ಅಂತಾರಾಷ್ಟ್ರೀಯ ಫ್ಲೂ ದಿನ: ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ
Team Udayavani, Nov 10, 2024, 12:11 PM IST
ಪ್ರತೀ ವರ್ಷ ನವೆಂಬರ್ 1 ದಿನಾಂಕವನ್ನು ಅಂತಾರಾಷ್ಟ್ರೀಯ ಫ್ಲೂ ದಿನವಾಗಿ ಆಚರಿಸಲಾಗುತ್ತದೆ. 1918ರಲ್ಲಿ ಇನ್‌ಫುಯೆಂಜಾ ಕಾಯಿಲೆಯು ಒಂದು ಸಾಂಕ್ರಾಮಿಕ ರೋಗವಾಗಿ ಜಗತ್ತಿನಾದ್ಯಂತ ಹಾಹಾಕಾರ ಎಬ್ಬಿಸಿದ್ದನ್ನು ಸ್ಮರಿಸುವ ಮತ್ತು ಇನ್ ಫ್ಲುಯೆಂಜಾದಿಂದ ಪ್ರಸ್ತುತ ಕಾಲಘಟ್ಟದಲ್ಲಿಯೂ ಇರುವ ಅಪಾಯಗಳ ಬಗ್ಗೆ ತಿಳಿವಳಿಕೆ ಹೊಂದುವುದಕ್ಕೆ ಈ ದಿನವನ್ನು ಮೀಸಲಿಡಲಾಗಿದೆ. ಸಾರ್ವತ್ರಿಕವಾದ ಫ್ಲೂ ಲಸಿಕೆಯೊಂದನ್ನು ಅಭಿವೃದ್ಧಿಪಡಿಸುವುದರಂತಹ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ವೈಜ್ಞಾನಿಕ ಸಂಶೋಧನೆಯನ್ನು ಇದು ಉತ್ತೇಜಿಸುತ್ತದೆ ಹಾಗೂ ಫ್ಲೂ ತಡೆ ಮತ್ತು ನಿಯಂತ್ರಣದಂತಹ ಪ್ರಯತ್ನಗಳಿಗೆ ಜಾಗತಿಕ ಬದ್ಧತೆಯನ್ನು ಸಾರುತ್ತದೆ.
ಇನ್‌ಫ್ಲುಯೆಂಜಾದ ಇತಿಹಾಸ: ಶತಮಾನ ದೀರ್ಘ ಹೋರಾಟ
ಇನ್‌ಫುಯೆಂಜಾವು ಶತಮಾನಗಳಿಂದ ಮಾನವ ಇತಿಹಾಸದ ಭಾಗವಾಗಿ ಸಾಗಿಬಂದಿದೆ. ಆದರೆ ಈ ವೈರಾಣು ಜಾಗತಿಕವಾಗಿ ಪ್ರಾಮುಖ್ಯ ಪಡೆದುದು 1918ರ ಸ್ಪಾನಿಶ್ ಫ್ಲೂ ಸಾಂಕ್ರಾಮಿಕ ಹಾವಳಿಯ ಮೂಲಕ. ಈ ಸಾಂಕ್ರಾಮಿಕ ಹಾವಳಿಯು ಸುಮಾರು 50 ದಶಲಕ್ಷ, ಅಂದರೆ ಆ ಕಾಲದಲ್ಲಿ ಜಗತ್ತಿನ ಜನಸಂಖ್ಯೆಯ ಮೂರನೇ ಒಂದರಷ್ಟು ಭಾಗದಷ್ಟು ಮಂದಿಯನ್ನು ಬಾಧಿಸಿತ್ತು ಹಾಗೂ ಸುಮಾರು 5 ದಶಲಕ್ಷ ಮಂದಿಯ ಸಾವಿಗೆ ಕಾರಣವಾಗಿತ್ತು. ಆ ಬಳಿಕ ಫ್ಲೂ ವೈರಾಣು ಮತ್ತಷ್ಟು ವಿಕಾಸಗೊಂಡಿದೆ ಮತ್ತು 1957ರ ಏಶ್ಯನ್ ಫ್ಲೂ ಮತ್ತು 2009ರ ಎಚ್1ಎನ್1ರಂತೆ ಆಗಾಗ ಹಾವಳಿ ಉಂಟು ಮಾಡಿದೆ. ಕಳೆದ ಒಂದು ನೂರು ವರ್ಷಗಳಲ್ಲಿ ವೈರಾಣುಗಳ ವಿರುದ್ಧ ಲಸಿಕೆಗಳು ಮತ್ತು ಔಷಧಗಳನ್ನು ಅಭಿವೃದ್ಧಿಪಡಿಸಿಐ ಹೋರಾಟ ನಡೆಸುವಲ್ಲಿ ವಿಜ್ಞಾನವು ಸಾಕಷ್ಟು ಪ್ರಗತಿ ಕಂಡಿದೆ. ಆದರೆ ಫ್ಲೂ ಅತೀ ಕ್ಷಿಪ್ರವಾಗಿ ಬದಲಾವಣೆಗಳನ್ನು ಹೊಂದಲು ಶಕ್ತವಾಗಿರುವುದರಿಂದಾಗಿ ಅದು ಇಂದಿಗೂ ಒಂದು ದೊಡ್ಡ ಸವಾಲೇ ಆಗಿದೆ. ಫ್ಲೂ ವೈರಾಣುವಿನ ಈ ಪರಿವರ್ತನೆಯ ಶಕ್ತಿಯಿಂದಾಗಿ ಪ್ರತೀ ವರ್ಷ ನಾವು ಹೊಸ ಲಸಿಕೆಗಳನ್ನು ಸೃಷ್ಟಿಸಬೇಕಾಗಿ ಬಂದಿದೆ. ಫ್ಲೂ ವೈರಾಣುವಿನ ಮೇಲೆ ಸದಾ ಒಂದು ಕಣ್ಣು ಇರಿಸಿಕೊಂಡು ಅದನ್ನು ಎದುರಿಸಲು ಸದಾ ಸನ್ನದ್ಧವಾಗಿ ಇರಬೇಕಾದುದರ ಪ್ರಾಮುಖ್ಯವನ್ನು ಇದು ಒತ್ತಿ ಹೇಳುತ್ತದೆ.
ಇನ್‌ಫ್ಲುಯೆಂಜಾ ಎಂದರೆ ಏನು?
ಋತುಮಾನೀಯ ಇನ್‌ಫ್ಲುಯೆಂಜಾ ಅಥವಾ ಸೀಸನಲ್ ಇನ್‌ಫ್ಲುಯೆಂಜಾ ಅಥವಾ ಸರಳವಾಗಿ ಹೇಳುವ ಫ್ಲೂ ಎಂಬುದು ಇನ್‌ಫ್ಲುಯೆಂಜಾ ವೈರಾಣುಗಳಿಂದ ಉಂಟಾಗುವ ಅಲ್ಪಕಾಲೀನ ಶ್ವಾಸಾಂಗ ಸೋಂಕು ರೋಗ. ಇದು ಜಗತ್ತಿನ ಎಲ್ಲ ಭಾಗಗಳಲ್ಲಿಯೂ ಕಂಡುಬರುತ್ತದೆ. ಇನ್‌ಫ್ಲುಯೆಂಜಾ ಎ ವೈರಾಣುವು ಮನುಷ್ಯರು, ಪ್ರಾಣಿಗಳು ಮತ್ತು ಪಕ್ಷಿಗಳನ್ನು ಬಾಧಿಸಬಹುದಾಗಿದ್ದು, ಆಗಾಗ ಸಾಂಕ್ರಾಮಿಕವಾಗಿ ಕಂಡುಬರುತ್ತದೆ. ಇನ್ ಫ್ಲುಯೆಂಜಾ ಬಿ ವೈರಾಣುವು ಪ್ರಧಾನವಾಗಿ ಮನುಷ್ಯರಲ್ಲಿ ಸೋಂಕಿಗೆ ಕಾರಣವಾಗುತ್ತಿದ್ದು, ಋತುಮಾನೀಯ ಹಾವಳಿಗಳನ್ನು ಉಂಟು ಮಾಡುತ್ತದೆ. ಇನ್‌ಫ್ಲುಯೆಂಜಾ ಸಿ ವೈರಾಣುವು ಶ್ವಾಸಾಂಗದ ಲಘು ರೋಗ ಲಕ್ಷಣಗಳಿಗೆ ಕಾರಣವಾಗುತ್ತದೆಯಾಗಿದ್ದು, ವ್ಯಾಪಕವಾಗಿ ಹಬ್ಬುವುದು ಅಪರೂಪ. ಇನ್‌ಫ್ಲುಯೆಂಜಾ ಡಿ ವೈರಾಣುವು ಪ್ರಧಾನವಾಗಿ ಪಶುಗಳಲ್ಲಿ ಸೋಂಕು ಲಕ್ಷಣಗಳಿಗೆ ಕಾರಣವಾಗಬಲ್ಲುದಾಗಿದ್ದು, ಮನುಷ್ಯರಿಗೆ ಅಪಾಯ ಉಂಟು ಮಾಡುವುದು ಕಡಿಮೆ. ಈ ಇಷ್ಟು ಇನ್‌ಫ್ಲುಯೆಂಜಾ ವೈರಾಣು ತಳಿಗಳಲ್ಲಿ ಇನ್‌ಫ್ಲುಯೆಂಜಾ ಎ ಮತ್ತು ಬಿಗಳು ಪ್ರಮುಖವಾಗಿ ಚಳಿಗಾಲದ ತಿಂಗಳಲ್ಲಿ ಋತುಮಾನೀಯ ಫ್ಲೂ ಅಥವಾ ಶೀತಜ್ವರ ಹಾವಳಿ ಉಂಟಾಗುವುದಕ್ಕೆ ಪ್ರಧಾನ ಕಾರಣಗಳಾಗಿರುತ್ತವೆ.
ಫ್ಲೂ ಯಾವುದೇ ವಯಸ್ಸಿನವರನ್ನು ಬಾಧಿಸಬಹುದು; ಆದರೆ ಕೆಲವು ವಯೋಮಾನದವರು ಇದರಿಂದ ತೀವ್ರ ಅನಾರೋಗ್ಯ ಅಥವಾ ಸಂಕೀರ್ಣ ಸಮಸ್ಯೆಗಳಿಗೆ ತುತ್ತಾಗುವ ಸಾಧ್ಯತೆಗಳಿರುತ್ತವೆ. ಇಂತಹವರಲ್ಲಿ ಗರ್ಭಿಣಿಯರು, ಮಹಿಳೆಯರು, 5 ವರ್ಷಕ್ಕಿಂತ ಕೆಳಗಿನ ಮಕ್ಕಳು, ವಯೋವೃದ್ಧರು ಹಾಗೂ ದೀರ್ಘಕಾಲೀನ ಅನಾರೋಗ್ಯಗಳಾದ ಹೃದ್ರೋಗಗಳು, ಶ್ವಾಸಕೋಶ ಕಾಯಿಲೆಗಳು, ಮೂತ್ರಪಿಂಡ ರೋಗಗಳು, ಪಿತ್ತಕೋಶ ಕಾಯಿಲೆಗಳು ಅಥವಾ ಚಯಾಪಚಯ ಕ್ರಿಯೆಗೆ ಸಂಬಂಧಿಸಿದ ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದ್ದಾರೆ. ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವ ಎಚ್‌ಐವಿ, ಕ್ಯಾನ್ಸರ್ ರೋಗಿಗಳು ಅಥವಾ ಕಿಮೋಥೆರಪಿ ಯಾ ಸ್ಟಿರಾಯ್ಡ ಚಿಕಿತ್ಸೆಗೆ ಒಳಗಾಗುತ್ತಿರುವವರು ಕೂಡ ಇನ್‌ಫ್ಲುಯೆಂಜಾದಿಂದ ತೊಂದರೆಗೆ ಸಿಲುಕಬಹುದಾಗಿದೆ. ಫ್ಲೂ ರೋಗ ಲಕ್ಷಣಗಳು ಲಘು ಸ್ವರೂಪದಿಂದ ತೀವ್ರ ಸ್ವರೂಪದ ವರೆಗೆ ಇರಬಹುದು; ಇದೇವೇಳೆ ವಿವಿಧ ದೀರ್ಘಕಾಲೀನ ಅನಾರೋಗ್ಯಗಳಿಂದ ಬಳಲುತ್ತಿರುವವರು ಅಥವಾ ರೋಗ ನಿರೋಧಕ ಶಕ್ತಿ ದುರ್ಬಲಗೊಂಡಿರುವವರು ಗಂಭೀರವಾದ ಸಂಕೀರ್ಣ ಸಮಸ್ಯೆಗಳಿಗೆ ಒಳಗಾಗಬಹುದಾಗಿದೆ.
ಆರೋಗ್ಯ ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರು ಫ್ಲೂ ರೋಗಿಗಳ ನಿಕಟ ಸಂಪರ್ಕಕ್ಕೆ ಆಗಾಗ ಬರುವುದರಿಂದ ಅವರು ಫ್ಲೂ ಸೋಂಕಿಗೆ ತುತ್ತಾಗುವುದು ಅಥವಾ ಅದರ ಹರಡುವಿಕೆಗೆ ಕಾರಣವಾಗುವ ಅಪಾಯ ಹೆಚ್ಚಿರುತ್ತದೆ.
ಇನ್‌ಫ್ಲುಯೆಂಜಾ ಹೇಗೆ ಹರಡುತ್ತದೆ?
ಸೋಂಕುಪೀಡಿತ ವ್ಯಕ್ತಿಯು ಕೆಮ್ಮಿದಾಗ, ಸೀನಿದಾಗ ಅಥವಾ ಮಾತನಾಡಿದಾಗ ಆತನ ಶ್ವಾಸಾಂಗದಿಂದ ಹೊರಬೀಳುವ ವೈರಾಣು ಪೂರಿತ ಹನಿಬಿಂದುಗಳಿಂದ ಇನ್‌ಫ್ಲುಯೆಂಜಾ ಇನ್ನೊಬ್ಬರಿಗೆ ಹರಡುತ್ತದೆ. ಈ ಹನಿಬಿಂದುಗಳು ಗಾಳಿಯಲ್ಲಿ ತೇಲಿಹೋಗಿ ಹತ್ತಿರದಲ್ಲಿರುವ ಆರೋಗ್ಯವಂತರ ಉಸಿರಾಟದ ಮೂಲಕ ಅವರ ದೇಹವನ್ನು ಪ್ರವೇಶಿಸಬಹುದು ಅಥವಾ ನೆಲ ಅಥವಾ ಇತರ ವಸ್ತುಗಳ ಮೇಲ್ಮೈಯಲ್ಲಿ ನೆಲೆಯಾಗಬಹುದಾಗಿದ್ದು, ಅಲ್ಲಿ ವೈರಾಣುಗಳು ತಾಸುಗಟ್ಟಲೆ ಜೀವಂತ ಇರಬಲ್ಲವು. ಇಂತಹ ಮೇಲ್ಮೈಗಳನ್ನು ಆರೋಗ್ಯವಂತರು ಸ್ಪರ್ಶಿಸಿ ಬಳಿಕ ತಮ್ಮ ಮೂಗು, ಬಾಯಿ ಅಥವಾ ಕಣ್ಣು ಇತ್ಯಾದಿ ಅಂಗಗಳನ್ನು ಸ್ಪರ್ಶಿಸಿದಾಗ ವೈರಾಣುಗಳು ಅವರ ದೇಹವನ್ನು ಪ್ರವೇಶಿಸುತ್ತವೆ.
ಫ್ಲೂ ಸೋಂಕು ಪೀಡಿತರು ಫ್ಲೂ ರೋಗಲಕ್ಷಣಗಳು ಕಾಣಿಸಿಕೊಳ್ಳುವ ಸರಿಸುಮಾರು ಒಂದು ದಿನ ಹಿಂದಿನಿಂದ ತೊಡಗಿ ರೋಗಪೀಡಿತರಾದ ಬಳಿಕ ಸುಮಾರು 5ರಿಂದ 7 ದಿನಗಳ ವರೆಗೆ ಸೋಂಕುಕಾರಕರಾಗಿರುತ್ತಾರೆ. ಹೀಗಾಗಿ ಅವರು ವೈರಾಣುಗಳನ್ನು ತಮಗೆ ಗೊತ್ತಿಲ್ಲದೆಯೇ ಪ್ರಸಾರ ಮಾಡುತ್ತಿರುತ್ತಾರೆ. ಕಚೇರಿಗಳು, ಶಾಲೆಗಳು ಮತ್ತು ಸಾರ್ವಜನಿಕ ಸಾರಿಗೆಗಳಂತಹ ಮುಚ್ಚಿದ ಪ್ರದೇಶಗಳು ವೈರಾಣು ಪ್ರಸಾರಕ್ಕೆ ಹೆಚ್ಚು ಅನುಕೂಲಕರ ವಾತಾವರಣ ಹೊಂದಿರುತ್ತವೆ.
ಇನ್‌ಫ್ಲುಯೆಂಜಾ ಲಕ್ಷಣಗಳನ್ನು ಗುರುತಿಸುವುದು
ಪ್ರಧಾನ ಲಕ್ಷಣಗಳಲ್ಲಿ ಅತ್ಯುಚ್ಚ ಡಿಗ್ರಿಯ ಜ್ವರ (ಸಾಮಾನ್ಯವಾಗಿ 100 ಡಿಗ್ರಿ ಫ್ಯಾರನ್ ಹೀಟ್ ಅಥವಾ 37 ಡಿಗ್ರಿ ಸೆಂಟಿಗ್ರೇಡ್), ದೇಹದಲ್ಲಿ ತೀವ್ರ ನೋವು, ಚಳಿ ಮತ್ತು ದಣಿವು ಸೇರಿವೆ. ಗಂಟಲು ನೋವು ಮತ್ತು ಸತತ ಕೆಮ್ಮು ಕೂಡ ಕಾಣಿಸಿಕೊಳ್ಳಬಹುದಾಗಿದ್ದು, ಜತೆಗೆ ಮೂಗಿನಿಂದ ಸತತ ಸಿಂಬಳ ಸುರಿಯುವುದು ಅಥವಾ ಮೂಗು ಕಟ್ಟುವುದು ಕೂಡ ಸೇರಿರುತ್ತವೆ.
ಇನ್‌ಫ್ಲುಯೆಂಜಾ ಅರಿವು ಮತ್ತು ತಡೆ: ಕಾರ್ಯಾಚರಣೆಯ ಕರೆ
ತಲೆನೋವು ಸಾಮಾನ್ಯವಾಗಿದ್ದು, ಅನೇಕ ಫ್ಲೂಪೀಡಿತರು ಜ್ವರ ಕಡಿಮೆಯಾದ ಬಳಿಕವೂ ತೀವ್ರ ಸುಸ್ತು ಮತ್ತು ದಣಿವನ್ನು ಅನುಭವಿಸುತ್ತಾರೆ. ಕೆಲವು ಪ್ರಕರಣಗಳಲ್ಲಿ, ವಿಶೇಷವಾಗಿ ಮಕ್ಕಳಲ್ಲಿ, ಹೊಟ್ಟೆ ತೊಳೆಸು ವಿಕೆ, ವಾಂತಿ ಅಥವಾ ಬೇಧಿ ಕೂಡ ಕಾಣಿಸಿಕೊಳ್ಳಬಹುದು. ರೋಗ ಲಕ್ಷಣಗಳು 5ರಿಂದ 7 ದಿನಗಳ ಕಾಲ ಇರುತ್ತವೆ. ಬಹುತೇಕ ಮಂದಿ ಜ್ವರ ಮತ್ತು ಇತರ ಲಕ್ಷಣಗಳಿಂದ ಒಂದು ವಾರದ ಅವಧಿಯಲ್ಲಿ ವೈದ್ಯಕೀಯ ಚಿಕಿತ್ಸೆಯ ಅಗತ್ಯವಿಲ್ಲದೆ ಚೇತರಿಸಿಕೊಳ್ಳುತ್ತಾರಾದರೂ ನಿರ್ದಿಷ್ಟವಾಗಿ ಅತೀ ಅಪಾಯ ಸಾಧ್ಯತೆಯುಳ್ಳ ವ್ಯಕ್ತಿಗಳಲ್ಲಿ ಅನಾರೋಗ್ಯವು ಗಂಭೀರ ಸ್ವರೂಪವನ್ನು ತಾಳಬಹುದಾಗಿದೆ.
ಇನ್‌ಫ್ಲುಯೆಂಜಾವು ಈಗಾಗಲೇ ಇರುವ ದೀರ್ಘಕಾಲೀನ ಅನಾರೋಗ್ಯಗಳು ಉಲ್ಬಣಗೊಳ್ಳುವಂತೆ ಮಾಡಬಹುದಾಗಿದೆ. ಜತೆಗೆ ತೀವ್ರ ಸ್ವರೂಪದ ಪ್ರಕರಣಗಳಲ್ಲಿ ಇನ್ ಫ್ಲುಯೆಂಜಾವು ನ್ಯುಮೋನಿಯಾ ಅಥವಾ ಬ್ರಾಂಕೈಟಿಸ್‌ನಂತಹ ಸಂಕೀರ್ಣ ಸಮಸ್ಯೆಗಳಿಗೆ ದಾರಿ ಮಾಡಿಕೊಡಬಹುದು. ಹೀಗಾಗಿ ದೀರ್ಘಕಾಲೀನ ಅನಾರೋಗ್ಯಗಳು ಅಥವಾ ತೀವ್ರ ಸ್ವರೂಪದ ಲಕ್ಷಣಗಳನ್ನು ಹೊಂದಿರು ವವರು ಸಂಕೀರ್ಣ ಸಮಸ್ಯೆಗಳು ಉಂಟಾಗುವುದನ್ನು ತಡೆಯಲು ವೈದ್ಯಕೀಯ ಆರೈಕೆಯನ್ನು ಪಡೆದುಕೊಳ್ಳಬೇಕು.
-ಮುಂದಿನ ವಾರಕ್ಕೆ
–ಡಾ| ಅನಿತಾ ಜೆ.
ಅಸೋಸಿಯೇಟ್ ಪ್ರೊಫೆಸರ್
-ಪ್ರಾಚಿ ಮಲಸಾನೆ
ಪ್ರೊಜೆಕ್ಟ್ ಅಸೋಸಿಯೇಟ್
-ಪ್ರಸಾದ್ ವಾರಂಬಳ್ಳಿ
ರಿಸರ್ಚ್ ಅಸಿಸ್ಟೆಂಟ್
ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ,
ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಇನ್‌ಫೆಕ್ಷಿಯಸ್ ಡಿಸೀಸಸ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kidney Stones: ಮೂತ್ರಪಿಂಡದ ಕಲ್ಲುಗಳು ಕ್ಯಾನ್ಸರ್ ಆಗಬಲ್ಲುದೇ?
Kawasaki disease: ಕಾವಾಸಾಕಿ ಕಾಯಿಲೆ- ನಾವೇಕೆ ಹೆಚ್ಚು ಗಮನ ಹರಿಸುತ್ತಿಲ್ಲ?
PSA test: ಪಿಎಸ್‌ಎ ಪರೀಕ್ಷೆ ಎಂದರೇನು?
Meningitis: ಮೆನಿಂಜೈಟಿಸ್ ಲಕ್ಷಣಗಳು, ಕಾರಣಗಳು, ಅಪಾಯಗಳು, ಪ್ರಸರಣ ಮತ್ತು ಚಿಕಿತ್ಸೆ
Ear: ಶೀಘ್ರ ಪತ್ತೆಯಿಂದ ಗರಿಷ್ಠ ಫಲಿತಾಂಶ- ನವಜಾತ ಶಿಶು ಶ್ರವಣ ಪರೀಕ್ಷೆಯ ನಿರ್ಣಾಯಕ ಪಾತ್ರ
MUST WATCH
ಹೊಸ ಸೇರ್ಪಡೆ
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ
Ullala: ಬಿದ್ದು ಸಿಕ್ಕಿದ್ದ 2.5 ಲ.ರೂ. ಮೌಲ್ಯದ ಚಿನ್ನಾಭರಣ ಮರಳಿಸಿದ ಯುವಕ!
Mangaluru:ವಿಮಾನ ನಿಲ್ದಾಣದಲ್ಲಿ ಕಳೆದು ಹೋದ ಚಿನ್ನದ ಸರ; ಮಾಲಕರಿಗೆ ಒಪ್ಪಿಸಿದ ಸಿಐಎಸ್‌ಎಫ್