Heart; ಹೆಚ್ಚುತ್ತಿವೆಯೇ ಹೃದಯಾಘಾತಗಳು?: ವೈಜ್ಞಾನಿಕ ಸಮೀಕ್ಷೆ ಕೈಗೊಳ್ಳುವ ಅಗತ್ಯ
ಗ್ಯಾಸ್ ಟ್ರಬಲ್ ಎಂದಿತ್ಯಾದಿಯಾಗಿ ನಿರ್ಲಕ್ಷಿಸುವ ಪರಿಪಾಠ ...
Team Udayavani, Sep 17, 2023, 8:41 PM IST
ಮನೆಯೊಳಗೆ ಕಾಲಿಡುತ್ತಿದ್ದಂತೆ ಕುಸಿದು ಬಿದ್ದು ಸಾವು, ರಾತ್ರಿ ಉಂಡು ಮಲಗಿದವರು ಬೆಳಗ್ಗೆ ನೋಡುವಾಗ ಶವ, ನಡೆಯುತ್ತಾ ಇದ್ದಂತೆ ಎದೆನೋವೆಂದು ಎದೆ ಹಿಡಿದು ನಿಧನ. ಪಾಠಮಾಡುತ್ತಿದ್ದವರು ಬೋರ್ಡ್ ಎದುರೇ ಕುಸಿದು ಮರಣ ,ಅಷ್ಟೇಕೆ ವೈದ್ಯರ ಕ್ಲಿನಿಕ್ ನಲ್ಲಿ ಸರತಿಗೆ ಕಾಯುತ್ತಿದ್ದವರು ಅಲ್ಲೇ ಮೃತ್ಯು…. ಹೀಗೆ ದಿನನಿತ್ಯವೂ ಹೃದಯಾಘಾತದಿಂತ ಮೃತ ಪಟ್ಟವರ ಸುದ್ದಿ ಕೇಳುತ್ತಿದ್ದೇವಲ್ಲವೇ? ಕೆಲವೊಮ್ಮೆ ಒಂದೇ ದಿನದಲ್ಲಿ ಪರಿಚಯಸ್ಥರೇ ಮೂರು ನಾಲ್ಕು ಮಂದಿಯೂ ಹೀಗೆ ಕೊನೆಯುಸಿರೆಳೆದಿ ದ್ದೂ ಇದೆಯಲ್ಲವೆ? ಮಿತ್ರರ, ಬಂಧುಬಾಂಧವರ ನಿಧನದ ಸುದ್ದಿಗಳು ದಿನನಿತ್ಯದ ಸುದ್ದಿ ಎಂದಾಗುತ್ತಿದೆಯಲ್ಲವೇ?.
ಶತಾಯುಷಿಯೆನಿಸಿಕೊಳ್ಳಲು ಹತ್ತಿರವಾದವರು ಅಥವಾ ಸುಮಾರು ದಿನಗಳಿಂದ ಹಾಸಿಗೆ ಹಿಡಿದು ಸಾವೇ ಇನ್ನು ಇವರಿಗೆ ಔಷಧ ಅನಿಸಿಕೊಂಡವರು ಸತ್ತು ಮುಕ್ತಿ ಪಡೆಯುವುದು ಬೇರೆ, ಇನ್ನೂ ಬಾಳಿ ಬದುಕಬೇಕಾದ ಯುವಕರು, ಮಧ್ಯವಯಸ್ಕರು, ಆರೋಗ್ಯವಂತ ಹಿರಿಯರು ಅನಾಮತ್ತಾಗಿ ಸಾಯುವುದು ಬೇರೆ. ಹೌದು, ಇಂತಹಾ ಸಾವುಗಳು ಹೆಚ್ಚುತ್ತಿವೆ. ಮುಖ್ಯವಾಗಿ ಕೊರೊನಾನಂತರ ಇಂತಹಾ ಮರಣಗಳು ಹೆಚ್ಚುತ್ತಿವೆ ಎನ್ನುವುದು ಜನಾಭಿಪ್ರಾಯ. ವೈದ್ಯನಾಗಿ ನನಗೂ ಇದು ಹೌದು ಅನಿಸಿದ್ದಿದೆ. ಆದರೂ ಸಾಮಾಜಿಕ ಜಾಲತಾಣಗಳಲ್ಲಿ ಸಿಗುವ ಪ್ರಚಾರ, ಮುಂಚಿಗಿಂತ ಎಷ್ಟೋ ಪಟ್ಟು ಹೆಚ್ಚಾಗಿರುವ ಜನಸಂಖ್ಯೆ ಇತ್ಯಾದಿಗಳಿಂದ ಮರಣದ ಸರಾಸರಿ ಹೆಚ್ಚಾಗಿರದೆ ಕೇವಲ ಗಮನಕ್ಕೆ ಬರುವ ಮರಣಗಳ ಸಂಖ್ಯೆ ಹೆಚ್ಚಾದುದರಿಂದ ಈ ಭಾವನೆ ಮೂಡಿರಲೂಬಹುದು ಎನ್ನುವ ಸಂದೇಹವಿದೆ. ಆದರೂ ಹೃದಯಾಘಾತವು ಯುವಕರಲ್ಲಿ ಮತ್ತು ಮಹಿಳೆಯರಲ್ಲೂ ಸಂಭವಿಸುತ್ತಿರುವುದು, ಮಾತ್ರವಲ್ಲದೆ ಸ್ವತಃ ವೈದ್ಯರು – ಅದೂ ಹೃದಯ ತಜ್ಞರು, ಯೋಗಪಟುಗಳು, ಕ್ರೀಡಾಳುಗಳು, ಕಟ್ಟುಮಸ್ತಿನ ಶರೀರ ಹೊಂದಿರುವವರೂ ಹೃದಯಾಘಾತಕ್ಕೆ ಇತ್ತೀಚಿನ ದಿನಗಳಲ್ಲಿ ಬಲಿಯಾಗಿರುವುದರಿಂದ ಈ ಬಗ್ಗೆ ಸರಕಾರವು ವೈಜ್ಞಾನಿಕ ಸಮೀಕ್ಷೆಯನ್ನು ಕೈಗೊಳ್ಳುವ ಅಗತ್ಯವಿದೆ ಅನ್ನಿಸುತ್ತದೆ. ಅದರಲ್ಲೂ ಆರೋಗ್ಯವಂತರಾಗಿದ್ದವರೆನಿಕೊಂಡವರು ನಾಟಕೀಯವಾಗಿ ಕುಸಿದು ಬಿದ್ದು ಅನಾಮತ್ತಾಗಿ ಮರಣಹೊಂದಿದ್ದಾರೆ ಎನ್ನಲಾದ ಪ್ರಕರಣಗಳು ಹೆಚ್ಚುತ್ತಿವೆ ಎಂದಾದರೆ ಅವರಿಗೆ ತಮ್ಮೊಳಗೆ ಹೃದ್ರೋಗ ಇದ್ದಿದ್ದುದು ಯಾಕೆ ತಿಳಿದಿರಲಿಲ್ಲ ಎನ್ನುವ ಪ್ರಶ್ನೆ ಮೂಡುವುದು ಸಹಜ. ಸದ್ಯದ ಈ ಪರಿಸ್ಥಿಯನ್ನು ಕೊರೊನಾ ಲಸಿಕೆಗೆ ತಳುಕುಹಾಕುವವರ ಸಂಖ್ಯೆಯೂ ದೊಡ್ಡದಿದೆ. ಈ ಅಭಿಪ್ರಾಯ ನಿಜವೇ ಅಥವಾ ಸುಳ್ಳೆ ಎನ್ನುವ ಸಮೀಕ್ಷೆ ನಡೆದಿಲ್ಲ . ಸರಕಾರ ತಾನಾಗಿ ಈ ಚುಚ್ಚುಮದ್ದನ್ನು ನೀಡಿರುವುದರಿಂದ ಈ ಸಮೀಕ್ಷೆಗೆ ಮುಂದಾಗುತ್ತಿಲ್ಲ ಎಂದು ಆರೋಪಿಸುವವರೂ ಇದ್ದಾರೆ. ಈ ಆರೋಪದ ಸತ್ಯಾಸತ್ಯತೆ ಏನೇ ಇದ್ದರೂ ಈ ಮರಣಗಳ ಸರಿಯಾದ ಕಾರಣ ಹುಡುಕದಿದ್ದಲ್ಲಿ ಇಂತಹ ಮರಣಗಳ ಸರಣಿ ಮುಂದುವರಿಯುವುದು ನಿಶ್ಚಿತ.
ಹೃದಯಾಘಾತ ಒಂದು ಕ್ಷಣದಲ್ಲಿ ಸಂಭವಿಸಬಹುದು ಆದರೆ ಹೃದಯಾಘಾತವಾಗಬೇಕಾದರೆ ಅದಕ್ಕೆ ಪೂರಕವಾಗುವ ಸನ್ನಿವೇಶವು ಹೃದಯದಲ್ಲಿ ಹಾಗೂ ಅದರ ರಕ್ತನಾಳಗಳಲ್ಲಿ ಹತ್ತು ಹದಿನೈದು ಅಥವಾ ಇಪ್ಪತ್ತು ವರ್ಷಗಳ ಹಿಂದೆಯೇ ಬೆಳೆಯಲು ಆರಂಭವಾಗಿರುತ್ತದೆ. ಹೃದಯಕ್ಕೆ ಶುದ್ಧರಕ್ತವನ್ನೊಯ್ಯುವ ಕೊರೊನರಿ ಎಂಬ ಹೆಸರಿನ ರಕ್ತನಾಳಗಳ ಒಳಗೋಡೆಗಳಲ್ಲಿ ಕೊಲೆಸ್ಟಿರಾಲ್ ಎಂಬ ಕೊಬ್ಬುಪದಾರ್ಥ ಶೇಖರವಾಗಿ ರಕ್ತನಾಳದ ವ್ಯಾಸ ಕಡಿಮೆಯಾಗುವುದೇ ಹೃದಯಾಘಾತವಾಗಲು ಮುಖ್ಯ ಕಾರಣ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಈ ಖಾಯಿಲೆಯನ್ನು ಕೊರೊನರಿ ಆರ್ಟರಿ ಡಿಸೀಸ್ ಎನ್ನುತ್ತಾರೆ. ಈ ಖಾಯಿಲೆಯಲ್ಲಿ ರಕ್ತನಾಳಗಳ ಒಳಗೋಡೆಯುದ್ದಕ್ಕೂ ಕೊಲೆಸ್ಟಿರಾಲ್ ಮುದ್ದೆ ಮುದ್ದೆಯಾಗಿ ಅಲ್ಲಲ್ಲಿ ಶೇಖರವಾಗುತ್ತದೆ. ಇದರಿಂದಾಗಿ ಕೊರೊನರಿ ರಕ್ತನಾಳದ ವ್ಯಾಸವು 70 ಶೇಕಡಾದಷ್ಟು ಕಡಿಮೆಯಾದಾಗ ಮಾತ್ರಾ ಹೃದಯಕ್ಕೆ ಶುದ್ಧರಕ್ತದ ಕೊರತೆಯಾದುದರ ಪರಿಣಾಮ ಗೋಚರಿಸುತ್ತದೆ. ಹೃದಯದ ರಕ್ತನಾಳಗಳಾದ ಕೊರೊನರಿ ರಕ್ತನಾಳಗಳ ವ್ಯಾಸವು 70 ಶೇಕಡಕ್ಕಿಂತಲೂ ಕಡಿಮೆಯಾದಾಗ ಶ್ರಮವಹಿಸಿ ಕೆಲಸಮಾಡುವಾಗ ಎದೆನೋವು ಅಥವಾ ಉರಿ, ಎದೆಉರಿಯ ಜೊತೆಗೆ ಮೈಬೆವರುವುದು, ತಲೆಸುತ್ತು ಬರುವುದು. ಏದುಸಿರು ಬರುವುದು, ಉಸಿರಾಟ ಕಷ್ಟವಾಗುವುದು ಇತ್ಯಾದಿ ಚಿಹ್ನೆಗಳು ಕಾಣಬಹುದು. ದಿನನಿತ್ಯವೂ ಮಾಡುವ ರೂಢಿಯಿರುವ ಕೆಲಸದಲ್ಲಿ ಈ ಚಿಹ್ನೆಗಳು ಗೋಚರಿಸದೆಯೇ ಇರಬಹುದು.ಇಂತಹಾ ರೋಗಿಗಳು ತಪಾಸಣೆಗೊಳಗಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳದಿದ್ದಲ್ಲಿ ಹೃದಯಾಘಾತಕ್ಕೆ ಒಳಗಾಗುವುದು ಖಚಿತ.
ಅಧಿಕ ರಕ್ತದೊತ್ತಡ ಹಾಗು ಮಧುಮೇಹ ಖಾಯಿಲೆ ಇದ್ದವರಲ್ಲಿ, ತಂಬಾಕು ಹಾಗೂ ಮದ್ಯಸೇವನೆ ಅಭ್ಯಾಸ ಇರುವವರಲ್ಲಿ , ಅತಿಯಾದ ಸಿಹಿ ಹಾಗೂ ಕೊಬ್ಬಿನ ಪದಾರ್ಥ ಮತ್ತು ಉಪ್ಪೇರಿದ ಪದಾರ್ಥಗಳ ಸೇವನೆ ಮಾಡುವವರಲ್ಲಿ ಹಾಗೂ ಅನುವಂಶೀಯವಾಗಿ ರಕ್ತದಲ್ಲಿ ಕೊಬ್ಬು ಹೆಚ್ಚು ಇರುವ ಖಾಯಿಲೆಗಳಿದ್ದವರಲ್ಲಿ ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟಿರಾಲ್ ಶೇಖರವಾಗುತ್ತದೆ. ಈ ಯಾವ ಖಾಯಿಲೆಗಳು ಇಲ್ಲದಿದ್ದರೂ ವಯಸ್ಸಾದಂತೆ ರಕ್ತನಾಳಗಳೊಳಗೆ ಕೊಲೆಸ್ಟಿರಾಲ್ ಶೇಖರವಾಗುವುದು ಸಹಜ ಪ್ರಕ್ರಿಯೆ. ರಕ್ತನಾಳಗಳೊಳಗೆ ಶೇಖರವಾದ ಕೊಲೆಸ್ಟಿರಾಲ್ ತನ್ನ ಜೊತೆ ಕ್ಯಾಲ್ಸಿಯಂ ಲವಣವನ್ನೂ ಆಕರ್ಷಿಸುತ್ತದೆ. ಈ ಕೊಲೆಸ್ಟಿರಾಲ್ ಹಾಗೂ ಕ್ಯಾಲ್ಸಿಯಂ ಲವಣ ಮಿಶ್ರಿತ ಮುದ್ದೆಯನ್ನು ಪ್ಲೇಕ್ ಎನ್ನುತ್ತಾರೆ. ಒಮ್ಮೆ ಪ್ಲೇಕ್ ರೂಪದಲ್ಲಿ ಶೇಖರವಾದ ಕೊಲೆಸ್ಟಿರಾಲ್ ಅನ್ನು ತೆಗೆಯಲು ಸಾಧ್ಯವಿಲ್ಲ. ಪ್ಲೇಕ್ ರೂಪದಲ್ಲಿ ಕೊಲೆಸ್ಟಿರಾಲ್ ಶೇಖರವಾದಂತೆ ರಕ್ತನಾಳದ ವ್ಯಾಸ ಕಡಿಮೆಯಾಗುತ್ತದೆ ಹಾಗೂ ಹೃದಯಕ್ಕೆ ಶುದ್ಧರಕ್ತದ ಸರಬರಾಜು ಕಡಿಮೆಯಾಗುತ್ತದೆ.
ಇನ್ನು ರಕ್ತನಾಳಗಳಲ್ಲಿ ಕೊಲೆಸ್ಟಿರಾಲ್ ಶೇಖರವಾಗಲು ಕಾರಣೀಭೂತವಾಗುವ ಖಾಯಿಲೆಗಳ ಬಗ್ಗೆ ತಿಳಿಯೋಣ. ಇದರಲ್ಲಿ ಮುಖ್ಯವಾದುದು ಅಧಿಕರಕ್ತದೊತ್ತಡ ಖಾಯಿಲೆ. ಅಧಿಕ ರಕ್ತದೊತ್ತಡವು ಭಾರತದೇಶದಲ್ಲಿ ಅತ್ಯಂತ ಸಾಮಾನ್ಯವಾದ ಖಾಯಿಲೆ ಹಾಗೂ ಅಷ್ಟೇ ನಿರ್ಲಕ್ಷಿತ ಖಾಯಿಲೆ. ರಕ್ತದೊತ್ತಡ ಅಳೆಯುವಾಗ ಅದರಲ್ಲಿ ಎರಡು ಮಾಪನಗಳಿವೆ ಒಂದು ಸಿಸ್ಟೋಲಿಕ್ ಎಂದು ಕರೆಯುವ ಮಾಪನ. ಇನ್ನೊಂದು ಡಯಸ್ಟೋಲಿಕ್ ಎಂದು ಕರೆಯುವ ಮಾಪನ . ಸಿಸ್ಟೋಲಿಕ್ ಮಾಪನವು ಹೃದಯವು ತನ್ನೊಳಗಿರುವ ರಕ್ತವನ್ನು ರಕ್ತನಾಳಗಳೊಳಗೆ ಎಷ್ಟು ಶಕ್ತಿ ಹಾಕಿ ನುಗ್ಗಿಸುತ್ತದೆ ಎಂದು ಸೂಚಿಸುತ್ತದೆ. ಈ ಮಾಪನ ಹೆಚ್ಚು ಇದ್ದಷ್ಟು ಹೃದಯವು ಹೆಚ್ಚು ಶಕ್ತಿ ಹಾಕಿ ರಕ್ತನಾಳಗಳೊಳಗೆ ನುಗ್ಗಿಸುತ್ತಿದೆ ಎಂದು ಅರ್ಥ. ಇದು ಹೆಚ್ಚು ಇದ್ದರೆ ಹೃದಯವು ಹೆಚ್ಚು ಶ್ರಮ ಪಡುತ್ತಿದೆ ಎಂದೂ ಅರ್ಥೈಸಿಕೊಳ್ಳಬೇಕು.
ಇನ್ನು ಡಯಾಸ್ಟೋಲಿಕ್ ಮಾಪನದ ಬಗ್ಗೆ ಬರೋಣ. ಇದು ಹೃದಯವು ರಕ್ತನಾಳದೊಳಗೆ ರಕ್ತವನ್ನು ನುಗ್ಗಿಸುವಾಗ ರಕ್ತನಾಳಗಳು ಎಷ್ಟು ಸುಲಭವಾಗಿ ತಮ್ಮೊಳಗೆ ರಕ್ತವನ್ನು ಹರಿಯಲು ಬಿಡುತ್ತವೆ ಎಂದು ಸೂಚಿಸುತ್ತದೆ. ಡಯಾಸ್ಟೋಲಿಕ್ ಮಾಪನ ಹೆಚ್ಚಿದ್ದರೆ ರಕ್ತನಾಳವು ತನ್ನೊಳಗೆ ರಕ್ತವನ್ನು ನುಗ್ಗಿಸಲು ಪ್ರತಿರೋಧ ವ್ಯಕ್ತಪಡಿಸುತ್ತಿದೆ ಎಂದರ್ಥ. ರಕ್ತನಾಳಗಳು ಪೆಡಸಾಗಿದ್ದು ರಕ್ತವು ನುಗ್ಗುವಾಗ ವಿಕಸಿಸದಿದ್ದರೆ ಅಂತಹಾ ರಕ್ತನಾಳಗಳೊಳಗೆ ರಕ್ತವನ್ನು ನುಗ್ಗಿಸಲು ಹೃದಯ ಹೆಚ್ಚು ಶ್ರಮಪಡಬೇಕಾಗುತ್ತದೆ. ರಕ್ತನಾಳಗಳು ಪೆಡಸಾಗಲು ಅವುಗಳೊಳಗೆ ಕೊಲೆಸ್ಟಿರಾಲ್ ಜಮಯಾಗುವುದು ಮುಖ್ಯ ಕಾರಣ.ಇತರ ಕಾರಣಗಳೂ ಇವೆ.
ಅಧಿಕರಕ್ತದೊತ್ತಡ ಖಾಯಿಲೆ ಬರಲು ಅನುವಂಶೀಯತೆ ಮುಖ್ಯ ಕಾರಣ. ಬೊಜ್ಜು ದೇಹ, ಡೊಳ್ಳುಹೊಟ್ಟೆ, ವ್ಯಾಯಾಮರಹಿತ ಜೀವನ, ಮಧುಮೇಹ ಖಾಯಿಲೆ, ತಂಬಾಕು ಸೇವನೆ, ಸದಾ ಕಾಲ ಮಾನಸಿಕ ಉದ್ವೇಗ ಇರುವುದು ಇವಿಷ್ಟು ಅಧಿಕರಕ್ತದೊತ್ತಡ ಖಾಯಿಲೆ ಆರಂಭವಾಗಲು ಇತರ ಪ್ರಮುಖ ಕಾರಣಗಳು. ಅಧಿಕ ರಕ್ತದೊತ್ತಡಕ್ಕೆ ಇನ್ನಿತರ ಕಾರಣಗಳೂ ಇವೆ ಅದನ್ನು ತಪಾಸಣೆಗಳ ಮೂಲಕ ಪತ್ತೆ ಹಚ್ಚಬಹುದು. ಅಧಿಕರಕ್ತದೊತ್ತಡ ಇರುವವರಲ್ಲಿ ರಕ್ತನಾಳಗಳೊಳಗೆ ಕೊಲೆಸ್ಟಿರಾಲ್ ಪ್ಲೇಕ್ ಜಮಾವಣೆ ಬೇಗನೆ ಆಗುತ್ತದೆ.
ರಕ್ತದಲ್ಲಿ ಸಕ್ಕರೆಯ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಿಗೆ ಇರುವುದನ್ನು ಮಧುಮೇಹ ರೋಗ ಎನ್ನುತ್ತಾರೆ. ರಕ್ತಪರೀಕ್ಷೆ ಮಾಡದೆ ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿರುವುದು ತಿಳಿಯುವುದಿಲ್ಲ. ಗೊತ್ತಿದ್ದರೂ ಅದನ್ನು ಹತೋಟಿಯಲ್ಲಿಡಲು ಪ್ರಾಮಾಣಿಕ ಪ್ರಯತ್ನ ಮಾಡುವವರ ಸಂಖ್ಯೆಯೂ ಕಡಿಮೆ ಇದೆ. ರಕ್ತದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಿಗೆ ಆಗಲು ಆರಂಭವಾಗುವ ಮೊದಲೇ, ಸುಮಾರು ಹತ್ತುವರ್ಷಗಳಿಗೂ ಮುನ್ನ, ಮಧುಮೇಹ ಖಾಯಿಲೆ ಅಪ್ರಕಟಿತ ಹಂತದಲ್ಲಿ ಇರುತ್ತದೆ ಎಂದು ಅಂದಾಜಿಸಲಾಗಿದೆ. ಹೃದ್ರೋಗದ ವಿಷಯಕ್ಕೆ ಬರುವುದಾದರೆ ಮಧುಮೇಹ ಖಾಯಿಲೆಯಿಂದಾಗಿ ಹೃದಯಕ್ಕೆ ರಕ್ತವನ್ನೊಯ್ಯುವ ಕೊರೊನರಿ ರಕ್ತನಾಳಗಳೊಳಗೆ ಕೊಲೆಸ್ಟಿರಾಲ್ ಶೇಖರವಾಗಿ ಈ ರಕ್ತನಾಳಗಳ ವ್ಯಾಸ ಕಡಿಮೆಯಾಗುವ ಪ್ರಕ್ರಿಯೆ ಬೇಗನೆ ಆಗುತ್ತದೆ . ಮಧುಮೇಹ ಖಾಯಿಲೆಯಿಂದಾಗಿ ಹೃದಯದ ಕ್ಷಮತೆಯೂ ಕಡಿಮೆಯಾಗುತ್ತದೆ. ಮಧುಮೇಹ ರೋಗಿಗಳಿಗೆ ಹೃದಯಾಘಾತವಾದಾಗ ಎದೆನೋವು ಇಲ್ಲದಿರುವುದು ಇನ್ನೊಂದು ವಿಶೇಷತೆ. ಈ ವಿಶೇಷತೆಯಿಂದಾಗಿ ಮಧುಮೇಹಿಗಳಿಗೆ ಹೃದಯಾಘಾತವಾಗಿದ್ದರೂ ಯಾವುದೇ ಚಿಹ್ನೆಗಳಿಲ್ಲದಿರುವುದರಿಂದ ನಿರ್ಲಕ್ಷಿಸುವ ಸಾಧ್ಯತೆಗಳು ಹೆಚ್ಚು.
ಸಿಗರೇಟು ಹಾಗೂ ಬೀಡಿ ಸೇವನೆಯಿಂದಾಗಿಯೂ ಇದೇ ರೀತಿ ಹೃದಯದ ಕೊರೊನರಿ ನಾಳಗಳಲ್ಲಿ ಕೊಲೆಸ್ಟಿರಾಲ್ ಜಮೆಯಾಗಿ ಅದರ ವ್ಯಾಸ ಕಡಿಮೆಯಾಗುವ ಪ್ರಕ್ರಿಯೆ ನಡೆಯುತ್ತದೆ. ಅನುವಂಶೀಯ ಕಾರಣಗಳೂ ಸೇರಿದಂತೆ ನಾನಾ ಕಾರಣಗಳಿಂದ ರಕ್ತದಲ್ಲಿ ಕೊಲೆಸ್ಟಿರಾಲ್ ಅಂಶ ಜಾಸ್ತಿ ಇರುವವರಲ್ಲೂ ಈ ಪ್ರಕ್ರಿಯೆ ಬೇಗನೆ ಆಗುತ್ತದೆ . ಈ ರೀತಿ ಹೃದಯದ ರಕ್ತನಾಳಗಳಲ್ಲಿ ಕೊಲೆಸ್ಟಿರಾಲ್ ಜಮೆಯಾಗಲು ಆರಂಭವಾಗಿ ರೋಗಿಗೆ ಅದರ ಚಿಹ್ನೆಗಳು ಗೋಚರವಾಗಲು ಸುಮಾರು ಹತ್ತರಿಂದ ಹದಿನೈದು ಇಪ್ಪತ್ತು ವರುಷಗಳು ಬೇಕಾದೀತು. ಇಂದು ಹೃದಯಾಘಾತವಾಗಬೇಕಾದರೆ ಸುಮಾರು ಹತ್ತಿಪ್ಪತ್ತು ವರ್ಷಗಳ ಹಿಂದೆಯೇ ಅದರ ಪ್ರಕ್ರಿಯೆ ಆರಂಭವಾಗಿರುತ್ತದೆ ಎಂದರ್ಥವಾಯಿತಲ್ಲವೆ?
ಇದೆಲ್ಲಾ ಸರಿ , ಆದರೆ ರಕ್ತನಾಳಗಳ ವ್ಯಾಸ ಕಡಿಮೆಯಾಗುವುದು ಇಷ್ಟೊಂದು ನಿಧಾನವಾಗಿ ಆಗುವ ಪ್ರಕ್ರಿಯೆಯಾಗಿದ್ದರಿಂದ ಒಮ್ಮೆಲೆ ಹೃದಯಾಘಾತವಾಗಿ ಮರಣ ಸಂಭವಿಸುವುದು ಹೇಗೆ?
ಕೊಲೆಸ್ಟಿರಾಲ್ ಪ್ಲೇಕ್ ನಿಂದಾಗಿ ಹೃದಯದ ರಕ್ತನಾಳಗಳ ವ್ಯಾಸ ಕಡಿಮೆಯಾಗಿರುವ ಜಾಗವನ್ನು ಸ್ಟಿನೋಟಿಕ್ ಸೆಗ್ ಮೆಂಟ್ ಎನ್ನುತ್ತಾರೆ. ನಾಳದೊಳಗೆ ಅಗಲ ಕಿರಿದಾದ ಪ್ರದೇಶ ಎಂದರ್ಥ. ಅಗಲಕಿರಿದಾದ ನಾಳದಲ್ಲಿ ಹೃದಯವು ಒತ್ತಡದಲ್ಲಿ ರಕ್ತವನ್ನು ನುಗ್ಗಿಸಿದಾಗ ರಕ್ತವು ಈ ಅಗಲ ಕಿರಿದಾದ ಪ್ರದೇಶದಿಂದ ಮುಂದಕ್ಕೆ ಜೆಟ್ ರೀತಿಯಲ್ಲಿ ಚಿಮ್ಮುತ್ತದೆ. ಪೈಪಿನ ಮುಖಾಂತರ ನೀರು ಹಾಯಿಸುವಾಗ ಪೈಪಿನ ಬಾಯಿಗೆ ಬೆರಳು ಅಡ್ಡವಿಟ್ಟರೆ ನೀರು ದೂರಕ್ಕೆ ಚಿಮ್ಮುತ್ತದಲ್ಲವೇ ಅದೇ ರೀತಿ ರಕ್ತವೂ ಚಿಮ್ಮುತ್ತದೆ. ಹೀಗೆ ರಕ್ತವು ರಭಸದಿಂದ ಚಿಮ್ಮಿದಾಗ ಮುಂದಿರುವ ರಕ್ತನಾಳದ ಒಳಗೋಡೆಗೆ ಘಾಸಿಯಾಗುತ್ತದೆ. ಘಾಸಿಯಾದ ಭಾಗದಲ್ಲಿ ರಕ್ತ ಹೆಪ್ಪುಗಟ್ಟುತ್ತದೆ ಹಾಗೂ ಹೆಪ್ಪುಗಟ್ಟಿದ ರಕ್ತವು ನಾಳವನ್ನು ಸಂಪೂರ್ಣವಾಗಿ ಮುಚ್ಚಿಬಿಟ್ಟು ಮುಂದಕ್ಕೆ ರಕ್ತಹರಿಯಲು ಬಿಡುವುದಿಲ್ಲ. ಇನ್ನೂ ಕೆಲವೊಮ್ಮೆ ಈ ರಭಸಕ್ಕೆ ಘಾಸಿಯಾದ ಭಾಗದಲ್ಲಿದ್ದ ಕೊಲೆಸ್ಟಿರಾಲ್ ಪ್ಲೇಕ್ ನ ಒಂದು ತುಂಡು ಎದ್ದು ಹರಿಯುವ ರಕ್ತದೊಂದಿಗೆ ಮುಂದೆ ಸಾಗಿ ಬಿಡುತ್ತದೆ.ಈ ತುಂಡು ಅಗಲ ಕಿರಿದಾದ ಇನ್ನೊಂದು ಜಾಗದಲ್ಲಿ ರಕ್ತಪರಿಚಲನೆಗೆ ಅಡ್ಡವಾಗಿ ನಿಂತು ಬಿಡುತ್ತದೆ. ಅಲ್ಲಿಗೆ ಹೃದಯಾಘಾತವಾದಂತೆಯೇ ಸರಿ.
ವ್ಯಾಯಾಮ ಮಾಡುವಾಗ ಹೃದಯದ ಬಡಿತ ಹೆಚ್ಚಾಗುತ್ತದೆ. ವ್ಯಾಯಾಮಮಾಡುತ್ತಿರುವ ದೇಹಕ್ಕೆ ಹೆಚ್ಚು ರಕ್ತಪೂರೈಸಲು ಹೃದಯ ಹೆಚ್ಚೆಚ್ಚುಬಾರಿ ಸಂಕುಚಿತ ವಿಕಸಿತಗೊಂಡು ಬಡೆಯುತ್ತಾ ರಕ್ತ ಪೂರೈಸುತ್ತದೆ. ಹೃದಯ ವಿಕಸಿತಗೊಂಡಾಗ ಅದರಲ್ಲಿ ರಕ್ತ ತುಂಬುತ್ತದೆ. ಸಂಕುಚಿತಗೊಳ್ಳುವಾಗ ಈ ರಕ್ತವು ನಾಳಗಳೊಳಗೆ ನುಗ್ಗುತ್ತದೆ. ಹೃದಯ ವಿಕಸಿತಗೊಂಡಾಗ ಅದರ ಕುಹರದಲ್ಲಿ ರಕ್ತ ತುಂಬಲು ಸ್ವಲ್ಪ ಸಮಯವಾದರೂ ಬೇಕು ತಾನೆ? ಹೃದಯದ ಬಡಿತ ಹೆಚ್ಚಾದಂತೆ ವಿಕಸನಗೊಳ್ಳುವ ಸಮಯ ಕಡಿಮೆಯಾಗುತ್ತದೆ.ಇದರಿಂದಾಗಿ ಹೃದಯದೊಳಗೆ ತುಂಬುವ ರಕ್ತ ಕಡಿಮೆಯಾಗುತ್ತದೆ. ಆದುದರಿಂದ ಹೃದಯ ಹೆಚ್ಚುಬಾರಿ ಬಡಿದು ಕೆಲಸ ಮಾಡಿದಂತೆ ಅದು ರಕ್ತನಾಳಗಳೊಳಗೆ ನುಗ್ಗಿಸುವ ರಕ್ತದ ಪ್ರಮಾಣ ಕಡಿಮೆ ಆಗುತ್ತಾ ಬರುತ್ತದೆ. ವ್ಯಾಯಮ ಮಾಡುವಾಗ ದೇಹಕ್ಕೆ ಹೆಚ್ಚು ರಕ್ತ ಬೇಕಾಗುವಂತೆಯೇ , ಅತೀ ವೇಗದಲ್ಲಿ ಕೆಲಸ ಮಾಡುತ್ತಿರುವ ಹೃದಯಕ್ಕೂ ಆಮ್ಲಜನಕ ಹಾಗೂ ಆಹಾರದ ಪೂರೈಕೆಯಾಗಲು ಹೆಚ್ಚು ರಕ್ತ ಬೇಕಾಗಿರುತ್ತದೆ. ಹೃದಯಕ್ಕೆ ಸರಬರಾಜು ಮಾಡುವ ರಕ್ತನಾಳಗಳ ವ್ಯಾಸ ಕಡಿಮೆಯಾಗಿದ್ದಲ್ಲಿ ಆ ರಕ್ತನಾಳಗಳೊಳಗೆ ಪ್ರವೇಶಿಸುವ ರಕ್ತ ಕಡಿಮೆಯಾಗುತ್ತದೆ. ಹೃದಯ ಬಡಿತದ ವೇಗ, ಹೃದಯದಲ್ಲಿ ತುಂಬುವ ರಕ್ತದ ಪ್ರಮಾಣ ಹಾಗೂ ಸ್ವತ: ಹೃದಯಕ್ಕೇ ಪೂರೈಕೆಯಾಗುತ್ತಿರುವ ರಕ್ತದ ಪ್ರಮಾಣ ಈ ಮೂರರ ಹೊಂದಾಣಿಕೆ ತಪ್ಪಿದರೆ ಹೃದಯಾಘಾತವಾಗುತ್ತದೆ. ಒಂದು ವೇಳೆ ರಕ್ತನಾಳಗಳ ವ್ಯಾಸ ಸರಿಯಾಗಿಯೇ ಇದ್ದರೂ ಕೂಡ ಹೃದಯದ ಬಡಿತ ಮಿತಿ ಮೀರಿದರೆ ಹೃದಯವು ಪಂಪ್ ಮಾಡುವ ರಕ್ತದ ಪ್ರಮಾಣ ಅತೀ ಕಡಿಮೆಯಾಗಿ ಕೂಡಾ ಹೃದಯಾಘಾತ ಸಂಭವಿಸಬಹುದು. ವ್ಯಾಯಾಮ ಮಾತ್ರವಲ್ಲದೆ ಹೃದಯ ಬಡಿತ ಹೆಚ್ಚಿಸುವ ಇತರ ಸಂದರ್ಭಗಳಲ್ಲೂ ಇದೇ ಪರಿಣಾಮದಿಂದ ಹೃದಯಾಘಾತ ಸಂಭವಿಸಬಹುದು
ಹೃದಯಾಘಾತದ ಬಗ್ಗೆ ಇಷ್ಟು ವಿಷಯಗಳನ್ನು ತಿಳಿದ ಮೇಲೆ ನಮ್ಮ ದೇಶದಲ್ಲಿ ಹೃದಯಾಘಾತ ಯಾಕೆ ಹೆಚ್ಚಾಗುತ್ತಿದೆ ಎಂದು ವಿಶ್ಲೇಷಿಸುವುದು ಸುಲಭ
1) ಅನುವಂಶೀಯವಾಗಿ , ಏಷ್ಯಾಖಂಡದ ಮೂಲನಿವಾಸಿಗಳು ಹೃದಯಾಘಾತಕ್ಕೆ ಈಡಾಗುವ ಸಾಧ್ಯತೆ ಇತರ ಖಂಡಗಳ ಮೂಲನಿವಾಸಿಗಳಿಗಿಂತ ಜಾಸ್ತಿ ಇದೆ
2) ಏಷ್ಯಾ ಖಂಡದ ಮೂಲನಿವಾಸಿಗಳು ಅದೂ ಮುಖ್ಯವಾಗಿ ದಕ್ಷಿಣ ಭಾರತದವರು ಡೊಳ್ಳು ಹೊಟ್ಟೆಯ ಮೈಕಟ್ಟಿವವರು. ಈ ಮೈಕಟ್ಟು ಇದ್ದವರಲ್ಲಿ ರಕ್ತನಾಳಗಳಲ್ಲಿ ಕೊಲೆಸ್ಟಿರಾಲ್ ಜಮೆಯಾಗುವುದು ಜಾಸ್ತಿ ಇದೆ
3) ಅನುವಂಶೀಯ ಗುಣಗಳಿಂದ ಏಷ್ಯಾಖಂಡದ ಮೂಲನಿವಾಸಿಗಳಿಗೆ ಹೃದಯಾಘಾತದ ಪೂರಕ ಕಾಯಿಲೆಗಳಾದ ಅಧಿಕ ರಕ್ತದೊತ್ತಡ , ಮಧುಮೇಹ, ರಕ್ತದಲ್ಲಿ ಕೊಬ್ಬಿನಂಶ ಹೆಚ್ಚು ಇರುವ ಖಾಯಿಲೆಗಳು ಬರುವ ಸಾಧ್ಯತೆ ಜಾಸ್ತಿ ಇದೆ . ಈಗಾಗಲೆ ಈ ಖಾಯಿಲೆಗಳಿದ್ದೂ ಚಿಕಿತ್ಸೆ ಪಡೆಯದಿರುವವರ ಹಾಗೂ ನಾಮಕಾವಾಸ್ತೆ ಚಿಕಿತ್ಸೆ ಪಡೆಯುವವರ ಸಂಖ್ಯೆಯು ಈಗಲೇ ಜಾಸ್ತಿ ಇದೆ. ಹಾಗೆಯೇ ತಮ್ಮಲ್ಲಿ ಈ ಖಾಯಿಲೆ ಇದೆ ಎಂದು ಗೊತ್ತಿಲ್ಲದಿರುವವರ ಸಂಖ್ಯೆಯು, ಖಾಯಿಲೆ ಇದೆ ಎಂದು ಗೊತ್ತಿರುವವರ ಸಂಖ್ಯೆಗಿಂತ ನಾಲ್ಕು ಪಟ್ಟು ಹೆಚ್ಚು ಇದೆ ಎನ್ನುವ ಅಂದಾಜನ್ನು ಅಧಿಕೃತವಾಗಿ ಹೇಳಲಾಗಿದೆ. ಈ ಖಾಯಿಲೆಗಳಿಗೆ ಆರಂಭದಲ್ಲೇ ಚಿಕಿತ್ಸೆ ಪಡೆಯುವವರಿಗಿಂತ ಅದು ಹೃದ್ರೋಗವನ್ನು ತಂದಿಕ್ಕಿದ ನಂತರವೇ ಚಿಕಿತ್ಸೆಯನ್ನು ಆರಂಭಿಸುವವರ ಸಂಖ್ಯೆಯೇ ನಮ್ಮಲ್ಲಿ ಅಧಿಕವಾಗಿದೆ .
4) ತಂಬಾಕು ಸೇವನೆ ಹಾಗೂ ಮದ್ಯಪಾನ ಜೊತೆಗೆ ಮಾದಕ ಪದಾರ್ಥದ ಪಿಡುಗು ಹೆಚ್ಚುತ್ತಿದೆ.
5) ದೈಹಿಕ ಚಟುವಟಿಕೆ ಕಡಿಮೆ ಇರುವ ಜೀವನಶೈಲಿ ಹೆಚ್ಚುತ್ತಿದೆ. ಸಿಹಿ ಪದಾರ್ಥ, ಹಣ್ಣುಗಳು , ಕೊಬ್ಬುಪದಾರ್ಥ, ಉಪ್ಪೇರಿದ ಪದಾರ್ಥಗಳ ಸೇವನೆ ಹೆಚ್ಚುತ್ತಿದೆ . ಭಾರತೀಯರು ಸಿಹಿ ತಿನ್ನದ ದಿನಗಳೇ ಇಲ್ಲ ಎನ್ನಬಹುದು.
6) ಭಾರತೀಯರ ಜೀವನಶೈಲಿಯು ಧಾವಂತದ ಹಾಗೂ ಯಾಂತ್ರೀಕೃತ ಜೀವನಶೈಲಿಯತ್ತ ವೇಗವಾಗಿ ಬದಲಾವಣೆಯಾಗುತ್ತಿದ್ದು ಅಸಹನೆ, ಅವಸರ, ಅಸೂಯೆ, ಅತೃಪ್ತಿ, ಅತ್ಯಪೇಕ್ಷೆ, ಅನಿಶ್ಚಿತತೆಗಳಿಂದ ಕೂಡಿದ ಮನೋಭಾವ ಹೆಚ್ಚುತ್ತಿದೆ. ತನ್ಮೂಲಕ ಮಾನಸಿಕ ದುಗುಡ, ಕಳವಳ ಹಾಗೂ ಒತ್ತಡಗಳು ಹೆಚ್ಚುತ್ತಿರುವುದು.
7) ಗೂಗಲ್ ನಲ್ಲಿ ಓದಿ ಸ್ವಯಂ ಚಿಕಿತ್ಸೆ ಮಾಡಿಕೊಳ್ಳುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ತಾವೇ ಪ್ರಯೋಗಾಲಯಗಳಿಗೆ ತೆರಳಿ ತಮಗೆ ತೋಚಿದ ಪರೀಕ್ಷೆ ( ಹಲವಾರು ಬಾರಿ ಪ್ಯಾಕೇಜ್ ನೋಡಿಕೊಂಡು ) ಮಾಡಿಕೊಂಡು ಸರಿಯಾಗಿದ್ದೇವೆ ಎನ್ನುವ ತೀರ್ಮಾನಕ್ಕೆ ತಾವೇ ಬರುವವರ ಸಂಖ್ಯೆಯು ದೊಡ್ಡದಿದೆ. ನೆನಪಿಡಿ, ಈ ಚಾಳಿಯಿಂದಾಗಿ ವೈದ್ಯರ ಸಲಹೆ ಪಡೆಯಲು ಕೇವಲ ಅರ್ಧ ದಿನ ತಡವಾದರೂ ಹೃದಯಾಘಾತವಾಗಿದ್ದಲ್ಲಿ ಮರಣ ಸಂಭವಿಸಬಹುದು.
8) ವೈದ್ಯರ ಬಗ್ಗೆ ಅಪಪ್ರಚಾರ, ಹೃದ್ರೋಗ ಪತ್ತೆಹಚ್ಚುವ ಪರೀಕ್ಷಾ ಕ್ರಮಗಳಾದ ಅಂಜಿಯೋಗ್ರಾಂ ಇತ್ಯಾದಿಗಳ ಬಗ್ಗೆ ಅಪಪ್ರಚಾರ. ಅಂಜಿಯೋಪ್ಲಾಸ್ಟಿ ಹಾಗೂ ಬೈಪಾಸ್ ಶಸ್ತ್ರಚಿಕಿತ್ಸೆಯ ಬಗ್ಗೆ ಅಪಪ್ರಚಾರ. ಇವೆಲ್ಲ ಅಪಪ್ರಚಾರಗಳಿಗೆ ಕಿವಿಗೊಟ್ಟು ತಮ್ಮಲ್ಲಿರುವ ಹೃದ್ರೋಗದ ಚಿಹ್ನೆಗಳನ್ನು ನಿರ್ಲಕ್ಷಿಸಿರುವುದು, ಬೆಲೆಯಿಲ್ಲದ ಸಲಹೆ , ಪ್ರಚಾರಗಳಿಗೆ ಬಲಿಬಿದ್ದು ಸಾಬೀತಾಗದ ಚಿಕಿತ್ಸಾಕ್ರಮಗಳನ್ನು ಉಪಯೋಗಿಸುವುದು
9) ಹೃದಯದ ಚಿಹ್ನೆಗಳನ್ನು ಗ್ಯಾಸ್ ಟ್ರಬಲ್ ಎಂದಿತ್ಯಾದಿಯಾಗಿ ನಿರ್ಲಕ್ಷಿಸುವ ಪರಿಪಾಠ.
10) ಇತ್ತೀಚಿನ ವರ್ಷಗಳಲ್ಲಿ ಜೆನೆರಿಕ್ ಔಷಧಗಳನ್ನು ಬಳಸುವ ಪರಿಪಾಟ ಹೆಚ್ಚಾಗುತ್ತಿದೆ ಜನರಿಕ್ ಹೆಸರಿನಲ್ಲಿ ಅಧಿಕ ರಕ್ತದೊತ್ತಡ , ಮಧುಮೇಹದಂತಹಾ ಮುಖ್ಯ ಖಾಯಿಲೆಗಳಿಗೆ ಕಳಪೆ ಔಷಧಗಳ ಬಳಕೆ.
11) ಹೃದಯಾಘಾತದ ಲಕ್ಷಣಗಳು ಕಂಡಮೇಲೂ ತಕ್ಷಣವೇ ತಪಾಸಣೆಗೊಳಗಾಗಿ ಚಿಕಿತ್ಸೆ ಪಡೆಯದೇ ಸಮಯ ವ್ಯರ್ಥ ಮಾಡುವುದು. ಇಸಿಜಿ, ಇಕೋಕಾರ್ಡಿಯೋಗ್ರಾಂ, ರಕ್ತಪರೀಕ್ಷೆ ಇತ್ಯಾದಿ ಪರೀಕ್ಷೆಗೊಳಗಾಗಲು ನಿರಾಕರಿಸುವವರೂ ಇದ್ದಾರೆ.
ಹೃದಯಾಘಾತವಾದ ಸಂದರ್ಭದಲ್ಲಿ ಹೃದಯಾಘಾತವಾದ ಗಳಿಗೆಯಿಂದ ಹಿಡಿದು ಸರಿಯಾದ ಚಿಕಿತ್ಸೆ ಸಿಗುವ ತನಕದ ಸಮಯ ಅತ್ಯಮೂಲ್ಯ. ಈ ಸಮಯವನ್ನು ಹಿಗ್ಗಿಸಲು ಸಾಧ್ಯವಿಲ್ಲ. ಹೃದಯಾಘಾತವಾದ ತಕ್ಷಣ ಅಥವಾ ಹೃದಯಾಘಾತದ ಲಕ್ಷಣಗಳು ತೋರಿದ ಗಳಿಗೆಯಿಂದಲೇ ರೋಗಿಯು ಮಲಗಿ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಬೇಕು. ಮೂತ್ರ, ಮಲ ವಿಸರ್ಜನೆ, ಮನೆಬಾಗಿಲು ಹಾಕುವುದು ಇತ್ಯಾದಿ ನೆಪಗಳಿಗೆ ನಡೆಯಬಾರದು. ಆತನನ್ನು ಸ್ಟ್ರೆಚರ್ ಅಥವಾ ವೀಲ್ ಚೇರ್ ಮುಖಾಂತರ ನೇರವಾಗಿ ಹೃದಯಾಘಾತದ ಚಿಕಿತ್ಸೆ ಲಬ್ಯವುಳ್ಳ ಆಸ್ಪತ್ರೆಯ ತುರ್ತುಚಿಕಿತ್ಸಾ ವಿಭಾಗಕ್ಕೇ ಒಯ್ದು- ಅಲ್ಲಿಯೂ ಸಹ ಸ್ಟ್ರೆಚರ್ ಅಥವಾ ವೀಲ್ ಚೇರ್ ನಲ್ಲೇ ಒಳಗೆ ಸಾಗಿಸಬೇಕು. ರೋಗಿಯನ್ನು ಮಂಚದಲ್ಲಿ ಮಲಗಿಸಿ ಅಲ್ಲಿಯೇ ಇಸಿಜಿ ಇತ್ಯಾದಿ ಪರೀಕ್ಷೆಗಳನ್ನು ಮಾಡಿಸಿ ಚಿಕಿತ್ಸೆ ತಕ್ಷಣವೇ ಆರಂಭಿಸಬೇಕು. ಈ ರೀತಿ ಜವಾಬ್ದಾರಿಯುತವಾಗಿ ತಪಾಸಣೆ ಹಾಗೂ ಚಿಕಿತ್ಸೆಗೊಳಗಾಗುವರ ಸಂಖ್ಯೆ ಎಷ್ಟಿದೆ?. ಹೃದಯಾಘಾತವಾದ ತಕ್ಷಣ ಇಂತಹಾ ಚಿಕಿತ್ಸೆ ಸಿಗುವವಂತಹಾ ಅದೃಷ್ಟವಂತರ ಸಂಖ್ಯೆ ಎಷ್ಟಿದೆ?
ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಹೆಚ್ಚಿರುವ ಜನಸಂಖ್ಯೆ, ಅದೇ ರೀತಿ ಅಧಿಕ ರಕ್ತದೊತ್ತಡ , ಮಧುಮೇಹ ಇತ್ಯಾದಿ ರೋಗಿಗಳ ಸಂಖ್ಯೆಯಲ್ಲಿ ಆಗಿರುವ ಹೆಚ್ಚಳ, ಗಮನಾರ್ಹವಾಗಿ ಬದಲಾಗಿರುವ ಜೀವನಶೈಲಿ ಹಾಗೂ ಆಹಾರ ಕ್ರಮ, ಅಂತರ್ಜಾಲ ಮುಖೇನ ಕುಳಿತಲ್ಲೇ ಜಮಾಟೋ ಸ್ವಿಗ್ಗಿ ಮೂಲಕ ತರಿಸುವ ಸಿದ್ಧ ಹಾಗೂ ಸಂಸ್ಕರಿಸಿದ ಫಾಸ್ಟ್ ಫುಡ್ ಆಹಾರಗಳ ಬಳಕೆಯ ಅಭ್ಯಾಸ ಬೆಳೆದಿರುವುದು ಇತ್ಯಾದಿಗಳ ಪರಿಣಾಮವು ಹೆಚ್ಚುತ್ತಿರುವ ಹೃದಯಾಘಾತದ ರೂಪದಲ್ಲಿ ನಮಗೆ ಈಗ ಗೋಚರಿಸುತ್ತಿರಬಹುದು. ಕೊರೊನಾ ಸಂದರ್ಭದ ಲಾಕ್ ಡೌನ್ ಹಾಗೂ ವರ್ಕ ಫ್ರಂ ಹೋಂ ಇತ್ಯಾದಿ ಗಳಿಂದಾಗಿ ದೈಹಿಕ ಚಟುವಟಿಕೆಯೂ ಎರಡು ವರ್ಷಗಳ ಕಾಲ ಕಡಿಮೆಯಿದ್ದಿದೂ ಈ ಪ್ರಕ್ರಿಯೆಗೆ ವೇಗ ಒದಗಿಸಿರುತ್ತದೆ. ಕೊರೊನಾನಂತರದ ಆರ್ಥಿಕ ಚಟುವಟಿಕೆಗಳು ಜನರ ಮಾನಸಿಕ ಒತ್ತಡ ಹೆಚ್ಚಿಸಿರುವುದೂ ಸಹ ಪೂರಕವಾಗಿರಬಹುದು. ಅನೇಕ ಮಂದಿ ವೈದ್ಯರಲ್ಲಿಗೆ ಕಳೆದೆರಡು ವರ್ಷಗಳಿಂದ ತಪಾಸಣೆಗೇ ಹೋಗಿಲ್ಲ. ಇಂತವರಲ್ಲಿ ಹೃದಯದ ಖಾಯಿಲೆ ಬೆಳೆದಿರುವುದು ತಿಳಿದಿರುವುದಾದರೂ ಹೇಗೆ?… ಈ ಊಹನೆಗಳು ಸತ್ಯವೆಂದಾಗಿದ್ದಲ್ಲಿ ಹೃದಯಾಘಾತದ ಸರಣಿ ಮುಂದುವರಿಯುವುದರಲ್ಲಿ ಅನುಮಾನವಿಲ್ಲ. ಈ ಸಮಸ್ಯೆಗೆ ಇರುವ ಏಕೈಕ ಉಪಾಯವೆಂದರೆ ಸಾರ್ವತ್ರಿಕವಾಗಿ ಎಲ್ಲರೂ ಅಧಿಕ ರಕ್ತದೊತ್ತಡ, ಮಧುಮೇಹ ಹಾಗೂ ರಕ್ತದ ಕೊಬ್ಬಿನ ಮಟ್ಟದ ಪರೀಕ್ಷೆಯನ್ನು ಜೊತೆಗೆ ವೈದ್ಯರ ಅಗತ್ಯವೆಂದು ಅಭಿಪ್ರಾಯಪಟ್ಟಲ್ಲಿ ಹೃದಯದ ಪರೀಕ್ಷೆಯನ್ನೂ ತಪ್ಪದೆ ಮಾಡಿಸಿಕೊಳ್ಳಬೇಕು. ಹಾಗೆಯೇ ತೊಂದರೆಯುಳ್ಳವರು ಚಿಕಿತ್ಸೆಯನ್ನೂ ಪ್ರಾಮಾಣಿಕವಾಗಿ ಮಾಡಬೇಕು. ಸಾರ್ವತ್ರಿಕವಾಗಿ ಎಲ್ಲರೂ ಆರೋಗ್ಯಕ್ಕೆ ಪೂರಕವಾದ ಆಹಾರ, ವ್ಯಾಯಾಮ ಮತ್ತು ಜೀವನಶೈಲಿಯನ್ನು ರೂಢಿಸಿಕೊಳ್ಳುವುದೂ ಅಷ್ಟೇ ಅವಶ್ಯ.
ಡಾ| ವೈ ಸುದರ್ಶನ ರಾವ್ , ಇಂಚರ ಸರ್ಜಿಕಲ್ ಕ್ಲಿನಿಕ್, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cleft Lip and Palate: ಸೀಳು ತುಟಿ ಮತ್ತು ಅಂಗುಳ- ಹೆತ್ತವರಿಗೆ ತಿಳಿವಳಿಕೆ
Surgery: ನಾನು ಯಾಕೆ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು?
Infections: ಅಗೋಚರ ಕೊಲೆಗಾರ – ಸೋಂಕುಗಳ ವಿರುದ್ಧದ ಹೋರಾಟದಲ್ಲಿ ನಾವು ಸೋಲುತ್ತಿದ್ದೇವೆಯೇ?
COPD: ಕ್ರೋನಿಕ್ ಒಬ್‌ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್ (ಸಿಒಪಿಡಿ)
Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
MUST WATCH
ಭಾರತ-ಆಸ್ಟ್ರೇಲಿಯಾ 2ನೇ ಟೆಸ್ಟ್‌ಗಾಗಿ ಅಡಿಲೇಡ್‌ಗೆ ಆಗಮಿಸಿದ ಟೀಮ್ ಇಂಡಿಯಾ
60 ಅಡಿ ಆಳದ ಬಾವಿಗೆ ಬಿದ್ದ 94 ವರ್ಷದ ಅಜ್ಜಿಯ ರಕ್ಷಣೆ
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಹೊಸ ಸೇರ್ಪಡೆ
Kadaba: ಬಿಳಿನೆಲೆ ಸಂದೀಪ್ ಕೊ*ಲೆ ಪ್ರಕರಣ; ಗ್ರಾ.ಪಂ. ಎದುರು ಶವವಿಟ್ಟು ಪ್ರತಿಭಟನೆ
Mangaluru: ಎ.ಬಿ.ಶೆಟ್ಟಿ ದಂತ ವೈದ್ಯಕೀಯ ಕಾಲೇಜು ಡೀನ್ ಡಾ.ಯು.ಎಸ್.ಕೃಷ್ಣ ನಾಯಕ್ ನಿಧನ
Padubidri: ನಾಪತ್ತೆಯಾಗಿದ್ದ ವ್ಯಕ್ತಿ ಹೊಸನಗರದಲ್ಲಿ ಪತ್ತೆ
Kundapura: ಕಿರುಕುಳ ನೀಡಿದ್ದ ಆರೋಪಿಗಳಿಗೆ ಜಾಮೀನು
Yakshagana: ಹಿರಿಯ ಭಾಗವತ ಬಾಳೆಹದ್ದ ಕೃಷ್ಣ ಹೆಗಡೆ ಇನ್ನಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.