PCOD Disease: ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ (ಪಿಸಿಒಡಿ)
Team Udayavani, Jul 17, 2023, 12:19 PM IST
ಸ್ತ್ರೀಯರು ಸ್ತ್ರೀರೋಗ ಮತ್ತು ಪ್ರಸೂತಿ ಆಸ್ಪತ್ರೆಯನ್ನು ಸಂದರ್ಶಿಸುವುದಕ್ಕೆ ಇರುವ ಬಹಳ ಸಾಮಾನ್ಯ ಕಾರಣಗಳಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಕೂಡ ಒಂದು. ಬಂಜೆತನಕ್ಕೆ ಚಿಕಿತ್ಸೆ ನೀಡುವ ಆಸ್ಪತ್ರೆಯನ್ನು ಸಂದರ್ಶಿಸುವ ಮಹಿಳೆಯರಲ್ಲಿ ಅರ್ಧಾಂಶಕ್ಕಿಂತಲೂ ಅಧಿಕ ಮಂದಿ ಪಾಲಿಸಿಸ್ಟಿಕ್ ಒವೇರಿಯನ್ ಕಾಯಿಲೆ ಅಥವಾ ಪಿಸಿಒಡಿಯನ್ನು ಹೊಂದಿರುತ್ತಾರೆ.
ಕಳೆದ 20 ವರ್ಷಗಳಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಕಾಯಿಲೆಯ ಪ್ರಕರಣಗಳು ಸ್ಪಷ್ಟವಾಗಿ ಹೆಚ್ಚಿರುವುದನ್ನು ಗಮನಿಸಲಾಗಿದೆ. ಸಮರ್ಪಕವಾದ ವ್ಯಾಯಾಮದ ಕೊರತೆ ಮತ್ತು ಕಳಪೆ ಆಹಾರಶೈಲಿಯಂತಹ ಪಾರಿಸರಿಕ ಕಾರಣಗಳು ಪ್ರಾಯಃ ಇದರ ಜತೆಗೆ ಸಂಬಂಧ ಹೊಂದಿವೆ. ಈ ಆಲಸಿ ಜೀವನಶೈಲಿಯನ್ನು ಹದಿಹರಯ ಮತ್ತು ಋತುಚಕ್ರ ಆರಂಭವಾಗುವ ವಯಸ್ಸಿನಲ್ಲಿ ಬದಲಾಯಿಸದೆ ಹೋದರೆ ಸಂತಾನೋತ್ಪತ್ತಿಯಲ್ಲಿ ತೊಡಗುವ ವಯಸ್ಸಿನಲ್ಲಿ ಪಿಸಿಒಡಿ ತೊಂದರೆಗೆ ಸಿಲುಕುವ ಅಪಾಯಗಳು ಹೆಚ್ಚುತ್ತವೆ.
ಪಾಲಿಸಿಸ್ಟಿಕ್ ಒವೇರಿಯನ್ ಕಾಯಿಲೆಯನ್ನು ಹೊಂದಿರುವ ಮಹಿಳೆಯಲ್ಲಿ ಸಾಮಾನ್ಯವಾಗಿ ಕಂಡುಬರುವ ಲಕ್ಷಣಗಳು ಎಂದರೆ ತೂಕ ಹೆಚ್ಚಳ, ಮುಖ ಮತ್ತು ದೇಹದ ಕೆಲವು ಭಾಗಗಳಲ್ಲಿ ಅತಿಯಾಗಿ ಕೂದಲು ಬೆಳೆಯುವಿಕೆ, ಚರ್ಮದಲ್ಲಿ ಎಣ್ಣೆಯಂಶ ಹೆಚ್ಚಿರುವುದು, ಕೂದಲು ಉದುರುವುದು, ಚರ್ಮದ ಬಣ್ಣ ಗಾಢವಾಗುವುದು, ಋತುಚಕ್ರ ಅನಿಯಮಿತವಾಗಿರುವುದು ಮತ್ತು ಗರ್ಭ ಧಾರಣೆಯಲ್ಲಿ ತೊಂದರೆ.
ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಹೊಂದಿದ್ದಾರೆ ಎಂದು ಶಂಕಿಸಲಾದ ಮಹಿಳೆಯನ್ನು ಅಲ್ಟ್ರಾಸೌಂಡ್ ಸ್ಕ್ಯಾನ್‌ಗೆ ಒಳಪಡಿಸಿದಾಗ ಆಕೆಯ ಅಂಡಾಶಯದ ಮೇಲೆ ಮುತ್ತಿನ ಉಂಗುರದಂತಹ ರಚನೆ ಕಂಡುಬಂದರೆ ಆಕೆ ಪಿಸಿಒಡಿ ಹೊಂದಿದ್ದಾರೆ ಎಂದು ಬಲವಾಗಿ ಸಂಶಯಿಸಬಹುದಾಗಿದೆ. ಹೆಚ್ಚುವರಿಯಾಗಿ, ರೋಗಪತ್ತೆಯನ್ನು ಖಚಿತಪಡಿಸಿಕೊಳ್ಳುವುದಕ್ಕಾಗಿ ಮತ್ತು ಮಧುಮೇಹ ಹಾಗೂ ಥೈರಾಯ್ಡ ಕಾರ್ಯನಿರ್ವಹಣೆಯ ತೊಂದರೆಗಳು ಇಲ್ಲ ಎಂಬುದನ್ನು ಸಾಬೀತುಪಡಿಸುವುದಕ್ಕಾಗಿ ಕೆಲವು ರಕ್ತ ಪರೀಕ್ಷೆಗಳನ್ನು ನಡೆಸಲಾಗುತ್ತದೆ.
ವ್ಯಾಖ್ಯಾನಾನುಸಾರವಾಗಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಒಂದು ಸಿಂಡ್ರೋಮ್ ಆಗಿದೆ. ಇದರರ್ಥವೆಂದರೆ ನಿರ್ದಿಷ್ಟ ರೋಗಿಯೊಬ್ಬರಲ್ಲಿ ಈ ಕಾಯಿಲೆಯ ಎಲ್ಲ ಸೂಚಿತ ಲಕ್ಷಣಗಳು ಎಲ್ಲ ಸಂದರ್ಭಗಳಲ್ಲಿಯೂ ಕಂಡುಬರಬೇಕೆಂದಿಲ್ಲ. ಹೀಗಾಗಿ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಹೊಂದಿರುವ ಒಬ್ಬ ಮಹಿಳೆಯಲ್ಲಿ ಬಂಜೆತನ, ಅನಿಯಮಿತ ಋತುಚಕ್ರ ಕಂಡುಬರಬಹುದು, ಆದರೆ ಚರ್ಮದಲ್ಲಿ ತೈಲದಂಶ ಹೆಚ್ಚಳ ಅಥವಾ ಮುಖದಲ್ಲಿ ಕೂದಲು ಬೆಳೆಯುವ ಲಕ್ಷಣಗಳು ಇಲ್ಲದಿರಬಹುದು. ಪಿಸಿಒಡಿ ಹೊಂದಿರುವ ಇನ್ನೊಬ್ಬ ಮಹಿಳೆಯಲ್ಲಿ ಸಹಜ ದೇಹ ತೂಕ ಇದ್ದು, ಮುಖದಲ್ಲಿ ಕೂದಲು ಬೆಳೆಯುವ ಮತ್ತು ಅನಿಯಮಿತ ಋತುಚಕ್ರದ ಲಕ್ಷಣ ಹೊಂದಿರಬಹುದು. ಅಲ್ಲದೆ ಬೊಜ್ಜು, ಅನಿಯಮಿತ ಋತುಚಕ್ರ, ಮುಖದಲ್ಲಿ ಅತಿಯಾದ ಕೂದಲು ಬೆಳೆಯುವಿಕೆಯಂತಹ ಪಿಸಿಒಡಿಯ ಎಲ್ಲ ಶಾಸ್ತ್ರೀಯ ಲಕ್ಷಣಗಳನ್ನು ಹೊಂದಿರುವ ಮಹಿಳೆಗೆ ಗರ್ಭಧಾರಣೆಗೆ ಕಷ್ಟವಾಗದೆಯೂ ಇರಬಹುದು.
ಮಹಿಳೆಯೊಬ್ಬರಿಗೆ ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್ ಉಂಟಾಗಲು ಹಲವಾರು ಕಾರಣಗಳಿರಬಹುದು. ದೀರ್ಘಕಾಲಿಕ ತೀವ್ರ ಒತ್ತಡ, ಹಾರ್ಮೋನ್ ಔಷಧಗಳನ್ನು ಪದೇಪದೆ ತೆಗೆದುಕೊಳ್ಳುವುದು, ಮಧುಮೇಹದ ಕೌಟುಂಬಿಕ ಇತಿಹಾಸ ಮತ್ತು ದೀರ್ಘಕಾಲ ಕಾರ್ಬೋಹೈಡ್ರೇಟ್ ಅತಿಯಾದ ಸೇವನೆ ಕೆಲವು ಸಾಮಾನ್ಯ ಕಾರಣಗಳಾಗಿವೆ.
ಮಧುಮೇಹದ ಕೌಟುಂಬಿಕ ಇತಿಹಾಸ, ವಿಶೇಷವಾಗಿ ತಂದೆಯ ಕಡೆಯಿಂದ, ಇದರ ಜತೆಗೆ ಆಲಸಿ ಜೀವನಶೈಲಿ ಮತ್ತು ಕಾರ್ಬೋಹೈಡ್ರೇಟ್ ಅತಿಯಾಗಿರುವ ಆಹಾರಶೈಲಿ ಅತ್ಯಂತ ಸಾಮಾನ್ಯವಾದ ಕಾರಣವಾಗಿರುವುದು ಕಂಡುಬರುತ್ತದೆ.
ನಿರ್ವಹಣೆ
ಪಿಸಿಒಡಿಯ ಪ್ರಾಥಮಿಕ ಸಮಸ್ಯೆಯನ್ನು ಉಪಶಮನಗೊಳಿಸುವುದು ಈ ಕಾಯಿಲೆಯ ನಿರ್ವಹಣೆಯ ಮುಖ್ಯ ವಿಧಾನವಾಗಿದೆ. ಹೀಗಾಗಿ ಮಹಿಳೆಯೊಬ್ಬರು ಒತ್ತಡಮಯ ಜೀವನವನ್ನು ನಡೆಸುತ್ತಿದ್ದರೆ ಆಕೆ ತನ್ನ ಒತ್ತಡಯುಕ್ತ ಪರಿಸರವನ್ನು ಬದಲಾಯಿಸಲು ಮತ್ತು ಒತ್ತಡ ನಿವಾರಣೆ ಚಿಕಿತ್ಸೆಗೆ ಒಳಗಾಗಲು ಗಂಭೀರ ಪ್ರಯತ್ನ ಮಾಡಬೇಕು.
ಆಕೆ ಇತ್ತೀಚೆಗೆ ಹಾರ್ಮೋನ್ ಮಾತ್ರೆಗಳನ್ನು ತೆಗೆದುಕೊಂಡಿದ್ದರೆ ಆಕೆಗೆ ಅದಕ್ಕೆ ಪರ್ಯಾಯಗಳು ಅಗತ್ಯವಾಗಿರುತ್ತವೆ ಮತ್ತು ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕಾಗುತ್ತದೆ. ಮಹಿಳೆ ಪೌಷ್ಟಿಕಾಂಶ ಕೊರತೆ, ಕಳಪೆ ಆಹಾರಶೈಲಿ ಹೊಂದಿದ್ದರೆ ಕಾರ್ಬೋಹೈಡ್ರೇಟ್ ಅಂಶ ಕಡಿಮೆಯಿರುವ ಆಹಾರಶೈಲಿಗೆ ಬದಲಾಯಿಸಿಕೊಳ್ಳುವುದರಿಂದ ಸಹಾಯವಾಗುತ್ತದೆ. ಆಯ್ದ ಕೆಲವು ಪ್ರಕರಣಗಳಲ್ಲಿ ಕೆಲವೊಮ್ಮೆ ಲ್ಯಾಪರೊಸ್ಕೊಪಿ ಮೂಲಕ ಅಂಡಾಶಯಕ್ಕೆ ಶಸ್ತ್ರಚಿಕಿತ್ಸೆ ಒದಗಿಸಬಹುದಾಗಿದೆ.
ಇದರ ಚಿಕಿತ್ಸೆಗೆ ನೆರವಾಗುತ್ತವೆ ಎಂದು ಹೇಳಲಾದ ಅಸಂಖ್ಯ ಪೌಷ್ಟಿಕಾಂಶ ಪೂರಕಗಳು ಮತ್ತು ಔಷಧಗಳು ಎಲ್ಲ ಔಷಧಾಲಯಗಳಲ್ಲಿ ಲಭ್ಯವಿರುತ್ತವೆ ಮತ್ತು ಸಾಮಾನ್ಯವಾಗಿ ಇವುಗಳನ್ನು ಶಿಫಾರಸು ಮಾಡಲಾಗುತ್ತದೆ. ಆದರೆ ಸಮರ್ಪಕವಾದ ಜೀವನಶೈಲಿ ಬದಲಾವಣೆಯನ್ನು ಮಾಡಿಕೊಳ್ಳದೆ ಇದ್ದರೆ ಈ ಔಷಧ ಮತ್ತು ಪೌಷ್ಟಿಕಾಂಶ ಪೂರಕಗಳಿಂದಷ್ಟೇ ಹೆಚ್ಚು ಪ್ರಯೋಜನ ಆಗಲಾರದು. ಕಾಯಿಲೆ ಬಾರದಂತೆ ತಡೆಯುವುದು ಕಾಯಿಲೆ ಉಂಟಾದ ಬಳಿಕ ಚಿಕಿತ್ಸೆ ಪಡೆಯುವುದಕ್ಕಿಂತ ಉತ್ತಮ.
ಪಾಲಿಸಿಸ್ಟಿಕ್ ಒವೇರಿಯನ್ ಡಿಸೀಸ್‌ನ ಆರಂಭಕ್ಕೆ ಬಾಲಕಿ ಋತುಮತಿಯಾಗುವ ಮತ್ತು ಹದಿಹರಯದ ದಿನಗಳಲ್ಲಿಯೇ ಬೀಜಾರೋಪಣವಾಗಿರುತ್ತದೆ. ನಮ್ಮ ಹದಿಹರಯದ ಬಾಲಕಿಯರು ನಿಯಮಿತವಾಗಿ ವ್ಯಾಯಾಮ, ಆಟೋಟದಲ್ಲಿ ತೊಡಗುವಂತೆ ನಾವು ಪ್ರೋತ್ಸಾಹಿಸಬೇಕು. ಅವರು ಶುಭ್ರ ಸೂರ್ಯನ ಬೆಳಕು ಮತ್ತು ತಾಜಾ ಗಾಳಿಗೆ ಒಡ್ಡಿಕೊಳ್ಳಬೇಕು. ಅವರ ಆಹಾರದಲ್ಲಿ ತರಕಾರಿಗಳು, ಬೀಜಗಳು ಮತ್ತು ಕಾಯಿಗಳು ಸಾಕಷ್ಟು ಪ್ರಮಾಣದಲ್ಲಿ ಇರಬೇಕು. ಸಕ್ಕರೆ, ಸಂಸ್ಕರಿಸಲಾದ ಮೈದಾದಂತಹ ಹಿಟ್ಟುಗಳು ಮತ್ತು ಬಟಾಟೆಯಂತಹ ಅಧಿಕ ಕಾರ್ಬೋಹೈಡ್ರೇಟ್ ಯುಕ್ತ ಆಹಾರ ಸೇವನೆ ಮಿತವಾಗಿರಬೇಕು. ವೈದ್ಯರು ಶಿಫಾರಸು ಅಥವಾ ಸೂಚನೆ ಇಲ್ಲದೆ ಋತುಚಕ್ರದ ದಿನಗಳನ್ನು ಹೊಂದಿಸಲು ಅಥವಾ ಬದಲಾಯಿಸಲು ಹಾರ್ಮೋನ್ ಮಾತ್ರೆಗಳನ್ನು ಅನಗತ್ಯವಾಗಿ ತೆಗೆದುಕೊಳ್ಳಬಾರದು.
ಒಟ್ಟಾರೆಯಾಗಿ ಹೇಳಬೇಕೆಂದರೆ, ಈ ಕಾಯಿಲೆಯು ಅನೇಕ ಸ್ತ್ರೀಯರನ್ನು ಬಾಧಿಸುವ ಒಂದು ಸಮಸ್ಯೆಯಾಗಿದ್ದರೂ ಇದನ್ನು ಅತ್ಯಂತ ಕನಿಷ್ಠ ಪ್ರಮಾಣದ ಔಷಧ ಅಥವಾ ಶಸ್ತ್ರಚಿಕಿತ್ಸಾತ್ಮಕ ಕ್ರಮಗಳನ್ನು ಬಳಸಿ ಸರಿಯಾದ ಜೀವನಶೈಲಿ ಬದಲಾವಣೆಗಳಿಂದಲೇ ಯಶಸ್ವಿಯಾಗಿ ನಿರ್ವಹಿಸಬಹುದಾಗಿದೆ.
ಡಾ| ದೀಪಕ್ ಶೆಡ್ಡೆ ಕನ್ಸಲ್ಟಂಟ್, ಒಬಿಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಒಬಿಜಿ ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.