Breast Cancer: ಸ್ತನ ಕ್ಯಾನ್ಸರ್‌ನಲ್ಲಿ ವಂಶವಾಹಿಯ ಪಾತ್ರ
Team Udayavani, Jul 14, 2024, 12:48 PM IST
ಸ್ತನ ಕ್ಯಾನ್ಸರ್ ಉಂಟಾಗುವುದಕ್ಕೆ ಕಾರಣಗಳಲ್ಲಿ ವಂಶವಾಹಿ ಅಂಶವೂ ಇದೆ; ಇದರರ್ಥವೆಂದರೆ ನಿರ್ದಿಷ್ಟ ವಂಶವಾಹಿ ರೂಪಾಂತರಗಳು ಅಥವಾ ಬದಲಾವಣೆಗಳು ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸಬಹುದಾಗಿದೆ. ವಂಶಪಾರಂಪರ್ಯವಾಗಿ ಬರಬಹುದಾದ ಸ್ತನ ಕ್ಯಾನ್ಸರ್ ಜತೆಗೆ ಸಂಬಂಧ ಹೊಂದಿರುವ ವಂಶವಾಹಿಗಳೆಂದರೆ ಬಿಆರ್ ಸಿಎ 1 ಮತ್ತು ಬಿಆರ್‌ಸಿಎ 2.
ಬಿಆರ್‌ಸಿಎ 1 ಮತ್ತು ಬಿಆರ್‌ಸಿಎ 2 ರೂಪಾಂತರಗಳು
ಬಿಆರ್‌ಸಿಎ 1 ಮತ್ತು ಬಿಆರ್‌ಸಿಎ 2 ವಂಶವಾಹಿಗಳಲ್ಲಿ ವಂಶಪಾರಂಪರ್ಯವಾಗಿ ಬಂದಿರುವ ರೂಪಾಂತರಗಳು ಇತರ ಕ್ಯಾನ್ಸರ್‌ಗಳ ಜತೆಗೆ ಸ್ತನ ಮತ್ತು ಅಂಡಾಶಯದ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಗಮನಾರ್ಹವಾಗಿ ಹೆಚ್ಚಿಸುತ್ತವೆ. ಈ ರೂಪಾಂತರಿ ವಂಶವಾಹಿಗಳನ್ನು ಹೊಂದಿರುವ ಮಹಿಳೆಯರು ತಮ್ಮ ಜೀವಿತ ಕಾಲದಲ್ಲಿ ಸ್ತನ ಕ್ಯಾನ್ಸರ್ ಗೆ ತುತ್ತಾಗುವ ಸಾಧ್ಯತೆಯು ಇತರ ಸಾಮಾನ್ಯ ಮಹಿಳೆಯರಿಗಿಂತ ಸಾಕಷ್ಟು ಹೆಚ್ಚಿರುತ್ತದೆ.
ಇತರ ವಂಶವಾಹಿ ಅಂಶಗಳು
ಬಿಆರ್‌ಸಿಎ 1 ಮತ್ತು ಬಿಆರ್‌ಸಿಎ 2 ಅಲ್ಲದೆ ಪಿಎಎಲ್‌ಬಿ2, ಪಿಟಿಇಎನ್, ಟಿಪಿ53 ಮತ್ತು ಸಿಎಚ್‌ಇಕೆ2 ವಂಶವಾಹಿಗಳಲ್ಲಿ ಉಂಟಾಗಿರುವ ರೂಪಾಂತರಗಳು ಕೂಡ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸಬಹುದಾಗಿದೆ. ಆದರೆ ಬಿಆರ್ ಸಿಎ ವಂಶವಾಹಿಯ ರೂಪಾಂತರದಿಂದ ಉಂಟಾಗಬಲ್ಲ ಸಾಧ್ಯತೆಗೆ ಹೋಲಿಸಿದರೆ ಇವುಗಳಿಂದ ಸಾಧ್ಯತೆ ಕಡಿಮೆ.
ವಂಶಪಾರಂಪರ್ಯ ರೀತಿಗಳು
ಈ ವಂಶವಾಹಿ ರೂಪಾಂತರಗಳು ಇಬ್ಬರು ಹೆತ್ತವರಲ್ಲಿ ಯಾರಿಂದಲೂ ಬಳುವಳಿಯಾಗಿ ಬಂದಿರಬಹುದಾಗಿದೆ. ವ್ಯಕ್ತಿಯೊಬ್ಬರಿಗೆ ಈ ವಂಶವಾಹಿಗಳ ಪೈಕಿ ಯಾವುದೇ ಒಂದರಲ್ಲಿ ರೂಪಾಂತರ ವಂಶಪಾರಂಪರ್ಯವಾಗಿ ಬಂದಿದ್ದರೂ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯ ಹೆಚ್ಚುತ್ತದೆ. ಆದರೆ ವಂಶವಾಹಿ ರೂಪಾಂತರವನ್ನು ವಂಶಪಾರಂಪರ್ಯವಾಗಿ ಗಳಿಸಿಕೊಂಡಿರುವ ಮಾತ್ರಕ್ಕೆ ಕ್ಯಾನ್ಸರ್ ಖಚಿತವಾಗಿ ಉಂಟಾಗುತ್ತದೆ ಎಂದು ಹೇಳಲಾಗದು; ಯಾಕೆಂದರೆ ಈ ವಿಷಯದಲ್ಲಿ ಜೀವನ ಶೈಲಿ, ಹಾರ್ಮೋನ್ ಸಂಬಂಧಿ ಪರಿಣಾಮಗಳು ಮತ್ತು ಸಂಭವನೀಯತೆಯೂ ಪಾತ್ರ ವಹಿಸುತ್ತವೆ.
ವ್ಯಕ್ತಿಯೊಬ್ಬರ ಕುಟುಂಬದಲ್ಲಿ ಸ್ತನ ಕ್ಯಾನ್ಸರ್ ಅಥವಾ ಗರ್ಭಕೋಶದ ಕ್ಯಾನ್ಸರ್ ಪ್ರಕರಣಗಳು ಇದ್ದರೆ ವೈಯಕ್ತಿಕ ಅಪಾಯ ಸಾಧ್ಯತೆಗಳನ್ನು ತಿಳಿದುಕೊಂಡು ಸ್ತನ ಕ್ಯಾನ್ಸರ್ ನಿರ್ವಹಣೆಯ ವಿಷಯದಲ್ಲಿ ತಿಳಿವಳಿಕೆಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕಾಗಿ ವೈದ್ಯರ ಜತೆಗೆ ವಂಶವಾಹಿ ಪರೀಕ್ಷೆಗಳನ್ನು ನಡೆಸುವ ಬಗ್ಗೆ ಮತ್ತು ಆಪ್ತ ಸಮಾಲೋಚನೆಯ ಬಗ್ಗೆ ಚರ್ಚಿಸುವುದು ಉತ್ತಮ.
ಸ್ತನ ಕ್ಯಾನ್ಸರ್‌ನ್ನು ಶೀಘ್ರ ಪತ್ತೆ ಹಚ್ಚುವಲ್ಲಿ ವಂಶವಾಹಿ ಪರೀಕ್ಷೆಯು ಹೇಗೆ ಸಹಾಯ ಮಾಡಬಲ್ಲುದು?
ಈ ಕೆಳಗೆ ಪಟ್ಟಿ ಮಾಡಲಾಗಿರುವಂತೆ ಹಲವು ರೀತಿಗಳಲ್ಲಿ ವಂಶವಾಹಿ ಪರೀಕ್ಷೆಯು ಸ್ತನ ಕ್ಯಾನ್ಸರ್ ಪತ್ತೆಯನ್ನು ಶೀಘ್ರವಾಗಿ ನಡೆಸಲು ಸಹಾಯ ಮಾಡಬಲ್ಲುದಾಗಿದೆ.
- ಹೆಚ್ಚು ಅಪಾಯವುಳ್ಳ ವಂಶವಾಹಿಗಳನ್ನು ಗುರುತಿಸುವಿಕೆ: ವಂಶವಾಹಿ ಪರೀಕ್ಷೆಯಿಂದ ಬಿಆರ್‌ಸಿಎ 1 ಮತ್ತು ಬಿಆರ್ ಸಿಎ 2, ಪಿಎಎಲ್‌ಬಿ2 ಅಥವಾ ಇತರ ನಿರ್ದಿಷ್ಟ ವಂಶವಾಹಿಗಳಲ್ಲಿ ಆಗಿರುವ ಸ್ತನ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ರೂಪಾಂತರವನ್ನು ಗುರುತಿಸಲು ಸಾಧ್ಯವಾಗುತ್ತದೆ. ಈ ರೂಪಾಂತರಗಳು ಪತ್ತೆಯಾದರೆ ಸ್ತನ ಕ್ಯಾನ್ಸರ್ ಉಂಟಾಗಬಲ್ಲ ಸಾಧ್ಯತೆ ಅಧಿಕ ಎಂದು ಅರ್ಥ ಮಾಡಿಕೊಳ್ಳಬಹುದಾಗಿದ್ದು, ಇದರಿಂದಾಗಿ ಹೆಚ್ಚುವರಿ ಎಚ್ಚರ ವಹಿಸುವುದು ಮತ್ತು ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳುವುದು ಸಾಧ್ಯವಾಗುತ್ತದೆ.
- ಶೀಘ್ರ ಪತ್ತೆ: ಬಿಆರ್‌ಸಿಎ1, ಬಿಆರ್‌ಸಿಎ2ರಂತಹ ಸ್ತನ ಕ್ಯಾನ್ಸರ್ ಉಂಟಾಗುವ ಅಪಾಯವನ್ನು ಹೆಚ್ಚಿಸಬಲ್ಲ ವಂಶವಾಹಿ ರೂಪಾಂತರಗಳನ್ನು ಹೊಂದಿರುವ ವ್ಯಕ್ತಿಗಳು ಸ್ತನ ಕ್ಯಾನ್ಸರ್ ಪರೀಕ್ಷೆಯನ್ನು ಸಾಕಷ್ಟು ಬೇಗನೆ ಮತ್ತು ಹೆಚ್ಚು ತೀವ್ರವಾಗಿ ಆರಂಭಿಸಬಹುದಾಗಿದೆ. ಈ ಸಕ್ರಿಯಾತ್ಮಕ ಕಾರ್ಯವಿಧಾನದಿಂದ ಸ್ತನ ಕ್ಯಾನ್ಸರ್ ಅಥವಾ ಕ್ಯಾನ್ಸರ್‌ಕಾರಕ ಬದಲಾವಣೆಗಳನ್ನು ಅತೀ ಶೀಘ್ರದಲ್ಲಿ ಪತ್ತೆಹಚ್ಚಲು ಸಾಧ್ಯವಾಗುತ್ತದೆಯಲ್ಲದೆ ಸಹಜವಾಗಿ ಇದರಿಂದ ಚಿಕಿತ್ಸೆಯ ಫಲಿತಾಂಶ ಹೆಚ್ಚು ಚೆನ್ನಾಗಿರುತ್ತದೆ.
- ಕೌಟುಂಬಿಕ ತಪಾಸಣೆ: ವ್ಯಕ್ತಿಯೊಬ್ಬರ ವಂಶವಾಹಿ ಪರೀಕ್ಷೆಯಿಂದ ತಿಳಿದುಬರುವ ವಂಶಪಾರಂಪರ್ಯ ವಂಶವಾಹಿ ರೂಪಾಂತರದ ಮಾಹಿತಿಯ ಆಧಾರದಲ್ಲಿ ಅವರ ಕುಟುಂಬದ ಇತರ ಸದಸ್ಯರಿಗೂ ಅವರವರ ಕ್ಯಾನ್ಸರ್ ಅಪಾಯ ಪ್ರಮಾಣವನ್ನು ಅರಿತುಕೊಳ್ಳುವುದು ಸಾಧ್ಯವಾಗುತ್ತದೆ. ಇದರಿಂದ ಅವರು ಕೂಡ ಶೀಘ್ರ ತಪಾಸಣೆ ಮಾಡಿಸಿಕೊಳ್ಳುವುದು ಅಥವಾ ಹೆಚ್ಚು ಅಪಾಯದ ವಂಶವಾಹಿಗಳನ್ನು ಹೊಂದಿದ್ದರೆ ಪ್ರತಿಬಂಧಕ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯವಾಗುತ್ತದೆ.
- ವ್ಯಕ್ತಿ ನಿರ್ದಿಷ್ಟ ಚಿಕಿತ್ಸೆಯ ಯೋಜನೆಗಳು: ವಂಶವಾಹಿ ಪರೀಕ್ಷೆಯಿಂದ ಚಿಕಿತ್ಸೆಯ ನಿರ್ಧಾರಗಳಿಗೆ ಮಾರ್ಗದರ್ಶನ ಒದಗುತ್ತದೆ. ಉದಾಹರಣೆಗೆ, ಸ್ತನ ಕ್ಯಾನ್ಸರ್ ಪೀಡಿತ ವ್ಯಕ್ತಿಯೊಬ್ಬರು ನಿರ್ದಿಷ್ಟ ವಂಶವಾಹಿ ರೂಪಾಂತರವನ್ನು ಹೊಂದಿದ್ದರೆ, ಗುರಿನಿರ್ದೇಶಿತ ಥೆರಪಿಗಳು ಅಥವಾ ಆಯಾ ರೂಪಾಂತರಗಳನ್ನು ಕೇಂದ್ರೀಕರಿಸಿದ ವೈದ್ಯಕೀಯ ಪ್ರಯೋಗಗಳನ್ನು ಚಿಕಿತ್ಸೆಯ ಆಯ್ಕೆಯಾಗಿ ಪರಿಗಣಿಸಬಹುದಾಗಿದೆ.
- ಅಪಾಯ ವಿಶ್ಲೇಷಣೆ ಮತ್ತು ಆಪ್ತ ಸಮಾಲೋಚನೆ: ವಂಶವಾಹಿ ಪರೀಕ್ಷೆಯಿಂದ ವ್ಯಕ್ತಿಯೊಬ್ಬರು ಹೊಂದಿರುವ ಒಟ್ಟಾರೆ ಸ್ತನ ಕ್ಯಾನ್ಸರ್ ಅಪಾಯದ ಬಗ್ಗೆ ಸ್ಪಷ್ಟ ತಿಳಿವಳಿಕೆ, ಚಿತ್ರಣ ಲಭ್ಯವಾಗುತ್ತದೆ. ಜೀವನ ವಿಧಾನ ಆಯ್ಕೆಗಳು, ಅಪಾಯವನ್ನು ಕಡಿಮೆ ಮಾಡುವ ಶಸ್ತ್ರಚಿಕಿತ್ಸೆಗಳು ಮತ್ತು ಇತರ ಪ್ರತಿಬಂಧಕ ಕಾರ್ಯತಂತ್ರಗಳನ್ನು ಅನುಸರಿಸುವಲ್ಲಿ ಮಾಹಿತಿಯುಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದಕ್ಕೆ ಈ ಮಾಹಿತಿಯು ನಿರ್ಣಾಯಕ ನೆರವು ನೀಡುತ್ತದೆ. ಒಟ್ಟಾರೆಯಾಗಿ ಹೇಳುವುದಾದರೆ, ಸ್ತನ ಕ್ಯಾನ್ಸರ್‌ಗೆ ತುತ್ತಾಗುವ ಅಪಾಯವನ್ನು ಹೆಚ್ಚು ಹೊಂದಿರುವ ವ್ಯಕ್ತಿಗಳನ್ನು ಗುರುತಿಸುವುದಕ್ಕೆ, ವ್ಯಕ್ತಿನಿರ್ದಿಷ್ಟ ತಪಾಸಣೆಯ ಕಾರ್ಯತಂತ್ರಗಳನ್ನು ಅನುಸರಿಸುವುದಕ್ಕೆ ಮತ್ತು ವ್ಯಕ್ತಿನಿರ್ದಿಷ್ಟ ಚಿಕಿತ್ಸೆಯನ್ನು ವಿನ್ಯಾಸಗೊಳಿಸುವುದಕ್ಕೆ ಸಹಾಯ ಮಾಡುವ ಮೂಲಕ ವಂಶವಾಹಿ ಪರೀಕ್ಷೆಯು ಸ್ತನ ಕ್ಯಾನ್ಸರ್‌ನ ಶೀಘ್ರ ಪತ್ತೆಯ ವಿಷಯದಲ್ಲಿ ಸ್ಪಷ್ಟ ಚಿತ್ರಣವನ್ನು ಒದಗಿಸುತ್ತದೆ. ಅಂತಿಮವಾಗಿ ಇದರಿಂದ ಸ್ತನ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಉತ್ತಮ ಫಲಿತಾಂಶ ಲಭ್ಯವಾಗುವುದು ಮಾತ್ರವಲ್ಲದೆ ಅದರ ನಿರ್ವಹಣೆಯೂ ಉತ್ತಮವಾಗಿರುತ್ತದೆ.
– ಡಾ| ಹರೀಶ್ ಇ.
ಸರ್ಜಿಕಲ್ ಆಂಕಾಲಜಿಸ್ಟ್
ಕೆಎಂಸಿ ಆಸ್ಪತ್ರೆ,
ಡಾ| ಬಿ.ಆರ್. ಅಂಬೇಡ್ಕರ್ ವೃತ್ತ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಆಂಕಾಲಜಿ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Udupi: ಸಮಾಜ ರೂಪಿಸುವಲ್ಲಿ ಯಕ್ಷಗಾನ ಪಾತ್ರ ಹಿರಿದು: ಪೇಜಾವರ ಶ್ರೀ
Kaup: ಹೊಸ ಮಾರಿಗುಡಿ ದೇವಸ್ಥಾನ: ಬೆಂಗಳೂರಿನಲ್ಲಿ ವಾಗೀಶ್ವರಿ ಪೂಜೆ, ಲೇಖನ ಸಂಕಲ್ಪ
Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ
Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.