಮೆಡಿಸಿನ್ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಮ್ಯುನಿಟಿ ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಾಹೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.