New Born Child: ಎಳವೆಯಲ್ಲೇ ತಲೆ ಮತ್ತು ಕುತ್ತಿಗೆಯ ಚಲನೆಯ ಸಾಮರ್ಥ್ಯದ ಮಹತ್ವ
Team Udayavani, Dec 3, 2023, 2:20 PM IST
ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವವರ ಕ್ಷೇಮ, ಕಲ್ಯಾಣ, ಅವರ ಹಕ್ಕುಗಳು, ಘನತೆ ಗಳ ಬಗ್ಗೆ ಅರಿವು ಮೂಡಿಸಲು, ಅರ್ಥ ಮಾಡಿಕೊಳ್ಳಲು ಮತ್ತು ನೆರವು ಒದಗಿಸುವ ವೇದಿಕೆಯಾಗಿ ಪ್ರತೀ ವರ್ಷ ಡಿಸೆಂಬರ್ 3ನ್ನು ಜಾಗತಿಕ ವೈಕಲ್ಯ ದಿನವನ್ನಾಗಿ ಆಚರಿಸಲಾಗುತ್ತದೆ.
ಪ್ರತಿ ವ್ಯಕ್ತಿ ಹೊಂದಿರುವ ಅಪೂರ್ವ ಕೌಶಲಗಳ ಗುಚ್ಛವನ್ನು ಗುರುತಿಸಿ ಶ್ಲಾಘಿಸುವ ಸಮಗ್ರ ಸ್ವರೂಪದ ಸಮಾಜವನ್ನು ಸೃಷ್ಟಿಸಬೇಕಾಗಿರುವುದರ ಮಹತ್ವವನ್ನು ಈ ದಿನಾಚರಣೆಯು ಒತ್ತಿಹೇಳುತ್ತದೆ. ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವವರು ಎದುರಿಸುವ ಸವಾಲುಗಳ ಬಗ್ಗೆ ತಿಳಿದುಕೊಳ್ಳುವುದು ಮತ್ತು ಈ ಸವಾಲುಗಳನ್ನು ಯಶಸ್ವಿಯಾಗಿ ಪರಿಹರಿಸುವುದು, ಸೌಲಭ್ಯಗಳ ಒದಗಣೆಗೆ ಶ್ರಮಿಸುವುದು ಹಾಗೂ ಪ್ರತಿ ಯೊಬ್ಬರಿಗೂ ಸಮಾನ ಅವಕಾಶಗಳು ಲಭ್ಯವಾಗುವಂತೆ ಮಾಡುವುದು ಈ ದಿನಾಚರಣೆಯ ಧ್ಯೇಯೋದ್ದೇಶಗಳಾಗಿವೆ.
ಸರಕಾರ, ಸಂಘಸಂಸ್ಥೆಗಳು ಮತ್ತು ವ್ಯಕ್ತಿಗಳು ವಿಭಿನ್ನ ಸಾಮರ್ಥ್ಯಗಳನ್ನು ಹೊಂದಿರುವವರನ್ನು ತಲೆ ಮತ್ತು ಕುತ್ತಿಗೆಯ ಸಶಕ್ತಗೊಳಿಸುವುದು ಮತ್ತು ಬದುಕಿಗೆ ಎಲ್ಲ ಆಯಾಮಗಳಲ್ಲಿ ಅವರು ಭಾಗಿಯಾಗುವಂತೆ ಮಾಡುವುದಕ್ಕಾಗಿ ವಿವಿಧ ಉಪಕ್ರಮಗಳಲ್ಲಿ ತೊಡಗುವಂತೆ ಈ ದಿನಾಚರಣೆಯು ಉತ್ತೇಜಿಸುತ್ತದೆ.
ನಿರ್ದಿಷ್ಟ ವಿಷಯಗಳನ್ನು ಗುರುತಿಸಿ ಸಕಾರಾತ್ಮಕ ಬದಲಾವಣೆಗಳಿಗಾಗಿ ಹಾರೈಸುವ ಗುರಿಯೊಂದಿಗೆ ಜಾಗತಿಕ ವೈಕಲ್ಯ ದಿನದ ಘೋಷವಾಕ್ಯವು ಪ್ರತೀ ವರ್ಷವೂ ಬದಲಾಗುತ್ತದೆ. ಪ್ರಸ್ತುತ ವರ್ಷ “ವಿಭಿನ್ನ ಸಾಮರ್ಥ್ಯಗಳುಳ್ಳ ವ್ಯಕ್ತಿಗಳೊಂದಿಗೆ ಮತ್ತು ವಿಭಿನ್ನ ಸಾಮರ್ಥ್ಯಗಳುಳ್ಳ ವ್ಯಕ್ತಿಗಳಿಗಾಗಿ ಸುಸ್ಥಿರ ಅಭಿವೃದ್ಧಿಯ ಗುರಿಗಳನ್ನು ಸಾಧಿಸುವ ಮತ್ತು ರಕ್ಷಿಸಲು ಒಂದುಗೂಡೋಣ’ ಎಂಬುದು ಈ ದಿನಾಚರಣೆಯ ಘೋಷವಾಕ್ಯವಾಗಿದೆ.
ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಯ ಆರಂಭಿಕ ಹಂತದಲ್ಲಿ ಕಂಡುಬರುವ ವ್ಯತ್ಯಯಗಳ ಅರಿವು ಮೂಡಿಸಲು ಈ ಲೇಖನ. ಶಿಶುಗಳ ಕ್ಷಿಪ್ರ ಬೆಳವಣಿಗೆ ಮತ್ತು ಪ್ರಗತಿ ಆಶ್ಚರ್ಯಕ್ಕೀಡು ಮಾಡುತ್ತದೆ. ಶಿಶುಗಳ ಬೆಳವಣಿಗೆಯಲ್ಲಿ ಕುತ್ತಿಗೆಯ ನಿಯಂತ್ರಣ ಸಾಧನೆ ಒಂದು ಪ್ರಾಮುಖ್ಯ ಮೈಲಿಗಲ್ಲಾಗಿದೆ, ಹೆತ್ತವರೂ ಇದನ್ನು ಕಾತರದಿಂದ ನಿರೀಕ್ಷಿಸುತ್ತಿರುತ್ತಾರೆ. ಶಿಶುಗಳ ದೈಹಿಕ ಮತ್ತು ಬುದ್ಧಿಶಕ್ತಿಯ ಬೆಳವಣಿಗೆಯಲ್ಲಿ ಕುತ್ತಿಗೆಯ ಚಲನೆಯನ್ನು ನಿಯಂತ್ರಿಸುವ ಸಾಮರ್ಥ್ಯವು ಒಂದು ನಿರ್ಣಾಯಕ ಹೆಜ್ಜೆಯಾಗಿದೆ.
ಕುತ್ತಿಗೆಯ ನಿಯಂತ್ರಣದ ಮಹತ್ವ: ಒಂದು ಮೂಲಭೂತ ಕೌಶಲ
ಕುತ್ತಿಗೆಯ ಮಾಂಸಖಂಡಗಳ ಬಲವು ಮಗುವಿಗೆ ತನ್ನ ತಲೆಯನ್ನು ನೇರವಾಗಿ ಮತ್ತು ಸ್ಥಿರವಾಗಿ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯದ ಒಂದು ಪ್ರಮುಖ ಮೈಲಿಗಲ್ಲಾಗಿರುತ್ತದೆಯಲ್ಲದೆ ಇನ್ನಿತರ ಬೆಳವಣಿಗೆಯ ಸರಣಿಗಳಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ಈ ಮೂಲಭೂತ ಕೌಶಲ ಹಲವು ಸಂಕೀರ್ಣ ದೈಹಿಕ ಮತ್ತು ಬುದ್ಧಿ ಮತ್ತೆಯ ಸಾಮರ್ಥ್ಯಗಳಿಗೆ ವೇದಿಕೆಯನ್ನು ಸೃಷ್ಟಿಸುತ್ತದೆ. ತಲೆಯ ನಿಯಂತ್ರಣವು ಸಾಮಾನ್ಯವಾಗಿ 3ರಿಂದ 4 ತಿಂಗಳು ವಯಸ್ಸಿನಲ್ಲಿ ನವಜಾತ ಶಿಶು ಹಂತದಿಂದ ಮುಂದಿನ ಹಂತಕ್ಕೆ ನಿರ್ಣಾಯಕ ಮುಂದುವರಿಯುವಿಕೆಯ ಹೆಜ್ಜೆಯಾಗಿದೆ.
ದೈಹಿಕ ಬೆಳವಣಿಗೆ
ಮಗ್ಗುಲಾಗುವುದು, ಕವುಚುವುದು, ಸ್ವತಂತ್ರವಾಗಿ ಕುಳಿತುಕೊಳ್ಳುವುದು, ತೆವಳುವುದು ಮತ್ತು ಕ್ರಮೇಣ ನಿಲ್ಲುವುದು, ಅಂಬೆಗಾಲಿಕ್ಕಿ ನಡೆಯುವುದೇ ಮೊದಲಾದ ಬೆಳವಣಿಗೆಯ ಮೈಲಿಗಲ್ಲುಗಳಿಗೆ ಕುತ್ತಿಗೆಯ ನಿಯಂತ್ರಣವು ಮುನ್ನುಡಿಯಾಗಿರುತ್ತದೆ. ಇದರಿಂದ ಕುತ್ತಿಗೆಯ ಸ್ನಾಯುಗಳು ಸದೃಢಗೊಂಡು ಸ್ನಾಯು ಸಂಯೋಜನೆ ಸುಧಾರಿಸಲು ಮತ್ತು ಒಟ್ಟಾರೆ ದೇಹದ ನಿಯಂತ್ರಣ ಉತ್ತಮಗೊಳ್ಳಲು ಸಾಧ್ಯವಾಗುತ್ತದೆ.
ದೃಷ್ಟಿ ಪ್ರಚೋದನೆ
ಕುತ್ತಿಗೆಯ ಚಲನೆಯ ಮೇಲೆ ನಿಯಂತ್ರಣ ಹೊಂದುವುದು ದೃಷ್ಟಿ ಕೌಶಲಗಳ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಶಿಶುಗಳು ಕುತ್ತಿಗೆಯ ಚಲನೆಯ ಮೇಲೆ ನಿಯಂತ್ರಣ ಹೊಂದಿದ ಬಳಿಕ ತಮ್ಮ ಸುತ್ತಮುತ್ತಲನ್ನು ಹೆಚ್ಚು ಸಕ್ರಿಯವಾಗಿ ನೋಡಲು, ತಮ್ಮ ಪರಿಸರದಲ್ಲಿ ಸಕ್ರಿಯಗೊಳ್ಳಲು ಮತ್ತು ವೀಕ್ಷಣೆಯ ಮೂಲಕ ಗ್ರಹಿಸಲು ಸಾಧ್ಯವಾಗುತ್ತದೆ.
ಗ್ರಹಿಸುವಿಕೆಯ ಪ್ರಗತಿ
ಕುತ್ತಿಗೆಯ ನಿಯಂತ್ರಣವು ಶಿಶುವಿಗೆ ತನ್ನ ಸುತ್ತಲಿನ ಪರಿಸರವನ್ನು ಸಕ್ರಿಯವಾಗಿ ಗಮನಿಸಿ ಅದರ ಜತೆಗೆ ಸಂವಹಿಸಲು ಅನುವು ಮಾಡಿಕೊಡುವ ಮೂಲಕ ಬುದ್ಧಿಶಕ್ತಿಯ ಬೆಳವಣಿಗೆಯನ್ನು ಸಾಧ್ಯವಾಗಿಸುತ್ತದೆ. ತನ್ನ ಸುತ್ತಮುತ್ತಲಿನ ಅವಕಾಶಗಳ ಕುರಿತಾದ ಅರಿವು ಮತ್ತು ಏಕಾಗ್ರತೆಯನ್ನು ಸಾಧಿಸುವ ಸಾಮರ್ಥ್ಯದ ಬೆಳವಣಿಗೆಗೆ ಕುತ್ತಿಗೆಯ ನಿಯಂತ್ರಣ ನೆರವಾಗುತ್ತದೆ.
ಕುತ್ತಿಗೆಯ ನಿಯಂತ್ರಣ ವಿಳಂಬದ ಪರಿಣಾಮಗಳು ಏನಾಗಬಹುದು?
ಪ್ರತೀ ಶಿಶು ಕೂಡ ತನ್ನದೇ ಆದ ವೇಗದಲ್ಲಿ ಬೆಳವಣಿಗೆ ಸಾಧಿಸುತ್ತದೆಯಾದರೂ ಕುತ್ತಿಗೆಯ ನಿಯಂತ್ರಣ ಸಾಧನೆಯಲ್ಲಿ ಗಮನಾರ್ಹ ವಿಳಂಬವು ಸಂಭಾವ್ಯ ನಿಧಾನಗತಿಯ ಬೆಳವಣಿಗೆಯ ಮುನ್ಸೂಚನೆಯಾಗಿದೆ ಮತ್ತು ಇದನ್ನು ಆದಷ್ಟು ಬೇಗನೆ ಗುರುತಿಸಿ ಆರೈಕೆ ಒದಗಿಸಬೇಕಾಗಿರುತ್ತದೆ. ವಯಸ್ಸಿಗೆ ಸರಿಯಾಗಿ ತಲೆಯ ನಿಯಂತ್ರಣ ಸಾಧನೆ ಆಗದೆ ಇದ್ದರೆ ಈ ಕೆಳಗಿನ ಅಪಾಯಗಳು ಉಂಟಾಗಬಹುದು:
ಚಲನೆಯ ಸಾಮರ್ಥ್ಯದಲ್ಲಿ ವಿಳಂಬ
ಕುತ್ತಿಗೆಯ ನಿಯಂತ್ರಣ ಸಾಧನೆಯಲ್ಲಿ ವಿಳಂಬವು ಇತರ ಚಲನೆಯ ಮೈಲಿಗಲ್ಲುಗಳನ್ನು ಸಾಧಿಸುವುದನ್ನು ವಿಳಂಬವಾಗಿಸಬಹುದು. ಇದರಿಂದ ಶಿಶುವಿನ ಒಟ್ಟಾರೆ ದೈಹಿಕ ಬೆಳವಣಿಗೆ ಮತ್ತು ಇತರ ಚಲನೆಯ ಕೌಶಲಗಳು ಮೈಗೂಡುವುದರ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಬಹುದು.
ಸ್ನಾಯು ದೌರ್ಬಲ್ಯ
ಕುತ್ತಿಗೆಯ ಚಲನೆಯ ಮೇಲೆ ನಿಯಂತ್ರಣದ ಕೊರತೆಯು ಕುತ್ತಿಗೆಯ ಸ್ನಾಯುಗಳ ದೌರ್ಬಲ್ಯದ ಸೂಚನೆಯಾಗಿರುತ್ತದೆ. ಇದರಿಂದಾಗಿ ಬೆನ್ನಿನ ಮೇಲ್ಭಾಗ ಸದೃಢಗೊಳ್ಳುವುದಕ್ಕೆ ತೊಂದರೆಯಾಗಬಹುದು, ತೋಳುಗಳಿಂದ ಭಾರ ಹೊರುವ, ನಿಲ್ಲುವ ಮತ್ತು ದೇಹದ ಒಟ್ಟಾರೆ ಸಂಯೋಜನೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗುತ್ತದೆ.
ದೃಷ್ಟಿ ಮತ್ತು ಗ್ರಹಿಸುವಿಕೆಯ ಸವಾಲುಗಳು
ಕುತ್ತಿಗೆಯ ನಿಯಂತ್ರಣದ ಕೊರತೆಯಿಂದಾಗಿ ಶಿಶುವಿಗೆ ತನ್ನ ಸುತ್ತಲಿನ ಪರಿಸರವನ್ನು ಸಕ್ರಿಯವಾಗಿ ಪರಿಶೋಧಿಸಲು ಮತ್ತು ಪ್ರಚೋದನೆಗಳಿಗೆ ತಕ್ಕ ಪ್ರತಿಸ್ಪಂದನೆ ನೀಡಲು ಅಡ್ಡಿಯುಂಟಾಗುತ್ತದೆ. ಇದರಿಂದ ದೃಷ್ಟಿ ಸಂಬಂಧಿ ಬೆಳವಣಿಗೆಗಳು, ಅವಕಾಶದ ಅರಿವು ಮತ್ತು ಗ್ರಹಣ ಸಾಮರ್ಥ್ಯ ಸಂಬಂಧಿ ತೊಂದರೆಗಳು ಉಂಟಾಗುತ್ತವೆ.
ಸಂವಹನದಲ್ಲಿ ತೊಂದರೆ
ಕುತ್ತಿಗೆಯ ಚಲನೆಯ ಮೇಲಿನ ನಿಯಂತ್ರಣಕ್ಕೂ ಭಾಷೆ ಮತ್ತು ಮಾತಿನ ಕೌಶಲಗಳ ಬೆಳವಣಿಗೆಗೂ ನಿಕಟ ಸಂಬಂಧ ಇದೆ. ಕುತ್ತಿಗೆಯ ನಿಯಂತ್ರಣ ಸಾಧನೆ ವಿಳಂಬವಾದ ಮಕ್ಕಳು ಮಾತು ಮತ್ತು ಸಂವಾದ ಕೌಶಲಕ್ಕೆ ಅಗತ್ಯವಾದ ಬಾಯಿಯ ಸ್ನಾಯು ನಿಯಂತ್ರಣ ಸಾಧನೆಯಲ್ಲಿಯೂ ಸವಾಲುಗಳನ್ನು ಎದುರಿಸಬಹುದು.
ಶೀಘ್ರ ಆರೈಕೆ ಮತ್ತು ನೆರವು
ಕುತ್ತಿಗೆಯ ನಿಯಂತ್ರಣದ ಪ್ರಾಮುಖ್ಯವನ್ನು ಅರಿತುಕೊಳ್ಳುವ ಮೂಲಕ ಹೆತ್ತವರು ಮತ್ತು ಆರೈಕೆದಾರರು ಶಿಶುವಿನ ಕೌಶಲಾಭಿವೃದ್ಧಿಯಲ್ಲಿ ಕ್ರಿಯಾತ್ಮಕ ಪಾತ್ರ ವಹಿಸಬಹುದಾಗಿದೆ.
ಶಿಶುವನ್ನು ಹೆತ್ತವರು ಅಥವಾ ಆರೈಕೆದಾರರು ತಮ್ಮ ಮೇಲ್ವಿಚಾರಣೆಯಲ್ಲಿ ನಿರ್ದಿಷ್ಟ ಸಮಯ ಅದರ ಹೊಟ್ಟೆ ಅಡಿಯಾಗಿ ಕವುಚಿ ಮಲಗಿಸುವುದು ಕುತ್ತಿಗೆ ಮತ್ತು ದೇಹದ ಮೇಲ್ಭಾಗ ಸದೃಢಗೊಳ್ಳುವುದಕ್ಕೆ ಒಂದು ಉತ್ತಮ ಅಭ್ಯಾಸವಾಗಿದೆ. ಈ ಸಮಯದಲ್ಲಿ ಶಿಶುವಿಗೆ ವೈವಿಧ್ಯಮಯ ಆಕಾರ, ಬಣ್ಣಗಳು ಮತ್ತು ಸುರಕ್ಷಿತ ವಸ್ತುಗಳನ್ನು ಒದಗಿಸುವ ಮೂಲಕ ಮಗುವು ತನ್ನ ಕುತ್ತಿಗೆಯ ಸ್ನಾಯುಗಳ ಬಲವನ್ನು ವೃದ್ಧಿಸುವಲ್ಲಿ ಸಹಕಾರಿಯಾಗುತ್ತದೆ.
ಕುತ್ತಿಗೆಯ ನಿಯಂತ್ರಣ ಸಾಧನೆ ವಿಳಂಬವಾದ ಪ್ರಕರಣಗಳಲ್ಲಿ ಮಕ್ಕಳ ತಜ್ಞರು ಮತ್ತು ಮಕ್ಕಳ ಬೆಳವಣಿಗೆಯ ತಜ್ಞರ (ಫಿಸಿಯೋಥೆರಪಿ ವಿಭಾಗ) ಜತೆಗೆ ಸಮಾಲೋಚನೆ ನಡೆಸುವುದು ನಿರ್ಣಾಯಕವಾಗಿದೆ. ಶೀಘ್ರ ಆರೈಕೆಯ ಯೋಜನೆಗಳು, ದೈಹಿಕ ಚಿಕಿತ್ಸೆ ಮತ್ತು ಗುರಿ ನಿರ್ದೇಶಿತ ವ್ಯಾಯಾಮಗಳು ಅಂತರ್ಗತ ಸಮಸ್ಯೆಗಳನ್ನು ನಿಭಾಯಿಸಲು ಹಾಗೂ ಚಲನೆಯ ಮತ್ತು ಇಂದ್ರಿಯ ಗ್ರಹಣ ಕೌಶಲಗಳ ಬೆಳವಣಿಗೆಯಲ್ಲಿ ನೆರವು ನೀಡುತ್ತವೆ.
ಪ್ರತೀ ಸಾಧನೆಯೂ ಭವಿಷ್ಯದ ಪ್ರಗತಿಗೆ ಮೆಟ್ಟಿಲಾಗುವ ಪ್ರಸ್ತುತ ಜಗತ್ತಿನಲ್ಲಿ ಶಿಶು ತನ್ನ ಕುತ್ತಿಗೆಯ ಮೇಲೆ ನಿಯಂತ್ರಣ ಹೊಂದುವುದು ಬೆಳವಣಿಗೆಯಲ್ಲಿ ಒಂದು ಗಮನಾರ್ಹ ಮೈಲಿಗಲ್ಲಾಗಿದೆ. ಅದರ ಪ್ರಾಮುಖ್ಯವನ್ನು ಅರ್ಥ ಮಾಡಿಕೊಂಡು ಅಗತ್ಯವಿದ್ದಾಗ ಸಮಯಕ್ಕೆ ಸರಿಯಾಗಿ ನೆರವನ್ನು ಪಡೆದುಕೊಳ್ಳುವ ಮೂಲಕ ನಾವು ನಮ್ಮ ಮಕ್ಕಳು ತಮ್ಮ ದೈಹಿಕ ಮತ್ತು ಇಂದ್ರಿಯ ಗ್ರಹಣಾತ್ಮಕ ಆಯಾಮಗಳಲ್ಲಿ ಸಂಪೂರ್ಣ ಪ್ರಗತಿಯನ್ನು ಸಾಧಿಸಲು ಸಹಾಯ ಮಾಡಬಹುದಾಗಿದೆ.
-ಸೃಷ್ಟಿ ಶಾಕ್ಯ,
ಪಿಎಚ್‌ಡಿ ಸಂಶೋಧನ ವಿದ್ಯಾರ್ಥಿನಿ
–ಡಾ| ಭಾಮಿನಿ ಕೃಷ್ಣ ರಾವ್,
ಪ್ರೊಫೆಸರ್, ಮಕ್ಕಳ ಫಿಸಿಯೋಥೆರಪಿ ವಿಭಾಗ,
ಎಂಸಿಎಚ್‌ಪಿ, ಮಾಹೆ, ಮಣಿಪಾಲ
–ಡಾ| ಹಿತೇಶ್ ಶಾ,
ಆರ್ಥೋಪೆಡಿಕ್ ಸರ್ಜನ್,
ಆರ್ಥೋಪೆಡಿಕ್ ವಿಭಾಗ, ಕೆಎಂಸಿ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆರ್ಥೋಪೆಡಿಕ್ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RSS: ಮೋಹನ್ ಭಾಗವತರ ಮಂದಿರ,ಮಸೀದಿ ಹೇಳಿಕೆಗೆ ಈಗ ಆರೆಸ್ಸೆಸ್ ಪತ್ರಿಕೆ ಆಕ್ಷೇಪ
Telangana: ಕಾನೂನು ಪಾಲನೆ ಕಡ್ಡಾಯ: ತೆಲುಗು ಚಿತ್ರರಂಗಕ್ಕೆ ತೆಲಂಗಾಣ ಸಿಎಂ ಖಡಕ್ ಮಾತು
Controversy: ಕಾಂಗ್ರೆಸ್ ಪೋಸ್ಟರ್‌ನಲ್ಲಿ ಪಿಒಕೆ ತಪ್ಪಾಗಿ ಚಿತ್ರಣ; ಬಿಜೆಪಿ ತೀವ್ರ ಆಕ್ರೋಶ
Tollywood: ಹೊಸ ವರ್ಷಕ್ಕೆ ಟಾಲಿವುಡ್‌ನಲ್ಲಿ ಸಾಲು ಸಾಲು ಹಳೆ ಸಿನಿಮಾಗಳು ರೀ- ರಿಲೀಸ್
Kambala: ಡಿ.28-29ರಂದು 8ನೇ ವರ್ಷದ ‘ಮಂಗಳೂರು ಕಂಬಳ’: ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.