Mother: ತಾಯಂದಿರ ಮಾನಸಿಕ ಆರೋಗ್ಯ
Team Udayavani, Nov 12, 2024, 2:33 PM IST
“ತಾಯಿ’ ಎಂದರೆ ಮಮತೆಯ ಕಡಲು, ಪ್ರೀತಿಯ ಸೆಲೆ, ಧೈರ್ಯದ ನೆಲೆ. ತಾಯಿಯನ್ನು ಪ್ರಕೃತಿಗೆ ಹೋಲಿಸಲಾಗಿದೆ. ತಾಯಿ ಎನ್ನುವವಳು ಮೊದಲು ಹೆತ್ತವರಿಗೆ ಮಗಳಾಗಿ, ಗಂಡನಿಗೆ ಮಡದಿಯಾಗಿ, ಅವಳ ಮಗುವಿಗೆ ತಾಯಿಯಾಗುತ್ತಾಳೆ. ಮಾತೃ ಸ್ವರೂಪಿ ತಾಯಿ ತನ್ನ ಗರ್ಭದಲ್ಲಿ ಮಗುವನ್ನು ಪೋಷಿಸಿ, ಹಡೆದು, ಹಾಲುಣಿಸಿ, ಬೆಳೆಸಿ ಪ್ರಪಂಚಕ್ಕೆ ಪರಿಚಯಿಸುತ್ತಾಳೆ. ತಾಯಿ ಸಮಾಜದ ಸ್ವಾಸ್ಥ್ಯ ಕಾಪಾಡುವಲ್ಲಿ ಮೂಲ ಕಾರಣಳು ಎಂದರೆ ತಪ್ಪಾಗದು. ತಾಯಿಯಾದವಳು ತನ್ನ ಕುಟುಂಬದ ಪಾಲನೆಯ ಜತೆಗೆ ಸಮಾಜದ ಬೆಳವಣಿಗೆಗೆ ಕೊಡುಗೆ ನೀಡುತ್ತಾಳೆ. ತಾಯಿ ತನ್ನ ಜವಾಬ್ದಾರಿ ನಿಭಾಯಿಸುವ ಹಂತದಲ್ಲಿ ತನ್ನ ಆರೋಗ್ಯದ ಕಾಳಜಿ ವಹಿಸುವುದನ್ನು ಮರೆಯುತ್ತಾಳೆ. ತನ್ನ ದೈಹಿಕ ಬದಲಾವಣೆಗಳು, ಹಾರ್ಮೋನುಗಳ ವೈಪರೀತ್ಯ, ಇದರ ಜತೆಗೆ ತಾಯಿಯ ಮಾನಸಿಕ ಆರೋಗ್ಯವು ಮುಖ್ಯವಾಗಿದ್ದು, ಇದರ ಬಗ್ಗೆ ಗಮನ ಹರಿಸುವುದು ಅಗತ್ಯವಾಗಿದೆ. ತಾಯಿಯ ಮಾನಸಿಕ ಆರೋಗ್ಯವು ಅವಳ, ಮಕ್ಕಳ, ಕುಟುಂಬದ, ಹಾಗು ಸಮಾಜದ ಸರ್ವತೋಮುಖ ಬೆಳವಣಿಗೆಗೆ ತಾಯಂದಿರ ಮಾನಸಿಕ ಆರೋಗ್ಯ ಕಾರಣವಾಗಬಲ್ಲುದು.
ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯಕ್ಕಿರುವ ವ್ಯತ್ಯಾಸವೇನು?
ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ ಏನು ?
ಮಕ್ಕಳು ಮತ್ತು ಕುಟುಂಬದ ಮೇಲೆ ತಾಯಂದಿರ ಮಾನಸಿಕ ಆರೋಗ್ಯದ ಪ್ರಭಾವವೇನು?
ತಾಯಂದಿರ ಮಾನಸಿಕ ಆರೋಗ್ಯದ ಮೇಲೆ ಪ್ರಭಾವ ಬೀರುವ ಅಂಶಗಳಾವುವು ?
ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಸ್ಥಿತಿ ಗುರುತಿಸುವುದು ಹೇಗೆ?
ತಾಯಂದಿರ ಮಾನಸಿಕ ಆರೋಗ್ಯ ಸುಧಾರಿಸುವ ಮಾರ್ಗೋಪಾಯಗಳು ಯಾವುವು? ಈ ಬಗ್ಗೆ ಗಮನಹರಿಸೋಣ.
ಮಾನಸಿಕ ಕಾಯಿಲೆ ಮತ್ತು ಮಾನಸಿಕ ಆರೋಗ್ಯ
ಮಾನಸಿಕ ಕಾಯಿಲೆಯು ತಾಯಂದಿರಲ್ಲಿ ದಿನನಿತ್ಯದ ಕೆಲಸ ನಿರ್ವಹಣೆಯಲ್ಲಿ ಒತ್ತಡ (ಕಿರಿಕಿರಿ) ಉಂಟುಮಾಡುತ್ತದೆ. ನಕಾರಾತ್ಮಕ ಭಾವನೆಗಳು, ಆಲೋಚನೆಗಳು ಹಾಗು ನಡವಳಿಕೆಗಳು, ಅನಗತ್ಯ ಒತ್ತಡಗಳು, ಕುಗ್ಗಿದ ಕಾರ್ಯಕ್ಷಮತೆ ಮತ್ತು ದಿನನಿತ್ಯದ ಕೆಲಸಗಳನ್ನು ನಿರ್ವಹಿಸುವಲ್ಲಿನ ವಿಫಲತೆಯನ್ನು ಸೂಚಿಸುತ್ತದೆ. ಅಷ್ಟೇ ಅಲ್ಲದೆ ಮಕ್ಕಳು, ಕುಟುಂಬ ಮತ್ತು ಸಮಾಜದ ಜತೆಗೆ ಪರಿಣಾಮಕಾರಿ ಸಂಬಂಧವನ್ನು ಬೆಳೆಸುವಲ್ಲಿ ತಡೆ ಒಡ್ಡುತ್ತದೆ. ಮಾನಸಿಕ ಕಾಯಿಲೆಯ ರೋಗಲಕ್ಷಣಗಳನ್ನು ಪ್ರಾರಂಭದ ಹಂತದಲ್ಲಿ ಗುರುತಿಸಿ, ಮಾನಸಿಕ ತಜ್ಞರ ಸಲಹೆ ಪಡೆಯುವುದು ಆವಶ್ಯಕವಾಗಿದೆ .
ಮಾನಸಿಕ ಆರೋಗ್ಯವು ತಾಯಂದಿರ ಒಟ್ಟಾರೆ ಯೋಗಕ್ಷೇಮ ಮತ್ತು ಸ್ವಾಸ್ಥ್ಯದ ಬಗ್ಗೆ ತಿಳಿಸುತ್ತದೆ. ತಾಯಂದಿರು ತಮ್ಮ ದಿನನಿತ್ಯದ ಕರ್ತವ್ಯ ನಿರ್ವಹಣೆಯಲ್ಲಿ ತೋರಿಸುವ ಆಸಕ್ತಿ, ಎದುರಾಗುವ ಸಮಸ್ಯೆಗಳನ್ನು ನಿಭಾಯಿಸುವಲ್ಲಿ ಅವರ ಆತ್ಮಸ್ಥೈರ್ಯ, ಮಕ್ಕಳು ಮತ್ತು ಕುಟುಂಬದ ಜತೆಗಿನ ಅವರ ಒಡನಾಟ, ಕುಟುಂಬ ಮತ್ತು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡುವಲ್ಲಿ ಅವರ ಸಕಾರಾತ್ಮಕ ಆಲೋಚನೆಗಳನ್ನು ತಿಳಿಸುತ್ತದೆ.
ತಾಯಿಯ ಮಾನಸಿಕ ಅಸ್ವಾಸ್ಥ್ಯದ ಪ್ರಭಾವವೇನು?
ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ನೇರ ಪ್ರಭಾವವನ್ನು ಉಂಟುಮಾಡುತ್ತದೆ. ತಾಯಿ ಮಗುವಿನ ಸಂಬಂಧ ಕರುಳ ಬಳ್ಳಿಯ ಸಂಬಂಧವಾಗಿದೆ. ಗರ್ಭಾವಾಸ್ಥೆಯಲ್ಲಿಯೇ ತಾಯಿ ಮತ್ತು ಭ್ರೂಣದ ಸಂಬಂಧ ಚಿಗುರೊಡೆಯುತ್ತದೆ. ಬೆಳೆಯುತ್ತಿರುವ ಭ್ರೂಣವು ತಾಯಿಯ ಹೃದಯ ಬಡಿತ ಹಾಗೂ ಧ್ವನಿಯ ಬಗ್ಗೆ ಅರಿವನ್ನು ಪಡೆಯುತ್ತದೆ. ಸ್ಪರ್ಶ ಮತ್ತು ಚಲನೆಗೆ ಪ್ರತಿಕ್ರಿಯಿಸುತ್ತದೆ. ತಾಯಂದಿರು ಇಂಥ ಸಮಯದಲ್ಲಿ ತಮ್ಮ ದೇಹದಲ್ಲಾಗುತ್ತಿರುವ ವೈಪರೀತ್ಯಗಳಿಗೆ ನೀಡುವ ಸ್ಪಂದನೆ ಅಥವಾ ಪ್ರಸವದ ಬಗೆಗಿನ ಅವರ ಭಯ, ಆತಂಕ ಭ್ರೂಣದ ಮೇಲೆ ಪ್ರಭಾವ ಬೀರಬಹುದು. ಅಷ್ಟೇ ಅಲ್ಲದೆ ಹೆರಿಗೆಯ ಅನಂತರದ ಬಾಣಂತಿಯ ಚೇತರಿಕೆ, ಹಾಲುಣಿಸುವ ಸಂದರ್ಭದ ಬದಲಾವಣೆಗಳು, ನಿದ್ರಾಭಂಗದಂತಹ ಸಂದರ್ಭದಲ್ಲಿ ತಾಯಿಯ ಮಾನಸಿಕ ಅಸ್ವಸ್ಥತೆಯು ಮಗುವಿನ ಮೇಲೆ ಪ್ರಭಾವ ಬೀರುತ್ತದೆ.
ಜನನಿ ತಾನೇ ಮೊದಲ ಗುರು ಎಂಬ ಮಾತಿದೆ. ಮಕ್ಕಳು ತಾಯಿಯನ್ನು ನೋಡಿ ಕಲಿಯುವುದು, ಅನುಕರಿಸುವುದು ಸಾಮಾನ್ಯ. ತಾಯಿಯ ಭಾವನೆ ಮತ್ತು ಭಾವನಾತ್ಮಕ ಅಭಿವ್ಯಕ್ತಿಗಳನ್ನು ಮಕ್ಕಳು ಕಲಿಯುತ್ತಾರೆ. ತಾಯಿಯ ದುಃಖದ ಅಭಿವ್ಯಕ್ತಿ, ಸಹಾನುಭೂತಿ ಹಾಗೂ ಸಹಾಯ ವರ್ತನೆಯನ್ನು ಪ್ರೋತ್ಸಾಹಿಸುತ್ತದೆ. ಕೋಪದ ಅಭಿವ್ಯಕ್ತಿ ಪ್ರತಿಭಟನೆ ಹಾಗೂ ಅಸ್ವಸ್ಥತೆಯನ್ನು ಸಂಕೇತಿಸುತ್ತದೆ. ತಾಯಿಯು ಸಮಸ್ಯೆಯನ್ನು ನಿಭಾಯಿಸುವಲ್ಲಿ ತೋರಿಸುವ ಕೌಶಲಗಳು ಮಗುವಿಗೆ ತಾನು ಇತರರೊಂದಿಗೆ ಉತ್ತಮ ಭಾವನಾತ್ಮಕ ಸಂಬಂಧವನ್ನು ಬೆಳೆಸಲು, ಕಲಿಕೆಯ ಬಗ್ಗೆ ಆಸಕ್ತಿ ಹೊಂದಲು ಮತ್ತು ಶೈಕ್ಷಣಿಕ ಸಾಧನೆಯನ್ನು ಮಾಡಲು ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ಸ್ವಾಭಿಮಾನಿಯಾಗಲು, ಸಮಾಜದೊಂದಿಗೆ ಉತ್ತಮ ಭಾಂದವ್ಯ ಹೊಂದಲು ಹಾಗೂ ಜೀವನದ ಬಗ್ಗೆ ಸಕಾರಾತ್ಮಕ ಚಿಂತನೆಯನ್ನು ಮಾಡಲು ನೆರವಾಗಬಲ್ಲದು.
ತಾಯಿಯ ಮಾನಸಿಕ ಅಸ್ವಾಸ್ಥ್ಯವು ಇಡೀ ಕುಟುಂಬದ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳ ಮತ್ತು ಕುಟುಂಬದ ಪೋಷಣೆ, ಸಾಮರಸ್ಯ, ಉತ್ತಮ ಕೌಟುಂಬಿಕ ಸಂಬಂಧ, ಕುಟುಂಬದೊಂದಿಗೆ ಸಂವಹನ ಮಾದರಿಗಳು, ಉತ್ತಮ ಕುಟುಂಬ ನಿರ್ವಹಣೆಯಲ್ಲಿ ಸಹಾಯವಾಗಬಲ್ಲದು. ಕೌಟುಂಬಿಕ ಮನಸ್ತಾಪಗಳು, ಹೊಂದಾಣಿಕೆಯ ಕೊರತೆ, ಮಾನಸಿಕ ತುಮುಲ, ತಪ್ಪು ತಿಳಿವಳಿಕೆಗಳು, ಅತಿಯಾದ ನಿರೀಕ್ಷೆಗಳು, ಜಗಳ, ದುರ್ಬಲತೆ, ಉದ್ವೇಗ, ಒತ್ತಡ ಇವೇ ಮುಂತಾದವು ಕುಟುಂಬದ ಸ್ವಾಸ್ಥ್ಯ ಕೆಡಲು ಮಾರಕವಾಗಿದೆ.
ತಾಯಂದಿರಲ್ಲಿ ಮಾನಸಿಕ ಆರೋಗ್ಯದ ಪ್ರಾಮುಖ್ಯ
ದೈನಂದಿನ ಒತ್ತಡಗಳು ಹಾಗೂ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲು, ಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಸಂಬಂಧಗಳನ್ನು ಪೂರ್ಣವಾಗಿ ಅನುಭವಿಸಲು, ಈ ಕ್ಷಣವನ್ನು ಜೀವಿಸಲು ಮತ್ತು ಜತೆಗಿರುವವರೊಂದಿಗೆ ಆತ್ಮೀಯವಾಗಿ ಜೀವನವನ್ನು ಅನುಭವಿಸಲು ಸಹಾಯಕವಾಗಿದೆ. ಮಗುವಿನ ಭವಿಷ್ಯ ತಾಯಿಯ ಕೈಯಲ್ಲಿದೆ. ಮಗುವನ್ನು ಉತ್ತಮ ನಾಗರಿಕನನ್ನಾಗಿ ಮಾಡುವ ಜವಾಬ್ದಾರಿ ಅವಳ ಮೇಲಿದೆ. ಹೀಗಾಗಿ ತಾಯಿಯು ತನ್ನ ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ.
ತಾಯಂದಿರ ಮಾನಸಿಕ ಆರೋಗ್ಯವು ಇಡೀ ಸಮಾಜದ ಹಿತ ಕಾಪಾಡುವಲ್ಲಿ ಮತ್ತು ಆರೋಗ್ಯವಂತ ಪೀಳಿಗೆಯನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. ತನ್ನ ಜೀವನದ ಗುರಿಯನ್ನು ತಲುಪಲು, ಜತೆಗೆ ಸಮಾಜಕ್ಕೆ ಕೊಡುಗೆ ನೀಡುವಲ್ಲಿ ಪರಿಣಾಮ ಬೀರುತ್ತದೆ.
ಮಾನಸಿಕ ಆರೋಗ್ಯದ ಗುಣಲಕ್ಷಣಗಳೇನು?
- ಸ್ವಯಂ ಕಾಳಜಿ ಮತ್ತು ಸಮತೋಲನ
ತಾಯಂದಿರು ತಮ್ಮ ವಯಕ್ತಿಕ ಕಾಳಜಿ ಹಾಗು ವೃತ್ತಿಜೀವನದ ಸಮತೋಲನವನ್ನು ಕಾಪಾಡಿಕೊಳ್ಳುವುದು. ವಿಶ್ರಾಂತಿ ಮತ್ತು ಸಮಚಿತ್ತತೆಯನ್ನು ಹೊಂದುವಲ್ಲಿ ತೊಡಗಿಕೊಳ್ಳುವುದು.
- ಸ್ಥಿತಿಸ್ಥಾಪಕತ್ವ ಮತ್ತು ನಿಭಾಯಿಸುವ ಕೌಶಲಗಳು
ತಾಯಂದಿರು ತಮ್ಮ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸಮಚಿತ್ತದಿಂದ ಎದುರಿಸುವಲ್ಲಿ ತೊಡಗಿಕೊಳ್ಳುವುದು.
- ಸಕಾರಾತ್ಮಕ ಸಂಬಂಧವನ್ನು ಹೊಂದುವುದು
ತಾಯಂದಿರು ತಮ್ಮ ಜತೆಗಿರುವವರೊಂದಿಗೆ ಪ್ರಾಮಾಣಿಕ, ನಂಬಿಕಾರ್ಹ, ಗೌರವಯುತವಾಗಿದ್ದು ಮುಕ್ತ ಸಂವಹನದೊಂದಿಗೆ ಸಾಮಾಜಿಕ ಸಂಬಂಧವನ್ನು ಹೊಂದುವುದು ಮತ್ತು ತನ್ನ ವಯಕ್ತಿಕ ಹಾಗು ವೃತ್ತಿಜೀವನದ ಗುರಿ ಹಾಗೂ ಉದ್ದೇಶಗಳನ್ನು ಪೂರೈಸುವಲ್ಲಿ ಸಹಾಯಕವಾಗುವಂತಹ ಜನರೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವುದು.
ತಾಯಂದಿರ ಮಾನಸಿಕ ಆರೋಗ್ಯ
ತಾಯಂದಿರ ಮಾನಸಿಕ ಸ್ವಾಸ್ಥ್ಯ ಕೆಡಲು ಕಾರಣವಾಗಬಲ್ಲ ಅಂಶಗಳು
ಹೆಣ್ಣು ಸ್ವಭಾವತಃ ಸೂಕ್ಷ್ಮ ಮನಸ್ಸಿನವಳು,ಸಹನಾಮಯಿ, ತ್ಯಾಗಮೂರ್ತಿ. ತನ್ನ ಜೀವನದಲ್ಲಿ ಮಹತ್ತರವಾದದನ್ನು ಸಾಧಿಸಬೇಕೆಂಬ ಮಹತ್ವಾಕಾಂಕ್ಷೆ ಉಳ್ಳವಳು. ಆದರೆ ಒಂದು ಹಂತದ ಅನಂತರ ಆಕೆ ಅದೆಲ್ಲವನ್ನು ಕೈಚೆಲ್ಲಿ ಬಿಡುತ್ತಾಳೆ. ಗಂಡ ಹಾಗೂ ಮಗುವಿನ ಜವಾಬ್ದಾರಿಗೆ ಸೀಮಿತವಾಗುತ್ತಾಳೆ. “ಜೀವನದಲ್ಲಿ ನನಗಿನ್ನೇನೂ ಬೇಡ. ನಾನು ನೆಮ್ಮದಿಯಾಗಿದ್ದೇನೆ’ ಎಂದು ತನಗೆ ತಾನೇ ಚೌಕಟ್ಟು ಹಾಕಿಕೊಂಡುಬಿಡುತ್ತಾಳೆ. ಅದರಾಚೆಗೆ ಯೋಚಿಸುವ ಪ್ರಯತ್ನವನ್ನೇ ಮಾಡುವುದಿಲ್ಲ. ಒಂದು ವೇಳೆ ತನ್ನ ಗುರಿಯ ಬಗ್ಗೆ ಯೋಚಿಸಿದರೆ ಎಲ್ಲಿ ತನ್ನವರಿಗೆ ತೊಂದರೆಯಾಗುತ್ತದೆಯೋ ಅಥವಾ ಎಲ್ಲಿ ತಾನು ಸ್ವಾರ್ಥಿ ಎನಿಸಿಕೊಂಡು ಬಿಡುತ್ತೇನೆಯೋ ಎಂದು ಭಾವಿಸುತ್ತಾಳೆ. ಹೀಗಾಗಿ ಆಕೆಯ ಕನಸು ಕಮರಿ ಹೋಗುತ್ತದೆ. ಈ ಅತೃಪ್ತಿ ಆಕೆಯ ಮನಸ್ಸನ್ನು ಯಾವಾಗಲು ಕಾಡಬಹುದು.
ಸಾಮಾಜಿಕ ನಿರೀಕ್ಷೆಗಳು ತಾಯಂದಿರ ಮೇಲೆ ಒತ್ತಡ ಹೇರುತ್ತದೆ. ಪರಿಪೂರ್ಣ ತಾಯಿಯಾಗುವಲ್ಲಿನ ಸಮಾಜದ ನಿರೀಕ್ಷೆಗಳನ್ನು ತಲುಪುವಲ್ಲಿ ತಾಯಿಯು ತನ್ನ ಶಕ್ತಿ ಮೀರಿ ಶ್ರಮಿಸುತ್ತಾಳೆ. ಈ ಸಂದರ್ಭದಲ್ಲಿ ಒತ್ತಡಕ್ಕೆ ಹಾಗೂ ಭಾವೋದ್ವೇಗಕ್ಕೆ ಒಳಗಾಗುವ ಸಂದರ್ಭ ಹೆಚ್ಚಾಗಿದೆ. ತನ್ನ ಗಂಡ, ಮಕ್ಕಳು ಹಾಗೂ ಕುಟುಂಬದ ಸದಸ್ಯರನ್ನು ತೃಪ್ತಿ ಪಡಿಸುವಲ್ಲಿಯೇ ಆಕೆ ತನ್ನ ವಯಕ್ತಿಕ ಕಾಳಜಿಯನ್ನು ಮರೆಯುತ್ತಾಳೆ. ತನ್ನ ಕೌಟುಂಬಿಕ ಒತ್ತಡ ಹಾಗೂ ವೃತ್ತಿ ಜೀವನದ ಒತ್ತಡಗಳು ಆಕೆಯನ್ನು ಹತಾಶೆಗೊಳಿಸಬಹುದು (BURN OUT).
ತಾಯಂದಿರಲ್ಲಿ ಮಾನಸಿಕ ಅಸ್ವಸ್ಥತೆಯನ್ನು ಗುರುತಿಸುವುದು ಹೇಗೆ?
- ತಾಯಂದಿರ ವರ್ತನೆಯಲ್ಲಿನ ಬದಲಾವಣೆ
ಹಠಾತ್ ಮನಸ್ಥಿತಿ ಬದಲಾವಣೆ
ಸಾಮಾಜಿಕ ಪ್ರತ್ಯೇಕತೆ (ಒಂಟಿತನ)
ಅತಿಯಾದ ಚಿಂತೆ ಅಥವಾ ಕಿರಿಕಿರಿ
- ಅರಿವಿನ ಲಕ್ಷಣಗಳು (Cognitive Symptoms)
ಏಕಾಗ್ರತೆಯ ಕೊರತೆ
ಮರೆವು (ಮರೆಗುಳಿತನ)
ಗೊಂದಲ
- ದೈಹಿಕ ಲಕ್ಷಣಗಳು
ಹಸಿವು ಬದಲಾವಣೆ (Changes in Appetite)
ನಿದ್ರಾಭಂಗ
ಆಯಾಸ
ವಿವರಿಸಲಾಗದ ನೋವು ಅಥವಾ ಸಂಕಟ
ತಾಯಂದಿರ ಮಾನಸಿಕ ಆರೋಗ್ಯದ ಪ್ರಾಮುಖ್ಯದ ಉಪಯೋಗಗಳು
- ಸರ್ವತೋಮುಖ ಯೋಗಕ್ಷೇಮ
ಹೆಚ್ಚಿದ ಸಂತೋಷ
ಕಡಿಮೆ ಒತ್ತಡ
ದೈನಂದಿನ ಜೀವನದಲ್ಲಿ ಹೆಚ್ಚಿದ ತೃಪ್ತಿಯ ಭಾವನೆ
- ತಾಯಿತನದ ಮೇಲೆ ಸಕಾರಾತ್ಮಕ ಪ್ರಭಾವ
ಹೆಚ್ಚಿದ ತಾಳ್ಮೆ
ಸುಧಾರಿತ ಮನಸ್ಥಿತಿ
- ಕುಟುಂಬದೊಂದಿಗೆ ಉತ್ತಮ ಸಂಬಂಧ ಸಾಮರಸ್ಯ ಹಾಗೂ ಸಕಾರಾತ್ಮಕ ಬೆಳವಣಿಗೆ.
ತಾಯಂದಿರ ಅರೋಗ್ಯ ಸುಧಾರಣೆಯ ಮಾರ್ಗೋಪಾಯಗಳು
1. ಸ್ವ ಆರೈಕೆ
ಸ್ವಯಂ ಕಾಳಜಿ ಚಟುವಟಿಕೆಗಳಿಗೆ ಆದ್ಯತೆ ನೀಡುವುದು
ಸಣ್ಣ ವಿರಾಮಗಳನ್ನು ತೆಗೆದುಕೊಳ್ಳುವುದು
ಹವ್ಯಾಸಗಳಲ್ಲಿ ತೊಡಗಿಕೊಳ್ಳುವುದು
ಧ್ಯಾನ ,ಯೋಗ ಮುಂತಾದುವುಗಳಲ್ಲಿ ತೊಡಗಿಕೊಳ್ಳುವುದು
2. ಆರೋಗ್ಯಕರ ಜೀವನಶೈಲಿ ಆಯ್ಕೆ
ಸಮತೋಲಿತ ಆಹಾರ ಸೇವನೆ
ನಿಯಮಿತ ವ್ಯಾಯಾಮ
ಸಾಕಷ್ಟು ನಿದ್ರೆ
3. ಸಾಮಾಜಿಕ ಸಂಪರ್ಕ
ಕುಟುಂಬ, ಸ್ನೇಹಿತರು ಹಾಗೂ ಜನರೊಂದಿಗೆ ಉತ್ತಮ ಭಾಂದವ್ಯವನ್ನು ಹೊಂದುವುದು. ಕುಟುಂಬದ ಹೊಣೆ ಹೊತ್ತಿರುವ ತಾಯಂದಿರ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ತಾಯಂದಿರಿಗೂ ಮನಸ್ಸಿದೆ, ಆಸೆ ಕನಸುಗಳಿವೆ, ಅವಳಿಗೂ ಭಾವನೆಗಳಿವೆ. ಅವಳ ಜತೆಗಿರುವವರು ಕೂಡ ಅವಳ ಭಾವನೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಅವಳಿಗೆ ಸಹಕಾರ ನೀಡಿದರೆ ಅವಳು ಇನ್ನಷ್ಟು ಹುರುಪುಗೊಳ್ಳುವುದರಲ್ಲಿ ಸಂಶಯವಿಲ್ಲ. ತಾಯಂದಿರು ತಮ್ಮ ಬಗ್ಗೆಯೂ ಗಮನ ಹರಿಸುವ ಅಗತ್ಯವಿದೆ. ಅವರ ಆಸೆ ಕನಸುಗಳನ್ನು ಪೂರೈಸಲು ಅಪೇಕ್ಷೆ ಪಡುವುದು ಸ್ವಾರ್ಥವಲ್ಲ.
ತನಗಾಗಿ ಸಮಯ ಮೀಸಲಿಡುವುದು, ತನಗಿಷ್ಟವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವುದು, ಜೀವನವನ್ನು ಸಂತೋಷ ಮತ್ತು ತೃಪ್ತಿಕರವಾಗಿ ಕಳೆಯಲು ಆಕೆಯು ಅರ್ಹಳು. ಹೀಗಾಗಿ ಆಕೆಯ ಜತೆಗಿರುವವರು ಅವಳ ಕನಸಿಗೆ ಸ್ಫೂರ್ತಿ ತುಂಬುವ ಅಗತ್ಯವಿದೆ. ಈ ಬಗ್ಗೆ ನಾವೆಲ್ಲರೂ ಯೋಚನೆ ಮಾಡಬೇಕಾಗಿದೆ. ಜನನಿ ಮತ್ತು ಜನ್ಮಭೂಮಿಯ ಜವಾಬ್ದಾರಿ ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಬೇಕು. ಆಗ ಮಾತ್ರ ಸುಂದರ ಸಮಾಜ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ನಾವೆಲ್ಲರೂ ಕಾರ್ಯಪ್ರವೃತ್ತರಾಗೋಣ.
-ಸಂಗೀತಾ ಹೆಗ್ಡೆ
ರಿಸರ್ಚ್ ಅಸಿಸ್ಟೆಂಟ್
-ಶಾಲಿನಿ ಕ್ವಾಡ್ರಸ್
ಅಸಿಸ್ಟೆಂಟ್ ಪ್ರೊಫೆಸರ್-ಸೀನಿಯರ್ ಸ್ಕೇಲ್
ಆಕ್ಯುಪೇಶನಲ್ ಥೆರಪಿ ವಿಭಾಗ
ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಸೈಕಿಯಾಟ್ರಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು
ಹೊಸ ಸೇರ್ಪಡೆ
Adani Group: ಲಂಚ, ಸತ್ಯ ಮರೆಮಾಚಿದ ಕಾರಣಕ್ಕೆ ಗೌತಮ್ ಅದಾನಿ ವಿರುದ್ದ ಅಮೆರಿಕದಲ್ಲಿ ಕೇಸು
Bhairathi Ranagal: ಶಿವಣ್ಣನ ಮೊಗದಲ್ಲಿ ಭೈರತಿ ನಗು
Smart Bus Stan: ಕೋರಮಂಗಲದಲ್ಲಿ ಸ್ಮಾರ್ಟ್ ಬಸ್ ನಿಲ್ದಾಣ!
Bengaluru: ಇವಿ ಬೈಕ್ ಶೋರೂಮ್‌ನಲ್ಲಿ ಬೆಂಕಿ ಅವಘಡ; ಮಾಲೀಕ, ಮ್ಯಾನೇಜರ್ ಬಂಧನ, ಬಿಡುಗಡೆ
Bengaluru: ನಗರದಲ್ಲಿ ನಿಷೇಧಿತ ಕಲರ್ ಕಾಟನ್ ಕ್ಯಾಂಡಿ ತಯಾರಿಕಾ ಘಟಕ ಬಂದ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.