Laparoscopic surgery: ಸಂತಾನೋತ್ಪತ್ತಿ ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ
ಶಿಶುವನ್ನು ಬಯಸುವ ದಂಪತಿಗೆ ಹೊಸ ಆಶಾಕಿರಣ
Team Udayavani, Nov 24, 2024, 9:11 AM IST
ಬಂಜೆತನ ಅಥವಾ ಸಂತಾನಹೀನತೆಯು ಜಾಗತಿಕವಾಗಿ ಕೋಟ್ಯಂತರ ದಂಪತಿಗಳನ್ನು ಬಾಧಿಸುತ್ತದೆ, ಇದಕ್ಕೆ ಪರಿಹಾರಗಳಿಗಾಗಿ ಹುಡುಕಾಡುವುದರ ಸಹಿತ ಅವರು ಸಂತಾನ ಹೀನತೆಯಿಂದ ಅಪಾರ ಮಾನಸಿಕ ಮತ್ತು ಆರ್ಥಿಕ ಒತ್ತಡಗಳನ್ನು ಅನುಭವಿ ಸುತ್ತಾರೆ. ಅದೃಷ್ಟವಶಾತ್ ವೈದ್ಯಕೀಯ ತಂತ್ರಜ್ಞಾನದಲ್ಲಿ ಆಗಿರುವ ಅತ್ಯಾಧುನಿಕ ಪ್ರಗತಿಗಳಿಂದಾಗಿ ಇದಕ್ಕೆ ಪರಿಣಾಮಕಾರಿ ಪರಿಹಾರ ಗಳನ್ನು ಕಂಡುಕೊಳ್ಳುವುದಕ್ಕೆ ಸಾಧ್ಯವಾಗಿದೆ. ಇಂತಹ ಪರಿಹಾರಗಳಲ್ಲಿ ಒಂದು ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ; ಸಂತಾನೋತ್ಪತ್ತಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪತ್ತೆಹಚ್ಚಿ ಚಿಕಿತ್ಸೆಗೆ ಒಳಪಡಿಸಲು ಇದೊಂದು ಅತೀ ಕಡಿಮೆ ದೇಹಪ್ರವೇಶಿಕೆಯುಳ್ಳ ವಿಧಾನವಾಗಿದೆ.
ಲ್ಯಾಪರೊಸ್ಕೋಪಿ ಎಂದರೇನು?
ಕೆಮರಾ ಮತ್ತು ಬೆಳಕು ಬೀರುವ ಸಾಧನ ಜತೆಗೂಡಿರುವ ಸಪೂರ ಮತ್ತು ಮೃದುವಾದ ಕೊಳವೆ ಸಹಿತವಾದ ಶಸ್ತ್ರಚಿಕಿತ್ಸಾ ವಿಧಾನ ಲ್ಯಾಪರೊಸ್ಕೋಪಿ. ಇದನ್ನು ಹೊಟ್ಟೆಯ ಭಾಗದಲ್ಲಿ ಸಣ್ಣದಾದ ಗಾಯ ಮಾಡುವ ಮೂಲಕ ಒಳಕ್ಕೆ ತೂರಿಸಲಾಗುತ್ತದೆ. ದೊಡ್ಡದಾದ ಶಸ್ತ್ರಚಿಕಿತ್ಸಾತ್ಮಕ ಗಾಯವನ್ನು ಮಾಡದೆಯೇ ಸಂತಾನೋತ್ಪತ್ತಿಯ ಅಂಗಗಳನ್ನು ನೇರವಾಗಿ ವೀಕ್ಷಿಸಿ ಅಗತ್ಯ ಚಿಕಿತ್ಸೆಗಳನ್ನು ನಡೆಸುವುದಕ್ಕೆ ಈ ವಿಧಾನವು ಶಸ್ತ್ರಚಿಕಿತ್ಸಾ ತಜ್ಞರಿಗೆ ಅನುವು ಮಾಡಿಕೊಡುತ್ತದೆ. ಲ್ಯಾಪರೊಸ್ಕೋಪಿಯ ಪ್ರಯೋಜನಗಳು ಗಮನಾರ್ಹವಾಗಿವೆ: ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ಬಳಿಕ ಅನುಭವಕ್ಕೆ ಬರುವ ನೋವು ಕಡಿಮೆ, ಗುಣ ಹೊಂದಲು ಕಡಿಮೆ ಸಮಯ ಸಾಕು, ಜತೆಗೆ ದೊಡ್ಡ ಗಾಯವನ್ನು ಉಂಟು ಮಾಡುವ ಸಾಂಪ್ರದಾಯಿಕ ಶಸ್ತ್ರಚಿಕಿತ್ಸಾ ವಿಧಾನಕ್ಕೆ ಹೋಲಿಸಿದರೆ ಇದರಲ್ಲಿ ಉಳಿಯುವ ಗಾಯದ ಗುರುತು ಸಣ್ಣದು.
ಕಾರ್ಯವಿಧಾನ ಹೇಗೆ?
ಲ್ಯಾಪರೊಸ್ಕೋಪಿಕ್ ಚಿಕಿತ್ಸಾ ಪ್ರಕ್ರಿಯೆಯು ಸಾಮಾನ್ಯವಾಗಿ ರೋಗಿಗೆ ಸಂಪೂರ್ಣ ಅರಿವಳಿಕೆ ನೀಡುವಿಕೆಯೊಂದಿಗೆ ಆರಂಭವಾಗುತ್ತದೆ. ಸರ್ಜನ್ ರೋಗಿಯ ಹೊಟ್ಟೆಯ ಭಾಗದಲ್ಲಿ ಕೆಲವು ಗಾಯಗಳನ್ನು ಮಾಡಿ ವಿಶೇಷ ಉಪಕರಣಗಳ ಸಹಿತವಾಗಿ ಲ್ಯಾಪರೊಸ್ಕೋಪಿಯನ್ನು ತೂರಿಸುತ್ತಾರೆ. ಈ ಉಪಕರಣಗಳು ಸರ್ಜನ್‌ರಿಗೆ ರೋಗಿಯ ಸಂತಾನೋತ್ಪತ್ತಿ ಅಂಗಗಳನ್ನು ಕಂಪ್ಯೂಟರ್ ಪರದೆಯಲ್ಲಿ ವೀಕ್ಷಿಸುತ್ತ ಎಂಡೊಮೆಟ್ರಿಕ್ ಅಂಗಾಂಶವನ್ನು ತೆಗೆದುಹಾಕುವುದು, ಅಡೆಶನ್‌ಗಳನ್ನು ಸರಿಪಡಿಸುವುದು ಅಥವಾ ಗಡ್ಡೆಗಳು ಯಾ ಫೈಬ್ರಾಯ್ಡಗಳನ್ನು ತೆಗೆದುಹಾಕುವಂತಹ ಅಗತ್ಯ ಶಸ್ತ್ರಚಿಕಿತ್ಸೆಗಳನ್ನು ನಡೆಸಲು ನೆರವಾಗುತ್ತವೆ. ಈ ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ತಗಲುವ ಸಮಯವು ಚಿಕಿತ್ಸೆಯ ಸಂಕೀರ್ಣತೆಯನ್ನು ಅವಲಂಬಿಸಿ 30 ನಿಮಿಷಗಳಿಂದ ತೊಡಗಿ ಕೆಲವು ತಾಸುಗಳ ವರೆಗೆ ಇರಬಹುದು. ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗಳನ್ನು ಸ್ವಲ್ಪ ಸಮಯ ನಿಗಾದಡಿ ಇರಿಸಲಾಗುತ್ತದೆ ಮತ್ತು ಸಾಮಾನ್ಯವಾಗಿ ಅದೇ ದಿನ ಅಥವಾ ಮರುದಿನ ಮನೆಗೆ ಕಳುಹಿಸಲಾಗುತ್ತದೆ. ಹೀಗಾಗಿ ಅವರಿಗೆ ತಮ್ಮ ದೈನಿಕ ಚಟುವಟಿಕೆಗಳಿಗೆ ಬೇಗನೆ ಮರಳಲು ಸಾಧ್ಯವಾಗುತ್ತದೆ.
ಯಾರು ಇದರ ಪ್ರಯೋಜನ ಪಡೆಯಬಹುದು?
ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯನ್ನು ಶಿಶುವನ್ನು ಹೊಂದಲು ದಂಪತಿಯ ಸಾಮರ್ಥ್ಯಕ್ಕೆ ಅಡ್ಡಿಯಾಗುವ ಹಲವಾರು ಪ್ರಜನನ ಸಂಬಂಧಿ ಸಮಸ್ಯೆಗಳಿಗೆ ಪರಿಹಾರವಾಗಿ ಶಿಫಾರಸು ಮಾಡಲಾಗುತ್ತದೆ. ಇಂಥ ಸಮಸ್ಯೆಗಳಲ್ಲಿ ಸಾಮಾನ್ಯವಾದ ಕೆಲವು ಈ ಕೆಳಗಿನಂತಿವೆ:
- ಎಂಡೊಮೆಟ್ರಿಯೋಸಿಸ್: ಸಾಮಾನ್ಯವಾಗಿ ಗರ್ಭಕೋಶದ ಒಳಗೆ ಇರಬೇಕಾದ ಎಂಡೊಮೆಟ್ರಿಯಲ್ ಅಂಗಾಂಶಗಳು ಗರ್ಭಕೋಶದಿಂದ ಹೊರಗೆ ಬೆಳೆದಾಗ ಈ ಸಮಸ್ಯೆ ಉಂಟಾಗುತ್ತದೆ. ಎಂಡೊಮೆಟ್ರಿಯೋಸಿಸ್ ದೀರ್ಘಕಾಲೀನ ನೋವು ಮತ್ತು ಸಂತಾನಹೀನತೆಗೆ ಕಾರಣವಾಗಬಹುದು. ಶಸ್ತ್ರಚಿಕಿತ್ಸಾತಜ್ಞರು ಈ ಅಸಹಜ ಬೆಳವಣಿಗೆಗಳನ್ನು ಗುರುತಿಸಿ ನಿವಾರಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ, ಆ ಮೂಲಕ ಲಕ್ಷಣಗಳು ನಿವಾರಣೆಗೊಂಡು ಸಂತಾನೋತ್ಪತ್ತಿ ಸಾಧ್ಯತೆ ಹೆಚ್ಚುತ್ತದೆ.
- ಪೆಲ್ವಿಕ್ ಅಡೆಶನ್‌ಗಳು: ಶಸ್ತ್ರಚಿಕಿತ್ಸೆಗಳು, ಸೋಂಕುಗಳು ಅಥವಾ ಎಂಡೊಮೆಟ್ರಿಯೋಸಿಸ್‌ನಂತಹ ಅನಾರೋಗ್ಯಗಳಿಂದಾಗಿ ಅಂಗಾಂಶಗಳು ಗಾಯಗೊಳ್ಳಬಹುದು ಮತ್ತು ಫಾಲೊಪಿಯನ್ ಕೊಳವೆಗಳಲ್ಲಿ ತಡೆಯನ್ನು ಉಂಟು ಮಾಡಬಹುದು. ಹೀಗೆ ಅಂಟಿಕೊಂಡಿರುವ ಅಸಹಜ ಅಂಗಾಂಶಗಳನ್ನು ಕತ್ತರಿಸಿ ತೆಗೆದುಹಾಕುವ ಮೂಲಕ ಸಂತಾನೋತ್ಪತ್ತಿ ಅಂಗಗಳು ಸಹಜ ಸ್ಥಿತಿಗೆ ಮರಳಲು ಮತ್ತು ಅವುಗಳ ಕಾರ್ಯಚಟುವಟಿಕೆ ಪುನರ್‌ಸ್ಥಾಪನೆಗೊಳ್ಳಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನೆರವಾಗುತ್ತದೆ.
- ಅಂಡಾಶಯದ ಗಡ್ಡೆಗಳು: ಅಂಡಾಶಯದಲ್ಲಿ ಬೆಳವಣಿಗೆ ಹೊಂದಿರುವ ದ್ರವಾಂಶ ತುಂಬಿದ ಗಡ್ಡೆಗಳು ಅಥವಾ ಗಂಟುಗಳು ಸಂತಾನೋತ್ಪತ್ತಿಗೆ ಅಡ್ಡಿಯಾಗಬಹುದು. ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಆರೋಗ್ಯವಂತ ಅಂಗಾಂಶಗಳನ್ನು ಸಂರಕ್ಷಿಸುವುದರ ಜತೆಗೆ ಇಂತಹ ಗಡ್ಡೆಗಳನ್ನು ತೆಗೆದುಹಾಕಿ ಸ್ತ್ರೀಯ ಗರ್ಭಿಣಿಯಾಗುವ ಸಾಧ್ಯತೆಗಳನ್ನು ಹೆಚ್ಚಿಸಬಹುದು.
- ಗರ್ಭಕೋಶದ ಅಸಹಜ ಸ್ಥಿತಿಗಳು: ಫೈಬ್ರಾಯ್ಡಗಳು ಮತ್ತು ಪಾಲಿಪ್‌ಗ್ಳು ಗರ್ಭಕೋಶದ ಒಳಭಾಗದಲ್ಲಿ ಇದ್ದರೆ ಭ್ರೂಣವು ನೆಲೆಯಾಗುವುದಕ್ಕೆ ಅಡಚಣೆಯಾಗಬಹುದು. ಇಂತಹ ಅಸಹಜ ಬೆಳವಣಿಗೆಗಳನ್ನು ನಿವಾರಿಸಲು ಮತ್ತು ಗರ್ಭ ಕಟ್ಟಲು ಹೆಚ್ಚು ಪೂರಕವಾದ ವಾತಾವರಣವನ್ನು ಸೃಷ್ಟಿಸಲು ಲ್ಯಾಪರೊಸ್ಕೋಪಿಯು ಸಹಾಯ ಮಾಡುತ್ತದೆ.
- ಟ್ಯೂಬಲ್ ಫ್ಯಾಕ್ಟರ್ ಇನ್‌ಫರ್ಟಿಲಿಟಿ: ಫಾಲೊಪಿಯನ್ ಕೊಳವೆಗಳಲ್ಲಿ ಇರುವ ಅಡಚಣೆಗಳು ಅಥವಾ ಹಾನಿಯ ಸಹಿತ ಫಾಲೊಪಿಯನ್ ಕೊಳವೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿಂದ ಸಂತಾನೋತ್ಪತ್ತಿ ಪ್ರಕ್ರಿಯೆಗೆ ಗಮನಾರ್ಹ ತೊಂದರೆ ಉಂಟಾಗಬಹುದು. ಫಾಲೋಪಿಯನ್ ಕೊಳವೆಗಳ ಆರೋಗ್ಯವನ್ನು ವಿಶ್ಲೇಷಿಸಿ, ಯಾವುದೇ ಸಮಸ್ಯೆಗಳಿದ್ದರೆ ಸರಿಪಡಿಸಲು ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ಸಹಾಯ ಮಾಡುವ ಮೂಲಕ ಸಹಜ ಗರ್ಭಧಾರಣೆಯ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ.
ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯ ಪ್ರಯೋಜನಗಳು
ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆಯಿಂದ ಹಲವಾರು ಪ್ರಯೋಜನಗಳಿವೆ:
- ಕಡಿಮೆ ಗಾಯ: ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಗೆ ಮಾಡಬೇಕಾದ ಗಾಯ ತೀರಾ ಸಣ್ಣದಾಗಿದ್ದು, ಇದರಿಂದಾಗಿ ಉಂಟಾಗುವ ನೋವು ಸಾಂಪ್ರದಾಯಿಕ ತೆರೆದ ಶಸ್ತ್ರಚಿಕಿತ್ಸೆಗೆ ಹೋಲಿಸಿದರೆ ಕಡಿಮೆ ಮತ್ತು ಚೇತರಿಸಿಕೊಳ್ಳುವುದಕ್ಕೆ ಸ್ವಲ್ಪ ಸಮಯ ಸಾಕು.
- ತತ್‌ಕ್ಷಣ ರೋಗ ಪತ್ತೆ ಮತ್ತು ಚಿಕಿತ್ಸೆ: ಲ್ಯಾಪರೊಸ್ಕೋಪಿ ಮೂಲಕ ಅಂತರ್ಗತವಾಗಿರುವ ಸಮಸ್ಯೆಗಳನ್ನು ಪತ್ತೆಹಚ್ಚುವುದರ ಜತೆಗೆಯೇ ಅಗತ್ಯವಾದ ಚಿಕಿತ್ಸೆಯನ್ನು ಕೂಡ ಕೂಡಲೇ ಒದಗಿಸುವುದಕ್ಕೆ ಸಾಧ್ಯವಾಗುತ್ತದೆ. ಇದರಿಂದಾಗಿ ಅನಾರೋಗ್ಯಕ್ಕೆ ಉತ್ತರ ಮತ್ತು ಪರಿಹಾರ ಎರಡೂ ಒಂದೇ ಭೇಟಿಯಲ್ಲಿ ಪಡೆಯಲು ಸಾಧ್ಯವಾಗುತ್ತದೆ.
- ಉತ್ತಮ ಪ್ರಜನನಾತ್ಮಕ ಫಲಿತಾಂಶಗಳು: ಎಂಡೋಮೆಟ್ರಿಯೋಸಿಸ್ ಮತ್ತು ಪೆಲ್ವಿಕ್ ಅಡೆಶನ್‌ಗಳಂತಹ ಅನಾರೋಗ್ಯ ಸ್ಥಿತಿಗಳನ್ನು ಲ್ಯಾಪರೊಸ್ಕೋಪಿಯ ಮೂಲಕ ಚಿಕಿತ್ಸೆಗೆ ಒಳಪಡಿಸುವುದರಿಂದ ಸಹಜವಾಗಿ ಅಥವಾ ಸಹಾಯಿತ ಪ್ರಜನನಾತ್ಮಕ ತಂತ್ರಜ್ಞಾನಗಳ ನೆರವಿನಿಂದ ಗರ್ಭ ಕಟ್ಟುವ ಸಾಧ್ಯತೆಗಳು ಹೆಚ್ಚುತ್ತವೆ ಎಂಬುದನ್ನು ಅನೇಕ ಅಧ್ಯಯನಗಳು ತೋರಿಸಿಕೊಟ್ಟಿವೆ.
- ಆಸ್ಪತ್ರೆ ವಾಸದ ಅವಧಿ ಅತ್ಯಲ್ಪ: ಲ್ಯಾಪರೊಸ್ಕೋಪಿಗೆ ಒಳಗಾದ ಅನೇಕ ರೋಗಿಗಳು ಕೆಲವೇ ತಾಸುಗ ಳಲ್ಲಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳ ಬಹುದಾಗಿದ್ದು, ಇದರಿಂದ ಅವರ ದೈನಿಕ ಕೆಲಸ ಕಾರ್ಯಗಳಲ್ಲಿ ಹೆಚ್ಚಿನ ವ್ಯತ್ಯಯ ಉಂಟಾಗುವುದಿಲ್ಲ.
- ಗಾಯದ ಗುರುತು ಸಣ್ಣದು: ಲ್ಯಾಪರೊಸ್ಕೋಪಿಯಲ್ಲಿ ಉಂಟಾಗುವ ಗಾಯ ಸಣ್ಣ ಪ್ರಮಾಣದ್ದಾಗಿರುವುದರಿಂದ ಸೌಂದರ್ಯಾತ್ಮಕ ಫಲಿತಾಂಶವು ಉತ್ತಮವಾಗಿರುತ್ತದೆ. ಇದರಿಂದಾಗಿ ದೈಹಿಕವಾಗಿ ಬೇಗನೆ ಗುಣ ಹೊಂದಲು ಸಾಧ್ಯವಾಗುತ್ತದೆಯಲ್ಲದೆ ದೇಹ ಸೌಂದರ್ಯವೂ ಕೆಡುವುದಿಲ್ಲ.ಪರಿಗಣಿಸಬೇಕಾದ ಅಪಾಯಗಳು
ಲ್ಯಾಪರೊಸ್ಕೋಪಿ ಶಸ್ತ್ರಚಿಕಿತ್ಸೆಯು ಸಾಮಾನ್ಯವಾಗಿ ಸುರಕ್ಷಿತ ಎಂದು ಪರಿಗಣಿತವಾಗಿದೆ; ಆದರೆ ಕೆಲವು ಸಂಭಾವ್ಯ ಅಪಾಯಗಳನ್ನು ಲಕ್ಷ್ಯದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಅವುಗಳೆಂದರೆ:
- ಸೋಂಕು: ಯಾವುದೇ ಶಸ್ತ್ರಚಿಕಿತ್ಸೆಯಂತೆ ಲ್ಯಾಪರೊಸ್ಕೋಪಿಯಲ್ಲಿ ಕೂಡ ಗಾಯ ಮಾಡಿದ ಸ್ಥಳ ಅಥವಾ ಹೊಟ್ಟೆಯ ಒಳಭಾಗದಲ್ಲಿ ಸೋಂಕು ಉಂಟಾಗುವ ಸಾಧ್ಯತೆ ಇರುತ್ತದೆ.
- ರಕ್ತಸ್ರಾವ: ಲ್ಯಾಪರೊಸ್ಕೋಪಿಯಲ್ಲಿ ರಕ್ತಸ್ರಾವ ಉಂಟಾಗುವ ಸಾಧ್ಯತೆಗಳು ಕಡಿಮೆ; ಆದರೂ ಕೆಲವು ರೋಗಿಗಳು ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಅಥವಾ ಆ ಬಳಿಕ ರಕ್ತಸ್ರಾವಕ್ಕೆ ತುತ್ತಾಗಬಹುದಾಗಿದೆ.
- ಅಂಗಾಂಗ ಗಾಯ: ಶಸ್ತ್ರಚಿಕಿತ್ಸೆಗೆ ಒಳಪಡುವ ಸಂತಾನೋತ್ಪತ್ತಿ ಅಂಗಗಳ ಸನಿಹದಲ್ಲಿ ಇರುವ ಮೂತ್ರಪಿಂಡಗಳು ಅಥವಾ ಜಠರದಂತಹ ಅಂಗಾಂಗಗಳಿಗೆ ಶಸ್ತ್ರಚಿಕಿತ್ಸೆಯ ವೇಳೆ ಗಾಯ ಉಂಟಾಗುವ ಸಾಧ್ಯತೆ ಇರುತ್ತದೆ.
- ಅರಿವಳಿಕೆ ಅಪಾಯಗಳು: ಸಂಪೂರ್ಣ ಅರಿವಳಿಕೆಯು ವಿಶೇಷವಾಗಿ ಈಗಾಗಲೇ ಕೆಲವು ವಿಧವಾದ ಅನಾರೋಗ್ಯಗಳನ್ನು ಹೊಂದಿರುವವರಿಗೆ ತನ್ನದೇ ಆದ ಅಪಾಯಗಳನ್ನು ಒಡ್ಡಬಲ್ಲುದಾಗಿದೆ.
- ಅನಾರೋಗ್ಯ ಪುನರಾವರ್ತನೆ: ಎಂಡೊಮೆಟ್ರಿಯೋಸಿಸ್ ನಂತಹ ಕೆಲವು ಅನಾರೋಗ್ಯಗಳು ಚಿಕಿತ್ಸೆಯ ಬಳಿಕವೂ ಮರುಕಳಿಸಬಹುದಾಗಿದ್ದು, ಮರಳಿ ಚಿಕಿತ್ಸೆ ಒದಗಿಸಬೇಕಾಗುತ್ತದೆ.
ದಂಪತಿಗೆ ಉಜ್ವಲ ಆಶಾಕಿರಣ
ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಯು ಇನ್ನಷ್ಟು ಮತ್ತಷ್ಟು ಆವಿಷ್ಕಾರಗೊಳ್ಳುತ್ತಿದ್ದು, ಗರ್ಭ ಧಾರಣೆಗೆ ಸಮಸ್ಯೆಗಳನ್ನು ಹೊಂದಿರುವ ದಂಪತಿಗೆ ವಿನೂತನ ಆಶಾಕಿರಣವಾಗಿದೆ. ಗರ್ಭ ಧಾರಣೆಗೆ ಅಡಚಣೆಯಾಗುವ ಅಂತರ್ಗತ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ಉತ್ತಮ ಫಲಿತಾಂಶ ಹಾಗೂ ತಾಯ್ತನದ ಕನಸನ್ನು ನನಸು ಮಾಡಿಕೊಳ್ಳಲು ಇದು ವಿನೂತನ ರೀತಿಯಲ್ಲಿ ಸಹಾಯ ಮಾಡುತ್ತದೆ.
ಸಂತಾನಹೀನತೆಯ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಿರುವ ದಂಪತಿ ಇದನ್ನು ಪರಿಹರಿಸಿಕೊಳ್ಳಲು ಇರುವ ಅವಕಾಶಗಳು ಮತ್ತು ಸಾಧ್ಯತೆಗಳನ್ನು ಅರಿತುಕೊಳ್ಳುವುದು ತುಂಬಾ ಮುಖ್ಯವಾಗಿದೆ. ಸಂತಾನೋತ್ಪತ್ತಿಯನ್ನು ಹೆಚ್ಚಿಸುವ ಲ್ಯಾಪರೊಸ್ಕೋಪಿಯು ಪ್ರಜನನಾತ್ಮಕ ಉತ್ತಮ ಆರೋಗ್ಯದಲ್ಲಿ ಆಗಿರುವ ಸುಧಾರಣೆಗೆ ಒಂದು ಉತ್ತಮ ಉದಾಹರಣೆಯಾಗಿದ್ದು, ತಮ್ಮದೇ ಆದ ಕುಟುಂಬವನ್ನು ಹೊಂದುವ ಹಾದಿಯಲ್ಲಿ ದಂಪತಿಗೆ ಉಜ್ವಲ ಆಶಾಕಿರಣವಾಗಿದೆ. ಹೆಚ್ಚು ಹೆಚ್ಚು ಮಂದಿ ಮತ್ತು ದಂಪತಿ ಈ ಚಿಕಿತ್ಸೆಯ ಆಯ್ಕೆ ಮತ್ತು ಲಭ್ಯತೆಯ ಬಗ್ಗೆ ಅರಿವನ್ನು ಹೊಂದಿದಂತೆ ತಮ್ಮ ತಾಯ್ತನದ ಕನಸನ್ನು ನನವಾಗಿಸಿಕೊಳ್ಳಲು ಅಗತ್ಯವಾದ ನೆರವು ಮತ್ತು ಪರಿಹಾರಗಳನ್ನು ಅವರು ಈ ಮೂಲಕ ಕಂಡುಕೊಳ್ಳಬಹುದಾಗಿದೆ.
-ಡಾ| ಅಂಜಲಿ ಸುನಿಲ್ ಮುಂಡ್ಕೂರು
ಅಸೋಸಿಯೇಟ್ ಪ್ರೊಫೆಸರ್
ರಿಪ್ರೊಡಕ್ಟಿವ್ ಮೆಡಿಸಿನ್ ಆ್ಯಂಡ್ ಸರ್ಜರಿ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರಿಪ್ರೊಡಕ್ಟಿವ್ ಮೆಡಿಸಿನ್ ಮತ್ತು ಸರ್ಜರಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mudigere: ಆಕಸ್ಮಿಕ ಬೆಂಕಿ ತಗುಲಿ ಕಟ್ಟಡದಲ್ಲಿದ್ದ ಫೈನಾನ್ಸ್ ಕಚೇರಿಗೆ ಬೆಂಕಿ ಸುಟ್ಟು ಭಸ್ಮ
Afghanistan: ತಾಲಿಬಾನ್ ನೆಲೆಗಳ ಮೇಲೆ ಪಾಕಿಸ್ತಾನ ವೈಮಾನಿಕ ದಾಳಿ? 25ಕ್ಕೂ ಅಧಿಕ ಸಾ*ವು
Max: ಇಂದು ಸುದೀಪ್ ಮ್ಯಾಕ್ಸ್ ತೆರೆಗೆ; ಆ್ಯಕ್ಷನ್ ಅಡ್ಡದಲ್ಲಿ ಕಿಚ್ಚ ಮಿಂಚು
Gundlupete: ಬೋನಿಗೆ ಬಿದ್ದ ಗಂಡು ಚಿರತೆ
Ayodhya ರಾಮನ ದರ್ಶನ ಪಡೆದಿದ್ದ “ಬಸಪ್ಪ” ಈಗ ಶಬರಿಮಲೆಗೆ ಪ್ರಯಾಣ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.