ಮನೆಯಲ್ಲೇ ಮಾಡಬಹುದಾದ ಕೆಲವು ಕುರುಕಲು ತಿಂಡಿಯ ರೆಸಿಪಿಗಳು ಇಲ್ಲಿವೆ…
ಎರಡೂ ಬದಿಗಳಲ್ಲಿ ಕೆಂಬಣ್ಣ ಬರುವವರೆಗೆ ಕರಿಯಿರಿ.
Team Udayavani, Dec 17, 2022, 4:42 PM IST
ಹೊರಗೆ ಜೋರು ಮಳೆಯಾಗುತ್ತಿದೆ. ಸುರಿವ ಮಳೆಯ ಮಧ್ಯೆ ಬಿಸಿಬಿಸಿ ಕಾಫಿ, ಟೀ ಹೀರುತ್ತಾ ಕೂರಬೇಕು ಎನಿಸುತ್ತದೆ. ಜೊತೆಗೆ ಕುರುಕಲು ತಿಂಡಿಯೂ ಇರಲಿ ಅಂತ ನಾಲಗೆ ಬಯಸುತ್ತದೆ. ಹೇಳದೇ ಕೇಳದೇ ಮಳೆ ಬಂದ ಸಂದರ್ಭದಲ್ಲಿ ಅವಸರದಿಂದಲೇ ಮನೆಯಲ್ಲೇ ಮಾಡಬಹುದಾದ ಕೆಲವು ಕುರುಕಲು ತಿಂಡಿಯ ರೆಸಿಪಿಗಳು ಇಲ್ಲಿವೆ.
1.ರಿಬ್ಬನ್ ಪಕೋಡ
ಬೇಕಾಗುವ ಸಾಮಗ್ರಿ: 2 ಕಪ್ ಅಕ್ಕಿಹಿಟ್ಟು, 1ಕಪ್ ಕಡಲೆಹಿಟ್ಟು, 1ಚಮಚ ಎಳ್ಳು, 1/2ಚಮಚ ಜೀರಿಗೆ ಪುಡಿ, 1/4ಚಮಚ ಅರಶಿನ ಪುಡಿ, 1 ಚಮಚ ಖಾರದ ಪುಡಿ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು, ಎಣ್ಣೆ, ನೀರು.
ಮಾಡುವ ವಿಧಾನ: ಮೇಲೆ ಹೇಳಿರುವ ಎಲ್ಲಾ ಪದಾರ್ಥಗಳನ್ನು ಮಿಶ್ರಣ ಮಾಡಿ. ಅದಕ್ಕೆ ಎರಡು ಚಮಚ ಬಿಸಿ ಎಣ್ಣೆ ಹಾಕಿ ಕೊಂಡು, ನೀರನ್ನು ಚಿಮುಕಿಸುತ್ತಾ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ, ಉಂಡೆ ಕಟ್ಟಿ. ನಂತರ ಸ್ಟೌ ಮೇಲೆ ಎಣ್ಣೆ ಕಾಯಲು ಇಡಿ. ಚಕ್ಕುಲಿ ಒರಳಿನಲ್ಲಿ ಸುತ್ತಲೂ ಎಣ್ಣೆ ಹಾಕಿ (ಆಗ ಹಿಟ್ಟು ಸುತ್ತಲೂ ಅಂಟುವುದಿಲ್ಲ), ರಿಬ್ಬನ್ ಪ್ಲೇಟ್ ಜೋಡಿಸಿ. ಅದರಲ್ಲಿ ಒಂದೊಂದೇ ಉಂಡೆ ಹಾಕಿ. ಬಿಸಿಯಾದ ಎಣ್ಣೆಗೆ ಒತ್ತಿ ಹಾಕಿ. ಎರಡೂ ಬದಿಗಳಲ್ಲಿ ಕೆಂಬಣ್ಣ ಬರುವವರೆಗೆ ಕರಿಯಿರಿ.
2.ಅವಲಕ್ಕಿ ಚೂಡ
ಬೇಕಾಗುವ ಸಾಮಗ್ರಿ: ತೆಳು ಅವಲಕ್ಕಿ 1/2 ಕಪ್, ತೆಳುವಾಗಿ ಕತ್ತರಿಸಿದ ಒಣ ಕೊಬ್ಬರಿ 1/4 ಕಪ್, ಹುರಿಗಡಲೆ 1/2 ಕಪ್,ಶೇಂಗಾ 1/2 ಕಪ್, ಚಿಕ್ಕದಾಗಿ ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಗೂ ಕರಿಬೇವು ಸ್ವಲ್ಪ, ಚಿಕ್ಕದಾಗಿ ಹೆಚ್ಚಿದ ಹಸಿಮೆಣಸಿನಕಾಯಿ 3-4, ಅರಿಶಿನ 1/2 ಚಮಚ, ಎಣ್ಣೆ 5 ಚಮಚ, ಸಕ್ಕರೆ 3 ಚಮಚ, ಉಪ್ಪು ರುಚಿಗೆ ತಕ್ಕಷ್ಟು.
ಮಾಡುವ ವಿಧಾನ: ತೆಳು ಅವಲಕ್ಕಿಯನ್ನು ಬಿಸಿಲಿನಲ್ಲಿ ಒಣಗಿಸಿ ಅಥವಾ ಬಾಣಲೆಯಲ್ಲಿ ಗರಿಗರಿಯಾಗುವವರೆಗೆ ಹುರಿಯಿರಿ. ಬಾಣಲೆಯಲ್ಲಿ ಎಣ್ಣೆ ಬಿಸಿಮಾಡಿ ಹಸಿಮೆಣಸಿನಕಾಯಿ, ಕೊತ್ತಂಬರಿ ಸೊಪ್ಪು, ಕರಿಬೇವು ಹಾಕಿ ಬಾಡಿಸಿ. ನಂತರ ಒಣಕೊಬ್ಬರಿ ತುಂಡು, ಹುರಿಗಡಲೆ, ಶೇಂಗಾ ಹಾಕಿ ಹುರಿದು ಅದಕ್ಕೆ, ಅವಲಕ್ಕಿ ಸೇರಿಸಿ. ಉಪ್ಪು ಮತ್ತು ಸಕ್ಕರೆಯನ್ನು ಸೇರಿಸಿ ಮಿಶ್ರಣ ಮಾಡಿ. ರುಚಿಯಾದ ಅವಲಕ್ಕಿ ಚೂಡವನ್ನು ಡಬ್ಬಿಯಲ್ಲಿ ಹಾಕಿಟ್ಟರೆ ಬೇಗ ಕೆಡುವುದಿಲ್ಲ. ಯಾವಾಗ ಬೇಕಾದರೂ ತಿನ್ನಬಹುದು.
3. ಬೆಂಡೆಕಾಯಿ ಕುರ್‌ಕುರೆ
ಬೇಕಾಗುವ ಸಾಮಗ್ರಿ: ಬೆಂಡೆಕಾಯಿ 1ಕೆ.ಜಿ., ಕಡಲೆಹಿಟ್ಟು 1/2 ಕಪ್, ಅಕ್ಕಿ ಹಿಟ್ಟು 1/4 ಕಪ್, ಅಜವಾನ 1ಚಮಚ (ಬೇಕಿದ್ದರೆ) ಅರಿಶಿನ 1ಚಮಚ, ಖಾರದ ಪುಡಿ 1ಚಮಚ, ಆಮ್‌ಚೂರ್ ಪೌಡರ್ 1/2 ಚಮಚ, ಜೀರಿಗೆ ಪುಡಿ 1ಚಮಚ,
ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ ಕರಿಯಲು.
ಮಾಡುವ ವಿಧಾನ: ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಪೂರ್ತಿ ನೀರು ಹೋಗುವವರೆಗೂ ಒಣಹಾಕಿ. ನಂತರ ತುದಿ ಭಾಗವನ್ನು ತೆಗೆದು ಮೇಲಿಂದ ಕೆಳಕ್ಕೆ ಉದ್ದಕ್ಕೆ ಸೀಳಿ, ಮಧ್ಯ ಇರುವ ತಿರುಳು ಮತ್ತು ಬೀಜವನ್ನು ತೆಗೆಯಿರಿ. ನಂತರ ಒಂದೇ ಅಳತೆಯ ಉದ್ದುದ್ದ ತುಂಡುಗಳನ್ನು ಮಾಡಿ ಪಾತ್ರೆಗೆ ಹಾಕಿ. ಮೇಲೆ ಹೇಳಿದ ಎಲ್ಲಾ ಮಸಾಲೆ ಪದಾರ್ಥಗಳನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಐದು ನಿಮಿಷ ಹಾಗೆ ಬಿಡಿ. ಆ ಮಿಶ್ರಣವನ್ನು ಬೆಂಡೆಕಾಯಿ ಪಾತ್ರೆಗೆ ಹಾಕಿ ಮಿಶ್ರಣ ಮಾಡಿ. ಒಲೆ ಮೇಲೆ ಎಣ್ಣೆಯಿಟ್ಟು, ಬೆಂಡೆಕಾಯಿ ಮಸಾಲೆಯನ್ನು ಬಿಡಿ ಬಿಡಿಯಾಗಿ ಉದುರಿಸಿ. ಮಧ್ಯಮ ಉರಿಯಲ್ಲಿ ಬೇಯಿಸಿ. ಎರಡೂ ಬದಿ ಗರಿ ಗರಿಯಾದ ಮೇಲೆ ಬಾಣಲೆಯಿಂದ ತೆಗೆಯಿರಿ. ಗಾಳಿಯಾಡದ ಡಬ್ಬಿಯಲ್ಲಿ ಹಾಕಿಟ್ಟರೆ ಹದಿನೈದು ದಿನ ಇಡಬಹುದು.
4.ಜಾಲ್ ಮುರೈ/ಜಾಲ್ ಮುರಿ
ಬೇಕಾಗುವ ಸಾಮಗ್ರಿ: ಮಂಡಕ್ಕಿ- 4 ಕಪ್, 1/4 ಕಪ್ ಸೇವ್, 1/4 ಕಪ್ ಶೇಂಗಾ, ಬೇಯಿಸಿದ ಆಲೂಗಡ್ಡೆ 1/2 ಕಪ್, ಸೌತೆಕಾಯಿ 1/2 ಕಪ್, ಹಸಿಮೆಣಸಿನಕಾಯಿ 2, ಕೊತ್ತಂಬರಿ ಸೊಪ್ಪು ಸ್ವಲ್ಪ, ಟೊಮೆಟೊ 1/2ಕಪ್, ಕ್ಯಾರೆಟ್ ತುರಿ 1/2ಕಪ್, ಹುಣಸೆ ರಸ 1/4 ಕಪ್, ಸಾಸಿವೆ ಎಣ್ಣೆ 3 ಚಮಚ, ಜೀರಿಗೆ ಪುಡಿ 3 ಚಮಚ, ಉಪ್ಪು 1 ಚಮಚ, ಅಮ್‌ಚೂರ್ ಪೌಡರ್ 1 ಚಮಚ, ಖಾರದ ಪುಡಿ 1 ಚಮಚ, ಗರಂ ಮಸಾಲೆ 1 ಚಮಚ, ಚಿಕ್ಕದಾಗಿ ಹೆಚ್ಚಿದ ಶುಂಠಿ 1 ಚಮಚ.
ಮಾಡುವ ವಿಧಾನ: ಮೊದಲು ಆಲೂಗಡ್ಡೆಯನ್ನು ಹದವಾಗಿ ಬೇಯಿಸಿ ಕತ್ತರಿಸಿಟ್ಟುಕೊಳ್ಳಿ.ಕ್ಯಾರೆಟ್ ತುರಿದು, ಟೊಮೆಟೊ, ಈರುಳ್ಳಿ, ಹಸಿಮೆಣಸಿನಕಾಯಿಯನ್ನು ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ. ಹುಣಸೆ ರಸ ತಯಾರಿಸಿ ಮಸಾಲೆ ಪದಾರ್ಥಗಳನ್ನು ಅದರಲ್ಲಿ ಹಾಕಿ. ಅವುಗಳು ಹುಣಸೆ ರಸದಲ್ಲಿ ಚೆನ್ನಾಗಿ ಮಿಶ್ರಣವಾಗಬೇಕು. ಒಂದು ಬಾಣಲೆಗೆ ಮಂಡಕ್ಕಿ ಹಾಕಿ ಎರಡರಿಂದ ಮೂರು ನಿಮಿಷ ಹುರಿಯಿರಿ.ಶೇಂಗಾ ಬೀಜವನ್ನೂ ಹುರಿದುಕೊಳ್ಳಿ. ದೊಡ್ಡದಾದ ಪಾತ್ರೆಯಲ್ಲಿ ಹುರಿದ ಪದಾರ್ಥ ಮತ್ತು ಮಸಾಲೆ ಪದಾರ್ಥಗಳನ್ನು ಸೇರಿಸಿ, ಸಾಸಿವೆ ಎಣ್ಣೆ ಹಾಕಿ ಮಿಶ್ರಣ ಮಾಡಿ. ನಂತರ ಸೇವ್ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ ಮಿಶ್ರಣ ಮಾಡಿ. ಈಗ ರುಚಿರುಚಿಯಾದ ಜಾಲ್ ಮುರೈ ಸವಿಯಲು ಸಿದ್ಧ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.