ಇನ್‌ಹೇಲರ್‌ಗಳನ್ನು ಸರಿಯಾಗಿ ಉಪಯೋಗಿಸುತ್ತಿದ್ದೀರಾ?
ನಿಮ್ಮ ಇನ್‌ಹೇಲರ್ ಉಪಕರಣದ ಬಗ್ಗೆ ತಿಳಿಯಿರಿ
Team Udayavani, Jul 9, 2023, 12:07 PM IST
ನಮ್ಮ ಶ್ವಾಸಾಂಗ ವ್ಯೂಹವು ಉಸಿರಾಟ ಮಾರ್ಗ ಮತ್ತು ಶ್ವಾಸಕೋಶಗಳನ್ನು ಒಳಗೊಂಡಿದ್ದು, ಇದು ನಮ್ಮ ಉಸಿರಾಟಕ್ಕೆ ಸಹಾಯ ಮಾಡುತ್ತದೆ. ನಾವೆಲ್ಲರೂ ಆಮ್ಲಜನಕವನ್ನು ಉಸಿರಾಡಿ ಇಂಗಾಲದ ಡೈಆಕ್ಸೈಡ್ ನ್ನು ಹೊರಕ್ಕೆ ಬಿಡುತ್ತೇವೆ. ಶ್ವಾಸಾಂಗ ವ್ಯೂಹದ ಯಾವುದೇ ಕಾಯಿಲೆಯು ಶ್ವಾಸಕೋಶಗಳ ಸಹಜ ಕಾರ್ಯಾಚರಣೆಗೆ ತೊಡಕನ್ನು ಉಂಟು ಮಾಡುತ್ತದೆ.
ಸಿಗರೇಟು ಸೇದುವುದು, ತಂಬಾಕು ಬಳಕೆ, ಬೀಡಿ ಎಳೆಯುವುದು, ಯಾವುದೇ ಸೋಂಕುಗಳು, ವಾಯು ಮಾಲಿನ್ಯ, ರಾಸಾಯನಿಕಗಳು ಅಥವಾ ಕಲ್ಲಿದ್ದಲು, ಹತ್ತಿ ಯಾ ಯಾವುದೇ ಜವುಳಿ ಉದ್ಯಮಗಳಲ್ಲಿ ಕೆಲಸ ಮಾಡುವುದರಿಂದ ಶ್ವಾಸಾಂಗ ಕಾಯಿಲೆಗಳು ಉಂಟಾಗುತ್ತವೆ.
ಮಕ್ಕಳಲ್ಲಿ ಸಾಮಾನ್ಯವಾಗಿ ಕಂಡುಬರುವ ಶ್ವಾಸಾಂಗ ಕಾಯಿಲೆ ಎಂದರೆ ಅಸ್ತಮಾ; ವಯಸ್ಕರಲ್ಲಿ ಇದು ದೀರ್ಘಕಾಲೀನ ತೊಂದರೆದಾಯಕ ಕಾಯಿಲೆ (ಕ್ರಾನಿಕ್ ಒಬ್‌ಸ್ಟ್ರಕ್ಟಿವ್ ಲಂಗ್ ಡಿಸೀಸ್)ಯಾಗಿ ಕಂಡುಬರುತ್ತದೆ.
ಈ ಕಾಯಿಲೆಗಳಲ್ಲಿ ನಾವು ಉಸಿರಾಡುವ ಮಾರ್ಗದಲ್ಲಿ ತಡೆ ಉಂಟಾಗುತ್ತದೆ, ಇದರಿಂದಾಗಿ ವ್ಯಕ್ತಿಯು ಉಸಿರಾಡಲು ಕಷ್ಟ ಪಡಬೇಕಾಗುತ್ತದೆ ಮತ್ತು ಹೆಚ್ಚು ಪ್ರಯತ್ನ ಪಡಬೇಕಾಗುತ್ತದೆ.
ಶ್ವಾಸಾಂಗದ ದೀರ್ಘಕಾಲೀನ ಕಾಯಿಲೆಗಳನ್ನು ಸಂಪೂರ್ಣವಾಗಿ ಗುಣಪಡಿಸುವುದು ಸಾಧ್ಯವಿಲ್ಲ; ಆದರೆ ಔಷಧಗಳನ್ನು ಸರಿಯಾಗಿ ಸೇವಿಸುವುದು ಮತ್ತು ಉಸಿರಾಟಕ್ಕೆ ಸಹಕಾರಿಯಾದ ಉಪಕರಣಗಳನ್ನು ಸಮರ್ಪಕವಾಗಿ ಉಪಯೋಗಿಸುವ ಮೂಲಕ ಈ ಕಾಯಿಲೆಗಳ ಲಕ್ಷಣಗಳು ಮತ್ತು ತೀವ್ರತೆಯನ್ನು ಕಡಿಮೆ ಮಾಡಬಹುದಾಗಿದೆ.
ಇಂತಹ ಔಷಧಗಳ ಗುರಿ ಎಂದರೆ ಉಸಿರಾಟ ಮಾರ್ಗದಲ್ಲಿ ಇರುವ ತಡೆಯನ್ನು ನಿವಾರಿಸುವುದು ಮತ್ತು ಉಸಿರಾಟವನ್ನು ಸುಲಭಸಾಧ್ಯವಾಗಿಸುವ ಮೂಲಕ ರೋಗಿಯ ದೈನಿಕ ಚಟುವಟಿಕೆಗಳ ಗುಣಮಟ್ಟವನ್ನು ಸುಧಾರಿಸುವುದು.
ಮನೆಯ ಸನ್ನಿವೇಶದಲ್ಲಿ ದೀರ್ಘಕಾಲಿಕ ಶ್ವಾಸಾಂಗ ರೋಗಿಗಳ ಸರಾಗ ಉಸಿರಾಟಕ್ಕೆ ನೆರವಾಗಲು ಮತ್ತು ಲಕ್ಷಣಗಳನ್ನು ನಿಯಂತ್ರಿಸಲು ರೆಸ್ಪಿರೇಟರಿ ಇನ್‌ಹೇಲರ್ ಗಳನ್ನು ಉಪಯೋಗಿಸಲಾಗುತ್ತದೆ.
ರೆಸ್ಪಿರೇಟರಿ ಇನ್‌ಹೇಲರ್‌ಗಳು ಕೈಯಲ್ಲಿ ಹಿಡಿದು ಉಪಯೋಗಿಸಬಹುದಾದ, ಪುಟ್ಟ ಉಪಕರಣಗಳಾಗಿದ್ದು, ಮಂಜಿನ ರೂಪದಲ್ಲಿ ಔಷಧವನ್ನು ಒದಗಿಸುತ್ತವೆ; ಇದರಿಂದಾಗಿ ಉಸಿರಾಟ ಸಂದರ್ಭದಲ್ಲಿ ಔಷಧವು ಶ್ವಾಸಕೋಶವನ್ನು ಸುಲಭವಾಗಿ ತಲುಪಲು ಸಾಧ್ಯವಾಗುತ್ತದೆ.
ಎಂಡಿಐಯ ಸರಿಯಾದ ಬಳಕೆಯ ತಂತ್ರಗಳು (ವಯಸ್ಕರು ಸಾಮಾನ್ಯವಾಗಿ ಬಳಸುವಂಥದ್ದು)
- ಮೊದಲಿಗೆ ಔಷಧವನ್ನು ಕೈಯಲ್ಲಿ ಹಿಡಿದು ಚೆನ್ನಾಗಿ ಕುಲುಕುವ ಮೂಲಕ ಅದು ಬಿಸಿಯಾಗುವ ಹಾಗೆ ಮಾಡಿ.
- ಹೊಸ ಉಪಕರಣವನ್ನು ಅಥವಾ ದೀರ್ಘಕಾಲ ಉಪಯೋಗಿಸದೆ ಬಿಟ್ಟ ಉಪಕರಣವನ್ನು ಬಳಸುವುದಕ್ಕೆ ಮುನ್ನ ಇನ್‌ಹೇಲರ್‌ನ ಔಟ್ ಲೆಟ್ ವಾತಾವರಣದತ್ತ ಮುಖ ಮಾಡಿರುವುದನ್ನು ಖಾತರಿ ಪಡಿಸಿಕೊಂಡು ಔಷಧ ಬಾಟಲಿಯ ತಲೆಯನ್ನು ಅಮುಕುವ ಮೂಲಕ ಮೊದಲ ಡೋಸ್ ವಾತಾವರಣದತ್ತ ಹಾರುವ ಹಾಗೆ ಮಾಡಿ (ನಿಮ್ಮಿಂದ ಅಥವಾ ಜನರಿಂದ ದೂರ).
- ಉಪಕರಣದ ಎಲ್ಲ ಭಾಗಗಳನ್ನು ಸರಿಯಾಗಿ ಜೋಡಿಸಿ, ಮೌತ್‌ಪೀಸ್‌ನ ಮುಚ್ಚಳವನ್ನು ತೆಗೆಯಿರಿ.
- ಉಪಕರಣದ ಮೌತ್‌ಪೀಸನ್ನು ತುಟಿಗಳ ನಡುವೆ ಇರಿಸಿಕೊಳ್ಳಿ, ನಾಲಗೆ ಮೌತ್‌ಪೀಸ್‌ಗಿಂತ ಕೆಳಗೆ ಇರಲಿ. ಮೌತ್‌ಪೀಸ್ ಬಾಯಿಯ ಒಳಗೆ ಇರುವಂತೆಯೇ ತುಟಿಗಳನ್ನು ಸಂಪೂರ್ಣವಾಗಿ ಮುಚ್ಚಿರಿ.
- ಮೂಗಿನ ಮೂಲಕ ಸಹಜವಾಗಿ ಉಸಿರಾಡಿ.
- ನಿಧಾನವಾಗಿ ಉಸಿರಾಡು ತ್ತಿರುವಂತೆಯೇ ಔಷಧ ಹೊಂದಿರುವ ಕ್ಯಾನಿಸ್ಟರ್‌ನ ತಲೆಯನ್ನು ಒತ್ತಿರಿ. ಈಗ ನಿಮ್ಮ ಬಾಯಿಯ ಒಳಗೆ ಔಷಧ ಸಿಂಪಡನೆ ಆಗಿರುವುದು ಗೊತ್ತಾಗುತ್ತದೆ.
- ನಿಮ್ಮ ಶ್ವಾಸಕೋಶಗಳ ಪೂರ್ಣ ಸಾಮರ್ಥ್ಯದಷ್ಟು ಉಸಿರು ಒಳಕ್ಕೆ ಎಳೆದುಕೊಳ್ಳಿ. 10 ಸೆಕೆಂಡುಗಳ ಕಾಲ ಉಸಿರನ್ನು ಹಿಡಿದಿರಿಸಿಕೊಳ್ಳಿ.
- ಈಗ ವಿಶ್ರಮಿಸಿಕೊಂಡು ಸಹಜವಾಗಿ ಮೂಗಿನ ಮೂಲಕ ಉಸಿರನ್ನು ಹೊರಕ್ಕೆ ಬಿಡಿ.
- ಪ್ರತೀ ಎರಡು ಔಷಧ ಸಿಂಪಡನೆಗಳ ನಡುವೆ 1 ನಿಮಿಷದ ವಿರಾಮ ನೀಡಿ.
- ಉಪಕರಣವನ್ನು ಬಿಡಿಯಾಗಿಸಿಕೊಂಡು ಮೌತ್‌ಪೀಸ್‌ನ ಮುಚ್ಚಳ ಹಾಕಿಡಿ.
ಸ್ಪೇಸರ್
ಸ್ಪೇಸರ್ ಎಂದರೆ ಒಂದು ತುದಿಯಲ್ಲಿ ಮೌತ್‌ಪೀಸ್ ಹೊಂದಿರುವ ಪ್ಲಾಸ್ಟಿಕ್ ಟ್ಯೂಬ್. ಇದರ ಇನ್ನೊಂದು ತುದಿಯನ್ನು ರೋಗಿ ಇನ್‌ಹೇಲರ್‌ಗೆ ಜೋಡಿಸಬೇಕು. ಸ್ಪೇಸರ್ ಉಪಯೋಗಿಸುವುದರಿಂದ ಔಷಧವು ಶ್ವಾಸಕೋಶಗಳಿಗೆ ತಲುಪುವ ಸಮಯವು ವಿಸ್ತರಣೆಯಾಗುತ್ತದೆ. ಇದರಿಂದಾಗಿ ರೋಗಿಗೆ ಔಷಧವನ್ನು ಉಸಿರಾಡಲು ಹೆಚ್ಚು ಸಮಯ ಸಿಗುತ್ತದೆ ಮತ್ತು ಔಷಧವು ಶ್ವಾಸಕೋಶಗಳಿಗೆ ಹೆಚ್ಚು ಪರಿಣಾಮಕಾರಿಯಾಗಿ ತಲುಪುತ್ತದೆ. ಸ್ಪೇಸರ್‌ನಿಂದಾಗಿ ಔಷಧವು ಕೊಳವೆಯ ಒಳಗಷ್ಟೇ ಇದ್ದು, ವಾತಾವರಣಕ್ಕೆ ಚೆಲ್ಲಿ ವ್ಯರ್ಥವಾಗುವುದು ತಪ್ಪುತ್ತದೆ. ಸ್ಪೇಸರ್ ಪುಟ್ಟ ಮಕ್ಕಳಿಗೆ, ವಯೋವೃದ್ಧರಿಗೆ ಮತ್ತು ಹೊಸದಾಗಿ ಇನ್‌ಹೇಲರ್ ಉಪಯೋಗಿಸುವವರಿಗೆ ಪ್ರಯೋಜನಕಾರಿಯಾಗಿದೆ.
ಇನ್‌ಹೇಲರ್ ಉಪಕರಣವನ್ನು ಶುಚಿಗೊಳಿಸುವುದು
ಔಷಧ ಶೇಖರಣೆ ಆಗದೆ ಇದ್ದರೂ ವಾರಕ್ಕೆ ಒಮ್ಮೆಯಾದರೂ ನಿಮ್ಮ ಇನ್‌ಹೇಲರನ್ನು ಶುಚಿಗೊಳಿಸುವುದು ಅಗತ್ಯ. ಎಲ್ಲ ಇನ್‌ಹೇಲರ್‌ಗಳಿಗೂ ಅವುಗಳದ್ದೇ ಆದ ಶುಚಿಗೊಳಿಸುವ ಸೂಚನೆಗಳು ಇರುತ್ತವೆ. ಇಲ್ಲಿ ನಿಮ್ಮ ಇನ್‌ಹೇಲರನ್ನು ಶುಚಿಗೊಳಿಸಲು ಇಲ್ಲಿ ಕೆಲವು ಸೂಚನೆಗಳನ್ನು ನೀಡಲಾಗಿದೆ.
- ಲೋಹದ ಕ್ಯಾನಿಸ್ಟರ್‌ಗಳನ್ನು ನೀರಿನಲ್ಲಿ ತೊಳೆಯಬಾರದು ಮತ್ತು ನೀರಿನಲ್ಲಿ ನೆನೆಸಿ ಇಡಬಾರದು ಎಂಬುದನ್ನು ಮರೆಯದೆ ನೆನಪಿನಲ್ಲಿ ಇರಿಸಿಕೊಳ್ಳಬೇಕು. ಇನ್‌ಹೇಲರ್‌ನ ಪ್ಲಾಸ್ಟಿಕ್ ಭಾಗಗಳನ್ನು ಮಾತ್ರ ಶುಚಿಗೊಳಿಸಬೇಕು.
- ಪ್ಲಾಸ್ಟಿಕ್ ಕೇಸಿಂಗ್‌ನಿಂದ ಮೆಟಲ್ ಕ್ಯಾನಿಸ್ಟರನ್ನು ತೆಗೆಯಿರಿ ಮತ್ತು ಮೌತ್‌ಪೀಸ್‌ನ ಮುಚ್ಚಳವನ್ನು ತೆಗೆಯಿರಿ.
- ಲಘು ಬಿಸಿಯಾದ ನೀರಿನಲ್ಲಿ ಪ್ಲಾಸ್ಟಿಕ್ ಕೇಸಿಂಗನ್ನು ಚೆನ್ನಾಗಿ ತೊಳೆಯಿರಿ.
- ಪ್ಲಾಸ್ಟಿಕ್ ಕೇಸಿಂಗ್ ರಾತ್ರಿ ಪೂರ್ತಿ ಗಾಳಿಯಾಡುವ ಜಾಗದಲ್ಲಿ ಇರಿಸಿ ಒಣಗಿಸಿ. ಒಣ ಬಟ್ಟೆಯಿಂದ ಅಗತ್ಯವಿದ್ದರೆ ಇನ್‌ಹೇಲರನ್ನು ಒರೆಸಿಕೊಳ್ಳಬಹುದು.
- ಮೆಟಲ್ ಕ್ಯಾನಿಸ್ಟರನ್ನು ಪ್ಲಾಸ್ಟಿಕ್ ಕೇಸಿಂಗ್‌ಗೆ ಜೋಡಿಸಿ, ಗಾಳಿಯಲ್ಲಿ ಒಂದು ಬಾರಿ ಔಷಧ ಬಿಡುವ ಮೂಲಕ ಅದನ್ನು ಪರೀಕ್ಷಿಸಿಕೊಳ್ಳಿ, ಬಳಿಕ ಮೌತ್‌ಪೀಸ್‌ನ ಮುಚ್ಚಳವನ್ನು ಹಾಕಿಡಿ.
ನನ್ನ ಇನ್‌ಹೇಲರನ್ನು ಇರಿಸಿಕೊಳ್ಳುವುದು ಹೇಗೆ?
- ಇನ್‌ಹೇಲರ್ ಜತೆಗೆ ಧೂಳು, ಕೊಳೆ ಸೇರದಂತೆ ಪ್ರತೀ ಬಾರಿ ಉಪಯೋಗಿಸಿದ ಬಳಿಕ ಇನ್ ಹೇಲರ್‌ನ ಮುಚ್ಚಳ ಹಾಕಿಡಬೇಕು.
- ಇನ್‌ಹೇಲರ್ ಒಳಗಿರುವ ಔಷಧಕ್ಕೆ ಹೆಚ್ಚು ಉಷ್ಣತೆ, ಅತೀ ಎತ್ತರದ ಪ್ರದೇಶಗಳಿಂದ ಪ್ರತಿಕೂಲ ಪರಿಣಾಮ ಉಂಟಾಗಬಹುದು. ಅದನ್ನು ಯಾವಾಗಲೂ ಶುಷ್ಕ ಜಾಗದಲ್ಲಿಯೇ ಇರಿಸಬೇಕು.
- ಇನ್‌ಹೇಲರ್ ಮಕ್ಕಳು, ಸಾಕುಪ್ರಾಣಿಗಳಿಗೆ ಸಿಗದಂತೆ ಸುರಕ್ಷಿತ ಜಾಗದಲ್ಲಿ ಇರಿಸಬೇಕು.
-ಮಧುರಾ ಎ. ಪದ್ಮಶಾಲಿ,ಅಸಿಸ್ಟೆಂಟ್ ಪ್ರೊಫೆಸರ್
-ಸಮೃದ್ಧ ಎಸ್. ಪ್ರಭು,ಅಸಿಸ್ಟೆಂಟ್ ಪ್ರೊಫೆಸರ್,
ರೆಸ್ಪಿರೇಟರಿ ಥೆರಪಿ ವಿಭಾಗ, ಎಂಸಿಎಚ್‌ಪಿ, ಮಾಹೆ, ಮಣಿಪಾಲ
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಪಲ್ಮನರಿ ಮೆಡಿಸಿನ್ ವಿಭಾಗ, ಕೆಎಂಸಿ ಆಸ್ಪತ್ರೆ, ಅತ್ತಾವರ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.