Speech development: ಮಕ್ಕಳಲ್ಲಿ ಮಾತಿನ ಬೆಳವಣಿಗೆ; ಮಾತು-ಭಾಷಾ ಪ್ರಚೋದನೆಯ ಪ್ರಾಮುಖ್ಯ
Team Udayavani, Aug 11, 2024, 12:35 PM IST
ತಾಯ್ತನ ಎನ್ನುವುದು ಸಂತೋಷ, ಆತಂಕ, ಕಳವಳಗಳು, ನಿರ್ಧಾರ ತೆಗೆದುಕೊಳ್ಳುವುದು- ಇವೆಲ್ಲವೂ ತುಂಬಿದ ಜೀವನದ ಪ್ರಾಮುಖ್ಯ ಘಟ್ಟ. ಬಹುತೇಕ ಮಂದಿ ಈ ಹೊಸ ಜವಾಬ್ದಾರಿ ಯಿಂದ ಆನಂದತುಂದಿಲರಾಗುತ್ತಾರೆ ಮತ್ತು ಹೆತ್ತವರೆಂಬ ಹೊಸ ಪಾತ್ರವನ್ನು ಧರಿಸಲು ಸಮಯ ತೆಗೆದುಕೊಳ್ಳುತ್ತಾರೆ. ತಮ್ಮ ಶಿಶು ಕುಳಿತು ಕೊಳ್ಳುವುದು, ಅಂಬೆಗಾಲಿಕ್ಕುವುದು, ನಿಲ್ಲುವುದು ಮತ್ತು ನಡೆಯುವಂತಹ ಚಲನೆಯ ಮೈಲಿಗಲ್ಲು ಗಳನ್ನು ಸಾಧಿಸುವುದನ್ನು ಹೆತ್ತವರು ಕಾತರದಿಂದ ಎದುರುನೋಡುತ್ತಾರಾದರೆ ಶಿಶುವಿನ ಭಾಷೆ ಮತ್ತು ಮಾತಿನ ಕೌಶಲ ಬೆಳವಣಿಗೆಯ ಬಗ್ಗೆ ಗಮನ ಹರಿಸುವುದು ತೀರಾ ಕಡಿಮೆ.
ಶಿಶು ಚಲನೆಗೆ ಸಂಬಂಧಿಸಿದ ಯಾವುದೇ ಮೈಲಿಗಲ್ಲನ್ನು ಸಾಧಿಸುವುದು ಹೆತ್ತವರ ಗಮನಕ್ಕೆ ಬೇಗನೆ ಬಂದರೆ ಮಾತನಾಡುವಲ್ಲಿ ವಿಳಂಬವನ್ನು ಗುರುತಿಸುವುದು ತೀರಾ ವಿಳಂಬವಾಗಿ; ಕೆಲವೊಮ್ಮೆ 2 ವರ್ಷ ವಯಸ್ಸಿನಷ್ಟು ತಡವಾಗಿ. ಶಿಶುವಿನಲ್ಲಿ ಮಾತು ಮತ್ತು ಭಾಷೆಯ ಕೌಶಲಗಳು ಬೆಳವಣಿಗೆ ಹೊಂದುವುದು ವಿಳಂಬವಾಗುವುದಕ್ಕೆ ಜನ್ಮಜಾತ ವೈಕಲ್ಯಗಳು, ಬೌದ್ಧಿಕ ವೈಕಲ್ಯಗಳು, ಸಿಂಡ್ರೋಮ್ ಗಳು, ಆಟಿಸಂ ಸ್ಪೆಕ್ಟ್ರಂ ಡಿಸಾರ್ಡರ್‌ಗಳು, ಎಡಿಎಚ್‌ಡಿ, ಶ್ರವಣ ವೈಕಲ್ಯ ಮತ್ತು ಮನೆಯಲ್ಲಿ ಭಾಷಿಕ ಪ್ರಚೋದನೆಯ ಕೊರತೆಯಂತಹ ಹಲವಾರು ಕಾರಣಗಳು ಇರಬಹುದು.
ಶಿಶು ಮಾತು ಕಲಿಯುವಲ್ಲಿ ಬೇಗನೆ ಮಾತು ಮತ್ತು ಭಾಷೆಯ ಪ್ರಚೋದನೆ ದೊರಕುವುದು ತುಂಬಾ ಪ್ರಾಮುಖ್ಯವಾದ ಪಾತ್ರವನ್ನು ವಹಿಸುತ್ತದೆ. ಶಿಶುವಿಗೆ ಮನೆಯಲ್ಲಿ ಉತ್ತಮವಾದ ಸಂವಹನಶೀಲ ವಾತಾವರಣವನ್ನು ಒದಗಿಸಿಕೊಡುವುದನ್ನು ಭಾಷೆ ಮತ್ತು ಮಾತಿನ ಪ್ರಚೋದನೆ ಎಂದು ವಿವರಿಸಬಹುದು. ಶಿಶುವಿನ ಜತೆಗೆ ವಾಕ್ಯಗಳ ಸಂಕೀರ್ಣತೆಯೊಂದಿಗೆ ನಿಧಾನವಾಗಿ ಮತ್ತು ರಾಗವಾಗಿ ಅಕ್ಕರೆಯಿಂದ ಮಾತನಾಡುವ ಮೂಲಕ ಇದನ್ನು ಸಾಧಿಸಬಹುದಾಗಿದೆ.
ಶಿಶು ಮತ್ತು ಹೆತ್ತವರ ನಡುವಣ ಅತ್ಯುತ್ತಮ ಗುಣಮಟ್ಟದ ಸಂವಹನ-ಮಾತುಕತೆಯಿಂದ ಮಾತಿನ ಪ್ರಚೋದನೆಯನ್ನು ಸಾಧಿಸಬಹುದು. ಶಿಶುವಿನ ಜತೆಗೆ ಮಾತನಾಡುವ ಸಂದರ್ಭದಲ್ಲಿ ರಾಗವಾಗಿ/ ಹಾಡಿನಂತೆ ಸರಳ ವಾಕ್ಯಗಳ ಮೂಲಕ ಮಾತನಾಡುವುದು ಅಗತ್ಯ. ಮಗುವಿನ ತೊದಲು ಮಾತುಗಳನ್ನು ಹೆಚ್ಚುವರಿ ಪೂರಕ ಮಾಹಿತಿಗಳ ಜತೆಗೆ ವಿಸ್ತರಿಸುವುದು ಉತ್ತಮ. ಉದಾಹರಣೆಗೆ, ಮಗು “ಕಾರು’ ಎಂದರೆ ಹೆತ್ತವರು ಅದನ್ನು “ಅದು ದೊಡ್ಡ ಕಾರು’ ಅಥವಾ “ಅದು ನೀಲಿ ಕಾರು’ ಎನ್ನುವುದು.
ಇದು ಶಿಶುವಿಗೆ ತನ್ನ ಶಬ್ದಭಂಡಾರ ವಿಸ್ತರಿಸಿಕೊಳ್ಳಲು, ಪದಗಳ ನಡುವಣ ಸಂಬಂಧ ಮತ್ತು ವಿವಿಧ ಸನ್ನಿವೇಷಗಳಲ್ಲಿ ಅವುಗಳನ್ನು ಉಪಯೋಗಿಸುವ ಅರಿವನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಈ ತಂತ್ರಗಳು ಶಿಶು ವಿಗೆ ಪ್ರಯೋಜನ ಉಂಟು ಮಾಡುವುದರ ಜತೆ ಗೆಯೇ ಹೆತ್ತವರು ಶಿಶುವಿಗೆ ತಪ್ಪಾದ ಮಾತಿನ ಮಾದರಿಗಳನ್ನು ಪ್ರದರ್ಶಿಸದಂತೆಯೂ ಎಚ್ಚರಿಕೆ ವಹಿಸಬೇಕಾಗಿರುತ್ತದೆ. ಉದಾಹರಣೆಗೆ, ಶಿಶು ಬಿಸ್ಕಿಟ್‌ಗೆ “ಬಿಬ್ಬಿ’ ಎಂದರೆ ಹೆತ್ತವರು ಶಿಶುವಿನ ಪ್ರಯತ್ನವನ್ನು ಪ್ರೋತ್ಸಾಹಿಸುವುದರ ಜತೆಗೆಯೇ “ಬಿಬ್ಬಿ’ ಎಂದು ಪುನರುಚ್ಚರಿಸದೆ “ಬಿಸ್ಕಿಟ್’ ಎಂದು ಸರಿಯಾಗಿಯೇ ಉಚ್ಚರಿಸುವ ಮೂಲಕ ಸರಿ ಯಾದ ಮಾದರಿಯನ್ನು ಒದಗಿಸಬೇಕಾಗುತ್ತದೆ.
ಸರಿಯಾದ ಮಾತಿನ ಮಾದರಿಗಳನ್ನು ಒದಗಿಸದೆ ಇದ್ದರೆ ಶಿಶು ತಪ್ಪಾದ ಪ್ರಯೋಗವನ್ನೇ ಮುಂದುವರಿಸುತ್ತ ಹೋಗುವ ಅಪಾಯವಿದೆ. ಹೆತ್ತವರೇ ಶಿಶುವಿನ ಮೊದಲ ಆಟ ಮತ್ತು ಸಂವಹನ ಸಹಭಾಗಿಗಳು ಆಗಿರುವುದರಿಂದ ಶಿಶುವಿನ ಮಾತು ಮತ್ತು ಭಾಷೆಯ ಬೆಳವಣಿಗೆಗೆ ಪೂರಕವಾದ ಸಮೃದ್ಧ ಮತ್ತು ಪೋಷಕ ವಾತಾವರಣವನ್ನು ಹೆತ್ತವರೇ ಕಲ್ಪಿಸಿಕೊಡುವುದು ಅತ್ಯಗತ್ಯವಾಗಿದೆ. ಮಾತನಾಡಲು ಕಲಿಯುವ ವಿಷಯದಲ್ಲಿ ಹೆತ್ತವರು ಶಿಶುವಿಗೆ ಸಹಾಯಕರಾಗಿ ವರ್ತಿಸುವುದು ಅಗತ್ಯ.
ಇಷ್ಟು ಮಾತ್ರವಲ್ಲದೆ, ಮಕ್ಕಳಿಗೆ ಕಥೆಗಳು ಮತ್ತು ಪುಸ್ತಕಗಳನ್ನು ಕೂಡ ಪರಿಚಯಿಸಬೇಕು. ಇದು ಹೊಸ ಪದಗಳನ್ನು ಕಲಿಯಲು ಸಹಾಯ ಮಾಡುವುದರ ಜತೆಗೆ ಗ್ರಹಣ ಸಾಮರ್ಥ್ಯ, ಕಲ್ಪನೆಯ ಶಕ್ತಿ, ಸೃಜನಶೀಲತೆ, ಪದಗಳ ಬಳಕೆ ಮತ್ತು ಸಾಮಾಜಿಕ ಕೌಶಲಗಳ ಬೆಳವಣಿಗೆಗೆ ಇದು ಸಹಾಯ ಮಾಡುತ್ತದೆ. ನೀವು ಮಾಡುವ ಚಪ್ಪಾಳೆ ತಟ್ಟುವುದು, ನಗುವುದು ಅಥವಾ ಸದ್ದುಗಳನ್ನು ಹೊರಡಿಸುವಂತಹ ಚಟುವಟಿಕೆಗಳನ್ನು ಅನುಕರಿಸಲು ಪ್ರೋತ್ಸಾಹಿಸಿ.
ಮಕ್ಕಳು ತಮ್ಮ ಸುತ್ತಮುತ್ತಲು ಕಾಣುವುದನ್ನು ಅನುಕರಿಸುವ ಮೂಲಕ ಮಾತನಾಡಲು ಕಲಿಯುವುದರಿಂದ ಮಕ್ಕಳ ಮಾತಿನ ಬೆಳವಣಿಗೆಯಲ್ಲಿ ಅನುಕರಣೆಯು ಬಹಳ ಪ್ರಾಮುಖ್ಯವಾದ ವಿಷಯವಾಗಿದೆ. ನಿಮ್ಮ ಮಕ್ಕಳು ಏನು ಮಾಡುತ್ತಾರೆ ಎನ್ನುವುದನ್ನು ಸೂಕ್ಷ್ಮವಾಗಿ ಗಮನಿಸುವುದು, ಅವರ ಕಾರ್ಯಚಟುವಟಿಕೆಗಳ ಮೇಲೆ ನಿಗಾ ಇರಿಸುವುದು ಹಾಗೂ ಅವರ ಮಾತುಗಳನ್ನು ಆಲಿಸಿ ಪ್ರತಿಸ್ಪಂದಿಸುವುದು ತುಂಬಾ ಮುಖ್ಯ.
ಈ ಕೆಳಕಂಡ ವರ್ತನೆಗಳಲ್ಲಿ ಯಾವುದನ್ನಾದರೂ ನಿಮ್ಮ ಮಗು ಹೊಂದಿದ್ದರೆ ದಯವಿಟ್ಟು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿಸ್ಟ್‌ರನ್ನು ಸಂಪರ್ಕಿಸಿ.
1. ವಯಸ್ಸಿಗೆ ಸರಿಯಾಗಿ ಮಾತನಾಡದಿರುವುದು.
2. ಇತರರ ಜತೆಗೆ ಆಟವಾಡುವುದು ಅಥವಾ ಒಡಗೂಡುವುದಕ್ಕೆ ಕಷ್ಟಪಡುವುದು.
3. ಆಟವಾಡುವ ವಸ್ತುಗಳು , ಆಟಿಕೆಗಳ ಅಸಮರ್ಪಕ ಬಳಕೆ, ಆಟವಾಡುವ ಶೈಲಿಯಲ್ಲಿ ವ್ಯತ್ಯಾಸ.
4. ನಿಮ್ಮ ಮಗುವಿನ ಮಾತನ್ನು ಅರ್ಥ ಮಾಡಿಕೊಳ್ಳಲು ಕಷ್ಟ/ ಅಸ್ಪಷ್ಟ ಮಾತು/ ತಪ್ಪಾದ ಉಚ್ಚಾರ.
5. ಹೆಸರು ಹಿಡಿದು ಕರೆದಾಗ ಪ್ರತಿಕ್ರಿಯಿಸದೆ ಇರುವುದು ಅಥವಾ ಪರಿಸರದ ಸದ್ದುಗಳಿಗೆ ಪ್ರತಿಕ್ರಿಯಿಸದೆ ಇರುವುದು.
6. ಓದಲು, ಬರೆಯಲು ಅಥವಾ ಕಲಿಕೆಯಲ್ಲಿ ಕಷ್ಟ ಪಡುವುದು.
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ, ಕೆಎಂಸಿ, ಮಂಗಳೂರು)
-ಡಾ| ಮೇಘಾ ಮೋಹನ್,
ಅಸೋಸಿಯೇಟ್ ಪ್ರೊಫೆಸರ್
ಆಡಿಯಾಲಜಿ ಮತ್ತು ಸ್ಪೀಚ್ ಲ್ಯಾಂಗ್ವೇಜ್ ಪೆಥಾಲಜಿ ವಿಭಾಗ,
ಕೆಎಂಸಿ, ಅತ್ತಾವರ,
ಮಾಹೆ, ಮಂಗಳೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC Awards 2024: ಐಸಿಸಿ ಪ್ರಶಸ್ತಿಗೆ ಅರ್ಷದೀಪ್ ಸಿಂಗ್, ಸ್ಮೃತಿ ಮಂಧನಾ ನಾಮ ನಿರ್ದೇಶ
Padubidri: ಮೊಬೈಲ್ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ
Bengaluru: ಕೀಪರ್ ಕಿರ್ಮಾನಿ ಆತ್ಮಚರಿತ್ರೆ “ಸ್ಟಂಪ್ಡ್ ’ ಬಿಡುಗಡೆ
Cricket: ಜಿಂಬಾಬ್ವೆ ವಿರುದ್ಧ ಅಫ್ಘಾನಿಸ್ಥಾನ ಅಮೋಘ ಬ್ಯಾಟಿಂಗ್: ರಹಮತ್ ಶಾ ದ್ವಿಶತಕ
World Rapid Championships: ಕೊನೆರು ಹಂಪಿ ಚಾಂಪಿಯನ್; ಇರೆನ್ ವಿರುದ್ಧ ಜಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.