ಎ.2 ಮತ್ತು 30 ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ
Team Udayavani, Apr 2, 2017, 3:45 AM IST
ಪೋಲಿಯೋ ಇಡೀ ವಿಶ್ವವನ್ನೇ ಬೆಚ್ಚಿ ಬೀಳಿಸಿದ ಈ ಮಾರಕ ಕಾಯಿಲೆ ಪೋಲಿಯೋ. ಈ ಕಾಯಿಲೆಯು ಅಭಿವೃದ್ಧಿಶೀಲ ರಾಷ್ಟ್ರಗಳ ಬಹುದೊಡ್ಡ ಸಮಸ್ಯೆಯಾಗಿತ್ತು. ವಿಶ್ವ ಆರೋಗ್ಯ ಸಂಸ್ಥೆಯು ಇಡೀ ವಿಶ್ವವನ್ನು ಈ ಭಯಾನಕ ಕಾಯಿಲೆಯಿಂದ ಮುಕ್ತವಾಗಿಸಬೇಕೆನ್ನುವ ಉದ್ದೇಶದಿಂದ ಪ್ರಪಂಚದಾದ್ಯಂತ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮವನ್ನು ಆರಂಭಿಸಿತು.
ಈ ಪೋಲಿಯೋ ನಿರ್ಮೂಲನಾ ಕಾರ್ಯಕ್ರಮದ ಅಂಗವಾಗಿ ಭಾರತ ದೇಶದಲ್ಲಿ 1995ರಿಂದ ಪ್ರತೀ ವರ್ಷ 2 ಹಂತದಲ್ಲಿ ಪಲ್ಸ್ ಪೋಲಿಯೋ ಕಾರ್ಯಕ್ರಮ ನಡೆಯುತ್ತಿದೆ. ಕರ್ನಾಟಕದಲ್ಲಿ ಈ ಬಾರಿ ಎಪ್ರಿಲ್ 2 ಮತ್ತು ಎಪ್ರಿಲ್ 30 ರಂದು 2 ಹಂತದಲ್ಲಿ ಲಸಿಕಾ ಅಭಿಯಾನ ನಡೆಯಲಿದ್ದು, ಇಡೀ ಪ್ರಪಂಚದಲ್ಲಿ ಅತೀ ದೊಡ್ಡ ಗುರಿಯನ್ನು ಹೊಂದಿರುವ, ಸಾರ್ವಜನಿಕ ಆರೋಗ್ಯಕ್ಕಾಗಿ ರೂಪಿಸಿದ ಈ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬ ಪೋಷಕರು ತಮ್ಮ ಹುಟ್ಟಿದ ಮಗುವಿನಿಂದ 5 ವರ್ಷದ ಒಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿ ಇಡೀ ವಿಶ್ವದಿಂದಲೇ ಈ ಕಾಯಿಲೆಯನ್ನು ನಿರ್ಮೂಲನೆ ಮಾಡುವಲ್ಲಿ ಕೈ ಜೋಡಿಸಬೇಕಿದೆ.
ಪೋಲಿಯೋ ರೋಗವು ಮಕ್ಕಳ ಕರುಳಿನಲ್ಲಿ ಕಂಡುಬರುವ 3 ವಿಧದ ಪೋಲಿಯೋ ವೈರಸ್‌ನಿಂದ ಹರಡುತ್ತದೆ. ಈ ರೋಗವು ಮುಖ್ಯವಾಗಿ ಕಲುಷಿತ ನೀರು, ಆಹಾರವನ್ನು ಸೇವಿಸುವದರಿಂದ ಹರಡುತ್ತದೆ. ಆಹಾರದ ಮೂಲಕ ಕರುಳನ್ನು ಸೇರುವ ವೈರಸ್‌ಗಳು ಬಳಿಕ ನರಮಂಡಲದ ಮೂಲಕ ಮೆದುಳನ್ನು ಸೇರಿ ಪಾರ್ಶÌವಾಯು ಉಂಟಾಗುವ ಸಂಭವವಿದೆ. ಸುಮಾರು 200 ಮಕ್ಕಳಿಗೆ ಈ ಸೋಂಕು ತಗುಲಿದಲ್ಲಿ ಆ ಮಕ್ಕಳಲ್ಲಿ ಒಂದು ಮಗುವಿಗೆ ದೇಹದ ಯಾವುದೇ ಭಾಗಗಳಲ್ಲಿ, ಮುಖ್ಯವಾಗಿ ಕಾಲುಗಳಲ್ಲಿ ಪಕ್ಷವಾತ ಕಾಣಿಸಿಕೊಳ್ಳುತ್ತದೆ.
5 ವರ್ಷದ ಕೆಳಗಿನ ಮಕ್ಕಳಲ್ಲಿ ಈ ಕಾಯಿಲೆ ಹೆಚ್ಚಾಗಿ ಕಂಡು ಬರುವುದರಿಂದ ಪೋಲಿಯೋ ಸೋಂಕು ಬಾರದಂತೆ ತಡೆಗಟ್ಟಲು ಪ್ರತೀ ವರ್ಷ 2 ಹಂತದಲ್ಲಿ ಪಲ್ಸ್ ಪೋಲಿಯೋ ಅಭಿಯಾನ ನಡೆಯುತ್ತಿದೆ. ಈ ಅಭಿಯಾನದಲ್ಲಿ 0-5 ವರ್ಷದ ಒಳಗಿನ ಮಕ್ಕಳಿಗೆ ಎರಡು ಹನಿ ಪೋಲಿಯೋ ಲಸಿಕೆ ನೀಡಲಾಗುತ್ತದೆ. ಪೋಲಿಯೋದಿಂದ ಒಂದು ಬಾರಿ ಅಂಗವೈಕಲ್ಯ ಸಂಭವಿಸಿದಲ್ಲಿ ಅದನ್ನು ಗುಣ ಪಡಿಸಲು ಸಾಧ್ಯವಿಲ್ಲ. ಪೋಲಿಯೋ ಬಾರದಂತೆ ತಡೆಗಟ್ಟಲು ಈ ಲಸಿಕೆಯನ್ನು ನೀಡಲಾಗುತ್ತದೆ. ಹಾಗಾಗಿ ರಾಷ್ಟ್ರೀಯ ಚುಚ್ಚುಮದ್ದು ವೇಳಾಪಟ್ಟಿಯಂತೆ ಮಗುವಿಗೆ ಜನಿಸಿದ ತತ್‌ಕ್ಷಣ, 6, 10 ಮತ್ತು 14 ವಾರಗಳಲ್ಲಿ ಪೊಲೀಯೋ ಲಸಿಕೆಯನ್ನು ನೀಡಲಾಗುತ್ತದೆ. ಬಳಿಕ ಮಗುವಿಗೆ 18 ತಿಂಗಳು ತುಂಬಿದಾಗ ಬೂಸ್ಟರ್ ಡೋಸ್ (ಬಲವರ್ಧಕ) ನೀಡಲಾಗುತ್ತದೆ.
ಕರ್ನಾಟಕದಲ್ಲಿ ಕಳೆದ ಎಪ್ರಿಲ್ 2016 ರಿಂದ ಮಗು ಜನಿಸಿದ 6 ವಾರ ಮತ್ತು 14 ವಾರಗಳಲ್ಲಿ ಪೋಲಿಯೋ ತಡೆಗಟ್ಟಲು ಐಕV ಎಂಬ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿಯೊಂದು ಮಗುವು ಪೋಲಿಯೋ ರೋಗದಿಂದ ಮುಕ್ತವಾಗಲು ಈ ಲಸಿಕೆಯನ್ನು ಪಡೆಯುವುದು ಅವಶ್ಯವಾಗಿದೆ. ಮಗುವು ಪ್ರತೀ ಪೋಲಿಯೋ ಲಸಿಕೆಯನ್ನು ಪಡೆದಾಗ ಅದು ಒಂದು ವಿಧದ ವೈರಸ್‌ನ ವಿರುದ್ಧ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುತ್ತದೆ. ಹಾಗಾಗಿ ಯಾವುದೇ ಮಗುವು ಸಾಮಾನ್ಯ ಲಸಿಕಾ ಕಾರ್ಯಕ್ರಮದಲ್ಲಿ ಪೋಲಿಯೋ ಲಸಿಕೆ ಪಡೆದಿದ್ದರೂ, ಮಗು ಸಾಮಾನ್ಯಜ್ವರ, ಶೀತ, ಕೆಮ್ಮಿನಿಂದ ಬಳಲುತ್ತಿದ್ದರೂ ಈ ಅಭಿಯಾನದಲ್ಲಿ ಲಸಿಕೆ ಪಡೆಯುವುದು ಅಗತ್ಯವಾಗಿದೆ.
ರೋಗ ನಿರೋಧಕ ಶಕ್ತಿ ಕುಂಠಿತವಾಗಿರುವಂತಹ ಆರೋಗ್ಯ ಸಮಸ್ಯೆಗಳನ್ನು ಹೊಂದಿರುವ ಮಕ್ಕಳು ಈ ಅಭಿಯಾನದಿಂದ ಹೊರಗುಳಿಯಬಹುದಾಗಿದೆ. ಅಭಿಯಾನದ ಮೊದಲನೇ ದಿನ ಬೂತ್ ಮಟ್ಟದಲ್ಲಿ ಅಂಗನವಾಡಿ, ರೈಲ್ವೇ ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲಾಗುತ್ತಿದ್ದು, ಉಳಿದ 2 ದಿನಗಳಲ್ಲಿ ಅಭಿಯಾನದಿಂದ ಹೊರಗುಳಿದ ಮಕ್ಕಳಿಗೆ ಆರೋಗ್ಯ ಕಾರ್ಯಕರ್ತರು ಮನೆ ಭೇಟಿ ಮಾಡಿ ಪೋಲಿಯೋ ಲಸಿಕೆ ನೀಡುತ್ತಾರೆ. ಪಲ್ಸ್ ಪೋಲಿಯೋ ಲಸಿಕಾ ಅಭಿಯಾನದಲ್ಲಿ ಪ್ರತಿಯೊಬ್ಬ ಮಕ್ಕಳಿಗೂ ಲಸಿಕೆಯನ್ನು ತಪ್ಪದೇ ಕೊಡುವುದೇ ಇದರ ಉದ್ದೇಶವಾಗಿದೆ.
ಭಾರತದಲ್ಲಿ ಕೊನೆಯ ಪೋಲಿಯೋ ಪ್ರಕರಣ ವರದಿಯಾಗಿದ್ದು 2011ರ ಜನವರಿ 13ರಂದು ಪಶ್ಚಿಮ ಬಂಗಾಳದ ಹೌರಾದಲ್ಲಿ, ಕರ್ನಾಟಕದಲ್ಲಿ ಕೊನೆಯ ಪ್ರಕರಣ ವರದಿಯಾಗಿದ್ದು 2005ರಲ್ಲಿ. ವಿಶ್ವಆರೋಗ್ಯ ಸಂಸ್ಥೆ ಮಾರ್ಚ್ 27, 2014 ರಂದು ಭಾರತವನ್ನು ಪೋಲಿಯೋ ಮುಕ್ತ ರಾಷ್ಟ್ರ ಎಂದು ಘೋಷಿಸಿದ್ದರೂ, ಭಾರತದ ನೆರೆಯ ರಾಷ್ಟ್ರಗಳಾದ ಪಾಕಿಸ್ಥಾನ, ಆಫ್ಘಾನಿಸ್ಥಾನಗಳಲ್ಲಿ ಪೋಲಿಯೋ ಪ್ರಕರಣಗಳು ವರದಿಯಾಗಿರುವುದರಿಂದ ಭಾರತವು ಪೋಲಿಯೋ ಮುಕ್ತ ರಾಷ್ಟ್ರವಾಗಿದ್ದರೂ ಈಗಲೂ ಇಲ್ಲಿ ಪಲ್ಸ್ ಪೋಲಿಯೋ ಲಸಿಕಾ ಅಭಿಯಾನ ನಡೆಯುತ್ತಿದೆ.
– ಡಾ| ದಿವ್ಯಾ ಪೈ,
ಸಹಾಯಕ ಪ್ರಾಧ್ಯಾಪಕರು,
ರಾಘವೇಂದ್ರ ಭಟ್, ಆರೋಗ್ಯ ಸಹಾಯಕ,
ಸಮುದಾಯ ವೈದ್ಯಕೀಯ ವಿಭಾಗ, ಕೆ.ಎಂ.ಸಿ ಮಣಿಪಾಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Sparks Row; ಉಗ್ರರನ್ನು ಹ*ತ್ಯೆ ಮಾಡಬಾರದು…: ಫಾರೂಕ್ ಅಬ್ದುಲ್ಲಾ ಹೇಳಿಕೆ
Shivaji Satam: ಕ್ಯಾಷಿಯರ್ ಆಗಿದ್ದ ಹುಡುಗ ಟಿವಿ ಲೋಕದ ʼಸಿಐಡಿʼಯಾಗಿ ಬೆಳೆದು ಬಂದದ್ದೇಗೆ?
INDIA bloc; ಜಾರ್ಖಂಡ್ ಸೀಟು ಹಂಚಿಕೆ ಒಪ್ಪಂದ ಅಂತಿಮ: ಜೆಎಂಎಂಗೆ 43 ಸ್ಥಾನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.