ಅಂಗಾಂಗ ದಾನಕ್ಕೆ ಪ್ರೇರಣೆ ಡಾ|ರಾಮಣ್ಣವರ
ಮಣ್ಣಾಗಿ ಬೂದಿಯಾಗುವ ದೇಹ ಅಧ್ಯಯನಕ್ಕೆ ನೆರವಾಗಲಿ
Team Udayavani, Jul 2, 2019, 8:04 AM IST
ವೈದ್ಯಕೀಯ ಕ್ಷೇತ್ರಕ್ಕೆ ಅತ್ಯವಶ್ಯವಾಗಿ ಬೇಕಾಗಿರುವ ದೇಹದ ವಿವಿಧ ಅಂಗಾಂಗಗಳ ದಾನಗಳ ಬಗ್ಗೆ ಅರಿವು ಮೂಡಿಸಬೇಕಾದ, ಅದರ ಕುರಿತು ತಿಳಿದುಕೊಳ್ಳಬೇಕಾದ ಅಗತ್ಯ ಈಗ ಹಿಂದೆಂದಿಗಿಂತಲೂ ಹೆಚ್ಚಾಗಿದೆ.
ರಕ್ತದಾನದಷ್ಟೇ ದೇಹದಾನ ಸಹ ಬಹಳ ಮುಖ್ಯ ಎಂಬ ಜಾಗೃತಿ ರಾಜ್ಯದ ಬಹುತೇಕ ಕಡೆ ಪರಿಣಾಮ ಬೀರುತ್ತಿದೆ.
ವೈದ್ಯಕೀಯ ಕ್ಷೇತ್ರಕ್ಕೆ ಬರುವ ಮುಂದಿನ ಯುವ ಪೀಳಿಗೆಗೆ ಶರೀರ ರಚನಾಶಾಸ್ತ್ರ ಕುರಿತು ಸಂಪೂರ್ಣ ತಿಳಿವಳಿಕೆ ಬರಲಿ ಎಂಬ ಏಕೈಕ ಉದ್ದೇಶದಿಂದ ಬೆಳ ಗಾವಿ ಜಿಲ್ಲೆಯ ಬೈಲಹೊಂಗಲದ ಡಾ| ಬಸವಣ್ಣೆಪ್ಪ ರಾಮಣ್ಣವರ ನಂತರ ಅವರ ಪುತ್ರ ಡಾ| ಮಹಾಂತೇಶ ರಾಮಣ್ಣವರ ಕೈಗೊಂಡ ದೇಹದಾನ ಜಾಗೃತಿ ಇಂದು ಆಂದೋಲನ ರೂಪ ಪಡೆದುಕೊಂಡಿದೆ.
ವೈದ್ಯ ವಿದ್ಯಾರ್ಥಿಗಳಿಗೆ ಮಾನವ ಶರೀರದ ಪರಿಚಯ ಇರಲೇಬೇಕು ಎಂದು ಡಾ. ಬಿ.ಎಸ್.ರಾಮಣ್ಣವರ ಯಾವಾಗಲೂ ಪ್ರತಿಪಾದಿಸುತ್ತಿದ್ದರು. ಆದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಅವರು ತಮ್ಮ ದೇಹವನ್ನು ಆಸ್ಪತ್ರೆಗೆ ದಾನ ಮಾಡಿದ್ದರು. ನಂತರ ಅವರ ಇಚ್ಛೆಯಂತೆ ಅವರ ಮಗ ಡಾ| ಮಹಾಂತೇಶ ಅವರೇ ತಂದೆಯ ದೇಹ ಛೇದ ಮಾಡಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿ ಇಡೀ ಜಗತ್ತೇ ಬೆರುಗುಗೊಳ್ಳುವಂತೆ ಮಾಡಿದ್ದು ಈಗ ಇತಿಹಾಸ.
ಆಗ ಆರಂಭವಾದ ದೇಹದಾನ ಜಾಗೃತಿ ಹಾಗೂ ಸಾಮಾಜಿಕ ಕಾರ್ಯ ಇಂದು ಎಲ್ಲ ಕಡೆ ದೊಡ್ಡ ಪ್ರಮಾಣದಲ್ಲಿ ಪಸರಿಸುತ್ತಿದೆ. ಸತ್ತ ಮೇಲೆ ತಮ್ಮ ದೇಹ ಮಣ್ಣಲ್ಲಿ ಮಣ್ಣಾಗಿ, ಬೂದಿಯಾಗಿ ಹೋಗದೇ ವಿದ್ಯಾರ್ಥಿಗಳ ಅಧ್ಯಯನಕ್ಕೆ ನೆರವಾಗಲಿ ಎಂಬ ಅರಿವು ಜನರಲ್ಲಿ ಮೂಡುತ್ತಿದೆ.
ಸತ್ತನಂತರವೂ ಸಮಾಜ ಸೇವೆ ಮಾಡಬೇಕೆನ್ನುವ ಇಚ್ಛೆ ಹೊಂದಿರುವವರಿಗೆ ಡಾ. ಮಹಾಂತೇಶ ರಾಮಣ್ಣವರ ಆರಂಭಿಸಿರುವ ದೇಹದಾನ ಚಳವಳಿ ಉತ್ತಮ ಅವಕಾಶ ಒದಗಿಸಿಕೊಟ್ಟಿದೆ. ಇದರಿಂದ ಮಣ್ಣಲ್ಲಿ ಮಣ್ಣಾಗುವ, ಇಲ್ಲವೇ ಸುಟ್ಟು ಬೂದಿಯಾಗುವ ಪಾರ್ಥಿವ ಶರೀರಕ್ಕೆ ಸಾರ್ಥಕತೆ ಬರುತ್ತಿದೆ. ದೇಹದಾನ ಚಳವಳಿಯ ಉದ್ದೇಶವೂ ಈಡೇರುತ್ತಿದೆ.
ಮಾನವನ ದೇಹ ರಚನೆ ಹಲವು ಸಂಕೀಣತೆಗಳಿಂದ ಕೂಡಿದೆ. ಇದರ ಅಧ್ಯಯನ ನಿರಂತರವಾಗಿ ನಡೆಯುತ್ತಿದೆ. ಎಲ್ಲ ರೋಗಗಳ ಪತ್ತೆ, ಚಿಕಿತ್ಸೆ , ಶಮನ, ವೈದ್ಯ ಶಾಸ್ತ್ರ ಅಂದುಕೊಂಡಂತೆ ಸದಾ ನಡೆಯುವುದಿಲ್ಲ. ಹೊಸ ಹೊಸ ರೋಗಗಳು ಹೊಸ ಸವಾಲುಗಳು ಸರ್ವಕಾಲದಲ್ಲೂ ಎದುರಾಗುತ್ತಿರುತ್ತದೆ. ಹೀಗಿರುವಾಗ ವೈದ್ಯರಾದವರು ಮಾನವನ ದೇಹ ಒಳಗೊಂಡಿರುವ ಪಂಚೇಂದ್ರಿಯಗಳು, ಮಿದುಳು, ಹೃದಯ, ಶ್ವಾಸಕೋಶ, ಅನ್ನನಾಳ, (ದೊಡ್ಡ ಮತ್ತು ಸಣ್ಣ ಕರಳು) ಮೂತ್ರಕೋಶಗಳಲ್ಲಿನ ಅಂತರ್ಗತ ನೂರಾರು ಸಂಗತಿಗಳ ಬಗ್ಗೆ ಆಳ ಅಧ್ಯಯನ ಮಾಡಬೇಕಾಗುತ್ತದೆ. ಇದು ಕೇವಲ ಸೈದ್ಧಾಂತಿಕವಾಗಿ ತಿಳಿದುಕೊಂಡರೆ ಸಾಲದು. ಪ್ರತಿ ಅಂಗಾಂಗಗಳ ಬಗ್ಗೆ ಪ್ರಾಯೋಗಿಕ ಅರಿವು ಅಗತ್ಯ. ಜೀವಂತ ವ್ಯಕ್ತಿಗಳ ಅಂಗಾಂಗಗಳನ್ನು ಕತ್ತರಿಸಿ ಅಧ್ಯಯನ ನಡೆಸಲು ಸಾಧ್ಯವಿಲ್ಲ. ಇದಕ್ಕೆ ಸಂಸ್ಕರಿಸಲ್ಪಟ್ಟ ಮೃತದೇಹವೇ ಉತ್ತಮ ಜ್ಞಾನ ಭಂಡಾರ. ಇಂತಹ ಪ್ರಾಯೋಗಿಕ ಅರಿವು ಮೂಡಿದಾಗ ಮಾತ್ರ ಪ್ರತಿಯೊಬ್ಬರೂ ಭವಿಷ್ಯದ ಯಶಸ್ವಿ ವೈದ್ಯರಾಗಬಲ್ಲರು.
ದೇಹದಾನದ ಲಾಭಗಳು: ವ್ಯಕ್ತಿಯು ಮರಣಾ ನಂತರ ಆಯಾಧರ್ಮದ ಸಂಪ್ರದಾಯದಂತೆ ಶವ ಸಂಸ್ಕಾರ ನೆರವೇರಿಸುತ್ತಾರೆ. ಶವವನ್ನು ಸುಡಲು 400-500 ಕೆ.ಜಿ. ಕಟ್ಟಿಗೆ ಬಳಸಲಾಗುತ್ತದೆ ಇದಕ್ಕಾಗಿ ಮರಗಿಡಗಳನ್ನು ಕಡಿಯುವುದರಿಂದ ಅರಣ್ಯ ಸಂಪತ್ತು ನಶಿಸುವುದಲ್ಲದೇ ವಾಯು ಮಾಲಿನ್ಯವುಂಟಾಗುತ್ತದೆ.
ಶವ ಹೂಳಲು ಸುಮಾರು 50 ಅಡಿ ಜಾಗ ಬೇಕು. ಕೆಲವು ಗಾಮೀಣ ಪ್ರದೇಶಗಳಲ್ಲಿ ಸ್ಮಶಾನಗಳ ಕೊರತೆಯಿಂದ ಎಲ್ಲಿ ಬೇಕಾದಲ್ಲಿ ಶವಗಳನ್ನು ಹೂಳುವುದರಿಂದ ಸಾರ್ವಜನಿಕ ಪ್ರದೇಶಕ್ಕೆ ತೊಂದರೆಯಾಗುತ್ತದೆ. ಕೆಲ ಸಮುದಾಯದಲ್ಲಿ ಶವವನ್ನು ಹೂಳುವುದು ಹಾಗೂ ಸುಡದೇ ಹಾಗೆಯೇ ಗಾಳಿಯಲ್ಲಿ ಇಟ್ಟು ಹದ್ದುಗಳಿಗೆ ತಿನ್ನಲು ಬಿಟ್ಟಿರುತ್ತಾರೆ. ಇದರಿಂದ ಪರಿಸರ ಮಾಲಿನ್ಯವುಂಟಾಗುವುದಲ್ಲದೇ ಹದ್ದುಗಳ ಹಾರಾಟದಿಂದ ಕೆಲವೊಮ್ಮೆ ವಿಮಾನ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ದೇಹದಾನದಿಂದ ಈ ಎಲ್ಲ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು ಎನ್ನುತ್ತಾರೆ. ಡಾ. ಮಹಾಂತೇಶ ರಾಮಣ್ಣವರ.
ದೇಹದಾನ ಮಾಡುವುದರಿಂದ ಯಾವುದೇ ತೊಂದರೆ ಇಲ್ಲ ಎಂಬ ಸಂದೇಶವನ್ನು ಆಯಾ ಸಮಾಜದ ಮಠಾಧೀಶರು ಕೊಟ್ಟರೆ ಅದರ ಪರಿಣಾಮವೇ ಬೇರೆ ಎಂಬುದನ್ನು ಅರಿತ ಡಾ|ಮಹಾಂತೇಶ ರಾಮಣ್ಣವರ, ಈ ನಿಟ್ಟಿನಲ್ಲಿ ರಾಜ್ಯದ ಅನೇಕ ಕಡೆ ಧಾರ್ಮಿಕ ಮುಖಂಡರಿಂದಲೇ ಜನ ಜಾಗೃತಿ ಕಾರ್ಯ ಅರಂಭ ಮಾಡಿದ್ದಾರೆ. ವಿವಿಧ ಕಡೆಗಳಲ್ಲಿ ವೈದ್ಯಕೀಯ ಶಿಬಿರಗಳನ್ನು ನಡೆಸಿ ಅಲ್ಲಿ ದೇಹದಾನದ ಮಹತ್ವದ ಬಗ್ಗೆ ತಿಳಿ ಹೇಳುತ್ತಿದ್ದಾರೆ. ದೇಹದಾನದಿಂದ ಪ್ರೇರಿತಗೊಂಡು ಈಗ ಅಂಗಾಂಗ ದಾನದ ಜಾಗೃತಿ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.
ಜನರಿಗೂ ಮರಣೋತ್ತರ ಪರೀಕ್ಷೆ ಹಾಗೂ ಶರೀರ ಛೇದನದ ವೈದ್ಯಕೀಯ ಪರಿಭಾಷೆ ಅರ್ಥವಾಗಿದೆ. ಇದರಿಂದ ತಾವೂ ದೇಹದಾನ ಮಾಡಬಹುದು ಎಂಬ ಅರಿವು ಅವರಿಗೆ ಆಗುತ್ತಿದೆ. ಆರಂಭದಲ್ಲಿ ಬೆರಳಣಿಕೆಯ ಜನರು ದೇಹದಾನಕ್ಕೆ ಹೆಸರು ನೋಂದಾಯಿಸುತ್ತಿದ್ದರು. ಈಗ ಒಂದೊಂದು ಕಡೆ ಇಡೀ ಕುಟುಂಬದವರು ದೇಹ ದಾನಕ್ಕೆ ಹೆಸರು ನೋಂದಾಯಿಸಿದ್ದಾರೆ. ಇದೆಲ್ಲ ಬೆಳವಣಿಗೆಯಿಂದ ಅಲೋಪಥಿಕ್ ಕಾಲೇಜ್‌ಗಳ ಜೊತೆಗೆ ಆಯುರ್ವೇದ ಮತ್ತು ಹೋಮಿಯೋಪಥಿ ಕಾಲೇಜ್‌ಗಳಿಗೂ ಶವಗಳು ಸಿಗುತ್ತಿವೆ. ವೈದ್ಯಕೀಯ ಕಾಲೇಜುಗಳು ಅನಾಥ ಶವಗಳಿಗಾಗಿ ಕಾಯುವುದು ಕಡಿಮೆಯಾಗಿದೆ.
ವಿಶ್ವಾಸ ಇರಲಿ
ವಿಶ್ವ ವೈದ್ಯರ ದಿನಾಚರಣೆ ಸಂದರ್ಭದಲ್ಲಿ ಅನೇಕ ಕಡೆ ವೈದ್ಯರ ಮೇಲೆ ಹಲ್ಲೆಗಳ ಪ್ರಕರಣ ಹೆಚ್ಚಾಗುತ್ತಿವೆ. ಇದು ಕಳವಳಕಾರಿ. ವೈದ್ಯರನ್ನು ಪೂಜ್ಯ ಭಾವನೆಯಿಂದ ನೋಡಬೇಕು. ಕುಟುಂಬದ ಸದಸ್ಯರಂತೆ ಕಾಣಬೇಕು. ವೈದ್ಯರು ಇರುವುದು ಜೀವದಾನ ಮಾಡಲು. ಜೀವ ತೆಗೆಯಲು ಅಲ್ಲ. ಪರಸ್ಪರ ವಿಶ್ವಾಸ ಮುಖ್ಯ.
ಡಾ ಮಹಾಂತೇಶ ರಾಮಣ್ಣವರ, ಸಹ ಪ್ರಾಧ್ಯಾಪಕ. ಕೆಎಲ್‌ಇ ಆಯುರ್ವೆದ ಕಾಲೇಜ್
ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.