Doctor-Patient relationship: ವೈದ್ಯ – ರೋಗಿ ಸಂಬಂಧ ಮುಂದೇನು?
Team Udayavani, Oct 6, 2024, 10:44 AM IST
ಇತ್ತೀಚೆಗಿನ ದಿನಗಳಲ್ಲಿ ಜೀವನವೆಂಬುದು ಸಂಕೀರ್ಣತೆಗಳಿಂದ ತುಂಬಿ ಹೋಗಿದ್ದು, ಮಾನವ ಸಂಬಂಧಗಳನ್ನು ನಿಭಾಯಿಸುವುದೇ ದುಸ್ತರವಾಗಿದೆ. ಇವುಗಳ ಪೈಕಿ ಕೌಟುಂಬಿಕ, ಸಾಮಾಜಿಕ, ವ್ಯಾವಹಾರಿಕ ಸಂಬಂಧಗಳಂತೆ ವೈದ್ಯ – ರೋಗಿ ಸಂಬಂಧವೂ ಒಂದಾಗಿದೆ.
ವೈದ್ಯ-ರೋಗಿ ಸಂಬಂಧ “ಕೌಟುಂಬಿಕ’ ಅಥವಾ “ಸಾಮಾಜಿಕ’ ಸಂಬಂಧವಲ್ಲ ಎಂಬುದು ಸ್ಪಷ್ಟ . ಹಾಗಾದರೆ ಅದು ಬರಿಯ “ವ್ಯಾವಹಾರಿಕ’ ಸಂಬಂಧವೇ ? ಅದೂ ಅಲ್ಲ. ಏಕೆಂದರೆ ವ್ಯವಹಾರದಲ್ಲಿ ಆರ್ಥಿಕ “ಕೊಡು-ಕೊಳ್ಳುವಿಕೆ’ಗೆ ಒಂದು ನಿಶ್ಚಿತತೆ ಇರುತ್ತದೆ. “ಇಂತಹ ವಸ್ತು ಯಾ ಸೇವೆಗೆ ಇಂತಿಷ್ಟು ಬೆಲೆ’ ಎಂಬುದಾಗಿ. ಆದರೆ ವೈದ್ಯಕೀಯದಲ್ಲಿ ಖರ್ಚಿಗೆ ತಕ್ಕ ಫಲ ಸಿಕ್ಕೇ ಸಿಗುತ್ತದೆ ಎಂದು ಯಾವ ವೈದ್ಯನೂ ಭರವಸೆ ಕೊಡಲಾರ. ಹಾಗಿದ್ದಾಗ ಈ ಸಂಬಂಧದಲ್ಲಿ ಕಹಿ ಉಂಟಾಗದಂತೆ ನೋಡುವ ಬಗೆ ಹೇಗೆ? ತಿಳಿಯೋಣ ಬನ್ನಿ.
ಮೊತ್ತಮೊದಲಾಗಿ ವೈದ್ಯ -ರೋಗಿ ಸಂಬಂಧ ಒಂದು ವಿಶಿಷ್ಟ ಸಂಬಂಧ ಎಂಬುದನ್ನು ಅರಿಯಬೇಕು. ಇಲ್ಲಿ ರೋಗಿ ತಾನು ಕಾಯಿಲೆಯಿಂದ ಬಳಲುತ್ತಿರುವುದರಿಂದ ಆತನಿಗೆ ವೈದ್ಯನ ಬಳಿ ಬರಲೇಬೇಕಾದ ಅನಿವಾರ್ಯ ಇರುತ್ತದೆ; ಮುಂದೂಡುವಂತಿಲ್ಲ. ಒಂದು ರೀತಿಯ ಅಸಹಾಯಕತೆ ರೋಗಿಯನ್ನು ಕಾಡುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟೂ ಇದ್ದುಬಿಟ್ಟರೆ ರೋಗಿಯ ಮಾನಸಿಕ ಪರಿಸ್ಥಿತಿ ಇನ್ನೂ ಬಿಗಡಾಯಿಸುತ್ತದೆ. ಈ ರೀತಿಯ ಮನಸ್ತತ್ವದೊಂದಿಗೆ ವೈದ್ಯನನ್ನು ಭೇಟಿಯಾಗುವ ರೋಗಿ ತುಸು ಮಟ್ಟಿಗೆ ಆತಂಕಗೊಂಡಿರುವುದು ಸಹಜವೇ ಆಗಿದೆ. ಇದನ್ನು ವೈದ್ಯನಾದವನು ಅರಿತುಕೊಳ್ಳಬೇಕಾಗುತ್ತದೆ.
ಆರೋಗ್ಯ ಹದಗೆಟ್ಟಿರುವ ರೋಗಿಯ ಮನಸ್ಸೂ ಕೊಂಚಮಟ್ಟಿಗೆ ಹದಗೆಟ್ಟಿರಬಹುದಾದ ಸಂಬಂಧ ಸಾಧ್ಯತೆಯನ್ನು ಅರಿತು, ಅನುಭವಿ ವೈದ್ಯರು ಅದಕ್ಕೆ ತಕ್ಕಂತೆ ತಮ್ಮ ಚಿಕಿತ್ಸೆ ಯಾ ಸಲಹೆಯನ್ನು ಮಾರ್ಪಾಟು ಮಾಡಿಕೊಳ್ಳುತ್ತಾರೆ. ಇಲ್ಲಿ ರೋಗಿಯ ಜತೆಗಿನ ಸಂವಹನ ಪ್ರಕ್ರಿಯೆ ಬಹಳ ಮುಖ್ಯ. ಕಾಯಿಲೆಯ ವಿವರಗಳನ್ನು ರೋಗಿ ಮತ್ತವನ ಸಂಬಂಧಿಕರ ಬಳಿ ಸಂದಭೋìಚಿತವಾಗಿ ಸಂಗ್ರಹಿಸಿ, ಆವಶ್ಯಕ ತಪಾಸಣೆಗಳ ಮೂಲಕ ಕಾಯಿಲೆಯನ್ನು ಪತ್ತೆ ಹಚ್ಚುವುದು ವೈದ್ಯನಾದವನ ಆದ್ಯ ಕರ್ತವ್ಯ ಎಂಬುದು ಸರ್ವವಿದಿತ. ಇಲ್ಲಿ ಪ್ರತೀ ಹಂತದಲ್ಲೂ ರೋಗಿ ಮತ್ತವನ ಸಂಬಂಧಿಕರ ಬಳಿ ತಪಾಸಣೆಯ ಅಥವಾ ಚಿಕಿತ್ಸೆಯ ಸಾಧಕ ಬಾಧಕಗಳನ್ನು ಚರ್ಚಿಸಬೇಕಾಗುತ್ತದೆ. ಕೆಲವೊಮ್ಮೆ ಕಾಯಿಲೆ ಯಾವುದೆಂಬುದೇ ತಿಳಿಯದಾದಾಗ ಇನ್ನೋರ್ವ ತಜ್ಞರ ಸಲಹೆ ಪಡೆಯುವುದೂ ಸೂಕ್ತ ಹೆಜ್ಜೆ. ಕಾಯಿಲೆಯನ್ನು ಪತ್ತೆ ಹಚ್ಚುವ ಪ್ರಕ್ರಿಯೆ ನಿಧಾನವಾದಷ್ಟೂ ರೋಗಿ ತಾಳ್ಮೆಗೆಡುತ್ತಾನೆ ಎಂಬುದನ್ನು ತಜ್ಞನಾದವನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ. ಉತ್ತಮ ಸಂವಹನಾ ಕೌಶಲ ಹೊಂದಿರುವ ತಜ್ಞವೈದ್ಯರು ಇದನ್ನೆಲ್ಲ ಅರಿತೇ ವ್ಯವಹರಿಸುತ್ತಾರೆ. ಈ ಸೂತ್ರವನ್ನು ಮರೆತು ವ್ಯವಹರಿಸಿದಾಗ ಸಮಸ್ಯೆ ಉದ್ಭವಿಸುತ್ತದೆ.
ಎಲ್ಲ ಸಮಸ್ಯೆಗಳಿಗಿರುವಂತೆ ಇಲ್ಲಿಯೂ ಸಮಸ್ಯೆಯ ಇನ್ನೊಂದು ಮುಖ ಎಂದರೆ ವೈದ್ಯಕೀಯ ಕ್ಷೇತ್ರ ಹಾಗೂ ವೈದ್ಯರ ಬಗ್ಗೆ ಸಮಾಜದಲ್ಲಿ ಹೆಚ್ಚುತ್ತಿರುವ ಅಪನಂಬಿಕೆ. ಹಾಗೆ ನೋಡಿದರೆ ವೈದ್ಯರ ಮೇಲಿನ ಅಪನಂಬಿಕೆ ಇಂದು ನಿನ್ನೆಯದಲ್ಲ. “ವೈದ್ಯ ರಾಜಾ ನಮಸ್ತುಭ್ಯಂ, ಯಮರಾಜ ಸಹೋದರ…’ ಎಂಬ ಶ್ಲೋಕ ಸಾಕಷ್ಟು ಹಳೆಯದೇ. ಆದರೆ ಹಿಂದೆ ತಮಾಷೆಯಾಗಿ ವೈದ್ಯರ ಬಗ್ಗೆ ಆಡುತ್ತಿದ್ದ ಮಾತು ಇಂದು ಸಾಮಾನ್ಯ ಭಾವನೆಯಾಗುವತ್ತ ಸಾಗಿದೆ. ಹಣ ಗಳಿಕೆ ಅಥವಾ ಆರ್ಥಿಕ ದೃಷ್ಟಿಯೇ ಇಂದಿನ ವೈದ್ಯರ ಮುಖ್ಯ ಗುರಿ ಎಂದು ನಂಬುವವರು ಇಂದು ಸಾಕಷ್ಟಿದ್ದಾರೆ.
ನಿಜವಾಗಿ ನೋಡಿದರೆ ತಮ್ಮ ತಜ್ಞತೆ ಮತ್ತು ಅನುಭವಕ್ಕೆ ಹೋಲಿಸಿದಲ್ಲಿ ಅಲ್ಪ ಎನ್ನಬಹುದಾದ ಆದಾಯ ಮಾತ್ರ ಗಳಿಸುತ್ತಿದ್ದರೂ ಹಗಲು ರಾತ್ರಿ ರೋಗಿಗಳ ಶುಶ್ರೂಷೆ ಮಾಡುವ ವೈದ್ಯರು ಎಷ್ಟೋ ಜನ ಇಂದೂ ಸಿಗುತ್ತಾರೆ. ಸಮಯವಲ್ಲದ ಸಮಯದಲ್ಲೂ ರೋಗಿ ಯಾ ಆತನ ಸಂಬಂಧಿಕರು ಫೋನ್ ಮಾಡಿದಾಗ, ಕರೆ ಸ್ವೀಕರಿಸಿ ಸೂಕ್ತ ಸಲಹೆ ನೀಡುವ ವೈದ್ಯರೂ ಹಲವರಿದ್ದಾರೆ.
ಸಭೆ, ಸಮಾರಂಭಗಳಲ್ಲಿ ಭಾಗವಹಿಸಿದಾಗ ಪುಕ್ಕಟೆ ಸಲಹೆ ಕೇಳುವ “ಆತ್ಮೀಯ’ರನ್ನೂ ಸಹಿಸಿಕೊಂಡು ಸಹಾಯ ಮಾಡುವ ವೈದ್ಯರಿದ್ದಾರೆ. ಆದರೆ ಇದ್ಯಾವುದೂ ಇಂದಿನ ವಾಟ್ಸ್‌ಆ್ಯಪ್ ಯುಗದಲ್ಲಿ ಜನರ ಗಮನಕ್ಕೆ ಬಾರದಿರುವುದು ದುರಂತ. ಆದ್ದರಿಂದಲೇ ಚಿಕಿತ್ಸೆ ಫಲಕಾರಿಯಾಗದೆ ರೋಗಿ ಮೃತಪಟ್ಟಾಗ, ತೀವ್ರ ಚಿಕಿತ್ಸಾ ವಿಭಾಗದಲ್ಲಿ ಬೆಡ್ ಖಾಲಿ ಇಲ್ಲದೆ ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವಂತಾದಾಗ ಉಂಟಾಗುವ ಕಹಿ ಭಾವನೆಯ ಬಿಸಿ ಇಡೀ ವೈದ್ಯಕೀಯವನ್ನು ತಟ್ಟುತ್ತಿದೆ.
ಹದೆಗೆಡುತ್ತಿರುವ ಈ ಬಾಂಧವ್ಯವನ್ನು ನೇರ್ಪುಗೊಳಿಸುವುದು ಹೇಗೆ? ಮೊದಲನೆಯದಾಗಿ ವೈದ್ಯರು, ಪರಿಸ್ಥಿತಿಯ ಗಂಭೀರತೆಯನ್ನು ಅರಿತು ವ್ಯವಹರಿಸುವುದನ್ನು ರೂಢಿಮಾಡಿಕೊಳ್ಳಬೇಕು. ವೈದ್ಯರಾಗಿ ತಮಗಿರುವ ಸ್ಪಷ್ಟತೆ ರೋಗಿಗೆ ಯಾ ಆತನ ಬಂಧುಗಳಿಗೆ ಇರಲಾರದು ಎಂಬುದನ್ನು ವೈದ್ಯರು ತಿಳಿಯಬೇಕು. ಕಾಯಿಲೆಯನ್ನು ಪತ್ತೆಹಚ್ಚುವ ಹಂತದಿಂದ ಹಿಡಿದು ಚಿಕಿತ್ಸೆಯ ಹಂತದವರೆಗೂ ಕ್ಲಪ್ತ ಸಮಯದಲ್ಲಿ ಸೂಕ್ತ ವಿವರಗಳನ್ನು ರೋಗಿಯ ಕಡೆಯವರಿಗೆ ನೀಡಬೇಕು. ರೋಗಿಯ ಕಾಯಿಲೆಯ ಹಂತ, ಚಿಕಿತ್ಸೆಯ ವಿವರ ಅದರ ಸಾಧಕ ಬಾಧಕಗಳು, ವೆಚ್ಚದ ಬಗೆಗಿನ ವಿವರ ಇತ್ಯಾದಿಗಳ ಬಗೆಗಿನ ಮಾಹಿತಿಯನ್ನು ನೀಡುವುದಲ್ಲದೆ, ಅವರಿಗೆ ಇರಬಹುದಾದ ಸಂಶಯ-ಅನುಮಾನಗಳನ್ನು ಪರಿಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಮುಖ್ಯವಾಗಿ ರೋಗಿ ಮತ್ತವನ ಕಡೆಯವರು ಮಾನಸಿಕವಾಗಿ ಕ್ಷೋಭೆಗೊಳಗಾಗಿರುತ್ತಾರೆ. ಆದ್ದರಿಂದ ಒಮ್ಮೊಮ್ಮೆ ತಾಳ್ಮೆಗೆಟ್ಟು ವ್ಯವಹರಿಸಬಹುದು ಎಂಬುದನ್ನು ಮನಸ್ಸಿನಲ್ಲಿಟ್ಟುಕೊಂಡು ವೈದ್ಯರು ತಾವು ತಾಳ್ಮೆಯಿಂದಿರಬೇಕು.
ಇನ್ನು ರೋಗಿ ಹಾಗೂ ಆತನ ಕಡೆಯವರ ಮತ್ತು ಸಮಾಜದ ಬಾಧ್ಯತೆ ಇನ್ನೂ ಹಿರಿದು. ವೈದ್ಯ ದೇವರಲ್ಲ, ವೈದ್ಯನಾಗಿ ಆತ ತನ್ನ ತಜ್ಞತೆಯ ಆಧಾರದಲ್ಲಿ ಎಷ್ಟೇ ಪ್ರಾಮಾಣಿಕವಾಗಿ ಪ್ರಯತ್ನಿಸಿದರೂ ರೋಗಿಯ ಪರಿಸ್ಥಿತಿ ಕೆಲವೊಮ್ಮೆ ಸುಧಾರಿಸದೆ ಇರಬಹುದು ಅಥವಾ ಬಿಗಡಾಯಿಸಲೂ ಬಹುದು. ವೈದ್ಯನಾದವನು ತಾನು ಚಿಕಿತ್ಸೆ ನೀಡಿದ ರೋಗಿ ಗುಣಮುಖನಾಗದೆ ಇದ್ದರೆ ಅಥವಾ ದುರದೃಷ್ಟವಶಾತ್ ಮರಣಿಸಿದರೆ ಮುಖಭಂಗಕ್ಕೆ ಒಳಗಾಗುತ್ತಾನೆ. ಆದ್ದರಿಂದ ಪ್ರತೀ ಬಾರಿ ಚಿಕಿತ್ಸೆ ನಿಷ#ಲವಾದಾಗ ಅದಕ್ಕೆ “ನಿರ್ಲಕ್ಷ್ಯ’ ಎಂಬ ಹಣೆಪಟ್ಟಿ ಕಟ್ಟಿ ವೈದ್ಯನನ್ನು ದೂಷಿಸಿದರೆ ಕೆಲವೊಮ್ಮೆ ಅವರು ತಮ್ಮ ಆತ್ಮಸ್ಥೈರ್ಯವನ್ನೇ ಕಳೆದುಕೊಂಡು ಮುಂದಕ್ಕೆ ಕ್ಲಿಷ್ಟ ರೋಗಿಗಳ ಚಿಕಿತ್ಸೆಗೆ ಹಿಂದೇಟು ಹಾಕುವ ಸಂದರ್ಭಗಳೂ ಇವೆ.
ಇನ್ನುಳಿದಂತೆ, ಚಿಕಿತ್ಸಾ ವೆಚ್ಚ ಏರಿಕೆಯ ಬಿಸಿ ವೈದ್ಯ-ರೋಗಿ ಸಂಬಂಧಕ್ಕೆ ತಟ್ಟಿರುವುದು ಸುಳ್ಳಲ್ಲ. ಎಂದಿನಂತೆ ಸಮಾಜ ಸಮಸ್ಯೆಯ ಮೂಲಕ್ಕೆ ಹೋಗದೆ ಸುಲಭ ವಿಶ್ಲೇಷಣೆಗೆ ಮೊರೆ ಹೋಗುವುದರ ಪರಿಣಾಮವೇ ವೈದ್ಯರ ದೂಷಣೆ. ಇಂದು ಚಿಕಿತ್ಸಾ ದರಗಳನನ್ನು ಆಸ್ಪತ್ರೆಗಳು ನಿರ್ಧರಿಸುತ್ತವೆಯೇ ವಿನಾ ವೈದ್ಯರಲ್ಲ ಎಂಬುದ ಜನರು ಅರಿಯಬೇಕಾಗಿದೆ. ರೋಗನಿದಾನಕ್ಕೆ ಬೇಕಾದ ಯಂತ್ರೋಪಕರಣ, ಸ್ಕ್ಯಾನ್‌ಗಳು ಇತ್ಯಾದಿ ಇಂದು ದುಬಾರಿಯಾಗಿರುವುದರಿಂದ ಚಿಕಿತ್ಸೆಯ ವೆಚ್ಚವೂ ಏರುತ್ತಲಿದೆ. ಈ ಸಮಸ್ಯೆಗೆ ಪರಿಹಾರ ಸುಲಭವಲ್ಲ. ವೈದ್ಯಕೀಯ ವಿಮೆ ಹಾಗೂ ಸರಕಾರಿ ಆಸ್ಪತ್ರೆಗಳ ಕಾಯಕಲ್ಪ, ಇವೆರಡು ಕೊಂಚ ಮಟ್ಟಿಗೆ ಪರಿಹಾರವಾಗಬಲ್ಲುದು.
ಒಟ್ಟಾರೆ ಮೇಲೆ ಹೇಳುವುದಾದರೆ ವೈದ್ಯ – ರೋಗಿ ಸಂಬಂಧ ಮೊದಲಿನಂತಾಗಬೇಕಾದರೆ ಪರಸ್ಪರ ವಿಶ್ವಾಸವನ್ನು ಪುನರಪಿ ಗಳಿಸಬೇಕಾಗಿದೆ. ವೈದ್ಯರೂ ಮಾನವರೇ, ಅವರೇನೂ ಸರ್ವಶಕ್ತರಲ್ಲ ಎಂಬುದನ್ನು ರೋಗಿಯ ಕಡೆಯವರೂ, ರೋಗಿ ಮತ್ತವನ ಕಡೆಯವರು ತನ್ನ ಶತ್ರುಗಳಲ್ಲ, ದೈಹಿಕವಾಗಿ ಹಾಗೂ ಮಾನಸಿಕವಾಗಿ ಬಳಲಿದ ಜೀವಗಳು; ಅವರಿಗೆ ಸಾಂತ್ವನ ಹಾಗೂ ಮಾಹಿತಿಯ ಆವಶ್ಯಕತೆಯಿದೆ ಎಂಬುದನ್ನು ವೈದ್ಯ ಸಮುದಾಯವೂ ಅರಿತು ವ್ಯವಹರಿಸಬೇಕು. ವೈದ್ಯಕೀಯ ಎಂಬುದು ಬಹಳ ಸಂಕೀರ್ಣವಾದ ವಿಷಯ. ಗೂಗಲ್ ಯಾ ವಾಟ್ಸ್‌ಆ್ಯಪ್ ಸಂದೇಶಗಳಲ್ಲಿ ಬರುವ ಅರೆಬೆಂದ ಮಾಹಿತಿಗಳನ್ನು ಆಧರಿಸಿ ವೈದ್ಯರನ್ನೇ ಸಂಶಯ ಪ್ರವೃತ್ತಿಯಿಂದ ನೋಡುವ ಜನರಿಂದಾಗಿ ಇಂದು ವೈದ್ಯರ ಮಕ್ಕಳು ವೈದ್ಯಕೀಯ ರಂಗಕ್ಕೆ ಬರಲು ಹಿಂದೇಟು ಹಾಕುತ್ತಿರುವುದು ಕಹಿಸತ್ಯ. ವೈದ್ಯ ಹಾಗೂ ರೋಗಿ ಎರಡೂ ಕಡೆಯವರು ಬುದ್ಧಿವಂತಿಕೆಯ ಬದಲಾಗಿ ಹೃದಯವಂತಿಕೆಗೆ ಒತ್ತು ನೀಡಿದರೆ ಪರಿಹಾರ ಖಂಡಿತ ಸಾಧ್ಯ.
-ಡಾ| ಶಿವಾನಂದ ಪ್ರಭು
ಪ್ರೊಫೆಸರ್ ಮತ್ತು ಮುಖ್ಯ ವೈದ್ಯಾಧಿಕಾರಿ
ದುರ್ಗಾ ಸಂಜೀವಿನಿ ಮಣಿಪಾಲ್ ಆಸ್ಪತ್ರೆ,
ಕಟೀಲು
(ಈ ಲೇಖನದಲ್ಲಿರುವ ವಿಚಾರಗಳ ಬಗ್ಗೆ ಹೆಚ್ಚಿನ ಮಾಹಿತಿಗಳಿಗಾಗಿ ಸಂಪರ್ಕಿಸಿ: ಮುಖ್ಯಸ್ಥರು, ಮೆಡಿಸಿನ್ ವಿಭಾಗ, ಕೆಎಂಸಿ, ಮಂಗಳೂರು)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಿನೆಮಾ ಪೋಸ್ಟರ್ ಗಳ ಕೋಣೆಯಲ್ಲಿ-ಹಾಲಿವುಡ್ ನಿರ್ದೇಶಕರ ದಂಡು; ಮರೆ ಯಲಾಗದ ಅದ್ಭುತ ಕ್ಷಣ
Vijay Hazare Trophy;ಕೃಷ್ಣನ್ ಶ್ರೀಜಿತ್ ಅಮೋಘ ಶತಕ:ಬಲಿಷ್ಠ ಮುಂಬೈ ಎದುರು ಕರ್ನಾಟಕ ಜಯಭೇರಿ
ಕತಾರ್:ಪ್ರಾಣಾಪಾಯದಿಂದ ಪಾರಾದ ಕಥನ- ಸಾಧಕಿ ಶರೀನ್ ಶಹನ ಜತೆ ಸಂವಾದ
ಬಹ್ರೈನ್ ದ್ವೀಪ ರಾಷ್ಟ್ರದಲ್ಲಿ ಕ್ರಿಕೆಟ್ ಅಬ್ಬರ-ಕ್ರಿಕೆಟ್ ಪ್ರೇಮಿಗಳ ಮೆಚ್ಚುಗೆ
ಮುಂಬೈ ದೋಣಿ ದುರಂತ: ನಾಪತ್ತೆಯಾಗಿದ್ದ ಬಾಲಕನ ಶವ ಪತ್ತೆ, ಮೃತರ ಸಂಖ್ಯೆ 15ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.