Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?


Team Udayavani, Sep 22, 2024, 4:07 PM IST

Operation ಥಿಯೇಟರ್‌ ಒಳಗೆ ಏನು ನಡೆಯುತ್ತದೆ?

ಎತ್ತರದ ಪರ್ವತದ ತುತ್ತತುದಿಯಲ್ಲಿ ನಾಯಕ-ಖಳನಾಯಕನ ನಡುವಣ ಮೈನವಿರೇಳಿಸುವ ಹೋರಾಟ ಖಳನಾಯಕನ ಅಂತ್ಯದೊಂದಿಗೆ ಕೊನೆಗೊಳ್ಳುತ್ತದೆ.

ಆದರೆ ಈ ಕಾದಾಟದಲ್ಲಿ ನಾಯಕನಿಗೂ ಗಂಭೀರ ಗಾಯಗಳಾಗಿರುತ್ತವೆ ಮತ್ತು ಅವನನ್ನು ಅರೆಪ್ರಜ್ಞಾವಸ್ಥೆಯಲ್ಲಿ ತರಾತುರಿಯಿಂದ ಆಸ್ಪತ್ರೆಗೆ ಕರೆದೊಯ್ಯಲಾಗುತ್ತದೆ. ಅಲ್ಲಿ ಅವನನ್ನು ನೇರವಾಗಿ ಆಪರೇಶನ್‌ ಥಿಯೇಟರ್‌ಗೆ ವರ್ಗಾಯಿಸಲಾಗುತ್ತದೆ. ನಾಯಕನಿರುವ ಸ್ಟ್ರೆಚರ್‌ನ ಹಿಂದೆ ಬಿಳಿ ಕೋಟಿನ ವೈದ್ಯರು ಒಳಕ್ಕೆ ಧಾವಿಸಿ ಅಪಾರದರ್ಶಕ ಗಾಜಿನ ಬಾಗಿಲು ಮುಚ್ಚಿಕೊಳ್ಳುತ್ತದೆ, ಬಾಗಿಲಿನ ಮೇಲೆ ಕೆಂಪು ದೀಪ ಹೊತ್ತಿಕೊಳ್ಳುತ್ತದೆ. ನಾಯಕನ ಗೆಳೆಯರು, ಕುಟುಂಬದವರು ಕಾರಿಡಾರ್‌ನಲ್ಲಿ ಚಿಂತಾಕ್ರಾಂತರಾಗಿ ಶಪಥ ಹಾಕುತ್ತಿರುತ್ತಾರೆ. ನಾಯಕಿಯು ದೇವಾಲಯದಲ್ಲಿ ಕಣ್ಣೀರು ಸುರಿಸುತ್ತ ಕರುಣಾಜನಕ ಹಾಡೊಂದನ್ನು ಹಾಡುತ್ತಿದ್ದಾಳೆ. ಅಂತಿಮವಾಗಿ ನಿರೀಕ್ಷೆಯಂತೆ ನಾಯಕ ಚೇತರಿಸಿಕೊಳ್ಳುತ್ತಾನೆ ಮತ್ತು ನಾಯಕ-ನಾಯಕಿ ಮತ್ತು ಕುಟುಂಬದವರೆಲ್ಲ ಜತೆಯಾಗಿರುವ ದೃಶ್ಯದೊಂದಿಗೆ ಎಲ್ಲವೂ ಸುಖಾಂತ್ಯವಾಗುತ್ತದೆ.

ಅಪ್ಪಟ ಭಾರತೀಯ ಸಿನೆಮಾವೊಂದರ ಕಥೆಯನ್ನು ಈ ಆರೋಗ್ಯವಾಣಿ ಲೇಖನದಲ್ಲಿ ಯಾಕಿದೆ ಎಂದು ನೀವು ಅಚ್ಚರಿಪಡುತ್ತಿರಬಹುದು! ಆದರೆ ಯಾವುದೇ ಒಂದು ಆಪರೇಶನ್‌ ಬಗ್ಗೆ ಯಾರಾದರೂ ಮಾತನಾಡಿದರೆ ನಿಮ್ಮ ಮನಸ್ಸಿನಲ್ಲಿ ಇಂತಹದೊಂದು ಚಿತ್ರಣ ಮೂಡಬಹುದು ಅಥವಾ ಚಿಕ್ಕಂದಿನಲ್ಲಿ ನೀವು ಕಲಿತಿರಬಹುದಾದ, ‘ಆಪರೇಶನ್‌, ಆಪರೇಶನ್‌; ಕಾಲ್‌ದ ಡಾಕ್ಟರ್‌, ಕಾಲ್‌ ದ ಡಾಕ್ಟರ್‌’ ಎಂಬ ನರ್ಸರಿ ರೈಮ್‌ ನೆನಪಿಗೆ ಬರಬಹುದು. ನಿಮ್ಮಲ್ಲಿಯೂ ಅನೇಕರು ಒಂದಲ್ಲ ಒಂದು ವಿಧವಾದ ಆಪರೇಶನ್‌ಗೆ ಒಳಗಾಗಿರಬಹುದು. ಆದರೆ ಅರಿವಳಿಕೆಯ ನಿದ್ದೆಯಲ್ಲಿ ಇರುವುದರಿಂದ ಆಪರೇಶನ್‌ ಥಿಯೇಟರ್‌ ಒಳಗೆ ಏನು ನಡೆಯಿತು ಎಂಬುದು ರೋಗಿಗೆ ತಿಳಿಯುವುದೇ ಇಲ್ಲ. ಆದ್ದರಿಂದ ಆಪರೇಶನ್‌ ಥಿಯೇಟರ್‌ ಅಥವಾ ಶಸ್ತ್ರಚಿಕಿತ್ಸೆಯ ಕೊಠಡಿಯ ಒಳಗೆ ನಿಜವಾಗಿಯೂ ಏನೆಲ್ಲ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದನ್ನು ತಿಳಿಯುವುದು ಕುತೂಹಲಕಾರಿಯೇ ಆಗಿದೆ.

ಮೊತ್ತಮೊದಲಾಗಿ ಹೇಳುವುದಾದರೆ, ಸಿನೆಮಾದಲ್ಲಿ ತೋರಿಸುವ ಚಿತ್ರಣವು ಕೇವಲ ಕಲ್ಪನೆ ಮತ್ತು ಸತ್ಯಕ್ಕೆ ದೂರವಾದುದು. ಯಾವುದೇ ಗಾಯಾಳುವನ್ನು ಎಂದಿಗೂ ಆಂಬ್ಯುಲೆನ್ಸ್‌ನಿಂದ ನೇರವಾಗಿ ಆಪರೇಶನ್‌ ಥಿಯೇಟರ್‌ ಒಳಕ್ಕೆ ಕರೆದೊಯ್ಯುವುದೇ ಇಲ್ಲ. ಹಾಗೆಯೇ ಯಾವುದೇ ಆಪರೇಶನ್‌ ನಡೆಸುವ ಸಂದರ್ಭದಲ್ಲಿ ಅತ್ಯಂತ ಗರಿಷ್ಠ ಮಟ್ಟದ ಸೋಂಕುನಾಶನ ಕ್ರಮಗಳನ್ನು ಅನುಸರಿಸಬೇಕಾಗಿರುತ್ತದೆ. ಹೀಗಾಗಿಯೇ ಸರ್ಜನ್‌ ಹಣೆಯಲ್ಲಿ ಬೆವರು ಹನಿಗಳು ಮೂಡಿದ್ದರೆ ಅದನ್ನು ಅವರೇ ಒರೆಸಿಕೊಳ್ಳುವುದಿಲ್ಲ; ಯಾಕೆಂದರೆ ಅವರ ಕೈಗಳು ಸೋಂಕುರಹಿತವಾಗಿರಬೇಕು. ಹಾಗಾಗಿ ಈ ಕೆಲಸವನ್ನು ಅವರ ಸಹಾಯಕರು ಕೈಗವಸು ಧರಿಸಿದ ಕೈಯಿಂದ ಮಾಡಬೇಕು!

ಈಗ ಗಾಯಾಳುವೊಬ್ಬರು ತುರ್ತು ಶಸ್ತ್ರಚಿಕಿತ್ಸೆಗೆ ಒಳಗಾಗುವ ಅಥವಾ ಅಪೆಂಡಿಸೆಕ್ಟೊಮಿ, ಟಾನ್ಸಿಲೆಕ್ಟೊಮಿ, ಹರ್ನಿಯಾ ಶಸ್ತ್ರಚಿಕಿತ್ಸೆ, ಕ್ಯಾಟರ್ಯಾಕ್ಟ್ ಶಸ್ತ್ರಚಿಕಿತ್ಸೆ, ಮೂಳೆಮುರಿತವಾದ ಕೈ ಅಥವಾ ಕಾಲಿಗೆ ರಾಡ್‌ ಹಾಕಿಸಿಕೊಳ್ಳುವುದು ಇತ್ಯಾದಿ ಆಯ್ಕೆಯ ಶಸ್ತ್ರಚಿಕಿತ್ಸೆಗೆ ರೋಗಿ ಒಳಗಾಗುವ ಸನ್ನಿವೇಶವನ್ನು ವಿಶ್ಲೇಷಿಸೋಣ.

ಗಾಯಾಳುವಿಗೆ ಶಸ್ತ್ರಚಿಕಿತ್ಸೆಯ ಪ್ರಕ್ರಿಯೆ

ರಸ್ತೆ ಅಪಘಾತವೊಂದರ ಉದಾಹರಣೆಯನ್ನು ತೆಗೆದುಕೊಳ್ಳೋಣ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿಯನ್ನು ಮೊತ್ತಮೊದಲಿಗೆ ಟ್ರೊಮಾ ಸೆಂಟರ್‌ ಅಥವಾ ಕ್ಯಾಶುಯಲ್ಟಿ ವಿಭಾಗದಲ್ಲಿ ಸ್ಥಿರ ಸ್ಥಿತಿಗೆ ತರಲಾಗುತ್ತದೆ. ಶ್ವಾಸಾಂಗದ ಆರೈಕೆ, ಉಸಿರಾಟ ನೆರವು, ರಕ್ತ ಮರುಪೂರಣ, ರಕ್ತಸ್ರಾವವಾಗುತ್ತಿರುವಲ್ಲಿಗೆ ಪ್ರಶರ್‌ ಡ್ರೆಸಿಂಗ್‌ನಂತಹ ಪ್ರಾಣ ಉಳಿಸುವ ಕ್ರಮಗಳನ್ನು ಮೊತ್ತಮೊದಲಿಗೆ ತೆಗೆದುಕೊಳ್ಳಲಾಗುತ್ತದೆ. ಇದಾದ ಬಳಿಕ ಉಂಟಾಗಿರುವ ಗಾಯದ ಸ್ವರೂಪ, ಸ್ವಭಾವವನ್ನು ಆಧರಿಸಿ ತುರ್ತು ಶಸ್ತ್ರಚಿಕಿತ್ಸೆಗೆ ತಯಾರಿಗಳನ್ನು ಮಾಡಿಕೊಳ್ಳಲಾಗುತ್ತದೆ. ಶಸ್ತ್ರಚಿಕಿತ್ಸೆ ನಡೆಸುವುದಕ್ಕೆ ಮುನ್ನ ರೋಗಿಯ ಸಾಮಾನ್ಯ ದೇಹಾರೋಗ್ಯವು ಸ್ಥಿರಗೊಂಡಿರುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ ಶಸ್ತ್ರಕ್ರಿಯೆಗೆ ಮುನ್ನ ಕನಿಷ್ಠ 4-6 ತಾಸುಗಳಿಂದ ರೋಗಿ ಖಾಲಿ ಹೊಟ್ಟೆಯಲ್ಲಿರುವುದು ಕೂಡ ಕಡ್ಡಾಯ. ಇಲ್ಲವಾದರೆ ಆ್ಯಸ್ಪಿರೇಶನ್‌ ನ್ಯುಮೋನಿಯಾ, ಹೃದಯಾಘಾತದಂತಹ ಇಂಟ್ರಾ ಆಪರೇಟಿವ್‌ ಅನೆಸ್ಥೆಟಿಕ್‌ ತೊಂದರೆಗಳು ಎದುರಾಗುವ ಸಾಧ್ಯತೆಗಳಿರುತ್ತವೆ. ಶಸ್ತ್ರಕ್ರಿಯೆಯನ್ನು ಆರಂಭಿಸುವುದಕ್ಕೆ ಮುನ್ನ ಶಸ್ತ್ರಕ್ರಿಯೆಯನ್ನು ನಡೆಸುವ ಸ್ಪೆಶಲಿಸ್ಟ್‌ ಮತ್ತು ಸಂಬಂಧಪಟ್ಟ ಅರಿವಳಿಕೆ ಶಾಸ್ತ್ರಜ್ಞರು ರೋಗಿಯ ಆರೋಗ್ಯ ಸ್ಥಿತಿಗತಿಗಳನ್ನು ಆಮೂಲಾಗ್ರವಾಗಿ ವಿಶ್ಲೇಷಿಸುತ್ತಾರೆ.

ಶಸ್ತ್ರಚಿಕಿತ್ಸೆಯನ್ನು ನಡೆಸುವುದಕ್ಕೆ ಮುನ್ನ ಗಾಯದ ವಿವರ, ನಡೆಸಲಾಗುವ ಶಸ್ತ್ರಚಿಕಿತ್ಸೆಯ ವಿವರಗಳನ್ನು ಸರ್ಜನ್‌ರು ರೋಗಿಗೆ ವಿವರಿಸುತ್ತಾರೆ, ಬಳಿಕ ಶಸ್ತ್ರಚಿಕಿತ್ಸೆಗೆ ರೋಗಿ ಅಥವಾ ಸಂಬಂಧಿಕರಿಂದ ಲಿಖೀತ ಒಪ್ಪಿಗೆಯನ್ನು ಪಡೆಯಲಾಗುತ್ತದೆ. ಆ ಬಳಿಕವಷ್ಟೇ ರೋಗಿಯನ್ನು ಆಪರೇಶನ್‌ ಥಿಯೇಟರ್‌ ಒಳಕ್ಕೆ ಕರೆದೊಯ್ಯಲಾಗುತ್ತದೆ. ರೋಗಿಯ ತಲೆಯನ್ನು ಮುಚ್ಚುವುದಕ್ಕಾಗಿ ಥಿಯೇಟರ್‌ ಕ್ಯಾಪ್‌ ಉಪಯೋಗಿಸಲಾಗುತ್ತದೆ. ರೋಗಿಯ ತಲೆಯ ಭಾಗದಲ್ಲಿ ಅರಿವಳಿಕೆ ಶಾಸ್ತ್ರಜ್ಞರಿದ್ದು, ರೋಗಿಯ ಸಂಪೂರ್ಣ ಹೊಣೆಯನ್ನು ಹೊತ್ತಿರುತ್ತಾರೆ. ಅರಿವಳಿಕೆಯ ಇನ್ನುಳಿದ ಭಾಗದ ನೋವು ರೋಗಿಯ ಅರಿವಿಗೆ ಬಾರದಂತೆ ನೋಡಿಕೊಳ್ಳುವುದಕ್ಕಾಗಿ ಮೊದಲಿಗೆ ಇಂಟ್ರಾವೇನಸ್‌ ಲೈನ್‌ (ಐ.ವಿ. ಅಥವಾ ಸಾಮಾನ್ಯ ಭಾಷೆಯಲ್ಲಿ ಡ್ರಿಪ್ಸ್‌) ಮೂಲಕ ನಿದ್ರಾಜನಕ (ಸೆಡೇಟಿವ್‌) ಔಷಧವನ್ನು ನೀಡಲಾಗುತ್ತದೆ. ಶಸ್ತ್ರಕ್ರಿಯೆಯ ಅವಧಿಯನ್ನು ಅವಲಂಬಿಸಿ ಉಸಿರಾಟಕ್ಕೆ ನೆರವಾಗಿ ಅರಿವಳಿಕೆಶಾಸ್ತ್ರಜ್ಞರು ರೋಗಿಯ ಮುಖಕ್ಕೆ ಮಾಸ್ಕ್ ಒಂದನ್ನು ತೊಡಿಸುವ ಅಥವಾ ಎಂಡೊಟ್ರೇಕಿಯಲ್‌ ಕೊಳವೆಯನ್ನು ಮೂಗಿಗೆ ತೂರಿಸುವ ಕ್ರಮವನ್ನು ಅನುಸರಿಸಬಹುದು. ಸಂಪೂರ್ಣ ಅರಿವಳಿಕೆಗೆ ಪರ್ಯಾಯವಾಗಿ ಸ್ಥಳೀಯ ಅರಿವಳಿಕೆಯನ್ನು ಆಯ್ದುಕೊಂಡರೆ ಶಸ್ತ್ರಚಿಕಿತ್ಸೆ ನಡೆಯುವಾಗ ರೋಗಿ ಎಚ್ಚರದಲ್ಲಿರುತ್ತಾರೆ; ಆದರೆ ಶಸ್ತ್ರಚಿಕಿತ್ಸೆ ನಡೆಸಲಾಗುವ ದೇಹಭಾಗವು ಮಾತ್ರ ಸಂವೇದನೆಯನ್ನು ಕಳೆದುಕೊಂಡಿರುತ್ತದೆ. ಇಂತಹ ಸಂದರ್ಭದಲ್ಲಿ ಸ್ಪೈನಲ್‌ ಅಥವಾ ಎಪಿಡ್ನೂರಲ್‌ ಅನಸ್ಥೇಶಿಯಾವನ್ನು ಅವಲಂಬಿಸಲಾಗುತ್ತದೆ.

ಮುಂದೆ ಶಸ್ತ್ರಕ್ರಿಯೆಯನ್ನು ನಡೆಸಲಾಗುವ ದೇಹಭಾಗಕ್ಕೆ ಅಯೋಡಿನ್‌ ಅಥವಾ ಮದ್ಯಸಾರದಂತಹ ಸೋಂಕುನಾಶಕ ದ್ರಾವಣವನ್ನು ಸವರಲಾಗುತ್ತದೆ. ಎಕ್ಸ್‌ರೇ ಲಾಬಿಯಲ್ಲಿ ಸೂಕ್ತವಾದ ಎಕ್ಸ್‌ರೇಗಳನ್ನು ಪ್ರದರ್ಶಿಸಲಾಗುತ್ತದೆ. ಸರ್ಜಿಕಲ್‌ ವೈದ್ಯರ ತಂಡದ ಜತೆಗೆ ಆಪರೇಶನ್‌ ಥಿಯೇಟರ್‌ ನರ್ಸ್‌ ಕೂಡ ಸೇರಿಕೊಳ್ಳುತ್ತಾರೆ, ಸೋಂಕುರಹಿತವಾದ ನಿಲುವಂಗಿ ಮತ್ತು ಕೈಗವಸುಗಳನ್ನು ಧರಿಸುತ್ತಾರೆ. ಸೋಂಕು ಉಂಟಾಗುವ ಅಪಾಯವನ್ನು ಅತ್ಯಂತ ಕಡಿಮೆಗೊಳಿಸುವುದಕ್ಕಾಗಿ ಆಪರೇಶನ್‌ ಥಿಯೇಟರ್‌ ಪ್ರವೇಶಿಸುವ ಪ್ರತಿಯೊಬ್ಬರೂ ತಲೆಗೆ ಕ್ಯಾಪ್‌ ಮತ್ತು ಮುಖಕ್ಕೆ ಮಾಸ್ಕ್ ತೊಡುವುದು ಕಡ್ಡಾಯ. ಇದಾದ ಬಳಿಕ ಸರ್ಜನ್‌ ಶಸ್ತ್ರಕ್ರಿಯೆಗೆ ಒಳಗಾಗುವ ದೇಹಭಾಗದ ಸುತ್ತ ಸೋಂಕುನಾಶನಗೊಳಿಸಿದ ಬಟ್ಟೆಗಳನ್ನು ಹೊದಿಸುತ್ತಾರೆ. ಹಿಂದೆಯೇ ಹಾಕಿಕೊಳ್ಳಲಾದ ಯೋಜನೆಯಂತೆ ಸರ್ಜನ್‌ ದೇಹಭಾಗದಲ್ಲಿ ಶಸ್ತ್ರಕ್ರಿಯೆಯ ಗಾಯವನ್ನು ಮಾಡುತ್ತಾರೆ. ಅಂಗಾಂಶಗಳಲ್ಲಿ ರಕ್ತಸ್ರಾವಗಳನ್ನು ತಡೆಯಲು ಕಾಟರಿ ಮಶಿನ್‌ ಹಾಗೂ ಶಸ್ತ್ರಕ್ರಿಯೆ ನಡೆಯುತ್ತಿರುವ ಭಾಗವನ್ನು ಶುಷ್ಕವಾಗಿ ಇರಿಸಿಕೊಳ್ಳಲು ಸಕ್ಷನ್‌ ಅಪಾರೆಟಸ್‌ಗಳನ್ನು ಪದೇಪದೆ ಉಪಯೋಗಿಸಲಾಗುತ್ತದೆ. ಸಹಾಯಕ ಸರ್ಜನ್‌ಗಳು ಗಾಯದ ಅಂಚುಗಳನ್ನು ಹಿಂದೆ ಜರಗಿಸಿ ಹಿಡಿದುಕೊಳ್ಳಲು ಮತ್ತು ಆ ಭಾಗವನ್ನು ಶುಷ್ಕವಾಗಿ ಇರಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಿರುತ್ತಾರೆ. ಶಸ್ತ್ರಚಿಕಿತ್ಸೆಯ ಕೊನೆಯಲ್ಲಿ ನಂಜುನಿವಾರಕ ದ್ರಾವಣಗಳಿಂದ ಗಾಯವನ್ನು ಸಂಪೂರ್ಣವಾಗಿ ಸ್ವತ್ಛಗೊಳಿಸಿ ಗಾಯಕ್ಕೆ ಡ್ರಸ್ಸಿಂಗ್‌ ಮಾಡಲಾಗುತ್ತದೆ. ಈ ವೇಳೆ ಅರಿವಳಿಕೆ ತಜ್ಞರು ರೋಗಿಯ ದೇಹಸ್ಥಿತಿ ಮೇಲೆ ನಿಗಾ ಇರಿಸಿರುತ್ತಾರೆ. ರೋಗಿಗೆ ನೀಡಲಾದ ಅರಿವಳಿಕೆ ಮತ್ತು ನಿದ್ರಾಜನಕ ಔಷಧದ ತೀವ್ರತೆಯನ್ನು ಕಡಿಮೆ ಮಾಡಲು ಪ್ರತಿಔಷಧವನ್ನು ನೀಡಿ ಆತ ಎಚ್ಚರಗೊಳ್ಳುವಂತೆ ಮಾಡಲಾಗುತ್ತದೆ. ರೋಗಿಯು ಸುಲಲಿತವಾಗಿ ಉಸಿರಾಟ ನಡೆಸಲಾರಂಭಿಸಿದ ಬಳಿಕ ಆತನನ್ನು ಆಪರೇಶನ್‌ ಬಳಿಕದ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ. ಅನಂತರದ ಕೆಲವು ತಾಸು ಅಥವಾ ದಿನಗಳವರೆಗೆ ಆತನ ದೇಹಸ್ಥಿತಿಯ ಮೇಲೆ ನಿಗಾ ಇರಿಸಿ ಸಹಜ ಸ್ಥಿತಿಗೆ ಮರಳಿರುವುದು ದೃಢಪಟ್ಟ ಬಳಿಕ ಆತನನ್ನು ಸಾಮಾನ್ಯ ವಾರ್ಡ್‌ಗೆ ಸ್ಥಳಾಂತರಿಸಲಾಗುತ್ತದೆ.

ಆಯ್ಕೆಯ ಶಸ್ತ್ರಚಿಕಿತ್ಸೆ
ಹಲವು ಮಂದಿ ತಮ್ಮ ಜೀವಿತಾವಧಿಯಲ್ಲಿ ಕೆಲವೊಂದು ಶಸ್ತ್ರಚಿಕಿತ್ಸೆಗೆ ಒಳಗಾಗಿರುತ್ತಾರೆ. ಈ ಪೈಕಿ ಕೆಲವು ಸಾಮಾನ್ಯ ಶಸ್ತ್ರಚಿಕಿತ್ಸೆಗಳಾಗಿದ್ದರೆ ಮತ್ತೆ ಕೆಲವು ಹೃದಯ ಶಸ್ತ್ರಚಿಕಿತ್ಸೆಯಂತಹ ಕಠಿನ ಶಸ್ತ್ರಚಿಕಿತ್ಸೆಯಾಗಿರುತ್ತದೆ. ತುರ್ತು ಶಸ್ತ್ರಚಿಕಿತ್ಸೆಯ ಮಾದರಿಯಲ್ಲಿಯೇ ಈ ಶಸ್ತ್ರಚಿಕಿತ್ಸೆಗಳನ್ನು ಯೋಜಿತ ರೀತಿಯಲ್ಲಿಯೇ ನಡೆಸಲಾಗುತ್ತದೆ. ಯಾವುದೇ ತೆರನಾದ ಶಸ್ತ್ರಚಿಕಿತ್ಸೆ ನಡೆಸುವಾಗಲೂ ಸಾಕಷ್ಟು ಪೂರ್ವ ತಯಾರಿ ನಡೆಸುವುದು ಅತ್ಯಗತ್ಯವಾಗಿದೆ. ಈ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಯನ್ನು 1-2 ದಿನಗಳಿಗೂ ಮುನ್ನವೇ ಆಸ್ಪತ್ರೆಗೆ ದಾಖಲಿಸಿ, ಅಗತ್ಯ ಆರೋಗ್ಯ ತಪಾಸಣೆ, ಪರೀಕ್ಷೆಗಳನ್ನು ನಡೆಸಿ, ರೋಗಿಯ ದೇಹಸ್ಥಿತಿಯನ್ನು ಸಂಪೂರ್ಣವಾಗಿ ಪರಿಶೀಲಿಸಿದ ಬಳಿಕವೇ ಶಸ್ತ್ರಚಿಕಿತ್ಸೆ ನಡೆಸಲಾಗುತ್ತದೆ.

ಗಾಯಾಳುಗಳಿಗೆ ನಡೆಸಲಾಗುವ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ಅನುಸರಿಸಲಾಗುವ ವಿಧಾನವನ್ನೇ ಈ ಶಸ್ತ್ರಚಿಕಿತ್ಸೆಗಳ ಸಂದರ್ಭದಲ್ಲೂ ಅನುಸರಿಸಲಾಗುತ್ತದೆ. ಆದರೆ ಈ ಶಸ್ತ್ರಚಿಕಿತ್ಸೆಯ ಸಂದರ್ಭದಲ್ಲಿ ಶಸ್ತ್ರಚಿಕಿತ್ಸಕರು ಮತ್ತು ರೋಗಿ ಒಂದಿಷ್ಟು ನಿರಾಳರಾಗಿರುತ್ತಾರೆ. ಈ ಶಸ್ತ್ರಚಿಕಿತ್ಸೆಗಳನ್ನು ನಡೆಸುವ ವೇಳೆ ವಾತಾವರಣವನ್ನು ಶಾಂತ ಮತ್ತು ಆಹ್ಲಾದಕರವನ್ನಾಗಿರಿಸುವ ಸಲುವಾಗಿ ಸರ್ಜನ್‌ಗಳು ಲಘು ಸಂಗೀತವನ್ನು ಆಲಿಸಲು ಇಷ್ಟಪಟ್ಟರೆ, ಮತ್ತೆ ಕೆಲವರು ನಿಶ್ಶಬ್ದ ವಾತಾವರಣದಲ್ಲಿ ಶಸ್ತ್ರಚಿಕಿತ್ಸೆ ನಡೆಸಬಯಸುತ್ತಾರೆ. ಇನ್ನು ವೈದ್ಯಕೀಯ ಶಿಕ್ಷಣ ಸಂಸ್ಥೆಗಳಲ್ಲಿ ಶಸ್ತ್ರಚಿಕಿತ್ಸೆ ನಡೆಸುವ ವೇಳೆ ಸರ್ಜನ್‌ಗಳು ವಿದ್ಯಾರ್ಥಿಗಳಿಗೆ ಶಸ್ತ್ರಚಿಕಿತ್ಸೆ ನಡೆಸುವ ವಿಧಾನದ ಬಗೆಗೆ ಪ್ರಾಯೋಗಿಕ ಬೋಧನೆ ನಡೆಸುತ್ತಾರೆ.

ವೈದ್ಯರ ನಿರ್ಲಕ್ಷ್ಯಗಳು
ಕೆಲವು ಬಾರಿ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ವೈದ್ಯರು ಮತ್ತು ಸರ್ಜನ್‌ ಗಳ ನಿರ್ಲಕ್ಷ್ಯದಿಂದ ಶಸ್ತ್ರಚಿಕಿತ್ಸೆಗೊಳಗಾಗುವ ರೋಗಿಯು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿರುತ್ತವೆ.

ವೈದ್ಯರಿಂದಾಗುವ ಇಂತಹ ಕೆಲವು ಎಡವಟ್ಟುಗಳು:

  • ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮುನ್ನ ಶಸ್ತ್ರಚಿಕಿತ್ಸೆಯ ವಿಧ, ನಡೆಸುವ ವಿಧಾನ ಮತ್ತು ಇತರ ವಿವರಗಳನ್ನು ರೋಗಿಗೆ ತಿಳಿಸದೇ ಇರುವುದು.
  • ಕೌಶಲರಹಿತ ಶಸ್ತ್ರಚಿಕಿತ್ಸೆಯು ರೋಗಿಯನ್ನು ಮತ್ತಷ್ಟು ಸಮಸ್ಯೆಗೆ ಗುರಿಯಾಗಿಸಬಹುದಾಗಿದೆ.
  • ಶಸ್ತ್ರಚಿಕಿತ್ಸೆಯ ಬಳಿಕದ ಸಮಸ್ಯೆಗಳನ್ನು ಗುರುತಿಸುವಲ್ಲಿ ವೈಫ‌ಲ್ಯ, ಇಂಥ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆಯ ಬಗೆಗೆ ಅರಿವಿಲ್ಲದಿರುವುದು.
  • ಯಾವುದೇ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಬಳಸಲಾಗುವ ವೈದ್ಯಕೀಯ ಸಾಧನ, ಸಲಕರಣೆಗಳನ್ನು ಶಸ್ತ್ರಚಿಕಿತ್ಸೆಯ ಬಳಿಕ ಸುರಕ್ಷಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾದ ಭಾಗದಿಂದ ಹೊರಗೆ ಎತ್ತಿಡದೆ, ಗಾಯಕ್ಕೆ ಹೊಲಿಗೆ ಹಾಕಿ ಮುಚ್ಚುವಂತಹ ಗಂಭೀರ ಪ್ರಮಾದದ ಪರಿಣಾಮವಾಗಿ ಪ್ರಮುಖ ರಕ್ತನಾಳಗಳು ಮತ್ತು ನರಗಳಿಗೆ ಹಾನಿಯುಂಟಾಗುವ ಸಂಭವವಿರುತ್ತದೆ.

ವೈದ್ಯರ ಇಂತಹ ನಿರ್ಲಕ್ಷ್ಯದ ಪರಿಣಾಮವಾಗಿ ಗ್ರಾಹಕರ ವೇದಿಕೆಯಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಸಾಗಿದ್ದು, ಇದು ವೈದ್ಯಕೀಯ ಕ್ಷೇತ್ರಕ್ಕೆ ಬಲುದೊಡ್ಡ ಕಳಂಕವಾಗಿ ಮಾರ್ಪಟ್ಟಿದೆ. ಈ ಕಾರಣದಿಂದಾಗಿಯೇ ವೈದ್ಯಕೀಯ ವೃತ್ತಿಯು ಅತ್ಯಂತ ಹೆಚ್ಚು ಆತಂಕ, ಉದ್ವೇಗ ಮತ್ತು ಒತ್ತಡದ ಕ್ಷೇತ್ರವಾಗಿ ಪರಿಗಣಿಸಲ್ಪಟ್ಟಿದೆ.

ಕೊನೆಯದಾಗಿ, ‘ಶಸ್ತ್ರಚಿಕಿತ್ಸೆ’ ಎಂದಾಕ್ಷಣ ರೋಗಿಯಲ್ಲಿ ಉದ್ವೇಗ ಮತ್ತು ಆತಂಕದ ಭಾವನೆ ಮೂಡಬಾರದು. ಇಂದಿನ ಆಧುನಿಕ ಯುಗದಲ್ಲಿ ವೈಜ್ಞಾನಿಕವಾಗಿ ಮಹತ್ತರ ಸುಧಾರಣೆಗಳಾಗಿದ್ದು, ಅತ್ಯುತ್ತಮ ಆರೋಗ್ಯ ಸೇವೆಯನ್ನು ಒದಗಿಸುವ ಗುರಿಯನ್ನು ತಲುಪುವುದು ಕಷ್ಟಸಾಧ್ಯವಾದ ವಿಚಾರವೇನಲ್ಲ.

  • ಶಸ್ತ್ರಚಿಕಿತ್ಸೆ ಎನ್ನುವುದು ಎಂದಿಗೂ ಕಟ್ಟಕಡೆಯ ಹೆಜ್ಜೆಯಲ್ಲ. ರೋಗಿಯ ಚಿಕಿತ್ಸಾ ವಿಧಾನಗಳಲ್ಲಿ ಶಸ್ತ್ರಚಿಕಿತ್ಸೆ ಕೂಡ ಒಂದು ಭಾಗವೇ ಹೊರತು ಇದೇ ಅಂತಿಮ ಮಾರ್ಗವಲ್ಲ.
  • ಶಸ್ತ್ರಚಿಕಿತ್ಸಾ ಕೊಠಡಿಯಲ್ಲಿ ಎಲ್ಲ ಪ್ರಕ್ರಿಯೆಗಳು ಕೂಡ ಸುಲಲಿತವಾಗಿ ಮತ್ತು ಪೂರ್ವಯೋಜನೆಯಂತೆ ಕ್ರಮಬದ್ಧವಾಗಿ ನಡೆಯಬೇಕು. ಈ ಪ್ರಕ್ರಿಯೆಯ ಯಾವುದೇ ಸಂದರ್ಭದಲ್ಲಿ ಎಲ್ಲಾದರೂ ಎಡವಿದರೆ ಅಥವಾ ಸಮಸ್ಯೆ ಸೃಷ್ಟಿಯಾದರೆ ಅದನ್ನು ನಿಭಾಯಿಸಲು ಸಂಪೂರ್ಣ ಸಜ್ಜಾಗಿರಬೇಕು.
  • ಶಸ್ತ್ರಚಿಕಿತ್ಸೆಯ ಬಳಿಕ ರೋಗಿಗೆ ಅಗತ್ಯ ಆರೋಗ್ಯ ಸೇವೆ ಒದಗಿಸುವುದು ಸರ್ಜನ್‌ ರ ಕರ್ತವ್ಯವಾಗಿದೆ. ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ರೋಗಿಯ ಬಗೆಗೆ ತೋರುವ ಕಾಳಜಿಯನ್ನು ಆ ಬಳಿಕವೂ ತೋರುವ ಮೂಲಕ ರೋಗಿ ಸಂಪೂರ್ಣ ಗುಣಮುಖಹೊಂದುವುದನ್ನು ಖಾತರಿಪಡಿಸುವುದು ವೈದ್ಯರ ಕರ್ತವ್ಯ.
  • ಶಸ್ತ್ರಚಿಕಿತ್ಸೆ ಎಂದಿಗೂ ರೋಗಿಯ ಮುಖದಲ್ಲಿ ಮಂದಹಾಸ ಮೂಡಿಸಬೇಕೇ ವಿನಾ ಕಣ್ಣೀರನ್ನಲ್ಲ

ಗಾಯಾಳುಗಳಿಗೆ ಮತ್ತು ಇತರ ಯಾವುದೇ ತೆರನಾದ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ಈ ಅಂಶಗಳನ್ನು ನೆನಪಿನಲ್ಲಿರಿಸಿಕೊಳ್ಳಬೇಕು.

  • ಗಾಯಾಳುಗಳಿಗೆ ಮೊದಲು ಆವಶ್ಯಕ ತುರ್ತು ಚಿಕಿತ್ಸೆ ನೀಡಿದ ಬಳಿಕ ಶಸ್ತ್ರಚಿಕಿತ್ಸ ಕೊಠಡಿಯೊಳಗೆ ಕರೆದೊಯ್ಯಬೇಕು.
  • ಗಾಯಾಳುವಿಗೆ ಶಸ್ತ್ರಕ್ರಿಯೆ ನಡೆಸುವುದಕ್ಕೂ ಮುನ್ನ ಆತನ ಆರೋಗ್ಯ ಸ್ಥಿತಿಯ ಸಂಪೂರ್ಣ ಮಾಹಿತಿ ಕಲೆಹಾಕುವುದರ ಜತೆಯಲ್ಲಿ ಹಾಲಿ ಗಾಯದ ತೀವ್ರತೆ ಮತ್ತು ನಡೆಸಬೇಕಿರುವ ಶಸ್ತ್ರಚಿಕಿತ್ಸೆ ಕುರಿತಂತೆ ಅರಿವಳಿಕೆ ತಜ್ಞರೊಂದಿಗೆ ಸವಿವರವಾಗಿ ಸಮಾಲೋಚಿಸಿ, ಶಸ್ತ್ರಚಿಕಿತ್ಸೆ ನಡೆಸಲು ಸ್ಪಷ್ಟ ಯೋಜನೆಯನ್ನು ರೂಪಿಸುವುದು ಸಂಬಂಧಿತ ವೈದ್ಯರ ಕರ್ತವ್ಯವಾಗಿದೆ.
  • ರೋಗಿಗೆ ಶಸ್ತ್ರಚಿಕಿತ್ಸೆ ನಡೆಸುವುದಕ್ಕೂ ಮುನ್ನ ಆತನಿಗೆ ಅಥವಾ ಆತನ ಸಂಬಂಧಿಕರಿಗೆ ನಡೆಸಲಾಗುವ ಶಸ್ತ್ರಚಿಕಿತ್ಸೆಯ ಸಮಗ್ರ ವಿವರಗಳನ್ನು ಒದಗಿಸುವುದು ಅತ್ಯಗತ್ಯ. ಶಸ್ತ್ರಚಿಕಿತ್ಸೆಯ ಸಂಕೀರ್ಣತೆ, ಎದುರಾಗಬಹುದಾದ ಅಸ್ವಸ್ಥತೆ ಮತ್ತು ಮರಣ ಸಾಧ್ಯತೆಗಳ ಕುರಿತಂತೆಯೂ ಅವರಿಗೆ ಮಾಹಿತಿ ನೀಡಬೇಕು.

-ಡಾ| ಬಿ. ಸೀತಾರಾಮ ರಾವ್‌ ಪ್ರೊಫೆಸರ್‌, ಆರ್ಥೋಪೆಡಿಕ್ಸ್‌ ವಿಭಾಗ, ಕೆಎಂಸಿ, ಮಂಗಳೂರು

ಟಾಪ್ ನ್ಯೂಸ್

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Shimoga: ಮಲೆನಾಡಿನಲ್ಲಿ ಮುಂದುವರಿದ ಕಾಡಾನೆ ಕಾಟ; ಇಲಾಖೆ ವಿರುದ್ದ ರೈತರ ಆಕ್ರೋಶ

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?

Tollywood: ನಾನು ಸಿಂಗಲ್ ಅಲ್ಲ.. ರಶ್ಮಿಕಾ ಜತೆಗಿನ ಸಂಬಂಧ ದೃಢಪಡಿಸಿದ್ರಾ ದೇವರಕೊಂಡ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

4(1)

Lupus Nephritis: ಲೂಪಸ್‌ ನೆಫ್ರೈಟಿಸ್‌ ರೋಗಿಗಳಿಗೆ ಒಂದು ಮಾರ್ಗದರ್ಶಿ

3(1)

Naturopathy: ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ ಚಿಕಿತ್ಸೆ

2(1)

AI ಆರೋಗ್ಯ ರಕ್ಷಣೆಯ ವ್ಯವಸ್ಥೆಯಲ್ಲಿ ಸ್ವೀಕಾರದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆಯೇ?

1(3)

World Prematurity Day: ಅಂತಾರಾಷ್ಟ್ರೀಯ ಅವಧಿಪೂರ್ವ ಶಿಶು ಜನನ ದಿನ; ನವೆಂಬರ್‌ 17

3-health

Mother: ತಾಯಂದಿರ ಮಾನಸಿಕ ಆರೋಗ್ಯ

MUST WATCH

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

udayavani youtube

ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್‌ ನಕ್ಸಲ್ ಸಾವು

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

ಹೊಸ ಸೇರ್ಪಡೆ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Drone Prathap: ಸಿನಿಮಾರಂಗಕ್ಕೆ ಡ್ರೋನ್‌ ಪ್ರತಾಪ್ ಎಂಟ್ರಿ; ಮೊದಲ ಚಿತ್ರದಲ್ಲೇ ಹೀರೋ

Baba Budan Dargah: Accusations of applying saffron on the tombs

Baba Budan Dargah: ಗೋರಿಗಳ ಮೇಲೆ ಕುಂಕುಮ‌ ಹಚ್ಚಿರುವ ಆರೋಪ

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್‌

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

A.R.Rahman Divorce: ಎ.ಆರ್‌.ರೆಹಮಾನ್‌ ವಿಚ್ಚೇದನಕ್ಕೆ ಆಕೆಯೇ ಕಾರಣ?; ವಕೀಲೆ ಹೇಳಿದ್ದೇನು?

Viral Video: ನೀರಿನಿಂದ ಜಿಗಿದು ಹಾವನ್ನೇ ಬೇಟೆಯಾಡಲು ಹೋದ ಮೀನು… ಕೊನೆಗೆ ಆಗಿದ್ದೇನು?

Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.