HMPV: ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‌ಎಂಪಿವಿ); ಹೊಸ ಆತಂಕವೇನೂ ಅಲ್ಲ
ನಾವು ತಿಳಿದಿರಬೇಕಾದದ್ದೇನು? ಸುರಕ್ಷಿತವಾಗಿರುವುದು ಹೇಗೆ?
Team Udayavani, Jan 12, 2025, 12:04 PM IST
ಮನುಷ್ಯರಲ್ಲಿ ಶ್ವಾಸಾಂಗ ಸೋಂಕಿಗೆ ಕಾರಣವಾಗುವ ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‌ಎಂಪಿವಿ) ಎಂಬ ವೈರಾಣುವಿನ ಬಗ್ಗೆ ಇತ್ತೀಚೆಗೆ ದೇಶ-ವಿದೇಶಗಳಲ್ಲಿ ಬಹಳ ಚರ್ಚೆ ನಡೆಯುತ್ತಿದೆ. ಇದು ಕಳವಳಕಾರಿಯಾಗಿ ಪರಿಣಮಿಸಬಹುದಾದರೂ ಎಚ್ ಎಂಪಿವಿ ಹೊಸ ವೈರಾಣು ಅಲ್ಲ ಮತ್ತು ಅದರ ಬಗ್ಗೆ ಆತಂಕ ಪಡುವ ಅಗತ್ಯ ಇಲ್ಲ ಎಂಬುದನ್ನು ನಾವು ಮೊತ್ತಮೊದಲಾಗಿ ಅರ್ಥ ಮಾಡಿಕೊಳ್ಳಬೇಕಾದದ್ದು ಬಹಳ ಮುಖ್ಯ. ಚೀನ ಮತ್ತಿತರ ದೇಶಗಳಿಂದ ಕೇಳಿಬರುತ್ತಿರುವ ವರದಿಗಳನ್ನು ಗಮನಿಸಿದರೆ ಈ ವೈರಾಣು ಸೋಂಕು ಬಹಳ ಕ್ಷಿಪ್ರವಾಗಿ ಹರಡುತ್ತಿರುವಂತೆ ಭಾಸವಾಗಬಹುದು. ಆದರೆ ನಿಜಾಂಶ ಏನೆಂದರೆ, ಆ ದೇಶಗಳಲ್ಲಿ ಬಹಳ ಚೆನ್ನಾಗಿರುವ ರೋಗ ಪತ್ತೆ ವ್ಯವಸ್ಥೆಯಿಂದಾಗಿ ಹೀಗಾಗುತ್ತಿದೆಯೇ ವಿನಾ ಸೋಂಕು ಪ್ರಕರಣಗಳು ನಿಜವಾಗಿಯೂ ಹೆಚ್ಚಳ ಕಾಣುತ್ತಿಲ್ಲ. ಈ ವೈರಾಣು ಸರಿಸುಮಾರು 20 ವರ್ಷಗಳಿಂದ ನಮ್ಮ ನಡುವೆ ಇದೆ ಮತ್ತು ಅದು ಅಪಾಯಕಾರಿಯಾಗಿ ಪರಿಣಮಿಸುವ ರೀತಿಯಲ್ಲಿ ಬದಲಾವಣೆ ಕಂಡಿಲ್ಲ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಾಧಾರಗಳು ಇವೆ. ಈ ವೈರಾಣುವಿನ ಬಗ್ಗೆ ಮಾಹಿತಿ, ಅದರ ಪರಿಣಾಮಗಳು ಮತ್ತು ಅದರಿಂದ ಹೇಗೆ ಸುರಕ್ಷಿತವಾಗಿ ಇರಬಹುದು ಎಂಬ ಬಗ್ಗೆ ಸರಳವಾದ ಮಾರ್ಗದರ್ಶನ ಇಲ್ಲಿದೆ.
ಹ್ಯೂಮನ್ ಮೆಟಾನ್ಯುಮೊ ವೈರಸ್ (ಎಚ್‌ಎಂಪಿಒಇ) ಎಂದರೇನು?
ಶ್ವಾಸಾಂಗದ ಮೇಲ್ಭಾಗ ಮತ್ತು ಕೆಳಭಾಗದಲ್ಲಿ ಸೋಂಕನ್ನು ಉಂಟುಮಾಡಬಲ್ಲ ಒಂದು ವೈರಾಣು ಎಚ್‌ಎಂಪಿವಿ. 2001ರಲ್ಲಿ ಇದನ್ನು ಮೊತ್ತಮೊದಲು ಪತ್ತೆಹಚ್ಚಲಾಯಿತು ಮತ್ತು ಇದು ಎಲ್ಲ ವಯಸ್ಸಿನ ಜನರನ್ನು ಬಾಧಿಸಬಹುದಾಗಿದೆ. ಆದರೆ ಸಣ್ಣ ವಯಸ್ಸಿನ ಮಕ್ಕಳು, ವಯೋವೃದ್ಧರು ಮತ್ತು ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಂಡಿರುವವರಲ್ಲಿ ಇದು ಹೆಚ್ಚು ಅಪಾಯಕಾರಿಯಾಗಿ ಪರಿಣಮಿಸಬಹುದಾಗಿದೆ. ಇದರ ಸೋಂಕಿನಿಂದ ಉಂಟಾಗುವ ರೋಗಲಕ್ಷಣಗಳು ಫೂÉ ಜ್ವರದ ಲಕ್ಷಣಗಳನ್ನು ಹೋಲುತ್ತಿದ್ದು, ಕೆಮ್ಮು, ಜ್ವರ ಮತ್ತು ಮೂಗು ಸಹಿತ ಶ್ವಾಸಾಂಗದಲ್ಲಿ ಅಡಚಣೆ ಸೇರಿರಬಹುದಾಗಿದೆ. ಕೆಲವು ಗಂಭೀರ ಸೋಂಕು ಪ್ರಕರಣಗಳಲ್ಲಿ ಉಬ್ಬಸ ಮತ್ತು ಉಸಿರಾಟಕ್ಕೆ ಕಷ್ಟವಾಗಬಹುದು.
ಎಚ್‌ಎಂಪಿವಿ ಹೇಗೆ ಪ್ರಸಾರವಾಗುತ್ತದೆ?
ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅವರಿಂದ ಗಾಳಿಗೆ ಬಿಡುಗಡೆಯಾಗುವ ವೈರಾಣುಪೂರಿತ ಹನಿಬಿಂದುಗಳ ಮೂಲಕ ಈ ವೈರಾಣು ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ವೈರಾಣುವಿನಿಂದ ಕಲುಷಿತವಾಗಿರುವ ವಿವಿಧ ರೀತಿಯ ಮೇಲ್ಮೆ„ಗಳನ್ನು ಆರೋಗ್ಯವಂತ ವ್ಯಕ್ತಿಯು ಸ್ಪರ್ಶಿಸಿ ಆ ಬಳಿಕ ತನ್ನ ಮೂಗು, ಮುಖ, ಕಣ್ಣು ಇತ್ಯಾದಿಯನ್ನು ಸ್ಪರ್ಶಿಸುವುದರಿಂದಲೂ ಈ ವೈರಾಣು ಸೋಂಕಿಗೀಡಾಬಹುದು. ಚಳಿಗಾಲದ ಕೊನೆಯ ಭಾಗ ಮತ್ತು ವಸಂತ ಕಾಲದ ಆರಂಭಿಕ ದಿನಗಳಲ್ಲಿ ಈ ವೈರಾಣುವಿನ ಹಾವಳಿ ಸರ್ವೇಸಾಮಾನ್ಯವಾಗಿರುತ್ತದೆ.
ಯಾರಿಗೆ ಈ ವೈರಾಣು ಸೋಂಕಿನ ಅಪಾಯ ಹೆಚ್ಚು?
ಯಾರು ಬೇಕಾದರೂ ಈ ವೈರಾಣುವಿನ ಸೋಂಕಿಗೀಡಾಗಬಹುದು. ಆದರೆ ಕೆಲವು ವಯೋಗುಂಪಿನವರು, ವ್ಯಕ್ತಿಗಳು ಈ ಸೋಂಕಿನಿಂದ ಹೆಚ್ಚು ಗಂಭೀರ ಸ್ವರೂಪದ ಅನಾರೋಗ್ಯಗಳಿಗೆ ಈಡಾಗಬಹುದು. 5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು, ವಯೋವೃದ್ಧರು, ಅಸ್ತಮಾ ಅಥವಾ ಹೃದ್ರೋಗಗಳಂತಹ ದೀರ್ಘಕಾಲೀನ ಕಾಯಿಲೆಗಳನ್ನು ಹೊಂದಿರುವವರು ಹಾಗೂ ರೋಗ ನಿರೋಧಕ ವ್ಯವಸ್ಥೆ ದುರ್ಬಲಗೊಂಡಿರುವವರಲ್ಲಿ ಈ ಸೋಂಕು ಅಪಾಯ ಉಂಟು ಮಾಡಬಹುದಾಗಿದೆ.
ಸೋಂಕನ್ನು ತಡೆಗಟ್ಟಲು ಸರಳ ಕ್ರಮಗಳು
ಎಚ್‌ಎಂಪಿವಿ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ಆದರೆ ನಮ್ಮನ್ನು ಮತ್ತು ಇತರರನ್ನು ಈ ಸೋಂಕಿನಿಂದ ಸಂರಕ್ಷಿಸಿಕೊಳ್ಳಲು ಕೆಲವು ಸರಳ ಕ್ರಮಗಳನ್ನು ಅನುಸರಿಸಬಹುದಾಗಿದೆ:
ಕೈಗಳನ್ನು ಆಗಾಗ ತೊಳೆದುಕೊಳ್ಳಿ ಕೈಗಳನ್ನು ಆಗಾಗ ಸಾಬೂನು, ನೀರು ಉಪಯೋಗಿಸಿ ಅಥವಾ ಹ್ಯಾಂಡ್ ಸ್ಯಾನಿಟೈಸರ್ ಬಳಸಿ ಸ್ವತ್ಛಗೊಳಿಸಿಕೊಳ್ಳುತ್ತಿರಬೇಕು.
ಶ್ವಾಸಾಂಗ ನೈರ್ಮಲ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರ/ ಟಿಶ್ಯೂ ಪೇಪರ್ ಅಥವಾ ಮೊಣಕೈಯಿಂದ ಮುಚ್ಚಿಕೊಳ್ಳಬೇಕು.
ನಿಕಟ ಸಂಪರ್ಕವನ್ನು ತಪ್ಪಿಸಿ ಶ್ವಾಸಾಂಗ ಸೋಂಕಿನ ಅಪಾಯ ಹೊಂದಿರುವವರು ಅಥವಾ ಅಂತಹ ಲಕ್ಷಣಗಳನ್ನು ಹೊಂದಿರುವವರ ನಿಕಟ ಸಂಪರ್ಕದಿಂದ ದೂರವಿರಬೇಕು.
ಮಾಸ್ಕ್ ಧರಿಸಿ ಜನಸಂದಣಿಯಿಂದ ಕೂಡಿರುವ ಸ್ಥಳಗಳಲ್ಲಿ ಅಥವಾ ಫ್ಲೂ ಸೋಂಕು ಗರಿಷ್ಠ ಪ್ರಮಾಣದಲ್ಲಿರುವ ದಿನಗಳಲ್ಲಿ ಮಾಸ್ಕ್ ಧರಿಸುವ ಮೂಲಕ ನಮ್ಮನ್ನು ಮತ್ತು ಇತರರನ್ನು ಸೋಂಕಿನಿಂದ ರಕ್ಷಿಸಿಕೊಳ್ಳಬಹುದು. ಎಚ್‌ಎಂಪಿವಿ ಶ್ವಾಸಾಂಗ ಸೋಂಕು ರೋಗ ಲಕ್ಷಣಗಳಿಗೆ ಕಾರಣವಾಗಬಹುದಾದ ಒಂದು ವೈರಾಣು ಎಂಬುದು ನಿಜ. ಆದರೆ ಅದು ನಮಗೆ ಹೊಸದಲ್ಲ ಮತ್ತು ತುಂಬಾ ಅಪಾಯಕಾರಿಯೂ ಅಲ್ಲ.
ಸರಳ ಮತ್ತು ಮೂಲಭೂತ ನೈರ್ಮಲ್ಯ ಹಾಗೂ ಸಂರಕ್ಷಣಾತ್ಮಕ ಕ್ರಮಗಳ ಮೂಲಕ ನಾವು ನಮ್ಮನ್ನು ಈ ವೈರಾಣು ಮಾತ್ರವಲ್ಲ; ಇದೇ ತರಹದ ಇತರ ವೈರಾಣು ಸೋಂಕುಗಳಿಂದಲೂ ರಕ್ಷಿಸಿಕೊಳ್ಳ ಬಹುದಾಗಿದೆ. ಈ ಸತ್ಯಾಂಶವನ್ನು ಅರ್ಥ ಮಾಡಿಕೊಳ್ಳಿ ಮತ್ತು ಆತಂಕ ಪಡುವ ಅಗತ್ಯವಿಲ್ಲ ಎಂಬುದನ್ನು ನೆನಪಿಡುವುದರ ಜತೆಗೆ ಎಚ್ಚರಿಕೆಯಿಂದಿರಿ ಹಾಗೂ ಆರೋಗ್ಯದ ಬಗ್ಗೆ ಕಾಳಜಿಯಿಂದ ಇರಿ.
-ಡಾ| ಅಕ್ಷತಾ ಆರ್.
ಅಸಿಸ್ಟೆಂಟ್ ಪ್ರೊಫೆಸರ್
ಇನ್‌ಫೆಕ್ಷಿಯಸ್ ಡಿಸೀಸಸ್ ವಿಭಾಗ
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್ ಡಿಸೀಸಸ್ ವಿಭಾಗ , ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.