Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ
Team Udayavani, Sep 29, 2024, 12:22 PM IST
ಪರಿಚಯ
ಕಬ್ಬಿಣದಂಶ ಕೊರತೆಯು ಅತೀ ವ್ಯಾಪಕವಾಗಿರುವ ಪೌಷ್ಟಿಕಾಂಶ ಸಮಸ್ಯೆಯಾಗಿದ್ದು, ಜಗತ್ತಿನಾದ್ಯಂತ ವಿವಿಧ ವಯಸ್ಸಿನ ಕೋಟ್ಯಂತರ ಮಂದಿ ಇದರಿಂದ ಬಳಲುತ್ತಿದ್ದಾರೆ. ಕಬ್ಬಿಣದಂಶ ಕೊರತೆಯು ಸಾಮಾನ್ಯವಾಗಿ ರಕ್ತಹೀನತೆಯ ಜತೆಗೆ – ಹಿಮೊಗ್ಲೋಬಿನ್ ಮಟ್ಟ ಕಡಿಮೆಯಾಗುವುದರ ಜತೆಗೆ ಸಂಬಂಧ ಹೊಂದಿದೆ. ಆದರೆ ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆ (ನಾನ್ ಅನೀಮಿಕ್ ಅಯರ್ನ್ ಡಿಫೀಶಿಯೆನ್ಸಿ – ಎನ್‌ಎಐಡಿ) ಎಂಬ ಇನ್ನೊಂದು ವಿಧವೂ ಇದೆ. ಎನ್‌ಎಐಡಿಯಲ್ಲಿ ಕಬ್ಬಿಣದಂಶ ಗಮನಾರ್ಹವಾಗಿ ಕಡಿಮೆ ಇರುತ್ತದಾದರೂ ರಕ್ತಹೀನತೆ ಇರುವುದಿಲ್ಲ. ಎನ್‌ಎಐಡಿಯ ಲಕ್ಷಣಗಳು ಮತ್ತು ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಮತ್ತು ಸೀರಂ ಫೆರಿಟಿನ್ ನಂತಹ ಪರೀಕ್ಷೆಗಳು ಈ ಸ್ಥಿತಿಯನ್ನು ಪತ್ತೆ ಮಾಡಲು ನೆರವಾಗುತ್ತವೆ. ಈ ವಿಷಯವನ್ನು ಚರ್ಚಿಸುವ ಲೇಖನ ಇದು.
ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆ
ಎನ್‌ಎಐಡಿಯು ಹಲವು ಲಕ್ಷಣಗಳನ್ನು ಉಂಟು ಮಾಡಬಹುದಾಗಿದೆ. ಇವು ಲಘು ಸ್ವರೂಪದಲ್ಲಿದ್ದರೂ ದೈನಿಕ ಚಟುವಟಿಕೆಗಳನ್ನು ಸಾಕಷ್ಟು ಬಾಧಿಸಬಹುದು. ಇಂತಹ ಲಕ್ಷಣಗಳು ಎಂದರೆ:
- ದಣಿವು ಮತ್ತು ದೌರ್ಬಲ್ಯ
ರಕ್ತಹೀನತೆ ಇಲ್ಲದಿದ್ದರೂ ಕಬ್ಬಿಣದಂಶ ಕಡಿಮೆ ಇರುವುದು ಶಕ್ತಿಯ ಮಟ್ಟ ಕುಸಿಯಲು ಕಾರಣವಾಗಬಹುದು. ಇದರಿಂದ ಸತತ ದಣಿವು ಮತ್ತು ದೇಹ ದೌರ್ಬಲ್ಯ ಅನುಭವಕ್ಕೆ ಬರಬಹುದು.
- ಇಂದ್ರಿಯ ಗ್ರಹಣ ಮತ್ತು ವರ್ತನಾತ್ಮಕ ಬದಲಾವಣೆಗಳು
ಕಬ್ಬಿಣದಂಶವು ಮೆದುಳು ಸರಿಯಾಗಿ ಕೆಲಸ ಮಾಡಲು ಅತ್ಯಾವಶ್ಯಕ ಅಂಶ. ಕಬ್ಬಿಣದಂಶ ಕಡಿಮೆ ಇದ್ದರೆ ಏಕಾಗ್ರತೆ, ಸ್ಮರಣೆ ಮತ್ತು ಮನೋಭಾವನೆಗಳಲ್ಲಿ ತೊಂದರೆ ಉಂಟಾಗಬಹುದು. ಮಕ್ಕಳಲ್ಲಿ ಇದು ಕಲಿಕೆ ಮತ್ತು ವರ್ತನೆಗೆ ಸಂಬಂಧಿಸಿ ಸಮಸ್ಯೆ ಉಂಟು ಮಾಡಬಹುದು.
- ದೈಹಿಕ ಚಟುವಟಿಕೆಗಳ ಸಾಮರ್ಥ್ಯದಲ್ಲಿ ಕುಸಿತ
ಎನ್‌ಎಐಡಿಗೆ ತುತ್ತಾಗಿರುವ ಕ್ರೀಡಾಳುಗಳು ಸಾಮರ್ಥ್ಯ ಮತ್ತು ಸದೃಢತೆಯ ಕುಸಿತ ಅನುಭವಿಸಬಹುದು. ಯಾಕೆಂದರೆ ಆಮ್ಲಜನಕವು ಸ್ನಾಯುಗಳಿಗೆ ಸರಬರಾಜಾಗಲು ಮತ್ತು ಸ್ನಾಯುಗಳು ಚೆನ್ನಾಗಿ ಕೆಲಸ ಮಾಡಲು ಕಬ್ಬಿಣದಂಶ ಅತ್ಯಗತ್ಯ.
- ಕೂದಲು ಉದುರುವಿಕೆ ಮತ್ತು ಉಗುರುಗಳು ಬಿರುಕುಬಿಡುವುದು
ಕಬ್ಬಿಣದಂಶವು ಚರ್ಮ, ಕೂದಲುಗಳು ಮತ್ತು ಉಗುರುಗಳು ಆರೋಗ್ಯಪೂರ್ಣವಾಗಿ ಇರಲು ಅಗತ್ಯ. ಕಬ್ಬಿಣದಂಶ ಕೊರತೆಯಿಂದ ಕೂದಲು ಉದುರಬಹುದು, ಉಗುರುಗಳು ದುರ್ಬಲವಾಗಿ ಬಿರುಕು ಬಿಡಬಹುದು, ತುಂಡಾಗಬಹುದು.
- ರೆಸ್ಟ್‌ಲೆಸ್ ಲೆಗ್ಸ್ ಸಿಂಡ್ರೋಮ್ (ಆರ್‌ಎಲ್‌ಎಸ್)
ಎನ್‌ಎಐಡಿಯು ಕಾಲುಗಳನ್ನು ಸದಾ ಚಲಿಸುತ್ತಲೇ ಇರಬೇಕು ಎನ್ನುವ ನಿಯಂತ್ರಣ ರಹಿತ ಆಗ್ರಹಕ್ಕೆ ಕಾರಣವಾಗಬಹುದು. ಇದು ಆರ್‌ಎಲ್‌ಎಸ್‌ನ ಒಂದು ಸಾಮಾನ್ಯ ಲಕ್ಷಣವಾಗಿದೆ.
- ಸೋಂಕುಗಳಿಗೆ ತುತ್ತಾಗುವ ಅಪಾಯ ಹೆಚ್ಚಳ
ಕಬ್ಬಿಣದಂಶವು ರೋಗ ನಿರೋಧಕ ಶಕ್ತಿ ಚೆನ್ನಾಗಿರಲು ಸಹಾಯ ಮಾಡುತ್ತದೆ. ಆದ್ದರಿಂದ ಕಬ್ಬಿಣದಂಶ ಕಡಿಮೆಯಾದರೆ ರೋಗ ನಿರೋಧಕ ಶಕ್ತಿ ದುರ್ಬಲವಾಗಿ ಸೋಂಕುಗಳಿಗೆ ಸುಲಭವಾಗಿ ತುತ್ತಾಗಬಹುದು.
ಎನ್‌ಎಐಡಿಯಲ್ಲಿ ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್
ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಅಂಶ Reticulocyte hemoglobin content (CHr)ವು ಕಬ್ಬಿಣದಂಶದ ಸ್ಥಿತಿಗತಿಯನ್ನು ಅಳೆಯಲು ಹೊಸ ವಿಧಾನವಾಗಿದೆ. ರೆಟಿಕ್ಯುಲೊಸೈಟ್ ಗಳು ಪ್ರಬುದ್ಧವಲ್ಲದ ಕೆಂಪು ರಕ್ತ ಕಣಗಳಾಗಿದ್ದು, ಅವು ಹೊಂದಿರುವ ಹಿಮೊಗ್ಲೋಬಿನ್ ಪ್ರಮಾಣವು ಹೊಸ ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಎಷ್ಟು ಕಬ್ಬಿಣದಂಶ ಲಭ್ಯವಿದೆ ಎಂಬುದನ್ನು ಸೂಚಿಸುತ್ತದೆ.
- ಶೀಘ್ರ ಪತ್ತೆ
ಸಿಎಚ್‌ಆರ್ ಪರೀಕ್ಷೆಯಿಂದ ಸಾಮಾನ್ಯ ರಕ್ತ ಪರೀಕ್ಷೆಗಳಾದ ಫೆರಿಟಿನ್ ನಂಥವುಗಳಿಗಿಂತ ಮುಂಚಿತವಾಗಿ ಕಬ್ಬಿಣದಂಶ ಕೊರತೆಯನ್ನು ಪತ್ತೆಹಚ್ಚಬಹುದು. ಕಡಿಮೆ ಸಿಎಚ್ ಆರ್ (28 ಪಿಜಿಗಳಿಗಿಂತ ಕಡಿಮೆ) ಮಟ್ಟವು ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಕಬ್ಬಿಣದಂಶ ಲಭ್ಯವಿಲ್ಲ ಎಂಬುದನ್ನು ರಕ್ತಹೀನತೆಯು ಉಂಟಾಗುವುದಕ್ಕೆ ಮುನ್ನವೇ ಸೂಚಿಸುತ್ತವೆ.
- ಕಬ್ಬಿಣದಂಶ ಪೂರಣ ಚಿಕಿತ್ಸೆಯ ನಿಗಾ
ಕಬ್ಬಿಣದಂಶ ಮರುಪೂರಣ ಚಿಕಿತ್ಸೆಯು ಪ್ರಯೋಜನ ಉಂಟುಮಾಡುತ್ತಿದೆಯೇ ಎಂಬುದನ್ನು ತಿಳಿದುಕೊಳ್ಳಲು ಸಿಎಚ್‌ಆರ್ ಸಹಾಯಕವಾಗಿದೆ. ಕಬ್ಬಿಣದಂಶ ಪೂರಕ ಔಷಧಗಳನ್ನು ಆರಂಭಿಸಿದ ಬಳಿಕ ಸಿಎಚ್‌ಆರ್ ಹೆಚ್ಚಳವಾಗಿರುವುದು ಪರಿಸ್ಥಿತಿ ಸುಧಾರಣೆಯಾಗುತ್ತಿದೆ ಎಂಬುದರ ಸೂಚನೆಯಾಗಿರುತ್ತದೆ.
- ಅನಾರೋಗ್ಯ ಸ್ಥಿತಿಯ ವ್ಯತ್ಯಾಸ ತಿಳಿಯುವುದು
ಎನ್‌ಎಐಡಿಯಿಂದ ಉಂಟಾಗಿರುವ ರಕ್ತಹೀನತೆ ಮತ್ತು ಇತರ ಯಾವುದೇ ದೀರ್ಘಕಾಲೀನ ಕಾಯಿಲೆಯಿಂದ ಉಂಟಾಗಿರುವ ರಕ್ತಹೀನತೆಯ ನಡುವಣ ವ್ಯತ್ಯಾಸವನ್ನು ತಿಳಿಯಲು ಸಿಎಚ್ ಆರ್ ಸಹಾಯ ಮಾಡುತ್ತದೆ. ಇತರ ದೀರ್ಘಕಾಲೀನ ಅನಾರೋಗ್ಯಗಳಿಂದ ಉಂಟಾಗಿರುವ ರಕ್ತಹೀನತೆಯ ಸಂದರ್ಭದಲ್ಲಿ ಕಬ್ಬಿಣದಂಶವು ಜೀವಕೋಶಗಳಲ್ಲಿ ಸಿಲುಕಿ ದೇಹದ ಬಳಕೆಗೆ ಲಭ್ಯವಾಗುವುದಿಲ್ಲ.
ಎನ್‌ಎಐಡಿಯಲ್ಲಿ ಸೀರಂ ಫೆರಿಟಿನ್
ಕಬ್ಬಿಣದಂಶ ದಾಸ್ತಾನನ್ನು ಪತ್ತೆಹಚ್ಚಲು ಉಪಯೋಗಿಸುವ ಸಾಮಾನ್ಯ ಪರೀಕ್ಷೆ ಸೀರಂ ಫೆರಿಟಿನ್. ಫೆರಿಟಿನ್ ದೇಹದಲ್ಲಿ ಕಬ್ಬಿಣದಂಶವನ್ನು ದಾಸ್ತಾನು ಮಾಡಿಕೊಳ್ಳುತ್ತದೆ ಮತ್ತು ಅಗತ್ಯಬಿದ್ದಾಗ ಬಿಡುಗಡೆ ಮಾಡುತ್ತದೆ.
- ಕಬ್ಬಿಣದಂಶ ದಾಸ್ತಾನು ಸೂಚಕ
ಫೆರಿಟಿನ್ ಮಟ್ಟ ಕಡಿಮೆ ಇರುವುದು (30 ಎನ್‌ಜಿ/ಎಂಎಲ್ ಗಿಂತ ಕಡಿಮೆ) ರಕ್ತಹೀನತೆ ಇಲ್ಲದೆ ಇದ್ದರೂ ಕಬ್ಬಿಣದಂಶ ಸಂಗ್ರಹ ಕುಸಿದಿರುವ ಸೂಚನೆಯಾಗಿರುತ್ತದೆ.
- ಉರಿಯೂತ
ಉರಿಯೂತದಿಂದಾಗಿ ಫೆರಿಟಿನ್ ಮಟ್ಟದಲ್ಲಿ ಹೆಚ್ಚಳ ಕಂಡುಬರಬಹುದು, ಇದರಿಂದ ಇರಬಹುದಾದ ಕಬ್ಬಿಣದಂಶ ಕೊರತೆಯು ಪತ್ತೆಯಾಗದೆ ಇರಬಹುದು. ಇದೇ ಕಾರಣದಿಂದ ಫೆರಿಟಿನ್ ಪರೀಕ್ಷೆಯ ಜತೆಗೆ ಇತರ ಪರೀಕ್ಷೆಗಳನ್ನು ಕೂಡ ನಡೆಸುವುದು ಅಗತ್ಯವಾಗಿರುತ್ತದೆ.
- ಸಮಸ್ಯಾ ಸೂಚಕ ಅಂಕಿಅಂಶ
ರಕ್ತಹೀನತೆ ಹೊಂದಿಲ್ಲದ ವ್ಯಕ್ತಿಗಳಲ್ಲಿ 15-30 ಎನ್‌ಜಿ/ಎಂಎಲ್ ಫೆರಿಟಿನ್ ಮಟ್ಟವು ಎನ್‌ಎಐಡಿಯನ್ನು ಸೂಚಿಸಬಹುದಾಗಿದೆ. 15 ಎನ್‌ಜಿ/ ಎಂಎಲ್ ಮಟ್ಟವು ಕಬ್ಬಿಣದಂಶ ಕೊರತೆಯ ತೀವ್ರ ಲಕ್ಷಣವಾಗಿರುತ್ತದೆ.
ಎನ್‌ಎಐಡಿಯ ಹೊಸ ಬಯೋಮಾರ್ಕರ್‌ಗಳು
ಪರೀಕ್ಷಾ ವಿಧಾನಗಳಲ್ಲಿ ಇತ್ತೀಚೆಗೆ ಆಗಿರುವ ಪ್ರಗತಿಗಳಿಂದಾಗಿ ಕಬ್ಬಿಣದಂಶ ಮಟ್ಟಗಳನ್ನು ವಿಶ್ಲೇಷಿಸಲು ಹೊಸ ವಿಧಾನಗಳು ಲಭ್ಯವಾಗಿವೆ:
- ಸಾಲ್ಯುಬಲ್ ಟ್ರಾನ್ಸ್‌ಫೆರಿನ್ ರೆಸಿಪ್ಟರ್ (sTfr): ದೇಹಕ್ಕೆ ಹೆಚ್ಚು ಕಬ್ಬಿಣದಂಶದ ಅಗತ್ಯವಿದ್ದು, ಉರಿಯೂತದಿಂದ ಬಾಧಿತವಾಗಿಲ್ಲದೆ ಇದ್ದಾಗ ಈ ಪರೀಕ್ಷೆ ಅದನ್ನು ಪತ್ತೆಹಚ್ಚುತ್ತದೆ ಮತ್ತು ಇದು ಎನ್ ಎಐಡಿಯ ಒಂದು ಉಪಯೋಗಿ ಮಾರ್ಕರ್ ಆಗಿದೆ.
- ಹೆಪ್ಸಿಡಿನ್: ಕಬ್ಬಿಣದಂಶವನ್ನು ದೇಹವು ಹೀರಿಕೊಳ್ಳುವುದನ್ನು ನಿಯಂತ್ರಿಸುವ ಹಾರ್ಮೋನ್ ಇದಾಗಿದೆ. ಕಬ್ಬಿಣದಂಶ ಕೊರತೆ ಇದ್ದಾಗ ಹೆಪ್ಸಿಡಿನ್ ಮಟ್ಟ ಕಡಿಮೆ ಇದ್ದು ಹೆಚ್ಚು ಕಬ್ಬಿಣದಂಶ ಹೀರಿಕೆಯಾಗಲು ಅನುವು ಮಾಡಿಕೊಡುತ್ತದೆ. ಹೆಪ್ಸಿಡಿನ್ ಮಟ್ಟ ಹೆಚ್ಚಿದ್ದರೆ ಕಬ್ಬಿಣದಂಶದ ದಾಸ್ತಾನು ಸಾಕಷ್ಟಿದೆ ಎಂಬುದನ್ನು ಸೂಚಿಸುತ್ತದೆ.
- ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಈಕ್ವಲೆಂಟ್ (RetHe): ಇಏನಂತೆಯೇ RetHeಯು ಕೂಡ ರೆಟಿಕ್ಯುಲೊಸೈಟ್ ಗಳಲ್ಲಿ ಹಿಮೊಗ್ಲೋಬಿನ್ ಅಂಶವನ್ನು ಅಳೆಯುತ್ತದೆ. ಇದು ಕಡಿಮೆ ಪ್ರಮಾಣದಲ್ಲಿ (29 ಪಿಜಿಗಿಂತ ಕಡಿಮೆ) ಇರುವುದು ಕೆಂಪು ರಕ್ತಕಣ ಉತ್ಪಾದನೆಗೆ ಕಬ್ಬಿಣದಂಶ ಕಡಿಮೆ ಇದೆ ಎಂಬುದನ್ನು ಸೂಚಿಸುತ್ತದೆ.
- ಝಿಂಕ್ ಪ್ರೊಟೊಪೋರ್ಫಿರಿನ್ (ZPP): ಹಿಮೊಗ್ಲೋಬಿನ್ ಉತ್ಪಾದನೆಗೆ ಅಗತ್ಯವಾದಷ್ಟು ಪ್ರಮಾಣದಲ್ಲಿ ಕಬ್ಬಿಣದಂಶವು ಇಲ್ಲದಿದ್ದಾಗ ಘಕಕ ಮಟ್ಟವು ಹೆಚ್ಚುತ್ತದೆ; ಹೀಗಾಗಿ ಇದು ಕಬ್ಬಿಣದಂಶ ಕೊರತೆಗೆ ಇನ್ನೊಂದು ಸೂಚ್ಯಂಕವಾಗಿದೆ.
ಎನ್‌ಎಐಡಿ ರೋಗಪತ್ತೆ
ಪ್ರಯೋಗಾಲಯ ಪರೀಕ್ಷೆಗಳು ಮತ್ತು ರೋಗಲಕ್ಷಣಗಳು- ಇವೆರಡರ ಸಂಯೋಜನೆಯಿಂದ ಎನ್‌ಎಐಡಿ ರೋಗಪತ್ತೆಯನ್ನು ನಡೆಸಲಾಗುತ್ತದೆ. ಇದರ ಹಂತಹಂತವಾದ ಕಾರ್ಯವಿಧಾನವು ಈ ಕೆಳಗಿನಂತಿರುತ್ತದೆ:
- ವೈದ್ಯಕೀಯ ತಪಾಸಣೆ: ಕಬ್ಬಿಣದಂಶ ಕೊರತೆಯ ಲಕ್ಷಣಗಳನ್ನು ಗುರುತಿಸುವುದಕ್ಕಾಗಿ ಆರೋಗ್ಯ ವಿವರಗಳನ್ನು ಸಂಗ್ರಹಿಸುವುದು ಮತ್ತು ದೈಹಿಕ ಪರೀಕ್ಷೆಗಳು.
- ಪ್ರಾಥಮಿಕ ಪ್ರಯೋಗಾಲಯ ಪರೀಕ್ಷೆಗಳು
ಹಿಮೊಗ್ಲೋಬಿನ್ ಸಹಜ ಪ್ರಮಾಣದಲ್ಲಿದೆಯೇ ಎಂಬುದನ್ನು ಮತ್ತು ಮೈಕ್ರೋಸೈಟೋಸಿಸ್ ಲಕ್ಷಣಗಳನ್ನು ಗುರುತಿಸಲು ಕಂಪ್ಲೀಟ್ ಬ್ಲಿಡ್ ಕೌಂಟ್ (ಸಿಬಿಸಿ) ಪರೀಕ್ಷೆ.
ಕಬ್ಬಿಣದಂಶ ದಾಸ್ತಾನನ್ನು ವಿಶ್ಲೇಷಿಸಲು ಸೀರಂ ಫೆರಿಟಿನ್ ಪರೀಕ್ಷೆ.
ಕೆಂಪು ರಕ್ತಕಣಗಳ ಉತ್ಪಾದನೆಗೆ ಕಬ್ಬಿಣದಂಶ ಲಭ್ಯವಿದೆಯೇ ಎಂಬುದನ್ನು ತಿಳಿಯಲು ರೆಟಿಕ್ಯುಲೋಸೈಟ್ ಹಿಮೊಗ್ಲೋಬಿನ್ (CHr ಅಥವಾ Ret-He).
- ಹೆಚ್ಚುವರಿ ಪರೀಕ್ಷೆಗಳು (ಅಗತ್ಯವಿದ್ದಲ್ಲಿ)
ಕಬ್ಬಿಣದಂಶಕ್ಕೆ ಬೇಡಿಕೆ ಹೆಚ್ಚಿದೆಯೇ ಎಂಬುದನ್ನು ತಿಳಿಯಲು sTfR.
ಕಬ್ಬಿಣದಂಶ ಕೊರತೆ ಮತ್ತು ಯಾವುದೇ ದೀರ್ಘಕಾಲೀನ ಕಾಯಿಲೆಗೆ ಸಂಬಂಧಿಸಿದ ರಕ್ತಹೀನತೆಗಳ ನಡುವೆ ವ್ಯತ್ಯಾಸ ಪತ್ತೆಹಚ್ಚಲು ಹೆಪ್ಸಿಡಿನ್.
ಕಬ್ಬಿಣದಂಶ ಕೊರತೆಯನ್ನು ಖಚಿತಪಡಿಸಿಕೊಳ್ಳಲು ಝಡ್‌ಪಿಪಿ.
- ನಿಗಾವಣೆ ಚಿಕಿತ್ಸೆ ಕಬ್ಬಿಣದಂಶ ಪೂರೈಕೆ ಚಿಕಿತ್ಸೆಯನ್ನು ಆರಂಭಿಸಿದ 4-6 ವಾರಗಳ ಬಳಿಕ ಪ್ರಗತಿಯನ್ನು ಖಚಿತಪಡಿಸಿಕೊಳ್ಳಲು CHr, Ret-He ಮತ್ತು ಫೆರಿಟಿನ್ ಸಹಿತ ಕಬ್ಬಿಣದಂಶ ಮಟ್ಟವನ್ನು ಪುನರಪಿ ಪರೀಕ್ಷೆಗೊಳಪಡಿಸಬೇಕು.
ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆಗೆ ಚಿಕಿತ್ಸೆ
ಎನ್‌ಎಐಡಿ ಚಿಕಿತ್ಸೆಯ ಪ್ರಧಾನ ಗುರಿ ಕಬ್ಬಿಣದಂಶ ಮಟ್ಟವನ್ನು ಪುನಃಸ್ಥಾಪಿಸುವುದು ಮತ್ತು ರೋಗಲಕ್ಷಣಗಳನ್ನು ಕಡಿಮೆ ಮಾಡುವುದಾಗಿದೆ. ಇದಕ್ಕಾಗಿ ಕಾರ್ಯವಿಧಾನಗಳು ಈ ಕೆಳಗಿನಂತಿವೆ:
- ಆಹಾರ ಕ್ರಮ ಬದಲಾವಣೆ: ಮಾಂಸ, ಮೀನು, ಬೇಳೆಕಾಳುಗಳು ಮತ್ತು ಫೋರ್ಟಿಫೈಡ್ ಸೀರಿಯಲ್ ಗಳ ಜತೆಗೆ ಕಬ್ಬಿಣದಂಶ ಹೀರಿಕೆಯನ್ನು ಉತ್ತಮಪಡಿಸಲು ವಿಟಮಿನ್ ಸಿ ಸೇವನೆ.
- ಬಾಯಿಯ ಮೂಲಕ ಸೇವಿಸುವ ಕಬ್ಬಿಣದಂಶ ಸಪ್ಲಿಮೆಂಟ್‌ಗಳು: ಬಾಯಿಯ ಮೂಲಕ ಸೇವಿಸುವ ಕಬ್ಬಿಣದಂಶದ ಮಾತ್ರೆ/ ಸಿರಪ್ (ಉದಾಹರಣೆಗೆ, ಫೆರಸ್ ಸಲ್ಫೆಟ್) ಮೊದಲ ಆದ್ಯತೆಯ ಚಿಕಿತ್ಸೆಯಾಗಿದೆ. ಹೊಟ್ಟೆ ಕೆಡುವುದನ್ನು ತಪ್ಪಿಸಲು ಕಡಿಮೆ ಪ್ರಮಾಣದಿಂದ ಆರಂಭಿಸಿ ನಿಧಾನವಾಗಿ ಹೆಚ್ಚಿಸುತ್ತ ಹೋಗಬೇಕು.
- ಕಬ್ಬಿಣದಂಶದ ಚುಚ್ಚುಮದ್ದು: ಬಾಯಿಯ ಮೂಲಕ ಕಬ್ಬಿಣದಂಶ ಸೇವನೆಯನ್ನು ದೇಹ ಸಹಿಸಿಕೊಳ್ಳದೆ ಇದ್ದಲ್ಲಿ ಅಥವಾ ಕಬ್ಬಿಣದಂಶ ಹೀರಿಕೆಯ ಸಮಸ್ಯೆ ಇದ್ದಲ್ಲಿ ಐವಿ ಐರನ್ ಪರಿಣಾಮಕಾರಿ ಪರ್ಯಾಯ ವಿಧಾನವಾಗಿದೆ.
- ಮೂಲ ಕಾರಣಕ್ಕೆ ಚಿಕಿತ್ಸೆ: ಋತುಚಕ್ರ ಸಂದರ್ಭದಲ್ಲಿ ಅತಿಯಾದ ಸ್ರಾವ ಅಥವಾ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳಂತಹ ಕಬ್ಬಿಣದಂಶ ಕೊರತೆಯ ಮೂಲ ಕಾರಣಕ್ಕೆ ಚಿಕಿತ್ಸೆ ನೀಡುವುದು ದೀರ್ಘಕಾಲೀನ ನಿರ್ವಹಣೆಗೆ ಮುಖ್ಯವಾಗಿದೆ.
- ಫಾಲೊ ಅಪ್‌ಗಳು: ಕಬ್ಬಿಣದಂಶ ಮಟ್ಟದ ಮೇಲೆ ನಿಗಾ ಇರಿಸಲು ಮತ್ತು ಕಬ್ಬಿಣದಂಶ ದಾಸ್ತಾನು ಸಾಕಷ್ಟು ಇರುವುದನ್ನು ಖಾತರಿಪಡಿಸಿಕೊಳ್ಳಲು ರೆಟಿಕ್ಯುಲೊಸೈಟ್ ಹಿಮೊಗ್ಲೋಬಿನ್ ಮತ್ತು ಸೀರಂ ಫೆರಿಟಿನ್‌ನಂತಹ ಸೂಚ್ಯಂಕಗಳನ್ನು ಉಪಯೋಗಿಸಿ ನಿಯಮಿತವಾಗಿ ಚೆಕ್ ಅಪ್ ಮಾಡಿಸಿಕೊಳ್ಳುವುದು ನಿರ್ಣಾಯಕವಾಗಿರುತ್ತದೆ.
ಸಾರಾಂಶ
ರಕ್ತಹೀನತೆಯಿಲ್ಲದ ಕಬ್ಬಿಣದಂಶ ಕೊರತೆಯು ಸಾಮಾನ್ಯ ಸಮಸ್ಯೆಯಾಗಿದ್ದು, ಜೀವನ ಗುಣಮಟ್ಟದ ಮೇಲೆ ಗಮನಾರ್ಹ ಪರಿಣಾಮವನ್ನು ಬೀರಬಹುದಾಗಿದೆ. ಇದು ರಕ್ತಹೀನತೆಯಾಗಿ ಉಲ್ಬಣಗೊಳ್ಳುವುದನ್ನು ತಡೆಯಲು ಶೀಘ್ರ ಪತ್ತೆ ಮತ್ತೆ ಚಿಕಿತ್ಸೆ ಅತ್ಯಗತ್ಯವಾಗಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ಪರೀಕ್ಷೆಗಳ ಸಹಾಯದಿಂದ ಎನ್‌ಎಐಡಿಯನ್ನು ಪತ್ತೆಹಚ್ಚಬಹುದಾಗಿದೆ. ಆಹಾರ ಕ್ರಮ ಬದಲಾವಣೆ, ಸಪ್ಲಿಮೆಂಟ್‌ಗಳು ಮತ್ತು ಮೂಲ ಕಾರಣಕ್ಕೆ ಚಿಕಿತ್ಸೆಗಳನ್ನು ಒಳಗೊಂಡ ಸಮಗ್ರ ಕಾರ್ಯವಿಧಾನದ ಮೂಲಕ ಕಬ್ಬಿಣದಂಶ ಕೊರತೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸಿ ಸರಿಪಡಿಸಿ ದೀರ್ಘಕಾಲೀನ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ.
-ಸಿಂಧೂರಲಕ್ಷ್ಮೀ ಕೆ.ಎಲ್.
ಅಸೋಸಿಯೇಟ್ ಪ್ರೊಫೆಸರ್
ಪೆಥಾಲಜಿ ವಿಭಾಗ,
ಕೆಎಂಸಿ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Christmas 2024: ಶಾಂತಿದೂತನ ಜನನದ ಸಂಭ್ರಮದಲ್ಲಿ ಜಗತ್ತು- ವಿವಿಧ ಚರ್ಚ್‌ಗಳಲ್ಲಿ ಬಲಿಪೂಜೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.