ಗರ್ಭಧಾರಣೆ ಮತ್ತು ಬಾಯಿಯ ಆರೈಕೆ
Team Udayavani, Jan 29, 2017, 3:45 AM IST
ಗರ್ಭಧಾರಣಾ ಅವಧಿ ಎನ್ನುವುದು ಒಬ್ಬ ಮಹಿಳೆಯ ಜೀವನದ ಬಹುಮುಖ್ಯ ಘಟ್ಟ. ಗರ್ಭಧಾರಣಾ ಅವಧಿಯಲ್ಲಿ ನಡೆಯುವ ಸೂಕ್ಷ್ಮ ದೈಹಿಕ ಮತ್ತು ಮಾನಸಿಕ ಬದಲಾವಣೆಗಳು ಬಾಯಿಯ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಉಂಟು ಮಾಡುವ ಸಾಧ್ಯತೆ ಇರುವ ಕಾರಣದಿಂದಾಗಿ ಗರ್ಭಿಣಿಯ ಬಾಯಿಯ ಆರೋಗ್ಯವು ಬಹಳ ಪ್ರಾಮುಖ್ಯತೆಯನ್ನು ಪಡೆಯುತ್ತದೆ.
ಗರ್ಭಧಾರಣಾ ಅವಧಿಯಲ್ಲಿ ಆಗುವ ಹಾರ್ಮೋನ್ ಏರುಪೇರಿನಿಂದಾಗಿ ಗರ್ಭಿಣಿ ಮಹಿಳೆಯರಲ್ಲಿ ಒಸಡಿನ ಸಮಸ್ಯೆ, ಒಸಡಿನ ಉರಿಯೂತ, ಒಸಡು ಊದಿಕೊಳ್ಳುವುದು, ಬ್ರಷ್ ಮಾಡುವಾಗ ಅಥವಾ ಫ್ಲಾಸ್ ಮಾಡುವಾಗ ಒಸಡಿನಲ್ಲಿ ರಕ್ತ ಬರುವುದು ಮತ್ತು ಒಸಡಿನಲ್ಲಿ ಮಾಂಸದ ಗುಳ್ಳೆಗಳು(ಎಪ್ಯುಲಿಸ್) ಕಾಣಿಸಿಕೊಳ್ಳುವುದು ಅಥವಾ ಪಯೋಜೆನಿಕ್ ಗ್ರ್ಯಾನ್ಯುಲೋಮಾ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.
ಊದಿಕೊಂಡ ಒಸಡಿನಿಂದ ಸುಲಭವಾಗಿ ರಕ್ತಸ್ರಾವವಾಗಬಹುದು. ಗರ್ಭಿಣಿ ಮಹಿಳೆಯ ಒಸಡಿನ ಕಾಯಿಲೆಗೂ ಕಡಿಮೆ ತೂಕದ ಮಗುವನ್ನು ಅವಧಿಗೆ ಮೊದಲೇ ಪ್ರಸವಿಸುವುದಕ್ಕೂ ಸಂಬಂಧ ಇದೆ ಎಂಬುದಾಗಿ ಸಂಶೋಧನೆಗಳಿಂದ ದೃಢಪಟ್ಟಿದೆ. ಒಸಡುಗಳ ಉರಿಯೂತಕ್ಕೆ ಕಾರಣವಾಗುವ ಬ್ಯಾಕ್ಟೀರಿಯವು ಗರ್ಭಿಣಿಯ ರಕ್ತಪರಿಚಲನೆಯಲ್ಲಿ ಸೇರುತ್ತದೆ ಮತ್ತು ಅದು ಭ್ರೂಣವನ್ನು ಗಮ್ಯವಾಗಿಸಿ, ಕಡಿಮೆ ತೂಕವಿರುವ ಮತ್ತು ಅವಧಿ ಪೂರ್ವ ಹೆರಿಗೆಗೆ ಕಾರಣವಾಗುವ ಸಾಧ್ಯತೆ ಇದೆ ಎಂಬುದು ಸಂಶೋಧನೆಗಳ ಅಭಿಪ್ರಾಯ ಗರ್ಭಧಾರಣಾ ಅವಧಿಯಲ್ಲಿನ ಸಿಹಿ ತಿನ್ನುವ ಬಯಕೆಗಾಗಿ ಗರ್ಭಿಣಿಯರು ಕಾಬೋìಹೈಡ್ರೇಟ್ ಸಮೃದ್ಧವಾಗಿರುವ ಆಹಾರಗಳನ್ನು ಹೆಚ್ಚು ತಿನ್ನುವುದರಿಂದಾಗಿ ದಂತಕುಳಿಗಳ ಅಪಾಯ ಹೆಚ್ಚಾಗುವ ಸಾಧ್ಯತೆಯೂ ಇದೆ. ಗರ್ಭಿಣಿಯರಲ್ಲಿ ಕಾಣಿಸಿಕೊಳ್ಳುವ ಬೆಳಗ್ಗಿನ ಅಸ್ವಸ್ಥತೆ, ವಾಕರಿಕೆ ಮತ್ತು ಒಸಡಿನಲ್ಲಿ ಹೆಚ್ಚುವ ರಕ್ತಸ್ರಾವಗಳಿಂದಾಗಿ ಬ್ರಷ್ ಮಾಡುವುದೂ ಸಹ ಕಷ್ಟವಾಗಬಹುದು. ಬೆಳಗ್ಗಿನ ಅಸ್ವಸ್ಥತೆಗೆ ಸಂಬಂಧಿಸಿದ ಹಾಗೆ ಹೊಟ್ಟೆಯಲ್ಲಿನ ಆಹಾರಾಂಶಗಳ ಹಿಮ್ಮುಖ ಹರಿವು ಅಥವಾ ವಾಂತಿಯಿಂದಾಗಿ ಹಲ್ಲಿನ ಎನಾಮಲ್ ಪದರಕ್ಕೆ ಹಾನಿ ಆಗಬಹುದು. ಈ ಕಾರಣದಿಂದ ಹಲ್ಲಿನ ಸಂವೇದನಾಶೀಲತೆ ಮತ್ತು ದಂತಕ್ಷಯದ ಅಪಾಯ ಹೆಚ್ಚಾಗಬಹುದು. ಒಸಡಿನ ಸಮಸ್ಯೆಗೆ ಸಂಬಂಧಿಸಿದ ಹಾಗೆ ಯಾವುದೇ ಸಮಸ್ಯೆ ಇದ್ದರೆ ಗರ್ಭಧಾರಣೆಗೆ ಮೊದಲೇ ಚಿಕಿತ್ಸೆ ಮಾಡಿಸಿಕೊಳ್ಳುವುದು ಮತ್ತು ಬಾಯಿಯ ಆರೋಗ್ಯದ ಬಗ್ಗೆ ಸಾಕಷ್ಟು ನಿಗಾ ವಹಿಸುವುದು ಬಹಳ ಪ್ರಮುಖ ಅಂಶಗಳು ಎಂಬುದನ್ನು ನಾವು ಇಲ್ಲಿ ಅರ್ಥಮಾಡಿಕೊಳ್ಳಬೇಕು.
ಮಹಿಳೆಯು ಗರ್ಭಧಾರಣಾ ಅವಧಿಯಲ್ಲಿ ಬಾಯಿಯ ಆರೋಗ್ಯ ಅಂದರೆ ಹಲ್ಲು ಮತ್ತು ಬಾಯಿಗೆ ಸಂಬಂಧಿಸಿದ ಅಭ್ಯಾಸಗಳು ಬಹಳ ಮುಖ್ಯ ಎಂದು ಪರಿಗಣಿಸಲಾಗುತ್ತದೆ. ಗರ್ಭಧಾರಣಾ ಅವಧಿಯಲ್ಲಿ ದಂತವೈದ್ಯರನ್ನು ನಿಯಮಿತವಾಗಿ ಭೇಟಿಯಾಗಿ ಕ್ಲೀನಿಂಗ್ ಮತ್ತು ಚೆಕ್-ಅಪ್ ಮಾಡಿಸಿಕೊಳ್ಳುವ ಮೂಲಕ ಬಾಯಿಯ ಸಮಸ್ಯೆಯನ್ನು ಪರಿಣಾಮಕಾರಿಯಾಗಿ ತಗ್ಗಿಸಿಕೊಳ್ಳಬಹುದು. ನಿಮ್ಮ ಹಲ್ಲುಗಳನ್ನು ಮೃದುವಾದ ಟೂತ್‌ಬ್ರಷ್ ಮೂಲಕ ದಿನಕ್ಕೆ ಕನಿಷ್ಠ ಎರಡು ಬಾರಿ ಬ್ರಷ್ ಮಾಡಿಕೊಂಡು ಸೂಕ್ಷ್ಮಾಣು ನಿರೋಧಕ ಮೌತ್‌ವಾಶ್ ಅನ್ನು ಬಳಸಿ ಎರಡು ಬಾರಿ ಬಾಯಿ ಮುಕ್ಕಳಿಸುವ ಮೂಲಕ ಹಲ್ಲುಗಳ ಮೇಲೆ ಕಟ್ಟಿಕೊಂಡಿರುವ ಕಿಟ್ಟವನ್ನು (ಹಲ್ಲುಗಳ ಮೇಲೆ ಕಟ್ಟಿಕೊಳ್ಳುವ ಸೂಕ್ಷ್ಮಾಣುಗಳ ಜೈವಿಕ ಪರದೆ) ನಿವಾರಿಸಿಕೊಳ್ಳಬಹುದು.
ಪ್ರತೀ ಬಾರಿ ವಾಂತಿಯಾದ ಅನಂತರವೂ ಎರಡು ಬಾರಿ ತಿಳಿ ನೀರಿನಿಂದ ನಿಮ್ಮ ಬಾಯಿ ಮುಕ್ಕಳಿಸಿಕೊಳ್ಳಿ ಮತ್ತು ಹೊಟ್ಟೆಯ ಆಮ್ಲವು ನಿಮ್ಮ ಹಲ್ಲುಗಳ ಸಂಪರ್ಕಕ್ಕೆ ಬರುವುದನ್ನು ತಪ್ಪಿಸಿಕೊಳ್ಳಿ ಆದರೆ ಈ ಸಂದರ್ಭದಲ್ಲಿ ಬ್ರಷ್ ಮಾಡದಿರಿ. ಬಾಯಿಯ ಆರೋಗ್ಯಕ್ಕೆ ಅಷ್ಟೇ ಅಲ್ಲ ನಿಮ್ಮ ಇಡಿಯ ಶರೀರದ ಆರೋಗ್ಯವನ್ನು ಕಾಪಾಡಿಕೊಳ್ಳುವ ದೃಷ್ಟಿಯಿಂದ ಗರ್ಭಧಾರಣೆಯ ಅವಧಿಯ ಉದ್ದಕ್ಕೂ ಉತ್ತಮ ಆಹಾರ ಕ್ರಮವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಹಾಗಾಗಿ ಈ ಅವಧಿಯಲ್ಲಿ ವಿವಿಧ ರೀತಿಯ ಆರೋಗ್ಯಕರ ಆಹಾರ ಪದಾರ್ಥಗಳನ್ನು ಸೇವಿಸಿ. ನೀವು ಸೇವಿಸುವ ಆಹಾರದಲ್ಲಿ ತಾಜಾ ಹಣ್ಣು-ತರಕಾರಿಗಳು, ಇಡಿಯ – ಧಾನ್ಯಗಳು ಮತ್ತು ಹಾಲಿನ ಉತ್ಪನ್ನಗಳನ್ನು ಸೇರಿಸಿ. ವಿಶೇಷವಾಗಿ ಸಕ್ಕರೆ ಸೇರಿಸಿರುವ ಆಹಾರ-ಪಾನೀಯಗಳನ್ನು, ಕ್ಯಾಂಡಿ ಮತ್ತು ಕುಕ್ಕೀಸ್‌ಗಳನ್ನು, ಜ್ಯೂಸ್ ಮತ್ತು ಸೋಡಾವನ್ನು ದೂರವಿರಿಸಿ. ಊಟ ಮತ್ತು ಉಪಾಹಾರದ ನಡುವೆ ಯಥೇತ್ಛವಾಗಿ ನೀರು ಕುಡಿಯಿರಿ.
ನೀವು ಗರ್ಭಿಣಿ ಎನ್ನುವ ವಿಚಾರವನ್ನು ನಿಮ್ಮ ದಂತವೈದ್ಯರಿಗೆ ತಿಳಿಸುವುದು ಬಹಳ ಆವಶ್ಯಕ ಯಾಕೆಂದರೆ ಮೊದಲ ಮೂರು ತಿಂಗಳಲ್ಲಿ ದಂತಚಿಕಿತ್ಸೆಗೆ ಸಂಬಂಧಿಸಿದ ಹಾಗೆ ಕೆಲವು ಚಿಕಿತ್ಸೆಗಳನ್ನು ಮಾಡಬಾರದು ಮತ್ತು ಕೆಲವು ಔಷಧಿಗಳನ್ನು ಸೇವಿಸಬಾರದು ಎಂಬ ನಿಯಮವಿದೆ. ಗರ್ಭಧಾರಣೆಯ ಅವಧಿಯಲ್ಲಿ ನಿಯಮಿತವಾಗಿ ದಂತಪರೀಕ್ಷೆ ಮಾಡಿಸಿಕೊಳ್ಳುವುದು ಸುರಕ್ಷಿತ. ನಿಮ್ಮ ಗರ್ಭಧಾರಣೆಯ ನಾಲ್ಕು ಮತ್ತು ಆರನೆಯ ತಿಂಗಳಲ್ಲಿ ದಂತಚಿಕಿತ್ಸೆಯ ಯೋಜನೆ ಇದ್ದರೆ ಉತ್ತಮ ಯಾಕೆಂದರೆ ಗರ್ಭಧಾರಣೆಯ ಕೊನೆಯ ಮೂರು ತಿಂಗಳಲ್ಲಿ ದಂತಚಿಕಿತ್ಸೆಯ ಕುರ್ಚಿಯಲ್ಲಿ ಬಹಳ ಹೊತ್ತು ಕುಳಿತಿರುವುದು ಕಷ್ಟ ಆಗಬಹುದು. ಒಂದು ತುರ್ತು ದಂತ ಚಿಕಿತ್ಸೆಯ ಕಾರಣಕ್ಕಾಗಿ ನಿಮಗೆ ಎಕ್ಸ್-ರೇ ತೆಗೆಯುವ ಅನಿವಾರ್ಯತೆ ಇದ್ದರೆ, ಆ ಪ್ರಕ್ರಿಯೆ ನಡೆಸುವುದಕ್ಕೆ ಮೊದಲು, ನಿಮ್ಮ ಮತ್ತು ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಗ್ಗೆ ಸಂಪೂರ್ಣ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಆವಶ್ಯಕ.
ಎಕ್ಸ್-ರೇ ತೆಗೆಯುವಾಗ ಸೀಸದ ಕವಚ ಮತ್ತು ಥೈರಾಯ್ಡ ಕಾಲರ್‌ನಿಂದ ನಿಮ್ಮ ಹೊಟ್ಟೆ ಮತ್ತು ಥೈರಾಯ್ಡ ಅನ್ನು ಮತ್ತು ಶರೀರದ ಉಳಿದ ಭಾಗಗಳನ್ನು ರಕ್ಷಿಸಿಕೊಳ್ಳಿ. ಎಕ್ಸ್-ರೇಗಳಿಂದ ಹೊಮ್ಮುವ ಕಿರಣಗಳು ಬಹಳ ಕಡಿಮೆ ಪ್ರಮಾಣದ್ದಾಗಿದ್ದರೂ ಸಹ, ತೀರಾ ಅನಿವಾರ್ಯ ಇಲ್ಲದಿದ್ದರೆ ಎಕ್ಸ್- ರೇ ಪ್ರಕ್ರಿಯೆಯನ್ನು ಸ್ವಲ್ಪ$ ಸಮಯ ಮುಂದೂಡುವುದು ಉತ್ತಮ.
ಬಾಯಿಯ ಉತ್ತಮ ಆರೋಗ್ಯ ಮತ್ತು ಹಲ್ಲುಗಳ ಕಾಯಿಲೆಗಳನ್ನು ತಡೆಗಟ್ಟುವ ಬಗೆಗಿನ ಅರಿವು, ಗರ್ಭಿಣಿಯ ಆರೋಗ್ಯದ ದೃಷ್ಟಿಯಿಂದ ಅಷ್ಟೇ ಅಲ್ಲ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಬಾಯಿಯ ಆರೋಗ್ಯದ ದೃಷ್ಟಿಯಿಂದಲೂ ಬಹಳ ಮುಖ್ಯವಾಗುತ್ತದೆ. ನವಜಾತ ಶಿಶುಗಳು/ಎಳೆಯ ಮಕ್ಕಳಲ್ಲಿ ಕಂಡು ಬರುವ ದಂತಕುಳಿಯನ್ನು ಉಂಟು ಮಾಡುವ ಬ್ಯಾಕ್ಟೀರಿಯಾಗಳು ಅವರ ತಾಯಿಯಿಂದ ಬಂದಿರುತ್ತವೆ ಎಂಬುದಾಗಿ ಅಧ್ಯಯನಗಳು ಹೇಳುತ್ತವೆ. ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳುವ ಮೂಲಕ ಇಂತಹ ದಂತಕುಳಿಕಾರಕ ಬ್ಯಾಕ್ಟೀರಿಯಗಳು ನವಜಾತ ಶಿಶುವಿಗೆ ವರ್ಗಾವಣೆ ಆಗುವುದನ್ನು ವಿಳಂಬಗೊಳಿಸಬಹುದು ಅಥವಾ ತಡೆಯಬಹುದು ಮತ್ತು ಆ ಮೂಲಕ ಎಳೆಯ ಮಕ್ಕಳಲ್ಲಿ ದಂತಕುಳಿ ಉಂಟಾಗುವ ಸಮಸ್ಯೆಯ ಪ್ರಮಾಣವನ್ನು ತಗ್ಗಿಸಿಕೊಳ್ಳಬಹುದು.
ಗರ್ಭಧಾರಣೆ ಅನ್ನುವುದು ಒಬ್ಬ ಮಹಿಳೆಯ ಜೀವನದ ಪ್ರಮುಖ ಘಟ್ಟ. ಬಾಯಿಯ ಆರೋಗ್ಯವು ಒಟ್ಟಾರೆ ಆರೋಗ್ಯದ ಮೇಲೆ ನೇರ ಪ್ರಭಾವವನ್ನು ಬೀರುತ್ತದೆ. ಗರ್ಭಧಾರಣಾ ಅವಧಿಯ ಬಾಯಿಯ ಆರೈಕೆಯು ಬಹಳ ಸುರಕ್ಷಿತ ವಾಗಿರುತ್ತದೆ. ನಿಯುತವಾಗಿ ದಂತ ಪರೀಕ್ಷೆ ಮಾಡಿಸಿಕೊಂಡು, ಚಿಕಿತ್ಸೆಯ ಆವಶ್ಯಕತೆ ಇದ್ದಲ್ಲಿ ಚಿಕಿತ್ಸೆ ಮಾಡಿಸಿಕೊಂಡು ಬಾಯಿಯ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಬೇಕು ಎಂಬುದು ನಮ್ಮ ಸಲಹೆ.
-ಡಾ| ನಿಶು ಸಿಂಘಾÉ ,
ರೀಡರ್, ಪಬ್ಲಿಕ್ ಹೆಲ್ತ್ ಡೆಂಟಿಸ್ಟ್ರಿ ವಿಭಾಗ,
ಮಣಿಪಾಲ್ ಕಾಲೇಜ್ ಆಫ್ ಡೆಂಟಲ್ ಸೈನ್ಸಸ್, ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.