Heart Valve; ಹೃದಯ ಕವಾಟ: ಕಾಯಿಲೆಗಳು, ವಿಧಗಳು, ಕಾರಣಗಳು, ಚಿಕಿತ್ಸೆ
Team Udayavani, Mar 3, 2024, 8:59 AM IST
ಜಗತ್ತು ಹೃದ್ರೋಗಗಳ ಉಚ್ಛ್ರಯ ಸ್ಥಿತಿಯಲ್ಲಿ ತೊಳಲಾಡುತ್ತಿದೆ ಮತ್ತು ಭಾರತೀಯರೂ ಇದಕ್ಕೆ ಹೊರತಾಗಿಲ್ಲ. ಎಥೆರೊಸ್ಕ್ಲೆರೋಟಿಕ್ ಹೃದ್ರೋಗಗಳು (ಎಎಸ್‌ಸಿವಿಡಿ) ಹೆಚ್ಚುತ್ತಿರುವುದು ನಿಜ, ಈ ನಡುವೆ ಹೃದಯದ ಕವಾಟಗಳ ಕಾಯಿಲೆಗಳ ಬಗ್ಗೆ ಯಾರೂ ಹೆಚ್ಚಾಗಿ ತಲೆ ಕೆಡಿಸಿಕೊಂಡಂತಿಲ್ಲ.
ಹೃದಯವು ದೇಹಾದ್ಯಂತ ರಕ್ತವನ್ನು ಪಂಪ್ ಮಾಡಿ ಹರಿಯಿಸುವ ಸಂಕೀರ್ಣ ಸಂರಚನೆಯನ್ನು ಹೊಂದಿರುವ ಒಂದು ಅಂಗ. ರಕ್ತವು ಸರಿಯಾದ ದಿಕ್ಕಿಗೆ ಹರಿಯುವುದನ್ನು ಖಾತರಿ ಪಡಿಸುವ ದ್ವಾರಪಾಲಕರಂತೆ ಹೃದಯದ ಕವಾಟಗಳು ಕಾರ್ಯನಿರ್ವಹಿಸುತ್ತವೆ.
ಆದರೆ ಈ ಕವಾಟಗಳು ತೊಂದರೆಗೆ ಈಡಾದರೆ ಹೃದಯ ಕವಾಟ ಕಾಯಿಲೆಗಳು (ವಾಲ್ವುಲಾರ್ ಡಿಸೀಸ್) ಎಂದು ಕರೆಯಲ್ಪಡುವ ಕಾಯಿಲೆಗಳು ತಲೆದೋರುತ್ತವೆ. ಜಾಗತಿಕವಾಗಿ ಹೃದ್ರೋಗ ಸಂಬಂಧಿಯಾಗಿ ಉಂಟಾಗುವ ಮರಣಗಳು ಮತ್ತು ವೈಕಲ್ಯಗಳಿಗೆ ಹೃದಯ ಕವಾಟ ರೋಗಗಳು ಕೂಡ ಪ್ರಮುಖ ಕಾರಣವಾಗಿದ್ದು, ಮುಂಬರುವ ದಶಕಗಳಲ್ಲಿ ಈ ರೋಗ ಭಾರವೂ ಹೆಚ್ಚುತ್ತ ಹೋಗುವುದು ನಿಶ್ಚಿತವಾಗಿದೆ.
ಹೃದಯದ ನಾಲ್ಕು ಪ್ರಧಾನ ಕವಾಟಗಳನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯ: 1. ಅಯೋರ್ಟಿಕ್ ಕವಾಟ: ಎಡ ಎದೆ ಕುಹರ (ಲೆಫ್ಟ್ ವೆಂಟ್ರಿಕಲ್) ಮತ್ತು ಮಹಾಪಧಮನಿ (ಅಯೋರ್ಟಾ)ಯ ನಡುವೆ ಇರುವ ಅಯೋರ್ಟಿಕ್ ಅಥವಾ ಮಹಾಪಧಮನಿ ಕವಾಟವು ಹೃದಯ ಮತ್ತು ದೇಹದ ಉಳಿದ ಭಾಗಗಳ ನಡುವೆ ರಕ್ತ ಪರಿಚಲನೆಯನ್ನು ನಿಯಂತ್ರಿಸುತ್ತದೆ.
- ಮಿಟ್ರಲ್ ಕವಾಟ: ಎಡ ಹೃತ್ಕರ್ಣ ಮತ್ತು ಎಡ ಎದೆ ಕುಹರದ ನಡುವೆ ಇರುವ ಮಿಟ್ರಲ್ ಅಥವಾ ಹೃತ್ಕರ್ಣ ಕವಾಟವು ಮಹಾಪಧಮನಿಯಿಂದ ಎದೆ ಕುಹರಕ್ಕೆ ರಕ್ತ ಹೃದಯ ಕವಾಟ ಪ್ರವಹಿಸುವಂತೆ ಮಾಡುತ್ತದೆ.
- ಟ್ರೈಕಪ್ಸೈಡ್ ಕವಾಟ: ಬಲ ಹೃತ್ಕರ್ಣ (ರೈಟ್ ಏಟ್ರಿಯಂ) ಮತ್ತು ಬಲ ಎದೆ ಕುಹರದ ನಡುವೆ ಇರುವ ಟ್ರೈಕಪ್ಸೈಡ್ ಅಥವಾ ಹೃತ್ಕುಕ್ಷಿ ಕವಾಟವು ಮಹಾಪಧಮನಿಯಿಂದ ಎದೆ ಕುಹರಕ್ಕೆ ರಕ್ತ ಪ್ರವಹಿಸುವಂತೆ ಮಾಡುತ್ತದೆ.
- ಪಲ್ಮನರಿ ಕವಾಟ: ಬಲ ಎದೆ ಕುಹರ ಮತ್ತು ಶ್ವಾಸಕೋಶದ ಅಪಧಮನಿ (ಪಲ್ಮನರಿ ಆರ್ಟರಿ) ಯ ನಡುವೆ ಇರುವ ಇದು ಹೃದಯದಿಂದ ಶ್ವಾಸಕೋಶಕ್ಕೆ ಆಮ್ಲಜನಕೀಕರಣಕ್ಕಾಗಿ ರಕ್ತ ಹರಿಯುವಂತೆ ಮಾಡುತ್ತದೆ.
ಹೃದಯ ಕವಾಟ ಕಾಯಿಲೆಗಳಿಗೆ ಈ ಕೆಳಗಿನಂತೆ ಹಲವು ಕಾರಣಗಳು ಇರುತ್ತವೆ: 1. ಜನ್ಮಜಾತ ತೊಂದರೆಗಳು: ಕೆಲವರಲ್ಲಿ ಜನ್ಮತಃವಾಗಿ ಕವಾಟಗಳ ಸಂರಚನೆ ಅಥವಾ ಕಾರ್ಯನಿರ್ವಹಣೆ ಅಸಹಜವಾಗಿರುತ್ತದೆ. ಬೈಕಪ್ಸೈಡ್ ಅಯೋರ್ಟಿಕ್ ಕವಾಟವು ಇಂತಹ ಜನ್ಮಜಾತ ಕವಾಟ ಕಾಯಿಲೆಯ ಸಾಮಾನ್ಯ ರೂಪವಾಗಿದ್ದು, ಜನಸಾಮಾನ್ಯರ ಪೈಕಿ ಶೇ. 1-2 ಮಂದಿಯಲ್ಲಿ ಈ ತೊಂದರೆ ಇರುತ್ತದೆ. ಟರ್ನರ್ ಸಿಂಡ್ರೋಮ್ ಮತ್ತು ಇತರ ಅಪರೂಪದ ಜನ್ಮಜಾತ ಕಾಯಿಲೆಗಳನ್ನು ಹೊಂದಿರುವ ಜನರಲ್ಲಿ ಬೈಕಪ್ಸೈಡ್ ಅಯೋರ್ಟಿಕ್ ಕವಾಟ ಕಾಯಿಲೆಯ ಇರುವಿಕೆ ಹೆಚ್ಚಾಗಿ ಕಂಡುಬರುತ್ತದೆಯಲ್ಲದೆ ಈ ತೊಂದರೆ ಹೊಂದಿರುವ ರೋಗಿಗಳ ನಿಕಟ ಸಂಬಂಧಿಗಳ ಪೈಕಿ ಶೇ. 6.4 ಮಂದಿಯಲ್ಲಿ ಕೂಡ ಈ ತೊಂದರೆ ಕಾಣಿಸಿಕೊಳ್ಳುತ್ತದೆ. ಬೈಕಪ್ಸೈಡ್ ಕವಾಟ ಹೊಂದಿರುವ ರೋಗಿಗಳಿಗೆ ತೊಂದರೆಯನ್ನು ಆದಷ್ಟು ಬೇಗನೆ ಪತ್ತೆಹಚ್ಚಿ ಶಸ್ತ್ರಚಿಕಿತ್ಸೆ ಒದಗಿಸಬೇಕಿರುತ್ತದೆ.
- ರುಮ್ಯಾಟಿಕ್ ಜ್ವರ: ಇದು ಸ್ಟ್ರೆಪ್ಟೊಕಾಕಸ್‌ನಂತಹ ಬ್ಯಾಕ್ಟೀರಿಯಾ ಸೋಂಕಿನಿಂದ ಉಂಟಾಗುವ ಉರಿಯೂತವಾಗಿದ್ದು, ಹೃದಯ ಕವಾಟಗಳಿಗೆ ಹಾನಿ ಉಂಟು ಮಾಡುವ ಮೂಲಕ ರುಮ್ಯಾಟಿಕ್ ಹಾರ್ಟ್ ಡಿಸೀಸ್ (ಆರ್‌ಎಚ್‌ಡಿ)ಗೆ ಕಾರಣವಾಗುತ್ತದೆ. ಜಾಗತಿಕವಾಗಿ ಹೃದಯ ಕವಾಟ ರೋಗಗಳಿಗೆ ಪ್ರಧಾನ ಕಾರಣಗಳಲ್ಲಿ ಇದು ಮುಂಚೂಣಿಯಲ್ಲಿದೆ. 2019ನೇ ಇಸವಿಯ ಅಂಕಿಅಂಶಗಳ ಪ್ರಕಾರ ಜಾಗತಿಕವಾಗಿ ಆರ್‌ಎಚ್‌ಡಿಯು 40.5 ದಶಲಕ್ಷ ಮಂದಿಯನ್ನು ಬಾಧಿಸಿತ್ತು. ಸರಾಸರಿ 28.7 ವರ್ಷ ವಯವಸ್ಸಿನವರಂತೆ 3,06,000 ಮಂದಿಯ ಸಾವಿಗೂ ಇದು ಕಾರಣವಾಗಿತ್ತು. ಆರ್‌ಎಚ್‌ಡಿಯಿಂದ ಅತೀ ಹೆಚ್ಚು ಸಾವುಗಳು ಓಶಿಯಾನಿಯಾ, ದಕ್ಷಿಣ ಏಶ್ಯಾ ಮತ್ತು ಸಬ್ ಸಹಾರನ್ ಆಫ್ರಿಕಾ ಭಾಗಗಳಲ್ಲಿ ಉಂಟಾಗಿದ್ದವು. ಜಾಗತಿಕವಾಗಿ ಆರ್‌ಎಚ್‌ಡಿಯ ಬಾಧೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳ ಕಾಣುತ್ತಿದೆ; ಆದರೆ ಅದರ ವಯೋ ಪ್ರಮಾಣೀಕೃತ ಬಾಧೆಯ ಬೆಳವಣಿಗೆ ನಿಧಾನ ಗತಿಯಲ್ಲಿದೆ. ಇದಕ್ಕೆ ಕಾರಣ ಯುವ ಜನಸಂಖ್ಯೆ ಹೆಚ್ಚಿರುವುದು. ಆರ್‌ಎಚ್‌ಡಿಯ ಉಪಸ್ಥಿತಿಯ ದರವು ಅದರ ಪತ್ತೆ ದರಕ್ಕಿಂತ ಕಡಿಮೆಯಾಗುತ್ತಿದ್ದು, ಅವಧಿಪೂರ್ವ ಮರಣ ಪ್ರಮಾಣವು ಕಡಿಮೆಯಾಗುತ್ತಿರುವುದನ್ನು ಪ್ರತಿಪಲಿಸುತ್ತಿದೆ. 1996ರ ಬಳಿಕ ಪ್ರತೀ ಒಂದು ವರ್ಷದಲ್ಲಿ ಭಾರತವು ಆರ್ ಎಚ್‌ಡಿ ಪ್ರಕರಣ ಮತ್ತು ಮರಣಗಳ ಜಾಗತಿಕ ದಾಖಲೆಯನ್ನು ಸರಿಗಟ್ಟಿರುವುದಲ್ಲದೆ ಹಿಂದಿಕ್ಕಿದೆ. ಆ್ಯಂಟಿಬಯಾಟಿಕ್‌ಗಳ ಅಲಭ್ಯತೆ, ಹೆಚ್ಚು ಜನಸಂಖ್ಯೆ ಮತ್ತು ಬಡತನದ ಜತೆಗೆ ಸಂಬಂಧ ಹೊಂದಿರುವ ನೈರ್ಮಲ್ಯದ ಕೊರತೆಗಳು ಆರ್‌ಎಚ್‌ಡಿ ತಲೆದೋರಲು ಪ್ರಧಾನ ಕಾರಣಗಳಾಗಿವೆ.
- ವಯಸ್ಸಿಗೆ ಸಂಬಂಧಿಸಿದ ದೇಹಕ್ಷಯಕಾರಿ ಬದಲಾವಣೆಗಳು: ವಯಸ್ಸಾಗುತ್ತ ಹೋದಂತೆ ಜನರ ಹೃದಯ ಕವಾಟಗಳು ದುರ್ಬಲಗೊಳ್ಳುತ್ತವೆ, ಇದರಿಂದಾಗಿ ಅವು ಗಡುಸಾಗುತ್ತವೆ, ಪೆಡಸಾಗುತ್ತವೆ ಅಥವಾ ಕ್ಯಾಲ್ಸಿಫಿಕೇಶನ್‌ಗೆ ಒಳಗಾಗುತ್ತವೆ.
- ಇನ್‌ಫೆಕ್ಟಿವ್ ಎಂಡೊಕಾರ್ಡೈಟಿಸ್: ಬ್ಯಾಕ್ಟೀರಿಯಾ ಸೋಂಕಿನಿಂದಾಗಿ ಹೃದಯದ ಪದರ ಮತ್ತು ತತ್ಪರಿಣಾಮವಾಗಿ ಹೃದಯ ಕವಾಟಗಳಿಗೆ ಹಾನಿಯುಂಟಾಗಬಹುದು. 2019ರ ಅಂಕಿಅಂಶಗಳಂತೆ ಜಾಗತಿಕವಾಗಿ 1.1 ದಶಲಕ್ಷ ಮಂದಿಯಲ್ಲಿ ಇನ್‌ಫೆಕ್ಟಿವ್ ಎಂಡೊಕಾರ್ಡೈಟಿಸ್ ಇದ್ದು, 66,000 ಮಂದಿ ಇದರಿಂದ ಮರಣಿಸಿದ್ದರು. ಇನ್‌ಫೆಕ್ಟಿವ್ ಎಂಡೊಕಾರ್ಡೈಟಿಸ್ ಸಾಮಾನ್ಯವಾಗಿ ಉಪ ಅಲ್ಪಕಾಲಿಕವಾಗಿದ್ದು, ರೋಗಕಾರಕಗಳ ಹ್ಯಾಸೆಕ್ ಗುಂಪಿನ (ಹೀಮೊಫಿಲಸ್ ಸ್ಪೀಶೀಸ್, ಆ್ಯಕ್ಟಿನೊಬ್ಯಾಸಿಲಸ್ ಆ್ಯಕ್ಟಿನೊಮೈಸೆಟೆಂಕೊಮಿಟಾನ್ಸ್, ಕಾರ್ಡಿಯೊಬ್ಯಾಕ್ಟೀರಿಯಂ ಹೋಮಿನಿಸ್, ಇಕೆನೆಲ್ಲಾ ಕೊರೊಡೆನ್ಸ್ ಮತ್ತು ಕಿಂಗೆಲ್ಲಾ ಪ್ರಭೇದಗಳು) ಸೂಕ್ಷ್ಮಜೀವಿಗಳ ಸೋಂಕಿಗೆ ಸಂಬಂಧಿಸಿದೆ. ಇಂಜೆಕ್ಷನ್ ಮೂಲಕ ಔಷಧ ಸ್ವೀಕರಿಸುತ್ತಿರುವವರಲ್ಲಿ ಇನ್‌ಫೆಕ್ಟಿವ್ ಎಂಡೊಕಾಡೈìಟಿಸ್ ಹೆಚ್ಚಳ ಕಂಡುಬರುತ್ತಿದೆ. ಎಂಡೊಕಾರ್ಡೈಟಿಸ್ ಪ್ರತಿಬಂಧಕವಾಗಿ ಸರ್ವತ್ರ ಆ್ಯಂಟಿಬಯಾಟಿಕ್ ಪ್ರೊಫಿಲ್ಯಾಕ್ಸಿಸ್ ಬಳಕೆ ಸರಿಯಲ್ಲ ಎಂಬ ವಾದವಿದೆಯಾದರೂ ಪ್ರೊಸ್ಥೆಟಿಕ್ ಹೃದಯ ಕವಾಟ ಅಳವಡಿಸಿರುವವರು ಮತ್ತು ಜನ್ಮಜಾತ ಹೃದಯ ತೊಂದರೆ ಹೊಂದಿರುವವರಂತಹ ರೋಗಿಗಳಿಗೆ ದಂತವೈದ್ಯಕೀಯ ಚಿಕಿತ್ಸೆಗೆ ಮುನ್ನ ಆ್ಯಂಟಿಬಯಾಟಿಕ್ ಪ್ರೊಫಿಲ್ಯಾಕ್ಸಿಸ್ ಅನುಸರಣೆಯನ್ನು ಶಿಫಾರಸು ಮಾಡಲಾಗುತ್ತದೆ.
- ಇತರ ಸ್ಥಿತಿಗತಿಗಳು: ಕನೆಕ್ಟಿವ್ ಟಿಶ್ಯೂ ಡಿಸಾರ್ಡರ್‌ಗಳು, ವಿಕಿರಣ ಚಿಕಿತ್ಸೆ, ಕಿಮೊಥೆರಪಿ ಮತ್ತು ಅಧಿಕ ರಕ್ತದೊತ್ತಡಗಳು ಹೃದಯ ಕವಾಟ ಕಾಯಿಲೆಗಳಿಗೆ ಕಾರಣವಾಗಬಹುದು. ಹೃದಯ ಕವಾಟ ಕಾಯಿಲೆಗಳ ರೋಗ ಲಕ್ಷಣಗಳು ಕಾಯಿಲೆಯ ವಿಧ ಮತ್ತು ತೀವ್ರತೆಯನ್ನು ಆಧರಿಸಿ ವ್ಯಕ್ತವಾಗುತ್ತವೆ, ಆದರೆ ಈ ಕೆಳಗಿನ ಲಕ್ಷಣಗಳು ಕಂಡುಬರಬಹುದಾಗಿವೆ: 1. ಉಸಿರು ಹಿಡಿದಂತಾಗುವುದು, ವಿಶೇಷವಾಗಿ ದೈಹಿಕ ಚಟುವಟಿಕೆ ನಡೆಸುವಾಗ ಅಥವಾ ಮೇಲ್ಮುಖವಾಗಿ ಮಲಗಿದ್ದಾಗ. 2. ಎದೆಯಲ್ಲಿ ನೋವು ಅಥವಾ ತೊಂದರೆ, ಕೆಲಸದಲ್ಲಿದ್ದಾಗ ಅಥವಾ ವಿಶ್ರಾಂತಿಯಲ್ಲಿದ್ದಾಗ. 3. ಸಣ್ಣ ಸಣ್ಣ ದೈಹಿಕ ಚಟುವಟಿಕೆ ನಡೆಸಿದಾಗಲೂ ಅತಿಯಾದ ದಣಿವು. 4. ಮೊಣಕಾಲು, ಪಾದ, ಹೊಟ್ಟೆ ಮತ್ತು ದೇಹದ ಇತರ ಭಾಗಗಳಲ್ಲಿ ಊತ ಅಥವಾ ನೀರು ತುಂಬಿಕೊಳ್ಳುವುದು.
ಹೃದಯ ಕವಾಟ ಕಾಯಿಲೆಗಳ ರೋಗಪತ್ತೆಯು ಸಾಮಾನ್ಯವಾಗಿ ವೈದ್ಯಕೀಯ ಹಿನ್ನೆಲೆ ವಿವರ ಸಂಗ್ರಹ, ಪರಿಶೀಲನೆ, ದೈಹಿಕ ಪರೀಕ್ಷೆಗಳು, ಎಕೊಕಾರ್ಡಿಯೊಗ್ರಫಿ ಮತ್ತು ಕೆಲವೊಮ್ಮೆ ಕಾರ್ಡಿಯಾಕ್ ಕ್ಯಾಥೆಟರೈಸೇಶನ್‌ನಂತಹ ಇಮೇಜಿಂಗ್ ಪರೀಕ್ಷೆಗಳ ಮೂಲಕ ನಡೆಯುತ್ತದೆ.
ಕೊನೆಯದಾಗಿ, ಹೃದಯ ಕವಾಟ ಕಾಯಿಲೆಗಳು ಹೃದಯದ ಕಾರ್ಯಚಟುವಟಿಕೆ ಮತ್ತು ಒಟ್ಟಾರೆ ಆರೋಗ್ಯದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದಾಗಿದೆ. ಶೀಘ್ರ ರೋಗಪತ್ತೆ, ಸರಿಯಾದ ಸಮಯದಲ್ಲಿ ವೈದ್ಯಕೀಯ ಚಿಕಿತ್ಸೆ ಮತ್ತು ಸತತ ನಿರ್ವಹಣೆಗಳು ಉತ್ತಮ ಚಿಕಿತ್ಸಾ ಫಲಿತಾಂಶ ದೊರಕುವುದಕ್ಕೆ ಹಾಗೂ ವ್ಯಕ್ತಿ ಉತ್ತಮ ಗುಣಮಟ್ಟದ ಜೀವನ ನಡೆಸುವುದಕ್ಕೆ ನಿರ್ಣಾಯಕವಾಗಿವೆ.
ವೈದ್ಯಕೀಯ ತಂತ್ರಜ್ಞಾನದ ಮುನ್ನಡೆ ಮತ್ತು ಸಮಗ್ರ ಆರೈಕೆಯ ವೈದ್ಯಕೀಯ ಕಾರ್ಯವಿಧಾನಗಳಿಂದಾಗಿ ಹೃದಯ ಕವಾಟ ಕಾಯಿಲೆಗಳುಳ್ಳ ಅನೇಕರು ಸರಿಯಾದ ಚಿಕಿತ್ಸೆ ಮತ್ತು ವೈದ್ಯಕೀಯ ನೆರವನ್ನು ಪಡೆದುಕೊಂಡು ಸಂತೃಪ್ತಿದಾಯಕ ಜೀವನವನ್ನು ನಡೆಸುವುದಕ್ಕೆ ಸಾಧ್ಯವಾಗುತ್ತಿದೆ.
ಚಿಕಿತ್ಸೆಯು ಹೃದಯ ಕವಾಟ ಕಾಯಿಲೆಯ ವಿಧ ಮತ್ತು ತೀವ್ರತೆಯನ್ನು ಆಧರಿಸಿ ಈ ಕೆಳಗಿನಂತೆ ಇರುತ್ತದೆ:
1. ಔಷಧಗಳು: ರೋಗ ಲಕ್ಷಣಗಳನ್ನು ನಿಭಾಯಿಸಲು ಮತ್ತು ಉಲ್ಬಣಿಸುವುದನ್ನು ತಡೆಯಲು, ರಕ್ತ ಹೆಪ್ಪುಗಟ್ಟುವುದನ್ನು ತಡೆಯುವುದಕ್ಕಾಗಿ ರಕ್ತ ತೆಳುಗೊಳಿಸುವ ಔಷಧಗಳು.
2. ಕವಾಟ ದುರಸ್ತಿ: ಹಾನಿಗೊಂಡಿರುವ ಕವಾಟವನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆ ಅಥವಾ ಕಡಿಮೆ ಗಾಯವನ್ನುಂಟು ಮಾಡುವ ಶಸ್ತ್ರಕ್ರಿಯೆಗಳು.
3. ಕವಾಟ ಬದಲಾವಣೆ: ಕವಾಟವನ್ನು ದುರಸ್ತಿಗೊಳಿಸುವುದು ಸಾಧ್ಯವಿಲ್ಲದೆ ಇದ್ದರೆ ಮೆಕ್ಯಾನಿಕಲ್ ಅಥವಾ ಬಯಾಲಾಜಿಕಲ್ ಪ್ರೊಸ್ಥೆಟಿಕ್ಸ್‌ಗಳಿಂದ ಕವಾಟ ಬದಲಾವಣೆ.
4. ಜೀವನ ವಿಧಾನ ಬದಲಾವಣೆಗಳು: ನಿಯಮಿತವಾಗಿ ವ್ಯಾಯಾಮ ಮಾಡುವುದು, ಸಮತೋಲಿತ ಆಹಾರ ಶೈಲಿ, ಧೂಮಪಾನ ತ್ಯಜಿಸುವುದು ಮತ್ತು ಒತ್ತಡ ನಿರ್ವಹಣೆಯಂತಹ ಹೃದಯ ಆರೋಗ್ಯಪೂರಕ ಜೀವನ ಶೈಲಿಯನ್ನು ಅನುಸರಿಸುವುದು ಬಹಳ ಮುಖ್ಯವಾಗಿರುತ್ತದೆ.
-ಡಾ| ನರಸಿಂಹ ಪೈ
ವಿಭಾಗ ಮುಖ್ಯಸ್ಥರು,
ಕಾರ್ಡಿಯಾಲಜಿ ವಿಭಾಗ,
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ,
ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಕಾರ್ಡಿಯಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
Kasaragod: ಮರಳಿ ಬಂದ ಯುವಕ – ಯುವತಿ ಮತ್ತೆ ನಾಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.