ಶಸ್ತ್ರಚಿಕಿತ್ಸೆ ಅಲೋಪಥಿ ವೈದ್ಯರ ಸ್ವತ್ತೇ?
Team Udayavani, Dec 13, 2020, 5:48 AM IST
ಸಾಂದರ್ಭಿಕ ಚಿತ್ರ
ಭಾರತೀಯ ವೈದ್ಯ ಕೇಂದ್ರೀಯ ಪರಿಷತ್ ನೀಡಿದ ಶಿಫಾರಸು ಅನ್ವಯ ಭಾರತ ಸರಕಾರವು ನವೆಂಬರ್ 20, 2020ರ ರಾಜ್ಯಪತ್ರದಲ್ಲಿ ಪ್ರಕಟನೆ ಹೊರಡಿಸಿದೆ. ಈ ಅಧಿಸೂಚನೆ ಅನ್ವಯ ಬಿ.ಎ.ಎಂ.ಎಸ್. ಪದವಿ ಪಡೆದ ವೈದ್ಯರು ಶಲ್ಯತಂತ್ರ ವಿಷಯದಲ್ಲಿ ಸ್ನಾತಕೋತ್ತರ ಪಡೆ ದಾರು. ಎಂ.ಎಸ್. (ಆಯುರ್ವೇದ) ಪದವಿ ಪಡೆಯು ವರು. ಅನಂತರದಲ್ಲಿ ಅರ್ಬುದ, ಗಂಟುಗಳು, ಕುರಗಳ ಶಸ್ತ್ರಚಿಕಿತ್ಸೆ ಮಾಡಲು ಶಕ್ಯವಿದೆ. ಕಲ್ಲು, ಮೂತ್ರಾಂಗ ತೊಂದರೆ ಪರಿಹಾರಕ್ಕೆ ಕಾನೂನು ರೀತ್ಯಾ ಇಂಬಿದೆ.
ಜೀರ್ಣಾಂಗದ ಹಲವು ಕಾಯಿಲೆಗಳಿಗೆ ಶಸ್ತ್ರಚಿಕಿತ್ಸೆ ನಡೆಸಲು ಅರ್ಹರು. ಭಗಂದರಾ ಅಂದರೆ ಜರಡಿ ಹುಣ್ಣು, ಮೂಲವ್ಯಾಧಿಯ ಪರಿಹಾರಕ್ಕೆ ಸರ್ಜರಿ ಮಾಡಲು ಸಾಧ್ಯ. ಚರ್ಮದ ಬಗೆಬಗೆಯ ಸಮಸ್ಯೆಗೆ ಅಭಿಘಟನ ಶಸ್ತ್ರಕ್ರಿಯೆ (ಪ್ಲಾಸ್ಟಿಕ್ ಸರ್ಜರಿ), ಮೂಳೆ ಮುರಿತ, ಜರಗುವಿಕೆ, ಸಂಧಿಚ್ಯುತಿಯಂತಹ ಸಮಸ್ಯೆ ನಿಭಾವಣೆಗೆ ಇವರಿಗೆ ಅನುಮತಿ ಇದೆ. ಜನನಾಂಗದ ವಿವಿಧ ಸಮಸ್ಯೆಯ ಕಾರಣ, ಪರಿಹಾರೋಪಾಯಗಳು ಸುಶ್ರುತೋಕ್ತ ವಿಧಿ ವಿಧಾನ ಜರುಗಿಸಲು ಅಧಿಕಾರವಿದೆ. ಇಂತಹ ಮೂವತ್ತೇಳು ಸಂದರ್ಭಗಳ ಪಟ್ಟಿ ರಾಜ್ಯಪತ್ರದಲ್ಲಿದೆ. ಶಾಲಾಕ್ಯತಂತ್ರದಲ್ಲಿ ಎಂಎಸ್(ಆಯುರ್ವೇದ) ಪಡೆದವರಾದರೆ ಕಿವಿ, ಕಣ್ಣು, ಬಾಯಿ, ಗಂಟಲು, ಮೂಗು ಮತ್ತು ಹಲ್ಲಿನ ತೊಂದರೆಯ ರೋಗಿಗಳಿಗೆ ನೀಡುವ ಸ್ಪೆಷಾಲಿಟಿ ಸವಲತ್ತು ಕಲ್ಪಿಸಲಾಗಿದೆ. ಅಗತ್ಯ ಸಂದರ್ಭಗಳಲ್ಲಿ ಶಸ್ತ್ರಚಿಕಿತ್ಸೆ ನೀಡಲು ಅಧಿಕೃತ ಪರವಾನಿಗೆ ಇದೆ. ಈ ಅವಯವಗಳ ಒಟ್ಟು ಇಪ್ಪತ್ತೂಂಬತ್ತು ಕಾಯಿಲೆಗಳ ಸಂದರ್ಭ ಶಸ್ತ್ರ ಚಿಕಿತ್ಸೆಯನ್ನು ಅಳವಡಿಸಲು ಕಾನೂನು ರೀತ್ಯಾ ಅವಕಾಶ ದೊರೆತಿದೆ.
ಸರಕಾರದ ಈ ನಿಲುವನ್ನು ಡಾ| ಶಿವಾನಂದ ಕುಬಸದ ಅವರು ಖಾರವಾದ ಶಬ್ದಗಳಲ್ಲಿ ಖಂಡಿಸಿದ್ದಾರೆ. ಪದವಿ ಶಿಕ್ಷಣದಲ್ಲಿ ಬರೀ ಆಯುರ್ವೇದ ಕಲಿತವರು ಎಂಬ ಪದ ಬಳಸಿದ್ದಾರೆ. ಆದರೆ ಆಯುರ್ವೇದದ ಪಠ್ಯಕ್ರಮದಲ್ಲಿ ಐದೂ ವರೆ ವರ್ಷ ಏನೇನು ಕಲಿಕೆಗೆ ಅವಕಾಶ ಇದೆ ಎನ್ನು ವು ದನ್ನು ನೋಡಬೇಕು. ಪದವಿ ಕಲಿಕೆಯಲ್ಲಿ ಒಂದೂವರೆ ವರ್ಷ ಕಾಲ ಅನಾಟಮಿ ಅಂದರೆ ಶರೀರ ರಚನಾಶಾಸ್ತ್ರದ ಸಂಪೂರ್ಣ ಬೋಧನೆ ಇರುತ್ತದೆ. ಶಸ್ತ್ರಚಿಕಿತ್ಸೆಯು ದೇಹರಚನೆಯ ಸಂಪೂರ್ಣ ಕಲಿಕೆಯ ತಳಹದಿಯ ವಿದ್ಯೆ.
ಅನಂತರದಲ್ಲಿ ಶಸ್ತ್ರವೈದ್ಯರು ತುರ್ತು ಸಂದರ್ಭದಲ್ಲಿ ಮಾತ್ರ ಮಾಡುವ ವಿಶೇಷ ಕುಶಲಕರ್ಮ(ಟೆಕ್ನಿಕ್) ಎಂಬುದು ಮೊಟ್ಟ ಮೊದಲು ಜಗದಗಲ ಸಾರಿದವನು ಸುಶ್ರುತನ ಗುರು ದಿವೋದಾಸ ಧನ್ವಂತರಿ. ಆತನು ಕಾಲ್ಪನಿಕ ವ್ಯಕ್ತಿಯಲ್ಲ. ಕಾಶಿಯ ರಾಜ ಮತ್ತು ವಿಶ್ವದ ಆದಿಮ ಶಸ್ತ್ರವೈದ್ಯ. ಕನಿಷ್ಠ 3 ಸಾವಿರ ವರ್ಷದ ಹಿಂದೆ ಆತನು ಸಹಸ್ರಸಹಸ್ರ ಸಂಖ್ಯೆಯಲ್ಲಿ ಶವಚ್ಛೇದನ ಮಾಡಿದ ಸಂಗತಿ ನಾವೇಕೆ ಮರೆತೆವು? ಹೀಗೆ ಸರಿಯಾದ ರೀತಿ ಪ್ರಾಯೋಗಿಕ ಜ್ಞಾನ ಪಡೆದವನೇ ಅರ್ಹ ಶಿಷ್ಯ. ಅನಂತರದ ಶಸ್ತ್ರವೈದ್ಯ. ಜೀವಂತ ಶರೀರದಲ್ಲಿ ಎಲ್ಲಿ, ಹೇಗೆ, ಯಾವಾಗ ಎಂಟು ಬಗೆಯ ಶಸ್ತ್ರಕರ್ಮ(ಸರ್ಜಿಕಲ್ ಪ್ರೊಸೀಜರ್) ಮಾಡುವ ಬಗೆ ಅಂದು ಗುರು ಧನ್ವಂತರಿಯು ಸುಶ್ರುತಾದಿ ಶಿಷ್ಯರಿಗೆ ಬೋಧಿಸಿದ್ದನು. ಅದರ ಕೆಲವು ವಿಧಾನಗಳು ಮತ್ತೆ ಪುನರುಜ್ಜೀವನಗೊಳುತ್ತಿದೆ ಎಂದು ನಾವೇಕೆ ಸಂತಸ ಪಡುತ್ತಿಲ್ಲ?
ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಮಿಶ್ರ ಪದ್ಧತಿಯ ಚಿಕಿತ್ಸೆ ರಾಜ್ಯದಲ್ಲಿ ನಾಲ್ಕು ದಶಕ ಪೂರ್ವದಲ್ಲಿ ಆರಂಭವಾಗಿತ್ತು. ಬೆಂಗಳೂರಿನ ವಿಕ್ಟೋರಿಯಾ, ಕಿದ್ವಾಯಿ, ನಿಮ್ಹಾನ್ಸ್ ಆಸ್ಪತ್ರೆಗಳಲ್ಲಿ ಸಹ ಇಂತಹ ವ್ಯವಸ್ಥೆ ಶುರುವಾಗಿತ್ತು.
ಭಾರತೀಯ ವೈದ್ಯ ಸಂಘದ ಮುಖ್ಯ ಆಕ್ಷೇಪಣೆ ಅನಸ್ತೀಶಿಯಾ, ಶಸ್ತ್ರಚಿಕಿತ್ಸೋತ್ತರ ಉಪಚಾರದ ಬಗ್ಗೆ. ಜಾಲಂಧರ ಬಂಧವೆಂಬ ಯೋಗ ವಿಧಾನದ ಮೂಲಕ ದವಡೆಗಳ ನರ ಸಂಪರ್ಕ ತಾತ್ಕಾಲಿಕವಾಗಿ ಸುಪ್ತ ಗೊಳಿಸುವ ವಿಧಾನದ ಬಗ್ಗೆ ಐಎಂಎ ಅರಿಯಲಿ. ಈ ಸರಳ , ಅತಿಕ್ಲುಪ್ತ ಅರಿವಳಿಕೆ ವಿಧಾನವು ಪ್ರಾಚೀನ ವಿಜ್ಞಾನ. ಅದನ್ನೂ ಅಳವಡಿಸಿಕೊಂಡು ಜನ ರ ಆರೋಗ್ಯ ಬಾಬತ್ತಿನ ಖರ್ಚು ಉಳಿಸಬಹುದಲ್ಲ?.
ಅನಸ್ತೇ ಷಿಯಾ, ಎಕ್ಸ್‌ರೇ, ಎಂ.ಆರ್.ಐ., ಸಿ.ಟಿ. ಸ್ಕಾನ್‌ಗಳನ್ನು ಐಎಂಎ ಸದಸ್ಯರು ಮಾತ್ರ ಬಳಸಲು ಅವಕಾಶವಿದೆ ಎಂಬ ವಾದವಿದೆಯೇ? ಈ ದೇಶದ ಕಾನೂನು ಹಾಗೆ ಹೇಳುತ್ತದೆಯೇ? ಇವೆಲ್ಲ ಆಧುನಿಕ ವಿಜ್ಞಾನದ ಕೊಡುಗೆ ಗಳು.ಅವುಗಳು ಅಗತ್ಯಕ್ಕಿಂತ ಹೆಚ್ಚಾಗಿ ಸದ್ಬಳಕೆ ಅಥವಾ ದುರ್ಬಳಕೆಗೊಳ್ಳುತ್ತಿದೆಯೇ ಎಂಬುದು ಜನರೇ ನಿರ್ಧರಿ ಸಲಿ. ಡಿ.ವಿ.ಜಿ. ಕಗ್ಗದ ಸಾಲಿನಂತೆ ಜಾಗತಿಕ ವೈದ್ಯಕೀಯ ರಂಗದ ಮರವು ನಳನಳಿಸಿ ಸೊಬಗಾಗಲು ಋಷಿವಾಕ್ಯದೊಡನೆ ವಿಜ್ಞಾನ ಕಲೆ ಮೇಳೈವಿಸಲೆಂದು ಆಶಿಸೋಣವೇ? ರೋಗರಹಿತ ಸಮಾಜ ಸೃಷ್ಟಿಗೆ ನಾವು ಒಟ್ಟಾಗಿಯೇ ಕಂಕಣಬದ್ಧರಾಗೋಣ.
ಡಾ| ಸತ್ಯನಾರಾಯಣ ಭಟ್ ಪಿ. (ವಿಶ್ರಾಂತ ಪ್ರಾಚಾರ್ಯರು, ಆಯುಷ್ ಇಲಾಖೆ)
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.