Pulmonary Tuberculosis: ಶ್ವಾಸಕೋಶದ ಕ್ಷಯ ತಿಳಿವಳಿಕೆ ಮತ್ತು ಹೋರಾಟ
Team Udayavani, Aug 6, 2024, 3:58 PM IST
ಪ್ರತೀ ವರ್ಷ ಮಿಲಿಯಗಟ್ಟಲೆ ಮಂದಿಯನ್ನು ಬಾಧಿಸುವ ಶ್ವಾಸಕೋಶದ ಕ್ಷಯ ರೋಗವು ಜಾಗತಿಕವಾಗಿ ಸಾರ್ವಜನಿಕ ಆರೋಗ್ಯಕ್ಕೆ ಸವಾಲನ್ನು ಒಡ್ಡುತ್ತಿರುವ ಒಂದು ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ 2022ರಲ್ಲಿ ಜಾಗತಿಕವಾಗಿ 10.6 ದಶಲಕ್ಷ ಮಂದಿ (1.67 ಲಕ್ಷ ಮಂದಿ ಎಚ್‌ಐವಿ ಸೋಂಕುಪೀಡಿತ ಶ್ವಾಸಕೋಶ ಕ್ಷಯರೋಗಿಗಳ ಸಹಿತ) ಕ್ಷಯ ರೋಗದಿಂದ ಮೃತಪಟ್ಟಿದ್ದಾರೆ.
2022ರಲ್ಲಿ ಜಾಗತಿಕವಾಗಿ 5.8 ದಶಲಕ್ಷ ಮಂದಿ ಪುರುಷರು, 3.5 ದಶಲಕ್ಷ ಮಂದಿ ಮಹಿಳೆಯರು ಮತ್ತು 1.3 ದಶಲಕ್ಷ ಮಂದಿ ಮಕ್ಕಳ ಸಹಿತ ಅಂದಾಜು 10.6 ದಶಲಕ್ಷ ಮಂದಿ ಕ್ಷಯ ರೋಗಕ್ಕೆ ತುತ್ತಾಗಿದ್ದಾರೆ. ಭಾರತದಲ್ಲಿ 2022 ಕ್ಷಯ ರೋಗ ಸರ್ವೇಕ್ಷಣೆಯ ವಿಷಯದಲ್ಲಿ ಒಂದು ಮೈಲಿಗಲ್ಲು ವರ್ಷ ಆಗಿದ್ದು, 24.2 ಲಕ್ಷ ಪ್ರಕರಣಗಳು ದಾಖಲುಗೊಂಡಿವೆ.
ಇದು 2021ಕ್ಕಿಂತ ಶೇ. 13ರಷ್ಟು ಹೆಚ್ಚಳವಾಗಿದೆ. ಇತ್ತೀಚೆಗಿನ ವರ್ಷಗಳಲ್ಲಿ ಚಿಕಿತ್ಸೆ ಮತ್ತು ಆರೈಕೆಯಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಲಾಗಿದ್ದರೂ ಜಾಗತಿಕವಾಗಿ ಕ್ಷಯ ರೋಗವು ಈಗಲೂ ಆರೋಗ್ಯ ವ್ಯವಸ್ಥೆಗೆ ಗಂಭೀರ ಸವಾಲನ್ನು ಒಡ್ಡುತ್ತಿದೆ.
ಶ್ವಾಸಕೋಶದ ಕ್ಷಯ ರೋಗ: ಹಾಗೆಂದರೇನು?
ಶ್ವಾಸಕೋಶದ ಕ್ಷಯ ಅಥವಾ ಪಲ್ಮನರಿ ಟ್ಯುಬರ್‌ಕ್ಯುಲೋಸಿಸ್ ಎನ್ನುವುದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಸೂಕ್ಷ್ಮಜೀವಶಾಸ್ತ್ರೀಯವಾಗಿ ಅಥವಾ ಪ್ರಯೋಗಾಲಯ ಮೂಲಕ ದೃಢೀಕರಣಗೊಂಡ ಶ್ವಾಸಕೋಶದ ಪ್ಯಾರೆಂಕೈಮಾ ಅಥವಾ ಟ್ರೇಕೊಬ್ರಾಂಕಿಯಲ್ ಟ್ರೀಯನ್ನು ಒಳಗೊಂಡಿರುವ ಕ್ಷಯ ಎಂದು ವ್ಯಾಖ್ಯಾನಿಸಲಾಗುತ್ತದೆ. ಶ್ವಾಸಕೋಶದ ಕ್ಷಯವು ಮೈಕೊಬ್ಯಾಕ್ಟೀರಿಯಂ ಟ್ಯುಬರ್ ಕ್ಯುಲೋಸಿಸ್ ಎನ್ನುವ ಬ್ಯಾಕ್ಟೀರಿಯಾದಿಂದ ಉಂಟಾಗುವ, ಒಬ್ಬರಿಂದ ಇನ್ನೊಬ್ಬರಿಗೆ ಹರಡಬಲ್ಲ ಸೋಂಕುರೋಗವಾಗಿದೆ. ಇದು ಸೋಂಕುಪೀಡಿತ ವ್ಯಕ್ತಿಯಿಂದ ಆರೋಗ್ಯವಂತ ವ್ಯಕ್ತಿಗೆ ಗಾಳಿಯಲ್ಲಿರುವ ಹನಿಬಿಂದುಗಳ (ಕೆಮ್ಮು/ಸೀನು ಇತ್ಯಾದಿ) ಮೂಲಕ ಹರಡುತ್ತದೆ. ಚಿಕಿತ್ಸೆಗೆ ಒಳಪಡಿಸದೆ ಇದ್ದಲ್ಲಿ ಶ್ವಾಸಕೋಶದ ಕ್ಷಯ ರೋಗವು ಮಾರಣಾಂತಿಕವಾಗಬಹುದಾಗಿರುವ ಕಾರಣ ರೋಗಪೀಡಿತರ ಜೀವ ಉಳಿಸುವುದಕ್ಕಾಗಿ ಶೀಘ್ರ ರೋಗಪತ್ತೆ ಮತ್ತು ಚಿಕಿತ್ಸೆ ಒದಗಿಸುವುದು ನಿರ್ಣಾಯಕವಾಗಿದೆ.
ಶ್ವಾಸಕೋಶದ ಕ್ಷಯ: ಶಂಕಿಸುವುದು ಹೇಗೆ?
ಎರಡು ವಾರಗಳಿಗಿಂತ ಹೆಚ್ಚು ಕಾಲದಿಂದ ಕೆಮ್ಮು, ಜ್ವರ, ಗಮನಾರ್ಹ ತೂಕ ನಷ್ಟ, ಕಪದಲ್ಲಿ ರಕ್ತ ಕಂಡುಬರುವುದು (ಹಿಮೊಪ್ಟಿಸಿಸ್) ಮತ್ತು ಎದೆಯ ಎಕ್ಸ್‌ರೇಯಲ್ಲಿ ಯಾವುದೇ ಅಸಹಜತೆಗಳು ಕಂಡುಬಂದರೆ ಶ್ವಾಸಕೋಶದ ಕ್ಷಯಕ್ಕೆ ತುತ್ತಾಗಿದ್ದಾರೆ ಎಂದು ಶಂಕಿಸಬಹುದಾಗಿದೆ.
ಶ್ವಾಸಕೋಶದ ಕ್ಷಯ ಲಕ್ಷಣಗಳು
ದೀರ್ಘಕಾಲೀನ ಕೆಮ್ಮು (2 ವಾರಗಳಿಗಿಂತ ಹೆಚ್ಚು ಅವಧಿ) (ಕೆಲವೊಮ್ಮೆ ಕಫದ ಜತೆಗೆ ರಕ್ತ)
ಎದೆನೋವು
ದುರ್ಬಲತೆ
ದಣಿವು
ತೂಕ ನಷ್ಟ
ಜ್ವರ
ರಾತ್ರಿ ಬೆವರುವುದು
ಯಾರು ಶ್ವಾಸಕೋಶದ ಕ್ಷಯಕ್ಕೆ ತುತ್ತಾಗುವ ಅಪಾಯ ಹೊಂದಿರುತ್ತಾರೆ?
ಕ್ಷಯ ರೋಗವು ಯಾವುದೇ ಲಿಂಗದ, ಯಾವುದೇ ವಯಸ್ಸಿನ ವ್ಯಕ್ತಿಗಳನ್ನು ಬಾಧಿಸಬಹುದಾಗಿದೆ. ಆದರೆ ಕ್ಷಯ ರೋಗಕ್ಕೆ ತುತ್ತಾಗುವ ಕೆಲವು ಅಪಾಯಾಂಶಗಳಿವೆ;
ಅವುಗಳೆಂದರೆ:
ಮಧುಮೇಹ (ಸಕ್ಕರೆ ಕಾಯಿಲೆ)
ರೋಗನಿರೋಧಕ ಶಕ್ತಿ ದುರ್ಬಲಗೊಂಡಿರುವುದು (ಉದಾಹರಣೆಗೆ, ಎಚ್‌ಐವಿ ಸೋಂಕು ಅಥವಾ ಏಡ್ಸ್)
ಅಪೌಷ್ಟಿಕತೆ
ತಂಬಾಕು ಬಳಕೆ (ಪ್ರಧಾನವಾಗಿ ಧೂಮಪಾನ)
ಶ್ವಾಸಕೋಶದ ಕ್ಷಯ: ರೋಗಪತ್ತೆ
ಶ್ವಾಸಾಂಗ ವ್ಯೂಹದ ಸ್ರಾವ, ಮುಖ್ಯವಾಗಿ ಕಫ, ಬ್ರೊಂಕೊಅಲ್ವೆಯೊಲಾರ್ ಲ್ಯಾವೇಜ್ (ಬ್ರೊಂಕೊಸ್ಕೊಪಿಯ ಮೂಲಕ ಪಡೆಯಲಾದ ಮಾದರಿ)ಗಳನ್ನು ಶ್ವಾಸಕೋಶದ ಕ್ಷಯರೋಗ ಪತ್ತೆಗೆ ಮಾದರಿಗಳಾಗಿ ಉಪಯೋಗಿಸಬಹುದಾಗಿದೆ.
ಕಫದ ಎರಡು ಮಾದರಿಗಳನ್ನು ಸಂಗ್ರಹಿಸಬೇಕಾಗುತ್ತದೆ.
ಸ್ಥಳದಲ್ಲಿ ಒಂದು ಮತ್ತು ಬೆಳಗ್ಗೆ ಬೇಗನೆ ಒಂದು ಮಾದರಿಗಳು ಅಥವಾ ಕನಿಷ್ಠ ಒಂದು ಗಂಟೆಯ ಅಂತರದಲ್ಲಿ ಸ್ಥಳದಲ್ಲಿಯೇ ಎರಡು ಮಾದರಿ (ರೋಗಿ ದೂರದಿಂದ ಬಂದಿದ್ದರೆ ಅಥವಾ ಅವರು ಎರಡನೇ ಮಾದರಿಯನ್ನು ನೀಡಲು ಮರಳಿ ಬರುವುದು ಅಸಾಧ್ಯವಾಗಿದ್ದರೆ) ಮಾದರಿಗಳನ್ನು ಸಂಗ್ರಹಿಸಲಾಗುತ್ತದೆ.
ಮಾದರಿಗಳನ್ನು ಎನ್‌ಟಿಇಪಿಯ ನಿರ್ದೇಶಿತ ಮೈಕ್ರೊಸ್ಕೊಪಿ ಕೇಂದ್ರ (ಡಿಎಂಸಿ) ಗಳಲ್ಲಿ ಸಂಸ್ಕರಿಸುವುದನ್ನು ಶಿಫಾರಸು ಮಾಡಲಾಗಿದೆ.
ಕ್ಷಯ ರೋಗದ ಖಚಿತ ರೋಗನಿರ್ಣಯಕ್ಕಾಗಿ ಈ ಮಾದರಿಗಳನ್ನು ನ್ಯೂಕ್ಲಿಯಿಕ್ ಆ್ಯಸಿಡ್ ಆ್ಯಂಪ್ಲಿಫಿಕೇಶನ್ ಟೆಸ್ಟ್ (ಎನ್‌ಎಎಟಿ), ಎಎಫ್ಬಿ ಸ್ಮಿಯರ್ ಮತ್ತು ಎಎಫ್ಬಿ ಕಲ್ಚರ್‌ನಂತಹ ಪರೀಕ್ಷೆಗಳಿಗೆ ಒಳಪಡಿಸಲಾಗುತ್ತದೆ.
ಪರೀಕ್ಷೆಗೆ ಕಫ ನೀಡುವುದು ಹೇಗೆ?
ಬಾಯಿಯನ್ನು ತೆರೆದಿಟ್ಟುಕೊಂಡು 2-3 ಬಾರಿ ಆಳವಾಗಿ ಉಸಿರೆಳೆದುಕೊಳ್ಳಬೇಕು.
ಎದೆಯಿಂದ ಆಳವಾಗಿ ಕೆಮ್ಮಬೇಕು.
ಲೇಬಲ್ ಸಹಿತವಾಗಿರುವ ಮೌತ್ ಕಂಟೇನರ್ ಅಥವಾ ಫಾಲ್ಕನ್ ಟ್ಯೂಬನ್ನು ಅಗಲವಾಗಿ ತೆರೆಯಬೇಕು.
ಅದರೊಳಕ್ಕೆ ಕಫವನ್ನು ಉಗುಳಬೇಕು ಕಂಟೇನರನ್ನು ಭದ್ರವಾಗಿ ಮುಚ್ಚಬೇಕು.
ಕಫವನ್ನು ತೆರೆದ ಸ್ಥಳದಲ್ಲಿ ಅಥವಾ ಯಾರೂ ಇಲ್ಲದ ಕೊಠಡಿಯಲ್ಲಿ ಕಿಟಕಿಗಳನ್ನು ತೆರೆದಿಟ್ಟು ಸಂಗ್ರಹಿಸಬೇಕು.
ಕಫ ಸಂಗ್ರಹದ ವೇಳೆ ಶಂಕಿತ ರೋಗಿಯ ಬಳಿ ಯಾರೂ ಇರಬಾರದು.
ಶ್ವಾಸಕೋಶದ ಕ್ಷಯ ಪತ್ತೆಯಾದ ಬಳಿಕ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳು
ಸಾಧ್ಯವಾದಷ್ಟು ತೆರೆದ ವಾತಾವರಣದಲ್ಲಿ ಅಥವಾ ಸಾಕಷ್ಟು ಗಾಳಿಯಾಡುವ ಕೊಠಡಿಯಲ್ಲಿ ಇರಿ.
ಕೆಮ್ಮುವ ಸಂದರ್ಭದಲ್ಲಿ ಸುರಕ್ಷಾ ಕ್ರಮ ಅನುಸರಿಸಿ (ಕೆಮ್ಮುವಾಗ/ಸೀನುವಾಗ ಮೊಣಕೈ ಉಪಯೋಗಿಸಿ ಮೂಗು, ಬಾಯಿ ಮುಚ್ಚಿಕೊಳ್ಳುವುದು) ಮತ್ತು ಕೈಗಳ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.
ನಿಕಟವರ್ತಿಗಳು ವೈದ್ಯರನ್ನು ಸಂಪರ್ಕಿಸಿ ಕ್ಷಯ ಸೋಂಕು ಪರೀಕ್ಷೆ ಮಾಡಿಸಿಕೊಳ್ಳಲು ಸೂಚಿಸಿ (ಗಮನಿಸಿ: ಕ್ಷಯದ ವಿರುದ್ಧ ಪ್ರೊಫಿಲ್ಯಾಕ್ಟಿಕ್ ಔಷಧಗಳು ಲಭ್ಯವಿವೆ).
5 ವರ್ಷಕ್ಕಿಂತ ಸಣ್ಣ ವಯಸ್ಸಿನ ಮಕ್ಕಳು ಮತ್ತು ರೋಗ ನಿರೋಧಕ ಶಕ್ತಿ ಕುಂದಿರುವ ವ್ಯಕ್ತಿಗಳಿಂದ ದೂರವಿರಿ. ಕಫ ವಿಲೇವಾರಿಯ ಸರಿಯಾದ ವಿಧಾನವನ್ನು ತಿಳಿದುಕೊಂಡು ಅನುಸರಿಸಿ. (ಕಫವನ್ನು ಒಂದು ನಿರ್ದಿಷ್ಟ ಕಪ್‌ನಲ್ಲಿ ಸಂಗ್ರಹಿಸಬೇಕು, ಶೇ. 5 ಫಿನೋಲ್ ಅಥವಾ ಶೇ. 4.8 ಕ್ಲೊರೊಕ್ಸಿಲನೋಲ್‌ನಿಂದ ಸೋಂಕುನಾಶಗೊಳಿಸಬೇಕು ಮತ್ತು ವಿಸರ್ಜಿಸಿ ಫ್ಲಶ್ ಮಾಡಬೇಕು)
ಕ್ಷಯರೋಗ ಚಿಕಿತ್ಸೆಯನ್ನು ಆರಂಭಿಸಿ ಕಫ ಪರೀಕ್ಷೆಯ (ಎಎಫ್ಬಿ ಸ್ಮಿಯರ್) ಫಲಿತಾಂಶವು ನೆಗೆಟಿವ್ ಬರುವವರೆಗೆ ಸಾರ್ವಜನಿಕ ಸಮಾರಂಭಗಳಲ್ಲಿ ಪಾಲ್ಗೊಳ್ಳಬಾರದು. ಜತೆಗೆ ಸಾರ್ವಜನಿಕ ಸ್ಥಳಗಳಿಗೆ ಹೋಗುವುದಾದರೆ ಎನ್95 ಮಾಸ್ಕ್ ಅಥವಾ ಇತರ ಮಾಸ್ಕ್ ಧರಿಸಿ ಮೂಗು, ಬಾಯಿಗಳನ್ನು ಮುಚ್ಚಿಕೊಳ್ಳಬೇಕು.
ಸರಕಾರಿ ಯಂತ್ರಗಳು ನಿಮ್ಮ ಜತೆಗಿವೆ… ಹೆದರದಿರಿ
ಭಾರತದಲ್ಲಿ ಕ್ಷಯ ನಿಯಂತ್ರಣ ಕಾರ್ಯಕ್ರಮವು 1947ರಲ್ಲಿ ಸಾರ್ವಜನಿಕ ಆರೋಗ್ಯ ನಿರ್ದೇಶನಾಲಯದ ಅಡಿಯಲ್ಲಿ ಕ್ಷಯ ವಿಭಾಗವನ್ನು ಆರಂಭಿಸುವ ಮೂಲಕ ಪ್ರಾರಂಭವಾಯಿತು. 2019ರ ವೇಳೆಗೆ ರಾಷ್ಟ್ರೀಯ ಕ್ಷಯ ನಿರ್ಮೂಲನೆ ಕಾರ್ಯಕ್ರಮ (ಎನ್ ಟಿಇಪಿ)ಯನ್ನು ಆರಂಭಿಸಲಾಯಿತು. ಇದರಡಿ ಸಿಬಿಎನ್‌ಎಎಟಿ (ಯೂನಿವರ್ಸಲ್ ಡಿಎಸ್‌ಟಿ ಪಾಲಿಸಿ) ಮತ್ತು ಎದೆಯ ಎಕ್ Õರೇಗಳ ಮೂಲಕ ಕ್ಷಯ ತಪಾಸಣೆಯನ್ನು ಕ್ಷಯ ರೋಗಪತ್ತೆಯ ವಿಧಾನಗಳಾಗಿ ಗುರುತಿಸಲಾಯಿತು. ಈ ಯೋಜನೆಯು ದೈನಿಕ ಔಷಧ ಸೇವನೆ ಮತ್ತು ವಿಕೇಂದ್ರೀಕೃತ ಔಷಧ ಸರಬರಾಜು ಹಾಗೂ ಕಿಮೊಥೆರಪಿಯ ಅಲ್ಪಾವಧಿಯ ಕೋರ್ಸ್‌ಗಳನ್ನು ಒಳಗೊಂಡಿತ್ತು. ಡಾಟ್ಸ್ ಪೂರೈಕೆದಾರರು ಚಿಕಿತ್ಸೆಯ ಮೇಲೆ ನಿಗಾ ಇರಿಸುತ್ತಿದ್ದರು. ರಾಷ್ಟ್ರೀಯ ಕ್ಷಯ ನಿರ್ಮೂಲನ ಯೋಜನೆಯಡಿ ತಪಾಸಣೆ ಮತ್ತು ಔಷಧಗಳನ್ನು ಸಂಪೂರ್ಣ ಉಚಿತವಾಗಿ ನೀಡಲಾಗುತ್ತಿತ್ತು.
ಶ್ವಾಸಕೋಶ ಕ್ಷಯಕ್ಕೆ ಚಿಕಿತ್ಸೆ ಶೀಘ್ರ ರೋಗಪತ್ತೆ
ಕ್ಷಯ ರೋಗದ ಪರಿಣಾಮಕಾರಿ ನಿರ್ವಹಣೆಯಲ್ಲಿ ಶೀಘ್ರ ರೋಗಪತ್ತೆಯು ಬಹಳ ನಿರ್ಣಾಯಕವಾಗಿದೆ. ಜೀನೆಕ್ಸ್‌ಪರ್ಟ್ ಮತ್ತು ಮಾಲೆಕ್ಯುಲಾರ್ ಪರೀಕ್ಷೆಯಂತಹ ರೋಗಪತ್ತೆಯ ಅತ್ಯಾಧುನಿಕ ಸಲಕರಣೆಗಳಿಂದಾಗಿ ಆರೋಗ್ಯ ಸೇವಾ ಪೂರೈಕೆದಾರರು ಕ್ಷಯ ರೋಗವನ್ನು ಕ್ಷಿಪ್ರವಾಗಿ ಪತ್ತೆಹಚ್ಚುವುದು ಸಾಧ್ಯವಾಗಿದೆ. ಇದರಿಂದ ಆದಷ್ಟು ಬೇಗನೆ ಚಿಕಿತ್ಸೆ ನೀಡುವುದಕ್ಕೆ ಸಾಧ್ಯವಾಗುತ್ತಿದೆ. ಕ್ಷಿಪ್ರ ರೋಗಪತ್ತೆಯು ರೋಗ ಹರಡುವುದಕ್ಕೆ ತಡೆ ಮಾತ್ರವಲ್ಲದೆ ಚಿಕಿತ್ಸೆಯು ಯಶಸ್ವಿ ಫಲಿತಾಂಶ ಪಡೆಯುವುದಕ್ಕೂ ಕಾರಣವಾಗುತ್ತಿದೆ.
ಔಷಧ ಚಿಕಿತ್ಸೆ
ಆ್ಯಂಟಿಬಯಾಟಿಕ್ ಚಿಕಿತ್ಸೆಯು ಕ್ಷಯ ನಿರ್ವಹಣೆಯ ತಿರುಳಾಗಿದೆ. ಆದರೆ ಔಷಧ ನಿರೋಧಕ ತಳಿಗಳು ತಲೆಯೆತ್ತುತ್ತಿರುವುದು ಒಂದು ಗಂಭೀರ ಸವಾಲಾಗಿದೆ. ಇದನ್ನು ತಡೆಯುವುದಕ್ಕಾಗಿ ಆರೋಗ್ಯ ಸೇವಾ ಪೂರೈಕೆದಾರರು ಪ್ರತೀ ರೋಗಿಯ ಅಗತ್ಯಕ್ಕನುಸಾರವಾಗಿ ಆ್ಯಂಟಿಬಯಾಟಿಕ್‌ಗಳನ್ನು ಸಂಯೋಜಿಸಿ ನೀಡುವ ಕ್ರಮವನ್ನು ಅನುಸರಿಸುತ್ತಾರೆ. ಡಿರೆಕ್ಟ್ಲೀ ಆಬ್ಸರ್ವ್‌ಡ್ ಟ್ರೀಟ್‌ಮೇಂಟ್, ಶಾರ್ಟ್-ಕೋರ್ಸ್ (ಡಿಒಟಿಎಸ್) ಎಂದು ಕರೆಯಲ್ಪಡುವ ಈ ಚಿಕಿತ್ಸಾ ಕ್ರಮದಿಂದ ಕ್ಷಯ ಚಿಕಿತ್ಸೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಉಂಟಾಗಿವೆ. ಇದರಿಂದ ಚಿಕಿತ್ಸೆಯನ್ನು ಚಾಚೂತಪ್ಪದೆ ಅನುಸರಿಸುವುದು ಮತ್ತು ಔಷಧ ನಿರೋಧಕ ಶಕ್ತಿ ಬೆಳೆಯುವ ಸಾಧ್ಯತೆ ಕನಿಷ್ಠ ಮಟ್ಟಕ್ಕಿಳಿಯುತ್ತದೆ. ಆ್ಯಂಟಿಬಯಾಟಿಕ್ ಸಂಯೋಜಿತ ಚಿಕಿತ್ಸೆಯನ್ನು 6 ತಿಂಗಳುಗಳ ಕಾಲ ಚಾಚೂತಪ್ಪದ ನಿಗಾ ವಹಿಸಿ ಅನುಸರಿಸಬೇಕು.
ಅನುಸರಣೆಗೆ ನೆರವು
ಕ್ಷಯ ರೋಗ ಚಿಕಿತ್ಸೆ ಯಶಸ್ವಿಯಾಗುವುದಕ್ಕೆ ರೋಗಿಯು ಔಷಧ ಕ್ರಮವಿಧಿಗಳನ್ನು ಚಾಚೂತಪ್ಪದೆ ಪಾಲಿಸುವಂತೆ ನೋಡಿಕೊಳ್ಳುವುದು ಅತ್ಯಂತ ಮುಖ್ಯವಾಗಿದೆ. ಕ್ರಮವಿಧಿ ಪಾಲನೆಗೆ ಅಡ್ಡಿಯಾಗಬಲ್ಲ ಸಾಮಾಜಿಕ-ಆರ್ಥಿಕ ಅಡಚಣೆಗಳನ್ನು ಗುರುತಿಸುವ ಮೂಲಕ ಆರೋಗ್ಯ ಸೇವಾ ವ್ಯವಸ್ಥೆಗಳು ಈಗ ಸಮಗ್ರ ನೆರವು ವ್ಯವಸ್ಥೆಯನ್ನು ಒದಗಿಸುತ್ತವೆ. ರೋಗಿ ಶಿಕ್ಷಣ, ಮನೋಸಾಮಾಜಿಕ ಆಪ್ತ ಸಮಾಲೋಚನೆ ಹಾಗೂ ಕ್ರಮವಿಧಿ ಅನುಸರಣೆಯನ್ನು ಖಾತ್ರಿ ಪಡಿಸಿಕೊಳ್ಳಲು ಮೊಬೈಲ್ ಹೆಲ್ತ್ ಆ್ಯಪ್‌ಗ್ಳಂತಹ ಹೊಸ ತಂತ್ರಜ್ಞಾನಗಳನ್ನು ಉಪಯೋಗಿಸಲಾಗುತ್ತದೆ.
ಪೌಷ್ಟಿಕಾಂಶ ನೆರವು
ಕ್ಷಯ ರೋಗ ಬಾಧೆಯ ಜತೆಗೆ ಅಪೌಷ್ಟಿಕತೆಯೂ ಕೆಲವೊಮ್ಮೆ ಜತೆ ಸೇರಿಕೊಂಡು ರೋಗಿಯ ರೋಗ ನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುವ ಮೂಲಕ ಗುಣ ಹೊಂದುವುದನ್ನು ನಿಧಾನಗೊಳಿಸುತ್ತದೆ. ಆದ್ದರಿಂದ ಪೌಷ್ಟಿಕಾಂಶ ಸಪ್ಲಿಮೆಂಟ್‌ಗಳು ಕ್ಷಯ ರೋಗ ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿದೆ.
ಸಮಗ್ರ ಆರೈಕೆ
ಅನೇಕ ಪ್ರಕರಣಗಳಲ್ಲಿ ಕ್ಷಯ ಏಕೈಕ ರೋಗವಾಗಿರದೆ ಎಚ್‌ಐವಿ/ ಏಡ್ಸ್ ಮತ್ತು ಮಧುಮೇಹದಂತಹ ಸಹಕಾಯಿಲೆಗಳೊಂದಿಗೆ ಇರುತ್ತದೆ. ಈ ಅಂತರ್‌ಸಂಬಂಧವನ್ನು ಗುರುತಿಸುವ ಮೂಲಕ ಆರೋಗ್ಯ ಸೇವಾ ಪೂರೈಕೆದಾರರು ಕ್ಷಯ ರೋಗಿಗಳ ಸಮಗ್ರ ಅಗತ್ಯಕ್ಕಾಗಿ ಸಮಗ್ರ ಆರೈಕೆಯ ಕಾರ್ಯವಿಧಾನಗಳನ್ನು ರೂಪಿಸುತ್ತಾರೆ.
ಸಮುದಾಯದ ಒಳಗೊಳ್ಳುವಿಕೆ
ಕ್ಷಯ ರೋಗ ನಿಯಂತ್ರಣಕ್ಕೆ ಸಮುದಾಯ ಮತ್ತು ಸಮಾಜಗಳ ಸಕ್ರಿಯ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ. ಕ್ಷಯ ರೋಗದ ಶೀಘ್ರ ಪತ್ತೆಯ ಪ್ರಾಮುಖ್ಯದ ಬಗ್ಗೆ ತಿಳಿವಳಿಕೆ ಮೂಡಿಸುವುದರಿಂದ ತೊಡಗಿ ಕ್ಷಯ ರೋಗದ ಬಗ್ಗೆ ಇರುವ ತಪ್ಪುಕಲ್ಪನೆಗಳನ್ನು ನಿವಾರಿಸುವ ವರೆಗೆ ಹಲವು ವಿಷಯಗಳಲ್ಲಿ ಸಮುದಾಯ ಪಾಲ್ಗೊಳ್ಳುವಿಕೆಯು ಕ್ಷಯ ರೋಗದ ವಿರುದ್ಧ ಹೋರಾಟದಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತದೆ.
ಚಿಕಿತ್ಸೆ ಆರಂಭಿಸಿದ ಬಳಿಕ ಅನುಸರಣೆ ಹೇಗಿರಬೇಕು?
ಶ್ವಾಸಕೋಶದ ಕ್ಷಯ ನಿರ್ವಹಣೆಯಲ್ಲಿ ಸಮಗ್ರ ಫಾಲೊಅಪ್ ಆರೈಕೆಯು ರೋಗಿಗಳ ಸಂಪೂರ್ಣ ಕಲ್ಯಾಣ ಮತ್ತು ದೀರ್ಘಕಾಲೀನ ಆರೋಗ್ಯದ ದೃಷ್ಟಿಯಿಂದ ಬಹಳ ಮಹತ್ವದ್ದಾಗಿದೆ. ಆರಂಭಿಕ ರೋಗಪತ್ತೆ ಮತ್ತು ಚಿಕಿತ್ಸೆಯ ಆರಂಭದ ಬಳಿಕ ಚಿಕಿತ್ಸೆಯ ಪ್ರಗತಿ, ಸಂಭಾವ್ಯ ಸಂಕೀರ್ಣ ಸಮಸ್ಯೆಗಳ ನಿರ್ವಹಣೆ ಮತ್ತು ಸಹ ಅನಾರೋಗ್ಯಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವುದಕ್ಕೆ ವ್ಯವಸ್ಥಿತವಾದ ಫಾಲೊಅಪ್ ಆರೈಕೆಯು ಅತ್ಯಂತ ಅಗತ್ಯವಾಗಿದೆ. ಶ್ವಾಸಕೋಶ ಕ್ಷಯದ ಪರಿಣಾಮಕಾರಿ ಫಾಲೊಅಪ್ ಆರೈಕೆಯ ಮುಖ್ಯಾಂಶಗಳು ಈ ಕೆಳಕಂಡಂತಿವೆ.
1.ಬೇಸ್‌ಲೈನ್ ಅಸೆಸ್‌ಮೆಂಟ್
ಲಿವರ್ ಫಂಕ್ಷನ್ ಟೆಸ್ಟ್ (ಎಲ್‌ಎಫ್ಟಿ): ಕೆಲವು ನಿರ್ದಿಷ್ಟ ಕ್ಷಯ ಔಷಧಗಳು ಹೆಪಟಾಕ್ಸಿಸಿಟಿ ಅಪಾಯ ಹೊಂದಿರುವುದರಿಂದ ಶ್ವಾಸಕೋಶ ಕ್ಷಯಕ್ಕೆ ಚಿಕಿತ್ಸೆಯನ್ನು ಆರಂಭಿಸುವುದಕ್ಕೆ ಮುನ್ನ ಪಿತ್ತಕೋಶದ ಬೇಸ್‌ಲೈನ್ ಎಲ್‌ಎಫ್ಟಿ ನಡೆಸುವುದನ್ನು ಶಿಫಾರಸು ಮಾಡಲಾಗುತ್ತದೆ.
ನೇತ್ರ ತಪಾಸಣೆ: ಕೆಲವು ಕ್ಷಯ ಔಷಧಗಳು ದೃಷ್ಟಿಗೆ ಸಂಬಂಧಿಸಿದ ಅಡ್ಡ ಪರಿಣಾಮಗಳನ್ನು ಉಂಟು ಮಾಡುವ ಸಾಧ್ಯತೆ ಇರುವುದರಿಂದ ದೃಷ್ಟಿ ಸಂಬಂಧಿ ತೊಂದರೆಗಳನ್ನು ಬೇಗನೆ ಪತ್ತೆ ಹಚ್ಚಿ ಚಿಕಿತ್ಸೆ ಒದಗಿಸುವುದಕ್ಕಾಗಿ ನೇತ್ರ ತಪಾಸಣೆಯನ್ನು ಶಿಫಾರಸು ಮಾಡಲಾಗುತ್ತದೆ.
2.ನಿಯಮಿತವಾಗಿ ನಿಗಾ
ಮಾಸಿಕ ಲಕ್ಷಣ ವಿಶ್ಲೇಷಣೆ: ಚಿಕಿತ್ಸೆಗೆ ಪ್ರತಿಸ್ಪಂದನೆ ಹಾಗೂ ಚಿಕಿತ್ಸೆಯೇನಾದರೂ ವಿಫಲವಾಗುತ್ತಿದೆಯೇ ಅಥವಾ ಅಡ್ಡ ಪರಿಣಾಮಗಳು ಉಂಟಾಗುತ್ತಿವೆಯೇ ಎಂಬುದನ್ನು ತಿಳಿದುಕೊಳ್ಳುವುದಕ್ಕಾಗಿ ರೋಗಿಗಳು ಮಾಸಿಕ ವಿಶ್ಲೇಷಣಾತ್ಮಕ ತಪಾಸಣೆಗೆ ಒಳಗಾಗಬೇಕು.
ತೂಕ ನಿಗಾ: ಪೌಷ್ಟಿಕಾಂಶ ಸ್ಥಿತಿಗತಿ ತಿಳಿದುಕೊಳ್ಳಲು ಮತ್ತು ಅನುದ್ದೇಶಿತ ತೂಕ ಗಳಿಕೆ ಅಥವಾ ನಷ್ಟವನ್ನು ಪತ್ತೆ ಹಚ್ಚುವುದಕ್ಕಾಗಿ ನಿಯಮಿತವಾದ ತೂಕ ತಪಾಸಣೆ ಅಗತ್ಯವಾಗಿ ನಡೆಸಬೇಕು. ಇದು ಕೂಡ ಚಿಕಿತ್ಸೆಯ ಪ್ರತಿಸ್ಪಂದನೆ, ವೈಫಲ್ಯ ಅಥವಾ ಚಯಾಪಚಯ ಬದಲಾವಣೆಗಳ ಬಗ್ಗೆ ಸೂಚನೆ ನೀಡಬಲ್ಲುದಾಗಿದೆ.
3 ಸತತ ಫಾಲೊಅಪ್‌ಗಳು
ಭಾರತದಲ್ಲಿ ಕ್ಷಯ ರೋಗ ಹರಡುವಿಕೆಯ ತೀವ್ರತೆ ಮತ್ತು ಅದರ ನಿರ್ವಹಣೆಯಲ್ಲಿ ಇರುವ ಅಪೂರ್ವ ಸವಾಲುಗಳನ್ನು ಪರಿಗಣಿಸಿ ಪ್ರತೀ 15 ದಿನಗಳಿಗೊಮ್ಮೆ ಭೇಟಿಯಂತಹ ಹೆಚ್ಚು ತೀವ್ರವಾದ ಫಾಲೊಅಪ್ ವೇಳಾಪಟ್ಟಿನ್ನು ಅನುಸರಿಸಲಾಗುತ್ತದೆ.
4 ರೋಗಪತ್ತೆ ಪರೀಕ್ಷೆಗಳು
ಎಎಫ್ಬಿ ಸ್ಮಿಯರ್ ಟೆಸ್ಟಿಂಗ್: ಆ್ಯಸಿಡ್-ಫಾಸ್ಟ್ ಬೆಸಿಲಿ (ಎಎಫ್ಬಿ) ಸ್ಮಿಯರ್ ಪರೀಕ್ಷೆಯನ್ನು ತೀವ್ರ ಹಂತ (ಇಂಟೆನ್ಸಿವ್ ಫೇಸ್-ಐಪಿ) ಮತ್ತು ಮುಂದುವರಿಕೆಯ ಹಂತ (ಕಂಟಿನ್ಯೂಯೇಶನ್ ಫೇಸ್-ಸಿಪಿ) ಎರಡರ ಅಂತ್ಯದ ವೇಳೆಯೂ ಚಿಕಿತ್ಸೆಗೆ ಪ್ರತಿಸ್ಪಂದನೆ ಮತ್ತು ಸೋಂಕುಶೀಲತೆಯನ್ನು ವಿಶ್ಲೇಷಿಸಲು ನಡೆಸಬೇಕು.
5 ಸಹ ಅನಾರೋಗ್ಯ ನಿರ್ವಹಣೆ
ಮಧುಮೇಹ, ಡಿಸ್‌ಲಿಪಿಡೇಮಿಯ ಮತ್ತು ಅಧಿಕ ರಕ್ತದೊತ್ತಡಗಳಂತಹ ಸಹ ಅನಾರೋಗ್ಯಗಳನ್ನು ನಿರ್ವಹಿಸುವುದು ಕ್ಷಯ ರೋಗ ಆರೈಕೆ-ಚಿಕಿತ್ಸೆಯ ಅವಿಭಾಜ್ಯ ಅಂಗವಾಗಿದೆ. ಕ್ಷಯರೋಗ ಚಿಕಿತ್ಸೆಯ ಜತೆಗೆ ಈ ಅನಾರೋಗ್ಯಗಳ ಸಂಯೋಜಿತ ಚಿಕಿತ್ಸೆಯಿಂದ ಸಂಕೀರ್ಣ ಸಮಸ್ಯೆಗಳು ಉಂಟಾಗುವುದನ್ನು ತಡೆಗಟ್ಟಿ ಒಟ್ಟು ಆರೋಗ್ಯ ಚೆನ್ನಾಗಿರುವಂತೆ ನೋಡಿಕೊಳ್ಳಬಹುದಾಗಿದೆ.
ಸಾರಾಂಶ
ಅಂತಿಮವಾಗಿ ಹೇಳುವುದಾದರೆ ಶ್ವಾಸಕೋಶದ ಕ್ಷಯ ರೋಗವು ಈಗಲೂ ಜಾಗತಿಕ ಮಟ್ಟದಲ್ಲಿ ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಒಂದು ಸವಾಲಾಗಿಯೇ ಇದೆ. ಇದರಿಂದಾಗಿ ಈ ಅನಾರೋಗ್ಯದ ಕ್ಷಿಪ್ರ ಪತ್ತೆ, ಪರಿಣಾಮಕಾರಿ ನಿರ್ವಹಣೆ ಮತ್ತು ತಡೆ ಅತ್ಯಗತ್ಯವಾಗಿದೆ. ಎದೆಯ ಎಕ್ಸ್-ರೇ ಮತ್ತು ಕಫದ ಮಾದರಿಯ ಪರೀಕ್ಷೆಯಂತಹ ರೋಗ ನಿರ್ಣಯಾತ್ಮಕ ಪರೀಕ್ಷೆಗಳಿಂದ ಕ್ಲಪ್ತ ಸಮಯದಲ್ಲಿ ಕ್ಷಯ ರೋಗ ಪತ್ತೆಯು ಚಿಕಿತ್ಸೆಯನ್ನು ಆದಷ್ಟು ಬೇಗನೆ ಆರಂಭಿಸಲು ನಿರ್ಣಾಯಕವಾಗಿದೆ.
ಆ್ಯಂಟಿಬಯೋಟಿಕ್‌ಗಳ ಸಂಯೋಜನೆ ಸಹಿತವಾದ ಸಮಗ್ರ ಚಿಕಿತ್ಸಾ ಕ್ರಮವು ಶ್ವಾಸಕೋಶದ ಕ್ಷಯವನ್ನು ಗುಣಪಡಿಸಲು ಮತ್ತು ಔಷಧ ನಿರೋಧ ಶಕ್ತಿ ಬೆಳವಣಿಗೆಯಾಗದಂತೆ ನಿಗ್ರಹಿಸಲು ಅಗತ್ಯ. ಇಷ್ಟಲ್ಲದೆ, ಲಸಿಕೆ ಹಾಕಿಸುವುದು, ಸೋಂಕು ತಡೆ ಕ್ರಮಗಳು ಮತ್ತು ಆರೋಗ್ಯ ಶಿಕ್ಷಣದಂತಹ ಸಾರ್ವಜನಿಕ ಆರೋಗ್ಯ ಉಪಕ್ರಮಗಳು ಕ್ಷಯ ರೋಗದ ಹೊರೆಯನ್ನು ಕಡಿಮೆ ಮಾಡುವಲ್ಲಿ ಮಹತ್ವದ್ದಾಗಿವೆ.
ಆರೋಗ್ಯ ಸೇವಾ ಪೂರೈಕೆದಾರರು, ನೀತಿ ನಿಯಮ ನಿರೂಪಕರು ಮತ್ತು ಸಮುದಾಯ-ಸಮಾಜಗಳ ಸಹಭಾಗಿ ಪ್ರಯತ್ನಗಳು ಈ ಸೋಂಕುರೋಗದ ವಿರುದ್ಧ ಹೋರಾಟದಲ್ಲಿ ಅತ್ಯಾವಶ್ಯಕವಾಗಿದ್ದು, ಜಗತ್ತನ್ನು ಕ್ಷಯ ರೋಗ ಮುಕ್ತಗೊಳಿಸುವಲ್ಲಿ ನೆರವಾಗಬಲ್ಲವಾಗಿವೆ.
ಡಾ| ಆದಿತ್ಯ ಎ.
ಸೀನಿಯರ್ ರೆಸಿಡೆಂಟ್, ರೆಸ್ಪಿರೇಟರಿ ಮೆಡಿಸಿನ್ ವಿಭಾಗ
ಕೆಎಂಸಿ, ಮಂಗಳೂರು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ರೆಸ್ಪಿರೇಟರಿ ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.