Constipation: ಮಲಬದ್ಧತೆಯ ನಿರ್ವಹಣೆ; ಶೌಚ ಆರೋಗ್ಯಕ್ಕೆ ಪಥ್ಯಾಹಾರ ಸಲಹೆಗಳು
Team Udayavani, Apr 9, 2024, 8:00 AM IST
ಮಲ ವಿಸರ್ಜನೆಯ ಅಭ್ಯಾಸ ಆರೋಗ್ಯಪೂರ್ಣವಾಗಿ, ಚೆನ್ನಾಗಿ ಆಗುವುದು ನಾವು ಚೆನ್ನಾಗಿರುವ ಅನುಭವ ಹೊಂದುವುದಕ್ಕೆ ಬಹಳ ಮುಖ್ಯ. ಮಲ ವಿಸರ್ಜನೆಯ ಅಭ್ಯಾಸವು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಕೆಲವರು ದಿನಕ್ಕೆ ಒಂದಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆ ಮಾಡಬಹುದು; ಇನ್ನು ಕೆಲವರಿಗೆ ಮೂರ್ನಾಲ್ಕು ದಿನಗಳಿಗೆ ಒಮ್ಮೆ ಮಲ ವಿಸರ್ಜನೆ ಆಗಬಹುದು. ಆದ್ದರಿಂದ ನಮಗೆ ಯಾವುದು ಸಹಜ ಎಂಬುದನ್ನು ಮೊತ್ತಮೊದಲಾಗಿ ತಿಳಿದುಕೊಳ್ಳುವುದು ಮುಖ್ಯ. ಒಬ್ಬ ವ್ಯಕ್ತಿಗೆ “ಸಹಜ’ವಾದ ಮಲವಿಸರ್ಜನೆಯ ಅಭ್ಯಾಸ ಇನ್ನೊಬ್ಬ ವ್ಯಕ್ತಿಗೆ “ಅಸಹಜ’ ಆಗಿರಬಹುದು.
ಮಲಬದ್ಧತೆ ಎಂದರೇನು?
ಜೀರ್ಣಕ್ರಿಯೆಗೆ ಸಂಬಂಧಿಸಿದ ತೊಂದರೆಗಳಲ್ಲಿ ಬಹಳ ಸಾಮಾನ್ಯವಾದುದು ಮಲಬದ್ಧತೆ. ಯಾವುದೇ ವಯಸ್ಸಿನವರಲ್ಲಿ ಇದು ಉಂಟಾಗಬಹುದು. ಸಾಮಾನ್ಯಕ್ಕಿಂತ ಕಡಿಮೆ ಸಲ (ವಾರಕ್ಕೆ 3ಕ್ಕಿಂತ ಕಡಿಮೆ ಬಾರಿ) ಮಲ ವಿಸರ್ಜನೆ ಆಗುವುದಾದರೆ ಅದನ್ನು ಮಲಬದ್ಧತೆ ಎನ್ನಲಾಗುತ್ತದೆ. ಮಲವನ್ನು ವಿಸರ್ಜಿಸಲು ಕಷ್ಟವಾದಾಗಲೂ ಅದನ್ನು ಮಲಬದ್ಧತೆ ಎನ್ನಲಾಗುತ್ತದೆ. ಇಂತಹ ಸಂದರ್ಭಗಳಲ್ಲಿ ಮಲವು ಗಟ್ಟಿ, ಒಣ ಹಾಗೂ ಅಸಹಜವಾಗಿ ದೊಡ್ಡ ಅಥವಾ ಸಣ್ಣ ಗಾತ್ರದಲ್ಲಿ ಇರುತ್ತದೆ.
ಮಲಬದ್ಧತೆಗೆ ಕಾರಣಗಳೇನು?
- ಆಹಾರಾಭ್ಯಾಸದಲ್ಲಿ ಬದಲಾವಣೆ ಅಥವಾ ಆಹಾರ ಸೇವನೆಯ ಕ್ರಮದಲ್ಲಿ ಬದಲಾವಣೆಯಂತಹ ದೈನಿಕ ಅಥವಾ ಜೀವನ ಶೈಲಿ ಪರಿವರ್ತನೆಗಳು
- ನಾರಿನಂಶ ಕಡಿಮೆ ಇರುವ ಆಹಾರ ಕ್ರಮ
- ನಿರ್ಜಲತೆ – ಅಗತ್ಯವಿರುವಷ್ಟು ನೀರು, ದ್ರವಾಹಾರ ಸೇವಿಸದೆ ಇರುವುದು
- ಕೆಲವು ನಿರ್ದಿಷ್ಟ ಔಷಧಗಳು
- ಒತ್ತಡ, ಆತಂಕ ಅಥವಾ ಖನ್ನತೆ
- ಚಲನಶೀಲತೆ ಅಥವ ಅಥವಾ ದೈಹಿಕ ಚಟುವಟಿಕೆಗಳ ಕೊರತೆ
ಮಲಬದ್ಧತೆಯನ್ನು ನಿಭಾಯಿಸಲು ಸಾಮಾನ್ಯ ಆಹಾರಾಭ್ಯಾಸ/ ಜೀವನ ಶೈಲಿ ಸಲಹೆಗಳು
ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ನಿಮಗೆ ಅಭ್ಯಾಸವಾಗಿರುವ ಸಮಯಕ್ಕೆ ಸರಿಯಾಗಿ ತಪ್ಪದೆ ಆಹಾರ ಸೇವಿಸಿ. ಆಹಾರದಲ್ಲಿ ನಾರಿನಂಶ ಸಮೃದ್ಧವಾಗಿರುವ ಆಹಾರವಸ್ತುಗಳು ಇರಲಿ. ನಿಮ್ಮ ಆಹಾರಾಭ್ಯಾಸ ಸಮಯಕ್ಕೆ ಸರಿಯಾಗಿ ಇದ್ದಷ್ಟು ಮಲವಿಸರ್ಜನೆಯೂ ಕಾಲಕಾಲಕ್ಕೆ ಸರಿಯಾಗಿ ನಿರೀಕ್ಷೆಯಂತೆ ಆಗುತ್ತದೆ.
ಆಹಾರದಲ್ಲಿ ಸಾಕಷ್ಟು ನಾರಿನಂಶ ಇರಲಿ
ನಾರಿನಂಶವು ಸಸ್ಯಾಹಾರದ ಭಾಗವಾಗಿದ್ದು, ಜೀರ್ಣಗೊಳ್ಳುವುದಿಲ್ಲ.
ನಾರಿನಂಶದಲ್ಲಿ ಎರಡು ವಿಧಗಳಿವೆ:
ಕರಗಬಲ್ಲ ಮತ್ತು ಕರಗದೆ ಇರುವಂಥದ್ದು. ಕರಗಬಲ್ಲ ನಾರಿನಂಶವು ಮಲವು ಗಾತ್ರ ಹೊಂದಲು ಸಹಕರಿಸುತ್ತದೆ. ಕರಗಬಲ್ಲ ನಾರಿನಂಶದ ಉತ್ತಮ ಮೂಲಗಳೆಂದರೆ ಸೇಬು, ಬಾಳೆಹಣ್ಣು, ಬಾರ್ಲಿ, ಓಟ್ಸ್ ಮತ್ತು ಬೀನ್ಸ್. ಕರಗದೆ ಇರುವ ನಾರಿನಂಶವು ಜೀರ್ಣಾಂಗ ವ್ಯೂಹದಲ್ಲಿ ಆಹಾರದ ಚಲನೆಗೆ ವೇಗ ಒದಗಿಸುತ್ತದೆ ಮತ್ತು ಮಲಬದ್ಧತೆಯನ್ನು ತಡೆಯಲು ಸಹಕರಿಸುತ್ತದೆ.
ಏಕದಳ ಧಾನ್ಯಗಳು, ಬಹುತೇಕ ತರಕಾರಿಗಳು, ಗೋಧಿಯ ತೌಡು ಮತ್ತು ಕಾಳುಗಳು ಕರಗದೆ ಇರುವ ನಾರಿನಂಶದ ಸಮೃದ್ಧ ಮೂಲಗಳಾಗಿವೆ. ನಾರಿನಂಶವನ್ನು ಹೊಂದಿರುವ ಆಹಾರವಸ್ತುಗಳು ಕರಗಬಲ್ಲ ಮತ್ತು ಕರಗದ – ಎರಡೂ ಬಗೆಯ ನಾರಿನಂಶಗಳನ್ನು ಹೊಂದಿರುತ್ತವೆ. ಪ್ರತೀ ದಿನ 25ರಿಂದ 30 ಗ್ರಾಂ ನಾರಿನಂಶ ಪೂರೈಕೆಯಾಗುವಂತೆ ಆಹಾರ ಸೇವನೆಯ ಗುರಿ ಹೊಂದಿರಬೇಕು.
ಸಾಕಷ್ಟು ನಾರಿನಂಶ ಸಹಿತ ಆಹಾರ ಸೇವನೆಗೆ ಸಲಹೆಗಳು
- ದಿನಕ್ಕೆ ಕನಿಷ್ಠ 7 ಬಾರಿ ಹಣ್ಣು ಮತ್ತು ತರಕಾರಿಗಳನ್ನು ಸೇವಿಸಬೇಕು (1 ಬಾರಿಯ ಸೇವನೆ ಎಂದರೆ 1 ಕಪ್ ಅಥವಾ 1 ಮಧ್ಯಮ ಗಾತ್ರದ ಹಣ್ಣು).
- ದಿನಕ್ಕೆ ಕನಿಷ್ಠ 5 ಬಾರಿ ಇಡೀ ಧಾನ್ಯಗಳ ಆಹಾರ ಉತ್ಪನ್ನಗಳನ್ನು ಸೇವಿಸಿ. ಇಡೀ ಧಾನ್ಯದ ಬ್ರೆಡ್ ಮತ್ತು ಸೀರಿಯಲ್‌ಗಳನ್ನು ಹೆಚ್ಚು ಸೇವಿಸಿ.
- ನಿಮ್ಮ ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸಿಕೊಳ್ಳಲು ತರಕಾರಿಗಳು ಮತ್ತು ಬೇಳೆಗಳನ್ನು ಸೇರಿಸಿಕೊಳ್ಳಿ.
- ಬೆಳಗಿನ ಲಘು ಉಪಾಹಾರವಾಗಿ ಹಣ್ಣುಗಳು, ಒಣ ಹಣ್ಣುಗಳು ಅಥವಾ ಕಡಿಮೆ ಕೊಬ್ಬಿನ ಯೋಗರ್ಟ್ ಸೇವಿಸಿ.
- ಮಧ್ಯಾಹ್ನದ ಊಟದ ಜತೆಗೆ ಹಸುರು ತರಕಾರಿ ಸಲಾಡ್ ಅಥವಾ ತರಕಾರಿ ಸೂಪ್ ಸೇವಿಸಿ.
- ಒಣ ಪ್ಲಮ್ ಅಥವಾ ಪ್ರೂನ್‌ಗಳು ಮಲವನ್ನು ಸಹಜವಾಗಿ ಸಡಿಲಗೊಳಿಸುವ ಗುಣ ಹೊಂದಿವೆ. ಅಗತ್ಯಬಿದ್ದರೆ ಬಲಬದ್ಧತೆಯನ್ನು ನಿಭಾಯಿಸಲು 2-3 ಪ್ರೂನ್‌ಗಳನ್ನು ಸೇವಿಸಿ.
- ಯೋಗರ್ಟ್, ಸೂಪ್‌ಗಳು ಅಥವಾ ಸಲಾಡ್ ಮೇಲೆ ಅಗಸೆ ಬೀಜ ಉದುರಿಸಿ ಸೇವಿಸಿ.
- ಆಹಾರ ವಸ್ತುಗಳ ಲೇಬಲ್ ಓದಿಕೊಳ್ಳಿ. ಹೆಚ್ಚು ನಾರಿನಂಶವಿರುವ ಆಹಾರವಸ್ತುಗಳಲ್ಲಿ ಪ್ರತೀ 100 ಗ್ರಾಂಗೆ 6 ಗ್ರಾಂ ನಾರಿನಂಶ ಇರುತ್ತದೆ. ಪ್ರತೀ 100 ಗ್ರಾಂಗೆ 3 ಗ್ರಾಂಗಿಂತ ಕಡಿಮೆ ನಾರಿನಂಶ ಇರುವಂಥವು ಕಡಿಮೆ ನಾರಿನಂಶದ ಆಹಾರಗಳು.
- ದೇಹವು ನಾರಿನಂಶ ಸಹಿತ ಆಹಾರಕ್ಕೆ ಒಗ್ಗಿಕೊಳ್ಳುವುದಕ್ಕಾಗಿ ನಾರಿನಂಶ ಸಹಿತ ಆಹಾರ ಸೇವನೆಯನ್ನು ನಿಧಾನವಾಗಿ ಹೆಚ್ಚಿಸಿಕೊಳ್ಳಬೇಕು. ನಾರಿನಂಶ ಇರುವ ಆಹಾರಗಳನ್ನು ಅತಿಯಾಗಿ ಸೇವಿಸಿದರೆ ಹೊಟ್ಟೆಯುಬ್ಬರ, ವಾಯು ಪ್ರಕೋಪ ಮತ್ತು ಕಿರಿಕಿರಿ ಉಂಟಾಗಬಹುದು.
ಆಹಾರವನ್ನು ಆರಾಮವಾಗಿ ಸೇವಿಸಿ
ಊಟ-ಉಪಾಹಾರಗಳನ್ನು ಆರಾಮವಾಗಿ ಕುಳಿತು, ನಿಧಾನವಾಗಿ ಸಂತೋಷದಿಂದ ಸೇವಿಸಿ. ವೇಗವಾಗಿ ಬಕಬಕನೆ ಆಹಾರ ಸೇವಿಸಿದರೆ ಆಹಾರದ ಜತೆಗೆ ಗಾಳಿ ಹೊಟ್ಟೆ ಸೇರುವ ಸಾಧ್ಯತೆ ಇದೆ. ಇದರಿಂದ ಹೊಟ್ಟೆಯುಬ್ಬರ, ಕಿರಿಕಿರಿ ಉಂಟಾಗಬಹುದು.
ಸಾಕಷ್ಟು ನೀರು, ದ್ರವಾಹಾರ ಸೇವಿಸಿ
ಆಹಾರದಲ್ಲಿ ನಾರಿನಂಶವನ್ನು ಹೆಚ್ಚಿಸುವುದರ ಜತೆಗೆ ನಾವು ಸೇವಿಸುವ ನೀರು, ದ್ರವಾಹಾರ ಪ್ರಮಾಣವನ್ನೂ ಹೆಚ್ಚಿಸಬೇಕು. ನಾರಿನಂಶ ಹೆಚ್ಚಿದ್ದಾಗ ಉಂಟಾಗಬಹುದಾದ ಹೊಟ್ಟೆಯುಬ್ಬರ, ಕಿರಿಕಿರಿಯನ್ನು ತಪ್ಪಿಸಲು ಇದು ಸಹಾಯ ಮಾಡುತ್ತದೆ. ದ್ರವಾಂಶದಿಂದ ಮಲಕ್ಕೆ ತೂಕ ಒದಗುವುದರಿಂದ ಅದು ಮೃದುವಾಗುತ್ತದೆ ಮತ್ತು ವಿಸರ್ಜನೆಗೆ ಸುಲಭವಾಗುತ್ತದೆ. ಪ್ರತೀ ದಿನ ಕನಿಷ್ಠ 8ರಿಂದ 10 ಲೋಟ (1.5ರಿಂದ 2 ಲೀಟರ್) ನೀರು, ದ್ರವಾಹಾರ ಸೇವಿಸಬೇಕು.
ಯಾವ ವಿಧವಾದ ದ್ರವಾಹಾರ ಸೇವಿಸಬೇಕು?
ನೀರು, ಹಣ್ಣು ಮತ್ತು ತರಕಾರಿ ಜ್ಯೂಸ್‌ಗಳು, ಸೂಪ್‌ಗ್ಳು, ಕೆಫಿನ್ ರಹಿತವಾದ ಅಥವಾ ಮೂಲಿಕೆ ಚಹಾಗಳು ಆರೋಗ್ಯಕರ ದ್ರವಾಹಾರಗಳಿಗೆ ಕೆಲವು ಉದಾಹರಣೆಗಳು. ಬಿಸಿಯಾಗಿರುವ ಪಾನೀಯಗಳನ್ನು ಕುಡಿಯುವುದರಿಂದ ಕೂಡ ಮಲಬದ್ಧತೆಯನ್ನು ತಡೆಯಲು ಸಹಾಯವಾಗುತ್ತದೆ. ಮದ್ಯ ಮತ್ತು ಕೆಫಿನ್‌ಯುಕ್ತ ಪಾನೀಯಗಳು (ಉದಾಹರಣೆಗೆ, ಚಹಾ, ಕಾಫಿ, ಕೋಲಾಗಳು) ನಿರ್ಜಲೀಕರಣವನ್ನು ಉಂಟುಮಾಡಬಲ್ಲವಾದ್ದರಿಂದ ಇವುಗಳ ಸೇವನೆಯನ್ನು ಕಡಿಮೆ ಮಾಡಬೇಕು ಅಥವಾ ನಿಲ್ಲಿಸಬೇಕು.
ಪ್ರೊಬಯಾಟಿಕ್‌ಗಳ ಬಗ್ಗೆ
ನಮ್ಮ ಕರುಳಿನಲ್ಲಿ ಬ್ಯಾಕ್ಟೀರಿಯಾ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಬ್ಯಾಕ್ಟೀರಿಯಾ ಪ್ರೊಬಯಾಟಿಕ್‌ಗಳು. ವಿಭಿನ್ನ ರೀತಿಯಲ್ಲಿ ಕೆಲಸ ಮಾಡುವ ಬೇರೆ ಬೇರೆ ವಿಧ ಮತ್ತು ಜಾತಿಯ ಪ್ರೊಬಯಾಟಿಕ್‌ಗಳಿವೆ. ಪ್ರೊಬಯಾಟಿಕ್ ಸಪ್ಲಿಮೆಂಟ್‌ಗಳ ಬಗ್ಗೆ ನಿಮ್ಮ ಆರೋಗ್ಯ ಆರೈಕೆ ಸಿಬಂದಿಯ ಜತೆಗೆ ಚರ್ಚಿಸಿ. ಜತೆಗೆ ನಿಮ್ಮ ಆಹಾರದಲ್ಲಿ ಮೊಸರು/ಮಜ್ಜಿಗೆಗಳನ್ನು ಸೇರಿಸಿಕೊಳ್ಳಿ.
ದಿನಂಪ್ರತಿ ಸಕ್ರಿಯರಾಗಿರಿ
- ದೈಹಿಕ ಚಟುವಟಿಕೆಗಳ ಕೊರತೆಯಿಂದಲೂ ಮಲಬದ್ಧತೆ ತಲೆದೋರಬಹುದು. ಸರಿಯಾಗಿ ಮಲವಿಸರ್ಜನೆಯಾಗಲು ಮತ್ತು ಮಲಬದ್ಧತೆಯನ್ನು ತಡೆಯಲು ದೈಹಿಕ ಶ್ರಮದ ಕೆಲಸಕಾರ್ಯಗಳು, ವ್ಯಾಯಾಮ ಮಾಡಬೇಕು.
- ಪ್ರತೀ ದಿನ ಕನಿಷ್ಠ 30 ನಿಮಿಷಗಳ ಕಾಲ, ವಾರದಲ್ಲಿ ಐದಾರು ದಿನ ವ್ಯಾಯಾಮ ಮಾಡಬೇಕು.
- ಆರಂಭದಲ್ಲಿ 10 ನಿಮಿಷಗಳ ವ್ಯಾಯಾಮ ಆರಂಭಿಸಿ ನಿಧಾನವಾಗಿ ಸಮಯವನ್ನು ಹೆಚ್ಚಿಸಬೇಕು.
- ಸ್ಮಾರ್ಟ್ ಫೋನ್, ಟಿವಿ ಅಥವಾ ಕಂಪ್ಯೂಟರ್ ಮುಂದೆ ಕಳೆಯುವ ಸಮಯವನ್ನು ಕಡಿಮೆ ಮಾಡುವುದರಿಂದ ದೈಹಿಕವಾಗಿ ಹೆಚ್ಚು ಸಕ್ರಿಯರಾಗಬಹುದು.
ಶೌಚ ಭಂಗಿ ಸರಿಯಾಗಿರಲಿ
ಶೌಚಾಲಯದಲ್ಲಿ ಕುಳಿತುಕೊಳ್ಳುವ ಭಂಗಿ ಸರಿಯಾಗಿರುವುದು ಕೂಡ ಮಲ ಸರಿಯಾಗಿ ವಿಸರ್ಜನೆಯಾಗುವುದಕ್ಕೆ ಮುಖ್ಯ. ಕುಕ್ಕರುಗಾಲಿನಲ್ಲಿ ಕುಳಿತುಕೊಳ್ಳುವುದರಿಂದ ಮಲವಿಸರ್ಜನೆಗೆ ಸಹಾಯವಾಗುತ್ತದೆ. ಈ ಭಂಗಿಯು ನಮ್ಮ ಕರುಳು ಕುಳಿತಿರುವ ಭಂಗಿಯನ್ನು ಹೋಲುತ್ತದೆ. ದೇಹದ ನೈಸರ್ಗಿಕ, ಸಹಜ ಕ್ರಮಗಳನ್ನು ಅನುಸರಿಸಿ. ಸಾಧ್ಯವಾದರೆ ದಿನದ ಮುಖ್ಯ ಆಹಾರ ಸೇವನೆಯ 30 ನಿಮಿಷಗಳ ಒಳಗೆ ಶೌಚಾಲಯಕ್ಕೆ ಹೋಗಿ. ಆರಾಮವಾಗಿ ಶೌಚಕ್ರಿಯೆ ನಡೆಸಿ, ಗಡಿಬಿಡಿ ಬೇಡ.
ವಿರೇಚಕ (ಲ್ಯಾಕ್ಸೇಟಿವ್)ಗಳ ಬಳಕೆ
ವಿರೇಚಕ ಅಥವಾ ಲ್ಯಾಕ್ಸೇಟಿವ್ ಎಂದರೆ ಮಲಬದ್ಧತೆಯನ್ನು ಪರಿಹರಿಸುವ ನಾರಿನಂಶ ಸಹಿತ ಸಪ್ಲಿಮೆಂಟ್‌ಗಳು, ಗುಳಿಗೆಗಳು ಅಥವಾ ದ್ರವಗಳು. ನೀವು ದೀರ್ಘಕಾಲೀನ ಮಲಬದ್ಧತೆಯನ್ನು ಹೊಂದಿದ್ದರೆ ನಿಮ್ಮ ವೈದ್ಯರು ಕಿರು ಅವಧಿಗೆ ಲ್ಯಾಕ್ಸೇಟಿವ್ ಗಳನ್ನು ಶಿಫಾರಸು ಮಾಡಬಹುದು. ನೀವು ಇತರ ಯಾವುದಾದರೂ ಅನಾರೋಗ್ಯ ಹೊಂದಿದ್ದರೆ ಅಥವಾ ಗರ್ಭಿಣಿಯಾಗಿದ್ದರೆ ಲ್ಯಾಕ್ಸೇಟಿವ್‌ಗಳ ಸಹಿತ ಯಾವುದೇ ಹೊಸ ಔಷಧ ಬಳಸುವುದಕ್ಕೆ ಮುನ್ನ ವೈದ್ಯರಿಗೆ ಈ ಬಗ್ಗೆ ಮಾಹಿತಿ ನೀಡಬೇಕು. ನಿಮಗೆ ಮಲಬದ್ಧತೆ ಇದ್ದರೆ ವೈದ್ಯರ ಜತೆಗೆ ಸಮಾಲೋಚನೆ ನಡೆಸಿ ಅವರ ಸಲಹೆಯ ಪ್ರಕಾರವೇ ಲ್ಯಾಕ್ಸೇಟಿವ್ ಉಪಯೋಗಿಸುವುದು ಸೂಕ್ತ. ನಿಮ್ಮ ಆರೋಗ್ಯ ವಿವರಗಳನ್ನು ಕಲೆಹಾಕಿದ ಬಳಿಕ ವೈದ್ಯರು ನಿಮಗೆ ಯಾವ ಲ್ಯಾಕ್ಸೇಟಿವ್ ಸೂಕ್ತ ಎಂಬುದನ್ನು ನಿರ್ಧರಿಸಬಲ್ಲರು ಮತ್ತು ಮಲಬದ್ಧತೆಗೆ ಬೇರೆ ಯಾವುದಾದರೂ ಸಮಸ್ಯೆ ಕಾರಣವೇ ಎಂಬುದನ್ನು ಪರಿಶೀಲಿಸಬಲ್ಲರು.
ಕೊನೆಯದಾಗಿ
ಮಲಬದ್ಧತೆಯನ್ನು ಔಷಧ ಮಾತ್ರದಿಂದಲೇ ನಿಭಾಯಿಸುವುದು ಸಾಧ್ಯವಿಲ್ಲ. ಸಮರ್ಪಕವಾದ ಮತ್ತು ಸಮತೋಲಿತ ಆಹಾರಕ್ರಮ ಅನುಸರಣೆಯ ಸಹಿತ ಜೀವನ ವಿಧಾನ ಬದಲಾವಣೆಯಿಂದ ಉತ್ತಮವಾದ ಅಲ್ಪಾವಧಿ ಮತ್ತು ದೀರ್ಘಾವಧಿ ಫಲಿತಾಂಶಗಳನ್ನು ಪಡೆಯಲು ಸಾಧ್ಯ
-ಪರ್ಲೀನ್ ಪಿಂಕಿ ರೋಡ್ರಿಗಸ್
ಕ್ಲಿನಿಕಲ್ ಡಯಟೀಶಿಯನ್ ಡಯಟೆಟಿಕ್ಸ್ ವಿಭಾಗ,
ಕೆಎಂಸಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಥ್ಯಾಹಾರ ವಿಭಾಗ, ಕೆಎಂಸಿ ಆಸ್ಪತ್ರೆ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.